ಇತಿಹಾಸದ ಯಾವುದೇ ವಿದ್ಯಾರ್ಥಿಗೆ ತಿಳಿದಿರುವಂತೆ, ಯುರೋಪಿನಲ್ಲಿ 19ನೇ ಶತಮಾನದಲ್ಲಿ ಬಂಡವಾಳವಾದಕ್ಕೆ ಅಡಿಪಾಯ ಹಾಕಿದ ನವೋದಯ ಮತ್ತು ಕೈಗಾರಿಕಾ ಕ್ರಾಂತಿಯ ನಂತರ, ವ್ಯಾಪಾರ ಮತ್ತು ವಸಾಹತುಶಾಹಿ ವಿಸ್ತರಣೆಯ ಹೊಸ ಯುಗ ಪ್ರಾರಂಭವಾಯಿತು. ಏಷ್ಯಾ ಮತ್ತು ಆಫ್ರಿಕಾಗಳಿಗೆ ಸರಕುಗಳನ್ನು ರಫ್ತು ಮಾಡಲಾಯಿತು. ಇಂಗ್ಲೆಂಡ್ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡರೆ, ಫ್ರಾನ್ಸ್ ಕೂಡ ಗಮನಾರ್ಹ ಪಾಲನ್ನು ಭದ್ರಪಡಿಸಿಕೊಂಡಿತು. ಈ ದಿಶೆಯಲ್ಲಿ ಫ್ರಾನ್ಸ್ 1858 ರಲ್ಲಿ ವಿಯೆಟ್ನಾಮನ್ನು ತನ್ನ ವಸಾಹತು ಮಾಡಿಕೊಂಡು 1945 ರವರೆಗೆ ಆಳಿತು.

ವಿಯೆಟ್ನಾಮಿನ ದುರಂತಮಯ ಇತಿಹಾಸ ವಿಯೆಟ್ನಾಂ ಆಗ್ನೇಯ ಏಷ್ಯಾದ ಒಂದು ಸಂಪದ್ಭರಿತ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯುಳ್ಳ ರಾಷ್ಟ್ರ. ಶತಮಾನಗಳ ಕಾಲ ಅದು ರಾಜರ ಆಳ್ವಿಕೆಯ ಜೊತೆಗೆ ನೆರೆಯ ದೇಶಗಳ ದಮನಕ್ಕೂ ಒಳಪಟ್ಟಿತ್ತು. ಫ್ರಾನ್ಸ್ ಅದನ್ನು 1858 ರಲ್ಲಿ ತನ್ನ ಅಧಿಪತ್ಯಕ್ಕೆ ಒಳಪಡಿಸಿ, ಅದರ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸುವ ಜೊತೆಗೆ, ಅದರ ಮಾರುಕಟ್ಟೆಯನ್ನೂ ಕಬಳಿಸಿತು. ಬಡತನ ಮತ್ತು ಅಸಮಾನತೆಯಿಂದ ಶೋಷಿತ ಜನತೆ ಕಂಗಾಲಾಗಿದ್ದರೆ, ಬೆರಳೆಣಿಕೆಯಷ್ಟು ಮಂದಿ ಎಲ್ಲಾ ಸಂಪತ್ತಿನ ಒಡೆಯರಾಗಿದ್ದರು. ಹೆಚ್ಚಿನ ಭೂಮಿ ಫ್ರೆಂಚ್ ವಸಾಹತುಗಾರರು ಮತ್ತು ಸ್ಥಳೀಯ ಜಮೀನ್ದಾರರ ಬಳಿ ಇತ್ತು. ಬಡ ರೈತರ ಬಳಿ ಇದ್ದದ್ದು ತುಂಡುಭೂಮಿ ಮಾತ್ರ. ಕೈಗಾರಿಕೀಕರಣ ಶೈಶವಾವಸ್ಥೆಯಲ್ಲಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಹಳವೇ ಹಿಂದುಳಿದಿದ್ದವು. ಮಹಾನ್ ಕ್ರಾಂತಿಕಾರಿ ಕಾಮ್ರೇಡ್ ಹೊ ಚಿ ಮಿನ್ ಉದಯ ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿ ಉದಯಿಸಿದವರು ಕಾಮ್ರೇಡ್ ಹೊ ಚಿ ಮಿನ್. 1911ರಲ್ಲಿ ಫ್ರಾನ್ಸ್ಗೆ ತೆರಳಿದ ಯುವಕ ಹೊ ಚಿ ಮಿನ್, ತಮ್ಮ ದೇಶ ವಸಾಹತುಶಾಹಿ ಆಡಳಿತದಿಂದ ಮುಕ್ತಿ ಪಡೆಯುವ ದಾರಿಯ ಹುಡುಕಾಟದಲ್ಲಿದ್ದಾಗ, ಈ ಯುಗದ ಮಹಾನ್ ತತ್ವಶಾಸ್ತ್ರವಾದ ಮಾರ್ಕ್ಸ್ವಾದ-ಲೆನಿನ್‌ವಾದವನ್ನು ಅಧ್ಯಯನ ಮಾಡಿದರು. ಸಾಮ್ರಾಜ್ಯಶಾಹಿ ಮತ್ತು ವಿಶ್ವ ಕಾರ್ಮಿಕವರ್ಗದ ಕ್ರಾಂತಿಯ ಈ ಯುಗದಲ್ಲಿ, ಮಾನವನಿಂದ ಮಾನವನ ಎಲ್ಲಾ ರೀತಿಯ ಶೋಷಣೆಯಿಂದ ವಿಮುಕ್ತಿಯನ್ನು ಸಾಧಿಸಲು ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯ ವಿಮೋಚನಾ ಹೋರಾಟವನ್ನು ಕಾರ್ಮಿಕ ವರ್ಗವೇ ಮುನ್ನಡೆಸಬೇಕು ಎಂಬ ಮಹಾನ್ ಲೆನಿನ್ ಅವರ ಬೋಧನೆಯನ್ನು ಸಹ ಮನಗಂಡರು. ಫ್ರಾನ್ಸ್ನಲ್ಲಿ ಇದ್ದಾಗಲೇ ಅವರು 1920 ರಲ್ಲಿ ಫ್ರೆಂಚ್ ಕಮ್ಯುನಿಸ್ಟ್ ಪಕ್ಷದ ಸಹ-ಸಂಸ್ಥಾಪಕರಾದರು. ಯುವ ವಯಸ್ಸಿನಲ್ಲಿಯೇ ಅವರು ಪ್ರದರ್ಶಿಸಿದ ಕಾರ್ಮಿಕ ವರ್ಗದ ಅಂತರರಾಷ್ಟ್ರೀಯತೆಯ ಚೈತನ್ಯ ಮತ್ತು ಅರಿವು ಎಂತಹುದು! ಅವರು 1924 ರಲ್ಲಿ ಮಾಸ್ಕೋದಲ್ಲಿ ನಡೆದ ಕೊಮಿನ್‌ಟರ್ನ್ನ ಐದನೇ ಕಾಂಗ್ರೆಸ್‌ನಲ್ಲಿಯೂ ಭಾಗವಹಿಸಿದ್ದರು.

