Loading..

ಆರ್ಥಿಕತೆಯ ಮಿಲಿಟರೀಕರಣ ಮತ್ತು ಸಾಮ್ರಾಜ್ಯಶಾಹಿ ಯುದ್ಧ

ಕಾಮ್ರೇಡ್ ಶಿವದಾಸ್ ಘೋಷ್ ವ್ಯಾಖ್ಯಾನ

ಅಮೆರಿಕಾದ ಆರ್ಥಿಕತೆಯು ಒಂದು ಬಂಡವಾಳಶಾಹಿ ಆರ್ಥಿಕತೆಯಾಗಿದ್ದು, ಹೆಚ್ಚುವರಿ ಬಂಡವಾಳದ ಸಮಸ್ಯೆಯೇ ಅದರ ಸಮಸ್ಯೆ: ಅಂದರೆ, ಹೆಚ್ಚುವರಿ ಹಣಕಾಸು ಬಂಡವಾಳದ ಸಮಸ್ಯೆ…..ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಜನಸಾಮಾನ್ಯರ ಆದಾಯವು ಈ ಹೆಚ್ಚುವರಿ ಬಂಡವಾಳಕ್ಕೆ ಅನುಗುಣವಾಗಿ ಹೆಚ್ಚಾಗಲು ಸಾಧ್ಯವಿಲ್ಲ. ನಿಜ, ಹಣದ ರೂಪದಲ್ಲಿ ಅವರ ಆದಾಯ ಸ್ವಲ್ಪ ಹೆಚ್ಚಾಗಬಹುದು, ಆದರೆ ಆಗಲೂ ಸಹ ನಿಜವಾದ ಆದಾಯ ಹೆಚ್ಚಾಗುವುದಿಲ್ಲ; ಬದಲಾಗಿ ಅದು ಇಳಿಯುತ್ತದೆ ಮತ್ತು ಹಣದುಬ್ಬರವು ಗಂಭೀರ ಪ್ರಮಾಣವನ್ನು ತಲುಪಿದರೆ, ಸರಕುಗಳ ಬೆಲೆಗಳು ವಿಪರೀತವಾಗಿ ಏರುತ್ತವೆ ಮತ್ತು ಜನಜೀವನ ಅಸಹನೀಯವಾಗುತ್ತದೆ. ಹೆಚ್ಚುವರಿ ಹಣದ ಕ್ರೋಢೀಕರಣ ಎಂದರೆ ಉದ್ಯಮಗಳಲ್ಲಿ ಹೂಡಿಕೆಯ ದಾರಿ ಮುಚ್ಚಿ ಹೋಗಿದೆ ಎಂದರ್ಥ. ಹೀಗಾದಾಗ, ಸಹಜವಾಗಿ ಉತ್ಪಾದನೆ ಕುಸಿಯುತ್ತದೆ. ಇದು ಅನಿವಾರ್ಯವಾಗಿ ನಿರುದ್ಯೋಗದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಇದರ ಜೊತೆಗೆ, ಜನಸಂಖ್ಯೆಯ ಹೆಚ್ಚಳವು ಒಂದು ಹೆಚ್ಚುವರಿ ಸಮಸ್ಯೆಯಾಗುತ್ತದೆ. ವಾದಕ್ಕಾಗಿ ನಾವು ಜನಸಂಖ್ಯೆ ಸ್ಥಿರವಾಗಿ ಉಳಿದಿದೆ ಎಂದು ಭಾವಿಸಿದರೂ, ಆಗಲೂ, ಅಸ್ತಿತ್ವದಲ್ಲಿರುವ ಜನಸಂಖ್ಯಾ ಮಟ್ಟದಲ್ಲಿ, ನಿರುದ್ಯೋಗದ ಸಮಸ್ಯೆ ತೀವ್ರಗೊಳ್ಳುತ್ತಲೇ ಇರುತ್ತದೆ……ಆದ್ದರಿಂದ, ಇಂತಹ ದುರಂತವನ್ನು ತಪ್ಪಿಸುವ ತುರ್ತು ಅವಶ್ಯಕತೆಯಿಂದ, ಬಂಡವಾಳಿಗರು ಕೃತಕ ವಿಧಾನಗಳಿಂದ ಮಾರುಕಟ್ಟೆಯಲ್ಲಿ ಒಂದು ಏರಿಕೆಯನ್ನು ಸೃಷ್ಟಿಸಬೇಕಾಗುತ್ತದೆ. ಅಂತಹ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಮಿಲಿಟರೀಕರಣದ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ.
