“ನಾನು ಭ್ರಷ್ಟಾಚಾರ ಮಾಡಲ್ಲ, ಮಾಡುವವರನ್ನು ಬಿಡಲ್ಲ” ಎನ್ನುತ್ತಾರೆ ನಮ್ಮ ಪ್ರಧಾನಿ. ಆಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲ್ಪಟ್ಟ ಸ್ಥಳದಲ್ಲಿ ರಾಮಮಂದಿರದ ಶಂಕುಸ್ಥಾಪನೆಯನ್ನು 2020 ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರೇ ನೆರವೇರಿಸಿದರು. ಆರ್.ಎಸ್.ಎಸ್, ಸಂಘ ಪರಿವಾರವು ಇದನ್ನು ಈ ಯುಗದ ಮಹತ್ತರ ಕಾರ್ಯವೆಂದೇ ಬಿಂಬಿಸಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದರೊಂದಿಗೆ ರೈಲ್ವೇ ನಿಲ್ದಾಣದ ಉನ್ನತೀಕರಣ, ಅಂತರರಾಷ್ಟ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯೆಲ್ಲವೂ ಇದನ್ನು ಬರೀ ತೀರ್ಥಯಾತ್ರಾ ಕೇಂದ್ರವನ್ನಾಗಿಯಷ್ಟೇ ಅಲ್ಲದೆ ಉನ್ನತ ಮಟ್ಟದ ಧಾರ್ಮಿಕ ಪ್ರವಾಸೋದ್ಯಮ ತಾಣವಾಗಿ ಬಿಂಬಿಸಿದವು.
‘ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಸ್ಥಾಪನೆ
ಫೆಬ್ರವರಿ 2020 ರಲ್ಲಿ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ’ ಎಂಬ ಹೆಸರಿನ “ಸ್ವಾಯತ್ತ” ಟ್ರಸ್ಟ್ ರಚನೆಯನ್ನು ಘೋಷಿಸಿದರು. ಈ ಟ್ರಸ್ಟ್ 15 ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಆರು ಜನರು ಪ್ರಧಾನಿ ಮೋದಿ ಮತ್ತು ಆರ್.ಎಸ್.ಎಸ್-ಬಿಜೆಪಿ-ಸಂಘ ಪರಿವಾರಕ್ಕೆ ನೇರವಾಗಿ ಸಂಪರ್ಕ ಹೊಂದಿದ್ದ ಧಾರ್ಮಿಕ ವ್ಯಕ್ತಿಗಳಾಗಿದ್ದರು. ಇತರರನ್ನೂ ಸಹ ಹಿಂದುತ್ವ ಬ್ರಿಗೇಡ್ ನಾಮನಿರ್ದೇಶನ ಮಾಡಿದೆ. ಉದಾಹರಣೆಗೆ, ಇಡೀ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ಗ್ಯಾನೇಶ್ ಕುಮಾರ್ ವಹಿಸಿದ್ದರು, ಅವರು ಈಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ. ಒಮ್ಮೆ ಆರ್.ಎಸ್.ಎಸ್ ನಿಕಟವರ್ತಿಯಾಗಿದ್ದ ಮತ್ತು ಪ್ರಸ್ತುತ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರಾಗಿರುವ ಚಂಪತ್ ರಾಯ್ ಅವರು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರನ್ನು ಟ್ರಸ್ಟಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅವರು ಟ್ರಸ್ಟ್ ಮತ್ತು ದೇವಾಲಯದ ಕಾರ್ಯವೈಖರಿಯಲ್ಲಿ ತಮ್ಮ ಆಪ್ತರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದರು. ಈ ಟ್ರಸ್ಟ್ ಸ್ವತಂತ್ರ ಸಂಸ್ಥೆಯಾಗಿರದೆ, ಬಿಜೆಪಿ ಸರ್ಕಾರದ ನೇರ ಭಾಗವಹಿಸುವಿಕೆಯೊಂದಿಗೆ ಸಂಘ ಪರಿವಾರದ ಮತ್ತೊಂದು ಅಂಗವಾಗಿದೆಯಷ್ಟೇ.
