ಕಾಮ್ರೇಡರೇ ಹಾಗೂ ಸ್ನೇಹಿತರೇ, ಕಾಮ್ರೇಡ್ ರಬಿನ್ ಸಮಾಜ್‌ಪತಿಯವರ ಭಾವಚಿತ್ರಕ್ಕೆ ಹಾರ ಹಾಕುವುದು, ಅವರ ಸ್ಮರಣ ಸಭೆಯಲ್ಲಿ ಮಾತನಾಡುವುದು ನನಗೆ ಅತ್ಯಂತ ನೋವಿನ ಸಂಗತಿ. ಅವರು ಕ್ರಾಂತಿಕಾರಿ ಜೀವನಕ್ಕೆ ಕಾಲಿಟ್ಟ ದಿನದಿಂದ ಕೊನೆ ಉಸಿರೆಳೆಯುವರೆಗೂ ನಾನು ಅವರಿಗೆ ಬಹಳ ಹತ್ತಿರದವನಾಗಿದ್ದೆ. ಎಷ್ಟೇ ದುಃಖವಾದರೂ ಕೂಡ ನಿಮಗೆ ಅವರ ಕುರಿತು ಕೆಲವೊಂದು ವಿಷಯಗಳನ್ನು ಹೇಳಲೇಬೇಕು. ಅಗಲಿದ ಕಾಮ್ರೇಡ್‌ಗೆ ಪುಷ್ಪ ನಮನ ಸಲ್ಲಿಸುವುದು ಅಥವಾ ಅವರ ಸ್ಮರಣ ಸಭೆಯನ್ನು ನಡೆಸುವುದು ನಮಗೆ ಒಂದು ಸಂಪ್ರದಾಯವಲ್ಲ. ನಮ್ಮನ್ನು ಅಗಲಿರುವ ಕಾಮ್ರೇಡ್ ರಬಿನ್ ಸಮಾಜ್‌ಪತಿಯವರಿಗೆ ನಮ್ಮಿಂದ ಕಲಿಯಲು ಏನೂ ಇಲ್ಲ. ಆದರೆ ಇನ್ನೂ ಜೀವಂತವಾಗಿರುವ ನಾವು, ನಮ್ಮನ್ನಗಲಿರುವ ಕಾಮ್ರೇಡರ ಜೀವನ ಸಂಘರ್ಷದಿಂದ ಕಲಿಯಲು ಬಹಳಷ್ಟಿದೆ. ಇಂತಹ ಸ್ಮರಣ ಸಭೆಗಳನ್ನು ಸಂಘಟಿಸುವ ಮೂಲ ಉದ್ದೇಶ ಕೂಡ ಇದೇ. ನಾವೆಲ್ಲರೂ ಮಹಾನ್ ಮಾರ್ಕ್ಸ್ ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಶಿಷ್ಯರು. ನಾವು ಪಡೆದುಕೊಂಡಿರುವ ಕ್ರಾಂತಿಕಾರಿ ಮಟ್ಟ, ಕೌಶಲ್ಯ, ಸಾಮರ್ಥ್ಯ ಅಥವಾ ಗಳಿಸಿಕೊಂಡಿರುವ ದಕ್ಷತೆ - ಇವೆಲ್ಲವೂ ನಾವು ಎಷ್ಟು ಕಾಮ್ರೇಡ್ ಶಿವದಾಸ್ ಘೋಷ್‌ರವರ ಬೋಧನೆಗಳಿಂದ ಗ್ರಹಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ನಾವು ಬದುಕುತ್ತಿರುವ ಸಮಾಜ, ಸಾಮಾಜಿಕ ವಾತಾವರಣ ಒಂದು ಕ್ರಾಂತಿಕಾರಿ ವ್ಯಕ್ತಿತ್ವ ಬೆಳೆಯುವುದಕ್ಕೆ ಪೂರಕವಾಗಿಲ್ಲ. ನಮ್ಮ ಕುಟುಂಬದ ಅವಶ್ಯಕತೆಗಳನ್ನು ಪೂರೈಸುವುದು, ಸ್ವಹಿತವನ್ನು ನೋಡಿಕೊಳ್ಳುವುದು, ವೈಯಕ್ತಿಕ ಇಷ್ಟ-ಅನಿಷ್ಟಗಳನ್ನು, ಲಾಭ-ನಷ್ಟಗಳನ್ನು ತೂಗುವುದರಲ್ಲಿ ನಮ್ಮ ಜೀವನವು ಕೇಂದ್ರಿತವಾಗಿದೆ. ನಾವು ಒಬ್ಬ ಮಹಾನ್ ವ್ಯಕ್ತಿಯ, ಕ್ರಾಂತಿಕಾರಿ ಪಕ್ಷದ ಸಂಪರ್ಕಕ್ಕೆ ಬಂದಾಗ ನಮ್ಮಲ್ಲಿ ಒಂದು ಹೊಸ ಜ್ಞಾನೋದಯವಾಗುತ್ತದೆ. ನಾವು ಆ ಬೋಧನೆಗಳ ಆಧಾರದ ಮೇಲೆ, ಚಿಂತನೆಗಳ ಮೇಲೆ ನಮ್ಮನ್ನು ನಾವು ಎಷ್ಟರಮಟ್ಟಿಗೆ ಸುಧಾರಿಸಿಕೊಂಡು ಮರುಸಜ್ಜುಗೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಕ್ರಾಂತಿಕಾರಿ ವ್ಯಕ್ತಿತ್ವದ ಗುಣಮಟ್ಟವು ಅವಲಂಬಿತವಾಗಿದೆ. ಆದ್ದರಿಂದ ಈ ಹೋರಾಟವು ಅತ್ಯಂತ ಮುಖ್ಯವಾದದ್ದು. ನಾವು ಎಷ್ಟು ಅವಿರತವಾಗಿ ಮತ್ತು ರಾಜಿರಹಿತವಾಗಿ ನಮ್ಮ ಶಿಕ್ಷಕರ ಬೋಧನೆಗಳ ಆಧಾರದ ಮೇಲೆ ಜೀವನದ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಹೋರಾಡುತ್ತೇವೆಯೋ, ಅದು ನಮ್ಮ ಕ್ರಾಂತಿಕಾರಿ ಬದ್ಧತೆಯನ್ನು ಪೂರೈಸಲು ನಾವು ಎಷ್ಟು ಸಾಮರ್ಥ್ಯವನ್ನು ಪಡೆಯಬಲ್ಲೆವು ಎಂಬುದನ್ನು ನಿರ್ಧರಿಸುತ್ತದೆ. ಈ ಹೋರಾಟವು ಕೊನೆಯ ಉಸಿರಿನವರೆಗೂ ಇರುತ್ತದೆ. ಈ ಹೋರಾಟದ ಗತಿಯಲ್ಲಿ ಒಬ್ಬ ಕಾಮ್ರೇಡರು ಬಹಳ ವೇಗವಾಗಿ ಮುಂದುವರೆಯುತ್ತಾರೆ, ಮತ್ತೊಬ್ಬ ಕಾಮ್ರೇಡರು ಇದ್ದಕ್ಕಿದ್ದಂತೆ ನಿಂತು ಬಿಡುತ್ತಾರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಒಬ್ಬ ಕಾಮ್ರೇಡರು ಹಿಂದೆ ಬೀಳಬಹುದು. ಆದರೆ ಮತ್ತೆ ಆತ ಅಥವಾ ಆಕೆ ತಮ್ಮ ಇತಿಮಿತಿಗಳನ್ನು ಮೀರಿ ಮುಂದುವರೆಯಬಹುದು. ಆದರೆ ನಾನು ಯಾವುದೇ ಸಂಕೋಚವಿಲ್ಲದೆ ಹೇಳುತ್ತೇನೆ - ಕಾಮ್ರೇಡ್ ರಬಿನ್ ಸಮಾಜ್‌ಪತಿಯವರ ಹೋರಾಟವು ನಿರಂತರವಾದ ಬೆಳವಣಿಗೆಯದಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಅವರಲ್ಲಿ ಯಾವುದೇ ಇತಿಮಿತಿ ಇರಲಿಲ್ಲವೆಂದು ಹೇಳಲಾರೆ. ಮಹಾನ್ ವ್ಯಕ್ತಿಯನ್ನೂ ಒಳಗೊಂಡಂತೆ ಪ್ರತಿಯೊಬ್ಬರಲ್ಲೂ ಕೆಲವೊಂದು ಇತಿಮಿತಿ ಅಥವಾ ಕೊರತೆ ಇರುತ್ತದೆ. ಈ ಬೋಧನೆಯನ್ನು ನಾವು ಕಲಿತಿದ್ದೇವೆ. ಒಬ್ಬ ಕ್ರಾಂತಿಕಾರಿಯ ಪ್ರಗತಿಯು