ಆರ್ಥಿಕತೆಯ ಮಿಲಿಟರೀಕರಣ
ಉತ್ಪಾದನೆಯು ಒಂದು ನಿರ್ದಿಷ್ಟ ಮಟ್ಟದಲ್ಲಿ ದೀರ್ಘಕಾಲದವರೆಗೆ ಸ್ಥಿರವಾಗಿರಲು ಸಾಧ್ಯವಿಲ್ಲ. ಉತ್ಪಾದನೆಯು ಹೆಚ್ಚಾಗದಿದ್ದರೆ, ಅದು ಕಡಿಮೆಯಾಗುವುದು ಖಚಿತ, ಏಕೆಂದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ‘ಮಾರುಕಟ್ಟೆ’ಗೆ ಬೇಡಿಕೆಯು ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಜೊತೆಗೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಈ ಬೇಡಿಕೆಯನ್ನು ಮನುಷ್ಯನ ನಿಜವಾದ ಅಗತ್ಯಗಳ ಮತ್ತು ಅವಶ್ಯಕತೆಗಳ ಮಾನದಂಡದಿಂದ ನಿರ್ಧರಿಸಲಾಗುವುದಿಲ್ಲ; ಬದಲಾಗಿ, ಒಬ್ಬ ಮನುಷ್ಯನ ‘ಅಗತ್ಯಗಳನ್ನು’ ಅವನ ಕೊಳ್ಳುವ ಶಕ್ತಿಯಿಂದ ಮಾತ್ರ ನಿರ್ಧರಿಸಲಾಗುತ್ತದೆ. ಅವನ ಆದಾಯ ಮತ್ತು ಮಾರುಕಟ್ಟೆ ಬೆಲೆಗಳ ಪ್ರಕಾರ ಕೊಳ್ಳುವ ಶಕ್ತಿಯನ್ನು ಗಣನೆಗೆ ತೆಗೆದುಕೊಂಡು ಅವನ ‘ಅಗತ್ಯಗಳನ್ನು’ ನಿರ್ಧರಿಸಲಾಗುತ್ತದೆ. ಇದರ ಜೊತೆಗೆ, ಉತ್ಪಾದನೆಯು ಕುಸಿದಾಗ, ಸರಕುಗಳ ಮಾರುಕಟ್ಟೆ ಬೆಲೆಗಳು ಏರುತ್ತವೆ ಮತ್ತು ಕಡಿಮೆ ಆದಾಯದ ಗುಂಪಿನ ಜನರ ಮತ್ತು ನಿರುದ್ಯೋಗಿಗಳ ಕೊಳ್ಳುವ ಶಕ್ತಿ ಸಹಜವಾಗಿ ಮತ್ತಷ್ಟು ಕಡಿಮೆಯಾಗುತ್ತದೆ. ಆದ್ದರಿಂದ, ಮಾರುಕಟ್ಟೆ ಹೆಚ್ಚು ಹೆಚ್ಚು ಕುಗ್ಗುತ್ತದೆ. ಅದಕ್ಕಾಗಿಯೇ, ಬಂಡವಾಳಶಾಹಿ ಆರ್ಥಿಕತೆಯ ನಿಯಮದ ಪ್ರಕಾರ, ಇತರ ದೇಶಗಳಲ್ಲಿ ಬಂಡವಾಳವನ್ನು ಹೂಡಿಕೆ ಮಾಡಲು ಒಂದು ಮಾರ್ಗ ಇರಬೇಕು. ಎರಡನೆಯದಾಗಿ, ಬಂಡವಾಳಶಾಹಿ ದೇಶದಲ್ಲಿ ಎಷ್ಟೇ ಕೈಗಾರಿಕೆಗಳು, ಎಷ್ಟೇ ಉದ್ಯೋಗಾವಕಾಶಗಳು ಇದ್ದರೂ, ಇವೆಲ್ಲವೂ ಎಲ್ಲರಿಗೂ ಉದ್ಯೋಗವನ್ನು ಒದಗಿಸಲು ಸಾಧ್ಯವಿಲ್ಲ. ಹಾಗೆಂದು, ಇಡೀ ದೇಶ ನಿರುದ್ಯೋಗಿಗಳಿಂದ ತುಂಬಿರುವುದನ್ನು ಸಹ ಅವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ, ಅದು ಮತ್ತಷ್ಟು ಆಳವಾದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.