ದಶಕಗಳಿಂದ, ರಾಮಜನ್ಮಭೂಮಿ ಕುರಿತಾದ ಪರಿಶೀಲನೆ ಅಥವಾ ಪ್ರಶ್ನೆ ಮಾಡುವುದನ್ನು ಹಿಂದೂ ಧಾರ್ಮಿಕತೆಯ ಮೇಲಿನ ದಾಳಿ ಎಂದು ಬಿಜೆಪಿ ಮತ್ತು ಆರ್.ಎಸ್.ಎಸ್ ಪ್ರತಿಬಿಂಬಿಸಿವೆ. ಇದೀಗ ಮಂದಿರವನ್ನು ರಿಯಲ್ ಎಸ್ಟೇಟ್ ದಂಧೆ, ಶೇಖರಣೆಗೊಂಡ ಹಣ ಮತ್ತು ಸಾರ್ವಜನಿಕ ದೇಣಿಗೆಗಳ ದುರುಪಯೋಗಗಳ ಕಳಂಕ ಆವರಿಸಿಕೊಂಡಿದೆ. ಈ ಬೃಹತ್ ಪ್ರಮಾಣದ ದುರುಪಯೋಗ ಮತ್ತು ವ್ಯಾಪಕ ಭ್ರಷ್ಟಾಚಾರವೆಲ್ಲಾ ಬಯಲಾದ ನಂತರ ಇಷ್ಟು ಕಾಲ ಆರ್.ಎಸ್.ಎಸ್-ಬಿಜೆಪಿ-ಸಂಘ ಪರಿವಾರದ ಧಾರ್ಮಿಕತೆಯ ಮುಖವಾಡ ಕಳಚಿ ಬಿದ್ದಿದೆ.
ಭ್ರಷ್ಟಾಚಾರ ಹೊರಬಿದ್ದಿದ್ದು ಹೇಗೆ?
ಲೆಕ್ಕಪತ್ರ ತಂಡದ ಮೇಲ್ವಿಚಾರಣೆ ನಡೆಸುತ್ತಿದ್ದ ಮಹಿಪಾಲ್ ಸಿಂಗ್ ಅವರು ನೀಡಿದ್ದ ಆಂತರಿಕ ಎಚ್ಚರಿಕೆಗಳು ಮತ್ತು ದೈನಂದಿನ ಬ್ಯಾಂಕ್ ಠೇವಣಿಗಳಲ್ಲಿ ಕಂಡುಬಂದ ಹಠಾತ್ ಏರಿಕೆಯ ನಂತರ ಫೆಬ್ರವರಿಯಲ್ಲಿ ಈ ಕಳ್ಳತನ ಬೆಳಕಿಗೆ ಬಂದಿತು. ಇದನ್ನು ಪತ್ತೆಹಚ್ಚಿ ಡಿಸೆಂಬರ್ 2021 ರಲ್ಲಿ ಟ್ರಸ್ಟ್ ಅಧಿಕಾರಿಗಳಿಗೆ ಮಹಿಪಾಲ್ ಸಿಂಗ್ ವರದಿ ಮಾಡಿದರೂ, ಅವರ ಮಾತುಗಳಿಗೆ ಕಿವಿಗೊಡುವ ಬದಲಿಗೆ, ಟ್ರಸ್ಟ್ ಅಧಿಕಾರಿಗಳು ಅವರನ್ನು ಇದ್ದಕ್ಕಿದ್ದಂತೆ ಹುದ್ದೆಯಿಂದ ತೆಗೆದುಹಾಕಿದರು, ಈ ವಿಷಯ ಹಿನ್ನೆಲೆಗೆ ಸರಿಯಿತು. ಕಳೆದ ಜೂನ್ ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ದೇವಾಲಯಕ್ಕೆ ಬಂದ ಕಾಣಿಕೆಗಳಲ್ಲಿ ಕೋಟಿಗಟ್ಟಲೆ ರೂಪಾಯಿ ನಾಪತ್ತೆಯಾಗಿದೆ ಎಂದು ಆರೋಪಿಸಿದಾಗ ಸಾರ್ವಜನಿಕ ಪರಿಶೀಲನೆಗೆ ಜೀವ ಬಂತು. ಇಲ್ಲಿಯವರೆಗೆ ಮುಖ್ಯವಾಹಿನಿಯ ಮಾಧ್ಯಮಗಳು ಮುಚ್ಚಿಹಾಕಿದ್ದ ಈ ವಿಷಯವನ್ನು ಅಖಿಲೇಶ್ ಯಾದವ್ ಕೈಗೆತ್ತಿಕೊಂಡರು. ಉತ್ತರಪ್ರದೇಶದ ಕಾವಿಧಾರಿ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರಂಭದಲ್ಲಿ ಈ ಆರೋಪವನ್ನು ಆಧಾರರಹಿತ ಮತ್ತು ಹಿಂದೂ ಧರ್ಮಕ್ಕೆ ಮಸಿ ಬಳಿಯುವ ಸಂಚು ಎಂದು ತಳ್ಳಿಹಾಕಲು ಯತ್ನಿಸಿದರೂ, ಸಾರ್ವಜನಿಕ ಆಕ್ರೋಶವನ್ನು ಕಂಡು, ಈ ವಿಷಯದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಬದ್ಧರಾದರು. ಸಂಘದ ಅಂಗಸಂಸ್ಥೆಯಾದ ಹಿಂದೂ ರಕ್ಷಾ ದಳದ ನಾಯಕಿ ಪಿಂಕಿ ಚೌಧರಿ, “ಹಿಂದೂಗಳ ಹಣವನ್ನು ಹಿಂದೂಗಳೇ ಕದ್ದಿದ್ದರೆ, ಇತರರಿಗೆ ಏಕೆ ತೊಂದರೆ?” ಎಂಬ ತರ್ಕವನ್ನು ಮುಂದಿಟ್ಟರು!
ಲೂಟಿ ನಡೆದದ್ದು ಹೇಗೆ?
ಎಸ್ಐಟಿಯ ಪ್ರಾಥಮಿಕ ವರದಿಯ ಪ್ರಕಾರ, ದೇವಾಲಯದ ಆವರಣದಲ್ಲಿ 36 ಪೆಟ್ಟಿಗೆಗಳಿದ್ದು, ಅದರಲ್ಲಿ ಭಕ್ತರು ನಗದು ಮತ್ತು ಆಭರಣಗಳ ರೂಪದಲ್ಲಿ ತಮ್ಮ ಕಾಣಿಕೆಯನ್ನು ಹಾಕುತ್ತಾರೆ. ಸರಾಸರಿ ದೈನಂದಿನ ನಗದು ಸಂಗ್ರಹವು 15 ಲಕ್ಷದಿಂದ 60 ಲಕ್ಷ ರೂಪಾಯಿಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಪೆಟ್ಟಿಗೆಗಳನ್ನು ತೆರೆದು ಸಂಪೂರ್ಣ ಸಂಗ್ರಹವನ್ನು ಉಕ್ಕಿನ ಟ್ರಂಕುಗಳಲ್ಲಿ ಇಡಲಾಗುತ್ತಿತ್ತು. ನಂತರ ಅವುಗಳಿಗೆ ಬೀಗ ಹಾಕಿ ಗಾಡಿಗಳಲ್ಲಿ ಹತ್ತಿರದ ‘ಯಾತ್ರಿಗಳ ಅನುಕೂಲಕ್ಕಾಗಿರುವ ಕೇಂದ್ರ’ಕ್ಕೆ ಸಾಗಿಸಲಾಗುತ್ತದೆ. ಆ ಕೇಂದ್ರದ ತಳಮಹಡಿಯಲ್ಲಿ ಮೀಸಲಾದ ಎಣಿಕೆ ಸಭಾಂಗಣವಿದ್ದು, ಅಲ್ಲಿ ನಗದು, ನಾಣ್ಯಗಳು ಮತ್ತು ಆಭರಣಗಳನ್ನು ವಿಂಗಡಿಸಿ ಸಂಸ್ಕರಿಸಲಾಗುತ್ತದೆ. ಎಣಿಕೆಯಲ್ಲಿ ಎರಡು ಪಾಳಿಗಳಿದ್ದು ನಗದು ಎಣಿಕೆ ಮಾಡಲು ಖಾಸಗಿ ಸಂಸ್ಥೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಸುಮಾರು 50 ಜನರು ಹಣವನ್ನು ಎಣಿಸುತ್ತಿದ್ದರು, ಟ್ರಸ್ಟ್ ಅಧಿಕೃತ ವ್ಯಕ್ತಿಗಳು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಎಣಿಕೆ ಕೇಂದ್ರವು ಸಿಸಿಟಿವಿ ಕಣ್ಗಾವಲಿನಲ್ಲಿದೆ. ಎಣಿಕೆ ಮಾಡಿದ ನೋಟುಗಳನ್ನು ನಂತರ 10 ರ ಕಟ್ಟುಗಳಾಗಿ ಕಟ್ಟಲಾಗುತ್ತಿತ್ತು. ತದನಂತರ ಅವನ್ನು ಪೆಟ್ಟಿಗೆಗಳಲ್ಲಿ ಇಟ್ಟು ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಟ್ರಸ್ಟಿನ ಖಾತೆಗೆ ಠೇವಣಿ ಮಾಡಲು ಸಾಗಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ, ಟ್ರಸ್ಟ್ ನೌಕರರು ಮತ್ತು ಎಸ್ಬಿಐ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನ ಆಡಿಟ್ ತಂಡಗಳು ಭಾಗವಹಿಸಿದ್ದವು. ನಗದು ಮಾತ್ರ ಎಣಿಸಲಾಗುತ್ತಿತ್ತು, ಆಭರಣಗಳನ್ನು ಎಣಿಸುತ್ತಿರಲಿಲ್ಲ.
ಜೂನ್ 5 ರಂದು, ವಾಡಿಕೆಯ ಪರಿಶೀಲನೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿ ದೇವಾಲಯದ ಕೆಲವು ನೌಕರರ ಜೇಬಿನಲ್ಲಿ ಸ್ವಲ್ಪ ನಗದನ್ನು ಪತ್ತೆ ಮಾಡಿದರು. ನಂತರ 2021 ಮತ್ತು 2023 ರ ನಡುವೆ ದೇವಾಲಯದಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕೆಲಸ ಮಾಡಿದ್ದ ಮಹಿಪಾಲ್ ಸಿಂಗ್ ಅವರ ವೀಡಿಯೊ ಹೇಳಿಕೆಯೊಂದು ಪ್ರತ್ಯಕ್ಷವಾಯಿತು. ಎಣಿಕೆ ಸಿಬ್ಬಂದಿ ಪ್ರತಿ ನಗದು ಕಟ್ಟುಗಳಲ್ಲಿ ಹೆಚ್ಚುವರಿ ನೋಟುಗಳನ್ನು ತೂರಿಸುತ್ತಿದ್ದರು. ತಾಳೆ ನೋಡುವವರು, ಕಟ್ಟುಗಳ ಸಂಖ್ಯೆಯನ್ನು ಪರಿಶೀಲಿಸುತ್ತಿದ್ದರೇ ವಿನಃ ಪ್ರತಿಕಟ್ಟಿನಲ್ಲಿ ಎಷ್ಟು ನೋಟುಗಳಿವೆ ಎಂದು ಪರಿಶೀಲಿಸುತ್ತಿರಲಿಲ್ಲ. ನಂತರ, ಹಣವನ್ನು ಬ್ಯಾಂಕಿಗೆ ಸ್ಥಳಾಂತರಿಸುವಾಗ, ಹೆಚ್ಚುವರಿ ನೋಟುಗಳನ್ನು ಕಟ್ಟುಗಳಿಂದ ತೆಗೆಯಲಾಗುತ್ತಿತ್ತು ಎಂದು ವರದಿಯಾಗಿದೆ. ಕೆಲವು ನೌಕರರು