ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವದ ಕುರಿತು ಹಲವಾರು ಪ್ರಶ್ನೆಗಳು ಎದ್ದಿದ್ದವು. ಜೊತೆಗೆ, ಚುನಾವಣಾ ಆಯೋಗವು ಈಗ ಎತ್ತುತ್ತಿರುವ ಯಾವುದೇ ಆಕ್ಷೇಪಣೆಗಳನ್ನು ಹಿಂದೆ 2002ರಲ್ಲಿ ನಡೆಸಲಾದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಸಮಯದಲ್ಲಿ ಅದು ಎತ್ತಿರಲಿಲ್ಲ. ಆಯೋಗವು ಇಷ್ಟೊಂದು ಆಕ್ಷೇಪಣೆಗಳನ್ನು ಈಗೇಕೆ ಎತ್ತುತ್ತಿದೆ? ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಹೆಚ್ಚಿನ ಕಾಲಾವಧಿಯು ಅಗತ್ಯವಿದ್ದರೂ ಸಹ, ಆಯೋಗವು ಅದನ್ನು ಅತ್ಯಂತ ತರಾತುರಿಯಲ್ಲಿ ಪೂರ್ಣಗೊಳಿಸಲು ಏಕೆ ಮುಂದಾಯಿತು? ಎಸ್‌ಐಆರ್‌ನ ಮೇಲಿನ ಮೂಲ ಆಕ್ಷೇಪಣೆಯು ಅದರ ಪ್ರಕ್ರಿಯೆ ಮತ್ತು ಕಾರ್ಯವಿಧಾನದ ಸುತ್ತ ಕೇಂದ್ರೀಕೃತವಾಗಿತ್ತು. ಮೇಲಾಗಿ, ಒಂದು ಹೊಸ ಪ್ರಕ್ರಿಯೆಗೆ ನಿಜಕ್ಕೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದ್ದಾಗ, 27 ಲಕ್ಷಕ್ಕೂ ಹೆಚ್ಚು ಮತದಾರರ ಪರಿಶೀಲನೆಯನ್ನು ಮುಂದೂಡಲು ‘ತಾರ್ಕಿಕ ವ್ಯತ್ಯಾಸ’ ಎಂಬ ಹೊಸ ಪದಪ್ರಯೋಗವನ್ನು ಆಯೋಗವು ಬಳಸಿಕೊಂಡಿತು. ಈ ಹಿಂದೆ ಇಂತಹ ಯಾವುದೇ ನಿಬಂಧನೆ ಇರಲಿಲ್ಲ. ಯಾವ ಕಾರಣದಿಂದ ಆಯೋಗವು ಇಂತಹ ಹೊಸ ಮಾದರಿಯ ಆಕ್ಷೇಪಣೆಯನ್ನು ಎತ್ತಿತು?

ಈ ಪ್ರಶ್ನೆಗಳಿಗೆ ಯಾವುದೇ ವಿವರಣೆ ಅಥವಾ ಉತ್ತರ ನೀಡದೆ, ಸರ್ವೋಚ್ಛ ನ್ಯಾಯಾಲಯವು ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಘೋಷಿಸಿದೆ. ಕಾನೂನಿನ ದೃಷ್ಟಿಯಿಂದ ಈ ಸಮಸ್ಯೆಯು ಬಗೆಹರಿದಂತೆ ಕಾಣಿಸಬಹುದು, ಆದರೆ ಜನರ ಮನಸ್ಸಿನಿಂದ ಪ್ರಶ್ನೆಗಳು ಅಳಿದಿಲ್ಲ. ಈ ತೀರ್ಪು ಜನರ ಗ್ರಹಿಕೆಗೆ ನಿಲುಕುತ್ತಿಲ್ಲ. ಸೂಕ್ತ ನ್ಯಾಯ ಪ್ರಕ್ರಿಯೆಯನ್ನು ಅನುಸರಿಸಿ ಅದರ ಎಲ್ಲಾ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿಲ್ಲ ಎಂಬುದು ಜನಸಾಮಾನ್ಯರ ಅನಿಸಿಕೆಯಾಗಿದೆ. ಆದ್ದರಿಂದ, ಇಷ್ಟೊಂದು ಪ್ರಮುಖ ವಿಷಯದ ಮೇಲೆ ಇಂಥದ್ದೊಂದು ಗಂಭೀರ ತೀರ್ಪು ನೀಡುವ ಮೂಲಕ ಸರ್ವೋಚ್ಛ ನ್ಯಾಯಾಲಯದ ಗೌರವ ಮತ್ತು ಘನತೆಯನ್ನು ನಿಜವಾಗಿಯೂ ಎತ್ತಿಹಿಡಿಯಲಾಗಿದೆಯೇ ಎಂಬ ಅನುಮಾನವೂ ಸಹ ಮೂಡಿದೆ. ಪೌರತ್ವದ ಪರಿಶೀಲನೆಗೆ ಸಮಾನವಾಗಿರುವ ಚುನಾವಣಾ ಆಯೋಗದ ಈ ಕಾರ್ಯಕ್ರಮವು, ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಂಶವನ್ನು ಸೂಕ್ತ ಪ್ರಾಮುಖ್ಯತೆ ನೀಡಿ ಪರಿಶೀಲಿಸಲಾಗಿದೆಯೇ ಎಂದರೆ, ಉತ್ತರ: ‘ಬಹುಶಃ ಇಲ್ಲ’, ಎಂದು ಹೇಳಬೇಕಾಗುತ್ತದೆ. 

“ಲೋಕಸಭೆಗೆ ಮತ್ತು ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ನಡೆಯುವ ಚುನಾವಣೆಗಳು ವಯಸ್ಕ ಮತದಾನ ಪದ್ಧತಿಯ ಆಧಾರದ ಮೇಲೆ ನಡೆಯತಕ್ಕದ್ದು; ಅಂದರೆ, ಭಾರತದ ಪ್ರಜೆಯಾಗಿರುವ ಮತ್ತು ಶಾಸಕಾಂಗವು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಅಡಿಯಲ್ಲಿ ನಿಗದಿಪಡಿಸಬಹುದಾದ ದಿನಾಂಕದಂದು 18 ವರ್ಷಕ್ಕಿಂತ ಕಡಿಮೆಯಿಲ್ಲದ ವಯಸ್ಸಿನ ಹಾಗೂ ಅನಿವಾಸಿತ್ವ, ಮಾನಸಿಕ ಅಸ್ವಸ್ಥತೆ, ಅಪರಾಧ ಅಥವಾ ಭ್ರಷ್ಟಚಾರ ಅಥವಾ ಅಕ್ರಮ ನಡವಳಿಕೆಯ ಆಧಾರದ ಮೇಲೆ ಈ ಸಂವಿಧಾನದ ಅಥವಾ ಸೂಕ್ತ ಶಾಸಕಾಂಗವು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನ್ಯಥಾ ಅನರ್ಹಗೊಳಿಸಲ್ಪಡದ ಪ್ರತಿಯೊಬ್ಬ ವ್ಯಕ್ತಿಯೂ ಮತದಾರನಾಗಿ ನೋಂದಾಯಿಸಲು ಅರ್ಹನಾಗಿರುತ್ತಾನೆ” ಎಂದು ಸಂವಿಧಾನದ 326ನೇ ವಿಧಿಯು ಹೇಳುತ್ತದೆ. ಆ ವಿಧಿಯನ್ನು ಉಲ್ಲೇಖಿಸುತ್ತಾ, ಆಯೋಗದ ಪರ ವಕೀಲರು ಎಸ್‌ಐಆರ್ ನಡೆಸಲು ಆಯೋಗಕ್ಕೆ ಸಂಪೂರ್ಣ ಹಕ್ಕಿದೆ ಎಂದು ವಾದಿಸಿದರು. ಆಯೋಗಕ್ಕೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಯಾರು ಹೇಳುತ್ತಾರೆ? ಆದರೆ ಆಯೋಗವು ತನ್ನನ್ನು ಎಸ್‌ಐಆರ್‌ಗೆ ಮಾತ್ರ ಸೀಮಿತಗೊಳಿಸಿಕೊಂಡಿದೆಯೇ ಅಥವಾ ಮತದಾರರ ಪೌರತ್ವವನ್ನು ಪರಿಶೀಲಿಸುವ ಹಂತದವರೆಗೆ ಹೋಗಿದೆಯೇ? ‘ತಾರ್ಕಿಕ ವ್ಯತ್ಯಾಸ’ ಎಂಬ ನೆಪದಲ್ಲಿ ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಈ ವಿಧಿಯು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿದೆಯೇ? ಆದೇಶ ಹೊರಡಿಸಿದ ಪೀಠದ ಮಾನ್ಯ ನ್ಯಾಯಾಧೀಶರೊಬ್ಬರು ‘ತಾರ್ಕಿಕ  ವ್ಯತ್ಯಾಸ’ ಎಂಬ ಪದವು ಅತ್ಯಂತ ಮುಜುಗರದಾಯಕ ಎಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ 326ನೇ ವಿಧಿಯನ್ನು ಅನ್ವಯಿಸುವುದಾದರೆ, ‘ತಾರ್ಕಿಕ ವ್ಯತ್ಯಾಸ’ದ ಕಾರಣದಿಂದ 2026ರ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ 27ಲಕ್ಷಕ್ಕೂ ಹೆಚ್ಚು ಮತದಾರರು ಮಾನಸಿಕವಾಗಿ ಅಸ್ವಸ್ಥರು, ಅಪರಾಧಿಗಳು, ಕಿಡಿಗೇಡಿಗಳು, ಭ್ರಷ್ಟರು ಅಥವಾ ಅಕ್ರಮ ನಡವಳಿಕೆಯುಳ್ಳವರು ಎಂದು ಭಾವಿಸಬೇಕೇ? ಇಲ್ಲದಿದ್ದರೆ, ಅವರ ಹೆಸರುಗಳನ್ನು  ತೆಗೆದುಹಾಕಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ.

ಮತದಾರರ ಪಟ್ಟಿಯನ್ನು ಅಂತಿಮಗೊಳಿಸದೆ ಮತ್ತು 27ಲಕ್ಷ ಹೆಸರುಗಳನ್ನು ಪರಿಶೀಲನೆಗಾಗಿ ಬಾಕಿ ಉಳಿಸಿಕೊಂಡು, ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲು ಚುನಾವಣಾ ಆಯೋಗಕ್ಕೆ ಕಾನೂನಾತ್ಮಕವಾಗಿ ಅಧಿಕಾರವಿದೆಯೇ ಎಂಬುದೇ ಮೂಲಭೂತ ಪ್ರಶ್ನೆಯಾಗಿದೆ.

ಇಲ್ಲಿಯವರೆಗೆ, ಯಾವುದೇ ಮುಖ್ಯ ಚುನಾವಣಾ ಆಯುಕ್ತರಿಗೂ ಸಹ ‘ಯಾವೊಬ್ಬ ಅರ್ಹ ಮತದಾರನೂ ಮತದಾರರ ಪಟ್ಟಿಯಿಂದ ಹೊರಗುಳಿಯುವುದಿಲ್ಲ’ ಎಂದು ಇಷ್ಟೊಂದು ಬಾರಿ ಒತ್ತಿ ಹೇಳುವ ಅಗತ್ಯ ಬಂದಿರಲಿಲ್ಲ. ಏಕೆಂದರೆ, ಅದು ಚುನಾವಣಾ ಆಯೋಗದ ಕೆಲಸವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಪ್ರಸ್ತುತ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ನೇಮಕವಾಗಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಮಾತನ್ನು ಪದೇಪದೇ ಹೇಳುತ್ತ ಅದಕ್ಕೆ ತದ್ವಿರುದ್ಧವಾದುದನ್ನೇ ಮಾಡುತ್ತಿದ್ದಾರೆ. ಕಳೆದ ಫೆಬ್ರವರಿ 28ರಂದು ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, 27.16 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಪಟ್ಟಿಯಿಂದ ಕೈಬಿಟ್ಟಿದ್ದವರು ತಮ್ಮ ಆಕ್ಷೇಪಣೆಯನ್ನು ನೋಂದಾಯಿಸಲು ಮೇಲ್ಮನವಿ ಪ್ರಾಧಿಕಾರದ ಮುಂದೆ ಹಾಜರಾಗಲು ಸೂಚಿಸಲಾಯಿತು. ಮತದಾನದ ನಿಗದಿತ ಎರಡು ದಿನಾಂಕಗಳ ನಡುವೆ, 27 ಲಕ್ಷ ಹೆಸರುಗಳಲ್ಲಿ ಸುಮಾರು 1600 ಹೆಸರುಗಳನ್ನು ಮಾತ್ರ ಇತ್ಯರ್ಥಗೊಳಿಸಲು ಸಾಧ್ಯವಾಯಿತು. ಅಲ್ಲದೆ, ನ್ಯಾಯನಿರ್ಣಯಕ್ಕೆ ಒಳಪಟ್ಟ ಹೆಚ್ಚಿನ ಹೆಸರುಗಳು ಮತದಾನಕ್ಕೆ ಸಿಂಧುವಾಗಿವೆ ಎಂದು ಮೇಲ್ಮನವಿ ಪ್ರಾಧಿಕಾರವು ಅನುಮೋದಿಸಿರುವುದು ಕಂಡು ಬಂದಿದೆ. ಪ್ರಕರಣಗಳ ಇತ್ಯರ್ಥದ ಈ ವೇಗವನ್ನು ನೋಡಿದರೆ, ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಎಷ್ಟು ದಿನಗಳು ಬೇಕಾಗಬಹುದು? ಮತ್ತು ಒಂದು ವೇಳೆ ‘ತಾರ್ಕಿಕ ವ್ಯತ್ಯಾಸ’ದ ಶೇ.90-95ರಷ್ಟು ಪ್ರಕರಣಗಳು ಸರಿಯಾಗಿವೆ ಎಂದು ಕಂಡು ಬಂದಲ್ಲಿ, ಲಕ್ಷಾಂತರ ಅರ್ಹ ಮತದಾರರನ್ನು ಹೊರಗಿಟ್ಟ ಈ ಎಸ್‌ಐಆರ್ ಅನ್ನು ಕಾನೂನಾತ್ಮಕ ಎಂದು ಹೇಗೆ ಕರೆಯಲು ಸಾಧ್ಯ?

ಅಷ್ಟೇ ಅಲ್ಲದೆ, 2026ರ ಚುನಾವಣಾ ಫಲಿತಾಂಶವನ್ನು ಜನಾದೇಶ ಎಂದು ಹೇಗೆ ಪರಿಗಣಿಸಲು ಸಾಧ್ಯ? ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಈ ಪ್ರಶ್ನೆಗೆ ಯಾವುದೇ ಉತ್ತರ ಸಿಕ್ಕಿಲ್ಲ, ಅಥವಾ ಸಂವಿಧಾನವು ನೀಡಿದ ಮತದಾನದ ಹಕ್ಕನ್ನು ಚುನಾವಣಾ ಆಯೋಗವು ಸ್ವಯಂಪ್ರೇರಿತವಾಗಿ ಮತ್ತು ಏಕಪಕ್ಷೀಯವಾಗಿ ಅತಿಕ್ರಮಿಸಿರುವುದರ ಬಗ್ಗೆ ಯಾವುದೇ ಅವಲೋಕನವೂ ವ್ಯಕ್ತವಾಗಿಲ್ಲ. 

ಮೇಲಾಗಿ, ಎಸ್‌ಐಆರ್‌ನ (SIR) ವಿವಿಧ ಹಂತಗಳಲ್ಲಿ ತೆಗೆದುಹಾಕಲಾದವರ ಹೆಸರುಗಳನ್ನು ಅಂತಿಮ ಪೌರತ್ವವನ್ನು ನಿರ್ಣಯಿಸುವುದಕ್ಕಾಗಿ 4 ವಾರಗಳ ಒಳಗಾಗಿ ಕೇಂದ್ರ ಸರ್ಕಾರವು ನೇಮಿಸಿದ ಸಮಿತಿಗೆ ರವಾನಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ದೇಶಿಸಿದೆ. ಇದರರ್ಥ, ತೆಗೆದುಹಾಕಲಾದ ಹೆಸರುಗಳ ಪೌರತ್ವವನ್ನು ಗೃಹ ಸಚಿವಾಲಯದ ಅಡಿಯಲ್ಲಿರುವ ವಿದೇಶಿಯರ ನೋಂದಣಿ ಕಚೇರಿ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ನಿರ್ಣಯಿಸಲಾಗುತ್ತದೆ. ಈ ಎಸ್‌ಐಆರ್ ಎನ್ನುವುದು ಚುನಾವಣಾ ಆಯೋಗವು ಹಿಂಬಾಗಿಲಿನಿಂದ ನಡೆಸುತ್ತಿರುವ “ರಾಷ್ಟ್ರೀಯ ಪೌರತ್ವ ನೋಂದಣಿ” (NRC)ಯಲ್ಲದೆ ಮತ್ತೇನಲ್ಲ ಎಂಬುದನ್ನು ಈ ಕ್ರಮವು ದೃಢೀಕರಿಸುತ್ತದೆ.

ಚುನಾವಣಾ ಆಯೋಗದ ಈ ಕ್ರಮಗಳಿಗೆ ಸರ್ವೋಚ್ಚ ನ್ಯಾಯಾಲಯದ ಉತ್ತೇಜನ ದೊರಕಿರುವುದರಿಂದ, ಭವಿಷ್ಯದಲ್ಲಿ ಆಯೋಗಕ್ಕೆ ತನ್ನಿಷ್ಟದಂತೆ ಏನು ಬೇಕಾದರೂ ಮಾಡಲು ಮುಕ್ತ ಪರವಾನಿಗಿ ಸಿಕ್ಕಂತಾಗಿದೆ. ಬಿಜೆಪಿ ಸರ್ಕಾರವು ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯನ್ನು ಬದಲಾಯಿಸಿದ್ದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು. ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಆಯ್ಕೆ ಸಮಿತಿಯ ಬದಲಾಗಿ, ಈಗಿನ ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಜಾಗದಲ್ಲಿ ಸಂಪುಟ ದರ್ಜೆಯ ಸಚಿವರೊಬ್ಬರು ಸೇರ್ಪಡೆಗೊಂಡಿದ್ದಾರೆ. ಇದರರ್ಥ ಚುನಾವಣಾ ಆಯೋಗದ ಸದಸ್ಯರನ್ನು ಆಡಳಿತಾರೂಢ ಪಕ್ಷವು ಸ್ವತಃ ತಾನೇ ಆಯ್ಕೆ ಮಾಡುತ್ತದೆ ಮತ್ತು ತನ್ನ ಆದೇಶಗಳ ಅನುಸಾರ ಕಾರ್ಯನಿರ್ವಹಿಸುವಂತೆ  ಅವರನ್ನು ನಿಯೋಜಿಸುತ್ತದೆ. ನ್ಯಾಯಾಲಯದ ಈ ತೀರ್ಪಿನ ಅತ್ಯಂತ ದೊಡ್ಡ ಅಪಾಯ ಅಡಗಿರುವುದೇ ಇಲ್ಲಿ. ಒಟ್ಟಾರೆ, ತೀರ್ಪು ಏನೇ ಇರಲಿ, ತೆಗೆದುಹಾಕಲಾದ ಎಲ್ಲಾ ಮತದಾರರನ್ನು ಯುದ್ಧೋಪಾದಿಯಲ್ಲಿ ಮೇಲ್ಮನವಿ ಪ್ರಾಧಿಕಾರದ ಮೂಲಕ ಮತದಾರರ ಪಟ್ಟಿಗೆ ಸೇರಿಸಬೇಕೆಂದು ಎಸ್‌ಯುಸಿಐ(ಸಿ) ಆಗ್ರಹಿಸುತ್ತದೆ. ಏಕೆಂದರೆ ಕಾನೂನುಬದ್ಧತೆಯು ನ್ಯಾಯಸಮ್ಮತತೆಯನ್ನು ಮರೆಮಾಚಲು ಸಾಧ್ಯವಿಲ್ಲ.