ಇತ್ತೀಚೆಗೆ ರಾಜ್ಯದ ಹನೂರು ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರು ಎಂದು ಮೂರು ಮಂದಿ ಸ್ಥಳೀಯರನ್ನು ಮಧ್ಯರಾತ್ರಿ ಗುಂಡಿಕ್ಕಿ ಕೊಲ್ಲಲಾಯಿತು. ಹತ್ತಿರದಿಂದಲೇ ಅವರಿಗೆ ಶೂಟ್ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿದೆ. ಅವರು ಕೊಲ್ಲುವಂತಹ ತಪ್ಪು ಏನು ಮಾಡಿದ್ದಾರೆ ಎಂದು ಸುತ್ತಲಿನ ಗ್ರಾಮಸ್ಥರು, ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ. ಅದೇ ರೀತಿ ಜುಲೈನಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮಂಡಲ್ನನ್ನು ಪೋಲಿಸರು ಎನ್ಕೌಂಟರ್ನಲ್ಲಿ ಕೊಂದಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿ ಕಳೆದ ಐದು ದಶಕಗಳಿಂದ ಸ್ಥಗಿತಗೊಂಡಿದ್ದ ಎನ್ಕೌಂಟರ್ ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರ್ಧ ಶತಮಾನದಿಂದ ಇಂತಹ ಕಾನೂನುಬಾಹಿರ ಕೊಲೆಗಳನ್ನು ನಿಲ್ಲಿಸಿದ್ದ ರಾಜ್ಯವೊಂದರಲ್ಲಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಉತ್ತರ ಪ್ರದೇಶ ಮಾದರಿಯ “ಬುಲ್ಡೋಜರ್ ಮತ್ತು ಶೂನ್ಯ ಟಾಲರೆನ್ಸ್” ಪೊಲೀಸಿಂಗ್ ಪದ್ಧತಿಯನ್ನು ತರಲಾಗಿದೆ. ಆಡಳಿತಾರೂಢ ಬಿಜೆಪಿ ನಾಯಕರು ಇದನ್ನು “ದೈವಿಕ ನ್ಯಾಯ” ಎಂದು ಸಂಭ್ರಮಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಹೈದರಾಬಾದಿನ ದಂತವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಅಪರಾಧ ಮರುಸೃಷ್ಟಿ ಸಂದರ್ಭದಲ್ಲಿ ಎನ್ಕೌಂಟರ್ ಮೂಲಕ ಮುಗಿಸಲಾಯಿತು. ಇಂತಹ ಅದೆಷ್ಟೋ ಪ್ರಕರಣಗಳು ದೇಶದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.
ಎನ್ಕೌಂಟರ್ ಕೊಲೆ ಎಂದರೆ ಏನು?
ಪೊಲೀಸ್ ಅಥವಾ ಸಶಸ್ತ್ರ ಪಡೆ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿ ಹೇಳಿಕೊಳ್ಳುವ ನ್ಯಾಯಬಾಹಿರ ಹತ್ಯೆಯೇ ‘ಎನ್ಕೌಂಟರ್’. ಕಾನೂನಿನಲ್ಲಿ ಈ ಪದಕ್ಕೆ ಯಾವುದೇ ಮಾನ್ಯತೆಯಿಲ್ಲ; ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಬಳಸುವ ಒಂದು ಸುಸಂಸ್ಕೃತ ಪದವಾಗಿದೆ. ಇದು ‘ತೋಳ್ಬಲವೇ ನ್ಯಾಯ’ (might is right) ಎಂಬ ಗ್ಯಾಂಗ್ಸ್ಟರ್ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಸರ್ಕಾರವೇ ಕಾನೂನನ್ನು ಗಾಳಿಗೆ ತೂರಿ ನಡೆಸುವ ಹಿಂಸೆಯಾಗಿದೆ.
ಬಂಗಾಳದಿಂದ ಕಾಶ್ಮೀರ, ಮಣಿಪುರ, ಉತ್ತರ ಪ್ರದೇಶದವರೆಗೆ ಎನ್ಕೌಂಟರ್ ಇತಿಹಾಸ
ನಕ್ಸಲೈಟ್ ಕಾಲದ ಬಂಗಾಳ: 1970 ರ ದಶಕದಲ್ಲಿ ನಕ್ಸಲೈಟ್ ಚಳವಳಿಯ ಸಮಯದಲ್ಲಿ ಬಂಗಾಳದಲ್ಲಿ ಎನ್ಕೌಂಟರ್ ಸಂಸ್ಕೃತಿ ಹುಟ್ಟಿಕೊಂಡಿತು. 1970 ರಲ್ಲಿ ಬಾರಾಸಾತ್ನಲ್ಲಿ 11 ಯುವಕರನ್ನು ಮತ್ತು 1971 ರಲ್ಲಿ ಬರಾನಗರದಲ್ಲಿ 100 ಕ್ಕೂ ಹೆಚ್ಚು ಜನರನ್ನು ಎನ್ಕೌಂಟರ್ ಹೆಸರಿನಲ್ಲಿ ಕೊಲ್ಲಲಾಯಿತು. ೧l1977 ರಲ್ಲಿ ಅಧಿಕಾರಕ್ಕೆ ಬಂದ ಸಿಪಿಐ(ಎಂ) ಸರ್ಕಾರವು ಎನ್ಕೌಂಟರ್ ಬದಲಿಗೆ ಕಸ್ಟಡಿ ಸಾವುಗಳು ಮತ್ತು ಜೈಲು ಹಿಂಸೆಗಳಂತಹ ಸೂಕ್ಷ್ಮ ದಮನಕಾರಿ ಹಾದಿ ತುಳಿಯಿತು (ಉದಾ: ಮರಿಚ್ಝಾಂಪಿ, ನಂದಿಗ್ರಾಮ).
ಜಮ್ಮು ಮತ್ತು ಕಾಶ್ಮೀರ: AFSPA (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಯಡಿ ಸೇನೆ ಮತ್ತು ಅರೆಸೈನಿಕ ಪಡೆಗಳಿಗೆ ಯಾವುದೇ ತನಿಖೆಯಿಲ್ಲದೆ ಕೊಲ್ಲುವ ಅಪರಿಮಿತ ಅಧಿಕಾರ ಸಿಕ್ಕಿದೆ. ಜುಲೈ 2020 ರ ಶೋಪಿಯಾನ್ ಎನ್ಕೌಂಟರ್ನಲ್ಲಿ ಹಣ್ಣಿನ ತೋಟದ ಮೂವರು ಸಾಮಾನ್ಯ ಕಾರ್ಮಿಕರನ್ನು ಕೊಂದು “ಭಯೋತ್ಪಾದಕರು” ಎಂದು ಬಿಂಬಿಸಲಾಗಿತ್ತು, ಆದರೆ ನಂತರದ ತನಿಖೆಯಲ್ಲಿ ಸೈನಿಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು ಸಾಬೀತಾಯಿತು.
ಮಣಿಪುರ: 2016 ರಲ್ಲಿ, ಸುಪ್ರೀಂ ಕೋರ್ಟ್ ಮಣಿಪುರದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ 1,500 ಕ್ಕೂ ಹೆಚ್ಚು ನಕಲಿ ಎನ್ಕೌಂಟರ್ಗಳ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಿತು. ಸಂಕಷ್ಟದ ಪ್ರದೇಶಗಳಲ್ಲೂ ಪಡೆಗಳು “ಅತಿಯಾದ ಅಥವಾ ಸೇಡಿನ ಬಲ” ಬಳಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಉತ್ತರ ಪ್ರದೇಶ: ಬಿಜೆಪಿ ಆಡಳಿತದಲ್ಲಿ ಯುಪಿಯಲ್ಲಿ ಎನ್ಕೌಂಟರ್ಗಳು ಭಾರಿ ಪ್ರಮಾಣದಲ್ಲಿ ಹೆಚ್ಚಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 9 ವರ್ಷಗಳಲ್ಲಿ 17,000 ಕ್ಕೂ ಹೆಚ್ಚು ಪೊಲೀಸ್ ಕಾರ್ಯಾಚರಣೆಗಳಲ್ಲಿ 289 ಅಪರಾಧಿಗಳು ಸಾಯಿಸಲ್ಪಟ್ಟಿದ್ದಾರೆ ಮತ್ತು 10,000 ಕ್ಕೂ ಹೆಚ್ಚು ಜನರು ಕಾಲಿಗೆ ಗುಂಡೇಟು ತಿಂದು ಗಾಯಗೊಂಡಿದ್ದಾರೆ. ವಿಕಾಸ್ ದುಬೆಯಂತಹ ಗ್ಯಾಂಗ್ಸ್ಟರ್ಗಳನ್ನು ಎನ್ಕೌಂಟರ್ ಮಾಡಿದ್ದರ ಹಿಂದಿನ ನಿಜವಾದ ಉದ್ದೇಶ, ಅವರೊಂದಿಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳ ಮತ್ತು ಪೊಲೀಸ್ ಅಧಿಕಾರಿಗಳ ಮುಖವಾಡ ಕಳಚದಂತೆ ತಡೆಯುವುದಾಗಿತ್ತು.
