ಭಾರತವು ವಿಶ್ವದ ಅತಿ ದೊಡ್ಡ ಜನತಂತ್ರ. ಶಿಕ್ಷಣ ವ್ಯವಸ್ಥೆ ಸೇರಿದಂತೆ ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳನ್ನು ಜನತಾಂತ್ರಿಕ ಮೌಲ್ಯಗಳನುಸಾರ ನಡೆಸುವುದೇ ಜನತಂತ್ರದ ತಿರುಳು. ಅಲ್ಲದೆ, ಒಕ್ಕೂಟ ವ್ಯವಸ್ಥೆಯ ತತ್ವಗಳಿಗನುಗುಣವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಂವಿಧಾನಾತ್ಮಕವಾಗಿ ಅಧಿಕಾರ ಹಂಚಿಕೆಯಾಗಿರುವ ‘ರಾಜ್ಯಗಳ ಒಕ್ಕೂಟ ವ್ಯವಸ್ಥೆ’ ನಮ್ಮದು. ಇದಕ್ಕಾಗಿಯೇ, ನಾವು ಸಂವಿಧಾನವನ್ನು ಅಳವಡಿಸಿಕೊಂಡಾಗ ಶಿಕ್ಷಣವನ್ನು ‘ರಾಜ್ಯ ಪಟ್ಟಿ’ಯಲ್ಲಿ ಸೇರಿಸಲಾಗಿತ್ತು. ಹೀಗಾಗಿ, ಸರ್ಕಾರದ ಪಾತ್ರವು ಕೇವಲ ಧನಸಹಾಯ ಒದಗಿಸುವುದು ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವುದು - ಇವಕ್ಕೆ ಮಾತ್ರ ಸೀಮಿತವಾಗಿ, ಶೈಕ್ಷಣಿಕ ಆಡಳಿತವು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿನಿಧಿಗಳನ್ನು ಒಳಗೊಂಡ ಹಾಗೂ ಜನತಾಂತ್ರಿಕವಾಗಿ ರಚಿತವಾದ ಸ್ವಾಯತ್ತ ಶೈಕ್ಷಣಿಕ ಮಂಡಳಿಗಳು ಹಾಗೂ ಶಿಕ್ಷಣ ತಜ್ಞರ ಕೈಯಲ್ಲಿರಬೇಕು ಎಂದಾಯಿತು. ಇದೇ ಶಿಕ್ಷಣ ಕ್ಷೇತ್ರದ ಸ್ವಾಯತ್ತತೆಯ ಮೂಲ ಪರಿಕಲ್ಪನೆಯಾಗಿದೆ.

