ಎನ್.ಎಂ.ಡಿ.ಸಿ (National Mining Development Corporation) ಕೇಂದ್ರ ಸರ್ಕಾರದ ಗಣಿಗಾರಿಕೆ ಸಂಸ್ಥೆಯಾಗಿದೆ. ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಈ ಸಂಸ್ಥೆ, ಕಬ್ಬಿಣ ಅದಿರಿನ ಗಣಿಗಾರಿಕೆ ನಡೆಸುತ್ತಿದೆ. ಇದರ ಅಡಿಯಲ್ಲಿ ಪೆಲೆಟ್ ಹಾಗೂ ಬಿನಿಫಿಕೇಷನ್ ಪ್ಲಾಂಟ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಪ್ಲಾಂಟ್‌ನ ನೂರಾರು ಹೊರಗುತ್ತಿಗೆ ಕಾರ್ಮಿಕರು ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕ ಸಂಘದ ಸದಸ್ಯರಾಗಿದ್ದಾರೆ. ನವೆಂಬರ್ 18, ರಂದು ಟೆಂಡರ್ ಮುಗಿದ ಹಿನ್ನೆಲೆಯಲ್ಲಿ, ಎನ್.ಎಂ.ಡಿ.ಸಿ. ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ನ ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಲಾಗಿತ್ತು. ಈ ಎರಡೂ ಪ್ಲಾಂಟ್‌ಗಳನ್ನು ಬೇರೊಂದು ಕಂಪನಿಗೆ ಲೀಸ್‌ಗೆ ನೀಡಲಾಗಿದೆ, ಅವರು ಬರುವವರೆಗೂ ಕಾಯಬೇಕು, ಈ ರೀತಿ ಹಾರಿಕೆ ಉತ್ತರವನ್ನು ಎನ್.ಎಂ.ಡಿ.ಸಿ. ಮುಖ್ಯಸ್ಥರು ನೀಡುತ್ತಿದ್ದರು. ಕೇಂದ್ರ ಸರ್ಕಾರದ ಮೈನಿಂಗ್ ಸಂಸ್ಥೆಯಾಗಿದ್ದರೂ, ಮೂಲ ಮಾಲೀಕರಾಗಿದ್ದರೂ, ಸ್ವಲ್ಪವೂ ಜವಾಬ್ದಾರಿ ತೆಗೆದುಕೊಳ್ಳದೆ, ಗುತ್ತಿಗೆದಾರರ ಮೇಲೆ ಜವಾಬ್ದಾರಿಯನ್ನು ಹೊರೆಸಿ, ಎನ್.ಎಂ.ಡಿ.ಸಿ. ಕೈ ತೊಳೆದುಕೊಂಡಿತ್ತು. ಯೂನಿಯನ್ ವತಿಯಿಂದ ಮನವಿ ಪತ್ರ, ಇ-ಮೇಲ್ ಕಳುಹಿಸಿದರೂ, ಯಾವುದೇ ರೀತಿಯಲ್ಲಿ ಚರ್ಚೆಗೆ ಆಹ್ವಾನಿಸಲಿಲ್ಲ. ಇದರಿಂದ ಆಕ್ರೋಶಿತರಾದ ಗುತ್ತಿಗೆ ಕಾರ್ಮಿಕರು ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕ ಸಂಘದ ನೇತೃತ್ವದಲ್ಲಿ ಹೋರಾಟಕ್ಕೆ ಸಜ್ಜಾದರು. ನವೆಂಬರ್ 20ರಂದು ನಡೆದ ಗಣಿ ಕಾರ್ಮಿಕರ ಸಮ್ಮೇಳನ ಇನ್ನಷ್ಟು ಅವರಲ್ಲಿ ದೃಢತೆ ಹಾಗೂ ಸ್ಫೂರ್ತಿಯನ್ನು ತುಂಬಿತು. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆ ನಿರ್ಧರಿಸಲಾಯಿತು. ನವೆಂಬರ್ 24ರಂದು ಸುಮಾರು 500 ಕಾರ್ಮಿಕರು ಎನ್.ಎಂ.ಡಿ.ಸಿ. ಮುಖ್ಯದ್ವಾರದ ಮುಂದೆ ಪ್ರತಿಭಟನೆ ಆರಂಭಿಸಿದರು. ಎನ್.ಎಂ.ಡಿ.ಸಿ.ಯ ಕಳೆದ 50 ವರ್ಷಗಳ ಇತಿಹಾಸದಲ್ಲಿ ಈ ರೀತಿ ಯಾರೂ ಮಾಡಿರಲಿಲ್ಲ. ಇದು ಐತಿಹಾಸಿಕ ಎಂದೇ ಇಲ್ಲಿನ ಸ್ಥಳೀಯ ಜನರ ಅಭಿಪ್ರಾಯ. ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕಾ. ಕೆ. ಸೋಮಶೇಖರ್, ರಾಜ್ಯ ಉಪಾಧ್ಯಕ್ಷರಾದ ಕಾ.ಚಂದ್ರಶೇಖರ್ ಮೇಟಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಯುಕ್ತ ಗಣಿ ಕಾರ್ಮಿಕ ಸಂಘದ ಮುಖಂಡರಾದ ಕಾ.