ಆತ ಅಥವಾ ಆಕೆ ತಮ್ಮ ಇತಿಮಿತಿಗಳನ್ನು ಮೀರಿ ಎಷ್ಟರಮಟ್ಟಿಗೆ ಮುಂದುವರೆಯುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಕಾಮ್ರೇಡ್ ರಬಿನ್ ಸಮಾಜ್‌ಪತಿಯವರ ಒಂದು ಗುಣವನ್ನು ನಾನು ಖಚಿತವಾಗಿ ಹೇಳಬಲ್ಲೆ. ಅವರು ಪಕ್ಷದ ಯಾವುದಾದರೂ ಚಿಂತನೆಗಳನ್ನು ತಾರ್ಕಿಕವಾಗಿ ಮನದಟ್ಟು ಮಾಡಿಕೊಳ್ಳಲು ಸಾಧ್ಯವಾದಾಗಲೆಲ್ಲಾ, ಅದು ಎಷ್ಟೇ ಕಷ್ಟಕರವಾಗಿರಲಿ, ಹಿಂಜರಿಕೆಯಿಲ್ಲದೆ ಅದರಂತೆ ತಮ್ಮನ್ನು ಬದಲಾಯಿಸಿಕೊಳ್ಳಲು ತಮ್ಮ ಜೀವನದ ಕೊನೆ ಉಸಿರಿನ ತನಕ ರಾಜಿರಹಿತ ಹೋರಾಟವನ್ನು ನಡೆಸಿದರು. ಈ ಹೋರಾಟದಲ್ಲಿ ಅವರು ಕೆಲವೊಮ್ಮೆ ತಪ್ಪುಗಳನ್ನು ಮಾಡಿದರು ಅಥವಾ ಅವರಿಗೆ ಅಪೇಕ್ಷಿತ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಅವರು ಯಾವುದನ್ನೂ ಮುಚ್ಚಿಡಲಿಲ್ಲ, ಎಲ್ಲವನ್ನು ಮುಕ್ತವಾಗಿ ನಾಯಕತ್ವದ ಮುಂದೆ ಹೇಳಿಕೊಂಡರು. ಅವರ ಕ್ರಾಂತಿಕಾರಿ ಜೀವನದ ಬಗ್ಗೆ ನಾನು ತಿಳಿದುಕೊಂಡಿರುವ ಕೆಲವೊಂದು ಅಂಶಗಳು ಹಾಗೂ ಅವರೊಂದಿಗಿನ ಒಡನಾಟದಲ್ಲಿ ಸಂಪರ್ಕಕ್ಕೆ ಬಂದ ಪಶ್ಚಿಮ ಬಂಗಾಳ, ಬಿಹಾರ್ ಹಾಗೂ ಜಾರ್ಖಂಡ್ ಕಾಮ್ರೇಡರಿಂದ ತಿಳಿದುಕೊಂಡ ಅಂಶಗಳನ್ನು ನಾನಿಲ್ಲಿ ಮಂಡಿಸುತ್ತೇನೆ. ಕಾಮ್ರೇಡ್ ರಬಿನ್ ಸಮಾಜ್‌ಪತಿಯವರು ತಮ್ಮ ಸ್ನೇಹಿತರಾಗಿದ್ದ ಕಾಮ್ರೇಡ್ ಚಿರರಂಜನ್ ಚಕ್ರವರ್ತಿ ಅವರೊಡನೆ ಪಕ್ಷಕ್ಕೆ ಆಕರ್ಷಿತರಾಗಿ ಬಂದಾಗ ಪ್ರಪಂಚದಲ್ಲಿನ್ನೂ ಸಮಾಜವಾದಿ ಬಣ ಅಸ್ತಿತ್ವದಲ್ಲಿತ್ತು. ಕಾಮ್ರೇಡ್ ಮಾವೋ ಚೀನಾದಲ್ಲಿ ಸಮಾಜವಾದವನ್ನು ಕಾಪಾಡಲು ಧೀರೋದಾತ್ತ ಹೋರಾಟವನ್ನು ನಡೆಸುತ್ತಿದ್ದರು. ವಿಯಟ್ನಾಮಿನ ಜನರು ತಮ್ಮ ಗೆಲುವಿನ ಅಂಚಿನಲ್ಲಿ ಇದ್ದರು. ವಿದ್ಯಾವಂತ ಜನರು ಮಾರ್ಕ್ಸ್ ವಾದ, ಕಮ್ಯುನಿಸಂನೆಡೆಗೆ ತೀವ್ರವಾಗಿ ಆಕರ್ಷಿತರಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಎಡ ಪ್ರಜಾಸತ್ತಾತ್ಮಕ ಚಳುವಳಿಗಳ ಅಲೆ ಇತ್ತು. ಅಂತಹ ಸಂದರ್ಭದಲ್ಲಿ ಕಾಮ್ರೇಡ್ ರಬಿನ್ ಸಮಾಜ್‌ಪತಿ ಹಾಗೂ ಚಿರರಂಜನ್ ಚಕ್ರವರ್ತಿ ಅವರಿಗೆ ಒಂದು ನೈಜ ಕಮ್ಯುನಿಸ್ಟ್ ಪಕ್ಷವನ್ನು ಸೇರುವ ತವಕವಿತ್ತು. ಎಐಡಿಎಸ್‌ಓ, ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯನಿರತರಾಗಿದ್ದ, ಚಾರುಚಂದ್ರ ಕಾಲೇಜಿನಲ್ಲಿದ್ದ ಕಾಮ್ರೇಡ್ ಮುಕುಂದ ಘೋಷ್ ಎಂಬುವರು ಚಕ್ರವರ್ತಿಯವರನ್ನು ನನ್ನ ಬಳಿಗೆ ಕರೆದುಕೊಂಡು ಬಂದರು. ಅವರ ಜೊತೆ ಚರ್ಚೆಗಳನ್ನು ಮಾಡಿದೆ. ಅವರು ಎಐಡಿಎಸ್‌ಓಗೆ ಹತ್ತಿರವಾಗಿದ್ದರು. ಸ್ವಲ್ಪ ದಿನಗಳ ನಂತರ ನಾನು ಕಾಮ್ರೇಡ್ ರಬಿನ್ ಸಮಾಜ್‌ಪತಿಯವರನ್ನು ಪಕ್ಷದ ಕಛೇರಿಗೆ ಕರೆದುಕೊಂಡು ಬಂದೆ. ನಮ್ಮ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರು ಪ್ರತಿದಿನ ಕಚೇರಿಯಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ, ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾದ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಜ್ಞಾನದ ತೃಷೆಯಿಂದ ಕಾಮ್ರೇಡ್ ಘೋಷ್‌ರವರಿಗೆ ಪ್ರಶ್ನೆಗಳನ್ನು ಕೇಳಿ ಕಾಮ್ರೇಡ್ ರಬಿನ್ ಸಮಾಜ್‌ಪತಿಯವರು ಜ್ಞಾನ ಪಡೆಯುತ್ತಿದ್ದರು. ಈ ಚರ್ಚೆಗಳನ್ನು ಕೇಳಿ ಮೂಕ ವಿಸ್ಮಿತರಾದರು. ಅದು ಅವರ ಚಾರಿತ್ರ್ಯದಲ್ಲಿಯೇ ಬದಲಾವಣೆಯನ್ನು ತಂದಿತು. ನಾನು ಕಾಮ್ರೇಡ್ ರಬಿನ್ ಸಮಾಜ್‌ಪತಿಯವರೊಡನೆ ಹಲವಾರು ಚರ್ಚೆಗಳನ್ನು ಮಾಡಿದ್ದೇನೆ. ಅವರು ತಮ್ಮ ಹಿರಿಯರಿಂದ ಹಾಗೂ ಕಿರಿಯರಿಂದ ಬಹಳ ಸುಲಭವಾಗಿ ಟೀಕೆಗಳನ್ನು ಸ್ವೀಕರಿಸುತ್ತಿದ್ದರು. ಯಾರಾದರೂ ಅವರನ್ನು ತಪ್ಪಾಗಿ ಟೀಕಿಸಿದರೂ ಸಹ ಅವರು ಎಂದಿಗೂ ಅಸಮಾಧಾನ ತೋರುತ್ತಿರಲಿಲ್ಲ. ಅವರು ಬಡ ಕುಟುಂಬದಿಂದ ಬಂದವರು. ಅವರಿಗೆ ಒಮ್ಮೆ ಉದ್ಯೋಗ ತೆಗೆದುಕೊಳ್ಳಬಹುದಾದ ಅವಕಾಶ ಬಂದಾಗ ಕಾಮ್ರೇಡ್ ಚಿರರಂಜನ್ ಅವರೊಂದಿಗೆ ಹೇಳಿದರು, ‘ನನ್ನ ತಂದೆ ಸಾಯಬಹುದು, ನನ್ನ ಕಿರಿಯ ತಮ್ಮ, ತಂಗಿಯರು ಹಸಿವೆಯಿಂದ ನರಳಬಹುದು. ಆದರೂ ನಾನು ಉದ್ಯೋಗ ತೆಗೆದುಕೊಳ್ಳಲಾರೆ. ನಾನು ಕ್ರಾಂತಿಕಾರಿ ಜೀವನವನ್ನು ಆಯ್ದುಕೊಂಡಿದ್ದೇನೆ’ ಎಂದು. ಈ ನಿರ್ಧಾರವನ್ನು ಅವರು ನಮ್ಮನ್ನು ಕೇಳಿ ಮಾಡಲಿಲ್ಲ. ಇದು ಕೇವಲ ಅವರ ನಿರ್ಧಾರವಾಗಿತ್ತು . ಕಾಮ್ರೇಡ್ ರಬಿನ್ ಸಮಾಜ್‌ಪತಿಯವರು ಯಾವಾಗಲೂ ಕಿರಿಯ ಕಾಮ್ರೇಡರಲ್ಲಿ ವಿಶ್ವಾಸ ತುಂಬುತ್ತಿದ್ದರು. ಅವರ ನೋವುಗಳನ್ನು ನಿವಾರಿಸುತ್ತಿದ್ದರು. ಅವರು ಉತ್ತಮ ಕ್ರಾಂತಿಕಾರಿಗಳಾಗಲು ಬೆಂಗಾವಲಾಗಿ ನಿಂತು ಪ್ರೋತ್ಸಾಹಿಸಿ ಬೆಳೆಸುತ್ತಿದ್ದರು. ಕಾಮ್ರೇಡ್ ಚಂಡಿದಾಸ್ ಭಟ್ಟಾಚಾರ್ಯ ಅವರು ಹೇಳಿದಂತೆ ಬಾಹ್ಯವಾಗಿ ಅವರು ಸಾಧಾರಣವಾಗಿ ಕಂಡರೂ, ಸರಳ ಉಡುಪುಗಳನ್ನು ಧರಿಸುತ್ತಿದ್ದರೂ ಇತರರು ಅವರಡೆಗೆ ಆಕರ್ಷಿತರಾಗುತ್ತಿದ್ದರು. ಅವರು ಹೃದಯದಾಳದಿಂದ ಮಾತನಾಡುತ್ತಿದ್ದರಿಂದ ಅದು ಕೇಳುಗರ ಆತ್ಮಪ್ರಜ್ಞೆಯನ್ನು ಬಡಿದೆಬ್ಬಿಸುತ್ತಿತ್ತು. 1976 ರಲ್ಲಿ ಪಕ್ಷವು ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಸಾಹಿತಿ ಶರತ್‌ಚಂದ್ರ ಚಟರ್ಜಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸಮಿತಿಯೊಂದನ್ನು ರಚಿಸಿತು. ಅದರಲ್ಲಿ ಬಹಳ ಪ್ರಮುಖ ಪಾತ್ರವನ್ನು ರಬಿನ್ ಸಮಾಜ್‌ಪತಿಯವರು ವಹಿಸಿದ್ದರು. ಹಲವಾರು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಶರತ್‌ಚಂದ್ರರ ಕುರಿತಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಐತಿಹಾಸಿಕ ವಿಶ್ಲೇಷಣೆಯನ್ನು ಜನರ ಬಳಿಗೆ ಕೊಂಡೊಯ್ದರು. ವಿವಿಧ ಕ್ಷೇತ್ರಗಳ ಜನರ ಮೇಲೆ ಪರಿಣಾಮ ಬೀರಿದರು. 1979 ರಲ್ಲಿ ಸಿಪಿಎಂ ನೇತೃತ್ವದ ಸರ್ಕಾರದ ಇಂಗ್ಲಿಷ್ ಕಲಿಕೆ ಹಾಗೂ ಉತ್ತೀರ್ಣ-ಅನುತ್ತೀರ್ಣ ಪದ್ಧತಿಯನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದ ಕಿತ್ತು ಹಾಕುವ ನೀತಿಗಳ ವಿರುದ್ಧದ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. 1986ರಲ್ಲಿ ಎಐಡಿಎಸ್‌ಓನ ಅಖಿಲ ಭಾರತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದರು. ಈಗ ಅವರು ನಿರ್ವಹಿಸಿದ ಪಾತ್ರ ಅವರ ಸಾಮರ್ಥ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. 1990ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಪಕ್ಷದ ಜನವಿರೋಧಿ ನೀತಿಗಳ ವಿರುದ್ಧ ನಮ್ಮ ಪಕ್ಷ ಬೆಳೆಸಿದ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದರು. ನಂತರ ಅವಿಭಜಿತ ಬಿಹಾರ ರಾಜ್ಯದ ಕಾರ್ಯದರ್ಶಿಗಳಾದ ಶಂಕರ್ ಸಿಂಗ್‌ರವರು ಅವನತಿ ಹೊಂದಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಾಗ, ಸಮಾಜ್‌ಪತಿಯವರು ಎಲ್ಲಾ ಕಾಮ್ರೇಡರೊಡನೆ ಬೆರೆತು, ಚರ್ಚಿಸಿ, ಹುರಿದುಂಬಿಸಿ ಪಕ್ಷವನ್ನು ಕಾಪಾಡಿದರು. ಆರ್ಥಿಕ ಸಂಕಷ್ಟಗಳನ್ನೂ ಸಹ ಅವರು ಆ ದಿನಗಳಲ್ಲಿ ಎದುರಿಸಬೇಕಾಯಿತು. ಶಂಕರ್ ಸಿಂಗ್‌ರ ಅಡಿಯಲ್ಲಿ ಸಮಿತಿಯ ಮೂಲಕ ಕಾರ್ಯನಿರ್ವಹಣೆ, ಶಿಸ್ತು, ಕ್ರಾಂತಿಕಾರಿ ರಾಜಕೀಯವನ್ನು ಮೈಗೂಡಿಸಿಕೊಳ್ಳುವುದು ಅಥವಾ ಕಮ್ಯುನಿಸ್ಟ್ ನೀತಿ ಸಂಹಿತೆಯ ಪಾಲನೆಗಳು ಇರಲಿಲ್ಲ. ಕಾಮ್ರೇಡ್ ರಬಿನ್ ಸಮಾಜ್‌ಪತಿಯವರು ಪಶ್ಚಿಮ ಬಂಗಾಲದಲ್ಲಿ ಇವುಗಳ ಕುರಿತು ಕಲಿತಿದ್ದ ವಿಷಯಗಳನ್ನು ಬಿಹಾರದಲ್ಲಿ ಪಾಲಿಸಲು ಕೈಗೆತ್ತಿಕೊಂಡರು. ಕಾಮ್ರೇಡರನ್ನು ಕಾಳಜಿಯಿಂದ, ಪ್ರೀತಿಯಿಂದ ಬೆಳೆಸುವ ವಿಧಾನವನ್ನು ಕೈಗೆತ್ತಿಕೊಂಡರು. ಅವರು ಪಶ್ಚಿಮ ಬಂಗಾಳದಿಂದ ಮತ್ತೊಂದು ರಾಜ್ಯ ಬಿಹಾರಿಗೆ ಹೋಗಿ ಸಂಘಟನೆಯನ್ನು ಕಟ್ಟಲು ಪ್ರಾರಂಭಿಸಿದಾಗ ಹಲವಾರು ಅಂಶಗಳನ್ನು ಕಲಿತರು. ಪಕ್ಷದೊಂದಿಗೆ ಅವರು ಬೆಳೆದರು. ಕಾಮ್ರೇಡರು ಹೀಗೆ ಬೇರೆಡೆಯಲ್ಲಿಗೆ ಹೋಗಿ ಪಕ್ಷವನ್ನು ಬೆಳೆಸುವ ಈ ಅಂಶವನ್ನು ಅವರ ಹೋರಾಟದಿಂದ ಕಲಿಯಬೇಕು. ಕಾಮ್ರೇಡ್ ರಬಿನ್ ಸಮಾಜ್‌ಪತಿಯವರು ಪಕ್ಷದ ಅವಶ್ಯಕತೆಗನುಗುಣವಾಗಿ ಜಾರ್ಖಂಡ್‌ಗೆ ತೆರಳಿ, ಪಕ್ಷವನ್ನು ಸದೃಢವಾಗಿ ಕಟ್ಟಿದರು. ಅಂದಿನ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಹೇಮ್ ಚಿಕ್ರವರ್ತಿಯವರಿಗೆ ವಯೋಸಹಜ ಅನಾರೋಗ್ಯವಿದ್ದುದರಿಂದ ಕಾಮ್ರೇಡ್ ರಬಿನ್ ಸಮಾಜ್‌ಪತಿ ಅವರು ಎಲ್ಲಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋದರು, ಆದರೆ ಅತ್ಯಂತ ಗೌರವಪೂರ್ವಕವಾಗಿ ಕಾಮ್ರೇಡ್ ಹೇಮ್ ಚಕ್ರವರ್ತಿಯವರನ್ನು ಮುಂದಿಟ್ಟುಕೊಂಡೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು. ರಾಂಚಿಯಲ್ಲಿ ಪಕ್ಷದ ಸ್ವಂತ ಕಛೇರಿಯನ್ನು ಸ್ಥಾಪಿಸಿದರು. ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ಕುರಿತು ಬುಡಕಟ್ಟು ಹಾಗೂ ಬುಡಕಟ್ಟೇತರ ಜನಾಂಗಗಳ ನಡುವೆ ನಡೆದ ಸಂಘರ್ಷದ ಕುರಿತು ಸೂಕ್ತವಾದ ಮಾರ್ಗದರ್ಶನ ನೀಡಿ ಪುಸ್ತಕ ಪ್ರಕಟಿಸಿದರು. ಇದು ಎಲ್ಲಾ ಜನರನ್ನೂ ಆಕರ್ಷಿಸಿತು. ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕುಗಳಿಗಾಗಿ ಹಾಗೂ ಇನ್ನಿತರ ಸಮಸ್ಯೆಗಳ ವಿರುದ್ಧ ಧೀರೋದಾತ್ತ ಹೋರಾಟಗಳನ್ನು ಕಟ್ಟಿದರು. ಜಾರ್ಖಂಡ್‌ನಲ್ಲಿ ಅವರು ಶರತ್‌ಚಂದ್ರ, ಪ್ರೇಮ್‌ಚಂದ್ ಅವರ ದಿನಾಚರಣೆಗಳನ್ನು ಆಚರಿಸಿದರು. ಕಾಮ್ರೇಡರು ಹೇಳುವಂತೆ ಅವರು ಎಂದಿಗೂ ತಮ್ಮನ್ನೇ ಬಿಂಬಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಹಂ ಇರಲಿಲ್ಲ, ನಮ್ರತೆಯಿಂದ ಕೂಡಿದ್ದರು. ಅವರ ಈ ಉನ್ನತ ಚಾರಿತ್ರ್ಯಕ್ಕೆ ಕಾಮ್ರೇಡ್ ಶಿವದಾಸ್ ಘೋಷ್‌ರವರ ಚಿಂತನೆಯೇ ಮೂಲ. ಅವರು ಇದನ್ನು ತಮ್ಮ ಜೀವನದ ತತ್ವಶಾಸ್ತ್ರವಾಗಿ, ಕ್ರಿಯೆಯ ಮಾರ್ಗದರ್ಶನವಾಗಿ ಸ್ವೀಕರಿಸಿದ್ದರು. ಇದರ ಆಧಾರದ ಮೇಲೆ ಜೀವನಪೂರ್ತಿ ಹೋರಾಡಿದರು. ನಾನು ಅವರಿಗೆ ಬಹಳ ಆತ್ಮೀಯನಾಗಿದ್ದೆ. ಆದ್ದರಿಂದ ಅವರ ಕುರಿತು ಮಾತನಾಡುತ್ತಿರುವಾಗ ನನಗೆ ಅತ್ಯಂತ ವೇದನೆ ಆಗುತ್ತಿದೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ದಾಳಿಗಳು ನಡೆಯುತ್ತಿವೆ. ಅದರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಆದರೆ ಅವುಗಳನ್ನು ಮುನ್ನಡೆಸಲು ನೈಜ ಕಮುನಿಸ್ಟ್ ಪಕ್ಷಗಳು ಇಲ್ಲ. ಅಂತೆಯೇ ದೇಶದಲ್ಲಿಯೂ ಸಹ ಜನಜೀವನ ಸಂಕಷ್ಟದಲ್ಲಿದೆ. ಇದರ ವಿರುದ್ಧ ಹೋರಾಡಲು ನಾವು ಪಕ್ಷವನ್ನು ಬೆಳೆಸಬೇಕಾಗಿದೆ. ಕಾಮ್ರೇಡ್ ರಬಿನ್ ಸಮಾಜ್‌ಪತಿಯಂತಹವರನ್ನು ಸೃಷ್ಟಿ ಮಾಡಿದ ಸಂಘರ್ಷವನ್ನು ನಾವು ಇಂದು ನಡೆಸಬೇಕಿದೆ. ಅವರಿಗೆ ಗೌರವವನ್ನು ಅರ್ಪಿಸುವಾಗ ನಾವು ಇದನ್ನು ಅರಿಯಬೇಕು. ವೇದಿಕೆಯಲ್ಲಿರುವವರೂ ಸೇರಿದಂತೆ ಹಲವಾರು ಹಿರಿಯ ಕಾಮ್ರೇಡರು ಇಲ್ಲಿದ್ದಾರೆ. ಅವರು ಕಾಮ್ರೇಡ್ ರಬಿನ್ ಸಮಾಜ್‌ಪತಿ ಅವರಿಂದ ಕಲಿಯುವ ಬಹಳಷ್ಟು ಅಂಶಗಳಿವೆ. ಅಂತೆಯೇ ಕಿರಿಯ ಕಾಮ್ರೇಡರೂ ಕಲಿಯುವುದು ಬಹಳಷ್ಟು ಇದೆ. ಎಲ್ಲಾ ಕಾಮ್ರೇಡರು ಕಾಮ್ರೇಡ್ ಶಿವದಾಸ್ ಘೋಷ್‌ರವರ ನೈಜ ಶಿಷ್ಯರಾಗಿ ಬೆಳೆಯಲು, ನಿಮ್ಮ ಎಲ್ಲಾ ಇತಿಮಿತಿಗಳನ್ನು, ಕೊರತೆಗಳನ್ನು ಮೀರಲು, ಮುಷ್ಟಿ ಬಿಗಿಹಿಡಿದು ದೃಢ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರವೇ ಈ ಸ್ಮರಣ ಸಭೆಯ ಆಚರಣೆಯ ಉದ್ದೇಶ ಸಫಲವಾಗುತ್ತದೆ. ಈ ಮನವಿಯೊಂದಿಗೆ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ.