“ನಾವು ಭಾರತದ ಪ್ರಭುತ್ವದ ವರ್ಗ ಗುಣಲಕ್ಷಣವನ್ನು ಮತ್ತು ಪ್ರಸ್ತುತ ಭಾರತದ ಆರ್ಥಿಕ ವ್ಯವಸ್ಥೆಯನ್ನು ಅದರ ವಿಶಿಷ್ಟ ಲಕ್ಷಣಗಳೊಂದಿಗೆ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾದರೆ, ಆಗ ನಾವು ಇಂದಿನ ಶೋಷಣೆಯ ಗುಣಲಕ್ಷಣವನ್ನು ಸ್ಪಷ್ಟವಾಗಿ ಗ್ರಹಿಸುವುದಕ್ಕಾಗಲಿ ಅಥವಾ ನಿರುದ್ಯೋಗ ಸಮಸ್ಯೆಯ ನಿಜವಾದ ಕಾರಣವನ್ನು ನಿರ್ಧರಿಸುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. (ಜೊತೆಗೆ) ಸಮಸ್ಯೆಯನ್ನು ಬಗೆಹರಿಸಲು ಸರಿಯಾದ ಮಾರ್ಗವನ್ನು ಹುಡುಕುವುದರಲ್ಲಿ ವಿಫಲರಾಗುತ್ತೇವೆ. ನಾವು ಆಗಾಗ ಸಮರಶೀಲ ಹೋರಾಟಗಳನ್ನು ನಡೆಸಬಹುದು. (ಆದರೆ) ನಾವು ಯಾರ ವಿರುದ್ಧ ಹೋರಾಡಬೇಕು, ನಮ್ಮ ವೈರಿ ಮತ್ತು ಸ್ನೇಹಿತರು ಯಾರು, ನಮ್ಮ ಸಮಸ್ಯೆಗಳಿಗೆ ಅಂತಿಮ ಪರಿಹಾರವನ್ನು ಕಂಡುಕೊಳ್ಳಲು ಚಳುವಳಿಗಳನ್ನು ಹೇಗೆ ಮತ್ತು ಯಾವ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ನಿರ್ಧರಿಸುವುದರಲ್ಲಿ ವಿಫಲರಾದರೆ, ಆಗ ನಾವು ಸುಮ್ಮನೆ ಗಂಟಲು ಹರಿಯುವಂತೆ ಕೂಗಿದರೆ ಮತ್ತು ಸಾವಿರ ಸಲ ಹೋರಾಡಲು ಹುರಿದುಂಬಿಸಿದರೂ ಸಹ ಅದು ವ್ಯರ್ಥ ಪ್ರಯತ್ನವಾಗುತ್ತದೆ. ಜನರಲ್ಲಿರುವ ಹೋರಾಟದ ಶಕ್ತಿಯೂ ಕೂಡ ದಿಕ್ಕು ತಪ್ಪುತ್ತದೆ, ಯಾವುದೇ ಫಲಕಾರಿಯಾದುದನ್ನು ಸಾಧಿಸಿದಂತಾಗುವುದಿಲ್ಲ. ಇನ್ನೊಂದು ಕಡೆ, …ಹೋರಾಟದಲ್ಲಿ ಭಾಗವಹಿಸಿದವರನ್ನು ತೀವ್ರ ಹತಾಶೆಯು ಆವರಿಸುತ್ತದೆ. (ಹಾಗಾಗಿ), ಯುವಜನರ ಸಮಸ್ಯೆಗಳನ್ನು, ಅಂದರೆ ನಿರುದ್ಯೋಗ, ಸಾಂಸ್ಕೃತಿಕ ಅಧಃಪತನ ಮತ್ತು ಅಂತಹ ಸಮಸ್ಯೆಗಳನ್ನು ಪರಿಹರಿಸಲು ಸರಿಯಾದ ದಾರಿಯನ್ನು ಹುಡುಕುವಾಗ ನಾವು ಎರಡು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಅಥವಾ ಅವುಗಳ ಮಹತ್ವವನ್ನು ತಗ್ಗಿಸಲು ಸಾಧ್ಯವಿಲ್ಲ. ಮೊದಲನೆಯದು: ಭಾರತದ ಪ್ರಭುತ್ವದ ಗುಣಲಕ್ಷಣವೇನು, ಅಂದರೆ ಯಾವ ವರ್ಗ ಅಥವಾ ವರ್ಗಗಳು ರಾಜ್ಯಾಧಿಕಾರದಲ್ಲಿವೆ? ಎರಡನೆಯದು: ಭಾರತದ ಆರ್ಥಿಕ ವ್ಯವಸ್ಥೆಯ ಗುಣಲಕ್ಷಣವೇನು, ಅದರ ನಿರ್ದಿಷ್ಟ ಲಕ್ಷಣಗಳೇನು? ನಾವು ಪರಿಷ್ಕರಣವಾದಿ ಮತ್ತು ಬೂರ್ಜ್ವಾ ಸುಧಾರಣಾವಾದಿ ಚಿಂತನೆಗಳಿಂದ ಮುಕ್ತರಾಗಿ, ಮೇಲಿನ ಎರಡು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾದರೆ, ಆಗ ಸರಿಯಾದ ಕ್ರಾಂತಿಕಾರಿ ಮಾರ್ಗವನ್ನು ಹುಡುಕಲು ಸಾಧ್ಯವಾಗುತ್ತದೆ. ಈಗ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಭುತ್ವದ ಗುಣಲಕ್ಷಣವನ್ನು ಮತ್ತು ಅದರ ನಿರ್ದಿಷ್ಟ ಲಕ್ಷಣಗಳನ್ನು ಪರಿಶೀಲಿಸೋಣ. ಪ್ರಭುತ್ವವು ಪ್ರಚಲಿತ ಆರ್ಥಿಕ ವ್ಯವಸ್ಥೆಯ ಅಡಿಪಾಯದ ಮೇಲಿನ ಮೇಲ್‌ರಚನೆ. ಆಳುವ ವರ್ಗದ ಕೈಯಲ್ಲಿ ಇಂತಹ ಅತ್ಯಂತ ಶಕ್ತಿಶಾಲಿ ಸಾಧನ, ತನ್ನ ವರ್ಗ ಆಳ್ವಿಕೆ ಮತ್ತು ವರ್ಗ ಪ್ರಾಬಲ್ಯವನ್ನು ಹೇರುವ ಆಯುಧವಾಗಿದೆ. (ಇಲ್ಲಿ) ಯಾವ ವರ್ಗ ಅಥವಾ ವರ್ಗಗಳು ರಾಜ್ಯಾಧಿಕಾರದಲ್ಲಿವೆ ಎನ್ನುವುದು ಚರ್ಚೆಯ ಮುಖ್ಯ ವಿಷಯ. ಈ ಸತ್ಯವನ್ನು ಗ್ರಹಿಸಲು ವಿಫಲರಾದರೆ, ಆಗ ಹೆಚ್ಚಿನ ಸಂದರ್ಭಗಳಲ್ಲಿ ಮತ್ತು ಆಗಾಗ ನಡೆಯುವ ರಾಜಕೀಯ ಬೆಳವಣಿಗೆಗಳು ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುತ್ತವೆ ಎನ್ನುವ ಚಾರಿತ್ರಿಕ ಸತ್ಯವನ್ನು ನಿರಾಕರಿಸಿದಂತಾಗುತ್ತದೆ. ಈ ಧೋರಣೆಯಿಂದ ನೋಡಿದರೆ, ಭಾರತದ ಬೂರ್ಜ್ವಾಜಿ಼ ರಾಜ್ಯಾಧಿಕಾರದಲ್ಲಿ ಬೇರು ಬಿಟ್ಟಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈಗ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಗುಣಲಕ್ಷಣದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸೋಣ. ಇದೊಂದು ಬಂಡವಾಳಶಾಹಿ ವ್ಯವಸ್ಥೆ. ಆದರೆ ಬಂಡವಾಳವಾದ ಎಂದರೇನು? ಸಾಮಾನ್ಯವಾಗಿ ಬಂಡವಾಳವಾದ ಎಂದರೆ ಮಾಲೀಕರು ಮತ್ತು ಕಾರ್ಮಿಕರು ಇರುವ ಮತ್ತು ಮಾಲೀಕ-ಕಾರ್ಮಿಕ ಸಂಬಂಧದ ಆಧಾರದ ಮೇಲೆ ನಿಂತಿರುವ ಹಾಗೂ ಗರಿಷ್ಠ ಲಾಭ ಗಳಿಸಲು