Loading..

ಅಮೆರಿಕಾದ ಮನೆಬಾಗಿಲಿಗೇ ಬಂದ ಟ್ರಂಪ್ ಯುದ್ಧ

ಯುದ್ಧ ಭೂಮಿಯಲ್ಲಿ ಶತ್ರು ದೇಶಗಳೊಂದಿಗೆ ಹೋರಾಡಬೇಕಿದ್ದ ಅಮೆರಿಕದ ಸೇನಾಪಡೆಯ ತುಕಡಿಗಳು ಕಳೆದ ಜೂನ್ 10ರಂದು ಲಾಸ್ ಏಂಜೆಲಿಸ್‌ನ ಬೀದಿಗಳಲ್ಲಿ ಬೂಟುಗಾಲಿನ ಸಪ್ಪಳ ಮಾಡಿ ತನ್ನದೇ ದೇಶದ ನಾಗರಿಕರನ್ನು ಗುರಿ ಮಾಡಿದವು.
ಅಮೆರಿಕದ ಇತಿಹಾಸದಲ್ಲಿ ತನ್ನದೇ ನಾಗರಿಕರ ಹಕ್ಕುಗಳನ್ನು ದಮನ ಮಾಡುವ ಕೃತ್ಯ ಹಿಂದೆಂದೂ ನಡೆದಿರಲಿಲ್ಲ. ಅಮೆರಿಕದ ಸಾಮ್ರಾಜ್ಯಶಾಹಿ ಶಕ್ತಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ನಂಬಿಗಸ್ಥ ಬಂಟ ಡೊನಾಲ್ಡ್ ಟ್ರಂಪ್ ತನ್ನ ದೇಶದ ಪ್ರಜೆಗಳು ಹಕ್ಕುಗಳಿಗಾಗಿ ಉಸಿರೆತ್ತದಂತೆ ಮಾಡಲು ಮಿಲಿಟರಿಯ ಗುಮ್ಮವನ್ನು ತೋರಿಸಿದ ಬಗೆ ಇದು. ಈ ಯೋಧರು ಬಂದಿದ್ದು ಸಾರ್ವಜನಿಕರ ರಕ್ಷಣೆಯನ್ನು ಖಾತ್ರಿಪಡಿಸುವುದಕ್ಕಾಗಿ ಅಲ್ಲ. ಬದಲಾಗಿ ದೇಶದ್ರೋಹದ ಚಟುವಟಿಕೆಯನ್ನು ನಿಗ್ರಹಿಸುವ ಹೆಸರಿನಲ್ಲಿ ಟ್ರಂಪ್ ಆಡಳಿತದ ವಿರುದ್ಧ ಸಾರ್ವಜನಿಕರ ಭಿನ್ನ ಧ್ವನಿಯನ್ನು ಹತ್ತಿಕ್ಕಲು.
ಅಂದು ನಡೆದಿದ್ದು ಸಹಜ ಸೇನಾ ಕವಾಯತು ಪ್ರದರ್ಶನವೇನಲ್ಲ. ಬದಲಾಗಿ ನಿರ್ಲಜ್ಜವಾಗಿ ಸಾಮ್ರಾಜ್ಯಶಾಹಿ ಶಕ್ತಿಗಳ ಸೇವೆಗಾಗಿ ಟೊಂಕ ಕಟ್ಟಿ ನಿಂತ ಪ್ರಭುತ್ವವು ತಮ್ಮ ಪ್ರಜಾತಾಂತ್ರಿಕ ಹಕ್ಕುಗಳು ದಮನವಾಗುತ್ತಿರುವುದನ್ನು ಪ್ರತಿಭಟಿಸಲು ನಿಂತ ಪ್ರಜೆಗಳನ್ನು ಬೆದರಿಸಲು ಈ ಮಿಲಿಟರಿ ಶಕ್ತಿಯನ್ನು ಬಳಸಿಕೊಂಡಿತು. ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ವಿಭಾಗದ (ಐಸಿಇ) ಅಧಿಕಾರಿಗಳು ಲ್ಯಾಟಿನ್ ಅಮೆರಿಕಾದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಭೇಟಿ ನೀಡಿ ಅವರನ್ನು ದೇಶದಿಂದ ಹೊರಹೋಗುವಂತೆ ಸೂಚಿಸಿದ ಪರಿಣಾಮ ಜೂನ್ ತಿಂಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಎರಡನೇ ಬಾರಿ ಶ್ವೇತಭವನಕ್ಕೆ ಮರಳಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿದ ಬಳಿಕ ಈ ಕಾರ್ಯಾಚರಣೆ ನಡೆಯಿತು.
