ಸಂತಾಲ ದಂಗೆಯ ಹಿನ್ನೆಲೆ: ವಲಸೆ ಮತ್ತು ವಂಚನೆಯ ಇತಿಹಾಸ
18ನೇ ಶತಮಾನದ ಮಧ್ಯಭಾಗದಲ್ಲಿ ಸಂತಾಲ ಬುಡಕಟ್ಟು ಜನಾಂಗದವರು ಮುಖ್ಯವಾಗಿ ಛೋಟಾ ನಾಗ್ಪುರ ಪ್ರಸ್ಥಭೂಮಿಯ ದಟ್ಟ ಕಾಡುಗಳಲ್ಲಿ ನೆಲೆಸಿದ್ದರು. ಪ್ರಕೃತಿಯ ಮಡಿಲಲ್ಲಿ ಬದುಕುತ್ತಿದ್ದ ಇವರ ಮುಖ್ಯ ಕಸುಬು ಕೃಷಿ ಮತ್ತು ಬೇಟೆಯಾಡುವುದಾಗಿತ್ತು. ಆದರೆ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಜಮೀನ್ದಾರರ ದುರಾಸೆ ಇವರ ಪ್ರಶಾಂತ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. 1769-70ರ ಭೀಕರ ಬಂಗಾಳ ಕ್ಷಾಮದಿಂದಾಗಿ ಕಾರ್ಮಿಕರ ತೀವ್ರ ಕೊರತೆ ಉಂಟಾಗಿತ್ತು. ಇದನ್ನು ಸರಿದೂಗಿಸಲು ಮತ್ತು ತಮಗೆ ನಿರಂತರ ಆದಾಯವನ್ನು ಖಾತ್ರಿಪಡಿಸಿಕೊಳ್ಳಲು ಬ್ರಿಟಿಷ್ ಸರ್ಕಾರ 1793ರಲ್ಲಿ ‘ಶಾಶ್ವತ ವಸಾಹತು ಕಾಯ್ದೆ (Permanent Settlement Act)ಯನ್ನು ಜಾರಿಗೆ ತಂದಿತು. ಅಂದರೆ, ರೈತರಿಂದ ಕೇವಲ ಕಂದಾಯವನ್ನು ಸಂಗ್ರಹಿಸುವ ಜವಾಬ್ದಾರಿ ಮಾತ್ರವೇ ಇದ್ದ ಜಮೀನ್ದಾರರು ಈಗ ಭೂಮಾಲೀಕರಾಗಿ ಬ್ರಿಟಿಷರಿಗೆ ನಿಗದಿತ ತೆರಿಗೆ ಪಾವತಿಸಬೇಕಾಗಿ ಬಂತು; ಅದಕ್ಕಾಗಿ ಅವರು ರೈತರನ್ನು ಶೋಷಿಸಲಾರಂಭಿಸಿದರು. ಇದೇ ಸಮಯದಲ್ಲಿ, ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಬ್ರಿಟಿಷರು ಮತ್ತು ಜಮೀನ್ದಾರರು ಸಂತಾಲರನ್ನು ದಾಳವಾಗಿ ಬಳಸಿಕೊಂಡರು. ಹೆಚ್ಚಿನ ಕೂಲಿ ಮತ್ತು ಅಗ್ಗದ ದರದಲ್ಲಿ ಭೂಮಿಯನ್ನು ಬಾಡಿಗೆಗೆ ಕೊಡುವ ಆಮಿಷ ಒಡ್ಡಿದರು. ಅದಕ್ಕೆ ಬಲಿಯಾದ ಸಂತಾಲರು 1793 ಮತ್ತು 1810ರ ನಡುವೆ ಛೋಟಾ ನಾಗ್ಪುರದಿಂದ ರಾಜ್‌ಮಹಲ್ ಬೆಟ್ಟಗಳ ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ಭಾರಿ ಸಂಖ್ಯೆಯಲ್ಲಿ ವಲಸೆ ಹೋದರು. ಕಾಡಿನ ಮರಗಳನ್ನು ಕಡಿದು, ರಕ್ತ ಬೆವರು ಸುರಿಸಿ ಸಂತಾಲರು ಭೂಮಿಯನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದರು. ಆದರೆ, ಭೂಮಿ ಹಸನಾದ ನಂತರ ವಂಚಕ ಜಮೀನ್ದಾರರು ಕೃಷಿ ಭೂಮಿಯ ಬಾಡಿಗೆಯನ್ನು ದಿಢೀರನೆ ದುಪ್ಪಟ್ಟು ಮಾಡಿದರು. ಭರಿಸಲಾಗದ ಅತಿಯಾದ ತೆರಿಗೆಗಳನ್ನು ಸಂತಾಲರ ಮೇಲೆ ಹೇರಲಾಯಿತು. ಜಮೀನ್ದಾರರ ಈ ವಂಚನೆ ಮತ್ತು ಅತಿಯಾದ ಶೋಷಣೆಯನ್ನು ತಡೆಯಲಾಗದೆ, ಅಸಹಾಯಕರಾದ ಕೆಲವು ಸಂತಾಲರು ತಾವು ಕಷ್ಟಪಟ್ಟು ಸಿದ್ಧಪಡಿಸಿದ್ದ ಕೃಷಿ ಭೂಮಿಯನ್ನು ತೊರೆದು ಮತ್ತೆ ಕಾಡಿನ ಒಳಭಾಗಗಳಿಗೆ ವಲಸೆ ಹೋಗಬೇಕಾಯಿತು. ಇದೇ ಮುಂದೆ ಬ್ರಿಟಿಷರ ವಿರುದ್ಧದ ಮಹಾ ದಂಗೆಗೆ ಮೊದಲ ಕಿಡಿಯಾಯಿತು. ಮತ್ತೆ, 1830ರ ದಶಕದಲ್ಲಿ, ಬಂಗಾಳ ಪ್ರೆಸಿಡೆನ್ಸಿಯನ್ನು ಆಳುತ್ತಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಭೂ ಕಂದಾಯವನ್ನು ಹೆಚ್ಚಿಸಿಕೊಳ್ಳಲು ಇನ್ನೊಂದು ಹೊಸ ತಂತ್ರ ಹೂಡಿತು. ರಾಜ್‌ಮಹಲ್ ಬೆಟ್ಟಗಳ ಕಣಿವೆಗಳಲ್ಲಿದ್ದ ತನಗೆ ಸೇರಿದ ‘ದಾಮಿನ್-ಇ-ಕೋಹ್’ (ಬೆಟ್ಟಗಳ ಅಂಚುಗಳು) ಎಂಬ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಮತ್ತು ಅಲ್ಲೇ ನೆಲೆಸಲು ಸಂತಾಲರನ್ನು ಪ್ರೋತ್ಸಾಹಿಸಿತು. ಸಂತಾಲರನ್ನು ಭಾರಿ ಸಂಖ್ಯೆಯಲ್ಲಿ ಆಕರ್ಷಿಸಲು ಕಂಪನಿ ಸರ್ಕಾರ ಕೆಲವು ವಿಶೇಷ ಸವಲತ್ತುಗಳನ್ನು ನೀಡಿತು. ಜಮೀನ್ದಾರರ ಕಿರುಕುಳ ತಪ್ಪಿಸಲು, ಸಂತಾಲರು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬ್ರಿಟಿಷ್ ಕಂಪನಿಗೆ ಮಾತ್ರ ತೆರಿಗೆ ಪಾವತಿಸುವ ಕರಾರಿನ ಮೇಲೆ ಭೂಮಿಯ ಗುತ್ತಿಗೆಯನ್ನು ನೀಡಲಾಯಿತು. ಸಾವಿರಾರು ಸಂತಾಲರು ದಾಮಿನ್-ಇ-ಕೋಹ್ ವ್ಯಾಪ್ತಿಯ ಹೊರಗಿನ ಜಮೀನ್ದಾರಿ ಭೂಮಿಗಳಲ್ಲಿ, ಬ್ರಿಟಿಷರ ಸ್ವಾಮ್ಯದ ನೀಲಿ (Indigo) ತೋಟಗಳಲ್ಲಿ ಮತ್ತು ವೇಗವಾಗಿ ಬೆಳೆಯುತ್ತಿದ್ದ ರೈಲ್ವೆ ಯೋಜನೆಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಆರಂಭಿಸಿದರು. ಬ್ರಿಟಿಷರ ಈ ನೀತಿಯಿಂದಾಗಿ ರಾಜ್‌ಮಹಲ್ ಬೆಟ್ಟಗಳ ಪ್ರದೇಶಕ್ಕೆ ಸಂತಾಲರ ವಲಸೆ ತೀವ್ರಗೊಂಡಿತು. 1838ರಲ್ಲಿ ಕೇವಲ 3,000 ಇದ್ದ ಸಂತಾಲರ ಜನಸಂಖ್ಯೆಯು, ಮುಂದಿನ ಕೆಲವೇ ವರ್ಷಗಳಲ್ಲಿ ಅಂದರೆ 1851ರ ವೇಳೆಗೆ ಬರೋಬ್ಬರಿ 83,000ಕ್ಕೆ ಏರಿಕೆಯಾಯಿತು! ಸಂತಾಲರು ಕಾಡನ್ನು ಕಡಿದು ಕೃಷಿ ಭೂಮಿಯನ್ನು ವಿಸ್ತರಿಸಿದಂತೆ ಮತ್ತು ಜನಸಂಖ್ಯೆ ಹೆಚ್ಚಿದಂತೆ ಬ್ರಿಟಿಷ್ ಕಂಪನಿಯ ದುರಾಸೆಯೂ ಹೆಚ್ಚಾಯಿತು. ಕಂಪನಿಯು ತೆರಿಗೆ ದರಗಳನ್ನು ವಿಪರೀತವಾಗಿ ಹೆಚ್ಚಿಸತೊಡಗಿತು. ಕೇವಲ ಒಂದೂವರೆ ದಶಕದಲ್ಲಿ ದಾಮಿನ್-ಇ-ಕೋಹ್ ಎಸ್ಟೇಟ್‌ನಿಂದ ಬ್ರಿಟಿಷ್ ಸರ್ಕಾರಕ್ಕೆ ಬರುತ್ತಿದ್ದ ಕಂದಾಯದ ಪ್ರಮಾಣವು ಶೇಕಡಾ 600 ರಷ್ಟು ಗಗನಕ್ಕೇರಿತು. ಹೀಗೆ ಸಂತಾಲರ ಕಠಿಣ ಶ್ರಮದ ದುಡಿಮೆಯನ್ನು ಬ್ರಿಟಿಷರು ವ್ಯವಸ್ಥಿತವಾಗಿ ದೋಚಿದರು.
ಮುಗ್ಧ ಜನರನ್ನು ಕೆರಳಿಸಿದ ಶೋಷಣೆಯ ಜಾಲ
ದಾಮಿನ್-ಇ-ಕೋಹ್ ಪ್ರದೇಶದಲ್ಲಿ ಸಂತಾಲರ ಜನಸಂಖ್ಯೆ ಮತ್ತು ಕೃಷಿ ವಿಸ್ತರಣೆಯಾಗುತ್ತಿದ್ದಂತೆ, ಅವರ ನೆಮ್ಮದಿಯ ಜೀವನವನ್ನು ಕದಡಲು ವ್ಯಾಪಾರಿಗಳು, ಲೇವಾದೇವಿಗಾರರು ಮತ್ತು ಜಮೀನ್ದಾರರ ಪ್ರವೇಶವಾಯಿತು. ಬೆಳೆ ಕೊಯ್ಲಿನ ನಡುವಿನ ಬರಗಾಲದ ದಿನಗಳಲ್ಲಿ ಸಂತಾಲರು ಅನಿವಾರ್ಯವಾಗಿ ಸಾಲಕ್ಕಾಗಿ ಲೇವಾದೇವಿಗಾರರನ್ನು