ಎ.ದೇವದಾಸ್, ಕಾ.ಸೋಮಶೇಖರ ಗೌಡ, ಡಾ.ಪ್ರಮೋದ್ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಎನ್.ಎಂ.ಡಿ.ಸಿ. ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಾಯಿತು. ನವೆಂಬರ್ 28ಕ್ಕೆ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ, ಅಧಿಕಾರಿಗಳು ಭರವಸೆ ನೀಡಿದರು. ಪ್ರತಿಭಟನೆಯನ್ನು ತೀವ್ರಗೊಳಿಸಿದ ಕಾರ್ಮಿಕರು ನವೆಂಬರ್ 27ರಂದು ಮುಖ್ಯ ದ್ವಾರ, ಲಾರಿ, ಗೂಡ್ಸ್ ರೈಲು ಸಂಚಾರ ಎಲ್ಲವನ್ನೂ ಬಂದ್ ಮಾಡಿದರು. ಖಾಯಂ ಉದ್ಯೋಗಿಗಳು ಪ್ಲಾಂಟ್ ಒಳಗೆ ಹೋಗದಂತೆ ಮನವೊಲಿಸಿದರು. ಇಡೀ ಎನ್.ಎಂ.ಡಿ.ಸಿ. ಆಡಳಿತ ವರ್ಗದಲ್ಲಿ ನಡುಕ ಪ್ರಾರಂಭವಾಯಿತು. ಇಡೀ ದಿನ ಈ ರೀತಿ ನಡೆದು ಆಡಳಿತ ಮಂಡಳಿಯ ಮೇಲೆ ಸಾಕಷ್ಟು ಒತ್ತಡ ಉಂಟಾಗಿತ್ತು. ಸ್ಥಳೀಯ ಸಂಸದರು ಕೂಡ ಭಾಗವಹಿಸಿ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಹೋರಾಟದ ಒತ್ತಡದ ಫಲವಾಗಿ, ಸಮಸ್ಯೆಗೆ ಪರಿಹಾರ ಒದಗಿಸಲು ಡಿಸೆಂಬರ್ 6ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಸಂಸದರು, ಕಾರ್ಮಿಕ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಓ, ಎನ್.ಎಂ.ಡಿ.ಸಿ. ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಯೂನಿಯನ್ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಡಿಸೆಂಬರ್ 10 ರಂದು ಪ್ರಾದೇಶಿಕ ಕಾರ್ಮಿಕ ಆಯುಕ್ತರು ನಡೆಸಿದ ಸಂಧಾನ ಸಭೆಯಲ್ಲಿ ಕಾರ್ಮಿಕರು ಎತ್ತಿದ ಎಲ್ಲ ಬೇಡಿಕೆಗಳನ್ನು ಒಪ್ಪಿ ತ್ರಿಪಕ್ಷೀಯ ಲಿಖಿತ ಒಪ್ಪಂದ ಮಾಡಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಹೋರಾಟ ನಿರತ ಎಲ್ಲ ಹೊರಗುತ್ತಿಗೆ ಕಾರ್ಮಿಕರನ್ನು ಹಂತಹಂತವಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂಬ ಖಚಿತ ಭರವಸೆ ಲಭಿಸಿದಂತಾಗಿದೆ. ಒಂದು ಕ್ರಾಂತಿಕಾರಿ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆದರೆ ಹೇಗೆ ಜಯ ಸಾಧಿಸಬಹುದು ಎಂಬುದಕ್ಕೆ ಇದು ಇನ್ನೊಂದು ನಿದರ್ಶನ.

ಸಂಡೂರು: ಎಐಯುಟಿಯುಸಿ ನೇತೃತ್ವದಲ್ಲಿ ಗಣಿ ಕಾರ್ಮಿಕರ ಧೀರೋದಾತ್ತ ಹೋರಾಟಕ್ಕೆ ಸಂದ ಜಯ
ಸಂಡೂರು: ಎಐಯುಟಿಯುಸಿ ನೇತೃತ್ವದಲ್ಲಿ ಗಣಿ ಕಾರ್ಮಿಕರ ಧೀರೋದಾತ್ತ ಹೋರಾಟಕ್ಕೆ ಸಂದ ಜಯ ಎನ್.ಎಂ.ಡಿ.ಸಿ (National Mining Development Corporation) ಕೇಂದ್ರ ಸರ್ಕಾರದ ಗಣಿಗಾರಿಕೆ...