Loading..

ಅಸ್ಸಾಂ: ರಾಕ್ಷಸೀ ತೆರವು ಕಾರ್ಯಾಚರಣೆ ಮತ್ತು ಕೊಲೆಗಳು ಸರ್ಕಾರದ ಫ್ಯಾಸೀವಾದಿ ನಡೆಯನ್ನು ವಿರೋಧಿಸಿ!

ಅತಿಕ್ರಮಣಗೊಂಡ ಭೂಮಿಯನ್ನು ವಶಪಡಿಸಿಕೊಳ್ಳುವ ನೆಪದಲ್ಲಿ, ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರವು, ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಅಸಂಖ್ಯಾತ ಅಸಹಾಯಕ ಬಡ ಜನರನ್ನು ನಿರ್ದಾಕ್ಷಿಣ್ಯವಾಗಿ ಒಕ್ಕಲೆಬ್ಬಿಸುತ್ತಿದೆ. ಜೊತೆಗೆ ನದಿ ದಂಡೆ ಕುಸಿದು ಬಿದ್ದು ಸ್ಥಳಾಂತರಗೊಂಡ ಅಸಹಾಯಕ ಭೂಹೀನ ಜನರಿಗೆ ಪರ್ಯಾಯ ಪುನರ್ವಸತಿಗೆ ವ್ಯವಸ್ಥೆ ಮಾಡದೆ ಅವರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದೆ. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿರುವುದರಿಂದ ಈ ಒಕ್ಕಲೆಬ್ಬಿಸುವಿಕೆಯು ಕೋಮುವಾದ-ಜಾತೀಯತೆ-ಸಂಕುಚಿತ ದ್ವೇಷ ಮತ್ತು ಅತ್ಯಂತ ವಿವಾದಾತ್ಮಕ ಎನ್‌ಆರ್‌ಸಿ ಜೊತೆಗೆ ತಳಕು ಹಾಕಿಕೊಂಡಿದೆ.
ಬಲವಂತವಾಗಿ ಒಕ್ಕಲೆಬ್ಬಿಸಲ್ಪಟ್ಟ ಬಡವರ ಗೋಳಾಟ ಮತ್ತು ದುಃಖ ಮುಗಿಲು ಮುಟ್ಟಿವೆ. ಆದರೂ, ಫ್ಯಾಸಿಸ್ಟ್ ಸರ್ವಾಧಿಕಾರಿ ಬಿಜೆಪಿ ಸರ್ಕಾರ ಜನರ ಮೇಲೆ ಗುಂಡು ಹಾರಿಸಿ ಅವರನ್ನು ಕೊಲ್ಲುತ್ತಿದೆ ಮತ್ತು ಸಂಭ್ರಮದಿಂದ ಮೆರೆಯುತ್ತಿದೆ. ಸರ್ಕಾರವು, ಅಸ್ಸಾಂ ಮಾತ್ರವಲ್ಲದೇ, ಇಡೀ ಭಾರತದ ಮಹಾನ್ ಹೆಮ್ಮೆಯ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರಾದ ಶ್ರೀಮಂತ ಶಂಕರ್ ದೇವ್ ಅವರ ಬೋಧನೆಗಳ ವಿರುದ್ಧ ವರ್ತಿಸುತ್ತಿದೆ ಮತ್ತು ಈ ಎಲ್ಲಾ ಅನಾಗರಿಕ ಕೃತ್ಯಗಳನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿದೆ. ಸರ್ಕಾರದ ಈ ಕೃತ್ಯದ ಜೊತೆಗೆ ಆರ್‌ಎಸ್‌ಎಸ್-ಬಿಜೆಪಿಯ ಕೋಮು ದ್ವೇಷ ಅಭಿಯಾನವು ಸಾಮಾಜಿಕ ಪರಿಸರವನ್ನು ಎಷ್ಟರ ಮಟ್ಟಿಗೆ ಕಲುಷಿತಗೊಳಿಸಿದೆಯೆಂದರೆ, ಜನರ ಜೀವನದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಜಾಸತ್ತಾತ್ಮಕ ಚಳುವಳಿಯನ್ನು ಸಂಘಟಿಸುವುದು ಕ್ರಮೇಣ ಅಸಾಧ್ಯವಾಗುತ್ತಿದೆ. ಈ ಒಕ್ಕಲಿಬ್ಬಿಸುವಿಕೆಯು ಕೇವಲ ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶಗಳಿಗೆ ಸೀಮಿತವಾಗಿರದೆ, ಶೀಘ್ರದಲ್ಲೇ ಕೊಕ್ರಾಝಾರ್, ಶಿಲ್‌ಸ್ಯಾಂಕೋ ಹಾಗೂ ಮತ್ತಿತರ ಪ್ರದೇಶಗಳಿಗೂ ಹರಡುತ್ತದೆ. ಈ ರೀತಿ ವಶಪಡಿಸಿಕೊಂಡ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಅಂಬಾನಿ, ಅದಾನಿ ಮುಂತಾದ ಕೈಗಾರಿಕಾ ಉದ್ಯಮಿಗಳಿಗೆ ಹಸ್ತಾಂತರಿಸಲಾಗುವುದು.