ಆದ್ದರಿಂದ, ಸಾಕಷ್ಟು ಕೈಗಾರಿಕೀಕರಣದ ಮೂಲಕ ಸಾಮಾನ್ಯ ರೀತಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಅವರಿಗೆ ಸಾಧ್ಯವಾಗದಿದ್ದಾಗ, ಎಲ್ಲಾ ಬಂಡವಾಳಶಾಹಿ ದೇಶಗಳ ಆರ್ಥಿಕತೆಗಳಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಒಂದು ಒತ್ತಡ, ಕೈಗಾರಿಕೆಗಳ ಮಿಲಿಟರೀಕರಣದ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ. ಇದರ ಪ್ರಯೋಜನವೆಂದರೆ, ತಾತ್ಕಾಲಿಕವಾಗಿಯಾದರೂ, ಈ ಕ್ರಮದಿಂದ ಮಾರುಕಟ್ಟೆಯಲ್ಲಿ ಕೃತಕ ಏರಿಕೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಮತ್ತೆ, ಮಾರುಕಟ್ಟೆಯಲ್ಲಿ ಏರಿಕೆ ಇಲ್ಲದೆ, ಕೈಗಾರಿಕೆಗಳು ನಡೆಯಲು ಸಾಧ್ಯವಿಲ್ಲ, ಉತ್ಪಾದನೆ ಹೆಚ್ಚಾಗುವುದಿಲ್ಲ ಮತ್ತು ಬಂಡವಾಳ ಹೂಡಿಕೆಗೆ ಯಾವುದೇ ಪ್ರೇರಣೆ ಇರುವುದಿಲ್ಲ; ಪರಿಣಾಮವಾಗಿ ಕಾರ್ಖಾನೆಗಳಲ್ಲಿ ಪಾಳಿಗಳ (ಶಿಫ್ಟ್) ಸಂಖ್ಯೆ ಕಡಿಮೆಯಾಗುತ್ತದೆ, ಕಾರ್ಖಾನೆಗಳು ಮುಚ್ಚುತ್ತವೆ ಮತ್ತು ನಿರುದ್ಯೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ……ನಂತರ ಒಂದು ದಿನ ಹೆಚ್ಚುತ್ತಿರುವ ನಿರುದ್ಯೋಗದ ಪ್ರಭಾವದಿಂದ ಇಡೀ ಉತ್ಪಾದನಾ ವ್ಯವಸ್ಥೆಯೇ ಕುಸಿಯಬಹುದು. ಮತ್ತು ಉತ್ಪಾದನೆ ಹಾಗೂ ಕೈಗಾರಿಕೆಗಳನ್ನು ನಡೆಸಿಕೊಂಡು ಹೋಗುವುದು ಅಸಾಧ್ಯವಾಗಬಹುದು…..
ಎಲ್ಲಾ ಕಡೆಗಳಿಂದ ಒತ್ತಡಕ್ಕೊಳಗಾಗಿ ಮತ್ತು ಹೆಚ್ಚುತ್ತಿರುವ ಬಿಕ್ಕಟ್ಟುಗಳಿಂದ ನಲುಗಿ, ಸಾಮ್ರಾಜ್ಯಶಾಹಿಯು ಹೆಚ್ಚು ಹೆಚ್ಚು ಮಿಲಿಟರೀಕರಣಗೊಂಡ ಆರ್ಥಿಕತೆಯತ್ತ ವಾಲುತ್ತಿದೆ. ಮತ್ತು ಆರ್ಥಿಕತೆ ಎಷ್ಟು ಹೆಚ್ಚು ಮಿಲಿಟರೀಕರಣವಾಗುತ್ತದೆಯೋ, ಸಾಮ್ರಾಜ್ಯಶಾಹಿಯು ತನ್ನ ಸಾಹಸೀ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಅಷ್ಟೇ ಹೆಚ್ಚಾಗುತ್ತದೆ…..
…..ಕೈಗಾರಿಕೆಗಳ ಈ ಮಿಲಿಟರೀಕರಣದ ಅರ್ಥವೇನು? ಅಂದರೆ, ಬೇಡಿಕೆಗಳನ್ನಿಡುವುದು ಸರ್ಕಾರವೇ ಮತ್ತು ಉತ್ಪನ್ನಗಳನ್ನು ಖರೀದಿಸುವುದೂ ಸರ್ಕಾರವೇ. ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ, ಅಂದರೆ, ಜನಸಾಮಾನ್ಯರ ಕೊಳ್ಳುವ ಶಕ್ತಿಯ ಮೇಲೆ ಅವಲಂಬಿತವಾಗಿರಬೇಕಾದ ಅಗತ್ಯವಿಲ್ಲ. ಕೇವಲ, ಸರ್ಕಾರದ ಮಿಲಿಟರಿ ಬಜೆಟ್ ಮಾತ್ರ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ, ತಾತ್ಕಾಲಿಕವಾಗಿಯಾದರೂ, ಕೈಗಾರಿಕೆಗಳು ನಾವು ಆರ್ಥಿಕ ಹಿಂಜರಿತ ಎಂದು ಕರೆಯುವ ಪರಿಸ್ಥಿತಿಯಿಂದ-ಸರಕುಗಳಿಗೆ ಮಾರುಕಟ್ಟೆಯಿಲ್ಲ, ಬೇಡಿಕೆಗಳಿಲ್ಲ, ಕಾರ್ಮಿಕರಿಗೆ ಕೆಲಸವಿಲ್ಲದಂತಹ ಪರಿಸ್ಥಿತಿಯಿಂದ ಪಾರಾಗುತ್ತವೆ. ಆಗ ಪರಿಸ್ಥಿತಿ ಹೀಗಾಗುತ್ತದೆ: ಸರ್ಕಾರವು ಬಾಂಬರ್‌ಗಳ, ಫೈಟರ್‌ಗಳ ಮತ್ತು ಇತರ ಮಿಲಿಟರಿ ಉಪಕರಣಗಳ ಮತ್ತು ಯಂತ್ರಾಂಶಗಳ ತಯಾರಿಕೆಗೆ ಬೇಡಿಕೆಗಳನ್ನಿಡುತ್ತದೆ, ಬಂಡವಾಳಿಗರು ಅವನ್ನು ಉತ್ಪಾದಿಸುತ್ತಾರೆ ಮತ್ತು ಸರ್ಕಾರವೇ ಅವುಗಳನ್ನು ಖರೀದಿಸುತ್ತದೆ. ಮತ್ತು ಅದು ಜನರ ಕೊಳ್ಳುವ ಶಕ್ತಿಯ ಮೇಲೆ ಅವಲಂಬಿತವಾಗಿರಬೇಕಾಗಿಲ್ಲದ ಕಾರಣ, ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಒತ್ತಡದಿಂದ ಆರ್ಥಿಕತೆಯನ್ನು ಒಂದು ಹಂತದವರೆಗೆ ತಾತ್ಕಾಲಿಕವಾಗಿ ರಕ್ಷಿಸಬಹುದು.
ಆದರೆ ಅದರಲ್ಲಿ ಒಂದು ಅಂತರ್ಗತ ವೈರುಧ್ಯವಿದೆ. ಅದು ಹೀಗಿದೆ: ಹೆಚ್ಚೆಚ್ಚು ಮಿಲಿಟರಿ ಉಪಕರಣಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಿದಂತೆ, ಇವುಗಳನ್ನು ಉಪಯೋಗಿಸದಿದ್ದರೆ, ಉತ್ಪಾದಿಸಿದ ಯುದ್ಧ ಸಾಮಗ್ರಿಗಳ ನಿರಂತರ ಸಂಗ್ರಹಣೆಯಿಂದಾಗಿ ಆರ್ಥಿಕತೆಯಲ್ಲಿ ಒಂದು ನಿಶ್ಚಲತೆಯ ಪ್ರವೃತ್ತಿ ಕಾಣಿಸಿಕೊಳ್ಳುವುದು ಖಚಿತ; ಇದರ ಪರಿಣಾಮವಾಗಿ ಯುದ್ಧ ಕೈಗಾರಿಕೆಗಳನ್ನು ಒಂದೊಂದಾಗಿ ಮುಚ್ಚಬೇಕಾಗುತ್ತದೆ. ಮತ್ತೆ, ಸರ್ಕಾರವೂ ಸಹ ಈ ಸಾಮಗ್ರಿಗಳನ್ನು ಅಂತ್ಯವಿಲ್ಲದೆ ಮತ್ತು ಉದ್ದೇಶವಿಲ್ಲದೆ ಸಂಗ್ರಹಿಸಿಡಲೆಂದೇ ಖರೀದಿಸಲು ಸಾಧ್ಯವಿಲ್ಲ. ಅದಕ್ಕೆ ಯುದ್ಧ ಅವಶ್ಯಕ….
