ಬಿಜೆಪಿ ಸರ್ಕಾರವು ಕನಿಷ್ಠ 95 ಆಕ್ಟೇನ್ ರೇಟಿಂಗ್ನೊಂದಿಗೆ (ಪಿಸ್ಟನ್ನಿಂದ ಬರುವ ಒತ್ತಡವನ್ನು ತಡೆಯುವ ಶಕ್ತಿ) ದೇಶಾದ್ಯಂತ ಶೇ.20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ (ಇ20) ಕಡ್ಡಾಯಗೊಳಿಸಿದೆ. ಇದಾದ ನಂತರ, ಕಳೆದ ಕೆಲವು ತಿಂಗಳುಗಳಿಂದ, ಎಂಜಿನ್ ಸವೆತ, ಕಡಿಮೆ ಇಂಧನ ದಕ್ಷತೆ (ಮೈಲೇಜ್ ಕುಸಿತ) ಮತ್ತು ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆ ಗ್ರಾಹಕರು ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳ ಪ್ರವಾಹವನ್ನೇ ಹರಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ದೂರುಗಳನ್ನು “ದಾರಿತಪ್ಪಿಸುವಂಥದ್ದು” ಮತ್ತು “ಸಾಮಾಜಿಕ ಮಾಧ್ಯಮದ ತಪ್ಪು ಮಾಹಿತಿ” ಎಂದು ತಳ್ಳಿಹಾಕಿದೆ.
ಕಳೆದ ಜೂನ್ ತಿಂಗಳಲ್ಲಿ ನೀಡಿದ ಹೇಳಿಕೆಯಲ್ಲಿ, ವ್ಯಾಪಕ ಪರೀಕ್ಷೆಗಳ ನಂತರವೇ ಈ ಇಂಧನವನ್ನು ಬಿಡುಗಡೆ ಮಾಡಲಾಗಿದ್ದು, ಇದು ಎಂಜಿನ್ಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಜೊತೆಗೆ, ಇ20 ತೈಲದ ಪ್ರಯೋಜನಗಳನ್ನು ವಿವರಿಸಿದೆ. ಸರ್ಕಾರದ ಪ್ರಕಾರ, ಪೆಟ್ರೋಲ್ನೊಂದಿಗೆ ದೇಶೀಯವಾಗಿ ಉತ್ಪಾದಿಸುವ ಜೈವಿಕ ಇಂಧನದ ಒಂದು ಭಾಗವನ್ನು ಬೆರೆಸುವುದರಿಂದ ಅದು, ವಿದೇಶಿ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ; 2014 ರಿಂದ ವಿದೇಶಿ ವಿನಿಮಯ ಆಮದು ವೆಚ್ಚದಲ್ಲಿ ರೂ.1.9 ಲಕ್ಷ ಕೋಟಿಗೂ ಹೆಚ್ಚು ಉಳಿತಾಯ ಮಾಡಲಿದೆ; ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದ ದೇಶೀಯ ಆರ್ಥಿಕತೆಯನ್ನು ರಕ್ಷಿಸಲಿದೆ. ಅಲ್ಲದೆ, ಇದು ವಾಹನಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ (CO2) ಪ್ರಮಾಣವನ್ನು ನೂರಾರು ಮಿಲಿಯನ್ ಟನ್ಗಳಷ್ಟು ತಗ್ಗಿಸಿ, ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ಗಳಂತಹ ಹಾನಿಕಾರಕ, ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಿ ಭಾರತದ ದೀರ್ಘಕಾಲೀನ ಹವಾಮಾನ ಗುರಿಗಳು ಹಾಗೂ ನೆಟ್-ಜೀರೋ ಗುರಿಗಳನ್ನು ಬೆಂಬಲಿಸುತ್ತದೆ. ಇದಲ್ಲದೆ, ನಿರಂತರ ಬೆಳೆ ಸಂಗ್ರಹಣೆಯ ಮೂಲಕ ರೈತರು ಮತ್ತು ಸಕ್ಕರೆ/ಧಾನ್ಯ ಡಿಸ್ಟಿಲರಿಗಳು ರೂ.1.6 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಲಿದ್ದಾರೆ ಎಂದು ಹೇಳಲಾಗಿದೆ.
