ಐತಿಹಾಸಿಕ ವಿಕಾಸ: ವಸಾಹತುಶಾಹಿ ಪರಂಪರೆಯಿಂದ ಸಾಂವಿಧಾನಿಕ ರಾಜಿಯವರೆಗೆ
ಭಾರತದ ವೈಯಕ್ತಿಕ ಕಾನೂನಿನ ವ್ಯವಸ್ಥೆಯ ಬೇರುಗಳು ವಸಾಹತುಶಾಹಿ ಯುಗದಲ್ಲಿವೆ. ಬ್ರಿಟಿಷರು, ಆಡಳಿತದ ಅನುಕೂಲತೆಯನ್ನು ಬಯಸಿ, ವೈಯಕ್ತಿಕ ವಿಷಯಗಳಿಗೆ ಧಾರ್ಮಿಕ ಕಾನೂನುಗಳನ್ನು ಉಳಿಸಿಕೊಂಡರು, ಆದರೆ ಭಾರತೀಯ ದಂಡ ಸಂಹಿತೆ (1860) ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆ (1861) ನಂತಹ ಅಪರಾಧ ಕಾನೂನುಗಳಿಗೆ ಏಕರೂಪದ ಸಂಹಿತೆಗಳನ್ನು ಜಾರಿಗೆ ತಂದರು. ಇದು ಇಂದಿಗೂ ಮುಂದುವರೆದಿರುವ ಮೂಲಭೂತ ಕಾನೂನು ಬಹುತ್ವವನ್ನು ಸೃಷ್ಟಿಸಿತು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಏಕರೂಪತೆಯ ಒತ್ತಡವು ಹೆಚ್ಚಾಯಿತು. 1940ರ ದಶಕದಲ್ಲಿ ಪರಿಚಯಿಸಲಾದ ಹಿಂದೂ ಕೋಡ್ ಮಸೂದೆಯು ಹಿಂದೂ ವೈಯಕ್ತಿಕ ಕಾನೂನನ್ನು ಸಂಹಿತೆಗೊಳಿಸುವ ಮತ್ತು ಸುಧಾರಿಸುವ ಮೊದಲ ಪ್ರಮುಖ ಪ್ರಯತ್ನವನ್ನು ಪ್ರತಿನಿಧಿಸುತ್ತದೆ; ಇದು ಅಂತಿಮವಾಗಿ 1955-56 ರ ಹಿಂದೂ ಕೋಡ್ ಮಸೂದೆಗಳಿಗೆ ಕಾರಣವಾಯಿತು. ಇದು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಏಕರೂಪದ ವೈಯಕ್ತಿಕ ಕಾನೂನುಗಳನ್ನು ಸ್ಥಾಪಿಸಿತು.
ಏಕರೂಪ ನಾಗರಿಕ ಸಂಹಿತೆಯ ಕುರಿತು ಸಂವಿಧಾನ ಸಭೆಯ ಚರ್ಚೆಗಳು ಆಳವಾಗಿ ಧ್ರುವೀಕರಿಸಲ್ಪಟ್ಟಿದ್ದವು. ಈ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಸಮರ್ಥಕರು, ಅದು ರಾಷ್ಟ್ರೀಯ ಏಕೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ ಎಂದು ವಾದಿಸಿದರು. ಆದರೆ ಮುಸ್ಲಿಂ ಸದಸ್ಯರು ಈ ಕ್ರಮವನ್ನು ಧಾರ್ಮಿಕ ಸ್ವಾತಂತ್ರ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯ ಉಲ್ಲಂಘನೆ ಎಂದು ತೀವ್ರವಾಗಿ ವಿರೋಧಿಸಿದರು. ಈ ಅಭಿಪ್ರಾಯ ಭೇದವನ್ನು ಗಮನದಲ್ಲಿರಿಸಿ ಸಂವಿಧಾನ ಸಭೆಯು ಏಕರೂಪ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕುಗಳ ಬದಲಿಗೆ ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿ ಇರಿಸಿತು. ಈ ರಾಜಿಯು ಕಾನೂನು ಏಕರೂಪತೆ ಮತ್ತು ಬಹುತ್ವವಾದಿ ಸಹಿಷ್ಣುತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಪ್ರತಿಬಿಂಬಿಸುತ್ತದೆ.
ಏಕರೂಪ ನಾಗರಿಕ ಸಂಹಿತೆಯ ಪರ ವಾದಗಳು: ಸಮಾನತೆ ಮತ್ತು ಲಿಂಗ ನ್ಯಾಯ
ಏಕರೂಪ ನಾಗರಿಕ ಸಂಹಿತೆಯ ಸಮರ್ಥಕರು, ಅದು ಸಾಂವಿಧಾನಿಕ ಸಮಾನತೆಯ ಭರವಸೆಗಳನ್ನು ಈಡೇರಿಸಲು ಅತ್ಯಗತ್ಯ ಎಂದು ವಾದಿಸುತ್ತಾರೆ. ಪ್ರಸ್ತುತ ವ್ಯವಸ್ಥೆಯು ಮಹಿಳೆಯರನ್ನು ತಾರತಮ್ಯಕ್ಕೆ ಒಳಪಡಿಸುತ್ತದೆ: ಮುಸ್ಲಿಂ ಮಹಿಳೆಯರು ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿಚ್ಛೇದನ ಮತ್ತು ಜೀವನಾಂಶದ ಹಕ್ಕುಗಳಲ್ಲಿ ನಿರ್ಬಂಧಗಳನ್ನು ಎದುರಿಸುತ್ತಾರೆ ಎಂದು ವಾದಿಸುತ್ತಾರೆ. ಏಕರೂಪ ನಾಗರಿಕ ಸಂಹಿತೆ ಇಲ್ಲದಿರುವುದು ಲಿಂಗ ಅಸಮಾನತೆಯನ್ನು ಶಾಶ್ವತಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಗಮನಿಸಿದೆ.
ರಾಷ್ಟ್ರೀಯ ಏಕೀಕರಣ ಮತ್ತು ಧರ್ಮನಿಪೇಕ್ಷತೆ
ಸಾಮಾನ್ಯ ರಾಷ್ಟ್ರೀಯ ಅಸ್ಮಿತೆಯನ್ನು ಬೆಳೆಸಲು ಏಕರೂಪÀ ಸಂಹಿತೆ ಅಗತ್ಯವೆಂದು ಪರಿಗಣಿಸಲಾಗಿದೆ. ಸುಪ್ರೀಂ ಕೋರ್ಟ್ ಸರಳಾ ಮುದ್ಗಲ್ ಪ್ರಕರಣದಲ್ಲಿ (1995) ಹೀಗೆ ಹೇಳಿದೆ: “ಶೇ.80ಕ್ಕಿಂತ ಹೆಚ್ಚು ನಾಗರಿಕರು ಈಗಾಗಲೇ ಸಂಹಿತೆಗೊಳಿಸಿದ ವೈಯಕ್ತಿಕ ಕಾನೂನಿನ ವ್ಯಾಪ್ತಿಗೆ ಬಂದಾಗ, ಎಲ್ಲಾ ನಾಗರಿಕರಿಗೆ ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸುವುದನ್ನು ಮುಂದೂಡಲು ಯಾವುದೇ ಸಮರ್ಥನೆಯಿಲ್ಲ”. ಪ್ರತ್ಯೇಕ ವೈಯಕ್ತಿಕ ಕಾನೂನುಗಳು ಸಾಮುದಾಯಿಕ ವಿಭಜನೆಗಳನ್ನು ಶಾಶ್ವತಗೊಳಿಸುತ್ತವೆ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕಾದ ಭಾರತದ ಧರ್ಮನಿಪೇಕ್ಷ ಗುಣಲಕ್ಷಣಕ್ಕೆ ವಿರುದ್ಧವಾಗಿವೆ ಎಂದು ಸಮರ್ಥಕರು ವಾದಿಸುತ್ತಾರೆ. ದೆಹಲಿ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಮತ್ತೊಂದು ಆಯಾಮವನ್ನು ಎತ್ತಿ ತೋರಿಸಿತು: ಅದೆಂದರೆ, ವೈಯಕ್ತಿಕ ಕಾನೂನುಗಳು ಮತ್ತು ಅಪರಾಧ ಕಾನೂನುಗಳ ನಡುವಿನ “ಪುನರಾವರ್ತಿತ ಸಂಘರ್ಷ”. ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಪ್ರೌಢಾವಸ್ಥೆ ತಲುಪಿದ ಅಪ್ರಾಪ್ತ ಹುಡುಗಿ ಮದುವೆಯಾಗಬಹುದು. ಆದರೆ, POCSO ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ, ಅಂತಹ ಮದುವೆಯು ಪತಿಯನ್ನು ಅಪರಾಧಿಕವಾಗಿ ಹೊಣೆಗಾರನನ್ನಾಗಿ ಮಾಡುತ್ತದೆ. ನ್ಯಾಯಾಲಯವು ಹೀಗೆ ಹೇಳಿತು: “ವೈಯಕ್ತಿಕ ಅಥವಾ ರೂಢಿಗತ ಆಚರಣೆಗಳು ರಾಷ್ಟ್ರೀಯ ಶಾಸನವನ್ನು ಅತಿಕ್ರಮಿಸದ ಏಕೈಕ ಕಾನೂನಿನ ಚೌಕಟ್ಟನ್ನು ಖಚಿತಪಡಿಸಿಕೊಳ್ಳಲು ಏಕರೂಪ ನಾಗರಿಕ ಸಂಹಿತೆಯ ಕಡೆಗೆ ಸಾಗುವ ಸಮಯ ಇದಲ್ಲವೇ?”
ಏಕರೂಪತೆಯ ವಿರೋಧದ ವಾದಗಳು: ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆ
ವಿಮರ್ಶಕರು ಭಾರತದ ಬಹುತ್ವದ ರಚನೆಯು ಏಕರೂಪ ಸಂಹಿತೆ, ಅಪ್ರಾಯೋಗಿಕ ಮತ್ತು ಅನಪೇಕ್ಷಿತ, ಎರಡನ್ನೂ ಮಾಡುತ್ತದೆ ಎಂದು ವಾದಿಸುತ್ತಾರೆ. ವೈಯಕ್ತಿಕ ಕಾನೂನುಗಳು ಕೇವಲ ಕಾನೂನು ಸಾಧನಗಳಲ್ಲ, ಬದಲಿಗೆ ಧಾರ್ಮಿಕ ಸಂಪ್ರದಾಯಗಳಲ್ಲಿ ಮತ್ತು ಸಾಂಸ್ಕೃತಿಕ ಅಸ್ಮಿತೆಗಳಲ್ಲಿ ಆಳವಾಗಿ ಹುದುಗಿವೆ. ಮುಸ್ಲಿಮರಿಗೆ, ಖುರಾನ್, ಹದೀಸ್ ಮತ್ತು ಶರಿಯತ್‌ನಿಂದ ಪಡೆದ ವೈಯಕ್ತಿಕ ಕಾನೂನು ಅವರ ನಂಬಿಕೆ ಮತ್ತು ಸಾಮುದಾಯಿಕ ಸ್ವಾಯತ್ತತೆಯ ಭಾಗವಾಗಿದೆ. ಆಲ್ ಇಂಡಿಯಾ ಮುಸ್ಲಿಂ ಮಹಿಳಾ ಸಂಘವು ಹೇಳಿದಂತೆ: “ನಮ್ಮ ವಿವಾಹ ಪದ್ಧತಿಯನ್ನು ಪವಿತ್ರ ಖುರಾನ್ ಪ್ರಕಾರ ನಿರ್ವಹಣೆ ಮಾಡಬೇಕೆಂದು ನಾವು ಬಯಸುತ್ತೇವೆ.” ಮೇಲಿನಿಂದ ಏಕರೂಪತೆಯನ್ನು ಹೇರುವುದು, ಎದುರಾಳಿಗಳು ವಾದಿಸುವಂತೆ, ಭಾರತದ ಸಮಾಜದ ದೀರ್ಘಕಾಲದ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ.
ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆದರಿಕೆ
ಅಲ್ಪಸಂಖ್ಯಾತ ಸಮುದಾಯಗಳು ಏಕರೂಪ ಸಂಹಿತೆಅನ್ನು ಬಹುಸಂಖ್ಯಾತರ ಯೋಜನೆಯಾಗಿ ನೋಡುತ್ತವೆ. ಮುಸ್ಲಿಂ ಮುಖಂಡರು ಈ ಸಂಹಿತೆಯು ವಿವಾಹ, ವಿಚ್ಛೇದನ ಮತ್ತು ಆಸ್ತಿ ಹಕ್ಕುಗಳ ಕುರಿತಾದ ಶರಿಯತ್ ಕಾನೂನನ್ನು ವ್ಯವಸ್ಥಿತವಾಗಿ ಅತಿಕ್ರಮಿಸುತ್ತದೆ ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ. ಏಕರೂಪ ಸಂಹಿತೆಯ ಅಡಿಯಲ್ಲಿ ಬಹುಪತ್ನಿತ್ವವು ಗುರಿಯಾಗಬಹುದಾದರೂ, ಇದೇ ರೀತಿಯ ಆಚರಣೆಗಳಿಗೆ ಆದಿವಾಸಿ ಸಮುದಾಯಗಳಿಗೆ ನೀಡಿದಂತೆ ವಿನಾಯಿತಿ ನೀಡಬಹುದು ಎಂದು ವಿಮರ್ಶಕರು ಹೇಳುತ್ತಾರೆ. ಇದು ತಮಗೆ ಬೇಕಾದಂತೆ ಜಾರಿ ಮಾಡುವ ಮತ್ತು ಸಂಕುಚಿತ ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡುವ ಆತಂಕವನ್ನು ಬಲಪಡಿಸುತ್ತದೆ. ಏಕರೂಪ ಸಂಹಿತೆಯ ಸಂಭಾವ್ಯ ಪರಿಣಾಮದ ಬಗ್ಗೆ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಕಳವಳವನ್ನು ವ್ಯಕ್ತಪಡಿಸಿದೆ.
ಕಾನೂನು ಮತ್ತು ರಾಜಕೀಯ ಸಂಕೀರ್ಣತೆ
ಎಲ್ಲಾ ಸಮುದಾಯಗಳ ಆಕಾಂಕ್ಷೆಗಳನ್ನು ಸಮನ್ವಯಗೊಳಿಸುವ ಸಮಗ್ರ ಏಕರೂಪ ಸಂಹಿತೆಯನ್ನು ರಚಿಸುವುದು ಅಗಾಧ ಸವಾಲುಗಳನ್ನು ಒಡ್ಡುತ್ತದೆ. ಭಾರತವು ಹಲವಾರು ಧಾರ್ಮಿಕ ಸಮುದಾಯಗಳನ್ನು ಹೊಂದಿದೆ, ಪ್ರತಿಯೊಂದೂ ವಿಭಿನ್ನ ಕಾನೂನು, ಸಂಪ್ರದಾಯಗಳನ್ನು ಹೊಂದಿದೆ. ಉತ್ತರಾಖಂಡದಲ್ಲಿನ ಇತ್ತೀಚಿನ ರಾಜ್ಯ ಮಟ್ಟದ ಏಕರೂಪ ಸಂಹಿತೆ-ಆಧುನಿಕ ಭಾರತದಲ್ಲಿ ಅಂತಹ ಮೊದಲ ಶಾಸನ-ಕಾನೂನು ಸವಾಲುಗಳನ್ನು ಎದುರಿಸಿದೆ ಮತ್ತು ಲಿವ್-ಇನ್ ಸಂಬಂಧಗಳ ನೋಂದಣಿ ಮತ್ತು