ಎಸ್‌ಯುಸಿಐ(ಸಿ)ನ ಅಸ್ಸಾಂ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಚಂದ್ರಲೇಖಾ ದಾಸ್‌ರವರು ಜುಲೈ 13 ರಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಇತರ ರಾಜಕೀಯ ಪಕ್ಷಗಳ, ಪ್ರಜಾಸತ್ತಾತ್ಮಕ ಮನಸ್ಸುಳ್ಳ ಬುದ್ಧಿಜೀವಿಗಳ ಹಾಗೂ ಗಾಢ ಮಾನವತಾವಾದಿ ಭಾವನೆಗಳುಳ್ಳ ಜನರ ತೀವ್ರ ಆತಂಕ ಮತ್ತು ದಿಗ್ಭ್ರಮೆಯನ್ನು ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರದ ಈ ಅತ್ಯಂತ ಅಮಾನವೀಯ ಕೃತ್ಯದ ಬಗ್ಗೆ ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ಸಂವೇದನಾಶೀಲ, ಮಾನವೀಯ ನೆಲೆಯುಳ್ಳ ಅಸ್ಸಾಂ ಜನರ ನೈಜ ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಹಾಗೂ ಅವರಲ್ಲಿ ತರ್ಕಬದ್ಧವಲ್ಲದ ಭಾವನೆಗಳನ್ನು ತುಂಬಿ ಸಂಪೂರ್ಣ ಸುಳ್ಳು ಕಲ್ಪನೆಗಳನ್ನು ಮೂಡಿಸಿ ಮತ್ತು ಅವರ ಭವಿಷ್ಯವನ್ನು ರಕ್ಷಿಸುವ ಹೆಸರಿನಲ್ಲಿ ಸರ್ಕಾರವು ಅನುಸರಿಸುತ್ತಿರುವ ಫ್ಯಾಸಿಸ್ಟ್ ಮಾರ್ಗವನ್ನು ಕೈ ಬಿಡಬೇಕೆಂದು ಮನವಿ ಮಾಡಿದರು. ಅನ್ಯಾಯ ಮಾಡುವುದರಿಂದ ಅಥವಾ ಅನೈತಿಕ ಮಾರ್ಗವನ್ನು ಅನುಸರಿಸುವುದರಿಂದ ಜನರಿಗೆ ಯಾವುದೇ ಕಲ್ಯಾಣವನ್ನು ಮಾಡಲು ಸಾಧ್ಯವಿಲ್ಲ. ಬದಲಿಗೆ ಅದು ಅನಿವಾರ್ಯವಾಗಿ ತೀವ್ರ ವಿಪತ್ತನ್ನು ಉಂಟುಮಾಡುತ್ತದೆ ಎಂಬುದು ಇತಿಹಾಸದ ಪಾಠವಾಗಿದೆ. ಇದಲ್ಲದೆ, ಇತ್ತೀಚೆಗೆ ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಪ್ರಚಾರದಲ್ಲಿ ಬಂಗಾಳಿ ಮಾತನಾಡುವ ಎಲ್ಲಾ ಜನರು ಬಾಂಗ್ಲಾ ದೇಶೀಯರು ಎಂದು ಹೇಳಲಾಗಿದ್ದು, ಇದು ಅಸ್ಸಾಂನಲ್ಲಿ ತಲೆತಲಾಂತರಗಳಿಂದ ಶಾಂತಿ, ಸಾಮರಸ್ಯ ಮತ್ತು ಭ್ರಾತೃತ್ವದಿಂದ ವಾಸಿಸುವ ವಿವಿಧ ಶಾಂತಿಪ್ರಿಯ ಸಮುದಾಯಗಳು ಭಾಷೆಯ ಆಧಾರದ ಮೇಲೆ ವಿಭಜನೆಯಾಗಲು ಕಾರಣವಾಗುತ್ತದೆ. ಭಾಷೆಯಂತಹ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಸಂಯಮವನ್ನು ಹೊಂದಿರಬೇಕು. ಆದ್ದರಿಂದ, ಈ ಅಮಾನವೀಯ ಒಕ್ಕಲೆಬ್ಬಿಸುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕು, ಒಕ್ಕಲೆಬ್ಬಿಸಲಾಗಿರುವ ಸಾವಿರಾರು ಅತ್ಯಂತ ಕಡುಬಡ ಜನರನ್ನು ಹಸಿವೆಗೆ ದೂಡಿ ಅವರನ್ನು ಕೊಲ್ಲುವ ಕೆಲಸವನ್ನು ಕೈಬಿಡಬೇಕು, ಆ ಮೂಲಕ ಮಹಾನ್ ಪುರುಷ ಶ್ರೀಮಂತ ಶಂಕರ ದೇವ್ ಅವರ ಬೋಧನೆಗಳು, ಸಂಸ್ಕೃತಿ ಮತ್ತು ಏಕತೆಯ ಕರೆಯನ್ನು ಗೌರವಿಸಬೇಕು ಎಂದು ಬಲವಾಗಿ ಒತ್ತಾಯಿಸಿದರು.
ಅಸ್ಸಾಂನ ಸಾಮಾಜಿಕ ಪರಿಸರವು ಗಂಭೀರವಾದ ಮಾನವೀಯ ಬಿಕ್ಕಟ್ಟಿನಿಂದ ತುಂಬಿರುವ ಈ ಸಮಯದಲ್ಲಿ, ಯಾವುದೇ ಜಾತಿ, ಧರ್ಮ, ಭಾಷೆಗಳಿಗೆ ಸೇರಿದ ಜನರಿರಲಿ, ಅವರೆಲ್ಲರೂ, ಎಲ್ಲಾ ರೀತಿಯ ವಿಭಜನೆಗಳನ್ನು, ಸಂಕುಚಿತ ಮನೋಭಾವಗಳನ್ನು, ಪ್ರತ್ಯೇಕತಾವಾದವನ್ನು, ಛಿದ್ರವಾದ ಆಲೋಚನೆಗಳನ್ನು, ಕೋಮುವಾದವನ್ನು ಮೀರಬೇಕು; ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳ ಆಧಾರದ ಮೇಲೆ ತಮ್ಮ ಐಕ್ಯಮತವನ್ನು ಗಟ್ಟಿ ಪಡಿಸಿಕೊಂಡು ಬೃಹತ್ ಜನಾಂದೋಲನದ ಮೂಲಕ ಒತ್ತಡ ಹೇರಿ ಈ ವಿನಾಶಕಾರಿ ಒಕ್ಕಲೆಬ್ಬಿಸುವಿಕೆಯನ್ನು ತಡೆಯಬೇಕು ಮತ್ತು ಎಲ್ಲಾ ವಿಭಾಗದ ಜನರ ನಡುವಿನ ಒಗ್ಗಟ್ಟನ್ನು ಕಾಪಾಡಲು ಅಸ್ಸಾಂ ಸರ್ಕಾರವನ್ನು ಒತ್ತಾಯಿಸಬೇಕು ಎಂಬುದು ನಮ್ಮ ಹೃದಯಪೂರ್ವಕ ಮನವಿಯಾಗಿದೆ.