ರಾಜ್ಯ ಮಟ್ಟದ ಮಹಿಳಾ ಶಿಬಿರ
ಚರ್ಚೆ: ಮಹಿಳಾ ಶೋಷಣೆಯ ಮೂಲ ಮತ್ತು ಪರಿಹಾರ
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಐಎಂಎಸ್‌ಎಸ್‌ನ ಅಖಿಲ ಭಾರತ ಉಪಾಧ್ಯಕ್ಷರಲ್ಲಿ ಒಬ್ಬರಾದ ಕಾ. ಅಪರ್ಣಾ ಬಿ. ಆರ್., “ಮಹಿಳಾ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳಿಂದ ಹೊರತಾಗಿಲ್ಲವಾದ್ದರಿಂದ ಮಹಿಳಾ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಹಾಗೆಯೇ ಮಹಿಳೆಯರ ಸಮಸ್ಯೆಗಳ ಮೂಲ ಅರಿಯದೆ, ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಹುಡುಕಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ಚರ್ಚೆಗೆ ತೆಗೆದುಕೊಂಡಿರುವ ವಿಷಯಗಳೆಲ್ಲವೂ ಬಹಳ ಪ್ರಮುಖವಾದವುಗಳು” ಎಂದರು. ಉದ್ಘಾಟನೆಯ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಕಾ. ಸೀಮಾ ಜಿ. ಎಸ್. ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಕಾ. ಶೋಭಾ ಎಸ್. ಮಾತನಾಡಿದರು, ಎಐಎಂಎಸ್‌ಎಸ್‌ನ ರಾಜ್ಯ ಅಧ್ಯಕ್ಷರಾದ ಕಾ. ಮಂಜುಳಾ ಎಂ.ಎನ್. ಉಪಾಧ್ಯಕ್ಷರಾದ ಕಾ. ಹರಿಣಿ ಆಚಾರ್ಯ, ಕಾ.ಶೋಭಾ ಎಸ್., ವಿವಿಧ ಗೋಷ್ಠಿಗಳನ್ನು ನಡೆಸಿಕೊಟ್ಟರು; ಇತರ ರಾಜ್ಯ ನಾಯಕರು ವಿಷಯ ಮಂಡನೆ ಮಾಡಿದರು.
ಯುರೋಪಿನಲ್ಲಿ ಬಂಡವಾಳಶಾಹಿ ಪ್ರಜಾತಾಂತ್ರಿಕ ಕ್ರಾಂತಿ ತಂದ ತಲ್ಲಣಗಳ ಚಿತ್ರಣವೇ ‘ಟೆಸ್’ - ಡಾ: ಸುಧಾ ಕಾಮತ್
ವಿಶ್ವದ ಒಬ್ಬ ಮಹಾನ್ ಕಾದಂಬರಿಗಾರರಾದ ಥಾಮಸ್ ಹಾರ್ಡಿಯವರ “ಟೆಸ್ ಆಫ್ ದಿ ಡರ್ಬರ್‌ವಿಲ್” ಎಂಬ ಕಾದಂಬರಿ ಕುರಿತ ಚರ್ಚೆಯನ್ನು ಎಐಎಂಎಸ್‌ಎಸ್‌ನ ಅಖಿಲ ಭಾರತ ಉಪಾಧ್ಯಕ್ಷರಲ್ಲಿ ಒಬ್ಬರಾದ ಡಾ. ಸುಧಾ ಕಾಮತ್ ನಡೆಸಿಕೊಟ್ಟರು. “ಕಥೆ, ಕಾದಂಬರಿ, ಸಿನಿಮಾ, ಸಾಹಿತ್ಯಗಳಲ್ಲಿನ ರಸೋತ್ಪತ್ತಿ ಮನುಷ್ಯನ ಬುದ್ಧಿಮತ್ತೆಯನ್ನು ದಾಟಿ ನೇರವಾಗಿ ಹೃದಯದ ಭಾವನೆಗಳನ್ನು ತಟ್ಟುತ್ತದೆೆ. ಪರಿಣಾಮವಾಗಿ ಮನುಷ್ಯನಲ್ಲಿ ಹುಟ್ಟುವ ಪ್ರಶ್ನೆಗಳು, ಆಲೋಚನೆಗಳು, ತಲ್ಲಣಗಳು ಸಮಾಜದ ಬದಲಾವಣೆಗೆ ಇಂಬು ನೀಡುತ್ತವೆ. ಯುರೋಪಿನ 19 ನೇ ಶತಮಾನದ ಬಂಡವಾಳಶಾಹಿ ಪ್ರಜಾತಾಂತ್ರಿಕ ಕ್ರಾಂತಿಯು ಸ್ವಾತಂತ್ರ್ಯ ಸಮಾನತೆ, ಸೋದರತೆ, ಧರ್ಮನಿರಪೇಕ್ಷತೆ ಹಾಗೂ ಸ್ತ್ರೀ ಸ್ವಾತಂತ್ರ್ಯ ಗಳ ಪರಿಕಲ್ಪನೆಗಳಿಗೆ ಜನ್ಮ ನೀಡಿತು. ಈ ವಿಚಾರಗಳನ್ನು ಹೊತ್ತ ನವೋದಯ ಸಾಹಿತ್ಯವು ಸಾಂಸ್ಕೃತಿಕ ಬಿರುಗಾಳಿಯನ್ನೇ ಬೀಸಿ ಮಹಾನ್ ಸಾಹಿತಿಗಳಿಗೆ ಜನ್ಮ ನೀಡಿತು. ಶೇಕ್ ಸ್ಪಿಯರ್, ಚಾರ್ಲ್ಸ್ ಡಿಕನ್ಸ್, ಹೆನ್ರಿಕ್ ಇಬ್ಸೆನ್, ಥಾಮಸ್ ಹಾರ್ಡಿ ಮುಂತಾದ ಮಹಾನ್ ಸಾಹಿತಿಗಳು ಮುಂಬರುವ ಹೊಸ ಸಮಾಜವನ್ನು ಸ್ವೀಕರಿಸುವಲ್ಲಿ ಜನರ ಮನಸ್ಸನ್ನು ಹದಗೊಳಿಸಿದರು. ‘ಟೆಸ್ ಆಫ್ ದಿ ಡರ್ಬರ್‌ವಿಲ್’ ಕಾದಂಬರಿಯಲ್ಲಿ ಹಾರ್ಡಿಯವರು ತಮ್ಮ ಪಾತ್ರಗಳ ಮೂಲಕ ಊಳಿಗಮಾನ್ಯ ಮೌಲ್ಯಗಳು, ಸ್ತ್ರೀತ್ವ, ನಾರೀತ್ವಗಳ ಪರಿಕಲ್ಪನೆಗಳು, ಪುರುಷ ಪ್ರಾಧಾನ್ಯತೆ, ಈ ಕುರಿತು ಹಲವಾರು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತಾ ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ.” ಎಂದು ವಿಶ್ಲೇಷಿಸಿದರು.
ಸಮಾಜವಾದಿ ಸಮಾಜದಲ್ಲಿ ಮಾತ್ರ ಮಹಿಳಾ ವಿಮುಕ್ತಿ ಸಾಧ್ಯ - ಕಾ. ಕೆ. ಉಮಾ
ಎಸ್‌ಯುಸಿಐ(ಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಕೆ.ಉಮಾ, ಫ್ರೆಡರಿಕ್ ಎಂಗೆಲ್ಸ್‌ರವರ ಪ್ರಸಿದ್ಧ ಕೃತಿ, ‘ಕುಟುಂಬ, ಖಾಸಗಿ ಆಸ್ತಿ ಮತ್ತು ರಾಜ್ಯದ ಉಗಮ’ ದಲ್ಲಿನ ಮುಖ್ಯಾಂಶಗಳನ್ನು ಸಭೆಯ ಮುಂದಿಟ್ಟರು. ಮಾನವ ಸಮಾಜದಲ್ಲಿ ಕುಟುಂಬ ವ್ಯವಸ್ಥೆ, ಖಾಸಗಿ ಆಸ್ತಿ ಮತ್ತು ರಾಜ್ಯ ಹೇಗೆ ಉತ್ಪಾದನೆಗೆ ಸಂಬಂಧಿಸಿದಂತೆ ಹುಟ್ಟಿಕೊಂಡವು ಎಂಬುದನ್ನು ಅವರು ವಿವರಿಸಿದರು.