ಆದಾಗ್ಯೂ, ವರ್ಷಗಳು ಉರುಳಿದಂತೆ ಅಧಿಕಾರಶಾಹಿ ನಿಯಂತ್ರಣ ಹೆಚ್ಚಾಗಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಹೋರಾಟದಿಂದ ಪಡೆದುಕೊಂಡ ಹಕ್ಕುಗಳನ್ನು ಕಸಿದುಕೊಳ್ಳುವ ಹಾಗೂ ಅವನ್ನು ಕ್ರಮೇಣ ಅತಿಕ್ರಮಿಸುವ ಕಾರ್ಯ ಎಡೆಬಿಡದೆ ನಡೆದಿದೆ. 1976 ರಲ್ಲಿ ಅಂದಿನ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನದ 42ನೇ ವಿಧಿಗೆ ತಿದ್ದುಪಡಿಯನ್ನು ತರುವ ಮೂಲಕ ಶಿಕ್ಷಣವನ್ನು ‘ರಾಜ್ಯ ಪಟ್ಟಿ’ಯಿಂದ ‘ಸಮವರ್ತಿ ಪಟ್ಟಿ’ಗೆ ವರ್ಗಾಯಿಸಿತು. ಅಂದಿನಿಂದ ಶಿಕ್ಷಣದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವು ನಿರಂತರವಾಗಿ ಹೆಚ್ಚುತ್ತಲೇ ಬಂದಿದೆ. ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ರಾಷ್ಟ್ಟ್ರೀಯ  ಶಿಕ್ಷಣ ನೀತಿ(1986)ಯನ್ನು ಅಂಗೀಕರಿಸಿದ್ದು ಶಿಕ್ಷಣದ ಕೇಂದ್ರೀಕರಣದತ್ತ ಇಟ್ಟ ಮತ್ತೊಂದು ಪ್ರಮುಖ ಹೆಜ್ಜೆಯಾಯಿತು. ಇಂತಹ ಬೆಳವಣಿಗೆಗಳನ್ನು ವಿರೋಧಿಸುವ ಬದಲು, ಹಲವು ರಾಜ್ಯ ಸರ್ಕಾರಗಳು ವಿಶ್ವವಿದ್ಯಾಲಯಗಳಲ್ಲಿದ್ದ ಸೆನೆಟ್, ಸಿಂಡಿಕೇಟ್ ಮತ್ತು ಇತರ ಶಾಸನಬದ್ಧವಾಗಿ ಮತ್ತು ಜನತಾಂತ್ರಿಕವಾಗಿ ಆಯ್ಕೆಯಾದ ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ಶೈಕ್ಷಣಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸಿದವು. ತತ್ಪರಿಣಾಮವಾಗಿ, ಶಿಕ್ಷಣವು ಕ್ರಮೇಣ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಅಧಿಕಾರಶಾಹಿ ಸಂಸ್ಥೆಗಳ ಕೈಗೊಂಬೆಯಾಯಿತು. ಇದೆಲ್ಲದರ ಮುಂದುವರಿಕೆಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ಟ್ರೀಯ ಶಿಕ್ಷಣ ನೀತಿ(NEP) 2020ರ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಕೇಂದ್ರೀಕರಣಗೊಳಿಸಲು ಅವಸರದಲ್ಲಿ ಹೊರಟಿದೆ. ಈ ಹಿನ್ನೆಲೆಯಲ್ಲೇ “ವಿಕಸಿತ್ ಭಾರತ್ ಶಿಕ್ಷಾ ಅಭಿಯಾನ್(ವಿಬಿಎಸ್‌ಎ) ವಿಧೇಯಕ” ವನ್ನು ಪ್ರಸ್ತಾಪಿಸಲಾಗಿದೆ.

ಎನ್‌ಇಪಿ-2020 ಮತ್ತು ವಿಬಿಎಸ್‌ಎ

ಎನ್‌ಇಪಿ 2020ರ 18.1ಮತ್ತು 28.2 ವಿಧಿಗಳಲ್ಲಿ, ‘ಉನ್ನತ ಶಿಕ್ಷಣದ ನಿಯಂತ್ರಣ ಸಂಸ್ಥೆಗಳು ಅತಿಯಾದ ನಿಯಂತ್ರಣಕ್ಕೊಳಗಾಗಿವೆ. ಕೆಲವೇ ಕೆಲವರ ಕೈಯಲ್ಲಿ ಅಧಿಕಾರವು ಕೇಂದ್ರೀಕೃತವಾಗಿ ಹೊಣೆಗಾರಿಕೆಯೇ ಇಲ್ಲದಂತಾಗಿದೆ. ಇದರಿಂದ ಉನ್ನತ ಶಿಕ್ಷಣವನ್ನು ಸ್ವತಂತ್ರಗೊಳಿಸಲು, ಇದರ ಹಣಕಾಸು, ಪಠ್ಯಕ್ರಮ ರಚನೆ ಸೇರಿದಂತೆ ಇನ್ನಿತರ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯೋಗ್ಯವಾದ ಸ್ವತಂತ್ರ ಸಮಿತಿಯನ್ನು ರಚಿಸುವ ಅಗತ್ಯವಿದೆ. ಅದಕ್ಕನುಗಣವಾಗಿ ಭಾರತ ಉನ್ನತ ಶಿಕ್ಷಣ ಆಯೋಗ(HECI) ಎಂಬ ಬೃಹತ್ ಏಕೀಕೃತ ನಿಯಂತ್ರಣ ಸಂಸ್ಥೆಯಡಿ ಅದು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ.’ ಎಂದು ಬರೆಯಲಾಗಿದೆ.