ನಿಜವಾಗಿ ಎಣಿಕೆ ಮಾಡಿದ್ದಕ್ಕಿಂತ ಕಡಿಮೆ ದೇಣಿಗೆ ಮೊತ್ತವನ್ನು ದಾಖಲಿಸುತ್ತಿದ್ದರು, ಇದರಿಂದಾಗಿ ದೊಡ್ಡ ಮೊತ್ತದ ಹಣ ಕಣ್ಮರೆಯಾಗಲು ಸಾಧ್ಯವಾಯಿತು. ಕಳ್ಳತನದ ನಂತರ, ಕದ್ದ ನಗದನ್ನು ಆರಂಭದಲ್ಲಿ ದೇವಾಲಯದ ಸಂಕೀರ್ಣದಲ್ಲಿರುವ ಆಯ್ದ ನೌಕರರ ಶೌಚಾಲಯಗಳು ಅಥವಾ ಅಲಮಾರುಗಳಲ್ಲಿ ಬಚ್ಚಿಡಲಾಗುತ್ತಿತ್ತು; ನಂತರ ಸೂಕ್ತ ಅವಕಾಶವನ್ನು ನೋಡಿ, ಆರೋಪಿಗಳು ಕದ್ದ ಹಣವನ್ನು ದೇವಾಲಯದ ಆವರಣದಿಂದ ಹೊರಗೆ ಸಾಗಿಸಿ, ಅದನ್ನು ಎಲ್ಲಾ ಪಾಲುದಾರರು ಹಂಚಿಕೊಳ್ಳುತ್ತಿದ್ದರು. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಸಹ ಶಾಮೀಲಾಗಿದ್ದಾರೆ ಎಂಬುದಕ್ಕೆ ತಾನು ಪ್ರತ್ಯಕ್ಷದರ್ಶಿ ಎಂದು ಮಹಿಪಾಲ್ ಹೇಳಿದ್ದಾರೆ.
ಜೊತೆಗೆ, ದೇವಾಲಯದಲ್ಲಿ ಸಂಭವಿಸಿದ ಪ್ರತಿಯೊಂದರ, ವಿಶೇಷವಾಗಿ ಎಣಿಕೆ ಪ್ರಕ್ರಿಯೆಯ ಕಣ್ಗಾವಲು ದೃಶ್ಯಾವಳಿಗಳನ್ನು ದೀರ್ಘಕಾಲದವರೆಗೆ ಅಳಿಸಿಹಾಕಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಈ ಸುದ್ದಿ ಸ್ಫೋಟದ ಬಳಿಕ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು. ವರದಿಗಳ ಪ್ರಕಾರ, ಕೊಳ್ಳೆ ಹೊಡೆದ ಒಟ್ಟು ಮೊತ್ತವು ಕೆಲವು ಲಕ್ಷಗಳಿಂದ ಹಿಡಿದು 1,400 ಕೋಟಿ ರೂಪಾಯಿಗಳಷ್ಟಿದೆ. ದೇವಾಲಯವು ಜನವರಿ 2024 ರಲ್ಲಿ ಪ್ರಾರಂಭವಾದಾಗಿನಿಂದ, ನಗದು ದೇಣಿಗೆಯಾಗಿ ಸುಮಾರು 3,500 ಕೋಟಿ ರೂಪಾಯಿಗಳನ್ನು, ಜೊತೆಗೆ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸ್ವೀಕರಿಸಿದೆ ಎಂದು ಮತ್ತೊಂದು ವರದಿ ಹೇಳುತ್ತದೆ. ಆದರೆ ಸುಲಿಗೆ ಮಾಡಲಾದ ನಿಜವಾದ ಮೊತ್ತ ಎಂದಾದರೂ ಹೊರಬರುತ್ತದೆಯೇ ಎಂಬುದು ಯಾರ ಊಹೆಗೂ ಸಿಗದ ವಿಷಯ.