ಉಸುಕಿನ ಮೇಲೆ ನಿಂತಿರುವ ಅಮೆರಿಕನ್ ಆರ್ಥಿಕತೆ
…..ಅಮೆರಿಕನ್ ಆರ್ಥಿಕತೆಯು ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದು ಎನ್ನುವಂತಿದೆ. ಅದರ ಇಡೀ ಆರ್ಥಿಕ ವ್ಯವಸ್ಥೆಯು ಯುದ್ಧ ಆರ್ಥಿಕತೆಯ ಮೇಲೆ ನಿಂತಿದೆ. ಪ್ರಸ್ತುತ ಅದರ ಆರ್ಥಿಕ ಸ್ಥಿರತೆಯನ್ನು ನಿಭಾಯಿಸುತ್ತಿರುವ ಯುದ್ಧದ ಪ್ರಕಾರವು ಸ್ಥಳೀಯ, ಭಾಗಶಃ, ತಾತ್ಕಾಲಿಕವಾದದ್ದು. ಅಂದರೆ, ಯುದ್ಧ ಸಾಮಗ್ರಿಗಳನ್ನು ಉಪಯೋಗಿಸಲು, ಅವರಿಗೆ ಸ್ಥಳೀಯ ಮತ್ತು ಭಾಗಶಃ ಯುದ್ಧಗಳು ಬೇಕು. ಈ ಮೂಲಭೂತ ಆರ್ಥಿಕ ವೈಶಿಷ್ಟ್ಯ ವು ಒಂದಾದ ಮೇಲೊಂದು ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಇದು ಅಮೆರಿಕಾದ ಇಂದಿನ ಯುದ್ಧ ನೀತಿಯ ಮೂಲವಾಗಿದೆ.
…ಶಸ್ತ್ರಾಸ್ತ್ರ ಪೈಪೋಟಿ ಮತ್ತು ಯುದ್ಧಕ್ಕಾಗಿಯ ಸರ್ವಸಿದ್ಧತೆಗಳ ವಿಷಯದಲ್ಲಿ, ಸಾಮ್ರಾಜ್ಯಶಾಹಿಗಳು ತಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಸಮಾಜವಾದಿ ಶಿಬಿರದ ಸುತ್ತಲೂ ಸಾಮ್ರಾಜ್ಯಶಾಹಿಗಳು ನಿರ್ಮಿಸಿರುವ ಮಿಲಿಟರಿ ನೆಲೆಗಳು ಕ್ಷಣಮಾತ್ರದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿರುವ ಸಾಮೂಹಿಕ ವಿನಾಶದ ಮಾರಣಾಂತಿಕ ಶಸ್ತ್ರಾಸ್ತ್ರಗಳಿಂದ ತುಂಬಿವೆ…. ಯುದ್ಧ ಎಂದರೆ ಕೇವಲ ವಿಶ್ವ ಯುದ್ಧವೇ? ಯಾರಾದರೂ ಯುದ್ಧದ ವಿರುದ್ಧ ಇದ್ದರೆ, ಅವರು ಕೇವಲ ವಿಶ್ವ ಯುದ್ಧದ ವಿರುದ್ಧ ಇದ್ದಾರೆ ಎಂದರ್ಥವೇ? ಸಾಮ್ರಾಜ್ಯಶಾಹಿಗಳಿಂದ ಅಲ್ಲಿ ಇಲ್ಲಿ ಹುಟ್ಟಿಕೊಂಡ ಈ ಸ್ಥಳೀಯ ಅಥವಾ ಭಾಗಶಃ ಯುದ್ಧಗಳು ಸಹ ಯುದ್ಧಗಳಲ್ಲವೇ? ಅಮೆರಿಕವು ಇತರ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುತ್ತಿರುವ ಮತ್ತು ಅವುಗಳನ್ನು ಪರಸ್ಪರ ಯುದ್ಧಕ್ಕೆ ತಳ್ಳುತ್ತಿರುವ ರೀತಿ, ಅಥವಾ ಅವುಗಳನ್ನು ಸಂಘರ್ಷ ಮತ್ತು ಯುದ್ಧಕ್ಕೆ ಎಳೆಯಲು, ಒಂದು ರಾಷ್ಟ್ರದ ಬಗ್ಗೆ ಮತ್ತೊಂದು ರಾಷ್ಟ್ರಕ್ಕೆ ಮಾಹಿತಿಯನ್ನು ಪೂರೈಸುತ್ತಿರುವುದು, ಇವು ಯುದ್ಧದ ಕುತಂತ್ರಗಳಲ್ಲವೇ?
…..ಜರ್ಮನಿಯ ಗೆಸ್ಟಾಪೋ(ನಾಜಿ಼ ರಹಸ್ಯ ಪೊಲೀಸ್ ಪಡೆ) ಚಟುವಟಿಕೆಗಳು ಮತ್ತು ಪಂಚದಳ (ಆಂತರಿಕ ದ್ರೋಹಿ ಪಡೆ)ದ ಚಟುವಟಿಕೆಗಳು ನಾಗರಿಕತೆಯ ವಿರುದ್ಧದ ಗಂಭೀರ ಪಿತೂರಿಗಳೆಂದು ಕರೆಯಲ್ಪಡುತ್ತವೆ…..ಆದರೆ, ಅಮೆರಿಕಾ ಮಾಡದ ಯಾವುದೇ ಘೋರ ಅಪರಾಧವಿಲ್ಲ. ನಾಜಿ಼ಗಳನ್ನು ಯುದ್ಧಾಪರಾಧಿಗಳೆಂದು ಖಂಡಿಸಲಾಯಿತು….ಇಂದು ಅಮೆರಿಕಾ ವಿಶ್ವದ ಅನೇಕ ದೇಶಗಳಲ್ಲಿ ಮಾಡುತ್ತಿರುವುದನ್ನು ನೋಡಿದರೆ, ಅದು ನಾಜಿ಼ಗಳೂ ನಾಚಿಕೊಳ್ಳುವಂತಿದೆ. ಇಂದು ಸಿಐಎ ಮತ್ತು ಎಫ್‌ಬಿಐ ಎಲ್ಲೆಡೆ ಮಾಡುತ್ತಿರುವುದಾದರೂ ಏನು? ಅವರು ತೊಡಗಿಸಿಕೊಳ್ಳದ ಯಾವುದೇ ರೀತಿಯ ಘೋರ ಕೃತ್ಯವಿದೆಯೇ? ಅವರು ವಿಶ್ವದಾದ್ಯಂತ ಎಲ್ಲಾ ರೀತಿಯ ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ – ರಾಜಕೀಯ ಕೊಲೆಗಳನ್ನು ಮಾಡುವುದು, ದಂಗೆಗಳನ್ನು ಆಯೋಜಿಸುವುದು, ಇತ್ಯಾದಿ. ಈ ಎಲ್ಲಾ ಚಟುವಟಿಕೆಗಳ ಏಕೈಕ ಉದ್ದೇಶವೆಂದರೆ ವಿಶ್ವದಾದ್ಯಂತ ಅಲ್ಲಿ ಇಲ್ಲಿ ಯುದ್ಧಭೀತಿಯನ್ನು ಮುಂದುವರೆಸಿಕೊಂಡು ಹೋಗುವುದು, ಸ್ಥಳೀಯ ಮತ್ತು ಭಾಗಶಃ ಯುದ್ಧಗಳನ್ನು ಆಯೋಜಿಸುವುದು, ಒಂದು ರಾಷ್ಟ್ರವನ್ನು ಮತ್ತೊಂದರೊಂದಿಗೆ ಸಂಘರ್ಷ ಮತ್ತು ಯುದ್ಧದಲ್ಲಿ ಸಿಕ್ಕಿಸುವುದು, ತನ್ಮೂಲಕ, ತನ್ನಲ್ಲಿ ಸಂಗ್ರಹವಾಗುತ್ತಿರುವ ಮತ್ತು ಬಳಕೆಯಲ್ಲಿಲ್ಲದ ಹಳೆಯ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ವಿವಿಧ ದೇಶಗಳು ಖರೀದಿಸುವಂತೆ ಪ್ರೇರೇಪಿಸುವ ಮೂಲಕ ಅವನ್ನು ಬಳಸಬಹುದು. ಹಾಗಾಗಿ, ಯುದ್ಧಗಳು ಹೆಚ್ಚಾದಷ್ಟೂ, ವಿಶ್ವದಲ್ಲಿ ಹೆಚ್ಚು ಯುದ್ಧಭೀತಿ, ಯುದ್ಧಭೀತಿ ಹೆಚ್ಚಾದಷ್ಟೂ ಅವರಿಗೆ ಹೆಚ್ಚು ಲಾಭ!