ಫ್ರೆಂಚ್ ಮತ್ತು ಜಪಾನಿ ಸಾಮ್ರಾಜ್ಯಶಾಹಿಯ ವಿರುದ್ಧ ವಿಯೆಟ್ನಾಮಿನ ಯಶಸ್ವಿ ಹೋರಾಟ ನಂತರ, ಕಾಮ್ರೇಡ್ ಹೊ ಚಿ ಮಿನ್ 1940 ರಲ್ಲಿ ಹಾಂಗ್‌ಕಾಂಗ್‌ನಲ್ಲಿ ವಿಯೆಟ್ನಾಮಿನಲ್ಲಿ ಕಮ್ಯುನಿಸ್ಟ್ ಪಕ್ಷ, ‘ಕಮ್ಯುನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂ’ ಅನ್ನು (CPV) ಸ್ಥಾಪಿಸಿದರು. ಫ್ರೆಂಚ್ ವಸಾಹತುಶಾಹಿಯ ವಿರುದ್ಧ ಹೋರಾಡಿ ಸ್ವಾತಂತ್ರö್ಯ ಗಳಿಸಲು, ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಕಾರ್ಮಿಕ ವರ್ಗದೊಂದಿಗೆÀ ಎಲ್ಲಾ ರಾಷ್ಟ್ರೀಯತಾವಾದಿ ಶಕ್ತಿಗಳ ಮೈತ್ರಿ ಅಗತ್ಯ ಎಂದವರು ಮನಗಂಡರು. ಹಾಗಾಗಿ, 1941 ರಲ್ಲಿ, ಎರಡನೇ ಮಹಾಯುದ್ಧವು ತನ್ನ ಉತ್ತುಂಗದಲ್ಲಿದ್ದಾಗ, ಅವರು ವಿಯೆಟ್ನಾಮಿಗೆ ಹಿಂದಿರುಗಿ ರಾಷ್ಟ್ರೀಯ ವಿಮೋಚನೆಗಾಗಿ ಹೋರಾಡುತ್ತಿರುವ ವಿವಿಧ ಶಕ್ತಿಗಳನ್ನು ಒಗ್ಗೂಡಿಸಿ ವಿಯೆಟ್ ಮಿನ್ ಸ್ವಾತಂತ್ರ್ಯ ಚಳುವಳಿಯನ್ನು ಹರಿಬಿಟ್ಟರು. 1940 ರಲ್ಲಿ 2ನೇ ವಿಶ್ವಯುದ್ಧದ ಸಮಯದಲ್ಲಿ ಫ್ರಾನ್ಸ್ ಬದಲಿಗೆ ತನ್ನನ್ನು ಆಕ್ರಮಿಸಿದ್ದ ಜಪಾನ್ ವಿರುದ್ಧ ವಿಯೆಟ್ ಮಿನ್ ಹೋರಾಡಿತು ಮತ್ತು ಇದೇ ಗತಿಯಲ್ಲಿ ಮುಂದುವರೆದು 1945 ರಲ್ಲಿ ಸ್ವಾತಂತ್ರ್ಯ ಘೋಷಿಸಿ ವಿಯೆಟ್ನಾಂ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸ್ಥಾಪಿಸಿತು ಹಾಗೂ ಕಾಮ್ರೇಡ್ ಹೊ ಚಿ ಮಿನ್ ಅದರ ಮೊದಲ ಅಧ್ಯಕ್ಷರಾದರು. ಆದರೆ, 1945 ರಲ್ಲಿ ಜಪಾನಿನ ಸೋಲಿನ ನಂತರ, ದೇಶದ ಕೆಲವೆಡೆಗಳಲ್ಲಿ ಮತ್ತೊಮ್ಮೆ ನೆಲೆಯೂರಿದ್ದ ಫ್ರೆಂಚ್ ವಸಾಹತುಶಾಹಿಯ ವಿರುದ್ಧ 1946 ರಲ್ಲಿ ಕಾಮ್ರೇಡ್ ಹೊ ಚಿ ಮಿನ್ ನೇತೃತ್ವದಲ್ಲಿ ವಿಯೆಟ್ ಮಿನ್ ಯುದ್ಧ ಘೋಷಿಸಿತು, ಇದನ್ನು ಇತಿಹಾಸದಲ್ಲಿ ಮೊದಲ ಇಂಡೋಚೈನಾ ಯುದ್ಧ ಎಂದು ಹೆಸರಿಸಲಾಗಿದೆ. 1954 ರ ‘ಡಿಯೆನ್ ಬಿಯೆನ್ ಫು’ ಕದನದಲ್ಲಿ ಜನರಲ್ ವೋ ನ್ಗುಯೆನ್ ಗಿಯಾಪ್ ಅವರ ನೇತೃತ್ವದಲ್ಲಿ ವಿಯೆಟ್ನಾಂ ಪಡೆಗಳು ಫ್ರೆಂಚ್ ಸೈನ್ಯವನ್ನು ಸೋಲಿಸಿದವು. ಇದು ವಿಯೆಟ್ನಾಂನಿಂದ ಫ್ರೆಂಚ್ ಸಾಮ್ರಾಜ್ಯಶಾಹಿಯನ್ನು ಓಡಿಸಿತು. ಆದರೆ ಜಿನಿವಾ ಒಪ್ಪಂದದ ಮೂಲಕ ಸಾಮ್ರಾಜ್ಯಶಾಹಿ ಶಕ್ತಿಗಳು ದೇಶವನ್ನು ಉತ್ತರ (ವಿಯೆಟ್ನಾಂ ಪ್ರಜಾಸತ್ತಾತ್ಮಕ ಗಣರಾಜ್ಯ) ಮತ್ತು ದಕ್ಷಿಣ (ವಿಯೆಟ್ನಾಂ ರಾಜ್ಯ) ಭಾಗಗಳಾಗಿ ವಿಭಜಿಸಿದವು. ಉತ್ತರ ವಿಯೆಟ್ನಾಂ, ಸಿಪಿವಿ ಪಕ್ಷದ ನೇತೃತ್ವದ, ಹೊ ಚಿ ಮಿನ್ ನಾಯಕತ್ವದ ಸಮಾಜವಾದಿ ಸರ್ಕಾರದ ಆಡಳಿತಕ್ಕೆ ಒಳಪಟ್ಟರೆ, ದಕ್ಷಿಣವನ್ನು ಅಮೆರಿಕಾ ಬೆಂಬಲಿತ ಕೈಗೊಂಬೆ ಥಿಯು ನ್ಗೊ ದಿನ್ಹ್ ಡಿಯೆಮ್ ಆಳಿದರು. ದಕ್ಷಿಣ ವಿಯೆಟ್ನಾಂ, ಅಮೆರಿಕಾದ ಆರ್ಥಿಕ ಮತ್ತು ಮಿಲಿಟರಿ ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ತ್ವರಿತ ನಗರೀಕರಣದೊಂದಿಗೆ ಸೈಗಾನ್‌ನಂತಹ ನಗರಗಳು ಅಭಿವೃದ್ಧಿ ಹೊಂದಿದವು. ಆದರೆ, ಆರ್ಥಿಕ ಅಸಮಾನತೆ ಕಣ್ಣು ಕುಕ್ಕುವಂತಿತ್ತು. ಅಸಂಖ್ಯಾತ ರೈತರು ಭೂರಹಿತರಾಗಿ ಉಳಿದಿದ್ದರೆ ಭೂ ವಿತರಣೆ ಅಸಮಾನವಾಗಿಯೇ ನಡೆಯಿತು. ಸೀಮಿತ ಹೂಡಿಕೆ ಮತ್ತು ಮೂಲಸೌಕರ್ಯಗಳ ಕೊರತೆಯ ಕಾರಣ, ಕೈಗಾರಿಕಾ ಬೆಳವಣಿಗೆ ಕಾಣಲಿಲ್ಲ. ಹೆಚ್ಚಿದ ಹಣದುಬ್ಬರ, ನಿರುದ್ಯೋಗ ಮತ್ತು ಸಾಮಾಜಿಕ ಅಶಾಂತಿ, ಇವುಗಳಿಂದ ದೇಶ ನಲುಗಿ ಹೋಯಿತು. ಅಷ್ಟಲ್ಲದೆ, ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು ಅಸ್ಥಿರತೆಗಳೂ ಜನರನ್ನು ಕಾಡಿದವು. ಇಂತಹ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಕಮ್ಯುನಿಸ್ಟರು ಮತ್ತು ವಿಮೋಚನಾ ಶಕ್ತಿಗಳ ಮೈತ್ರಿಯಾದ ವಿಯೆಟ್ ಕಾಂಗ್‌ಗೆ ಬೆಂಬಲ ಬೆಳೆಯುತ್ತಾ, ಬಹುನಿರೀಕ್ಷಿತ ಅಂತಿಮ ಕ್ರಾಂತಿಗೆ ಸಮಯ ಸನ್ನಿಹಿತವಾಯಿತು. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರುದ್ಧ ವೀರಾವೇಶದ ಹೋರಾಟ ಅಮೆರಿಕನ್ ಸಾಮ್ರಾಜ್ಯಶಾಹಿ ಬೆಂಬಲಿತ ಥಿಯು ಆಡಳಿತದ ವಿರುದ್ಧ ದಕ್ಷಿಣ ವಿಯೆಟ್ನಾಂನಲ್ಲಿ ನಡೆದ ವಿಯೆಟ್ ಕಾಂಗ್ ನೇತೃತ್ವದ 20 ವರ್ಷಗಳ ಕ್ರಾಂತಿಕಾರಿ ಯುದ್ಧದ ಗಾಥೆ ಒಂದು ದಂತಕತೆಯೇ ಸರಿ. ಅಮೆರಿಕನ್ ಸಾಮ್ರಾಜ್ಯಶಾಹಿಗಳು ವಿಯೆಟ್ನಾಂ ಅನ್ನು ಅಧೀನಗೊಳಿಸಲು ಪರಮಾಣು ಬಾಂಬ್‌ಗಳನ್ನು ಹೊರತುಪಡಿಸಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಳಸಿದರು, ಲಕ್ಷಾಂತರ ವಿಯೆಟ್ನಾಮೀ ಜೀವಗಳನ್ನು ಬಲಿ ತೆಗೆದುಕೊಂಡರು. ಅವರು ಅತ್ಯಂತ ವಿನಾಶಕಾರಿ ಬೆಂಕಿ ಉಗುಳುವ ನಾಪಾಮ್ ಬಾಂಬ್‌ಗಳನ್ನು ಸಹ ಬಳಸಿದರು ಮತ್ತು ದೇಶವನ್ನು ಧ್ವಂಸಗೊಳಿಸಿದರು. ವಿಯೆಟ್ನಾಂನ ಧೀರ ಹೋರಾಟಗಾರರನ್ನು ಬಗ್ಗುಬಡಿಯಲು ಅಂತರರಾಷ್ಟ್ರೀಯ ಕಾನೂನಿನ ನಿಯಮಗಳನ್ನು ಉಲ್ಲಂಘಿಸಲಾಯಿತು. ಅವರು ಸಶಸ್ತ್ರ ಹೋರಾಟಗಾರರ ನೆಲೆÀಗಳನ್ನು ಮಾತ್ರವಲ್ಲದೆ ವಸತಿ ಸ್ಥಳಗಳು, ಆಸ್ಪತ್ರೆಗಳು ಮತ್ತು ಶಾಲೆಗಳ ಮೇಲೂ ಬಾಂಬ್ ದಾಳಿ ಮಾಡಿದರು ಮತ್ತು ನಾಗರಿಕರನ್ನು ಕೊಂದರು. ಇಡೀ ಜಗತ್ತು ಇದನ್ನು ಯುದ್ಧಾಪರಾಧ ಎಂದು ಖಂಡಿಸಿತು. ಇಂತಹ ಕೃತ್ಯಗಳಲ್ಲಿ ಅಮೆರಿಕಾ ಸಾಮ್ರಾಜ್ಯಶಾಹಿಯ ಪರಿಣಿತಿ ಎಲ್ಲರಿಗೆ ತಿಳಿದಿರುವಂಥಾದ್ದೇ! ವಿಯೆಟ್ನಾಂ ಅವರಿಗೆ ಮೊದಲ ಗುರಿಯೂ ಆಗಿರಲಿಲ್ಲ್ಲ ಅಥವಾ ಕೊನೆಯದೂ ಅಲ್ಲ, ಅವರ ಕೈಗಳು ಇಡೀ ಪ್ರಪಂಚದ ಲಕ್ಷಾಂತರ ನಾಗರಿಕರ ರಕ್ತದಿಂದ ಕಲೆಗಟ್ಟಿವೆ. 20 ವರ್ಷಗಳಷ್ಟು ಸುದೀರ್ಘ ಕಾಲ ನಡೆದು ಅತಿ ಹೆಚ್ಚು ಜೀವಗಳ ನಾಶಕ್ಕೆ ಕಾರಣವಾದ ಈ ಯುದ್ಧವನ್ನು ತಪ್ಪಿಸಬಹುದಾಗಿತ್ತು ಎನ್ನುವುದು ಅತ್ಯಂತ ಖೇದಕರ. ಎರಡನೇ ಮಹಾಯುದ್ಧದ ನಂತರ, ಮಹಾನ್ ಸ್ಟಾಲಿನ್ ಅವರ ಅಮೋಘ ನಾಯಕತ್ವದಲ್ಲಿ ಸೋವಿಯತ್ ಜನತೆ ಮತ್ತು ಕೆಂಪು ಸೇನೆ, ಜರ್ಮನಿಯನ್ನು ಸೋಲಿಸುವುದರೊಂದಿಗೆ, ಪೂರ್ವ ಯುರೋಪ್‌ನ ಹಲವಾರು ದೇಶಗಳು ಸಮಾಜವಾದವನ್ನು ಅಪ್ಪಿಕೊಂಡವು. ಹಾಗೆಯೇ ಮಹಾನ್ ಮಾವೋ e಼ೆಡಾಂಗ್ ನೇತೃತ್ವದಲ್ಲಿ ಚೀನಾ ಕೂಡ ಸಮಾಜವಾದದ ಕಡೆಗೆ ಸಾಗುತ್ತಿತ್ತು. ಕ್ಯೂಬಾ ಮತ್ತು ಅಲ್ಬೇನಿಯಾ ಕೂಡ ಸಮಾಜವಾದವನ್ನು ಸ್ಥಾಪಿಸುವ ಹಾದಿಯಲ್ಲಿದ್ದವು. ಪ್ರಪಂಚದ ಮೂರನೇ ಒಂದು ಭಾಗವು ಕೆಂಪಾಗಿತ್ತು. ಆದರೆ 1953ರಲ್ಲಿ ಮಹಾನ್ ಸ್ಟಾಲಿನ್ ನಿಧನದ ನಂತರ, ಕ್ರುಶ್ಚೆವ್ ನೇತೃತ್ವದಲ್ಲಿ ಸೋವಿಯತ್ ಒಕ್ಕೂಟ ಪರಿಷ್ಕರಣವಾದದ ದಾರಿ ಹಿಡಿಯಿತು; ಸಾಮ್ರಾಜ್ಯಶಾಹಿಗಳನ್ನು ನೇರವಾಗಿ ಎದುರಿಸುವ ಬದಲು, ಸೋವಿಯತ್ ಒಕ್ಕೂಟ, ‘ಪರಮಾಣು ಯುದ್ಧ ಭೀತಿ’ಯಿಂದ ಸಾಮ್ರಾಜ್ಯಶಾಹಿಗಳೊಂದಿಗೆ ಕೈಜೋಡಿಸಲು ಪ್ರಾರಂಭಿಸಿತು. ವಿಶ್ವಯುದ್ಧದ ಭೀತಿಯಿಂದ ಸೋವಿಯತ್ ನಾಯಕತ್ವವು ಬಾಯುಪಚಾರಕ್ಕೆ ವಿಯೆಟ್ನಾಮಿಗೆ ಬೆಂಬಲವನ್ನು ಘೋಷಿಸುತ್ತಿದ್ದರೂ, ಅದಕ್ಕೆ ಸಂಪೂರ್ಣ ಬೆಂಬಲವನ್ನು ನೀಡಲಿಲ್ಲ. ನಮ್ಮ ಪಕ್ಷ ಎಸ್‌ಯುಸಿಐ(ಸಿ) ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳೂ, ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸ್ವಾದಿಗಳೂ ಆದ ಕಾಮ್ರೇಡ್ ಶಿವದಾಸ್ ಘೋಷ್‌ರವರು ವಿಶ್ಲೇಷಿಸಿದಂತೆ, ಮಾರುಕಟ್ಟೆಯನ್ನು ಕಬಳಿಸುವ ಯೋಜನೆಯುಳ್ಳ ಸಾಮ್ರಾಜ್ಯಶಾಹಿಗಳು ವಿಶ್ವವನ್ನು ನಾಶ ಪಡಿಸಲು ಎಂದೂ ಯೋಚಿಸಲಾರರು; ಅವರು ಪರಮಾಣು ಯುದ್ಧದ ಭೀತಿ ಮಾತ್ರ ಹರಡುತ್ತಾರೆ. ಹಾಗಾಗಿ, ಸೋವಿಯತ್ ಒಕ್ಕೂಟದಲ್ಲಿ ನೈಜ ಕಮ್ಯುನಿಸ್ಟ್ ನಾಯಕತ್ವವಿದ್ದಿದ್ದರೆ ಈ ಯುದ್ಧದ ಅವಧಿಯನ್ನು ಕಡಿಮೆ ಮಾಡಬಹುದಿತ್ತು ಮತ್ತು ಅನಗತ್ಯ ರಕ್ತಪಾತವನ್ನು ತಪ್ಪಿಸಬಹುದಿತ್ತು. ಆದಾಗ್ಯೂ ಮಹಾನ್ ಮಾವೋ e಼Éಡಾಂಗ್ ನೇತೃತ್ವದಲ್ಲಿ ಚೀನಾ, ಅಮೆರಿಕಾ ವಿರುದ್ಧದ ವಿಯೆಟ್ನಾಂ ಯುದ್ಧವನ್ನು ಸಂಪೂರ್ಣವಾಗಿ ಬೆಂಬಲಿಸಿತು. ಆದರೂ ಚೀನಾದ ಸೀಮಿತ ಸಂಪನ್ಮೂಲಗಳಿಗೆ ಹೋಲಿಸಿದರೆ ಸೋವಿಯತ್ ಒಕ್ಕೂಟ ನೀಡಬಹುದಾಗಿದ್ದ ಬೆಂಬಲ ಬೃಹತ್ ಪ್ರಮಾಣದ್ದಾಗಿರುತ್ತಿತ್ತು. ಅಷ್ಟಿದ್ದರೂ, ಪ್ರಪಂಚದಾದ್ಯಂತದ ಜನರು ವಿಯೆಟ್ನಾಂ ಯುದ್ಧವನ್ನು ಸಂಪೂರ್ಣವಾಗಿ ಬೆಂಬಲಿಸಿದರು ಮತ್ತು ಅಮೆರಿಕಾವನ್ನು ಸಾರಾಸಗಟಾಗಿ ವಿರೋಧಿಸಿದರು. 