ಗುಜರಾತ್, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳು: 2005 ರ ಗುಜರಾತಿನ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಮತ್ತು ಮಹಾರಾಷ್ಟ್ರದ ‘ ಎನ್ಕೌಂಟರ್ ಸ್ಪೆಷಲಿಸ್ಟ್’ ಸಂಸ್ಕೃತಿಗಳು ರಾಜಕಾರಣಿ-ಅಪರಾಧಿಗಳ ದುಷ್ಟಕೂಟಕ್ಕೆ ಉದಾಹರಣೆಗಳಾಗಿವೆ. ಅಸ್ಸಾಂ ಮತ್ತು ಛತ್ತೀಸಘಢದಲ್ಲೂ ಸಹ ಇದೇ ಮಾದರಿಯ ಆಡಳಿತಾತ್ಮಕ ಹಿಂಸೆ ನಡೆಯುತ್ತಿದೆ.
ಎನ್ಕೌಂಟರ್ಗಳಿಗೆ ಬಲಿಯಾದ ಅಮಾಯಕರು
ಎನ್ಡಿಟಿವಿಯ ಹಿರಿಯ ವರದಿಗಾರರಾಗಿದ್ದ ಕಿಷಲೆ ಭಟ್ಟಾಚಾರ್ಜಿ ಬರೆದಿರುವ ‘ಬ್ಲಡ್ ಆನ್ ಮೈ ಹಾಂಡ್ಸ್’ (Blood On My Hands - Kishalay Bhattacharjee , Harper Collins, India 2015) ಕೃತಿಯಲ್ಲಿ ಹೇಗೆ ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕುವ ಹೆಸರಿನಲ್ಲಿ ಅಮಾಯಕರನ್ನು ಹುಸಿ ಎನ್ಕೌಂಟರ್ ಮೂಲಕ ಕೊಲ್ಲಲಾಯಿತು ಎಂಬುದನ್ನು ಘಟನೆಗಳ ಜೊತೆಗೆ ವಿವರಿಸಲಾಗಿದೆ. ಇತ್ತೀಚೆಗೆ ನಿಷೇಧ ಗೊಂಡಿರುವ ಪಂಜಾಬಿ ಸಿನಿಮಾ ‘ಸಟ್ಲಜ್’ ಕೂಡ ಪಂಜಾಬಿನಲ್ಲಿ 1980ರ ದಶಕದಲ್ಲಿ ಪ್ರತ್ಯೇಕತಾವಾದಿ ಚಳವಳಿ ತೀವ್ರವಾಗಿದ್ದ ಸಮಯದಲ್ಲಿ ಪೊಲೀಸರು ನಡೆಸಿದ ಕೊಲೆಗಳ ತನಿಖೆ ನಡೆಸಿದ ಮಾನವ ಹಕ್ಕು ಹೋರಾಟಗಾರನ ಕುರಿತಾಗಿದೆ. ಮೇಲಿನ ಎರಡು ಕೃತಿಗಳು ತೋರಿಸಿರುವುದು ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ಸದಸ್ಯರು ತಮ್ಮ ಬಡ್ತಿಗಾಗಿ, ಸೇವಾ ದಕ್ಷತೆಯನ್ನು ಮೆರೆಸಲು ಹೇಗೆ ಎನ್ಕೌಂಟರ್ಗಳನ್ನು ದಾಳವಾಗಿ ಬಳಸಿಕೊಂಡರು ಎಂಬುದನ್ನು.
ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ
ಎನ್ಕೌಂಟರ್ ಕೊಲೆ ಎನ್ನುವುದು ಭಾರತೀಯ ಸಂವಿಧಾನದ ವಿಧಿ 21 ಒದಗಿಸಿರುವ ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ನೇರ ಉಲ್ಲಂಘನೆಯಾಗಿದೆ. ಇದು ಆರೋಪಿಯ ಕಾನೂನು ಪ್ರಾತಿನಿಧ್ಯ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳುತ್ತದೆ.
ಸುಪ್ರೀಂ ಕೋರ್ಟ್ ನಕಲಿ ಎನ್ಕೌಂಟರ್ಗಳನ್ನು “ಅಪರೂಪದಲ್ಲಿ ಅಪರೂಪದ” ಕೊಲೆ ಪ್ರಕರಣಗಳೆಂದು ಪರಿಗಣಿಸಿದೆ ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬಹುದು ಎಂದಿದೆ. ‘PUCL v/s State of Maharashtra (2014)’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 16 ಕಡ್ಡಾಯ ಮಾರ್ಗಸೂಚಿಗಳನ್ನು ಹೊರಡಿಸಿದೆ:
1. ಪ್ರತಿಯೊಂದು ಪೊಲೀಸ್ ಫೈರಿಂಗ್ ಘಟನೆಯನ್ನು ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆಗೊಳಪಡಿಸಬೇಕು.
2. ಮೂರು ತಿಂಗಳೊಳಗೆ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣಗೊಳ್ಳಬೇಕು.