ಆಶ್ರಯಿಸಬೇಕಾಯಿತು. ಇದರ ದುರುಪಯೋಗ ಪಡಿಸಿಕೊಂಡ ಲೇವಾದೇವಿಗಾರರು ಸಂತಾಲರ ಮೇಲೆ ಶೇಕಡಾ 25 ರಿಂದ 500 ರಷ್ಟು ಅತಿಮಾನುಷ ಬಡ್ಡಿಯನ್ನು ಹೇರಿದರು. ದೋಷಪೂರಿತ ತೂಕ ಮತ್ತು ಅಳತೆಗೋಲುಗಳನ್ನು ಬಳಸಿ ಮುಗ್ಧ ಬುಡಕಟ್ಟು ಜನರನ್ನು ನಿರಂತರವಾಗಿ ವಂಚಿಸಿದರು. ಸಾಲ ತೀರಿಸದ ನೆಪದಲ್ಲಿ ಸಂತಾಲರ ಭೂಮಿ, ಜಾನುವಾರು ಮತ್ತು ಬೆಳೆಗಳನ್ನು ಬಲವಂತವಾಗಿ ಕಿತ್ತುಕೊಂಡರು. ಅಷ್ಟೇ ಅಲ್ಲದೆ, ಅವರನ್ನು ತಲೆಮಾರುಗಳ ಕಾಲ ಜೀತದಾಳುಗಳನ್ನಾಗಿ ಮಾಡಿಕೊಂಡರು. ಜಮೀನ್ದಾರರು ದಾಮಿನ್-ಇ-ಕೋಹ್ ಎಸ್ಟೇಟ್‌ನ ಗಡಿಭಾಗದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾರಂಭಿಸಿದರು. ಇದನ್ನು ತಡೆಯಬೇಕಾಗಿದ್ದ ಬ್ರಿಟಿಷ್ ಕಂದಾಯ ಅಧಿಕಾರಿಗಳು, ತಮ್ಮ ವೈಯಕ್ತಿಕ ಲಾಭ ಹಾಗೂ ಲಂಚಕ್ಕಾಗಿ ಸಂತಾಲರ ಮೇಲೆ ಮತ್ತಷ್ಟು ಅತಿಯಾದ ತೆರಿಗೆಗಳನ್ನು ಹೇರಿ ಹಿಂಸಿಸಿದರು. ಸಂತಾಲರಿಗೆ ಬ್ರಿಟಿಷ್ ಆಡಳಿತದಲ್ಲಿ ಕಾನೂನುಬದ್ಧ ರಕ್ಷಣೆ ಸಿಗಲೇ ಇಲ್ಲ. ಬ್ರಿಟಿಷರ ನ್ಯಾಯಾಲಯಗಳು ಸಂತಾಲರ ವಾಸಸ್ಥಳದಿಂದ ಅತ್ಯಂತ ದೂರದಲ್ಲಿದ್ದವು. ಶ್ರೀಮಂತ ಲೇವಾದೇವಿಗಾರರು ಮತ್ತು ಜಮೀನ್ದಾರರು ಸ್ಥಳೀಯ ಪೊಲೀಸ್ ಹಾಗೂ ನ್ಯಾಯಾಲಯದ ಅಧಿಕಾರಿಗಳಿಗೆ ಭಾರಿ ಪ್ರಮಾಣದಲ್ಲಿ ಲಂಚ ನೀಡಿ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಈ ಎಲ್ಲಾ ಅನ್ಯಾಯಗಳ ವಿರುದ್ಧ ಸಂತಾಲ್ ಬುಡಕಟ್ಟಿನ ನಾಯಕರು ದಂಗೆಗೆ ಒಂದು ವರ್ಷ ಮುಂಚಿತವಾಗಿಯೇ ಕಂಪನಿ ಸರ್ಕಾರಕ್ಕೆ ವ್ಯವಸ್ಥಿತವಾಗಿ ದೂರುಗಳನ್ನು ನೀಡಿದ್ದರು. ಆದರೆ, ಸರ್ಕಾರ ಅವರ ಅಹವಾಲುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.
ದಬ್ಬಾಳಿಕೆಯ ವಿರುದ್ಧ ಭುಗಿಲೆದ್ದ ಆಕ್ರೋಶ
ನಿರಂತರ ಶೋಷಣೆ ಮತ್ತು ಅನ್ಯಾಯಗಳ ಜಾಲದಲ್ಲಿ ಸಿಲುಕಿ ಬೇಸತ್ತಿದ್ದ ಸಂತಾಲರ ತಾಳ್ಮೆಯ ಕಟ್ಟೆ ಒಡೆಯಿತು. 1855ರ ಆರಂಭದಲ್ಲಿ ಬ್ರಿಟಿಷ್ ಪೊಲೀಸರು ಜನರನ್ನು ಕಾರಣವಿಲ್ಲದೆ ಬಂಧಿಸಿ, ಕ್ರೂರವಾಗಿ ಹಿಂಸಿಸಿದಾಗ ಸಂತಾಲರ ಆಕ್ರೋಶ ಜ್ವಾಲೆಯಾಗಿ ಸ್ಫೋಟಗೊಂಡಿತು. ಈ ಮಹತ್ತರ ಬಂಡಾಯವನ್ನು ಸಂಘಟಿಸಿ, ಮುನ್ನಡೆಸಿದವರು ಜಾರ್ಖಂಡ್‌ನ ಭೋಗ್ನಾದಿಹ್ ಗ್ರಾಮದ ಮುರ್ಮು ಮನೆತನದ ನಾಲ್ವರು ಸೋದರರು: ಸಿಧು, ಕಾನ್ಹು, ಚಾಂದ್ ಮತ್ತು ಭೈರವ್. ಇವರಲ್ಲಿ ಸಿಧು ಮತ್ತು ಕಾನ್ಹು ಮುಖ್ಯ ನಾಯಕರಾಗಿದ್ದರು. ಇವರೊಂದಿಗೆ ಇವರ ಸಹೋದರಿಯರಾದ ಫುಲೋ ಮತ್ತು ಝಾನೋ ಕೂಡ ಸಕ್ರಿಯವಾಗಿ ಭಾಗವಹಿಸಿದ್ದರು. ಜೂನ್ 1855ರಲ್ಲಿ ಕ್ರಾಂತಿಗೆ ಧಾರ್ಮಿಕ ಮತ್ತು ನೈತಿಕ ಶಕ್ತಿಯನ್ನು ತುಂಬಲು ಸಿಧು ಮತ್ತು ಕಾನ್ಹು, ತಮಗೆ ಬುಡಕಟ್ಟು ಆರಾಧ್ಯ ದೈವವಾದ ‘ಠಾಕೂರ್ ಬೊಂಗಾ’ (ದೇವರು) ದರ್ಶನ ನೀಡಿ, ಶೋಷಣೆಯ ವಿರುದ್ಧ ಆಯುಧ ಹಿಡಿಯಲು ಆದೇಶಿಸಿದ್ದಾನೆ ಎಂದು ಘೋಷಿಸಿದರು. ಇದು ಸಂತಾಲರಲ್ಲಿ ಹೊಸ ಭರವಸೆ ಮತ್ತು ಧೈರ್ಯವನ್ನು ತುಂಬಿತು. ಈ ಐಕ್ಯತೆಯ ಕರೆಗೆ ಓಗೊಟ್ಟು 1855ರ ಜೂನ್ 30 ರಂದು ಭೋಗ್ನಾದಿಹ್ ಗ್ರಾಮದಲ್ಲಿ ಸುಮಾರು 400 ಕ್ಕೂ ಹೆಚ್ಚು ಹಳ್ಳಿಗಳ 10,000 ಕ್ಕೂ ಹೆಚ್ಚು ಸಂತಾಲರು ಜಮಾಯಿಸಿದರು. ಅಲ್ಲಿ ಸಿಧು ಮತ್ತು ಕಾನ್ಹು ಬ್ರಿಟಿಷ್ ಆಡಳಿತದ ವಿರುದ್ಧ ದಂಗೆಯನ್ನು ಘೋಷಿಸಿ, ಸ್ವತಂತ್ರ ಸಂತಾಲ ರಾಜ್ಯದ ಸಂಕಲ್ಪ ಮಾಡಿದರು. ಜುಲೈ 7 ರಂದು ಭ್ರಷ್ಟ ಅಧಿಕಾರಿ ದರೋಗಾ ಮಹೇಶ್ ಲಾಲ್ ದತ್ತಾ ಸಂತಾಲರನ್ನು ಹಿಂಸಿಸಿದಾಗ, ಸಿಧು ಆತನನ್ನು ಕೊಂದು ಶಿರಚ್ಛೇದ ಮಾಡಿದ. ಇದು ದಂಗೆಯ ಅಧಿಕೃತ ಆರಂಭವಾಗಿತ್ತು. ಬಂಡಾಯದ ಜ್ವಾಲೆ ದಟ್ಟವಾಗಿ ಹರಡಿತು. ಸುಮಾರು 60,000 ಕ್ಕೂ ಹೆಚ್ಚು ಸಂತಾಲ್ ಹೋರಾಟಗಾರರು