ಅಮೆರಿಕಾ ಪ್ರಭುತ್ವದ ಭೂಪಟ ಮರು ರಚಿಸಿದ ಯುದ್ಧ ಟ್ಯಾಂಕ್‌ಗಳು
ಅಮೆರಿಕದ ಇತಿಹಾಸದಲ್ಲಿ ಎಷ್ಟೋ ಆಂತರಿಕ ದಂಗೆಗಳು ನಡೆದಾಗಲೂ ಆ ದೇಶದ ಮಿಲಿಟರಿ ಪಡೆಗಳಾದ ಯುಎಸ್ ಮರೀನ್ಸ್ ಮತ್ತು ನ್ಯಾಶನಲ್ ಗಾರ್ಡ್ಗಳು ದೇಶದ ಗಡಿಯನ್ನು ಬಿಟ್ಟು ದೇಶದ ಜನವಸತಿಯ ನಗರಗಳ ಬೀದಿಗಳಿಗೆ ಬಂದಿರಲಿಲ್ಲ. ಅಕ್ರಮ ವಲಸಿಗರ ಮೇಲೆ ಕ್ರಮ ಕೈಗೊಳ್ಳುವ ನಿರ್ಧಾರ ಹೊರಬಿದ್ದ ಬಳಿಕ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ‘ರಾಷ್ಟ್ರೀಯ ಸಾರ್ವಭೌಮತ್ವವನ್ನು’ ರಕ್ಷಿಸುವ ಮತ್ತು ‘ವಿದೇಶಿಯರ ಕಾನೂನುಬಾಹಿರ ಕೃತ್ಯ’ಗಳನ್ನು ಮಟ್ಟಹಾಕುವ ನೆಪವೊಡ್ಡಿ ಇವುಗಳನ್ನು ಮಿಲಿಟರಿ ಪಡೆ ಬಳಸಿ ಅತ್ಯಂತ ನಿರ್ದಯವಾಗಿ ಹತ್ತಿಕ್ಕಲಾಯಿತು. ಜನರ ಪ್ರಜಾತಾಂತ್ರಿಕ ಅಭಿವ್ಯಕ್ತಿಯನ್ನು ಹೊಸಕಿಹಾಕಲು ಮಿಲಿಟರಿ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಪ್ರಭುತ್ವದ ಇನ್ನೊಂದು ಮುಖದ ನಗ್ನ ಪ್ರದರ್ಶನವೇ ಈ ಘಟನೆ ಆದಂತಾಯಿತು.
ಲಾಸ್ ಏಂಜೆಲಿಸ್‌ನ ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ 4 ಸಾವಿರ ಕ್ಯಾಲಿಫೋರ್ನಿಯಾ ನ್ಯಾಶನಲ್ ಗಾರ್ಡ್ಗಳನ್ನು ಮತ್ತು 700 ನೌಕಾ ಪಡೆಗಳನ್ನು ನಿಯೋಜಿಸಲಾಗಿತ್ತು. ತಾನು ಒಕ್ಕೂಟದ ಆಸ್ತಿಗಳನ್ನು ರಕ್ಷಿಸಲು ನಿಂತಿರುವುದಾಗಿ ಸೇನೆ ಹೇಳಿಕೊಂಡಿತ್ತು. ಆದರೆ, ವಾಸ್ತವವಾಗಿ ಅದರ ಉದ್ದೇಶ, ತನ್ನ ಸೇನಾ ಶಕ್ತಿಯನ್ನು ತೋರಿಸುವುದರ ಜೊತೆಗೆ ನ್ಯಾಯಯುತವಾದ ಹಕ್ಕುಗಳಿಗೆ ಹೋರಾಟ ನಡೆಸುತ್ತಿದ್ದವರ ಧ್ವನಿಗಳನ್ನು ಹತ್ತಿಕ್ಕುವುದೇ ಆಗಿತ್ತು. ಹಲವೆಡೆ ಕರ್ಫ್ಯೂಗಳನ್ನು ವಿಧಿಸಲಾಗಿತ್ತು. ಸಾವಿರಾರು ಜನರನ್ನು ಬಂಧಿಸಲಾಯಿತು. ಲ್ಯಾಟಿನ್ ಅಮೆರಿಕಾ ಸಮುದಾಯಗಳು ವಾಸಿಸುವ ನೆಲೆಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಐಸಿಇ ಗುಪ್ತಚರ ಏಜೆಂಟರೊಂದಿಗೆ ಕಾಣಿಸಿಕೊಂಡಿದ್ದ ಪಡೆಗಳು ಪ್ರತಿರೋಧವನ್ನು ಬಂದೂಕಿನ ನಳಿಕೆಯ ಮೂಲಕ ಹತ್ತಿಕ್ಕಲಾಗುವುದು ಎಂಬ ಒಂದೇ ಸಂದೇಶವನ್ನು ನೀಡುತ್ತಿದ್ದವು.