ಸಾಮಾಜಿಕ ಉತ್ಪಾದನೆಗಾಗಿ ಮಾನವ ಸಮಾಜವನ್ನು ಕಟ್ಟಿಕೊಳ್ಳುತ್ತಾನೆ; ಮೊದಲ, ವರ್ಗರಹಿತ ಬುಡಕಟ್ಟು ಸಮಾಜ ಮಾತೃ ಪ್ರಧಾನವಾಗಿದ್ದು, ಕಿರಾತಾವಸ್ಥೆ, ಅನಾಗರಿಕಾವಸ್ಥೆ ದಾಟಿ ಸ್ಥಿರಾಸ್ತಿ ಬಂದ ಮೇಲೆ ನಾಗರಿಕಾವಸ್ಥೆಗೆ ಕಾಲಿಟ್ಟಿತು; ಅಲ್ಲಿಂದ, ಕಾರಣಾಂತರಗಳಿಂದ ಸಮುದಾಯದ ಆಸ್ತಿ ಖಾಸಗಿ ಆಸ್ತಿಯಾಗಿ ಬದಲಾಗುತ್ತಾ ವರ್ಗವಿಭಜನೆಗೆ ಎಡೆ ಮಾಡಿಕೊಟ್ಟಿತು. ಅಲ್ಲಿಂದ ಮಾತೃಪ್ರಧಾನ ಸಮಾಜ, ಪುರುಷ ಪ್ರಧಾನವಾಗಿ ಬದಲಾಗಿ, ಹೆಣ್ಣುಮಕ್ಕಳು ಸಾಮಾಜಿಕ ಉತ್ಪಾದನೆಯಿಂದ ಕೇವಲ ಗೃಹಕೃತ್ಯಗಳಿಗೆ ತಳ್ಳಲ್ಪಡುತ್ತಾ ದಮನಕ್ಕೆ ಒಳಗಾದರು ಎಂಬುದನ್ನು ಕಾ. ಉಮಾ ಅವರು ವಿಷದವಾಗಿ ಬಿಡಿಸಿಟ್ಟರು. ಮುಂದೆ ಸಮಾಜ ಬದಲಾಗುತ್ತಾ ಗುಲಾಮಗಿರಿ, ಊಳಿಗಮಾನ್ಯ ವ್ಯವಸ್ಥೆಗಳನ್ನು ದಾಟಿ ಈಗ ನಾವು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇದ್ದೇವೆ; ಇದೊಂದು ವರ್ಗವಿಭಜಿತ ಶೋಷಕ ಸಮಾಜವಾಗಿದ್ದು, ಮಹಿಳೆಯರ ನೈಜ ವಿಮುಕ್ತಿ, ಬಂಡವಾಳಶಾಹಿ ವಿರೋಧಿ-ಸಮಾಜವಾದಿ ಕ್ರಾಂತಿಯ ಮೂಲಕ ಉದಯವಾಗುವ ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ ಎಂದವರು ವಿಶ್ಲೇಷಿಸಿದರು.
ಸ್ತ್ರೀವಾದವು ಆಧುನಿಕೋತ್ತರವಾದದ ಒಂದು ಶಾಖೆ; ನೈಜ ಮಹಿಳಾ ವಿಮುಕ್ತಿಗೆ ಮಾರ್ಕ್ಸ್ ವಾದವೇ ಉತ್ತರ
- ಕಾಮ್ರೇಡ್ ಕೆ. ರಾಧಾಕೃಷ್ಣ
ಎಸ್‌ಯುಸಿಐ(ಸಿ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ ಕಾ|| ಕೆ. ರಾಧಾಕೃಷ್ಣರವರು ಸ್ತ್ರೀವಾದ ಮತ್ತು ಮಹಿಳಾ ಚಳುವಳಿಯ ಕುರಿತು ಸುದೀರ್ಘವಾಗಿ ಮಾತನಾಡುತ್ತಾ ಹಲವಾರು ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟರು. “ಮಹಿಳಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯಲ್ಲಿ ಹತ್ತು ಹಲವಾರು ವ್ಯಾಖ್ಯಾನಗಳು ಸಮಾಜದಲ್ಲಿ ಬಂದಿವೆ. ಸ್ತ್ರೀವಾದ ಇಂದು ಬಹು ಚರ್ಚಿತ ವಿಷಯವಾಗಿದೆ. ಸ್ತ್ರೀವಾದದಲ್ಲಿ ಮೂಡಿಬಂದ ಹಲವಾರು ಅಲೆಗಳು ಮಹಿಳಾ ಶೋಷಣೆಯ ಮೂಲಭೂತ ವಿಷಯವನ್ನು ಕೈಬಿಟ್ಟು, ಅದನ್ನು ಕೇವಲ ಮಹಿಳೆಯರ ಪ್ರತ್ಯೇಕ ಹೋರಾಟವನ್ನಾಗಿಸಿಕೊಂಡು ಸುಧಾರಣಾವಾದಕ್ಕೆ ಮೊರೆ ಹೋಗುತ್ತವೆ ಅಥವಾ ಪುರುಷ ವಿರೋಧಿ ನಿಲುವನ್ನು ತಾಳುತ್ತವೆ. ಹಾಗಾಗಿ, ಇದರ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡು ಸರಿಯಾದ ದಿಕ್ಕಿನಲ್ಲಿ ಮಹಿಳಾ ಚಳುವಳಿಯನ್ನು ತೆಗೆದುಕೊಂಡು ಹೋಗಬೇಕಿದೆ. “ಮಹಾನ್ ತತ್ವಜ್ಞಾನಿ ಮಾರ್ಕ್ಸ್ ರವರು ಕಂಡುಹಿಡಿದ ದ್ವಂದ್ವಾತ್ಮಕ ವಸ್ತುವಾದ, ಇಡೀ ವಸ್ತು ಪ್ರಪಂಚ ಮತ್ತು ಸಮಾಜದಲ್ಲಿನ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತದೆ. ಜೊತೆಗೆ, ಅದು ಮಾನವ ಸಮಾಜವು ದಾಟಿ ಬಂದ ವಿಭಿನ್ನ ಮಜಲುಗಳನ್ನು ಅನಾವರಣಗೊಳಿಸುತ್ತಾ ಐತಿಹಾಸಿಕ ವಸ್ತುವಾದಕ್ಕೆ ಜನ್ಮ ನೀಡುತ್ತದೆ. ಹಾಗಾಗಿ, ಇಂದು ಮಾರ್ಕ್ಸ್ ವಾದವೇ ಅತೀ ಮುಂದುವರಿದ ಆಧುನಿಕ ವೈಜ್ಞಾನಿಕ ತತ್ವಶಾಸ್ತ್ರವಾಗಿ ಮಾನವತಾವಾದದ ನ್ಯೂನತೆಗಳನ್ನು ಮೀರಿದ ಹೊಸ ಸಿದ್ಧಾಂತವಾಗಿ ಸಾಬೀತಾಗಿದೆ. ಮಾರ್ಕ್ಸ್ ವಾದವನ್ನು ಅನ್ವಯಿಸಿ ಜಗತ್ತಿನ ಮೂರನೇ ಒಂದು ಭಾಗ ಸಮಾಜವಾದಿಯಾಗಿದ್ದು ಇಂದು ಇತಿಹಾಸ. ಆದರೆ, ನಂತರದ ದಶಕಗಳಲ್ಲಿ ಈ ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಚಳುವಳಿ ದಿಕ್ಕು ತಪ್ಪಿ ಪರಿಷ್ಕರಣವಾದಕ್ಕೆ ಬಲಿಯಾಯಿತು; ಅಲ್ಲಿ ಸಮಾಜವಾದ ಬುಡಮೇಲಾಗಿ ಬಂಡವಾಳಶಾಹಿ ವ್ಯವಸ್ಥೆ ಪುನರ್ ಸ್ಥಾಪನೆಯಾಯಿತು. ಇದರಿಂದ ಹತಾಶೆಗೊಂಡ ಕೆಲ ಮಾರ್ಕ್ಸ್ ವಾದಿಗಳು, ಈ ಪ್ರಘಟನೆಯ ಹಿಂದಿನ ಕಾರಣವನ್ನು ಅರಿಯಲಾಗದೆ ವಿಭಿನ್ನ ಚಿಂತನೆಗಳನ್ನು ಹರಿಬಿಟ್ಟರು; ಜೊತೆಗೆ, ಮಾರ್ಕ್ಸ್ ವಾದ ಸೋತುಹೋಗಿದೆ ಎಂದು ಬೊಬ್ಬೆ ಹೊಡೆದ ಬಂಡವಾಳಶಾಹಿಗಳು ಕೂಡಾ ಕೆಲವೊಂದು ಅವೈಜ್ಞಾನಿಕ ವಾದಗಳನ್ನು ಮುಂದಿಡುತ್ತಾರೆ. ಇವುಗಳಲ್ಲಿ ಮುಖ್ಯವಾದುದೆಂದರೆ, ಆಧುನಿಕೋತ್ತರ (ಪೋಸ್ಟ್ ಮಾಡರ್ನ್), ವಸಾಹತೋತ್ತರ ಮುಂತಾದ ಹಲವಾರು ‘ವಾದ’ಗಳು. ಸ್ತ್ರೀವಾದವು ಆಧುನಿಕೋತ್ತರದ್ದೇ ಒಂದು ಶಾಖೆಯಾಗಿದೆ. ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಮೂಲ, ಶೋಷಕ ಬಂಡವಾಳಶಾಹಿ ವ್ಯವಸ್ಥೆಯಾಗಿದ್ದು, ನೈಜ ಮಹಿಳಾ ವಿಮುಕ್ತಿಗೆ ಮಾರ್ಕ್ಸ್ ವಾದವೇ ಉತ್ತರ. ಎಐಎಂಎಸ್‌ಎಸ್ ಕಾರ್ಯಕರ್ತರು ಇದನ್ನು ಅರಿತು ಮಹಿಳಾ ಚಳುವಳಿಯನ್ನು ಈ ಸಿದ್ಧಾಂತದ ಮೇಲೆ ಕಟ್ಟಬೇಕಿದೆ. “ಪುರುಷರನ್ನು ದ್ವೇಷಿಸುವುದು ಮಹಿಳಾ ಹೋರಾಟವಲ್ಲ. ಬದಲಿಗೆ, ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ಕಾಣುವ ಹಳೆಯ ಊಳಿಗಮಾನ್ಯ ವಿಚಾರಗಳನ್ನು ಕಿತ್ತೊಗೆಯಬೇಕಾಗಿದೆ. ಎಸ್‌ಯುಸಿಐ(ಸಿ) ಪಕ್ಷದ ಸಂಸ್ಥಾಪಕರು ಮತ್ತು ಈ ಯುಗದ ಮಹಾನ್ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರು ತಿಳಿಸಿಕೊಟ್ಟಂತೆ, ಮಹಿಳೆಯರಿಗೆ ಸ್ವಾತಂತ್ರ್ಯ ವನ್ನು ಯಾರೂ ಕೂಡ ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ಪುರುಷರ ಔದಾರ್ಯದಿಂದ, ಕನಿಕರದಿಂದ ದೊರೆಯುವ ಸ್ವಾತಂತ್ರ್ಯದಲ್ಲಿ ಗೌರವವಿರುವುದಿಲ್ಲ. ನೈಜ ಸ್ವಾತಂತ್ರ್ಯವನ್ನು ಮಹಿಳೆಯರೇ ಹೋರಾಡಿ ಪಡೆದುಕೊಳ್ಳಬೇಕು. ಇದಕ್ಕೆ ಸಂಘಟಿತ ಹೋರಾಟ ಅವಶ್ಯಕ. ಇಂದು ಅಸ್ತಿತ್ವದಲ್ಲಿರುವ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಮಹಿಳೆಯ ದಮನವನ್ನು, ಶೋಷಣೆಯನ್ನು ತೀವ್ರಗೊಳಿಸಿದೆ. ಹಾಗಾಗಿ, ಮಹಿಳೆಯ ನೈಜ ವಿಮುಕ್ತಿ ಈ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯನ್ನು ಬದಲಿಸುವ ಸಮಾಜವಾದಿ ಕ್ರಾಂತಿಯೊಂದಿಗೆ ಬೆಸೆದುಕೊಂಡಿದೆ. ಮಹಿಳಾ ಸಮುದಾಯ ಪುರುಷಪ್ರಧಾನ ಮೌಲ್ಯಗಳ ವಿರುದ್ಧ ಹೋರಾಡುತ್ತಲೇ ಶೋಷಿತ ಪುರುಷರೊಂದಿಗೆ ಕೈಜೋಡಿಸಿ ಕಾರ್ಮಿಕ ವರ್ಗದ ಹೋರಾಟದ ಭಾಗವಾದಾಗ ಮಾತ್ರ ಇದು ಸಾಧ್ಯವಾಗುತ್ತದೆ.” ಎಂದು ಕಾ. ಕೆ.ರಾಧಾಕೃಷ್ಣ ತಿಳಿಸಿಕೊಟ್ಟರು. ನಂತರ, ಕಾ. ಕೆ. ಉಮಾರವರು ಎಐಎಂಎಸ್‌ಎಸ್ ಅನ್ನು ರಾಜ್ಯಾದ್ಯಂತ ವಿಸ್ತರಿಸುವ, ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು. ಶಿಬಿರಾರ್ಥಿಗಳು, ವಿಚಾರ ಮಂಥನದೊಂದಿಗೆ, ಸಹಜೀವನ, ಸಂವಾದ, ಪ್ರಗತಿಪರ ಸಿನಿಮಾ ವೀಕ್ಷಣೆ, ಆಟೋಟಗಳೊಂದಿಗೆ 3 ದಿನಗಳನ್ನು ಕಳೆದು ಸಂಘಟನೆಯನ್ನು ಇನ್ನಷ್ಟು ಬಲ ಪಡಿಸುವ ಸಂಕಲ್ಪತೊಟ್ಟು ತಮ್ಮ ಜಿಲ್ಲೆಗಳಿಗೆ ಮರಳಿದ್ದಾರೆ.