1968 ರಲ್ಲಿ ಉತ್ತರ ವಿಯೆಟ್ನಾಂ ಸೇನೆ ಮತ್ತು ವಿಯೆಟ್ ಕಾಂಗ್ ಜಂಟಿಯಾಗಿ ಪ್ರಾರಂಭಿಸಿದ ಟೆಟ್ (ವಿಯೆಟ್ನಾಂನ ಚಂದ್ರಮಾನ ಹೊಸ ವರ್ಷದ ದಿನ - ಜನವರಿ 30, 1968) ಆಕ್ರಮಣವು ಅಮೆರಿಕಾ ಸೈನ್ಯಕ್ಕೂ ಹಾಗೂ ದಕ್ಷಿಣ ವಿಯೆಟ್ನಾಂ ಸರ್ಕಾರಕ್ಕೂ ಹಿನ್ನಡೆಯನ್ನು ಸೃಷ್ಟಿಸಿತು ಎಂಬುದನ್ನು ಇಲ್ಲಿ ದಾಖಲಿಸಬೇಕು. ಈ ಜಂಟಿ ಕಾರ್ಯಾಚರಣೆ ದಕ್ಷಿಣ ವಿಯೆಟ್ನಾಂ ಮೇಲೆ ನಡೆಸಿದ ಬೃಹತ್ ದಾಳಿಯಾಗಿತ್ತು. ಅಮೆರಿಕಾ ಈ ದಾಳಿಗೆ ಪ್ರತೀಕಾರ ತೀರಿಸಿಕೊಂಡರೂ, ಟೆಟ್ ಆಕ್ರಮಣವು ವಿಯೆಟ್ನಾಂನಲ್ಲಿ ಅಮೆರಿಕಾ ಹಸ್ತಕ್ಷೇಪದ ಅಂತ್ಯಕ್ಕೆ ಮುನ್ನುಡಿ ಬರೆಯಿತು. ಏಕೆಂದರೆ ಈ ಅನ್ಯಾಯಯುತ ಯುದ್ಧಕ್ಕೆ ತಮ್ಮ ಮಕ್ಕಳನ್ನು ಕಳುಹಿಸುವ ಬಲವಂತಕ್ಕೆ ಒಳಗಾದ ಅಮೆರಿಕಾದ ಜನತೆ ಈ ಯುದ್ಧದಿಂದ ಬೇಸತ್ತಿದ್ದರು ಮತ್ತು ಅದರ ಅಂತ್ಯಕ್ಕೆ ಹಾತೊರೆಯುತ್ತಿದ್ದರು. ಅಮೆರಿಕಾ ಸರ್ಕಾರ ಯುದ್ಧದ ಅಂತ್ಯವು ಹತ್ತಿರದಲ್ಲಿದೆ ಎಂದು ಜನರಿಗೆ ಮನವರಿಕೆ ಮಾಡುತ್ತಲೇ ಇತ್ತು. ಆದರೆ ಈ ಬೃಹತ್ ಟೆಟ್ ಆಕ್ರಮಣವು ವಿಯೆಟ್ನಾಂ ಜನರ ಪ್ರತಿರೋಧವು ಸಾಕಷ್ಟು ಪ್ರಬಲವಾಗಿದೆ ಮತ್ತು ಅಂತ್ಯ ಎಲ್ಲಿಯೂ ಕಾಣಿಸುತ್ತಿಲ್ಲ ಎಂಬ ವಾಸ್ತವಕ್ಕೆ ಅಮೆರಿಕಾದ ಜನರ ಕಣ್ಣನ್ನು ತೆರೆಯಿತು. ಈ ಅನ್ಯಾಯಯುತ, ಅಂತ್ಯವಿಲ್ಲದ ಯುದ್ಧದ ವಿರುದ್ಧ ಅಮೆರಿಕಾದಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಯುದ್ಧ-ವಿರೋಧಿ ಪ್ರದರ್ಶನಗಳು ದೇಶವನ್ನು ಅಲುಗಾಡಿಸಿದವು. ಬರ್ಟ್ರೆಂಡ್ ರಸೆಲ್, ಜೀನ್ ಪಾಲ್ ಸಾರ್ತ್ರೆ ಮತ್ತಿತರ ಅಸಂಖ್ಯಾತ ಪ್ರತಿಷ್ಠಿತ ವ್ಯಕ್ತಿಗಳು ಈ ಅತ್ಯಂತ ಅನ್ಯಾಯುತ ಕ್ರೂರ ವಿನಾಶಕಾರಿ ಯುದ್ಧದ ವಿರುದ್ಧ ಬೀದಿಗಿಳಿದರು. ಅಂತಿಮವಾಗಿ, 1973 ರ ಪ್ಯಾರಿಸ್ ಶಾಂತಿ ಒಪ್ಪಂದವು ಅಮೆರಿಕಾದ ದಾಳಿಗೆ ಅಧಿಕೃತವಾಗಿ ಅಂತ್ಯ ಹಾಕಿತು. ಉತ್ತರ ವಿಯೆಟ್ನಾಂ ಪಡೆಗಳು ಏಪ್ರಿಲ್ 30, 1975 ರಂದು ಸೈಗಾನ್ ಅನ್ನು ವಶಪಡಿಸಿಕೊಂಡು ವಿಯೆಟ್ನಾಂ ಅನ್ನು ಮತ್ತೆ ಏಕೀಕರಿಸಿದವು. ವಿಯೆಟ್ನಾಂ ಸಮಾಜವಾದಿ ಗಣರಾಜ್ಯವನ್ನು ಸ್ಥಾಪಿಸಲಾಯಿತು, ಶಕ್ತಿಶಾಲಿ ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಕಮ್ಯುನಿಸ್ಟರ ನೇತೃತ್ವದಲ್ಲಿ ವಿಯೆಟ್ನಾಂ ಜನರ ಬೃಹತ್ ಯುದ್ಧವು ಪ್ರಪಂಚದಾದ್ಯಂತ ದುಡಿಯುವ ಜನರಿಗೆ ಮಹಾನ್ ಪಾಠಗಳನ್ನು ಕಲಿಸಿದೆ. ಈ ಯುದ್ಧವನ್ನು ಮತ್ತು ವಿಯೆಟ್ನಾಂ ಜನರು ವಹಿಸಿದ ವೀರೋಚಿತ ಪಾತ್ರವನ್ನು ಉಲ್ಲೇಖಿಸುತ್ತಾ, ಕಾಮ್ರೇಡ್ ಶಿವದಾಸ್ ಘೋಷ್ ಹೇಳಿದರು: “ಈ ಹೋರಾಟವು ಹಸಿವಿನಿಂದ ಬಳಲುತ್ತಿರುವ ರಾಷ್ಟ್ರವೂ ಸಹ ತನ್ನ ನೈತಿಕ ಬೆನ್ನೆಲುಬು ಬಲವಾಗಿದ್ದರೆ ಅನ್ಯಾಯದ ವಿರುದ್ಧ ಹೇಗೆ ನಿಲ್ಲಬಲ್ಲದು ಎಂಬುದನ್ನು ಕಲಿಸುತ್ತದೆ, ಆದರೆ ಅದಿಲ್ಲದಿದ್ದರೆ ಎಲ್ಲವೂ ಕಳೆದುಹೋದಂತೆ!” ಇದು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯಶಾಹಿ ಶಕ್ತಿಗೆ ಉಂಟಾದ ದೊಡ್ಡ ಸೋಲು ಮತ್ತು ಮಾರ್ಕ್ಸ್ವಾದ-ಲೆನಿನ್‌ವಾದದ ಉದಾತ್ತ ಸಿದ್ಧಾಂತ ಹಾಗೂ ಮಹಾನ್ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಹೊ ಚಿ ಮಿನ್ ಅವರ ಮಾರ್ಗದರ್ಶನದಲ್ಲಿ ವಿಶ್ವದ ಅತ್ಯಂತ ದುರ್ಬಲ ರಾಷ್ಟ್ರವೊಂದು ಸಾಧಿಸಿದ ಮಹಾನ್ ಯಶಸ್ಸಾಗಿತ್ತು! ವಿಶ್ವದ ಅತ್ಯಂತ ಪ್ರಬಲ ಶಕ್ತಿಶಾಲಿಯನ್ನು ಸೋಲಿಸಲು ಅತಿ ಮಾನುಷ ಪ್ರಯತ್ನಗಳು ಅಮೆರಿಕಾ ವಿರುದ್ಧದ ವಿಯೆಟ್ನಾಂ ವಿಜಯ, ತಾಂತ್ರಿಕವಾಗಿ ದುರ್ಬಲವಾಗಿದ್ದ ಒಂದು ಶಕ್ತಿಯು ಸೃಜನಶೀಲತೆ, ಭೂಪ್ರದೇಶದ ಬಳಕೆ ಮತ್ತು ಮಾನಸಿಕ ಧಾರಕಶಕ್ತಿಯ ಮೂಲಕ ಮಹಾಶಕ್ತಿಯೊಂದಕ್ಕೆ ಸೆಡ್ಡುಹೊಡೆದು ಅದನ್ನು ಮಣ್ಣುಮುಕ್ಕಿಸಿದ್ದ ಒಂದು ಅಭೂತಪೂರ್ವ ವಿದ್ಯಮಾನ! ಅವರು ತಮ್ಮ ನೆಲವನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡು, ನಾಗರಿಕರನ್ನು ಬೆನ್ನೆಲುಬಾಗಿ ಪರಿವರ್ತಿಸಿಕೊಂಡರು. ವಿಯೆಟ್ನಾಂ ಬಳಸಿದ ರಣತಂತ್ರ - ‘ದೌ ಟ್ರಾನ್’ ಸಂಘರ್ಷ ಉತ್ತರ ವಿಯೆಟ್ನಾಮಿನ ರಣತಂತ್ರವನ್ನು ರೂಪಿಸಿದ್ದು ಜನರಲ್ ವೊ ನ್ಗುಯೆನ್ ಗಿಯಾಪ್. ಇದು ಕೇವಲ ಮಿಲಿಟರಿ ಬಳಸಿ ನಡೆಸಿದ್ದ ಸಮರ ಮಾತ್ರವಲ್ಲದೆ, ಸಂಪೂರ್ಣ ರಣತಂತ್ರವಾಗಿತ್ತು. ಅವರದನ್ನು ದೌ ಟ್ರಾನ್ (ಸಂಘರ್ಷ) ಎಂದು ಕರೆದರು. ಇದರಲ್ಲಿದ್ದ ಎರಡು ಭಾಗಗಳೆಂದರೆ, ಸಶಸ್ತ್ರ ಸಂಘರ್ಷ ಮತ್ತು ರಾಜಕೀಯ ಸಂಘರ್ಷ. ಅದರ ಗುರಿ, ಅಮೆರಿಕಾ ಸೈನ್ಯವನ್ನು ನಾಶಮಾಡುವುದಲ್ಲ - ಅದು ಅಸಾಧ್ಯವಾಗಿತ್ತು - ಆದರೆ ಅಮೆರಿಕಾದ ರಾಜಕೀಯ ಇಚ್ಛಾಶಕ್ತಿಯನ್ನು ಮುರಿದು ಮುನ್ನಡೆಯುವುದು. ಅವರ ಕಾರ್ಯವಿಧಾನ ಅಮೆರಿಕಾದ ವಾಯುಸೇನೆ ಮತ್ತು ಫಿರಂಗಿದಳ ಬಲಿಷ್ಠವಾಗಿದ್ದು, ಅವರ ವಿಜಯ ಖಾತರಿ ಎನ್ನುವ ಕಡೆಗಳಲ್ಲಿ ವಿಯೆಟ್ನಾಮಿಯರು ಅವರೊಡನೆ ದೊಡ್ಡ ಯುದ್ಧಗಳಲ್ಲಿ ತೊಡಗಲಿಲ್ಲ. ಬದಲಿಗೆ, ‘ವೈರಿ ನೆಲೆ’ಗಳಿಗೇ ಅಂಟಿಕೊಂಡು ಅಮೆರಿಕಾದ ಸೈನ್ಯಕ್ಕೆ ಎಷ್ಟು ಹತ್ತಿರದಲ್ಲಿ ಕಾರ್ಯ ನಿರ್ವಹಿಸಿದರೆಂದರೆ, ಅಮೆರಿಕಾ ವಾಯುಸೇನೆ, ತಮ್ಮದೇ ಸೈನಿಕರ ಮೇಲೆರಗದೆ ಶತ್ರುವಿನ ಮೇಲೆ ದಾಳಿ ಮಾಡುವುದು ಸಾಧ್ಯವೇ ಇರಲಿಲ್ಲ. ಅವರು ತಮ್ಮ ವೈರಿಯ ಮನೋಸ್ಥೆೈರ್ಯಕ್ಕೆ ಹೊಡೆತ ನೀಡಲು ಬಳಸಿದ ಕೆಲವೊಂದು ಮೇಧಾವಿ, ಅನನ್ಯ ತಂತ್ರಗಳೆಂದರೆ: ಗೆರಿಲ್ಲಾ ಯುದ್ಧ ವಿಯೆಟ್ ಕಾಂಗ್ ಸಣ್ಣ, ಚಲನಶೀಲ ತುಕಡಿಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಹಠಾತ್ ದಾಳಿಗಳನ್ನು ನಡೆಸಿ ತಕ್ಷಣ ಕಣ್ಮರೆಯಾಗುತ್ತಿತ್ತು. ಅನೇಕ ವೇಳೆ ಅವರು ನಾಗರಿಕರ ವೇಷದಲ್ಲಿರುವುದರಿಂದ, ಅಮೆರಿಕಾ ಪಡೆಗಳಿಗೆ ಸ್ನೇಹಿತರು ಯಾರು, ಶತ್ರುಗಳು ಯಾರು ಎಂದು ಗುರುತಿಸಲಾಗದೆ, ಅವರು ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿರಬೇಕಾಯಿತು. ಈ ಕ್ರಾಂತಿಕಾರಿ ಯೋಧರಲ್ಲಿ ಹೆಚ್ಚಿನವರು ಹಳ್ಳಿಗರು, ಪುರುಷರು ಮತ್ತು ಮಹಿಳೆಯರು - ಹಗಲಿನಲ್ಲಿ ರೈತರು ಅಥವಾ ಮೀನುಗಾರರು ಮತ್ತು ರಾತ್ರಿಯಲ್ಲಿ ಹೋರಾಟಗಾರರು. ಆಹಾರ, ಆಶ್ರಯ ಮತ್ತು ಗುಪ್ತಚರ ಮಾಹಿತಿಗಾಗಿ ಅವರಿಗೆ ಸ್ಥಳೀಯರ ಬೆಂಬಲವಿತ್ತು. ಹೀಗೆ ವಿಯೆಟ್ ಕಾಂಗ್ ಗ್ರಾಮಸ್ಥರನ್ನೇ ಹೋರಾಟಗಾರರನ್ನಾಗಿ ಪರಿವರ್ತಿಸಿತು. ಅವರು ಸಮವಸ್ತ್ರ ಧರಿಸದ ದೊಡ್ಡ ಸೈನ್ಯವಾಗಿದ್ದರು - ಬಯಲಿನಲ್ಲಿಯೇ ಮರೆಯಾಗಿದ್ದ ಅದೃಶ್ಯ ಸೈನಿಕರು. “ಶತ್ರು ಮುನ್ನುಗ್ಗಿದಾಗ ನಾವು ಹಿಮ್ಮೆಟ್ಟುತ್ತೇವೆ; ಶತ್ರು ಶಿಬಿರಗಳಲ್ಲಿ ನಾವು ಕಿರುಕುಳ ನೀಡುತ್ತೇವೆ; ಶತ್ರು ದಣಿದಾಗ ನಾವು ದಾಳಿ ಮಾಡುತ್ತೇವೆ” ಎಂಬ ತತ್ವವನ್ನು ಅವರು ಅನುಸರಿಸಿದರು. ವಾಸ್ತವದಲ್ಲಿ ಇಡೀ ದೇಶವೇ ಯುದ್ಧದಲ್ಲಿ ಮುಳುಗಿತ್ತು; ಪ್ರತಿಯೊಬ್ಬ ಹಳ್ಳಿಗ, ಪ್ರತಿಯೊಂದು ಸುರಂಗ, ರಾತ್ರಿಯ ನೆರಳು, ಇವೆಲ್ಲವೂ ಅಮೆರಿಕಾ ವಿರುದ್ಧದ ಅಸ್ತ್ರಗಳೇ! ರಾತ್ರಿ ಕಾರ್ಯಾಚರಣೆಗಳು ಅವರು ಕತ್ತಲೆಯ ಮುಸುಕಿನಲ್ಲಿ ತಮ್ಮ ಟ್ರಕ್‌ಗಳನ್ನು, ಪೋರ್ಟರ್‌ಗಳನ್ನು, ಇಡೀ ಸೈನ್ಯವನ್ನು ವೈರಿಗೆ ಕಾಣದಂತೆ ಮುನ್ನಡೆಸುತ್ತಾ, ತಮ್ಮ ಹೆಚ್ಚಿನ ದಾಳಿಗಳನ್ನು ಹೀಗೇ ನಡೆಸಿ ವೈರಿಗೆ ಆಘಾತ ಕೊಟ್ಟರು. ಅಮೆರಿಕಾ ಸೈನಿಕರು ಇರುವ ನೆಲೆಗಳ ಬಳಿಯೇ ಈ ಯೋಧರು ತೆವಳುತ್ತಾ ಹೋಗಿ ಅಷ್ಟು ಹತ್ತಿರದಿಂದಲೇ ದಾಳಿ ಮಾಡುವುದರಿಂದ ವೈರಿಗಳಿಗೆ ತಮ್ಮದೇ ಸೈನಿಕರನ್ನು ಗುರಿಯಾಗಿಸದೆ ಈ ಯೋಧರನ್ನು ಎದುರಿಸಲಾಗಲಿಲ್ಲ. ವಿಯೆಟ್ ಕಾಂಗ್ ಯೋಧರು ರಾತ್ರಿಯಿಡೀ ಆಗಾಗ, ಅನಿಯಮಿತವಾಗಿ ತಮ್ಮ ಮಶೀನ್ ಗನ್‌ಗಳಿಂದ ದಾಳಿ ನಡೆಸುವ ಉದ್ದೇಶವು, ವೈರಿನಾಶಕ್ಕಿಂತ, ಅವರನ್ನು ನಿದ್ರಾಹೀನ ಸ್ಥಿತಿಯಲ್ಲಿಟ್ಟು, ಅವರು ತಮ್ಮ ಬೃಹತ್ ಶಸ್ತ್ರಾಸ್ತ್ರಗಳನ್ನು ಅನುಪಯುಕ್ತವಾಗಿ ಬಳಸಲಿ ಎಂದಾಗಿತ್ತು. ವೈರಿ ಸೈನಿಕರು ಮಲಗಿದ್ದಾಗ, ವಿಯೆಟ್ನಾಂ ಯೋಧರು, ಪಂಜಿ ಹಳ್ಳಗಳನ್ನು ತೋಡುತ್ತಿದ್ದರು. ವೈರಿ ಸೈನಿಕರು ಸಾಮಾನ್ಯವಾಗಿ ನಡೆಯುವ ಹಾದಿಯಲ್ಲಿನ ಈ ಹಳ್ಳಗಳಲ್ಲಿ, ಮಲ, ವಿಷಲೇಪಿತ ಬೆತ್ತದ ಚೂಪಾದ ಕಡ್ಡಿಗಳನ್ನು ಇಟ್ಟು ಅದರ ಮೇಲೆ ಕಸ-ಕಡ್ಡಿಗಳನ್ನು, ಎಲೆಗಳನ್ನು ಹರಡುತ್ತಿದ್ದರು. ಇದನ್ನು ಅರಿಯದೆ ಈ ಬಲೆಗಳಲ್ಲಿ ಬಿದ್ದ ಸೈನಿಕರು ಸಾಯುತ್ತಿರಲಿಲ್ಲ, ಆದರೆ ತೀವ್ರವಾಗಿ ಗಾಯಗೊಳ್ಳುತ್ತಿದ್ದ ಇವರನ್ನು ಇನ್ನಿತರ ಕೆಲವರು ಎತ್ತಿ ಚಿಕಿತ್ಸೆಗೆ ಕೊಂಡೊಯ್ಯಬೇಕಾಗಿ ಬಂದು, ಅಷ್ಟರ ಮಟ್ಟಿಗೆ ವೈರಿ ಸೈನ್ಯದಲ್ಲಿ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಿತ್ತು, ಅವರ ಮನೋಸ್ಥೆೈರ್ಯವೂ ಕುಸಿಯುತ್ತಿತ್ತು. ಅ¨üÉÃದ್ಯವಾದ ವೈರಿತಾಣವನ್ನು ಬಹಳ ಚಾಣಾಕ್ಷತೆಯಿಂದ ¨üÉÃದಿಸುವಲ್ಲಿ ಪರಿಣಿತರಾದ ಡಾಕ್ ಕಾಂಗ್/ಸ್ಯಾಪರ್‌ಗಳಂತಹ ವಿಶೇಷ ತುಕಡಿಗಳು ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಅವರು ಅಮೆರಿಕಾ ಮಾದರಿಯ ನೆಲೆಗಳನ್ನು ರಚಿಸಿ, ಅಲ್ಲಿ ಕಗ್ಗತ್ತಲಲ್ಲಿ ದಾಳಿ ನಡೆಸುವ ತರಬೇತಿ ಪಡೆದು, ವಾಸ್ತವದ ದಾಳಿಗಳು ನಿಖರವಾಗಿರುವಂತೆ ಸಜ್ಜಾಗುತ್ತಿದ್ದರು. ಅವರು ಕೇವಲ ತಮ್ಮ ಒಳ ಉಡುಪುಗಳನ್ನು ಮಾತ್ರ ಧರಿಸಿ, ತಮ್ಮ ಶರೀರಕ್ಕೆ ಇದ್ದಿಲು ಅಥವಾ ಕೊಬ್ಬು ಮೆತ್ತಿಕೊಂಡು ದೆವ್ವಗಳ ತರಹ ಓಡಾಡಿಕೊಂಡು, ಸ್ಫೋಟಕಗಳನ್ನು ಇಟ್ಟು, ಮೊದಲ ಸ್ಫೋಟ ಘಟಿಸುವ ಮುನ್ನವೇ ಅಲ್ಲಿಂದ ಮಾಯವಾಗುತ್ತಿದ್ದರು. ವಿಶಿಷ್ಟ ಗುಪ್ತ ಬಲೆಗಳು ತಮ್ಮ ಕಾಡುಗಳ ಒಳಹೊರಗನ್ನು ಚೆನ್ನಾಗಿ ಬಲ್ಲ ವಿಯೆಟ್ನಾಮಿನವರು ವೈರಿಯ ಕಣ್ತಪ್ಪಿಸಿ ಓಡಾಡುವುದರಲ್ಲಿ, ವಿಶಿಷ್ಟವಾದ, ಘಾತಕ ಬಲೆಗಳನ್ನು ರೂಪಿಸುವುದರಲ್ಲಿ ನಿಷ್ಣಾತರು. ಅವುಗಳಲ್ಲಿ ಕೆಲವೆಂದರೆ, ಪಂಜಿ ಬೋನುಗಳು, ಕಣ್ಮರೆ ಮಾಡಲಾದ ಕುಳಿಗಳು, ಸ್ಪರ್ಶವಾದೊಡನೆ ಗ್ರೆನೇಡ್‌ಗಳನ್ನು ಸಿಡಿಸುವ ಕಂಬಿಗಳು, ನೆಲಬಾಂಬುಗಳು, ಸರ್ಪ ಬಲೆಗಳು, ಇತ್ಯಾದಿ. ಬಿದಿರಿನಿಂದ ಮಾಡಲ್ಪಟ್ಟ ಈ ಬೋನುಗಳನ್ನು ನೆಲಬಾಂಬು ಪತ್ತೆಕಾರಕಗಳಿಗೆ ಪತ್ತೆ ಹಚ್ಚಲಾಗುತ್ತಿರಲಿಲ್ಲ. ಜೊತೆಗೆ, ‘ವಿಶ್ವದ ಅತ್ಯಂತ ಉಗ್ರ ಕುಟುಕುವ ಕೀಟ’ ಎಂದು ಹೆಸರಾದ ಏಷ್ಯಾದ ದೈತ್ಯ ಜೇನ್ನೊಣಗಳ ಗೂಡುಗಳನ್ನು ವೈರಿ ಓಡಾಡುವ ಹಾದಿಗಳಲ್ಲಿ ಇಟ್ಟು, ಅದಕ್ಕೆ ಪಟಾಕಿಯೊಂದನ್ನು ಅಂಟಿಸುತ್ತಿದ್ದರು; ವೈರಿಪಡೆ ಸಮೀಪಿಸಿದೊಡನೆ, ಈ ಪಟಾಕಿಯನ್ನು ಸ್ಫೋಟಿಸಲಾಗುತ್ತಿತ್ತು. ಆಗ ಸಿಡಿದೆದ್ದ ಜೇನ್ನೊಣಗಳು ಸೈನಿಕರನ್ನು ಭಯಾನಕವಾಗಿ ಕಚ್ಚಿ ಅವರನ್ನು ಚೆಲ್ಲಾಪಿಲ್ಲಿಯಾಗಿಸುತ್ತಿದ್ದವು. ಹೀಗೆಯೇ, ವೈರಿಯ ಹಾದಿಯಲ್ಲಿ ಕಣಜ ಮತು ದೊಡ್ಡ ಕಣಜಗಳ ಗೂಡನ್ನು ಇರಿಸಿ, ಅವರನ್ನು ಚದುರಿಸಿ, ನಂತರ ಅವರ ಮೇಲೆ ದಾಳಿ ಎಸಗಲಾಗುತ್ತಿತ್ತು. ಹೊ ಚಿ ಮಿನ್ ಹಾದಿ ಹೊ ಚಿ ಮಿನ್ ಹಾದಿ ಸಾಮಾನ್ಯವಾಗಿ ಜನರು ನಡೆಯುವ ರಸ್ತೆಯೇನಾಗಿರಲಿಲ್ಲ. ಅದೊಂದು ದಟ್ಟ ಕಾಡುಗಳಲ್ಲಿರುವ, ವಿಯೆಟ್ನಾಂನ ಪಶ್ಚಿಮ ಭಾಗದಲ್ಲಿರುವ ಮತ್ತು ನೆರೆಯ ದೇಶಗಳಾದ ಲಾವೋಸ್ ಮತ್ತು ಕಾಂಬೋಡಿಯಾ ಮೂಲಕ ಉತ್ತರ ವಿಯೆಟ್ನಾಂನಿಂದ ದಕ್ಷಿಣ ವಿಯೆಟ್ನಾಂಗೆ ಹೋಗುವ ರಸ್ತೆಗಳು, ಹಾದಿಗಳು ಮತ್ತು ಬೈಕ್ ಪಥಗಳ ಜಾಲವಾಗಿತ್ತು. ಇದು, ಯುದ್ಧನಿರತ ವಿಯೆಟ್ನಾಂನ ಕಮ್ಯುನಿಸ್ಟರಿಗೆ ಹಾಗೂ ವಿಯೆಟ್ನಾಮಿನ ಜನಸೈನ್ಯ (ಪೀಪಲ್ಸ್ ಆರ್ಮಿ ಆಫ್ ವಿಯೆಟ್ನಾಂ-PAVN) ಗಳಿಗೆ ಈ ಯುದ್ಧಕಾಲದಲ್ಲಿ ಸಾವಿರಾರು ಟನ್‌ಗಟ್ಟಲೆ ಸಾಮಗ್ರಿಗಳನ್ನು ರವಾನಿಸುವ ಹಾದಿಯಾಗಿತ್ತು. ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಈ ಕಾಲುಹಾದಿ, 1500-1800 ಅಡಿ ಎತ್ತರದ ಅತ್ಯಂತ ಕಠಿಣ ಬೆಟ್ಟಗಳು, ಮೂರು ಪದರಗಳಲ್ಲಿ ಹಬ್ಬಿಕೊಂಡಿರುವ ದಟ್ಟಕಾಡುಗಳು ಮತ್ತು ದಟ್ಟ ಉಷ್ಣವಲಯದ ಮಳೆಕಾಡುಗಳ ಮೂಲಕ ಹಾದುಹೋಗುತ್ತಿತ್ತು. ಇದರ ಉದ್ದ 16000 ಕಿ.ಮೀ. ಇತ್ತು. ಮೊದಲಿಗೆ ಹೊರೆಹೊತ್ತ ಸೈಕಲ್‌ಗಳು, ಎತ್ತಿನ ಬಂಡಿಗಳ ಮೂಲಕ ಮಾನವ ಶ್ರಮದ ಬಳಕೆಯಾಗುತ್ತಿತ್ತು; ನಂತರದ ದಿನಗಳಲ್ಲಿ ಟ್ರಕ್‌ಗಳನ್ನು ಬಳಸಲಾಯಿತು. ಒಂದು ಅಂದಾಜಿನ ಪ್ರಕಾರ ಅಮೆರಿಕಾ ಅಲ್ಲಿ ನಡೆಸಿದ 7 ಲಕ್ಷ ಬಾಂಬ್ ದಾಳಿಗಳಲ್ಲಿ 75 ಲಕ್ಷ ಟನ್ ಬಾಂಬ್‌ಗಳನ್ನು ಬಳಸಿದ್ದು, ಇದು ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕಾ, ಜರ್ಮನಿಯ ಮೇಲೆ ಬಳಸಿದ್ದ ಬಾಂಬುಗಳಿಗಿಂತಲೂ ಬಹಳವೇ ಹೆಚ್ಚಾಗಿತ್ತು. ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅಧಿಕೃತ ವರದಿಯ ಪ್ರಕಾರವೇ, ಈ ಹಾದಿಯು, ‘20ನೇ ಶತಮಾನದ ಮಿಲಿಟರಿ ಇಂಜಿನಿಯರಿಂಗ್‌ನ ಮಹಾನ್ ಸಾಧನೆಗಳಲ್ಲಿ ಒಂದಾಗಿತ್ತು.’ ಅಮೆರಿಕಾದ ಉಗ್ರ ದಾಳಿಯ ನಂತರವೂ ಈ ಹಾದಿಯನ್ನು ನಾಶ ಮಾಡಲಾಗಲಿಲ್ಲ; ಅದೊಂದು ‘ಜೀವಂತ ಹಾದಿ’ಯಾಗಿತ್ತು. ಒಂದು ಭಾಗ ಬಾಂಬ್‌ದಾಳಿಯಿಂದ ನಾಶವಾದ ಕ್ಷಣವೇ, ಕಾಡಿನಿಂದ ಸಾವಿರಾರು ಸ್ವಯಂ ಸೇವಕರು ಧಾವಿಸಿ ಬಂದು, ಕೆಲವೇ ಗಂಟೆಗಳಲ್ಲಿ ಅಲ್ಲಿ ಉಂಟಾದ ಕುಳಿಗಳನ್ನು ತುಂಬಿಸುತ್ತಿದ್ದರು ಮತ್ತು ಸೇತುವೆಗಳನ್ನು ರಿಪೇರಿ ಮಾಡುತ್ತಿದ್ದರು. ಕೂ ಚೀ ಸುರಂಗಗಳು ಅಮೆರಿಕಾದ ವಾಯುಸೇನೆ ಮತ್ತು ಫಿರಂಗಿದಳದ ಪಾರಮ್ಯವನ್ನು ದುರ್ಬಲಗೊಳಿಸಲು ವಿಯೆಟ್ನಾಂ ಬಳಸಿದ ಒಂದು ಅನನ್ಯವಾದ, ಸೃಜನಶೀಲ ರೀತಿ ಇದಾಗಿತ್ತು. 250 ಕಿ.ಮೀ.ಗಿಂತ ಹೆಚ್ಚು ಉದ್ದದ ಸುರಂಗಗಳ, ಬಹು ಹಂತದ ನಿವಾಸಗಳ ಭೂಗತ ಸಾಮ್ರಾಜ್ಯದಲ್ಲಿ ಸಾವಿರಾರು ಸೈನಿಕರು ವಾಸಿಸುತ್ತಿದ್ದರು. ಅಲ್ಲಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮಾಡಲಾಗುತ್ತಿತ್ತು, ಕಾರ್ಖಾನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು, ಹೊಗೆರಹಿತ ಚಿಮಣಿಗಳು (ಹೊಆಂಗ್ ಕಾಮ್ ಒಲೆಗಳು) ಇರುವ ಅಡುಗೆಮನೆಗಳಲ್ಲಿ ಅಡುಗೆ ನಡೆಯುತ್ತಿತ್ತು, ಮತ್ತು ಕಮಾಂಡ್ ಕೇಂದ್ರಗಳಲ್ಲಿ ಸಭೆಗಳು ನಡೆಯುತ್ತಿದ್ದವು - ಇದೆಲ್ಲವೂ ಅಮೆರಿಕಾದ ನೆಲೆಗಳ ಕೆಳಗೆಯೇ! ರಾತ್ರಿ ಹೊತ್ತಿನಲ್ಲಿ ವಿಯೆಟ್ನಾಂ ಯೋಧರು ಅಮೆರಿಕಾ ನೆಲೆಗಳ ಮೇಲೆ ಒಳಗಿನಿಂದಲೇ ದಾಳಿ ನಡೆಸುತ್ತಿದ್ದರು; ಹಗಲಿನಲ್ಲಿ ಹಠಾತ್ ದಾಳಿ ನಡೆಸಿ ಮರೆಮಾಚಿದ ಕಳ್ಳದ್ವಾರಗಳ ಮೂಲಕ ಸುರಂಗದೊಳಗೆ ಕಣ್ಮರೆಯಾಗುತ್ತಿದ್ದರು. ಅಮೆರಿಕಾದ ಸೈನಿಕರು, ವೈರಿಯನ್ನಾಗಲೀ, ಅವರ ನೆಲೆಯನ್ನಾಗಲೀ ಕಂಡು ಹಿಡಿಯಲಾಗದೆ ಸುತ್ತಿ ಸುತ್ತಿ ಹೈರಾಣಾಗುತ್ತಿದ್ದರು. ತಮ್ಮ ಈ ಜಾಲವನ್ನು ರಕ್ಷಿಸಲು ವಿಯೆಟ್ನಾಮಿಗಳು ಸೃಜನಶೀಲ ವಿಧಾನಗಳನ್ನು ಬಳಸುತ್ತಿದ್ದರು; ವಿಷಾನಿಲವನ್ನು ತಡೆ ಹಿಡಿಯುವ ಯು ಆಕಾರದ ಬಾಗುಗಳು, ಗ್ರೆನೇಡ್‌ಗಳನ್ನು ತಟಸ್ಥಗೊಳಿಸುವ ಸ್ಫೋಟ ನಿರೋಧಕ ಬಾಗಿಲುಗಳು, ಜಲಾಂತರ್ಗತ ಪ್ರವೇಶ ದ್ವಾರಗಳು, ಪ್ರವೇಶದ್ವಾರಗಳ ಬಳಿ ಅಡಗಿಸಿಟ್ಟ ಪಂಜಿ ಹಳ್ಳಗಳು ಮತ್ತು ಪುಟ್ಟ ನೆಲಬಾಂಬ್‌ಗಳಂತಹ ಭಯಾನಕ ಬಲೆಗಳು, ಇತ್ಯಾದಿ. ಅವರ ಕೆಲವು ಮರಣಾಂತಿಕ ವಿಧಾನಗಳೆಂದರೆ: ಈ ಕಿರಿದಾದ ಸುರಂಗಗಳ ಛಾವಣಿಗಳಿಂದ ತೂಗು ಹಾಕಲಾದ ವಿಷಪೂರಿತ ಹಾವುಗಳು ಮತ್ತು ಯಾರಾದರೂ ಸ್ಪರ್ಶಿಸಿದಾಕ್ಷಣ ತೆರೆಯುವಂತಿರುವ ಪುಟ್ಟ ಡಬ್ಬಿಗಳಲ್ಲಿ ಇಟ್ಟ ಚೇಳುಗಳು, ಇವು ಈ ಸುರಂಗಗಳಲ್ಲಿ ನುಸುಳಿದವರನ್ನು ಕಚ್ಚಿದಾಗ ಅವರು ಕೂಡಲೇ ಸಾಯುತ್ತಿದ್ದರು ಅಥವಾ ಅವರನ್ನು ಹೊರಗೆ ಸಾಗಿಸುವ ತುರ್ತಿನಿಂದ ವೈರಿಯ ಇಡೀ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿತ್ತು. ಆದರೆ, ವಿಯೆಟ್ನಾಮಿನವರು ತಾವು ಮಾತ್ರ ಇವುಗಳಲ್ಲಿ ಸಿಲುಕದಂತೆ ಬಹಳ ನಿಖರತೆಯಿಂದ ಇಲ್ಲಿ ಓಡಾಡುತ್ತಿದ್ದರು. ಅಮೆರಿಕಾದ ಗುಪ್ತಚರ ನಾಯಿಗಳು ಸುರಂಗಗಳಲ್ಲಿನ ಮನುಷ್ಯರ ವಾಸನೆಯನ್ನು ಕಂಡುಹಿಡಿಯಲು ಸಾಧ್ಯವಾಗದಂತೆ, ಅದನ್ನು ಮರೆಮಾಚಲು ಮೊದಲ ಹಂತದ ಸುರಂಗಗಳಲ್ಲಿ ಬಹಳೊಮ್ಮೆ ಪ್ರಾಣಿಗಳನ್ನು ಇಡಲಾಗುತ್ತಿತ್ತು. ತಾಳತಪ್ಪಿದ ಅಮೆರಿಕಾ ಲೆಕ್ಕಾಚಾರ! ಅಮೆರಿಕದ ಜನರಲ್ ವಿಲಿಯಂ ವೆಸ್ಟ್ಮೋರ್‌ಲ್ಯಾಂಡ್ ನಡೆಸಿದ್ದು ಒಂದು ವಿನಾಶಕಾರಿ ಯುದ್ಧವನ್ನು; ಆತ, ಶತ್ರು ಸೈನಿಕರನ್ನು ಬಹಳ ವೇಗವಾಗಿ ಕೊಂದು, ಇತರ ಸೈನಿಕರು ಅಲ್ಲಿಗೆ ಬರಲಾಗದಂತಹ ತ್ವರಿತ ಗತಿಯಲ್ಲಿ ಯುದ್ಧ ನಡೆಸಿದರೆ, ಉತ್ತರ ವಿಯೆಟ್ನಾಂ ಶರಣಾಗುತ್ತದೆ ಎಂದು ನಂಬಿದ್ದ. ಆದರೆ ಆತನಿಗೆ ಉತ್ತರ ವಿಯೆಟ್ನಾಮಿಗಳ ದಾರ್ಷ್ಟ್ಯ ದ ಅಂದಾಜಿರಲಿಲ್ಲ. ಅವರು ಯಾವುದೇ ಪಾಶ್ಚಿಮಾತ್ಯ ಪ್ರಜಾತಂತ್ರ ಭರಿಸಲಾಗದಷ್ಟು ಭೀಕರ ಸಾವು-ನೋವುಗಳನ್ನು ಸಹಿಸಲು ಸಿದ್ಧರಾಗಿದ್ದರು. ಅವರಿಗೆ ಇದು ತಮ್ಮ ಸಮಾಜವಾದಿ ರಾಷ್ಟ್ರದ ಉಳಿವಿಗಾಗಿ ನಡೆಯುವ ಹೋರಾಟವಾಗಿತ್ತು, ಆದರೆ ಅಮೆರಿಕಾಗೆ ಇದು ಕೇವಲ ಭೌಗೋಳಿಕ ರಾಜಕೀಯ ಹಸ್ತಕ್ಷೇಪವಾಗಿತ್ತು. ಅಮೆರಿಕಾ ಕೇವಲ ತಾವು ಹತ್ಯೆ ಮಾಡಿದವರ ಸಂಖ್ಯೆ ಲೆಕ್ಕ ಹಾಕಿದ್ದರೆ, ಉತ್ತರ ವಿಯೆಟ್ನಾಮಿಗಳು ಲೆಕ್ಕ ಹಾಕಿದ್ದು ತಮ್ಮ ಸಹಿಷ್ಣುತೆಯ ಕಾಲಾವಧಿಯನ್ನು.

ಇತಿಹಾಸದಲ್ಲಿ ದಾಖಲಾಗಿರುವಂತೆ, ವಿಶ್ವದ ಮಹಾನ್ ಕೈಗಾರಿಕಾ ಮಹಾಶಕ್ತಿಯಾದ ಅಮೆರಿಕಾವನ್ನು, ಒಂದು ಸಣ್ಣ, ಕೃಷಿ ರಾಷ್ಟ್ರವಾದ ವಿಯೆಟ್ನಾಂ ಸೋಲಿಸಿದ್ದು, ಅಸಮಾನರ ಮಧ್ಯೆ ನಡೆದ ಒಂದು ಯುದ್ಧದ ಮಾದರಿಯನ್ನಾಗಿ ಅಭ್ಯಸಿಸಲಾಗುತ್ತದೆ. ಈ ಯುದ್ಧ ಕೇವಲ ರಣರಂಗದಲ್ಲಿ ನಡೆದ ಯುದ್ಧವಲ್ಲ, ಬದಲಿಗೆ, ರಾಜಕೀಯ ಛಲ, ನವೀನ ಗೆರಿಲ್ಲಾ ತಂತ್ರಗಳು ಮತ್ತು ಶತ್ರುವಿನ ಮನೋರಚನೆಯ ಮಿತಿಗಳ ಆಳವಾದ ತಿಳುವಳಿಕೆ, ಇವುಗಳ ಸಂಯೋಜನೆ. ಇಂದು ಸಾಮ್ರಾಜ್ಯಶಾಹಿಯ ಕಬಂಧಬಾಹುಗಳು ಇಡೀ ಪ್ರಪಂಚವನ್ನು ತಮ್ಮ ಹಿಡಿತದಲ್ಲಿ ಸೆರೆಹಿಡಿದಿವೆ. ಸಮಾಜವಾದಿ ಬಣದ ಪತನದ ನಂತರ ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿಗಳ ಅಟ್ಟಹಾಸಕ್ಕೆ ಮೇರೆಯೇ ಇಲ್ಲದಂತಾಗಿದೆ. ಇಲ್ಲಸಲ್ಲದ ನೆಪವೊಡ್ಡಿ ಕಳೆದ ಕೆಲವು ದಶಕಗಳಲ್ಲಿ ಅಫ್ಘಾನಿಸ್ತಾನ್, ಇರಾಕ್, ಲಿಬಿಯಾ, ಸಿರಿಯಾ, ಯೆಮೆನ್, ಸೊಮಾಲಿಯಾ, ವೆನೆಜುಯೆಲಾ, ಇರಾನ್, ಹೀಗೆ ಒಂದು ದೇಶದ ನಂತರ ಇನ್ನೊಂದರ ಮೇಲೆ ದಾಳಿಗಳು ನಡೆಯುತ್ತಲೇ ಇವೆ, ಮಕ್ಕಳನ್ನೂ ಬಿಡದಂತೆ ನರಮೇಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಮೆರಿಕಾದ ಮೇಲೆ ವಿಯೆಟ್ನಾಂನ ವಿಜಯದ ಸ್ಮರಣೆ ಕಾರ್ಮೋಡದ ಮಧ್ಯೆ ಬೆಳ್ಳಿ ರೇಖೆಯಂತೆ. ಹಾಗಾಗಿ, ಇಂದಿನ ಕಾರ್ಮಿಕವರ್ಗದ ಕ್ರಾಂತಿಕಾರಿ ಚಳವಳಿಯು ವಿಯೆಟ್ನಾಮಿನ ಸಮರಶೀಲ ಹೋರಾಟಗಾರರ ಸ್ಫೂರ್ತಿಯೊಂದಿಗೆ, ಇಂದು ಕ್ರಾಂತಿಗಳಿಗೆ ದಾರಿದೀಪವಾಗಿರುವ ಮಾರ್ಕ್ಸ್ ವಾದ - ಲೆನಿನ್‌ವಾದ ಮತ್ತು ಕಾಮ್ರೇಡ್ ಶಿವದಾಸ್ ಘೋಷ್ ಚಿಂತನೆಗಳ ಆಧಾರದ ಮೇಲೆ ಮುನ್ನಡೆಯಬೇಕಾಗಿದೆ.