ಎಲ್ಲಾ ಸಮುದಾಯಗಳಿಗೂ ಒಂದೇ ವೈವಾಹಿಕ ವಯಸ್ಸು ಕಡ್ಡಾಯ ಎಂಬ ಅಂಶಗಳು ವಿವಾದವನ್ನು ಹುಟ್ಟುಹಾಕಿವೆ. ಕೇರಳಂ ಮತ್ತು ಪಶ್ಚಿಮ ಬಂಗಾಳದಂತಹ ವಿರೋಧಪಕ್ಷಗಳು ಆಳುತ್ತಿದ್ದ ರಾಜ್ಯಗಳು ಏಕರೂಪ ಸಂಹಿತೆಯನ್ನು ತಿರಸ್ಕರಿಸಿವೆ,
ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಈ ಏಕರೂಪ ನಾಗರಿಕ ಸಂಹಿತೆ
ಬಿಜೆಪಿ ನೇತೃತ್ವದ ರಾಜ್ಯಗಳು ಏಕರೂಪ ಸಂಹಿತೆ ಶಾಸನದ ಕಡೆಗೆ ಚಲಿಸುತ್ತಿರುವ ಮತ್ತು ಸುಪ್ರೀಂ ಕೋರ್ಟ್ ಪದೇ ಪದೇ ಅನುಷ್ಠಾನಕ್ಕೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ಮತ್ತು ಅದರ ಪರಿವಾರದ ನಿಲುವುಗಳು ಪದೇ ಪದೇ ನೈಜ ಪ್ರಜಾತಂತ್ರವನ್ನು ಅಪ್ರಸ್ತುತಗೊಳಿಸುತ್ತಿರುವ ಸಂಧರ್ಭದಲ್ಲಿ, ಸಮಾನತೆಯ ಸಾಂವಿಧಾನಿಕ ಬದ್ಧತೆಯನ್ನು ಭಾರತದ ಅಗಾಧ ವೈವಿಧ್ಯತೆಯ ಕುರಿತ ಗೌರವದೊಂದಿಗೆ ಸಮತೋಲನಗೊಳಿಸುವ ಅಗತ್ಯವಿದೆ. ಇಲ್ಲವಾದಲ್ಲಿ ‘ಒಂದು ರಾಷ್ಟ್ರ- ಒಂದು ನೀತಿ’ ಅನ್ನುವ ಸಿಹಿಲೇಪಿತ ವಿಷವುಣ್ಣಿಸುವ ಕಾರ್ಯ ಎಗ್ಗಿಲ್ಲದೇ ನಡೆಯಬಹುದು.
ಪ್ರಜಾತಂತ್ರದ ನಿಯಮ, ರೂಢಿ ಮತ್ತು ಆಚರಣೆಗೆ ವಿರುದ್ಧವಾದ ಏಕಪಕ್ಷೀಯ ಕ್ರಮ: ಕಾಮ್ರೇಡ್ ಪ್ರವಾಶ್ ಘೋಷ್
ಆರ್‌ಎಸ್‌ಎಸ್- ಬಿಜೆಪಿ ಸರ್ಕಾರಗಳ ಪ್ರೇರಣೆಯಿಂದ ವಿವಿಧ ರಾಜ್ಯ ವಿಧಾನಸಭೆಗಳಲ್ಲಿ ‘ಏಕರೂಪ ನಾಗರಿಕ ಸಂಹಿತೆ’ (UCC) ಎಂದು ಕರೆಯಲ್ಪಡುವ ಮಸೂದೆಯನ್ನು ಯಾವುದೇ ಸರ್ವಾನುಮತವಿಲ್ಲದೆಯೇ ಅಂಗೀಕರಿಸುವುದನ್ನು ಬಲವಾಗಿ ವಿರೋಧಿಸಿ, ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರವಾಶ್ ಘೋಷ್, ಇದೇ ಜೂನ್ ೨೬ ರಂದು ಈ ಕೆಳಗಿನ ಹೇಳಿಕೆಯನ್ನು ನೀಡಿದ್ದಾರೆ.
