


ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಸರಗೂರು,ನಂಜನಗೂಡು, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಆದಿವಾಸಿ ಜನರು ಕೃಷಿ ಕೂಲಿಕಾರ್ಮಿಕರಾಗಿದ್ದಾರೆ. ಅನಕ್ಷರತೆ, ಅಪೌಷ್ಟಿಕತೆ, ಬಡತನದೊಂದಿಗೆ ಬದುಕುವ ಇವರು ಕಾನೂನಿನ ಅರಿವಿಲ್ಲದ ಮುಗ್ಧರಾಗಿದ್ದಾರೆ.
1990ರ ದಶಕದಲ್ಲಿ ಈ ಪ್ರದೇಶದಲ್ಲಿ ಹಸಿವಿನ ಸಾವು ಪ್ರಕರಣಗಳು ವರದಿಯಾದ ನಂತರ ಇವರಲ್ಲಿರುವ ಅಪೌಷ್ಟಿಕತೆ ನಿವಾರಣೆಗಾಗಿ ಪ್ರತಿತಿಂಗಳು ಐಟಿಡಿಪಿ ಮೂಲಕ ವಿಶೇಷ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ನಡೆಯುತ್ತಿರುವುದೆ. ಆದರೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಯೋಜನೆಯ ಟೆಂಡರ್ ವಿಳಂಬ ಕಾರಣ ನೀಡಿ ಒಂದೆರಡು ತಿಂಗಳು ವಿತರಣೆಯೇ ಆಗುವುದಿಲ್ಲ. ಈ ವರ್ಷ ಕೂಡ ಕಳೆದ ಮೂರು ತಿಂಗಳುಗಳಿಂದ (ಏಪ್ರಿಲ್, ಮೇ,ಜೂನ್) ಟೆಂಡರ್ ಹಾಗೂ ಇತರೆ ಕಾರಣ ನೀಡಿ ಬಂದಿರುವುದಿಲ್ಲ. ಹೀಗಾದರೆ ಈ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ.
ಹಾಗಾಗಿ ಈ ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಥವಾ ಟೆಂಡರ್ ಕರೆಯುವವರೆಗೆ ತಾತ್ಕಾಲಿಕವಾಗಿ ಆಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತದಿಂದಲೇ ಖರೀದಿಸಿ ವಿತರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಸಂಘಟಿಸಲಾಯಿತು.
ಏಪ್ರಿಲ್ ಹಾಗೂ ಮೇ ತಿಂಗಳು ಕೂಲಿ ಕೆಲಸವೂ ಸರಿಯಾಗಿ ದೊರಕದ ಕಾಲವಾಗಿದ್ದು ಇವರು ಕಂಗಾಲಾಗಿದ್ದಾರೆ. ಜೊತೆಗೆ ಇದೇ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೂಡ ಈ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆಯನ್ನು ಮಾಡಿಲ್ಲ. ಮಾರ್ಚ್ ತಿಂಗಳಲ್ಲಿ ಜನವರಿ ತಿಂಗಳ ಕಿಟ್ ವಿತರಿಸಲಾಗಿದೆ. ಹಿಂದೆ 45 ದಿನಗಳಿಗೊಮ್ಮೆ ಕೊಡುತ್ತಿದ್ದ ಈ ಸೌಲಭ್ಯವನ್ನು ಆದಿವಾಸಿಗಳ ಸಂಕಷ್ಟ ಮತ್ತು ಅದಕ್ಕೆ ನಮ್ಮ ಹೋರಾಟದ ಫಲವಾಗಿ 3 ವರ್ಷಗಳ ಹಿಂದೆ ಪ್ರತಿ ತಿಂಗಳು ಕೊಡುವಂತೆ ಮಾಡಲಾಯಿತು. ಆದರೆ ಟೆಂಡರ್ ವಿಳಂಬ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಆಗುತ್ತಿರುವ ತೊಂದರೆ ಈ ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಈ ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿ ಕಳೆದ ತಿಂಗಳು ಎಚ್.ಡಿ.ಕೋಟೆಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರಿ ಇಲಾಖೆಯ ಮೂಲಕ ನಿಯತವಾಗಿ ನಡೆಯಬೇಕಾದ ಕೆಲಸಕ್ಕೂ ಜಿಲ್ಲಾ ಕೇಂದ್ರಕ್ಕೆ ಬಂದು ಆದಿವಾಸಿ ಜನತೆ ಹೋರಾಡಬೇಕು ಎಂಬುದು ಬಹಳ ನಾಚಿಕೆಗೇಡಿನ ಸಂಗತಿ. ಜಿಲ್ಲಾಡಳಿತ ತಕ್ಷಣವೇ ತಮ್ಮ ಅಧಿಕಾರವನ್ನು ಬಳಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು.