ಆದರೆ, ಓದಿದರೆ ಆಹಾ ಎಂದೆನಿಸುವ ಈ ಬಣ್ಣದ ಮಾತುಗಳ ಹಿಂದೆ ಉನ್ನತ ಶಿಕ್ಷಣವನ್ನು ಮತ್ತಷ್ಟು ಖಾಸಗೀಕರಣಗೊಳಿಸಿ ಅಧಿಕಾರಶಾಹಿಯ ಹತೋಟಿಗೆ ಅದನ್ನು ಹಸ್ತಾಂತರಿಸುವ ‘ಘನ’ ಉದ್ದೇಶವಲ್ಲದೇ ಮತ್ತೇನೂ ಇಲ್ಲ! ಈ ಹಿಂದೆ 2018ರ ಕರಡು ವಿಧೇಯಕದ ಮೂಲಕ ‘ಉನ್ನತ ಶಿಕ್ಷಣ ಆಯೋಗ’(HECI)ವನ್ನು ಪ್ರಸ್ತಾಪಿಸಿದ್ದಾಗ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ವಾಪಸ್ಸು ಪಡೆದು 2025ರ ಡಿಸೆಂಬರ್‌ನಲ್ಲಿ ತನ್ನದೇ ಶೈಲಿಯ ಸಂಸ್ಕೃತ ನಾಮಕರಣದೊಂದಿಗೆ “ವಿಕಸಿತ್ ಭಾರತ್ ಶಿಕ್ಷಾ ಅಭಿಯಾನ್(ವಿಬಿಎಸ್‌ಎ)” ಎಂಬ ಹೊಸ ಹೆಸರಿನ ವಿಧೇಯಕವನ್ನು ಸರ್ಕಾರ ಮುಂದಿಟ್ಟಿತು. ಈ ವಿಧೇಯಕದ ಮೂಲಕ ಶಿಕ್ಷಣವನ್ನು ಅಧಿಕಾರಶಾಹಿಯ ನಿಯಂತ್ರಣಕ್ಕೆ ತಂದು ಅದರ ಮೇಲೆ ಸಂಪೂರ್ಣ ಹತೋಟಿ ಸಾಧಿಸಲಾಗುತ್ತದೆಂಬ ಆತಂಕವನ್ನು ಅನೇಕ ಶಿಕ್ಷಣತಜ್ಞರು ಜೋರಾಗಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಾಗೂ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದ ನಂತರ ವಿಧೇಯಕವನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಜಂಟಿ ಸಮಿತಿಗೆ ಒಪ್ಪಿಸಲಾಗಿದೆ.

ವಿಬಿಎಸ್‌ಎ ವಿಧೇಯಕದಲ್ಲಿ ಏನಿದೆ?

2018ರ HECI ವಿಧೇಯಕವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)ದ 1956ರ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಪ್ರಸ್ತಾಪಿಸಿದ್ದರೆ, ವಿಬಿಎಸ್‌ಎ ವಿಧೇಯಕವು ಯುಜಿಸಿ ಮಾತ್ರವಲ್ಲದೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮತ್ತು ರಾಷ್ಟ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ಗಳನ್ನೂ ಸಂಪೂರ್ಣವಾಗಿ ರದ್ದು ಮಾಡಬೇಕೆಂದು ಪ್ರಸ್ತಾಪಿಸುತ್ತದೆ.

ವಿಬಿಎಸ್‌ಎಯನ್ನು ಮುನ್ನಡೆಸಲು 12 ಸದಸ್ಯರ ಆಯೋಗವನ್ನು ಕೇಂದ್ರ ಸರ್ಕಾರವು ನೇಮಕಮಾಡುತ್ತದೆ. ಇದರ ಅಡಿಯಲ್ಲಿ ನಿಯಂತ್ರಣ, ಮಾನ್ಯತೆ ಮತ್ತು ಮಾನದಂಡಗಳ ನಿಗದಿಗಾಗಿ ಮೂರು ಮಂಡಳಿಗಳು ಕಾರ್ಯನಿರ್ವಹಿಸಲಿವೆ. ಅವುಗಳನ್ನು ವಿಕಸಿತ್ ಭಾರತ್ ಶಿಕ್ಷಾ ವಿನಿಯಮನ್ ಪರಿಷತ್(VBSVP), ವಿಕಸಿತ್ ಭಾರತ್ ಶಿಕ್ಷಾ ಗುಣವತ್ತಾ ಪರಿಷತ್(VBSGP) ಮತ್ತು ವಿಕಸಿತ್ ಭಾರತ್ ಶಿಕ್ಷಾ ಮಾನಕ ಪರಿಷತ್(VBSMP) ಎಂದು ಹೆಸರಿಸಲಾಗಿದೆ. ಹೀಗೆ ರಚನೆಯಾಗುವ ಸಂಸ್ಥೆಗಳು ಕೇಂದ್ರ ಸರ್ಕಾರದ ಸಂಪೂರ್ಣ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುವ ವಿಬಿಎಸ್‌ಎ ಆಯೋಗದ ಅಡಿಯಲ್ಲಿನ ಘಟಕಗಳಾಗಿ ಇರಲಿವೆ. ವಿಧೇಯಕದ 45(1)ನೇ ವಿಧಿಯು ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರವನ್ನು ನೀಡುತ್ತದೆ. ರಚನೆಯಾಗುವ ಎಲ್ಲಾ ಮಂಡಳಿಗಳು ಕೇಂದ್ರ ಸರ್ಕಾರ ನೀಡುವ ನೀತಿ ನಿರ್ದೇಶನಗಳಿಗೆ ಬದ್ಧವಾಗಿರಬೇಕು. ಅಷ್ಟೇ ಅಲ್ಲದೆ, ಈ ಮಂಡಳಿಗಳನ್ನು ವಜಾಗೊಳಿಸುವ ಮತ್ತು ಕಾಯ್ದೆಯ ನಿಬಂಧನೆಗಳನ್ನು ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಅಧಿಕಾರವನ್ನೂ ಈ ವಿಧೇಯಕವು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಮೇಲ್ನೋಟಕ್ಕೆ ಇದು ಸ್ವತಂತ್ರ ಸಂಸ್ಥೆಯಾಗಿ ಕಂಡರೂ ವಾಸ್ತವದಲ್ಲಿ ಪೂರ್ಣ ಅಧಿಕಾರವು ಕೇಂದ್ರ ಸರ್ಕಾರದ ಕೈಯಲ್ಲಿರುತ್ತದೆ. ಯುಜಿಸಿಯಂತೆ ಈ ಆಯೋಗವು ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯವನ್ನೇನೂ ನೀಡುವುದಿಲ್ಲ! ಇನ್ನು ವಿಶ್ವವಿದ್ಯಾಲಯಗಳಿಗೆ ಸಾಲದ ರೂಪದಲ್ಲಿ ಹಣಕಾಸನ್ನು ಇತರ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ. ಅಲ್ಲದೆ, ಅನೇಕ ಶಿಕ್ಷಣತಜ್ಞರ ಆಕ್ಷೇಪಣೆಗಳಿಗೆ ಒಳಗಾಗಿರುವ ಭಾರತೀಯ ಜ್ಞಾನ ಪರಂಪರೆಯನ್ನು, ಭಾಷೆಗಳು ಮತ್ತು ಕಲೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತೇಜಿಸುವ ಜವಾಬ್ದಾರಿಯನ್ನೂ ಸಹ ಈ ಆಯೋಗಕ್ಕೆ ವಹಿಸಲಾಗಿದೆ.

ಉನ್ನತ ಶಿಕ್ಷಣದ ಶವಪೆಟ್ಟಿಗೆಗೆ ಕೊನೆಯ ಮೊಳೆ

ಉನ್ನತ ಶಿಕ್ಷಣದಲ್ಲಿ ಇಂತಹ ಬೃಹತ್ ಬದಲಾವಣೆ ತರುತ್ತಿರುವ ವಿಬಿಎಸ್‌ಎ ವಿಧೇಯಕವನ್ನು ಕುರಿತು ಕೇಂದ್ರ ಸರ್ಕಾರವು ಸಂಬಂಧಪಟ್ಟವರೊಂದಿಗೆ ಅಥವಾ ರಾಜ್ಯಗಳೊಂದಿಗೆ ಯಾವುದೇ ಸೂಕ್ತ ಸಮಾಲೋಚನೆಯನ್ನೂ ನಡೆಸಿಲ್ಲ. ವಿಧೇಯಕದ ಪೂರ್ಣ ಪಠ್ಯವು ಸಾರ್ವಜನಿಕವಾಗಿ ಲಭ್ಯವಾಗುವ ಮುನ್ನ, ಸಂಸತ್ತಿನಲ್ಲಿ ಅದು ಮಂಡನೆಯಾಗುವ ಕೆಲವು ದಿನಗಳ ಮೊದಲೇ ಕೇಂದ್ರ ಸಂಪುಟವು ಅದಕ್ಕೆ ಅನುಮೋದನೆಯನ್ನು ನೀಡಿತು. ಜನತಾಂತ್ರಿಕ ಚರ್ಚೆಗೆ ಒಳಪಡಿಸದೆಯೇ, ಎನ್‌ಇಪಿ-2020ರ ಅಡಿಯಲ್ಲಿ ಈ ವಿಧೇಯಕವನ್ನು ಜಾರಿಗೆ ತಂದರೆ, ಶೈಕ್ಷಣಿಕ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಗಳಿಗೆ ಇದು ಕಂಟಕವಾಗಬಹುದು.