ಶಾಸನಸಭೆಗಳಲ್ಲಿ ತಮಗಿರುವ ನಿರಂಕುಶ ಬಹುಮತದ ಬಲದಿಂದ “ಒಂದು ದೇಶ, ಒಂದು ಭಾಷೆ ಮತ್ತು ಒಂದು ಕಾನೂನು” ಎಂಬ ನೆಪವೊಡ್ಡಿ ಯುಸಿಸಿ ಎಂದು ಕರೆಯಲಾಗುವ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಗುಜರಾತ್, ಉತ್ತರಾಖಂಡ ಮತ್ತು ಅಸ್ಸಾಂ ಸರ್ಕಾರಗಳು ಕೈಗೊಂಡಿರುವ ನಿರ್ಧಾರದ ಬಗ್ಗೆ ನಾವು ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತೇವೆ. ವಸ್ತುನಿಷ್ಠ ಸಾಮಾಜಿಕ-ರಾಜಕೀಯ ವಾಸ್ತವತೆಯನ್ನು ಗಣನೆಗೆ ತೆಗೆದುಕೊಳ್ಳದೆ ಮತ್ತು ಇಂತಹ ನಿರ್ಣಾಯಕ ವಿಷಯದ ಬಗ್ಗೆ ರಾಷ್ಟ್ರೀಯ ಒಮ್ಮತವನ್ನು ಮೂಡಿಸುವ ಅನಿವಾರ್ಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ವಿವಾದಾತ್ಮಕ ಶಾಸನವನ್ನು ಅಂಗೀಕರಿಸಲು ಕೈಗೊಂಡಿರುವ ಈ ಏಕಪಕ್ಷೀಯ ಕ್ರಮವು ಪ್ರಜಾಸತ್ತಾತ್ಮಕ ಸಂಹಿತೆ, ರೂಢಿ ಮತ್ತು ಆಚರಣೆಗಳಿಗೆ ವಿರುದ್ಧವಾಗಿದೆ.
ನಿರ್ದಿಷ್ಟ ಸಾಮಾಜಿಕ-ರಾಜಕೀಯ ಕಾರಣಗಳಿಂದಾಗಿ, ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್‌ನ ರಾಜಿಪರ ಮನೋಭಾವದ ಬೂರ್ಜ್ವಾ ನಾಯಕತ್ವದ ನೇತೃತ್ವದಲ್ಲಿ ನಡೆದ ಸ್ವಾತಂತ್ರ‍್ಯ ಚಳವಳಿಯ ಹಾದಿಯಲ್ಲಿ ಭಾರತವು ರಾಜಕೀಯವಾಗಿ ಒಂದು ರಾಷ್ಟ್ರವಾಗಿ ವಿಕಸನಗೊಂಡಿದ್ದರೂ, ಭಾರತೀಯ ಸಮಾಜದ ಪ್ರಜಾಪ್ರಭುತ್ವೀಕರಣದ ಕಾರ್ಯವು ಅಪೂರ್ಣವಾಗಿಯೇ ಉಳಿದಿರುವುದರಿಂದ ಅದು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಧರ್ಮ, ಜಾತಿ, ಭಾಷೆ, ಜನಾಂಗ ಇತ್ಯಾದಿಗಳಿಂದ ವಿಭಜಿಸಲ್ಪಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ. ಇದರ ಪರಿಣಾಮವಾಗಿ, ಭಾರತದ ವಿವಿಧ ಸಮುದಾಯಗಳ ಸಾಮಾಜಿಕ ಪದ್ಧತಿಗಳು, ವಿವಾಹ ಮತ್ತು ಉತ್ತರಾಧಿಕಾರ ಕಾನೂನುಗಳು, ಧಾರ್ಮಿಕ ಆಚರಣೆಗಳು, ಆಹಾರ ಪದ್ಧತಿಗಳು, ಜೀವನ ವಿಧಾನ ಇತ್ಯಾದಿಗಳು ವೈವಿಧ್ಯಮಯವಾಗಿಯೇ ಮುಂದುವರಿದಿವೆ. ಇದನ್ನು ಮನಗಂಡೇ ಸಂವಿಧಾನ ಶಿಲ್ಪಿಗಳು ಸಹ ಎಚ್ಚರ ವಹಿಸಿ ಯುಸಿಸಿಯನ್ನು ಅಳವಡಿಸಿಕೊಳ್ಳುವುದರಿಂದ ದೂರ ಉಳಿದರು. ಆ ಸಮಯದಲ್ಲಿ, ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟನ್ನು ಗಟ್ಟಿಗೊಳಿಸಲು ಅಗತ್ಯವಾದ ಪೂರಕ ವಾತಾವರಣವನ್ನು ಸಿದ್ಧಪಡಿಸದೆ, ಸಂವಿಧಾನದಲ್ಲಿ ಇಂತಹ ನಿರ್ಣಾಯಕ ನಿಬಂಧನೆಯನ್ನು ಅವಸರದಲ್ಲಿ ಸೇರಿಸುವುದು ತಿರುಗುಬಾಣವಾಗಿ, ಅಂತಹ ಕಾನೂನನ್ನು ಹೊಂದುವ ಉದ್ದೇಶವನ್ನೇ ಹಾಳುಗೆಡವಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು.
