ಭಾರತದ ಇಂದಿನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಒಂದು ಧರ್ಮದ ಅನುಯಾಯಿಗಳು ಇನ್ನೊಂದು ಧರ್ಮದ ಅನುಯಾಯಿಗಳ ಕಡು ಶತ್ರುಗಳಾಗಿದ್ದಾರೆ. ಒಂದು ಧರ್ಮಕ್ಕೆ ಸೇರಿರುವುದೇ ಮತ್ತೊಂದು ಧರ್ಮವನ್ನು ದ್ವೇಷಿಸಲು ಕಾರಣವಾಗುತ್ತಿದೆ. ಯಾರಿಗಾದರೂ ಇದನ್ನು ನಂಬುವುದು ಕಷ್ಟವಾದರೆ, ಲಾಹೋರ್‌ನಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡವನ್ನು ಗಮನಿಸಬಹುದು. ಮುಸ್ಲಿಮರು ಅಮಾಯಕ ಹಿಂದೂ ಹಾಗೂ ಸಿಖ್ಖರನ್ನು ಹತ್ಯೆಗೈದರು ಮತ್ತು ಸಿಖ್ಖರೂ ಸಹ ಅವಕಾಶ ಸಿಕ್ಕಿದಾಗ ಅತ್ಯಂತ ನೀಚ ಕೃತ್ಯ ಎಸಗಿದರು. ಈ ಹತ್ಯೆಗೆ ಆ ವ್ಯಕ್ತಿ ಏನೋ ಅಪರಾಧ ಮಾಡಿರುವುದು ಕಾರಣವಲ್ಲ, ಬದಲಿಗೆ ಆತ ಮುಸ್ಲಿಂ, ಸಿಖ್ ಅಥವಾ ಹಿಂದೂ ಎಂಬುದೇ ಕಾರಣ. ಒಬ್ಬ ಮುಸ್ಲಿಂ ಮತಾಂಧನಿಗೆ ಇನ್ನೊಬ್ಬನನ್ನು ಕೊಲ್ಲಲು ಅವನು ಸಿಖ್ ಅಥವಾ ಹಿಂದೂ ಧರ್ಮದವನಾಗಿದ್ದರೆ ಸಾಕು, ಅದೇ ರೀತಿ ಅವನು ಮುಸ್ಲಿಮನೆಂಬ ಕಾರಣದಿಂದಲೇ ಅವನ ಕೊಲೆಯಾಗಬಹುದು. ಪರಿಸ್ಥಿತಿ ಹೀಗಾದರೆ ಹಿಂದೂಸ್ತಾನವನ್ನು ದೇವರೇ ಕಾಪಾಡಬೇಕು! ಇಂತಹ ಪರಿಸ್ಥಿತಿಯೊಳಗೆ ಹಿಂದೂಸ್ತಾನದ ಭವಿಷ್ಯವು ಕರಾಳವೆನಿಸುತ್ತದೆ. ಈ ‘ಧರ್ಮಗಳು’ ದೇಶವನ್ನು ನಾಶ ಮಾಡಿವೆ. ಮತ್ತು ಈ ಮತೀಯ ಗಲಭೆಗಳು ಇನ್ನೂ ಎಷ್ಟು ಕಾಲ ಹಿಂದೂಸ್ತಾನವನ್ನು ಕಾಡಲಿವೆಯೋ ತಿಳಿಯದು. ಅಲ್ಲದೆ, ಜಾಗತಿಕವಾಗಿ ಈ ಗಲಭೆಗಳು ಭಾರತಕ್ಕೆ ಅಪಖ್ಯಾತಿಯನ್ನುಂಟು ಮಾಡಿವೆ. ಕುರುಡು ನಂಬಿಕೆಗಳ ಅಲೆಯ ಮೇಲೆ ಹೇಗೆ ಎಲ್ಲರೂ ತೇಲಿಹೋದರು ಎಂಬುದನ್ನು ನಾವು ಕಂಡಿದ್ದೇವೆ. ಶಾಂತತೆ ಕಾಪಾಡಿಕೊಳ್ಳುವ ಹಿಂದೂ, ಮುಸ್ಲಿಂ ಅಥವಾ ಸಿಖ್ಖರು ಅಪರೂಪ, ಉಳಿದವರು ಲಾಠಿ, ದೊಣ್ಣೆ, ಕತ್ತಿ, ಚೂರಿಗಳನ್ನು ಹಿಡಿದು ಒಬ್ಬರನ್ನೊಬ್ಬರು ಕೊಲ್ಲುತ್ತಾರೆ. ಸಾವಿನಿಂದ ಪಾರಾದವರು ಒಂದೋ ಗಲ್ಲಿಗೆ ಹೋಗುತ್ತಾರೆ ಅಥವಾ ಜೈಲು ಪಾಲಾಗುತ್ತಾರೆ. ಇಷ್ಟೆಲ್ಲ ರಕ್ತಪಾತದ ನಂತರ ಈ ‘ಧರ್ಮ’ರಕ್ಷಕರಿಗೆ ಬ್ರಿಟಿಷ್ ಸರ್ಕಾರ ಲಾಠಿ ಬೀಸುತ್ತದೆ ಮತ್ತು ಆಗಲೇ ಅವರಿಗೆ ಬುದ್ಧಿ ಬರುತ್ತದೆ. ನಾವು ನೋಡಿರುವಂತೆ, ಕೋಮುವಾದಿ ನಾಯಕರು ಹಾಗೂ ಸುದ್ದಿ ಮಾಧ್ಯಮಗಳು ಈ ಗಲಭೆಗಳ ಹಿಂದೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ದಿನಗಳಲ್ಲಿ ಭಾರತೀಯ ನಾಯಕರ ನಡತೆ ಎಷ್ಟು ನಾಚಿಕೆಗೇಡಿನದ್ದೆಂದರೆ, ಅದರ ಬಗ್ಗೆ ಏನೂ ಹೇಳದಿರುವುದೇ ಉತ್ತಮ. ಯಾವ ನಾಯಕರು ದೇಶವನ್ನು ಸ್ವತಂತ್ರಗೊಳಿಸುವ ಜವಾಬ್ದಾರಿ ತಮ್ಮದೆಂದು ಘೋಷಿಸುವರೋ, ರಾಷ್ಟ್ರೀಯ ಏಕತೆಯ ಬಗ್ಗೆ ಭಾಷಣಗಳನ್ನು ಮಾಡುವರೋ ಮತ್ತು ಸ್ವರಾಜ್ಯಕ್ಕಾಗಿ ಅಬ್ಬರದಿಂದ ಆಗ್ರಹಿಸುವರೋ, ಇದೇ ನಾಯಕರು ತಲೆಮರೆಸಿಕೊಂಡಿದ್ದಾರೆ ಮತ್ತು ಈ ಮತೀಯ ಅಂಧತೆಯ ಉಬ್ಬರದಲ್ಲಿ ಕೊಚ್ಚಿ ಹೋಗುತ್ತಿದ್ದಾರೆ. ತಲೆಮರೆಸಿಕೊಂಡವರ ಸಂಖ್ಯೆ ತುಂಬ ಕಡಿಮೆ. ಆದರೆ ಸ್ವಲ್ಪ ಕೆರೆದು ನೋಡಿದರೆ, ಕೋಮುವಾದಿ ದಂಗೆಗಳಲ್ಲಿ ಸೇರಿಕೊಳ್ಳುವ ನಾಯಕರು ನೂರಾರು. ತಮ್ಮ ಹೃದಯಾಂತರಾಳದಿಂದ ಜನರ ಒಳಿತನ್ನೇ ಬಯಸುವ ನಾಯಕರ ಸಂಖ್ಯೆ ತೀರಾ ಕಡಿಮೆ. ಮಹಾ ಪ್ರವಾಹದಂತೆ ಬಂದಿರುವ ಕೋಮುವಾದವನ್ನು ತಡೆಯುವುದು ಅವರಿಗೆ ಸಾಧ್ಯವಿಲ್ಲ. ಭಾರತದ ನಾಯಕತ್ವ ದಿವಾಳಿಯಾದಂತೆ ಭಾಸವಾಗುತ್ತದೆ. ಕೋಮುಗಲಭೆಗಳಿಗೆ ಪ್ರಚೋದಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತಿರುವ ಇತರರೆಂದರೆ ಪತ್ರಿಕಾ ಮಾಧ್ಯಮದವರು. ಒಂದು ಕಾಲದಲ್ಲಿ ಗೌರವ, ಪ್ರತಿಷ್ಠೆಯಿಂದ ಕೂಡಿದ್ದ ಪತ್ರಿಕಾ ವೃತ್ತಿ ಇಂದು ಕೀಳು ಮಟ್ಟಕ್ಕಿಳಿದಿದೆ. ಈ ಜನ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಚೋದನಕಾರಿಯಾದ, ರಾಚುವಂತಹ ತಲೆ ಬರಹಗಳನ್ನು ಪ್ರಕಟಿಸುವುದು ಪರಸ್ಪರ ದ್ವೇಷದ ಭಾವನೆಗಳನ್ನು ಬಡಿದೆಬ್ಬಿಸುತ್ತದೆ ಮತ್ತು ಗಲಭೆಗಳಿಗೆ ಎಡೆಮಾಡಿ ಕೊಡುತ್ತದೆ. ಕೇವಲ ಒಂದೋ ಎರಡೋ ಕಡೆಗಳಲ್ಲಲ್ಲ, ಬದಲಿಗೆ ಹಲವಾರು ಕಡೆಗಳಲ್ಲಿ ಸ್ಥಳೀಯ ಪತ್ರಿಕೆಗಳು ಅತಿರೇಕದ ಬರಹಗಳನ್ನು ಪ್ರಕಟಿಸಿರುವ ಕಾರಣದಿಂದಲೇ ಗಲಭೆಗಳು ನಡೆದಿವೆ. ಇಂತಹ ದಿನಗಳಲ್ಲಿ ಸಮಚಿತ್ತತೆ ಮತ್ತು ಶಾಂತತೆಯನ್ನು ಉಳಿಸಿಕೊಳ್ಳಲು ಸಮರ್ಥರಾದ ಲೇಖಕರು ಬೆರಳೆಣಿಕೆಯಷ್ಟು ಮಾತ್ರ.
ಪತ್ರಿಕೆಗಳ ನೈಜ ಕರ್ತವ್ಯವೆಂದರೆ, ಜನರಿಗೆ ಶಿಕ್ಷಣವನ್ನು ಕೊಡುವುದು, ಜನರಲ್ಲಿರುವ ಸಂಕುಚಿತತೆಯನ್ನು ನಿರ್ಮೂಲನೆ ಮಾಡುವುದು, ಕೋಮುವಾದಿ ಭಾವನೆಗೆ ಕೊನೆ ಹಾಕುವುದು, ಪರಸ್ಪರ ನಂಬಿಕೆಯನ್ನು ಬೆಳೆಸುವ ಮೂಲಕ ಒಂದೇ ಭಾರತೀಯ ರಾಷ್ಟ್ರೀಯತೆಯನ್ನು ಮೂಡಿಸುವುದು. ಆದರೆ, ಇವು ಅಜ್ಞಾನವನ್ನು ಹರಡುವ, ಸಂಕುಚಿತತೆಯನ್ನು ಬೋಧಿಸುವ, ಪೂರ್ವಗ್ರಹವನ್ನು ಸೃಷ್ಟಿಸುವ, ಗಲಭೆಗೆ ಎಡೆಮಾಡಿ, ಒಂದೇ ಭಾರತೀಯ ರಾಷ್ಟ್ರೀಯತೆಯ ಭಾವನೆಯನ್ನು ನಾಶಮಾಡುವುದನ್ನೇ ಅವುಗಳ ಪ್ರಧಾನ ವ್ಯವಹಾರವಾಗಿ ಬದಲಾಯಿಸಿಕೊಂಡಿವೆ. ಇಂದಿನ ಭಾರತದ ಬಗ್ಗೆ ಯೋಚಿಸಿದಾಗ ನಮ್ಮ ಕಣ್ಣುಗಳಲ್ಲಿ ರಕ್ತದ ಕಂಬನಿಗಳುರುಳುತ್ತವೆ ಹಾಗೂ “ಹಿಂದೂಸ್ತಾನದ ಭವಿಷ್ಯವೇನು?” ಎಂಬ ಪ್ರಶ್ನೆ ಹೃದಯದಲ್ಲಿ ಮೂಡುತ್ತದೆ.