ಮೊದಲನೆಯದಾಗಿ, ಸರ್ಕಾರವು ಒಂದೆಡೆ ತನ್ನ ಹಣಕಾಸಿನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಇನ್ನೊಂದೆಡೆ, ಶಿಕ್ಷಣದ ಸ್ವಾಯತ್ತತೆಯ ಮೇಲೆ ದಾಳಿಗೈಯುತ್ತಾ, ತನ್ನ ಅಧಿಕಾರಶಾಹಿ ನಿಯಂತ್ರಣವನ್ನು ಬಿಗಿಗೊಳಿಸಲು ಹೊರಟಿರುವುದು ಅಪಾಯಕಾರಿ. ಸೂಕ್ತ ಹಣಕಾಸಿನ ನೆರವಿಲ್ಲದೆ ಕೇವಲ ನಿಯಂತ್ರಣವನ್ನು ಹೇರುವುದರಿಂದ ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಗೆ ತೀವ್ರ ಧಕ್ಕೆಯುಂಟಾಗಬಹುದು. ಇದು ಪ್ರಸ್ತುತ ಯುಜಿಸಿ ನಿಯಮಾವಳಿಗಳಿಗೆ ಒಳಪಟ್ಟಿರುವ ಶಿಕ್ಷಕರ ಸೇವಾ ನಿಯಮಗಳನ್ನು ಬಿಗಿಗೊಳಿಸಬಹುದು ಮತ್ತು ಸಂಸ್ಥೆಗಳಲ್ಲಿ ಶಿಕ್ಷಕರನ್ನು ತಮ್ಮಿಷ್ಟದಂತೆ ನಡೆಸಿಕೊಳ್ಳುವ ಅಧಿಕಾರವನ್ನು ನೀಡಿ ಶಿಕ್ಷಕರ ಹಕ್ಕುಗಳನ್ನು ಕಡಿತ ಮಾಡಬಹುದು.

ಎರಡನೆಯದಾಗಿ, ಸಾರ್ವಜನಿಕ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಮಾನವಾಗಿ ಕಾಣುವಂತಾದರೆ, ಬಡ ವಿದ್ಯಾರ್ಥಿಗಳ ಪಾಲಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತದೆ. ಇದು ಈಗಾಗಲೇ ಹಣಕಾಸಿನ ಅಭಾವ ಎದುರಿಸುತ್ತಿರುವ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಾಲೇಜುಗಳಿಗೆ ನೀಡುವ ಸಾರ್ವಜನಿಕ ಅನುದಾನದ ಕ್ರಮೇಣ ಕಡಿತಕ್ಕೆ ದಾರಿ ಮಾಡಿಕೊಡಬಹುದು. ತತ್ಪರಿಣಾಮವಾಗಿ, ಸರ್ಕಾರಿ ಸಂಸ್ಥೆಗಳು ಹೆಚ್ಚಿನ ಶುಲ್ಕ, ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವವಿರುವ ಶುಲ್ಕಾಧಾರಿತ ಕೋರ್ಸುಗಳ ಮೇಲೆ ಹೆಚ್ಚುಹೆಚ್ಚು ಅವಲಂಬಿತವಾಗಬೇಕಾಗುತ್ತದೆ. ಅದೇ ಸಮಯದಲ್ಲಿ, ಖಾಸಗಿ ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಕ್ಯಾಂಪಸ್ ತೆರೆಯಲು, ಪಠ್ಯಕ್ರಮ ವಿನ್ಯಾಸಗೊಳಿಸಲು ಮತ್ತು ಶುಲ್ಕದ ಪ್ರಮಾಣವನ್ನು ನಿಗದಿ ಮಾಡಲು ಹೆಚ್ಚಿನ ಅಧಿಕಾರ ನೀಡಿದಂತಾಗುತ್ತದೆ. ಎನ್‌ಇಪಿ-2020 ಕೂಡ ಸರ್ಕಾರದ ಶೈಕ್ಷಣಿಕ ಕ್ಷೇತ್ರದ ಖರ್ಚುಗಳನ್ನು ಕಡಿತಗೊಳಿಸಬೇಕು ಎಂದೇ ಹೇಳುತ್ತದೆ. ಈ ಎಲ್ಲಾ ವಿಷಕಾರಿ ಸುಳಿಗಳೊಳಗೆ ಸಿಲುಕಿ ಶಿಕ್ಷಣವು ಮತ್ತಷ್ಟು ತುಟ್ಟಿಯಾಗಲಿದೆ.