ಉತ್ಪಾದನೆ ನಡೆಯುವ ಆರ್ಥಿಕ ವ್ಯವಸ್ಥೆ. ಒಬ್ಬರು ಉತ್ಪಾದನಾ ಸಾಧನಗಳ ಮಾಲೀಕರು ಮತ್ತು ಉಳಿದವರು ಕಾರ್ಮಿಕರು ಅಥವಾ ಕೂಲಿ ಪಡೆಯುವವರು. ಕಾರ್ಮಿಕರು ಕೂಲಿಗಾಗಿ ತಮ್ಮ ಶ್ರಮಶಕ್ತಿಯನ್ನು ಮಾರುತ್ತಾರೆ. ಅವರು ಪಡೆಯುವ ವೇತನವು ಹೆಚ್ಚಿನ ಮಟ್ಟಿಗೆ ಮಾಲೀಕನ ಇಚ್ಛೆಯ ಮೇಲೆ ನಿಂತಿದೆ. ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರ ಕಾರ್ಮಿಕರು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ನ್ಯಾಯಬದ್ಧ ವೇತನವನ್ನು ಪಡೆಯುತ್ತಾರೆಂದು ಹೇಳಬಹುದು. ಇಡೀ ದೇಶದ ಸಂಪತ್ತು ಕಾರ್ಮಿಕರ ಶ್ರಮದಿಂದ ಸೃಷ್ಟಿಯಾಗಿದೆ. ಹಾಗಿದ್ದರೂ ಕೂಡ, ಯಾವುದೇ ಶ್ರಮ ಹಾಕದ ಮಾಲೀಕನು ಅದರಲ್ಲಿ ದೊಡ್ಡ ಭಾಗವನ್ನು ಕಬಳಿಸಿಕೊಂಡು ಬೆಳೆಯುತ್ತಾ ಹೋಗುತ್ತಾನೆ. ಅವನ ಬಂಡವಾಳ ನಿರಂತರ ಏರಿಕೆಯಲ್ಲಿದ್ದರೆ, ಕಾರ್ಮಿಕರು ಜೀವನ ಪೂರ್ತಿ ಬಡತನದಲ್ಲಿ ಮುಳುಗಿರುತ್ತಾರೆ; ಅದಕ್ಕೆ ಯಾವತ್ತೂ ಪರಿಹಾರ ಸಿಗುವುದಿಲ್ಲ. ಅವರಿಗೆ ಉದ್ಯೋಗ ಭದ್ರತೆಯೂ ಇಲ್ಲ. ಇದು ಬಂಡವಾಳವಾದದ ಸಾರಾಂಶ.
ನಮ್ಮ ದೇಶದಲ್ಲಿ ಉತ್ಪಾದನೆಯನ್ನು, ಕಾರ್ಮಿಕರಿಗೆ ನ್ಯಾಯಯುತ ವೇತನವನ್ನು ಕೊಡುವ ಮತ್ತು ಸಂಪತ್ತಿನಲ್ಲಾಗುವ ಏರಿಕೆಗೆ ಅನುಗುಣವಾಗಿ ಅವರ ಆದಾಯವನ್ನು ಹೆಚ್ಚಿಸುವ ಸಾಮಾಜಿಕ ಉದ್ದೇಶದಿಂದ ನಡೆಸಲಾಗುತ್ತಿದೆಯೇ? ಸಾಮಾಜಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮೂಹಿಕ ಅವಶ್ಯಕತೆಗೆ ತಕ್ಕಂತೆ ಉತ್ಪಾದನೆಯನ್ನು ನಿರ್ದೇಶಿಸಲಾಗುತ್ತಿದೆಯೇ? ಜನರ ಕೊಳ್ಳುವ ಶಕ್ತಿಗೆ ಅನುಗುಣವಾಗಿ ಸರಕುಗಳ ಬೆಲೆಯನ್ನು ನಿರ್ಧರಿಸುತ್ತಾ ಸಮಾನ ವಿತರಣೆಯ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ನಮ್ಮ ದೇಶದಲ್ಲಿ ನಡೆಯುತ್ತಿರುವುದೇನೆಂದರೆ, ಕಾರ್ಮಿಕರಿಗೆ ಅತ್ಯಂತ ಕನಿಷ್ಠ ವೇತನವನ್ನು ಕೊಡಲಾಗುತ್ತದೆ; ಅದು ಎಷ್ಟು ಕನಿಷ್ಠವೆಂದರೆ, ಅದಕ್ಕಿಂತ ಸ್ವಲ್ಪ ಕಡಿಮೆಯಾದರೂ ಅವರಿಗೆ ಹೊಟ್ಟೆಬಟ್ಟೆಗೆ ಸಾಲದೆ ಬದುಕಲು ಸಾಧ್ಯವಾಗುವುದಿಲ್ಲ ಮತ್ತು ಮಾಲೀಕರು ಅವರನ್ನು ಲಾಭ ದೋಚುವ ಸಾಧನವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಉತ್ಪತ್ತಿಯಾದ ಸಂಪತ್ತಿನ ಉಳಿದ ಭಾಗ ಲಾಭದ ರೂಪದಲ್ಲಿ ಮಾಲೀಕನ ಖಜಾನೆಗೆ ಮತ್ತು ಆಡಳಿತಶಾಹಿಯನ್ನು ನಿರ್ವಹಿಸುವುದಕ್ಕೆ ಹೋಗುತ್ತದೆ. ಇದರ ಪರಿಣಾಮವಾಗಿ, ಜನರ ಕೊಳ್ಳುವ ಶಕ್ತಿ ಹೆಚ್ಚಾಗುವುದಿಲ್ಲ ಅಥವಾ ಮಾರುಕಟ್ಟೆ ವಿಸ್ತರಿಸುವುದಿಲ್ಲ ಅಥವಾ ಕೈಗಾರಿಕೆಯ ನಿರಂತರ ಬೆಳವಣಿಗೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜನರ ಕೊಳ್ಳುವ ಶಕ್ತಿ ಇಳಿಮುಖವಾಗುತ್ತಾ ಹೋದರೆ ಕೈಗಾರಿಕೆಯ ನಿರಂತರ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಮತ್ತು ಹಾಗಾದಾಗ, ಕೃಷಿಯ ಆಧುನೀಕರಣ ಮತ್ತು ಯಾಂತ್ರೀಕರಣ ಅಸಾಧ್ಯವಾಗುತ್ತಿದೆ ಅಥವಾ ಗ್ರಾಮೀಣ ಜೀವನದಿಂದ ಬಡತನ ಮತ್ತು ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ಜನರಿಗೆ ಕೆಲಸವೆಲ್ಲಿ ಸಿಗುತ್ತದೆ? ಅವರಿಗೆ ಉದ್ಯೋಗ ಕೊಡುವವರಾರು? ಯಾರೂ ಇಲ್ಲ. ಮಾಡಲು ಕೆಲಸವಿಲ್ಲದಿರುವಾಗ ಮಾಲೀಕನಿಗಾಗಲಿ ಅಥವಾ ಬಂಡವಾಳಶಾಹಿ ಪ್ರಭುತ್ವಕ್ಕಾಗಲಿ ಉದ್ಯೋಗ ನೀಡುವುದು ಸಾಧ್ಯವಿಲ್ಲ…
ಕಾರ್ಮಿಕರಿಗೆ ಕೆಲಸ ಬೇಕು, ಆದರೆ, ಮಾಲೀಕನಿಗೆ ಕಾರ್ಮಿಕರ ಶ್ರಮ ಶಕ್ತಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶ್ರಮ ಶಕ್ತಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡರೆ, ಬಂಡವಾಳಶಾಹಿ ಉತ್ಪಾದನಾ ನಿಯಮಕ್ಕೆ ಅನುಸಾರವಾಗಿ ಅತಿ ಉತ್ಪಾದನೆಯಾಗುತ್ತದೆ ಮತ್ತು ಸರಕುಗಳು ಗೋದಾಮುಗಳಲ್ಲಿ ಕೊಳೆಯುತ್ತವೆ. ಇದಕ್ಕೆ ಕಾರಣವೆಂದರೆ, ಜನರಲ್ಲಿ ಕೊಳ್ಳುವ ಶಕ್ತಿಯ ಕೊರತೆಯಿದೆ ಮತ್ತು ತೀವ್ರ ಪೈಪೋಟಿ ಹಾಗೂ ಇನ್ನಿತರ ಕಾರಣಗಳಿಂದಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಅವಕಾಶಗಳ ಭರವಸೆ ಇಲ್ಲ; ಇದರಿಂದಾಗಿ, ಸರಕುಗಳನ್ನು ಮಾರಾಟ ಮಾಡಲು ಮಾರುಕಟ್ಟೆಯಿಲ್ಲ. ಇಂದಿನ ಸಾಮ್ರಾಜ್ಯವಾದ ಮತ್ತು ಕಾರ್ಮಿಕ ವರ್ಗ ಕ್ರಾಂತಿಯ ಯುಗದಲ್ಲಿ, ವಿಶ್ವ ಬಂಡವಾಳವಾದದ ಬಿಕ್ಕಟ್ಟಿನ ಹಂತದಲ್ಲಿದೆ. ಅದರಲ್ಲೂ ನಿರ್ದಿಷ್ಟವಾಗಿ ವಿಶ್ವ ಬಂಡವಾಳಶಾಹಿ ಮಾರುಕಟ್ಟೆಯ ಮೂರನೇ ತೀವ್ರ ಸಾರ್ವತ್ರಿಕ ಬಿಕ್ಕಟ್ಟಿನ ಹಂತದಲ್ಲಿ, ಯಾವುದೇ ದೇಶದಲ್ಲಿ ಬಂಡವಾಳವಾದಕ್ಕೆ, ೧೮ನೇ ಶತಮಾನದ ಬಂಡವಾಳಶಾಹಿ ಕ್ರಾಂತಿಯ ಯುಗದಲ್ಲಿ ಸಾಧ್ಯವಾದಂತೆ ಮಾರುಕಟ್ಟೆಯನ್ನು ಅನಿರ್ಬಂಧಿತವಾಗಿ ವಿಸ್ತರಿಸುವ ಸಾಮರ್ಥ್ಯವಿಲ್ಲ. ೧೮ನೇ ಶತಮಾನದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆದಂತೆ, ನಮ್ಮ ದೇಶದಲ್ಲಿ ಬಂಡವಾಳವಾದವು ಜಮೀನ್ದಾರಿ ಪದ್ಧತಿಯ ವಿರುದ್ಧ ರಾಜಿರಹಿತ ಹೋರಾಟದ ಮೂಲಕ ಕೃಷಿ ಆರ್ಥಿಕತೆಗೆ ಪ್ರವೇಶಿಸಲಿಲ್ಲ ಮತ್ತು ಕೃಷಿಯ ಆಧುನೀಕರಣ ಮತ್ತು ಯಾಂತ್ರೀಕರಣ ಮಾಡಲಿಲ್ಲ; ಅದರಿಂದಾಗಿ, ಬಂಡವಾಳವಾದವು ಯಂತ್ರ-ಟ್ರ‍್ಯಾಕ್ಟರ್‌ಗಳೊಂದಿಗೆ ಪ್ರವೇಶಿಸಲು ಮಾಡುವ ಯಾವುದೇ ಪ್ರಯತ್ನವು ಒಂದೇ ಏಟಿಗೆ ಲಕ್ಷಾಂತರ ಜನರನ್ನು ಉದ್ಯೋಗದಿಂದ ಹೊರಹಾಕುತ್ತದೆ. ಈ ಪ್ರಮಾಣದಲ್ಲಿ ಹೆಚ್ಚಿದ ನಿರುದ್ಯೋಗದ ಒತ್ತಡಕ್ಕೆ ಸಿಲುಕಿ ಬಂಡವಾಳಶಾಹಿ ವ್ಯವಸ್ಥೆಯು ಕುಸಿತದ ಅಂಚಿಗೆ ತಳ್ಳಲ್ಪಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಭೂಹೀನ ಕಾರ್ಮಿಕರು, ಗೇಣಿದಾರರು ಮತ್ತು ಬಡ ರೈತರಿದ್ದಾರೆ; ಅವರು ಸಣ್ಣ ಹಿಡುವಳಿಯ ಭೂಮಿಗೆ ಕಟ್ಟು ಬಿದ್ದಿದ್ದಾರೆ ಮತ್ತು ಅದಷ್ಟೇ ಕೆಳಮಟ್ಟದ ಜೀವನವಾದರೂ ಸರಿ, ಹೇಗೋ ಒಂದು ಜೀವನ ನಡೆಸಲು ಅದರ ಮೇಲೆ ಅವಲಂಬಿತರಾಗಿದ್ದಾರೆ. ಬಂಡವಾಳಶಾಹಿ ಮಾಲೀಕರು ಭೂಮಿಯನ್ನು ಯಂತ್ರ-ಟ್ರ‍್ಯಾಕ್ಟರ್‌ಗಳೊಂದಿಗೆ ವ್ಯವಸಾಯ ಮಾಡಲು ಪ್ರಯತ್ನಿಸಿದರೆ, ಈ ಜನರು ಹೆಚ್ಚುವರಿಯಾಗಿ ಕೃಷಿಯಿಂದ ಹೊರಬೀಳುತ್ತಾರೆ. ನಮ್ಮ ದೇಶದಲ್ಲಿ ಯಂತ್ರ-ಟ್ರ‍್ಯಾಕ್ಟರ್‌ಗಳನ್ನು ಉಪಯೋಗಿಸುವ ಮುನ್ನವೇ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ನಿರುದ್ಯೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ; ಕೈಗಾರಿಕೆಗಳಿಗೆ ನಿರುದ್ಯೋಗಿಗಳನ್ನು ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ಕೈಗಾರಿಕೆಗಳು ಮುಚ್ಚಿ ಹೋಗುತ್ತಿರುವುದರಿಂದ, ಮಿಲ್ಲು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಉದ್ಯೋಗದಿಂದ ವಜಾ ಮಾಡುತ್ತಿದ್ದಾರೆ; ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳು ಇಲ್ಲದಿರುವುದರಿಂದ ಜನರು ಹಳ್ಳಿಯಿಂದ ನಗರಕ್ಕೆ ಬರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವ ದೇಶದಲ್ಲಿ ಯಂತ್ರ-ಟ್ರ್ಯಾಕ್ಟರ್‌ಗಳೊಂದಿಗೆ ಕೃಷಿಯನ್ನು ಆಧುನೀಕರಣಗೊಳಿಸಲು ಪ್ರಯತ್ನ ಮಾಡಿದರೆ ಬಂಡವಾಳವಾದಕ್ಕೆ ಉಳಿಗಾಲವಿಲ್ಲ… ಈ ಲಕ್ಷಾಂತರ ಜನರನ್ನು ಒಂದೇ ಏಟಿಗೆ ನಿರುದ್ಯೋಗಿಗಳನ್ನಾಗಿ ಮಾಡಿದರೆ, ಈ ಬೃಹದಾಕಾರದ ನಿರುದ್ಯೋಗಿ ಸೈನ್ಯವು ಹಳ್ಳಿ ಮತ್ತು ನಗರಗಳಲ್ಲಿ ಸ್ಫೋಟಗೊಳ್ಳುತ್ತದೆ; ಆಗ ಈ ಸವಾಲನ್ನು ಎದುರಿಸಲು ಯಾವುದೇ ರಾಜ್ಯಾಧಿಕಾರಕ್ಕೂ ಸಾಧ್ಯವಿಲ್ಲ. ಆದ್ದರಿಂದ, ನಮ್ಮ ದೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆಗೆ, ಕೈಗಾರಿಕೀಕರಣಕ್ಕೆ ಪೂರಕವಾದ ಕೆಲಸವಾಗಿ ಕೃಷಿಯ ಸಂಪೂರ್ಣ ಆಧುನೀಕರಣ ಮತ್ತು ಯಾಂತ್ರೀಕರಣ ಸಾಧ್ಯವಿಲ್ಲ.
ಆದ್ದರಿಂದ, ನೀವು ಯುವಜನರ ಚಳುವಳಿಯನ್ನು ಒಂದು ಪ್ರಜ್ಞಾಪೂರ್ವಕ ರಾಜಕೀಯ ಚಳುವಳಿಯಾಗಿ ಕಟ್ಟಬೇಕು. ನೀವು ಈ ಯುವಜನರ ಚಳುವಳಿಗಳನ್ನು ಕಾರ್ಮಿಕ ವರ್ಗದ ಮತ್ತು ಶೋಷಿತ ಜನತೆಯ ಬಂಡವಾಳಶಾಹಿ ವಿರೋಧಿ ಕ್ರಾಂತಿಕಾರಿ ಹೋರಾಟಕ್ಕೆ ಪೂರಕವಾಗಿ ಕಟ್ಟಲು ಸಾಧ್ಯವಾದರೆ, ಆಗ ಮಾತ್ರ ಯುವಜನರನ್ನು ಸಾಂಸ್ಕೃತಿಕ ಅಧಃಪತನದ ದುಷ್ಪ್ರಭಾವದಿಂದ ಕಾಪಾಡಲು ಸಾಧ್ಯ ಮತ್ತು ನಿರುದ್ಯೋಗದ ಸಮಸ್ಯೆಯನ್ನೂ ಸಹ ಬಗೆಹರಿಸಬಹುದು.”