…..ಸಾಮ್ರಾಜ್ಯಶಾಹಿ ಆಳ್ವಿಕ ಕೂಟಗಳ ರಕ್ತದಲ್ಲೇ ರಾಕ್ಷಸ ಗುಣವಿದೆ. ಮತ್ತು ಯಾವುದೇ ಸಾಮ್ರಾಜ್ಯಶಾಹಿ ದೇಶದಲ್ಲಿ, ಒಬ್ಬ ಆಳ್ವಿಕನು ವೈಯಕ್ತಿಕವಾಗಿ ದುರುಳನಲ್ಲದಿದ್ದರೂ ಸಹ, ಅವನಿಗೆ ಸಾಮ್ರಾಜ್ಯಶಾಹಿ ಆರ್ಥಿಕತೆ ಮತ್ತು ರಾಜಕೀಯದ ಅವಶ್ಯಕತೆಗಳಿಂದಾಗಿ ಯುದ್ಧಕ್ಕೆ ಸಿದ್ಧತೆ ನಡೆಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯಿಲ್ಲ.
…..ದುರ್ಬಲ ಮತ್ತು ಹಿಂದುಳಿದ ಬಂಡವಾಳಶಾಹಿ ದೇಶಗಳ ಮೇಲೆ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಬಲ ಬಂಡವಾಳಶಾಹಿ ದೇಶಗಳ ನಡುವಿನ ಸ್ಪರ್ಧೆಯನ್ನು ಆಧರಿಸಿದ ವೈರುಧ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಎಲ್ಲಾ ಸಂಗತಿಗಳು ಸಾಮ್ರಾಜ್ಯಶಾಹಿ ಯುಗದಲ್ಲಿ ಯುದ್ಧಗಳ ಅನಿವಾರ್ಯತೆಯ ಬಗ್ಗೆ ಲೆನಿನ್ ಅವರ ವಿಶ್ಲೇಷಣೆಯು ಮೊದಲಿನಂತೆಯೇ ಇನ್ನೂ ಪ್ರಸ್ತುತವಾಗಿದೆ ಎಂಬುದನ್ನು ನಿಸ್ಸಂದೇಹವಾಗಿ ತೋರಿಸುತ್ತವೆ.
….ವಿಶ್ವದಾದ್ಯಂತ ಸಮಾಜವಾದಿ ಕ್ರಾಂತಿಯು ವಿಜಯಶಾಲಿಯಾದಾಗ ಅಥವಾ ಪ್ರಸ್ತುತ ಸಮಾಜವಾದಿ ರಾಷ್ಟ್ರಗಳನ್ನು ಸುತ್ತುವರೆದಿರುವ ಬಂಡವಾಳಶಾಹಿಗಳ ಬದಲಿಗೆ, ವಿಶ್ವ ಸಮಾಜವಾದಿ ವ್ಯವಸ್ಥೆಯು, ಅಳಿದುಳಿದ ಕೆಲವು ಬಂಡವಾಳಶಾಹಿ ದೇಶಗಳನ್ನು ಸುತ್ತುವರಿಯುವಂತೆ ಆದಾಗ ಮಾತ್ರವೇ ಮಾನವ ಸಮಾಜದಿಂದ ಯುದ್ಧವನ್ನು ಶಾಶ್ವತವಾಗಿ ಅಳಿಸಿಹಾಕಲು ಸಾಧ್ಯವಾಗುತ್ತದೆ.
(ಆಧಾರ: ‘ಯುದ್ಧ, ಶಾಂತಿ ಮತ್ತು ಶಾಂತಿಯುತ ಸಹಬಾಳ್ವೆ’,’ನವೆಂಬರ್ ಕ್ರಾಂತಿಯ ಪಾಠಗಳು’ ಮತ್ತು ‘ಘಳಿಗೆಯ ಕರೆ’)