ಮೂರನೆಯದಾಗಿ, ವಿಧೇಯಕದಡಿಯಲ್ಲಿ ನಿಯಂತ್ರಣ ಮಂಡಳಿಗಳಿಗೆ ನೀಡಲಾದ ಅಧಿಕಾರಗಳು ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ವ್ಯಾಪಕ ಹಸ್ತಕ್ಷೇಪಕ್ಕೆ ಕಾರಣವಾಗಬಹುದು. ಆದ್ದರಿಂದ, ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವ ಬದಲು, ಈ ವಿಧೇಯಕವು ನಿಯಂತ್ರಣವನ್ನು ಮತ್ತಷ್ಟು ಹೆಚ್ಚಾಗಿಸಲಿದೆ.

ಕೊನೆಯದಾಗಿ, ಭಾರತೀಯ ಜ್ಞಾನ ಪರಂಪರೆಗೆ ಅತೀ ಹೆಚ್ಚು ಒತ್ತು ನೀಡಲಾಗುತ್ತಿರುವುದು ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಬಗ್ಗೆ ಕಳವಳವನ್ನು ಮೂಡಿಸುತ್ತದೆ. ವೈಜ್ಞಾನಿಕ ತಪಾಸಣೆಯ ಆಧಾರದ ಮೇಲೆ ದೇಶೀಯ ಜ್ಞಾನವನ್ನು ಉತ್ತೇಜಿಸುವುದು ಸ್ವಾಗತಾರ್ಹವಾದರೂ, ಮೂಢನಂಬಿಕೆಗಳು ಮತ್ತು ಇತಿಹಾಸವಲ್ಲದ್ದನ್ನು ಸತ್ಯವೆಂದು ಬಿಂಬಿಸುವ ಕಾರ್ಯವು, ಇಂದು ಅಳಿದುಳಿದಿರುವ ವೈಜ್ಞಾನಿಕ, ಧರ್ಮನಿರಪೇಕ್ಷ ಚಿಂತನೆಗಳನ್ನೂ ಸಂಪೂರ್ಣವಾಗಿ ನಾಶಪಡಿಸುತ್ತದೆ. ಉನ್ನತ ಶಿಕ್ಷಣದ ಚುಕ್ಕಾಣಿ ಹಿಡಿಯುವ ವಿಬಿಎಸ್‌ಎ, ವೈಚಾರಿಕ ಮನೋಭಾವವಿಲ್ಲದ ಯುವ ಪೀಳಿಗೆಯನ್ನು ಸೃಷ್ಟಿಸಲು ಆಡಳಿತಗಾರರ ಕೈಯಲ್ಲಿ ಒಂದು ಪರಿಣಾಮಕಾರಿ ಅಸ್ತ್ರವಾಗಲಿದೆ.

ಈ ಎಲ್ಲಾ ಕಳವಳಗಳ ಹಿನ್ನೆಲೆಯಲ್ಲಿ, ವಿಬಿಎಸ್‌ಎ ವಿಧೇಯಕವನ್ನು ಪ್ರಸ್ತುತ ರೂಪದಲ್ಲಿ ಜಾರಿಗೆ ತಂದರೆ, ಅದು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಮತ್ತು ಭಾರತದ ಶೈಕ್ಷಣಿಕ ಒಕ್ಕೂಟ ತತ್ವದ ಮೇಲೆ ಗಂಭೀರವಾದ ಕರಾಳ ಪರಿಣಾಮವನ್ನು ಬೀರಬಹುದು ಎಂಬ ಆತಂಕ ಶಿಕ್ಷಣಪ್ರೇಮಿ ಜನತೆಯನ್ನು ಕಾಡುತ್ತಿದೆ. ಆದ್ದರಿಂದ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣದ ಬಗ್ಗೆ ಕಳಕಳಿ ಹೊಂದಿರುವ ಪ್ರತಿಯೊಬ್ಬರೂ ಈ ವಿಧೇಯಕವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಇದನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಮುಂದಾಗಬೇಕು.