Loading..

ಬ್ಯಾಂಕ್ ಬಡ್ಡಿದರ ಕಡಿತ: ಬಂಡವಾಳಿಗರ ಕಣ್ಣಿಗೆ ಬೆಣ್ಣೆ-ಜನ ಸಾಮಾನ್ಯರ ಕಣ್ಣಿಗೆ ಸುಣ್ಣ!

ಜೂನ್ 6, 2025ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಪ್ರಮುಖ ಬಡ್ಡಿ ದರವನ್ನು ಶೇ. 0.5ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಇಷ್ಟು ದಿನ ಹಣದುಬ್ಬರದಿಂದಾಗಿ ಆರ್‌ಬಿಐಗೆ ಇದನ್ನು ಮಾಡಲಾಗಿರಲಿಲ್ಲ ಎನ್ನಲಾಗಿದೆ. ಆದರೆ ಈಗ ಸರ್ಕಾರ ಹಾಗೂ ಆರ್‌ಬಿಐ ನಿಂದ ನಿಯೋಜಿತರಾದ ತಜ್ಞರು ಜನಸಾಮಾನ್ಯರಿಗೆ ತಿಳಿಯದ ವಿಚಿತ್ರ ವಾದಗಳ ಮೂಲಕ ಹಣದುಬ್ಬರ ಸಾಕಷ್ಟು ಇಳಿದಿದೆ ಎಂದು ತೀರ್ಪು ನೀಡಿದ್ದಾರೆ. ಜೊತೆಗೆ ಮನೆ, ಕಾರು, ಇತ್ಯಾದಿಗಳನ್ನು ಕೊಂಡುಕೊಂಡಿರುವ ಅನೇಕ ಜನರಿಗೆ ಸಾಲದ ಮಾಸಿಕ ಕಂತುಗಳ ಬಡ್ಡಿದರ ಕಡಿಮೆಯಾಗುತ್ತದೆ, ವ್ಯಾಪಾರಸ್ಥರು ಬಂಡವಾಳಿಗರು ಹೆಚ್ಚು ಸಾಲ ಪಡೆದು ಹೆಚ್ಚು ಹೂಡಿಕೆ ಮಾಡುತ್ತಾರೆ, ಇದರಿಂದ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತದೆ ಎಂದೆಲ್ಲಾ ಹೇಳುವ ‘ಬಂಡವಾಳ’ದ ಪರವಾದ ಅಥವಾ ಕೇವಲ ಈ ಕುರಿತಾದ ಪುಸ್ತಕಗಳನ್ನು ನೆಚ್ಚಿಕೊಂಡಿರುವ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರೂ ಇದ್ದಾರೆ. ಆದರೆ ಇದೆಲ್ಲವೂ ಈಗಾಗಲೇ ದಿವಾಳಿಯಾಗಿರುವ ಜನಸಾಮಾನ್ಯರಿಗೆ ಹೇಗೆ ಅನ್ವಯಿಸುತ್ತದೆ? ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ನಾಮಕಾವಸ್ತೆ ‘ಆರ್ಥಿಕ ಬೆಳವಣಿಗೆ’ಯು ದುಡಿಯುವ ಜನರ ಸಮೃದ್ಧತೆಯ ಸೂಚಕವೇ?
ಬಡ್ಡಿದರ ಕಡಿತದ ಪ್ರಭಾವ
ಆರ್‌ಬಿಐನ ‘ರೆಪೋ’ ದರ ಕಡಿಮೆಯಾದಾಗ ಕೈಗಾರಿಕಾ ಮನೆತನಗಳು ಹೆಚ್ಚು ಹೂಡಿಕೆ ಮಾಡುತ್ತವೆ, ಇದರಿಂದ ಆರ್ಥಿಕತೆ ವೃದ್ಧಿಯಾಗುತ್ತದೆ, ಜನರು ಮನೆ ಅಥವಾ ಕಾರು ಇತ್ಯಾದಿ ಕೊಂಡುಕೊಳ್ಳುತ್ತಾರೆ ಎಂದು ಆಳ್ವಿಕರು ಹೇಳುತ್ತಾರೆ.
ಆದರೆ ಇದು ನಿಜವೇ? 145 ಕೋಟಿ ಭಾರತೀಯರಲ್ಲಿ ಎಷ್ಟು ಜನರು ಬ್ಯಾಂಕಿನಲ್ಲಿ ಸಾಲ ಪಡೆದು ಕಾರು ಕೊಳ್ಳಬಲ್ಲರು? ಅವರು ಸಾಲ ಪಡೆದರೂ, ಈ ನಿರುದ್ಯೋಗದ ಯುಗದಲ್ಲಿ ಎಷ್ಟು ಜನ ಅದನ್ನು ಹಿಂದಿರುಗಿಸಬಲ್ಲರು? ಭಾರತದ ಬಹುತೇಕ ದುಡಿಯುವ ಜನ ನಿರುದ್ಯೋಗಿಗಳು ಅಥವಾ ಅರೆ ಉದ್ಯೋಗಿಗಳು ಅಥವಾ ಗುತ್ತಿಗೆ ಕಾರ್ಮಿಕರು. ಇವರೆಲ್ಲಾ ಅಸಂಘಟಿತ ಕ್ಷೇತ್ರದಲ್ಲಿದ್ದು ದೇಶದ ದುಡಿಯುವ ವರ್ಗದ ಶೇ 93ರಷ್ಟಿದ್ದಾರೆ, ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಮತ್ತೊಂದೆಡೆ ರೈತರು, ತಾವು ಬೆಳೆದ ಬೆಳೆಗೆ ಕನಿಷ್ಠ ಬೆಲೆ ದೊರೆಯದೆ, ಗಿರವಿದಾರರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿರುವವರು. ಇವರೆಲ್ಲಾ ಈ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಪಡೆಯುವರೇ?
ಎರಡನೆಯದಾಗಿ ಹಿರಿಯ ಹಾಗೂ ನಿವೃತ್ತ ನಾಗರಿಕರು, ತಮ್ಮ ಜೀವನೋಪಾಯಕ್ಕಾಗಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ಹಣಕ್ಕೆ ಇನ್ನು ಮುಂದೆ ಕಡಿಮೆ ಬಡ್ಡಿ ಪಡೆಯುತ್ತಾರೆ. ಇದಕ್ಕೆ ಪರ್ಯಾಯವೆಂಬಂತೆ ಅವರಿಗೆ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ಠೇವಣಿ ಇಡಲು ಸಲಹೆ ನೀಡುತ್ತಾರೆ. ಅದರಿಂದಾಗಬಹುದಾದ ನಷ್ಟ, ದುರಂತಗಳಿಗೆ ಅವರು ಉತ್ತರದಾಯಿಯಾಗಿರುವುದಿಲ್ಲ.
ಮೂರನೆಯದಾಗಿ ಈ ಬಡ್ಡಿ ದರ ಇಳಿಕೆಯನ್ನು ಕೇಳುತ್ತಿರುವವರು ಸಾಮಾನ್ಯ ಜನರಲ್ಲ, ಬದಲಿಗೆ ಬಂಡವಾಳಿಗರು. ಅವರ ಉತ್ಪಾದನಾ ಹೂಡಿಕೆ ಬೀಳುತ್ತಿರುವುದಕ್ಕೆ ಕಾರಣ ಅವರಲ್ಲಿ ಹಣದ ಕೊರತೆ ಇದೆ ಎಂದಲ್ಲ. ಬದಲಿಗೆ ಅವರ ವಸ್ತುಗಳಿಗೆ ಮಾರುಕಟ್ಟೆ ಇಲ್ಲ; ಅಂದರೆ ಜನರ ಹತ್ತಿರ ವಸ್ತುಗಳನ್ನು ಕೊಳ್ಳಲು ಹಣವಿಲ್ಲ ಎಂದರ್ಥ. ಮಾಧ್ಯಮಗಳ ವರದಿಯಂತೆ, ಬಡ್ಡಿದರ ಕಡಿಮೆಯಾದ ಮೇಲೂ ಮನೆ ಅಥವಾ ಕಾರು ಕೊಳ್ಳಲು ಬೇಡಿಕೆಯಲ್ಲಿ ಹೆಚ್ಚಳವಾಗಿಲ್ಲ. ಈ ಬಗ್ಗೆ ಬಡ್ಡಿ ದರವನ್ನು ಕಡಿಮೆ ಮಾಡುವುದನ್ನು ಬೆಂಬಲಿಸಿರುವವರು, ದಿನ ಕಳೆದಂತೆ ಜನರಿಗೆ ಭರವಸೆ ಮೂಡುತ್ತದೆ, ಕಾಯಿರಿ ಎಂದು ಸಮಜಾಯಿಸಿ ನೀಡುತ್ತಾರೆ.

ಹಣದುಬ್ಬರ ನಿಜವಾಗಲೂ ಕುಸಿದಿದೆಯೇ?
ಸರ್ಕಾರವು ಚಿಲ್ಲರೆ ಹಣದುಬ್ಬರ ಇಳಿಮುಖವಾಗಿದೆ ಎಂದು ಕೊಚ್ಚಿಕೊಳ್ಳುತ್ತಿರುವಾಗಲೇ, ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಎಲ್ಲಾ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಅನುಭವಿಸುತ್ತಿದ್ದಾರೆ. ಅತ್ಯಾವಶ್ಯಕ ವಸ್ತುಗಳನ್ನು ಬಿಟ್ಟು ಇತರ ಗ್ರಾಹಕ ವಸ್ತುಗಳೆಡೆ ಅವರ ಚಿತ್ತ ಹರಿಯುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಕೊಳ್ಳುವ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರು ಕೊಳ್ಳಲು ಬಯಸುತ್ತಿದ್ದಾರೆ. ಇಂದು ಆಹಾರ ಪದಾರ್ಥಗಳು ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ, ಸಾರಿಗೆ, ಎಲ್‌ಪಿಜಿ ಮುಂತಾದವುಗಳ ದರ ಏರುತ್ತಿದ್ದರೂ, ಹಣದುಬ್ಬರ ಇಳಿಯುತ್ತಿದೆ ಎಂದರೆ ಹೇಗೆ ನಂಬುವುದು? ಇದು ಅಂಕಿ ಅಂಶಗಳ ಕೈಚಳಕವಲ್ಲದೆ ಮತ್ತೇನು?
ಹಣದುಬ್ಬರ ಇಳಿಯುತ್ತಿದೆ ಎಂದು ಕೊಚ್ಚಿಕೊಳ್ಳಲು ಒತ್ತಡವೇನು?
ಈಗಾಗಲೇ ಹೇಳಿರುವಂತೆ ಕೈಗಾರಿಕಾಪತಿಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ಉತ್ಪಾದನೆಯಲ್ಲಿ ತೊಡಗಿಸಲು ತಯಾರಿಲ್ಲ. ಆದ್ದರಿಂದ ಬ್ಯಾಂಕಿನಿಂದ ಪಡೆದ ಬಹುದೊಡ್ಡ ಮೊತ್ತವನ್ನು ಅವರು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಅಥವಾ ಕ್ರೀಡೆ ಮತ್ತು ಮನೋರಂಜನಾ ಉದ್ಯಮದಲ್ಲಿ ತೊಡಗಿಸಲು ಬಯಸುತ್ತಾರೆ. ಬಹುದೊಡ್ಡ ಏಕಸ್ವಾಮ್ಯ ಮನೆತನಗಳು ಇಂದು ರಕ್ಷಣಾ ವಸ್ತುಗಳ ಉತ್ಪಾದನೆಯಲ್ಲಿ, ಯುದ್ಧವಿಮಾನ, ನೌಕಾ ಹಡಗು, ಅಥವಾ ಭೂ ಯುದ್ಧ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಮಹೀಂದ್ರ ಡಿಫೆನ್ಸ್ ಸಿಸ್ಟಮ್, ಭಾರತ್ ಪೋರ್ಟ್ ಹಾಗೂ ರಿಲಯನ್ಸ್ ನೇವಲ್ ಮತ್ತು ಇಂಜಿನಿಯರಿಂಗ್ ಮುಂತಾದ ಸಂಸ್ಥೆಗಳು ಇದರಲ್ಲಿ ತೊಡಗಿವೆ. ಮತ್ತೊಂದೆಡೆ ಭಾರತದ ಬಂಡವಾಳ ಮಾರುಕಟ್ಟೆ ಬಹಳಷ್ಟು ಬೆಳೆದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಗಾರರು ಭಾರತದ ಶೇರು ಮಾರುಕಟ್ಟೆಯ ‘ಊಹಾತ್ಮಕ’ (Speculative) ವ್ಯವಹಾರದಲ್ಲಿ ಹೆಚ್ಚು ಹಣ ಹೂಡುತ್ತಿರುವುದರಿಂದ, ‘ಊಹಾತ್ಮಕ ಮಾರುಕಟ್ಟೆ’ಯ (Speculative Market) ವ್ಯವಹಾರಕ್ಕೆ ಅವಕಾಶ ಹೆಚ್ಚಾಗಿದೆ. ಇಕ್ವಿಟಿ ಶೇರುಗಳಲ್ಲಿ ಹೂಡಿಕೆ ಮಾಡಿದ ಬಾಂಡುಗಳ ಮಾರಾಟದ ಮೂಲಕ ಲಾಭ ಮಾಡುವ ಅವಕಾಶ ಹೆಚ್ಚಾಗಿದೆ.
ಬ್ಯಾಂಕಿನ ಬಡ್ಡಿ ದರದ ಕುಸಿತ ಇಂತಹ ಬಾಂಡ್ ವ್ಯವಹಾರಗಳ ಮೇಲೆ ಪ್ರಭಾವ ಬೀರುತ್ತದೆ. ಬಾಂಡ್ ವ್ಯವಹಾರಗಳ ಮೂಲಕ ಹೆಚ್ಚು ಲಾಭ ಮಾಡಬಹುದೆಂದು ಕಾರ್ಪೋರೇಟ್‌ಗಳು, ಶ್ರೀಮಂತರು ಯೋಚಿಸುತ್ತಾರೆ. ಅವರು ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಹಣ ಪಡೆದು ಊಹಾತ್ಮಕ ಬಂಡವಾಳ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಮಾಡಲು ಹೂಡುತ್ತಾರೆ. ಇವರಿಗೆ ಈ ಹಣ ಮರುಪಾವತಿಯ ಬಗ್ಗೆ ಕಾಳಜಿ ಇಲ್ಲ, ಸರ್ಕಾರ ಸಂತೋಷದಿಂದ ಇವುಗಳನ್ನು ಮಾಫಿ ಮಾಡುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಸುಮಾರು 16.35ಲಕ್ಷ ಕೋಟಿ ಅಷ್ಟು ಹಣವನ್ನು ಮಾಫಿ ಮಾಡಿದೆ.
ಸಂಕಷ್ಟಗಳನ್ನು ಎದುರಿಸುವುದು ಸಾಮಾನ್ಯ ಜನತೆ!
ಒಂದೆಡೆ ಜನರ ಹಣಕ್ಕೆ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದೊರೆಯುತ್ತದೆ, ಮತ್ತೊಂದೆಡೆ ಅದೇ ಬ್ಯಾಂಕುಗಳಿಂದ ಕಾರ್ಪೊರೇಟ್ ಮನೆತನಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಾ, ವಿವಿಧ ಉತ್ಪಾದನಾ ಕ್ಷೇತ್ರದಲ್ಲಿ ಅದನ್ನು ಹೂಡದೇ, ‘ಊಹಾತ್ಮಕ ಮಾರುಕಟ್ಟೆ’ಯಲ್ಲಿ ಗರಿಷ್ಠ ಲಾಭ ಮಾಡಿಕೊಳ್ಳುವರು. ನೈಜವಾಗಿ ದೇಶದ ಆರ್ಥಿಕತೆ ನೆಲಕಚ್ಚಿ, ಹಣದುಬ್ಬರ ಹೆಚ್ಚಾಗಿ, ಎಲ್ಲಾ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದನ್ನು ಮರೆಮಾಚಲು ಬಡ್ಡಿದರ ಇಳಿತದ ಕಟ್ಟುಕಥೆಗಳನ್ನು ಹೆಣೆದು ಜನರ ಕಣ್ಣಿಗೆ ಮಣ್ಣೆರೆಚಲಾಗುತ್ತಿದೆ. ಈ ಸತ್ಯವನ್ನು ನಾವು ಮನಗಾಣಬೇಕಿದೆ.