ಅಮೆರಿಕದ ಟ್ರಂಪ್ ನೇತೃತ್ವದ ಫ್ಯಾಸಿಸ್ಟ್ ಸರ್ಕಾರ ತಾನು ಕ್ರಿಮಿನಲ್‌ಗಳನ್ನು ಮಟ್ಟ ಹಾಕುವುದಾಗಿ ಹೇಳುತ್ತಿದೆ. ಆದರೆ, ಬಹಳ ನೋವಿನ ಸಂಗತಿ ಎಂದರೆ ಬಹುತೇಕವಾಗಿ ಬಡ ಕಾರ್ಮಿಕ ವರ್ಗದವರ ಮೇಲೆಯೇ ದಾಳಿಗಳು ನಡೆದಿವೆ. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಕಡಿಮೆ ವೇತನದಲ್ಲಿ ದುಡಿದು ಸಮಾಜಕ್ಕೆ ಬೇಕಾದ ಸಂಪನ್ಮೂಲವನ್ನು ಸೃಷ್ಟಿ ಮಾಡುತ್ತಿರುವ ಕಾರ್ಮಿಕರನ್ನು ಅವರು ಕೆಲಸ ಮಾಡುತ್ತಿರುವ ಕಾರ್ಖಾನೆಗಳಲ್ಲಿ, ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿಯೇ ಬಂಧಿಸಲಾಗಿದೆ.
ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ
ಹೋರಾಟಗಳನ್ನು ಹತ್ತಿಕ್ಕಲು ಟ್ರಂಪ್ ಆಡಳಿತವು ಮಿಲಿಟರಿ ಶಕ್ತಿಯನ್ನು ಬಳಕೆ ಮಾಡುವುದು ಸಂವಿಧಾನಬಾಹಿರ ಕ್ರಮ ಎಂದು ಅಲ್ಲಿನ ತಜ್ಞರು ಎಚ್ಚರಿಸಿದ್ದಾರೆ. ತಮ್ಮ ಅನುಮತಿಯಿಲ್ಲದೆ ಕ್ಯಾಲಿಫೋರ್ನಿಯಾದ ನ್ಯಾಶನಲ್ ಗಾರ್ಡ್ಗಳನ್ನು ಟ್ರಂಪ್ ಬಳಸಿದ್ದನ್ನು ಅಲ್ಲಿಯ ರಾಜ್ಯಪಾಲರು ವಿರೋಧಿಸಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ನಾಗರಿಕ ಕಾನೂನನ್ನು ಜಾರಿಗೊಳಿಸಲು ಮಿಲಿಟರಿಯನ್ನು ಬಳಸುವಂತಿಲ್ಲ ಎಂದು ಅಮೆರಿಕಾದ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಆದರೂ, ಟ್ರಂಪ್, ಕಾಯ್ದೆಯ ಯಾವುದೋ ಒಂದು ಕಲಂನ ಆಶ್ರಯ ಪಡೆದು ಮಿಲಿಟರಿ ಪಡೆಗಳನ್ನು ಹೋರಾಟದ ಸ್ಥಳದಲ್ಲಿ ನಿಯೋಜಿಸಿರುವುದು ಕೆಟ್ಟ ಪರಂಪರೆಗೆ ನಾಂದಿ ಹಾಡುತ್ತದೆ ಎಂದು ಅಲ್ಲಿನ ನಾಗರಿಕ ಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮುಂಬರುವ ಅಧ್ಯಕ್ಷರೂ ಇದೇ ಮಾದರಿಯನ್ನು ಅನುಸರಿಸುವ ಅಪಾಯವಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶಭಕ್ತಿಯ ಹೆಸರಿನಲ್ಲಿ ಟ್ರಂಪ್, ದೇಶದ ಜನರ ಮೇಲೆಯೇ ಮಿಲಿಟರಿ ದಾಳಿ ನಡೆಸುತ್ತಿದ್ದಾರೆ. ಆ ಮೂಲಕ ದೇಶದ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಹಿತಾಸಕ್ತಿಯನ್ನು ರಕ್ಷಿಸುವುದೇ ತಮ್ಮ ಆದ್ಯ ಕರ್ತವ್ಯ ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಇಲ್ಲಿ ಸ್ಪಷ್ಟಪಡಿಸಬೇಕಾಗಿರುವುದೆಂದರೆ, ಲಾಸ್ಏಂಜೆಲಿಸ್‌ನಲ್ಲಿ ನಡೆದ ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿದ್ದವು. ಸಮುದಾಯದ ಮುಖಂಡರು, ಸಂಬಂಧಪಟ್ಟ ನಾಗರಿಕರು ತಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿದೆ ಎಂದು ಘೋಷಿಸಿದ್ದರು. ಅಷ್ಟಾಗಿಯೂ ಟ್ರಂಪ್ ಅವರು ಮಿಲಿಟರಿಯನ್ನು ಹಿಂದಕ್ಕೆ ಕರೆಸಿಕೊಳ್ಳಲಿಲ್ಲ. ಸದಾ ಸನ್ನದ್ಧ ಸ್ಥಿತಿಯಲ್ಲಿ ಗಸ್ತು ತಿರುಗುತ್ತಿರುವ ಸೇನಾ ಪೋಷಾಕಿನಲ್ಲಿಯ ನೌಕಾ ಪಡೆಯ ಯೋಧರು, ಆಕಾಶದಲ್ಲಿ ಸುತ್ತು ಹೊಡೆಯುತ್ತಿರುವ ಹೆಲಿಕಾಪ್ಟರ್‌ಗಳು, ರಬ್ಬರ್ ಬುಲೆಟ್‌ನೊಂದಿಗಿನ ಪೊಲೀಸರು, ಇವೆಲ್ಲವೂ ಜನರನ್ನು ಬೆದರಿಸುವ ತಂತ್ರಗಳಲ್ಲದೆ ಇನ್ನೇನು!
ಕುಸಿದ ಮಿಲಿಟರಿಯ ನೈತಿಕತೆ!
ತಮ್ಮದೇ ನಾಗರಿಕರ ವಿರುದ್ಧ ನಿಯೋಜನೆಗೊಂಡಿರುವುದು ಸೈನಿಕರ ನೈತಿಕತೆಯನ್ನು ಕುಗ್ಗಿಸಿದೆ. ಅವರು, ಈ ಬಗ್ಗೆ ಖಾಸಗಿಯಾಗಿ ತಮ್ಮ ಬೇಸರ, ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಕಾನೂನಾತ್ಮಕವಾಗಿ, ನೈತಿಕವಾಗಿ ಅವರದ್ದು ಒಂದು ಅಯೋಮಯವಾದ ಪರಿಸ್ಥಿತಿ. ತಾವು ದೇಶವನ್ನು ಕಾಯುತ್ತಿದ್ದೇವೆಯೋ ಅಥವಾ ಕೇವಲ ಅಧ್ಯಕ್ಷರ ಆದೇಶ ಪಾಲಿಸುತ್ತಿದ್ದೇವೆಯೋ? ತಾವು ದೇಶದ ಸಂಪತ್ತು ರಕ್ಷಿಸುತ್ತಿದ್ದೇವೆಯೋ ಅಥವಾ ರಾಜಕೀಯ ವಿರೋಧಿಗಳನ್ನು ನಿಗ್ರಹಿಸುತ್ತಿದ್ದೇವೆಯೋ ಎಂಬ ಗೊಂದಲಗಳು ಅವರನ್ನು ಕಾಡುತ್ತಿವೆ.
ಪ್ರಜಾತಂತ್ರದ ಕುಸಿತ!