ಹಕ್ಕೊತ್ತಾಯಗಳು
*ಏಪ್ರಿಲ್,ಮೇ,ಜೂನ್ ತಿಂಗಳ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ಈ ಕೂಡಲೇ ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳಿ.ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ ರಾಗಿಯನ್ನು ಸಹ ನೀಡಿ.
* ಆದಿವಾಸಿಗಳಿಗೆ ನೀಡುವ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ಗುಣಮಟ್ಟದಲ್ಲಿ ವಿತರಿಸಿ ಹಾಗೂ ಟೆಂಡರ್ ಹಾಗೂ ಇತರೆ ಕಾರಣಕ್ಕೆ ತಡ ಮಾಡಿಕೊಡುವುದನ್ನು ತಡೆಗಟ್ಟಿ.
* ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಉಳಿಸಿರುವ 2 ತಿಂಗಳ ಕಿಟ್ ವಿತರಣೆಯನ್ನು ಕೂಡ ಈ ವರ್ಷ ಹೆಚ್ಚುವರಿಯಾಗಿ ಕೊಡಿ.
*ಮೈಸೂರು ಜಿಲ್ಲೆಯ ಆದಿವಾಸಿ ಹಾಡಿಗಳಿಗೆ ಮನೆ, ಶೌಚಾಲಯ , ರಸ್ತೆ, ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ.
ಈ ಪ್ರತಿಭಟನೆಯನ್ನು ಉದ್ದೇಶಿಸಿ, ಎಐಜೆಎಎಸ್‌ಸಿ ಸಂಚಾಲಕರಾದ ಸುನಿಲ್ ಟಿಆರ್, ಎಐಎಂಎಸ್ಎಸ್ ಜಿಲ್ಲಾ ಉಪಾಧ್ಯಕ್ಷೆ ಸೀಮಾ ಜಿಎಸ್, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷರಾದ ಉಮಾದೇವಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮೊದಲಾದವರು ಮಾತನಾಡಿದರು. ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷರಾದ ಬಸವರಾಜು, ಎಐಯುಟಿಯುಸಿ ಸದಸ್ಯರಾದ ಶಿವಾನಂದ್ ವಿವಿಧ ಹಾಡಿಗಳ ಆದಿವಾಸಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಗೆ ಸ್ಥಾನಿಕ ತಹಸೀಲ್ದಾರ್ ಮತ್ತು ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜ್ಯ ಮಟ್ಟದಲ್ಲಿ ತಡವಾದರೆ, ಜಿಲ್ಲಾ ಮಟ್ಟದಲ್ಲೇ ಬಗೆಹರಿಸಲು ಕೋರಿದ್ದೇವೆ ಎಂದು ತಿಳಿಸಿದ್ದಾರೆ. ಆದಿವಾಸಿಗಳ ಕುಂದು ಕೊರತೆಗಳ ಬಗ್ಗೆ ಆದಷ್ಟು ಬೇಗನೆ ಒಂದು ಸಭೆ ಕರೆಯುವ ಭರವಸೆ ನೀಡಿದ್ದಾರೆ.