ನಂತರ, 21ನೇ ಕಾನೂನು ಆಯೋಗವು ಸಹ 2018ರಲ್ಲಿ ಪ್ರಕಟಿಸಿದ ವಿವರವಾದ ಸಂವಿಧಾನ ಪತ್ರದಲ್ಲಿ, ಈ ಹಂತದಲ್ಲಿ ಯುಸಿಸಿ “ಅಗತ್ಯವೂ ಇಲ್ಲ ಮತ್ತು ಅಪೇಕ್ಷಣೀಯವೂ ಅಲ್ಲ” ಎಂದು ಬಲವಾಗಿ ಅಭಿಪ್ರಾಯಪಟ್ಟಿದೆ. ಪೂರಕ ವಾತಾವರಣವನ್ನು ಸೃಷ್ಟಿಸದೆ ಮತ್ತು ರಾಷ್ಟ್ರೀಯ ಒಮ್ಮತವನ್ನು ಮೂಡಿಸದೆ ಯುಸಿಸಿಯನ್ನು ತಂದರೆ, ಅದು ಪ್ರಸ್ತುತ ಇರುವ ಭಿನ್ನಾಭಿಪ್ರಾಯಗಳನ್ನು, ಪರಸ್ಪರ ದ್ವೇಷ, ಅಪನಂಬಿಕೆ ಮತ್ತು ಪರಸ್ಪರರ ವಿರುದ್ಧ ಕೆಡುಕಿನ ಭಾವನೆಗಳನ್ನು ಉಲ್ಬಣಗೊಳಿಸುವುದರಲ್ಲಿ ಮಾತ್ರ ಕೊನೆಗೊಳ್ಳುತ್ತದೆ. ಇದಲ್ಲದೆ, ಈ ಬಲವಂತದ ಯುಸಿಸಿಯು ಅಲ್ಪಸಂಖ್ಯಾತ ಜನರ, ಅದರಲ್ಲೂ ವಿಶೇಷವಾಗಿ ಈಗಾಗಲೇ ಆಡಳಿತಾರೂಢ ಬಿಜೆಪಿಯ ಆಶ್ರಯದಲ್ಲಿ ಬೀಗುತ್ತಿರುವ ಉನ್ಮಾದದ ಕೋಮುವಾದಿ ಬಹುಸಂಖ್ಯಾತ ಗುಂಪುಗಳಿಂದ ವಂಚನೆಗೆ, ಕಿರುಕುಳಕ್ಕೆ ಒಳಗಾಗಿರುವ, ಪೀಡಿಸಲ್ಪಟ್ಟಿರುವ ಮತ್ತು ಗುಂಪು ಹಲ್ಲೆ ಎದುರಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಾನೂನುಬದ್ಧ ಹಿತಾಸಕ್ತಿ ಮತ್ತು ಆಕಾಂಕ್ಷೆಗಳನ್ನು ಅಪಾಯಕ್ಕೆ ದೂಡುತ್ತದೆ.
ಭಾರತೀಯ ಸಂವಿಧಾನ ಶಿಲ್ಪಿಗಳ ವಾದವನ್ನು ಮತ್ತು 2018ರಲ್ಲಿ ಪ್ರಕಟವಾದ 21ನೇ ಕಾನೂನು ಆಯೋಗದ ಶಿಫಾರಸನ್ನು ನಿರ್ಲಕ್ಷಿಸಿ, ಬಿಜೆಪಿ ಆಳ್ವಿಕರು ಹಳೆಯ ಹಿಂದೂ ಕೋಡ್ ಬಿಲ್‌ನ ಹೊಸ ರೂಪಾಂತರವಾಗಿರುವ ಯುಸಿಸಿಯನ್ನು ಹೇರಲು ನಿರ್ಧರಿಸಿದ್ದಾರೆ.
ಅತ್ಯಂತ ಗಂಭೀರವಾದ ಕಳವಳದ ವಿಷಯವೆಂದರೆ, ಸಮಯ ಕಳೆದಂತೆ ಕೋಟ್ಯಂತರ ಶ್ರಮಜೀವಿ ಜನರ ನಡುವಿನ ಸಾಮಾಜಿಕ-ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಬದಲು, ಬಂಡವಾಳಶಾಹಿ ಆಳುವ ವರ್ಗದ ವಿರುದ್ಧದ ವರ್ಗ ಮತ್ತು ಸಮೂಹ ಹೋರಾಟಗಳನ್ನು ಸದೆ ಬಡಿಯಲು ಮತ್ತು ‘ಹಿಂದೂ ಓಟ್ ಬ್ಯಾಂಕ್’ ಅನ್ನು ಬಲಪಡಿಸಲು ಆಡಳಿತಾರೂಢ ವ್ಯವಸ್ಥೆ, ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷವು ಕೋಮುವಾದಿ-ಜಾತಿವಾದಿ-ಜನಾಂಗೀಯವಾದಿ-ಸಂಕುಚಿತ-ದುರಭಿಮಾನದ-ಭಾಷಾ-ಪ್ರಾದೇಶಿಕ ಸಂಘರ್ಷಗಳನ್ನು ಹೆಚ್ಚೆಚ್ಚು ಪ್ರಚೋದಿಸುವ ಮೂಲಕ ಮತ್ತಷ್ಟು ಉತ್ತೇಜನ ನೀಡುತ್ತಿದೆ.
ಆದ್ದರಿಂದ, ಜಾತಿ, ಮತ, ಧರ್ಮ, ಜನಾಂಗ ಅಥವಾ ಭಾಷೆಯ ಭೇದವಿಲ್ಲದೆ ಎಲ್ಲಾ ಪ್ರಜಾಪ್ರಭುತ್ವವಾದಿ ಮತ್ತು ಸುಚಿಂತನಾಶೀಲ ವ್ಯಕ್ತಿಗಳು ಒಂದಾಗಿ, ಇಂತಹ ಅತ್ಯಂತ ಹಾನಿಕಾರಕ ಯುಸಿಸಿ ಜಾರಿಯಿಂದ ಹಿಂದೆ ಸರಿಯುವಂತೆ ಎಲ್ಲಾ ಬಿಜೆಪಿ ಸರ್ಕಾರಗಳ ಮೇಲೆ ಒತ್ತಡ ಹೇರಲು, ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಒಂದು ಸಂಘಟಿತ, ಪ್ರಬಲ ಮತ್ತು ನಿರಂತರ ಜನಾಂದೋಲನವನ್ನು ರೂಪಿಸಬೇಕೆಂದು ನಾವು ಕರೆ ನೀಡುತ್ತೇವೆ.ಈ ಹೇಳಿಕೆಯ ಆಶಯವನ್ನು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾಗುವುದು ಈ ಸಂಧರ್ಭದಲ್ಲಿ ಅತ್ಯಂತ ಜರೂರು ಕಾರ್ಯವಾಗಿದೆ.