ಆಕ್ರೋಶದಿಂದ ರೇಡಿಯೊ ಭಾಷಣ ಮಾಡಿದ ಕ್ಯಾಲಿಫೋರ್ನಿಯಾದ ರಾಜ್ಯಪಾಲರಾದ ನ್ಯೂಸಮ್, ‘ಪ್ರಜಾಪ್ರಭುತ್ವವು ದಾಳಿಗೊಳಗಾಗಿದೆ’ ಎಂದಿದ್ದಾರೆ. ದೇಶದಾದ್ಯಂತ ‘ರಾಜನಿಲ್ಲದ ದಿನ’ (ನೋ ಕಿಂಗ್ಸ್ ಡೇ) ಎಂಬ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆಗಳು ಮೊಳಗಿದವು. ಆ ಮೂಲಕ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಮ್ಮ ಹಿರಿಯರು ಹೀಗೆ ರಾಜಸತ್ತೆಯ ವಿರುದ್ಧ ಹೋರಾಟ ನಡೆಸಿದ್ದರು ಎಂಬುದನ್ನು ನೆನಪಿಸಿದರು. ಅದಕ್ಕವರು ಆಯ್ದುಕೊಂಡಿದ್ದು ಟ್ರಂಪ್‌ನ ಜನ್ಮದಿನವನ್ನು!
ಇಲ್ಲಿ ಈಗ ನಡೆಯುತ್ತಿರುವುದು ಪ್ರಜಾತಂತ್ರದ ಕುಸಿತದ ವಿರುದ್ಧದ ಪ್ರತಿಭಟನೆ. ಪ್ರತಿರೋಧವನ್ನು ಹತ್ತಿಕ್ಕಲು ಮಿಲಿಟರಿ ಬಳಕೆಯಾದಾಗ, ನ್ಯಾಯಾಧೀಶರ ತೀರ್ಪುಗಳನ್ನು ನಿರ್ಲಕ್ಷಿಸಿದಾಗ, ರಾಜ್ಯಪಾಲರಿಗೆ ಬಂಧನದ ಬೆದರಿಕೆ ಒಡ್ಡಿದಾಗ, ವಲಸೆಗಾರರನ್ನು ಬೇಟೆಯಾಡಿ ಅವರ ಬೆಂಬಲಿಗರನ್ನು ಬಂಧಿಸಿದಾಗ, ಪ್ರಜಾತಂತ್ರ ಉಳಿಯುವುದಾದರೂ ಹೇಗೆ?
ಒಂದು ಕಾಲದಲ್ಲಿ, ಜೆಫರ್ಸನ್‌ರಿಂದ ಹಿಡಿದು ಲಿಂಕನ್‌ವರೆಗೂ ಪ್ರಜಾತಾಂತ್ರಿಕ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದ್ದ, ಅವುಗಳ ಪ್ರತೀಕವಾಗಿದ್ದ ದೇಶ ಇಂದು ಅವನತಿಯತ್ತ ಸಾಗುತ್ತಿದೆ. ಪ್ರತಿ ನಿತ್ಯದ ಕರ್ಫ್ಯೂ, ಜನ ಸಾಮಾನ್ಯರ ಮೇಲೆ ಮಿಲಿಟರಿ ದಾಳಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಮೇಲೆ ಮೊಕ್ಕದ್ದಮೆ ಹೂಡುವಂತಹ ಪರಿಸ್ಥಿತಿ, ಬಂಧನಗಳ ಮೇಲೆ ಬಂಧನ, ಇಂತಹ ಪರಿಸ್ಥಿತಿಯಲ್ಲಿ ಪ್ರಜಾತಂತ್ರಕ್ಕೆ ನೆಲೆಯಾದರೂ ಎಲ್ಲಿದೆ?