3. 24 ಗಂಟೆಗಳ ಒಳಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ವರದಿ ಸಲ್ಲಿಸಬೇಕು.
ಆದಾಗ್ಯೂ, ಪೊಲೀಸರು ಎನ್ಕೌಂಟರ್ಗಳಲ್ಲಿ ಕಾನೂನಿನ ಲೋಪದೋಷಗಳನ್ನು ಬಳಸಿ ಈ ಮಾರ್ಗಸೂಚಿಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿದ್ದಾರೆ.
ವೋಹ್ರಾ ಕಮಿಟಿ ವರದಿ ಮತ್ತು ರಾಜಕೀಯ-ಅಪರಾಧ ನಂಟು
1993 ರ ಎನ್. ಎನ್. ವೋಹ್ರಾ ಕಮಿಟಿ ವರದಿಯು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಶಾಹಿಗಳ ರಕ್ಷಣೆಯಲ್ಲಿ ಬೆಳೆಯುವ ಅಪರಾಧ ಸಿಂಡಿಕೇಟ್ಗಳು ದೇಶದಲ್ಲಿ ಸಮನಾಂತರ ಸರ್ಕಾರವನ್ನು ನಡೆಸುತ್ತಿವೆ ಎಂದು ಎಚ್ಚರಿಸಿತ್ತು. ಈ ರಾಜಕೀಯ-ಅಪರಾಧಿ ನಂಟನ್ನು ರಕ್ಷಿಸಲು ಮತ್ತು ಸಾರ್ವಜನಿಕರ ಗಮನವನ್ನು ನಿಜವಾದ ಸಮಸ್ಯೆಯಿಂದ ಬೇರೆಡೆಗೆ ಸೆಳೆಯಲು ಎನ್ಕೌಂಟರ್ಗಳನ್ನು ನ್ಯಾಯಾಲಯಗಳಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ.
ನಾಗರಿಕ ಸಮಾಜದ ಪಾತ್ರ ಮತ್ತು ಮುಂದಿನ ಹಾದಿ
ನ್ಯಾಯಾಂಗ ವ್ಯವಸ್ಥೆಯ ವಿಳಂಬದಿಂದ ಬೇಸತ್ತ ಸಾರ್ವಜನಿಕರು ಎನ್ಕೌಂಟರ್ಗಳನ್ನು ಬೆಂಬಲಿಸುವುದು ಅಪಾಯಕಾರಿ. ಪ್ರಭುತ್ವದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಹೋರಾಟಗಾರರು ಅಥವಾ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಅಧಿಕಾರದಲ್ಲಿರುವ ಸರ್ಕಾರಗಳೇ ಎನ್ಕೌಂಟರ್ಗಳಲ್ಲಿ ಸಂಹರಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಪ್ರಭುತ್ವವೇ ಕಾನೂನನ್ನು ಕೈಗೆತ್ತಿಕೊಂಡಾಗ ಅದು ತಾನು ವಿರೋಧಿಸುವ, ಶಿಕ್ಷೆ ವಿಧಿಸುವ ಗ್ಯಾಂಗ್ಸ್ಟರ್ಗಳಂತೆಯೇ ಬದಲಾಗುತ್ತದೆ.
ಈ ಭೀಕರ ಎನ್ಕೌಂಟರ್ ಸಂಸ್ಕೃತಿಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ, ನ್ಯಾಯಾಂಗ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುತ್ತಿರುವ ಬಂಡವಾಳಶಾಹಿ ಸರ್ಕಾರದ ದಬ್ಬಾಳಿಕೆಯನ್ನು ತೋರಿಸುತ್ತದೆ. “ತಕ್ಷಣದ ನ್ಯಾಯ”ದ ಆಕರ್ಷಣೆಗೆ ಒಳಗಾಗದೆ, ನಾಗರಿಕ ಸಮಾಜ, ಮಾನವ ಹಕ್ಕುಗಳ ಸಂಘಟನೆಗಳು, ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ಮಾಧ್ಯಮಗಳು ಒಗ್ಗೂಡಿ ಸೂಕ್ತ ನ್ಯಾಯಾಂಗ ಪ್ರಕ್ರಿಯೆಗೆ ಆಗ್ರಹಿಸಬೇಕು. ದೇಶಾದ್ಯಂತ ಸಂಘಟಿತ ಜನಸಂಗ್ರಾಮ ಮತ್ತು ಜಾಗೃತ ಹೋರಾಟದ ಮೂಲಕ ಮಾತ್ರವೇ ಈ ಕಾನೂನುಬಾಹಿರ ಎನ್ಕೌಂಟರ್ ಕೊಲೆಗಳನ್ನು ತಡೆಯಲು ಸಾಧ್ಯ.