ಸಂಪತ್ಭರಿತರಾದ ಕಳ್ಳರು!
6ತಿಂಗಳೊಳಗೆ, ಅನೇಕ ವಂಚಕರು ಕೋಟ್ಯಾಧಿಪತಿಗಳಾದರು. ಅನುಕಲ್ಪ್ ಮಿಶ್ರಾ, ಆತನ ಭಾವ ಮೈದುನ ಲವ್ಕುಶ್ ಮಿಶ್ರಾ ಬಂಗಲೆಗಳ ಮೇಲೆ ಬಂಗಲೆ ಕಟ್ಟಿಸಿ, ಕಾರುಗಳನ್ನು ಖರೀದಿಸಿದ್ದಾರೆ. ದಾನವಾಗಿ ಬಂದ ಆಭರಣಗಳನ್ನು ನಿರ್ವಹಿಸುತ್ತಿದ್ದ ಕೆ.ಡಿ.ತಿವಾರಿ ವಿರುದ್ಧ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಆರೋಪವಿದೆ. ಎಣಿಕೆ ಕೊಠಡಿಯಲ್ಲಿ ಉಪಸ್ಥಿತರಿದ್ದ ಸುಭಾಷ್ ಶ್ರೀವಾಸ್ತವ, ಸಂಬಂಧಪಟ್ಟ ಟ್ರಸ್ಟ್ ಮತ್ತು ಬ್ಯಾಂಕ್ ಮೇಲ್ವಿಚಾರಣಾ ಸಿಬ್ಬಂದಿ, ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಮತ್ತು ಇತರ ಸಂಬಂಧಿತ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬಂದಿದೆ. ಎಸ್ಐಟಿಯ ಪ್ರಾಥಮಿಕ ತನಿಖಾ ವರದಿ ಮತ್ತು ಲಭ್ಯವಿರುವ ಮೌಖಿಕ, ಸಾಕ್ಷ್ಯಚಿತ್ರ ಮತ್ತು ಎಲೆಕ್ಟ್ರಾನಿಕ್ ಪುರಾವೆಗಳ ಪರಿಶೀಲನೆಯ ಆಧಾರದ ಮೇಲೆ ಜೂನ್ 26 ರಂದು, ಎಫ್ಐಆರ್ ನಲ್ಲಿ ಹೆಸರಿಸಲಾದ ಎಂಟೂ ಆರೋಪಿಗಳನ್ನು ಬಂಧಿಸಲಾಯಿತು, ಆದರೆ ದೇಣಿಗೆ ವಿಷಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಚಂಪತ್ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ನೀಡಿದರು.
ರಾಮಮಂದಿರದ ಜಮೀನು ಖರೀದಿ ಸಮಯದಲ್ಲಿಯೂ ಕಳ್ಳತನ ನಡೆದಿದೆ ಎಂಬ ಆರೋಪವಿದೆ. ಒಂದು ಪ್ರಕರಣದಲ್ಲಿ, ಒಬ್ಬ 2 ಕೋಟಿ ರೂಪಾಯಿಗೆ ಜಮೀನು ಖರೀದಿಸಿದ್ದ ಮತ್ತು 10 ನಿಮಿಷಗಳಲ್ಲಿ, ಅದನ್ನು ಟ್ರಸ್ಟಿಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು. ಅನೇಕ ಸಮುದಾಯಗಳು, ವ್ಯಕ್ತಿಗಳು ಯಾವ ರಶೀದಿಯೂ ಇಲ್ಲದೆ ನೀಡಿರುವ ಬೆಳ್ಳಿಯ ಇಟ್ಟಿಗೆಗಳು ಈಗ ಎಲ್ಲಿಗೆ ಹೋದವೆಂಬುದು ಯಾರಿಗೂ ಗೊತ್ತಿಲ್ಲ.
ಬಿಜೆಪಿ ಸರ್ಕಾರದ ಮೌನ!
ವಿರೋಧ ಪಕ್ಷದ ನಾಯಕರ ಭ್ರಷ್ಟಾಚಾರದ ತನಿಖೆಗೆ ಇಡಿ ಮತ್ತು ಸಿಬಿಐ ಗಳನ್ನು ಕಳುಹಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ಮೌನವಾಗಿ ಕುಳಿತಿದೆ. ಭೂಮಿ ಪೂಜೆಯಿಂದ ಹಿಡಿದು ರಾಮಮಂದಿರದ ಎಲ್ಲಾ ವಿಷಯಗಳಲ್ಲಿಯೂ ಪಾತ್ರ ವಹಿಸುವ ಪ್ರಧಾನಿಗಳು ಈಗ ನಡೆದಿರುವ ಬೃಹತ್ ಕಳ್ಳತನದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅಮಿತ್ ಶಾ ರಿಂದ ಹಿಡಿದು ಇತರ ಪ್ರಮುಖ ಸಚಿವರು ಹಾಗೂ ನಾಯಕರೂ ಮೌನವಾಗಿದ್ದಾರೆ.
ದೇವಾಲಯವೂ ಉದ್ಯಮವೇ…
ಧರ್ಮವು ಇಂದು ಕಾರ್ಪೋರೇಟ್ ಸಂಸ್ಥೆಗಳಂತೆ ಹಣ ಮಾಡಿಕೊಳ್ಳುವ ಉದ್ಯಮವಾಗುತ್ತಿದೆ. ಇದನ್ನು ‘ಸರ್ವಾಧಿಕಾರಿ ಹಿಂದುತ್ವವಾದಿ ಬಂಡವಾಳವಾದ’ ಎಂದು ಕರೆಯಲಾಗುತ್ತದೆ. ಬಂಡವಾಳವಾದದ ಮಾರುಕಟ್ಟೆ ಕೇಂದ್ರಿತ ಆರ್ಥಿಕತೆಯೊಂದಿಗೆ ಧಾರ್ಮಿಕ ಅಂಧಾಚರಣೆ ಬೆಸೆದುಕೊಳ್ಳುತ್ತಿದೆ, ಬಂಡವಾಳಶಾಹಿ ರಾಜ್ಯಯಂತ್ರ ಇದಕ್ಕೆ ಪುಷ್ಟಿ ನೀಡುವ ಹಾಗೂ ಮುನ್ನಡೆಸುವ ಕೆಲಸ ಮಾಡುತ್ತದೆ. ನಮ್ಮ ದೇಶದ ಸಾಮ್ರಾಜ್ಯವಾದ-ಬಂಡವಾಳವಾದದ ವಿಶೇಷ ಲಕ್ಷಣವಿದು. ಈ ವ್ಯವಸ್ಥೆ ಇಂದು ಕೊಳೆಯುತ್ತಿರುವ ಹಂತದಲ್ಲಿ ಜನರ ನಂಬಿಕೆಯನ್ನು ಬಳಸಿಕೊಂಡು ಧಾರ್ಮಿಕ ಅಂಧಾಭಿಮಾನ ಸೃಷ್ಟಿಮಾಡುವುದಷ್ಟೇ ಅಲ್ಲದೇ ಅದರಿಂದ ಲಾಭ ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಹೊಂದಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿರುವ ಧಾರ್ಮಿಕ ಗುರುಗಳು, ರಾಜಕಾರಣಿಗಳಿಗಿಂತ ದೊಡ್ಡ ಮೋಸಗಾರರು ಮತ್ತೊಬ್ಬರಿಲ್ಲ! ಇಡೀ ಅಯೋಧ್ಯೆಯ ಮಂದಿರದ ಸಮಸ್ಯೆ ಹಾಗೂ ಇದರ ಕುರಿತಾದ ಬಿಜೆಪಿಯ ಮೌನವನ್ನು ನಾವು ಈ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬೇಕು.