ವಿಶ್ವದ ನೈತಿಕತೆಯ ರಕ್ಷಕ ತಾನೆಂದು ಪ್ರತಿಬಿಂಬಿಸಿಕೊಂಡಿದ್ದ ಅಮೆರಿಕಾ, ವಿಶ್ವದಾದ್ಯಂತ ಬಂಡವಾಳಶಾಹಿ ದೇಶಗಳ ಆಳ್ವಿಕರು ತಮ್ಮ ದೇಶಗಳಲ್ಲಿನ ಪ್ರಜಾತಾಂತ್ರಿಕ ಹೋರಾಟಗಳನ್ನು ದಮನ ಮಾಡುತ್ತಿರುವಾಗ ಕುರುಡುಗಣ್ಣಾಗಿದೆ. ಅದೇ ದಮನಕಾರಿ ಯಂತ್ರ ಇದೀಗ ಅಮೆರಿಕಾದಲ್ಲಿಯೇ ದಾಂಗುಡಿ ಇಡುತ್ತಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಪ್ರತಿರೋಧ ತೋರಿಸಿದ ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಬೆದರಿಸಲಾಗುತ್ತಿದೆ, ಗಾಜಾ಼ ವಿರುದ್ಧದ ಪ್ರತಿರೋಧದ ಧ್ವನಿಗಳನ್ನು ಅಡಗಿಸಲಾಗುತ್ತಿದೆ.
ಮರಣಾಸನ್ನ ಬಂಡವಾಳಶಾಹಿ ವ್ಯವಸ್ಥೆಯು ಹೆಚ್ಚು ಹೆಚ್ಚು ಫ್ಯಾಸಿಸ್ಟ್ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುತ್ತಾ, ಪ್ರಜಾತಾಂತ್ರಿಕ ಮೌಲ್ಯಗಳು, ರೂಢಿಗಳು, ಆಚರಣೆಗಳು, ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇಂದಿನ ಅಮೆರಿಕಾ, ಎರ್ಡೋಗನ್ ನೇತೃತ್ವದ ಟರ್ಕಿ, ನರೇಂದ್ರ ಮೋದಿ ನೇತೃತ್ವದ ಭಾರತ, ಇಮ್ಯಾನುವೆಲ್ ಮ್ಯಾಕ್ರಾನ್ ನೇತೃತ್ವದ ಫ್ರಾನ್ಸ್, ಬೆಂಜಮಿನ್ ನೇತನ್ಯಾಹು ಆಳ್ವಿಕೆಯ ಇಸ್ರೇಲ್ ತರಹವೇ ಪ್ರಜಾತಂತ್ರದ ಹೊರಕವಚವನ್ನು ಮಾತ್ರ ಉಳಿಸಿಕೊಂಡಿರುವ ಫ್ಯಾಸಿಸ್ಟ್ ಆಳ್ವಿಕೆಯಾಗಿದೆ. ಒಂದೊಮ್ಮೆ ಪ್ರಜಾಸತ್ತೆಯ ಮುಕುಟವಾಗಿದ್ದ ಅಮೆರಿಕಾದಲ್ಲಿನ ಈ ಪರಿಸ್ಥಿತಿಯ ಅಪಾಯವೇನೆಂದರೆ, ಪ್ರಜಾತಂತ್ರ ಅಷ್ಟು ಬಲವಾಗಿ ನೆಲೆಯೂರದೆ ಇದ್ದ ದೇಶಗಳೂ ಇದನ್ನೇ ಮಾದರಿಯಾಗಿ ಅನುಸರಿಸಿದರೆ ಎಂಬ ಆತಂಕ!
ಕೊನೆಯ ಪ್ರಶ್ನೆ
ಇತಿಹಾಸ ಈ ಕ್ಷಣವನ್ನು ಹೇಗೆ ದಾಖಲಿಸಬಹುದು? ಪ್ರಭುತ್ವಕ್ಕೆ ಮಣಿಯದೇ ನ್ಯಾಯಾಲಯಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳುತ್ತವೆಯೇ? ಮಿಲಿಟರಿ ತನ್ನ ಸಂವಿಧಾನಾತ್ಮಕ ಗಡಿಯನ್ನು ಎತ್ತಿ ಹಿಡಿಯುತ್ತದೆಯೇ? ಸಾಮ್ರಾಜ್ಯಶಾಹಿ ದೇಶವೊಂದರ ಬಗ್ಗೆ ಇಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದೇ? ಅಂತಿಮವಾಗಿ, ಪ್ರಜಾತಾಂತ್ರಿಕ ಹಕ್ಕುಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಇರುವುದು ಅಮೆರಿಕದ ಜನತೆಯ ಮೇಲೆೆ. ಅದನ್ನು ಪ್ರಬಲ ಪ್ರಜಾತಾಂತ್ರಿಕ ಹೋರಾಟಗಳ ಮೂಲಕವೇ ಸಾಧಿಸಬೇಕಾಗುತ್ತದೆ.