ಎಥನಾಲ್ ಸಮಸ್ಯೆಗಳು
ಮೇಲ್ನೋಟಕ್ಕೆ ಈ ತರ್ಕವು ಬಹಳ ಮನವೊಪ್ಪುವಂತೆ ತೋರುತ್ತದೆ. ಆದರೆ ಇದರ ಹಿಂದೆ ಒಂದು ಪ್ರಮುಖ ಸತ್ಯವನ್ನು ಮರೆಮಾಚಲಾಗಿದೆ. ಪೆಟ್ರೋಲ್ ಅನ್ನು ಕಾರುಗಳ ಎಂಜಿನ್ಗಳಿಗೆ ಮತ್ತು ಕೆಲವು ಕೈಗಾರಿಕಾ ಯಂತ್ರೋಪಕರಣಗಳಿಗೆ ಬಳಸಲಾಗುತ್ತದೆ. ಅಂತಹ ಸಂದರ್ಭದಲ್ಲಿ, ಈ ಮಿಶ್ರಿತ ಪೆಟ್ರೋಲ್ ಕಾರಿನ ಎಂಜಿನ್ಗಳಿಗೆ ಹಾನಿ ಮಾಡುತ್ತದೆಯೇ? ಹೌದು, ಶುದ್ಧ ಪೆಟ್ರೋಲಿಗೆ ಹೋಲಿಸಿದರೆ ಎಥನಾಲ್ನ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳಿಂದಾಗಿ, ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣವು (ಇ10, ಇ15, ಇ20, ಅಥವಾ ಇ85 ನಂತಹ ಮಿಶ್ರಣಗಳು) ಮೈಲೇಜ್ ಮತ್ತು ಎಂಜಿನ್ ಆಯಸ್ಸಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬುದು ದಾಖಲಿತ ಸತ್ಯವಾಗಿದೆ. ಎಥನಾಲ್ ಪೆಟ್ರೋಲ್ಗಿಂತ ಗಮನಾರ್ಹವಾಗಿ ಕಡಿಮೆ ಶಕ್ತಿ ಸಾಂದ್ರತೆಯನ್ನು ಹೊಂದಿದೆ - ಪ್ರತಿ ಯೂನಿಟ್ ಪ್ರಮಾಣಕ್ಕೆ ಸರಿಸುಮಾರು ಶೇ.33 ರಷ್ಟು ಕಡಿಮೆ ಶಕ್ತಿಯನ್ನು ನೀಡುತ್ತದೆ. ಎಥನಾಲ್ ಮಿಶ್ರಣವು ಹೊಂದಾಣಿಕೆಯಾಗದ ಅಥವಾ ಹಳೆಯ ಎಂಜಿನ್ಗಳಲ್ಲಿ ಲೋಹದ ಸವೆತ, ಅದರ ಆರ್ದ್ರತೆ ಹೀರಿಕೊಳ್ಳುವ (ಹೈಗ್ರೋಸ್ಕೋಪಿಕ್) ಗುಣದಿಂದ ನೀರನ್ನು ಹೀರಿಕೊಳ್ಳುವುದು ಮತ್ತು ರಬ್ಬರ್ ಸೀಲ್ಗಳನ್ನು ಹಾಳುಮಾಡುವ ದ್ರಾವಕ ಕ್ರಿಯೆಯ ಮೂಲಕ ಹಾನಿಯನ್ನುಂಟುಮಾಡುತ್ತದೆ. ಹೆಚ್ಚಿನ ಪ್ರಮಾಣದ ಮಿಶ್ರಣವು ಹಳೆಯ ಯಂತ್ರಗಳಲ್ಲಿ ಕಾರ್ಯಾಚರಣೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಬಹುತೇಕ ಬಳಕೆದಾರರು ಹೇಳುತ್ತಾರೆ.
ಇದಕ್ಕೆ ಕಾರಣವೇನು? ಒಂದು ಪ್ರಮಾಣದ ಶಕ್ತಿಯನ್ನು ಉತ್ಪಾದಿಸಲು ವಾಹನಗಳು ಶುದ್ಧ ಪೆಟ್ರೋಲ್ಗಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಸುಡಬೇಕಾಗುತ್ತದೆ. ಮಿಶ್ರಿತ ಇಂಧನದ ಕಡಿಮೆ ಶಾಖ ಮೌಲ್ಯಕ್ಕೆ ಅನುಗುಣವಾಗಿ ಇಂಧನ ಬಳಕೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಆಮ್ಲೀಯ ಉಪಉತ್ಪನ್ನಗಳನ್ನೂ ಉಂಟುಮಾಡಬಹುದು. ಆರಂಭದಲ್ಲಿ ಸರ್ಕಾರವು ಇಂತಹ ಎಲ್ಲಾ ನಕಾರಾತ್ಮಕ ಪರಿಣಾಮಗಳನ್ನು ನಿರಾಕರಿಸಿದರೂ, ಇತ್ತೀಚೆಗೆ ಇಂಧನ ದಕ್ಷತೆಯಲ್ಲಿ ಇಳಿಕೆಯಾಗುವುದನ್ನು ಒಪ್ಪಿಕೊಂಡಿದೆ; ಆದರೆ ಎಥನಾಲ್ ಮಿಶ್ರಿತ ಪೆಟ್ರೋಲ್ ಆಧುನಿಕ ಎಂಜಿನ್ಗಳಿಗೆ ಸುರಕ್ಷಿತವಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ದುರದೃಷ್ಟವಶಾತ್, ಭಾರತದ ರಸ್ತೆಗಳಲ್ಲಿರುವ ಶೇ.99 ರಷ್ಟು ವಾಹನಗಳು ಇಂತಹ ಆಧುನಿಕ ಎಂಜಿನ್ಗಳನ್ನು ಹೊಂದಿಲ್ಲ. ಮೈಲೇಜ್ ಕಡಿಮೆಯಾಗುವುದೆಂದರೆ ಇಂಧನ ಬಳಕೆ ಹೆಚ್ಚಾಗುವುದು ಮತ್ತು ಪೆಟ್ರೋಲ್ ಖರೀದಿಯ ಪ್ರಮಾಣ ಹೆಚ್ಚಾಗುವುದು ಎಂದರ್ಥ.
ಲಾಭ ಯಾರಿಗೆ?
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪುತ್ರರಾದ ನಿಖಿಲ್ ಮತ್ತು ಸಾರಂಗ್ ಅವರು ಎಥನಾಲ್ ಉತ್ಪಾದನೆಯಲ್ಲಿ ತೊಡಗಿರುವ ಸಿಯಾನ್ ಅಗ್ರೋ ಇಂಡಸ್ಟ್ರೀಸ್ ಮತ್ತು ಮಾನಸ್ ಅಗ್ರೋ ಇಂಡಸ್ಟ್ರೀಸ್ ಕಂಪನಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ನಂಟು ಭಾರತದ ರಾಷ್ಟ್ರೀಯ ಎಥನಾಲ್ ಮಿಶ್ರಣ ನೀತಿಯ ಸುತ್ತ ಅನುಮಾನಗಳಿಗೆ ಕಾರಣವಾಗಿದೆ. ವಾಸ್ತವವಾಗಿ, ಸಿಯಾನ್ ಅಗ್ರೋ ಕಂಪನಿಯು 2025ರ ಆರ್ಥಿಕ ವರ್ಷದಲ್ಲಿ ವಾರ್ಷಿಕ ನಿವ್ವಳ ಲಾಭದಲ್ಲಿ ಶೇ.740 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿ ರೂ.41.2 ಕೋಟಿ ಗಳಿಸಿದೆ; ಅದರ ಆದಾಯವು ಸುಮಾರು ರೂ.18 ಕೋಟಿಯಿಂದ ರೂ.500 ಕೋಟಿಗೂ ಹೆಚ್ಚು ಜಿಗಿದಿದೆ. ಹಾಗೆಯೇ ಅದರ ಅಂಗಸಂಸ್ಥೆಯಾದ ಮಾನಸ್ ಅಗ್ರೋ ರೂ.913 ಕೋಟಿ ಆದಾಯ ಮತ್ತು ರೂ.5.27 ಕೋಟಿ ಲಾಭವನ್ನು ದಾಖಲಿಸಿದೆ.
