ರಾಜ್ಯದ ಸುಮಾರು 18 ಲಕ್ಷ ಮಂದಿ ಪಿಂಚಣಿದಾರರು ಕಳೆದ ಮಾರ್ಚ್ - ಏಪ್ರಿಲ್ ತಿಂಗಳಿನಿಂದಲೇ ಪಿಂಚಣಿ ಬಾರದೆ ಕಂಗಾಲಾಗಿದ್ದಾರೆ. ಪಿಂಚಣಿ ಪಡೆಯುತ್ತಿದ್ದ ವೃದ್ಧರು, ವಿಧವೆಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಅವಿವಾಹಿತ ಮಹಿಳೆಯರು ಮೊದಲಾದ ದುರ್ಬಲ ವರ್ಗಗಳ ಜನರ ದಾಖಲಾತಿ ಮರುಪರಿಶೀಲನೆಯ ಪ್ರಕ್ರಿಯೆಯಲ್ಲಿ ರಾಜ್ಯದ 83 ಲಕ್ಷ ಪಿಂಚಣಿದಾರರಲ್ಲಿ 23 ಲಕ್ಷ ಮಂದಿಯನ್ನು ಸಂಶಯಾಸ್ಪದ ಎಂದು ಸರ್ಕಾರ ಗುರುತಿಸಿ, ಅವರಿಗೆ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಲಾಗಿತ್ತು.
ಈ ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಿತ್ತು. ಎಐಕೆಕೆಎಂಎಸ್ ರೈತ ಸಂಘಟನೆ ಮತ್ತು ಎಐಡಿವೈಓ ಯುವಜನ ಸಂಘಟನೆ, ಎಐಎಂಎಸ್ಎಸ್ ಮಹಿಳಾ ಸಂಘಟನೆಗಳು ಕೂಡ ವಿವಿಧ ಕಡೆಗಳಲ್ಲಿ ಹೋರಾಟ ಮಾಡಿದ್ದವು. 07.08.2026ರಂದು ಪಕ್ಷದ ರಾಜ್ಯ ಸಮಿತಿಯ ನಿಯೋಗದಿಂದ ವಿಧಾನ ಸೌಧದಲ್ಲಿ ಕಂದಾಯ ಸಚಿವಾಲಯದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಕಾರ್ಯದರ್ಶಿಗಳಿಗೆ ಕೂಡ ಸಮಸ್ಯೆಯನ್ನು ವಿವರಿಸಿ ಮನವಿ ಸಲ್ಲಿಸಲಾಗಿದೆ.
ದಿನಾಂಕ 19.08.2026ರಂದು ಮೈಸೂರಿನಲ್ಲಿ ಬೃಹತ್ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಎಲ್ಲ ಹೋರಾಟಗಳ ಫಲವಾಗಿ ಇದೀಗ ಸರ್ಕಾರ ಬೇಡಿಕೆಯನ್ನು ಈಡೇರಿಸಿದೆ. ಜನರ ಸಂಘಟಿತ ಹೋರಾಟಕ್ಕೆ ಸಂದ ಜಯಕ್ಕಾಗಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಅಭಿನಂದನೆ ಸಲ್ಲಿಸುತ್ತದೆ.


ಸರ್ಕಾರಕ್ಕೆ ಪಕ್ಷದ ವತಿಯಿಂದ ಸಲ್ಲಿಸಿದ ಮನವಿ ಪತ್ರದ ಪೂರ್ಣ ಪಾಠ ಇಲ್ಲಿದೆ:
ಮನವಿ ಪತ್ರ
ಇವರಿಗೆ,
ಮಾನ್ಯ ಕಂದಾಯ ಸಚಿವರು,
ಕರ್ನಾಟಕ ಸರ್ಕಾರ
ವಿಷಯ: ಪಿಂಚಣಿ ಸ್ಥಗಿತಗೊಂಡಿರುವ ಸಮಸ್ಯೆ ಪರಿಹಾರಕ್ಕೆ ಕೋರಿ
ಮಾನ್ಯರೇ,
ದುರ್ಬಲ ಮತ್ತು ಅಸಹಾಯಕ ವರ್ಗಗಳಾದ ವೃದ್ಧರು, ವಿಧವೆಯರು, ವಿಕಲಚೇತನರು, ಅವಿವಾಹಿತ ಮಹಿಳೆಯರು, ತೃತೀಯ ಲಿಂಗಿಗಳಿಗೆ ಮತ್ತಿತರರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಎಷ್ಟೋ ವರ್ಷಗಳಿಂದ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿತ್ತು. ಬಹುತೇಕ ಪಿಂಚಣಿದಾರರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಬಡಕುಟುಂಬಗಳ ವೃದ್ಧರಂತೂ ತಮ್ಮ ಆಸ್ಪತ್ರೆ ಮತ್ತು ಔಷಧ ಖರ್ಚುಗಳಿಗೆ ಪಿಂಚಣಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಈಗ ಏಕಾಏಕಿ ರಾಜ್ಯ ಸರ್ಕಾರ, ಪಿಂಚಣಿ ಪಡೆಯುತ್ತಿರುವವರಲ್ಲಿ ಲಕ್ಷಾಂತರ ಅನರ್ಹ ವ್ಯಕ್ತಿಗಳು ಪತ್ತೆಯಾಗಿದ್ದಾರೆ, ಹಾಗಾಗಿ ಎಲ್ಲಾ ಫಲಾನುಭವಿಗಳ ದಾಖಲಾತಿಗಳನ್ನು ಮರುಪರಿಶೀಲನೆ ಮಾಡಬೇಕು ಎಂಬ ನೆಪವೊಡ್ಡಿ ಐದು ತಿಂಗಳುಗಳಿಂದ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ಲಕ್ಷಾಂತರ ಮಂದಿ ಅರ್ಹ ಫಲಾನುಭವಿಗಳೂ ಕೂಡ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಕೆಲವು ಗ್ರಾಮಗಳಲ್ಲಿ ತಿಳುವಳಿಕೆ ಪತ್ರ ಮತ್ತು ಎಸ್ಎಂಎಸ್ ಮೂಲಕ ಜುಲೈ ತಿಂಗಳ ಒಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಆದರೆ, ವಿದ್ಯಾಭ್ಯಾಸವೇ ಇಲ್ಲದ ಹಳ್ಳಿಯ ವೃದ್ಧರಿಗೆ ಇದು ಅರ್ಥವೇ ಆಗಿಲ್ಲ.
ಮಾಧ್ಯಮಗಳಲ್ಲಿ ಪ್ರಕಟವಾದಂತೆ ರಾಜ್ಯದ ಸುಮಾರು 18 ಲಕ್ಷ ಫಲಾನುಭವಿಗಳು ಸಂಶಯಾಸ್ಪದ ಎಂದು ತಮ್ಮ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಅಥವಾ ಅವ್ಯವಹಾರಗಳಿಗೆ ಬಡಜನರನ್ನು ಈ ರೀತಿ ಬಲಿಕೊಡುವುದು ಯಾವ ನ್ಯಾಯ?
ಕುಟುಂಬದ ವಾರ್ಷಿಕ ಆದಾಯ 32,000 ರೂ.ಗಳಿಗೆ ಮಿತಿಗೊಳಿಸಿ, ಈ ಮಿತಿಯ ಒಳಗಿರುವ ಹೊಸ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ಸರ್ಕಾರ ಆದೇಶಿಸಿದೆ. ಇದು ಅತ್ಯಂತ ಅವೈಜ್ಞಾನಿಕ. ಏಕೆಂದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಕೇವಲ 100 ದಿನ ದುಡಿಯುವ ಕೂಲಿ ಕಾರ್ಮಿಕರು ಕೂಡ ವಾರ್ಷಿಕ ರೂ.32,000/ ಕ್ಕಿಂತ ಹೆಚ್ಚನ್ನು ಸಂಪಾದಿಸುತ್ತಾರೆ. ಒಂದೆಡೆ, ಆದಾಯ ಪ್ರಮಾಣ ಪತ್ರ ನೀಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಇನ್ನೊಂದೆಡೆ, ವಯಸ್ಸಾದ ಜನ ದಿನನಿತ್ಯ ತಾಲೂಕು ಕಚೇರಿಗಳ ಮುಂದೆ ಬೆಳಗ್ಗೆ ಐದು ಗಂಟೆಯಿಂದಲೇ ಕ್ಯೂನಲ್ಲಿ ನಿಂತರೂ ಕೆಲಸವಾಗದೇ ಕಂಗಾಲಾಗಿದ್ದಾರೆ. ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಕೋಟಿಗಟ್ಟಲೆ ವಿನಾಯಿತಿ ನೀಡುವ ಸರ್ಕಾರ, ಬಡವರಿಗೆ ನೀಡುವ ಜುಜುಬಿ ಹಣಕ್ಕೂ ನೂರೆಂಟು ನಿಯಮಗಳನ್ನು ಹೇರುತ್ತಿದೆ ಎಂದು ಜನ ಆಕ್ರೋಶಗೊಂಡಿದ್ದಾರೆ. ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳನ್ನು ಮಾತ್ರ ಉಳಿಸಿ ಬೇರೆಲ್ಲಾ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಇತಿಶ್ರೀ ಹಾಡುವ ಹುನ್ನಾರ ನಡೆಸಿದೆಯೇ ಎಂಬ ಸಂಶಯವೂ ಅವರನ್ನು ಕಾಡುತ್ತಿದೆ.
ಸರ್ಕಾರ, ಪಿಂಚಣಿ ಮರುಪರುಶೀಲನಾ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾಗಿದೆ. ವೃದ್ಧರನ್ನು, ವಿಕಲಚೇತನರನ್ನು ಮತ್ತೆ ಮತ್ತೆ ಕಚೇರಿಗಳಿಗೆ ಅಲೆಯುವಂತೆ ಮಾಡದೆ, ಅವರ ಹಳ್ಳಿಗಳಲ್ಲಿಯೇ, ಮನೆಬಾಗಿಲಿಗೆ ಅಗತ್ಯ ದಾಖಲೆಗಳು ದೊರಕುವಂತೆ ಮಾಡಬೇಕು. 4-5 ತಿಂಗಳುಗಳಿಂದ ಕಾದು, ಅಲೆದು ಸುಸ್ತಾಗಿ ಈಗ ಇವರ ಸಹನೆಯ ಕಟ್ಟೆ ಒಡೆಯುತ್ತಿದೆ. ರಾಜ್ಯದ ಹಲವಾರು ಕಡೆಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಂತಹ ಅಸಹಾಯಕರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮೈಸೂರು ಜಿಲ್ಲಾ ಸಮಿತಿಯು ಪ್ರತಿಭಟನೆಯ ಮೂಲಕ ತಮ್ಮನ್ನು ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು
- ಪಿಂಚಣಿ ಮರುಪರಿಶೀಲನಾ ಕಾರ್ಯಕ್ಕೆ ಪ್ರತಿಯೊಂದು ಪಂಚಾಯಿತಿ ಮಟ್ಟದಲ್ಲೂ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ. ತಾಲೂಕು ಕಚೇರಿ ಮತ್ತು ನಾಡ ಕಚೇರಿಗಳಲ್ಲಿ ಕೂಡ ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಿ.
- ವಾರ್ಷಿಕ ರೂ.32,000 ಎಂಬ ಅವಾಸ್ತವಿಕ ಆದಾಯ ಮಿತಿಯನ್ನು ರದ್ದು ಮಾಡಿ, ಬಿಪಿಎಲ್ ಪಡಿತರ ಚೀಟಿಯ ಆದಾಯ ಮಟ್ಟಕ್ಕೆ ಇದನ್ನು ಹೆಚ್ಚಿಸಿ.
- ಮರುಪರಿಶೀಲನೆ ಪ್ರಕ್ರಿಯೆ ಬಗ್ಗೆ ಮತ್ತು ಸಲ್ಲಿಸಬೇಕಾದ ದಾಖಲಾತಿಗಳ ಮಾಹಿತಿಯನ್ನು ಪ್ರತಿಯೊಬ್ಬ ಫಲಾನುಭವಿಗೂ ತಿಳಿಸಲು ಅಗತ್ಯ ಪ್ರಚಾರ ಕೈಗೊಳ್ಳಬೇಕು.


