ಈ ಯೋಜನೆಯನ್ನು ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮಗ್ರ ಟೌನ್‌ಶಿಪ್ ಎಂದು ಪ್ರಚಾರ ಮಾಡಲಾಗುತ್ತಿದೆ. ಭೂಸ್ವಾಧೀನ ಅಧಿಸೂಚನೆ ಹೊರಬಿದ್ದ ಕೂಡಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವಾಧೀನಕ್ಕೆ ಗುರುತಿಸಲಾದ ಭೂಮಿ ಅತ್ಯಂತ ಫಲವತ್ತಾಗಿದ್ದು ಕೃಷಿಗೆ ಅವಶ್ಯಕವಾಗಿದೆ, ಆದ್ದರಿಂದ ಭೂಸ್ವಾಧೀನ ಅಧಿಸೂಚನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮಾರ್ಚ್ ನಿಂದ ಭೈರಮಂಗಲ ಮತ್ತು ಕಂಚುಗಾರನಹಳ್ಳಿಯ ಗ್ರಾಮದ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಫಲವತ್ತಾದ ಭೂಸ್ವಾಧೀನವನ್ನು ಕೈಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನು, ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿಯ ಅಗತ್ಯವಿದ್ದರೆ ಒಣ ಭೂಮಿ ಹಾಗೂ ಬಂಜರು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಈ ಹಸಿರು ಪ್ರದೇಶವು ಬೆಂಗಳೂರು ಸುತ್ತಲಿನ ಸಮೃದ್ಧ ಆಮ್ಲಜನಕದ ಮೂಲವಾಗಿದ್ದು ಇಂತಹದನ್ನು ರಕ್ಷಿಸಿಕೊಳ್ಳುವುದು ಮಹತ್ವವೆಂಬುದನ್ನು ಅರಿಯಬೇಕು, ಇದನ್ನು ಕಳೆದುಕೊಂಡರೆ ಅದಕ್ಕೆ ನಾವು ಘೋರ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ.

ಆದರೆ, ಬಿಡದಿಯ ಸುತ್ತಮುತ್ತ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರದೇಶವು ಸಸ್ಯ ಸಮೃದ್ಧ ಕೃಷಿಭೂಮಿಯಾಗಿದ್ದು ಭತ್ತ, ತೆಂಗು, ಮತ್ತು ತರಕಾರಿ ಇನ್ನಿತರ ಬಹು ಬೆಳೆ ಬೆಳೆಯುವ ಫಲವತ್ತಾದ ಪ್ರದೇಶವಾಗಿದೆ. ಇಲ್ಲಿಯ ರೈತರು ತಮ್ಮ ಜೀವನೋಪಾಯಕ್ಕೆ ಇದನ್ನೇ ಅವಲಂಬಿಸಿಕೊಂಡಿದ್ದಾರೆ. ರೈತ ಕುಟುಂಬಗಳು ಇಲ್ಲಿ ಹೈನುಗಾರಿಕೆ ನಡೆಸುತ್ತಿವೆ. ಅದೂ ಸಹಾ ಅವರ ಬದುಕಿಗೆ ಆಧಾರವಾಗಿದೆ. ಆದರೆ, ಭೂಸ್ವಾಧೀನಕ್ಕೆ ಮುನ್ನುಗ್ಗುತ್ತಿರುವ ಸರ್ಕಾರವು ಈ ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಕೃಷಿ ಭೂಮಿ ಉಳಿವಿಗಾಗಿ ಹೋರಾಟ ಮಾಡುತ್ತಿರುವವರು ರೈತರೇ ಅಲ್ಲ ಮತ್ತು ಇಲ್ಲಿ ಯಾವ ಕೃಷಿ ಭೂಮಿಯೂ ಇಲ್ಲ ಎಂದು ಬಹಳ ದೊಡ್ಡ ಸುಳ್ಳಿನ ಪ್ರಚಾರವನ್ನು ಆರಂಭಿಸಿತ್ತು. ಕೊನೆಗೆ ಅಲ್ಲಿ ಇರುವ ಸಮೃದ್ಧ ಹಸಿರು ಪ್ರದೇಶ ಎಲ್ಲರ ಗಮನಕ್ಕೆ ಬರುತ್ತಿದ್ದಂತೆ ಅಪಪ್ರಚಾರ ಮಾಡುತ್ತಿದ್ದ ರಾಜಕಾರಣಿ ಹಾಗೂ ಅಧಿಕಾರಿಗಳ ಕೂಟವು, ಬಹುಸಂಖ್ಯಾತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಈಗ ಹೊಸ ಅಪಪ್ರಚಾರವನ್ನು ಶುರು ಮಾಡಿದೆ. ಇದುವರೆಗೂ ಗ್ರಾಮಸಭೆಗಳನ್ನು ಕರೆದಿಲ್ಲ, ಗ್ರಾಮಸ್ಥರ ಅಭಿಪ್ರಾಯ ಪಡೆದಿಲ್ಲ. ಅಲ್ಲದೆ, ಜಿಲ್ಲಾಡಳಿತವು ಭೂಮಿಯ ಫಲವತ್ತತೆಯನ್ನು ಪರಿಶೀಲಿಸಿಲ್ಲ ಮತ್ತು ಭೂಸ್ವಾಧೀನ ಕಾಯ್ದೆಯಡಿ ಅಗತ್ಯವಿರುವ ರೈತರ ಒಪ್ಪಿಗೆಯನ್ನು ಪಡೆಯಬೇಕು ಎಂಬ ನಿಬಂಧನೆಯನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ತೀರ್ಮಾನಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಅವರು ಚಾಲನೆ ನೀಡಿದ್ದಾರೆ. ಸರ್ಕಾರದ ಇಂತಹ ನಡೆ ತೀವ್ರ ಆಕ್ಷೇಪಾರ್ಹವಾಗಿದೆ. ಆದ್ದರಿಂದ ಸರ್ಕಾರವು ಬಿಡದಿಯ ಫಲವತ್ತಾದ ಕೃಷಿಭೂಮಿಯ ಭೂಸ್ವಾಧೀನ ನೀತಿಯನ್ನು ಕೂಡಲೇ ಕೈಬಿಡಬೇಕು ಎಂದು AIKKMS ರಾಜ್ಯ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತಿದೆ. ಬೈರಮಂಗಲದಲ್ಲಿ ನಡೆಯುತ್ತಿದ್ದ ರೈತರ ಧರಣಿ ಸ್ಥಳಕ್ಕೆ AIKKMS ರಾಜ್ಯ ಸಮಿತಿಯ ಪರವಾಗಿ ಅಧ್ಯಕ್ಷರಾದ ಕಾಮ್ರೇಡ್ ಎಂ.ಶಶಿಧರ್ ಮತ್ತು ಉಪಾಧ್ಯಕ್ಷರಾದ ಕಾಮ್ರೇಡ್ ಹೆಚ್.ಪಿ.ಶಿವಪ್ರಕಾಶ್ SKM ನಿಯೋಗದ ಜೊತೆಯಲ್ಲಿ ತೆರಳಿ ಈ ಹೋರಾಟವನ್ನು ಬೆಂಬಲಿಸಿದರು.

ಬಿಡದಿ ಟೌನ್‌ಷಿಪ್ ಯೋಜನೆಯನ್ನು ಖಂಡಿಸಿ ಆಗಸ್ಟ್ 25ರಂದು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಡೆದ ಹೋರಾಟವನ್ನು ಉದ್ದೇಶಿಸಿ, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷರಾದ ಕಾ. ಶಿವಪ್ರಕಾಶ್ ಅವರು ಮಾತನಾಡಿದರು.