ಬಿಲ್ಲು-ಬಾಣ, ಕತ್ತಿ, ಕೊಡಲಿಗಳನ್ನು ಹಿಡಿದು ಜಮೀನ್ದಾರರ ಎಸ್ಟೇಟುಗಳು, ಬ್ರಿಟಿಷ್ ಬಂಗಲೆಗಳು, ರೈಲ್ವೆ ಮಾರ್ಗಗಳು, ಟೆಲಿಗ್ರಾಫ್ ತಂತಿಗಳು ಮತ್ತು ನೀಲಿ ತೋಟಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಿದರು. ಇವರಿಗೆ ಸ್ಥಳೀಯ ದೀನದಲಿತ ಕೆಳಜಾತಿಯ ಜನರೂ ಬೆಂಬಲ ನೀಡಿದರು. ಕಂಪನಿಯು ಮೊದಮೊದಲು ದಂಗೆಯ ಪ್ರಮಾಣವನ್ನು ಕಡಿಮೆ ಅಂದಾಜು ಮಾಡಿತು, ಆದರೆ ಶೀಘ್ರದಲ್ಲೇ ಮಿಲಿಟರಿ ಬಲದ ಮೂಲಕ ಅದನ್ನು ಹತ್ತಿಕ್ಕಲು ನಿರ್ಧರಿಸಿತು. ಭಾರತದ ವಿವಿಧ ಭಾಗಗಳಿಂದ ಬ್ರಿಟಿಷ್ ಪಡೆಗಳನ್ನು ಕರೆಯಿಸಲಾಯಿತು. ಬ್ರಿಟಿಷ್ ಸೈನ್ಯಕ್ಕೆ ತೀವ್ರ ಆಘಾತ ನೀಡಿದ ಈ ದಂಗೆಯು ಸುಮಾರು ಆರು ತಿಂಗಳ ಕಾಲ ನಡೆಯಿತು. ಕಂಪನಿ ವಸಾಹತುಶಾಹಿ ಸರ್ಕಾರವು ನವೆಂಬರ್ 10, 1855 ರಂದು ಇಡೀ ಪ್ರದೇಶದಲ್ಲಿ ‘ಮಾರ್ಷಲ್ ಲಾ’ (ಸೇನಾ ಕಾನೂನು) ಜಾರಿಗೊಳಿಸಿತು. ಅತ್ಯಾಧುನಿಕ ಬಂದೂಕುಗಳನ್ನು ಹೊಂದಿದ್ದ ಬ್ರಿಟಿಷ್ ಸೈನ್ಯದ ಮುಂದೆ ಸಂತಾಲರ ಸಾಂಪ್ರದಾಯಿಕ ಆಯುಧಗಳು ಹೆಚ್ಚು ದಿನ ನಿಲ್ಲಲಾಗಲಿಲ್ಲ. ಬ್ರಿಟಿಷ್ ಸೈನ್ಯವು ಸುಮಾರು 20,000ಕ್ಕೂ ಹೆಚ್ಚು ಸಂತಾಲರನ್ನು ಅತ್ಯಂತ ಕ್ರೂರವಾಗಿ ಕೊಂದಿತು. ಸಂತಾಲರ ಹಳ್ಳಿಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಯಿತು. ಹೋರಾಟದ ಮಧ್ಯೆ ಚಾಂದ್ ಮತ್ತು ಭೈರವ್ ಬ್ರಿಟಿಷರ ಗುಂಡಿಗೆ ಬಲಿಯಾದರು. ಆಗಸ್ಟ್ ತಿಂಗಳಲ್ಲಿ ಇತರ ಸಂತಾಲ ನಾಯಕರ ದ್ರೋಹದಿಂದಾಗಿ ಸಿಧು ಮುರ್ಮು ಅವರನ್ನು ಬ್ರಿಟಿಷರು ಬಂಧಿಸಿ ಭೋಗ್ನಾದಿಹ್ ಗ್ರಾಮದಲ್ಲೇ ಸಾರ್ವಜನಿಕವಾಗಿ ಆಲದ ಮರಕ್ಕೆ ನೇಣು ಹಾಕಿದರು. ಕೆಲವೇ ದಿನಗಳ ನಂತರ ಕಾನ್ಹು ಮುರ್ಮು ಅವರನ್ನೂ ಸಹ ಬಂಧಿಸಿ ನೇಣುಗಂಬಕ್ಕೇರಿಸಲಾಯಿತು. ಈ ಮೂಲಕ ಇಬ್ಬರು ವೀರ ಸೋದರರು ಹುತಾತ್ಮರಾದರು. ಕೃಷಿ ನಾಶವಾಗಿ, ಹಳ್ಳಿಗಳು ಸುಟ್ಟು ಹೋಗಿದ್ದರಿಂದ ಸಾವಿರಾರು ಜನ ಹಸಿವು, ಸಾಂಕ್ರಾಮಿಕ ರೋಗ ಮತ್ತು ಅಪೌಷ್ಟಿಕತೆಯಿಂದ ತಾತ್ಕಾಲಿಕ ಶಿಬಿರಗಳಲ್ಲಿ ಸಾವನ್ನಪ್ಪಿದರು. ನೂರಾರು ಜನರನ್ನು ಕಿಕ್ಕಿರಿದ ಜೈಲುಗಳಲ್ಲಿ ತುಂಬಲಾಯಿತು. ಈ ಮೂಲಕ ಪೂರ್ವ ಭಾರತದ ಆದಿವಾಸಿ ದಂಗೆ ರಕ್ತಸಿಕ್ತವಾಗಿ ಅಂತ್ಯಗೊಂಡಿತು.

ಬಲಿದಾನ ವ್ಯರ್ಥವಾಗಲಿಲ್ಲ
ಸಂತಾಲ ದಂಗೆಯು ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೂ, ಶಸ್ತ್ರಸಜ್ಜಿತ ಬ್ರಿಟಿಷ್ ಸೇನೆಯ ವಿರುದ್ಧ ಅವರು ನಡೆಸಿದ ಉಗ್ರ ಹೋರಾಟ ಕಂಪನಿ ಆಡಳಿತದ ಅಡಿಪಾಯವನ್ನೇ ನಡುಗಿಸಿತು. ಈ ಕ್ರಾಂತಿಯ ತೀವ್ರತೆಗೆ ಮಣಿದ ಕಂಪನಿ ಸರ್ಕಾರ, ಸಂತಾಲರ ಹಿತರಕ್ಷಣೆಗಾಗಿ ಕೆಲವು ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಯಿತು. ಸರ್ಕಾರವು ಡಿಸೆಂಬರ್ 22, 1855 ರಂದು ವಿಶೇಷ ಕಾಯ್ದೆಯೊಂದನ್ನು ಜಾರಿಗೊಳಿಸಿ, ‘ಸಂತಾಲ್ ಪರಗಣ’ ಎಂಬ ಹೊಸ ಜಿಲ್ಲೆಯನ್ನು ರಚಿಸಿತು. ಈ ಜಿಲ್ಲೆಯು ದಾಮಿನ್-ಇ-ಕೋಹ್, ಭಾಗಲ್ಪುರ್ ಮತ್ತು ಬೀರ್ಭೂಮ್ ಜಿಲ್ಲೆಗಳ ಪ್ರಮುಖ ಭಾಗಗಳನ್ನು ಒಳಗೊಂಡಿತ್ತು. ಬುಡಕಟ್ಟೇತರರು ಸಂತಾಲರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ಕಾನೂನುಬದ್ಧವಾಗಿ ಸಂಪೂರ್ಣವಾಗಿ ನಿಷೇಧಿಸಲಾಯಿತು. ಮಧ್ಯವರ್ತಿಗಳು, ಜಮೀನ್ದಾರರ ಶೋಷಣೆಗೆ ಇತಿಶ್ರೀ ಹಾಡಲು ಸಂತಾಲರು ಮತ್ತು ಕಂಪನಿ ಆಡಳಿತಗಾರರ ನಡುವೆ ನೇರ ಸಂವಹನಕ್ಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಭಾರತದ ಇತಿಹಾಸದಲ್ಲಿ ಸಂತಾಲ ದಂಗೆಯ ನೆನಪು ಇನ್ನೂ ಹಚ್ಚಹಸಿರಾಗಿದೆ. ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಸೋದರರಾದ ಸಿಧು-ಕಾನ್ಹು ಮತ್ತು ಸಂತಾಲ ಬಂಡಾಯಗಾರರ ಗೌರವಾರ್ಥವಾಗಿ ಪ್ರತಿ ವರ್ಷ ಜೂನ್ 30 ರಂದು ದೇಶಾದ್ಯಂತ ‘ಹೂಲ್ ದಿವಸ್’ ಅನ್ನು ಅತ್ಯಂತ ಹೆಮ್ಮೆಯಿಂದ ಆಚರಿಸಲಾಗುತ್ತದೆ.
78 ವರ್ಷಗಳ ಸ್ವತಂತ್ರ ಭಾರತದಲ್ಲಿ ಇಂದಿಗೂ ಕೂಡ ಈ ನೆಲದ ಮೂಲನಿವಾಸಿಗಳಾದ ಬುಡಕಟ್ಟು ಜನಾಂಗದವರ ಬದುಕು ಬದಲಾಗಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಇವರು ಇಂದಿಗೂ ಕಾಡಿನಲ್ಲಿ, ಕಾಡಂಚಿನಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ವಿದ್ಯುತ್, ಸಾರಿಗೆ ಮೊದಲಾದ ನಾಗರಿಕ ಸೌಲಭ್ಯಗಳು ಇವರಿಗೆ ಮರೀಚಿಕೆಯಾಗಿವೆ. ನಾಡಿನಲ್ಲಿ ಪುನರ್ವಸತಿ ಪಡೆದವರು ಕೂಡ ಅಲ್ಲಿ ಬದುಕಲಾಗದೆ ಕಾಡಿನತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಅಣೆಕಟ್ಟು, ಗಣಿಗಾರಿಕೆ ಮುಂತಾದ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಇವರನ್ನು ಸರಿಯಾದ ಪರಿಹಾರವೇ ನೀಡದೆ ಒಕ್ಕಲೆಬ್ಬಿಸಲಾಗಿದೆ. ಇಂತಹ ಅನ್ಯಾಯಗಳನ್ನು ಪ್ರಶ್ನೆ ಮಾಡಿದವರಿಗೆ ನಕ್ಸಲೈಟ್ ಎಂಬ ಹಣೆಪಟ್ಟಿ ಕಟ್ಟಿ ಬಂಧನ, ಚಿತ್ರಹಿಂಸೆ, ಎನ್‌ಕೌಂಟರ್‌ಗಳಿಗೆ ಬಲಿಪಶು ಮಾಡಲಾಗುತ್ತಿದೆ. ಅರಣ್ಯ ಹಕ್ಕು ಕಾಯಿದೆ 2006 ಸ್ವಲ್ಪ ಮಟ್ಟಿಗೆ ಆದಿವಾಸಿಗಳ ಪರವಾಗಿ ಇದ್ದರೂ ಕೂಡ ಅದನ್ನು ಇದುವರೆಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಆದಿವಾಸಿಗಳ ಹೋರಾಟಗಳು ಮೂಡಿ ಬರುತ್ತಿವೆ. ನೂರ ಎಪ್ಪತ್ತು ವರ್ಷಗಳ ಹಿಂದಿನ ಸಂತಾಲ ಬಂಡಾಯದ ಇತಿಹಾಸ, ಅದರ ಸಮರಶೀಲತೆ ಈ ಚಳುವಳಿಗಳನ್ನು ಮುನ್ನಡೆಸಲು ಸ್ಫೂರ್ತಿಯಾಗಲಿ!