ಎರಡನೆಯದಾಗಿ, ದೇಶೀಯ ಕೈಗಾರಿಕಾ ಬೇಡಿಕೆಯನ್ನು ಪೂರೈಸಲು ಭಾರತವು ಅಮೆರಿಕಾದಿಂದ ಶೇ.94 ಎಥನಾಲ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಭಾರತ ಆಮದು ಮಾಡಿಕೊಳ್ಳುವ ಎಥನಾಲ್ ಪ್ರಮಾಣವು 2025 ರಲ್ಲಿದ್ದ ಶೇ.79 ರಿಂದ 2026 ರಲ್ಲಿ ಶೇ.94 ಕ್ಕೆ ಏರಿಕೆಯಾಗಿದೆ. ಕೃಷಿ ಲಾಬಿಗಳ ಬೆಂಬಲದೊಂದಿಗೆ, ಅಮೆರಿಕ ಸರ್ಕಾರವು ಶಿಕ್ಷಾರ್ಹ ವ್ಯಾಪಾರ ಸುಂಕಗಳನ್ನು ತಪ್ಪಿಸಲು ತನ್ನ ಎಥನಾಲ್ ಮಾರುಕಟ್ಟೆಯನ್ನು ತೆರೆಯುವಂತೆ ಭಾರತದ ಮೇಲೆ ಒತ್ತಡ ಹೇರಿದೆ. ಈ ಬೆದರಿಕೆಗೆ ಮಣಿದು, ದೇಶೀಯ ಉತ್ಪಾದನೆ ಹೆಚ್ಚಿದ್ದರೂ ಭಾರತವು ಅಮೆರಿಕದಿಂದ ಎಥನಾಲ್ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ ಮತ್ತು ಹೆಚ್ಚುವರಿ ದಾಸ್ತಾನನ್ನು ರಫ್ತು ಮಾಡಬಹುದಾದ ಮಾರುಕಟ್ಟೆಗಳನ್ನು ಹುಡುಕುತ್ತಿದೆ ಎಂದು ವರದಿಯಾಗಿದೆ.
ಕಳೆದ ಜುಲೈ 14 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಎಥನಾಲ್ ಮಿಶ್ರಣ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದ ಎಥನಾಲ್ ಇಂಧನ ಉತ್ಪಾದನೆಯು 2016 ರಲ್ಲಿ 450 ಮಿಲಿಯನ್ ಲೀಟರ್ಗಳಿಂದ 2025 ರಲ್ಲಿ 9,700 ಮಿಲಿಯನ್ ಲೀಟರ್ಗಳಿಗೆ ಗಣನೀಯವಾಗಿ ಏರಿಕೆಯಾಗಿದೆ; ಬಳಕೆಯ ಮಟ್ಟವು ಉತ್ಪಾದನೆಗೆ ಅನುಗುಣವಾಗಿಯೇ ಇದೆ. ಎಥನಾಲ್ ಮಿಶ್ರಣದ ಪ್ರಮಾಣವು 2016 ರಲ್ಲಿ ಕೇವಲ ಶೇ.1 ರಿಂದ 2024 ರಲ್ಲಿ ಶೇ.13 ಕ್ಕೆ, ಮತ್ತು 2026 ರಲ್ಲಿ ಶೇ.20 ಕ್ಕೆ ಸ್ಥಿರವಾಗಿ ಹೆಚ್ಚಾಗಿದೆ. ಆದಾಗ್ಯೂ, ದೇಶೀಯ ಉತ್ಪಾದನೆಯಲ್ಲಿನ ಈ ಭಾರಿ ಏರಿಕೆಯು ಆಮದನ್ನು ಕಡಿಮೆ ಮಾಡುವಲ್ಲಿ ತೀರಾ ಕಡಿಮೆ ಪರಿಣಾಮ ಬೀರಿದೆ. ಜೂನ್ 2026 ರಲ್ಲಿ, ಸರ್ಕಾರದ ಅಟಾರ್ನಿ ಜನರಲ್ ಭಾರತದ ಸುಪ್ರೀಂ ಕೋರ್ಟಿಗೆ, ಬಿಜೆಪಿ ಸರ್ಕಾರವು ಶೇ.20 ರಷ್ಟು ಎಥನಾಲ್ ಮಿಶ್ರಣದೊಂದಿಗೆ “ಪ್ರಯೋಗ” ನಡೆಸುತ್ತಿದೆ ಎಂದು ತಿಳಿಸಿದರು. ನಂತರ ಸರ್ಕಾರವು ಅಟಾರ್ನಿ ಜನರಲ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡರೂ, ಈ ಹೇಳಿಕೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಬಿಜೆಪಿ ಸರ್ಕಾರದ ಪರ ನಿಲುವು ಹೊಂದಿರುವ ಅನೇಕ ವಕ್ತಾರರೂ ಸೇರಿದಂತೆ ಕಾರು ಬಳಕೆದಾರರು, ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ವಿಶ್ಲೇಷಕರು ಈ ನೀತಿಯನ್ನು ಪ್ರಶ್ನಿಸಿದರು.
ಹೆಚ್ಚು ಲಾಭದಾಯಕವಾದ ಎಥನಾಲ್ ತಯಾರಿಕೆಗೆ ಕಬ್ಬಿನ ರಸದ ಹೆಚ್ಚಿನ ಭಾಗವನ್ನು ಬಳಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಏರಿಕೆಯಾಗಿದೆ. ಸಹಜವಾಗಿಯೇ ಸಕ್ಕರೆ ಉತ್ಪಾದನೆಯ ಪ್ರಮಾಣ ಕುಸಿದಿದೆ. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆಗಳ ಲಾಭದ ಪ್ರಮಾಣದಲ್ಲಿ ಯಾವುದೇ ಹೊಂದಾಣಿಕೆ ನಡೆಯುವುದಿಲ್ಲ. ಹೀಗಾಗಿ, ಇಲ್ಲಿಯೂ ಸಾಮಾನ್ಯ ಜನರೇ ಸಂಕಷ್ಟ ಅನುಭವಿಸಬೇಕು. ಅವರೇ ಸಕ್ಕರೆ ಖರೀದಿಸಲು ಹೆಚ್ಚಿನ ಹಣವನ್ನು ತೆರಬೇಕಾಗುತ್ತದೆ. ಮತ್ತು ಸಕ್ಕರೆ ಕಾರ್ಖಾನೆಗಳು ಅನುಭವಿಸುವ “ನಷ್ಟ”ವನ್ನು ಭರಿಸಬೇಕು.
ಆದ್ದರಿಂದ, ಎಥನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡುವ ನಿರ್ಧಾರದ ಹಿಂದೆ ಪಟ್ಟಭದ್ರರ ಹಿತಾಸಕ್ತಿ ಅಡಗಿದೆ. ಸಚಿವರು ಮತ್ತು ರಾಜಕೀಯ ಮುಖಂಡರಿಗೆ ಸಂಬಂಧಿಸಿದ ಕೈಗಾರಿಕಾ ಸಂಸ್ಥೆಗಳಿಗೆ ಲಾಭ ತಂದುಕೊಡುವುದು ಹಾಗೂ ಅಮೆರಿಕನ್ ಸಾಮ್ರಾಜ್ಯಶಾಹಿಯ ಓಲೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ಜನಪರವಾದುದು ಮತ್ತು ಪರಿಸರ ಪರವಾದುದು ಏನೂ ಇಲ್ಲ.