ಅಸಹಕಾರ ಚಳವಳಿಯ ಕಾಲದಲ್ಲಿ ಇದ್ದ ಉತ್ಸಾಹ ಮತ್ತು ಜಾಗೃತಿಯ ಬಗ್ಗೆ ತಿಳಿದಿರುವವರಿಗೆ ಇಂದಿನ ಪರಿಸ್ಥಿತಿಯನ್ನು ಕಂಡು ಅಳುವಂತಾಗಿದೆ. ತಮ್ಮ ಮುಂದೆ ಕೈಗೆಟುವಂತಿದ್ದ ಸ್ವಾತಂತ್ರ್ಯದ ನೋಟವನ್ನು ನೋಡಬಹುದಾಗಿದ್ದ ಆ ದಿನಗಳು ಮತ್ತು ಇಂದು ಸ್ವರಾಜ್ಯ ಎಂಬುದು ಇಂದು ಕೇವಲ ಕನಸಾಗಿದೆ. ಕೋಮುಗಲಭೆಗಳಿಂದ ಆ ಕ್ರೂರ ಆಳ್ವಿಕರು ಪಡೆದ ಅನುಕೂಲ ಇದೇ. ತನ್ನ ಅಸ್ತಿತ್ವದ ಬಗ್ಗೆಯೇ ಭಯಭೀತವಾಗಿದ್ದ ಅಧಿಕಾರಶಾಹಿ ಇಂದು ತನ್ನ ಬೇರುಗಳನ್ನು ಎಷ್ಟು ಆಳಕ್ಕೆ ಇಳಿಸಿದೆ ಎಂದರೆ, ಅದನ್ನು ಅಲುಗಾಡಿಸುವುದು ಕೂಡ ಸುಲಭವಲ್ಲ. ಈ ಕೋಮು ಗಲಭೆಗಳ ಬೇರುಗಳನ್ನು ಹುಡುಕಿದರೆ, ಆರ್ಥಿಕತೆಯೇ ಮೂಲ ಕಾರಣ ಎಂದು ಭಾಸವಾಗುತ್ತದೆ. ಅಸಹಕಾರ ಚಳವಳಿಯ ಕಾಲದಲ್ಲಿ ನಾಯಕರು ಹಾಗೂ ಪತ್ರಕರ್ತರು ಹೇಳಲಾಗದಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅವರು ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದರು. ಅಸಹಕಾರ ಆಂದೋಲನದ ಕಾವು ಇಳಿದ ಮೇಲೆ ಜನರು ನಾಯಕರಲ್ಲಿ ನಂಬಿಕೆ ಕಳೆದುಕೊಂಡರು, ಇದರಿಂದ ಇಂತಹ ಅನೇಕ ಧಾರ್ಮಿಕ ನಾಯಕರ ವ್ಯಾಪಾರ ಕುಸಿಯಿತು. ಪ್ರಪಂಚದಲ್ಲಿ ಏನೇ ಕೆಲಸ ನಡೆದರೂ, ಅದರ ಹಿಂದೆ ಯಾರದೋ ಹೊಟ್ಟೆ ಹೊರೆಯುವ ಉದ್ದೇಶ ಇರುತ್ತದೆ. ಇದು ಮಾರ್ಕ್ಸ್ ವಾದದ ಮೂರು ಮುಖ್ಯ ಪ್ರತಿಪಾದನೆಗಳಲ್ಲಿ ಒಂದು. ‘ತಬ್ಲಿಗಿ’, ‘ತಾನ್‌ಜೀಮ್’ ಮತ್ತು ‘ಶುದ್ಧಿ’ ಮುಂತಾದ ಆಚರಣೆ (ಹಿಂದೂ - ಮುಸ್ಲಿಮರ ಮತೀಯ ಆಚರಣೆಗಳು) ಮಾರ್ಕ್ಸ್ ರವರ ಈ ತತ್ವಕ್ಕೆ ಅನುಗುಣವಾಗಿ ಆರಂಭವಾಗಿವೆ ಹಾಗೂ ಈ ಕಾರಣದಿಂದಲೇ ಇಂದು ನಮ್ಮ ಪರಿಸ್ಥಿತಿ ಇಷ್ಟು ದಾರುಣವಾಗಿದೆ, ಗೊಂದಲಮಯವಾಗಿದೆ. ಕೋಮುವಾದಿ ಗಲಭೆಗಳ ನಿವಾರಣೆಗೆ ಯಾವುದಾದರೂ ದಾರಿ ಇದೆ ಎಂದಾದರೆ ಅದು ಹಿಂದೂಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಮೂಲಕ ಮಾತ್ರ; ಏಕೆಂದರೆ ಹಿಂದೂಸ್ತಾನದ ಸಾಮಾನ್ಯ ನಾಗರಿಕನ ಆರ್ಥಿಕ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ, ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ನಾಲ್ಕಾಣೆ ಕೊಟ್ಟು ಮತ್ತೊಬ್ಬನಿಗೆ ಅವಮಾನ ಮಾಡಿಸಬಹುದು. ಹಸಿವು ಮತ್ತು ನೋವಿನಿಂದ ಬಳಲುತ್ತಿರುವ ವ್ಯಕ್ತಿ ಎಲ್ಲಾ ತತ್ವಾದರ್ಶಗಳನ್ನು ತೊರೆಯುತ್ತಾನೆ. ಅದು ಅವನ ಅಳಿವು ಉಳಿವಿನ ಪ್ರಶ್ನೆಯಾಗುತ್ತದೆ. ಆದರೆ ಈಗಿನ ಸಂದರ್ಭದಲ್ಲಿ ಆರ್ಥಿಕ ಸುಧಾರಣೆ ಬಹಳ ಕಷ್ಟಕರ, ಏಕೆಂದರೆ ಈ ಸರ್ಕಾರ ಹೊರದೇಶದ್ದು ಮತ್ತು ಅದು ಜನರ ಪರಿಸ್ಥಿತಿ ಸುಧಾರಿಸಲು ಬಿಡುವುದಿಲ್ಲ. ಆದ್ದರಿಂದ, ಅದರ ಮೇಲೆ ದಾಳಿ ಮಾಡಲು ಜನರು ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಬೇಕು ಮತ್ತು ಈ ಸರ್ಕಾರ ಸಂಪೂರ್ಣವಾಗಿ ಪರಿವರ್ತನೆಯಾಗುವವರೆಗೂ ಸುಮ್ಮನಾಗಬಾರದು. ಜನಗಳು ತಮ್ಮಲ್ಲೇ ಪರಸ್ಪರ ಕಿತ್ತಾಡುವುದನ್ನು ತಪ್ಪಿಸಲು ಅವರಲ್ಲಿ ವರ್ಗ ಪ್ರಜ್ಞೆಯನ್ನು ಬೆಳೆಸುವುದು ಬಹಳ ಮುಖ್ಯವಾಗಿದೆ. ಬಡಕಾರ್ಮಿಕರು ಮತ್ತು ರೈತರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಿಗರು ಎಂಬುದನ್ನು ಮತ್ತು ಅವರ ಬಲೆಗೆ ಬೀಳದಂತೆ ಎಚ್ಚರಿಕೆಯಿಂದ ಇರಲು ಸ್ಪಷ್ಟವಾಗಿ ತಿಳುವಳಿಕೆ ಕೊಡಬೇಕಿದೆ. ಯಾವುದೇ ಜಾತಿ, ಧರ್ಮ, ಬಣ್ಣ, ದೇಶಕ್ಕೆ ಸೇರಿದ್ದರೂ, ವಿಶ್ವದ ಬಡಜನರಿಗೆ ಒಂದೇ ರೀತಿಯ ಹಕ್ಕುಗಳಿವೆ. ಧರ್ಮ, ಬಣ್ಣ, ಜನಾಂಗ, ರಾಷ್ಟ್ರೀಯತೆಗಳ ತಾರತಮ್ಯಗಳನ್ನು ತೊಡೆದು ಹಾಕಿ, ಸರ್ಕಾರದ ಅಧಿಕಾರವನ್ನು ವಶಪಡಿಸಿಕೊಳ್ಳುವುದು ನಿಮಗೇ ಒಳಿತು. ಈ ಪ್ರಯತ್ನಗಳು ನಿಮಗೆ ಯಾವುದೇ ಹಾನಿ ಮಾಡಲಾರವು, ಬದಲಿಗೆ ಒಂದು ದಿನ ನಿಮ್ಮ ಸಂಕೋಲೆಗಳನ್ನು ತುಂಡರಿಸುತ್ತವೆ ಮತ್ತು ನೀವು ಆರ್ಥಿಕ ಸ್ವಾತಂತ್ರ್ಯ ವನ್ನು ಪಡೆಯುತ್ತೀರಿ. ರಷ್ಯಾದ ಇತಿಹಾಸ ಕೇಳಿದವರಿಗೆ ಜಾರ್‌ನ ಕಾಲದಲ್ಲಿ ಅಲ್ಲಿಯೂ ಸಹ ಇಂಥದ್ದೇ ಪರಿಸ್ಥಿತಿ ಇತ್ತು ಎಂಬುದು ಗೊತ್ತು. ಅಲ್ಲಿಯೂ ಒಂದನ್ನೊಂದು ಕೆಳಕ್ಕೆಳೆಯುವ ಹಲವಾರು ಗುಂಪುಗಳಿದ್ದವು. ಆದರೆ ಕಾರ್ಮಿಕ ಕ್ರಾಂತಿ ಜರುಗಿದ ನಂತರ ಅಲ್ಲಿನ ಚಿತ್ರಣವೇ ಬದಲಾಯಿತು. ಈಗ ಅಲ್ಲಿ ಯಾವುದೇ ಗಲಭೆಗಳು ನಡೆಯುತ್ತಿಲ್ಲ. ಈಗ ಪ್ರತಿಯೊಬ್ಬರನ್ನೂ ಅಲ್ಲಿ ಧರ್ಮದ ಆಧಾರದ ಮೇಲೆ ಗುರುತಿಸುವುದಿಲ್ಲ, ಮನುಷ್ಯರೆಂದು ಪರಿಗಣಿಸುತ್ತಾರೆ. ಜಾರ್‌ನ ಕಾಲದಲ್ಲಿ ಜನರ ಆರ್ಥಿಕ ಸ್ಥಿತಿ ಭೀಕರವಾಗಿತ್ತು ಹಾಗೂ ಇದು ಗಲಭೆಗಳಿಗೆ ಕಾರಣವಾಗಿತ್ತು. ಆದರೆ ಇಂದು ರಷ್ಯನ್ನರ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಮತ್ತು ಜನರಲ್ಲಿ ವರ್ಗ ಪ್ರಜ್ಞೆ ಬೆಳೆದಿದೆ, ಅಲ್ಲಿಂದ ಯಾವುದೇ ಗಲಭೆಗಳ ಸುದ್ದಿ ಬರುತ್ತಿಲ್ಲ. ಅಂತಹ ಗಲಭೆಗಳ ವಿವರಣೆಗಳು ಕೇಳಲು ಹೃದಯ ವಿದ್ರಾವಕವಾದರೂ, ಕೊಲ್ಕತ್ತಾದಲ್ಲಿ ನಡೆದ ಗಲಭೆಯೊಂದರ ವರದಿ ಧನಾತ್ಮಕವಾಗಿದೆ. ಕಾರ್ಮಿಕ ಸಂಘಟನೆಗೆ ಸೇರಿದ ಕಾರ್ಮಿಕರು ಈ ಗಲಭೆಯಲ್ಲಿ ಭಾಗವಹಿಸಲಿಲ್ಲ ಮಾತ್ರವಲ್ಲ, ಪರಸ್ಪರ ಹೊಡೆದಾಡಿಕೊಳ್ಳಲಿಲ್ಲ; ಬದಲಾಗಿ, ಹಿಂದೂ ಮತ್ತು ಮುಸ್ಲಿಮರು ಕಾರ್ಖಾನೆಗಳಲ್ಲಿ ಸಹಜವಾಗಿ ವರ್ತಿಸಿದರು ಮತ್ತು ಗಲಭೆಗಳನ್ನು ನಿಲ್ಲಿಸಲು ಕೂಡ ಪ್ರಯತ್ನಿಸಿದರು. ಅವರಲ್ಲಿದ್ದ ವರ್ಗ ಪ್ರಜ್ಞೆಯೇ ಇದಕ್ಕೆ ಕಾರಣ ಹಾಗೂ ತಮ್ಮ ವರ್ಗಕ್ಕೆ ಯಾವುದು ಪ್ರಯೋಜನಕಾರಿ ಎಂದು ಅವರು ಸಂಪೂರ್ಣವಾಗಿ ಗುರುತಿಸಿದ್ದರು. ಕೋಮು ಸಂಘರ್ಷವನ್ನು ತಡೆಗಟ್ಟುವುದರಲ್ಲಿ ವರ್ಗ ಪ್ರಜ್ಞೆಯ ಸುಂದರ ದಾರಿ ಇದಾಗಿದೆ. ಭಾರತದ ಯುವಜನತೆಯಿಂದ ಸಂತೋಷದ ಸುದ್ದಿ ಬರುತ್ತಿದೆ; ಅವರಿಗೆ, ಪರಸ್ಪರ ದ್ವೇಷ ಮತ್ತು ಕಲಹವನ್ನು ಕಲಿಸುವ ಧರ್ಮಗಳ ಬಗ್ಗೆ ಸಾಕಾಗಿದೆ ಮತ್ತು ಅಂತಹ ಧರ್ಮಗಳಿಂದ ದೂರ ಸರಿಯುತ್ತಿದ್ದಾರೆ; ಮತ್ತು ಅವರಲ್ಲಿ ಈಗ ಎಷ್ಟೊಂದು ಪ್ರಗತಿಪರತೆ ಇದೆಯೆಂದರೆ, ಅವರು ಭಾರತದ ಜನರನ್ನು ಹಿಂದೂ, ಮುಸ್ಲಿಂ ಅಥವಾ ಸಿಖ್ ಎಂದು ಧರ್ಮದ ದೃಷ್ಟಿಯಿಂದ ನೋಡುತ್ತಿಲ್ಲ, ಬದಲಿಗೆ ಮೊದಲು ಮಾನವರಾಗಿ, ನಂತರ ದೇಶದ ಪ್ರಜೆಗಳಾಗಿ ನೋಡುತ್ತಿದ್ದಾರೆ. ಭಾರತದ ಯುವಜನರಲ್ಲಿ ಇಂತಹ ಭಾವನೆ ಮೂಡಿರುವುದು ಭವ್ಯ ಭವಿಷ್ಯದ ಕುರಿತು ಭರವಸೆಯನ್ನು ಮೂಡಿಸುತ್ತದೆ ಮತ್ತು ಭಾರತದ ಜನರು ಈ ಗಲಭೆಗಳ ಬಗ್ಗೆ ಚಿಂತಿತರಾಗಬೇಕಿಲ್ಲ; ಅವರು ಅಂತಹ ವಾತಾವರಣ ಸೃಷ್ಟಿಯಾಗದಂತೆ, ಗಲಭೆಗಳೇ ಇಲ್ಲದಂತಹ ವಾತಾವರಣವನ್ನು ಖಚಿತಪಡಿಸಲು ಸದಾ ಸಿದ್ಧರಾಗಿರಬೇಕು. 194-15 ರ ಹುತಾತ್ಮರು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿದ್ದರು. ಧರ್ಮವೆಂಬುದು ವ್ಯಕ್ತಿಯ ವೈಯಕ್ತಿಕ ವಿಚಾರ ಮತ್ತು ಯಾರೂ ಕೂಡ ಇದರಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಅವರು ಭಾವಿಸಿದ್ದರು. ಏಕೆಂದರೆ, ಧರ್ಮವು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದಾಗ, ಒಂದೇ ಗುರಿಗಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ಜನರ ನಡುವೆ ಅದು ಬಿರುಕು ಮೂಡಿಸುತ್ತದೆ. ಇದರಿಂದಾಗಿಯೇ ‘ಗದ್ದರ್ ಪಾರ್ಟಿ’ ಯಂತಹ ಆಂದೋಲನವು ಪ್ರಬಲವಾಗಿತ್ತು ಮತ್ತು ಒಂದೇ ಆತ್ಮವನ್ನು ಹೊಂದಿತ್ತು, ಇದರಲ್ಲಿ ಗಲ್ಗಂಭಕ್ಕೆ ಹೋದವರಲ್ಲಿ ಸಿಖ್ಖರೇ ಮುಂಚೂಣಿಯಲ್ಲಿದ್ದರೂ, ಹಿಂದೂಗಳು ಮತ್ತು ಮುಸ್ಲಿಮರು ಕೂಡ ಹಿಂದೆ ಬೀಳಲಿಲ್ಲ. ಪ್ರಸ್ತುತದಲ್ಲಿ ಕೂಡ ಭಾರತದ ಕೆಲವು ನಾಯಕರು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಲು ಬಯಸುತ್ತಾರೆ. ಕಲಹಗಳನ್ನು ನಿವಾರಿಸಲು ಇದು ಕೂಡ ಉತ್ತಮ ಪರಿಹಾರ ಮತ್ತು ನಾವು ಇದನ್ನು ಬೆಂಬಲಿಸುತ್ತೇವೆ. ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುವುದರೆ, ಆಗ ನಾವು ವಿಭಿನ್ನ ಧರ್ಮಗಳಿಗೆ ಸೇರಿದ್ದರೂ ಸಹ ರಾಜಕೀಯದಲ್ಲಿ ನಾವೆಲ್ಲರೂ ಜೊತೆ ಸೇರಬಹುದು. ಹಿಂದೂಸ್ತಾನದ ಬಗ್ಗೆ ನೈಜ ಕಾಳಜಿ ಉಳ್ಳವರು ನಾವು ಸೂಚಿಸಿದ ಪರಿಹಾರದ ಕುರಿತು ಯೋಚಿಸುತ್ತಾರೆ ಎಂದು ಭಾವಿಸುತ್ತೇವೆ ಮತ್ತು ಅದು ಭಾರತವನ್ನು ಆತ್ಮವಿನಾಶದಿಂದ ರಕ್ಷಿಸುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಸಂಯೋಜನೆಗೊಂಡ ಸಂಘಟನೆಗಳ ಕಾರ್ಮಿಕರು ಮತ್ತು ರೈತರಲ್ಲಿ ವರ್ಗಪ್ರಜ್ಞೆ ಮೂಡುತ್ತದೆ ಎಂದು ನಾವು ಆಶಿಸುತ್ತೇವೆ, ಏಕೆಂದರೆ ಇದು ಕೋಮುಗಲಭೆಗಳ ನಿರ್ಮೂಲನೆಗೆ ವೇಗವರ್ಧನೆ ನೀಡುತ್ತದೆ.