ಬಂಡವಾಳವಾದದ ವಿನಾಶಕಾರಿ ನಡೆ

ಸಾಮಾನ್ಯವಾಗಿ ಇಂದಿನ ವಿದ್ಯಾರ್ಥಿ-ಯುವಜನರನ್ನು, ಅದರಲ್ಲೂ ಜೆನ್ ಝೀಗಳನ್ನು ಕೆಲ ವಯಸ್ಸಾದವರು, ‘ನಿರುಪಯೋಗಿಗಳು, ಸಾಮಾಜಿಕ ಕಳಕಳಿ ಇಲ್ಲದವರು, ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯುವವರು, ಗಾಂಭೀರ್ಯತೆಯ ಗಂಧಗಾಳಿ ಇಲ್ಲದವರು’ ಎಂದು ಮೂದಲಿಸುವುದುಂಟು. ಆದರೆ, ಈಗ ಇದ್ದಕ್ಕಿದ್ದಂತೆ ಈ ಸಂಕಥನ ಬದಲಾಗಿದೆ, ಇದು ಹೇಗಾಯಿತು? ಜೆನ್ ಝೀಗಳನ್ನು ದೂರುವವರಿಗೆ ಕೆಲ ಪ್ರಶ್ನೆಗಳನ್ನು ಕೇಳಬೇಕು: ‘ನಮ್ಮ ಯುವ ಜನಾಂಗವು ಎಂದೆಂದಿಗೂ ನೀವಂದುಕೊಂಡಿದ್ದಂತೆಯೇ ಇತ್ತೇ? ಭಗತ್‌ಸಿಂಗ್, ಆಜಾದ್, ಅಶ್ಫಾಖುಲ್ಲಾ ಖಾನ್, ಬಾಗಾ ಜತಿನ್, ಮಾಸ್ಟರ್ ದಾ, ಪ್ರೀತಿಲತಾ ವದ್ದೇದಾರ್, ಕಲ್ಪನಾ ದತ್ತಾ, ನೇತಾಜಿ ಮುಂತಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ಆಕಾಶದಿಂದ ಉದುರಿದರೇ? ಅವರೂ ಸಹ ಅವರ ಕಾಲಘಟ್ಟದಲ್ಲಿ ಯುವಜನರೇ ಆಗಿದ್ದರಲ್ಲವೇ? ಅವರು ಹುಟ್ಟಿದ, ನ್ಯಾಯಕ್ಕಾಗಿ ಹೋರಾಡಿದ ನಾಡು ಇದೇ ಅಲ್ಲವೇ? ಇಂದಿನ ಯುವ ಜನಾಂಗ ಈ ಇತಿಹಾಸವನ್ನು ಮರೆತಿದೆಯೇ? ಅವರನ್ನು ಆ ಮಹಾಮರೆವಿಗೆ ತಳ್ಳಿದ್ದು ಯಾರು?’ ಎಂದು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಧಿಕಾರಕ್ಕೆ ಬಂದ ಬಂಡವಾಳಶಾಹಿ ವರ್ಗವು ತಮ್ಮ ಕೈಗೊಂಬೆಗಳಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ದೇಶದಲ್ಲಿ ತಮ್ಮ ಹಿತಾಸಕ್ತಿಗೆ ಅನುಗುಣವಾದ ನೀತಿಗಳನ್ನು, ಕಾನೂನುಗಳನ್ನು ರಚಿಸಿಕೊಂಡರು. ಆದರೂ ಸಹ, ಆ ದಿನಗಳಲ್ಲಿ, ವಿಶ್ವದಲ್ಲಿ ಸಮಾಜವಾದಿ ಬಣವು, ಅದರಲ್ಲೂ ಮೂಖ್ಯವಾಗಿ ಸೋವಿಯತ್ ಒಕ್ಕೂಟವು ಅಸ್ತಿತ್ವದಲ್ಲಿದ್ದ ಕಾರಣ, ಬಂಡವಾಳಶಾಹಿಗಳಿಗೆ ಕೆಲವೊಂದು ಜನಪರ ಕಾನೂನುಗಳನ್ನು, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಅತ್ಯವಶ್ಯಕವಾಗಿತ್ತು; ಹಾಗಾಗಿ, ಸಾರ್ವಜನಿಕ ಉದ್ದಿಮೆಗಳು ತಲೆ ಎತ್ತಿದವು, ಅಲ್ಪಸ್ವಲ್ಪ ಉದ್ಯೋಗಾವಕಾಶಗಳು ಸೃಷ್ಟಿಯಾದವು, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸೇವೆ ಕೆಲಮಟ್ಟಿಗೆ ಲಭ್ಯವಿದ್ದವು. ಆದರೆ, ಕಾಲಕ್ರಮೇಣ ಬಂಡವಾಳಶಾಹಿ ವ್ಯವಸ್ಥೆಯ ನಿಯಮದ ಪ್ರಕಾರವೇ ಖಾಸಗೀಕರಣ ಪ್ರಕ್ರಿಯೆಯು ನಡೆಯುತ್ತಾ ಬಂತು; ನಂತರದ ದಶಕಗಳಲ್ಲಿ ಮಾರುಕಟ್ಟೆಯ ನಿರಂತರ ಶೋಷಣೆಯು ಮುಂದುವರೆಯಿತು. ಜನರ ಖರೀದಿಸುವ ಶಕ್ತಿಯು ಕುಸಿಯಿತು, ಮಾರುಕಟ್ಟೆ ಸಂಕುಚಿತವಾಯಿತು. ಬಂಡವಾಳಶಾಹಿ ವ್ಯವಸ್ಥೆಯು ತೀವ್ರ ಬಿಕ್ಕಟ್ಟಿಗೆ ಒಳಗಾಗುತ್ತಾ ಸಾಗಿತು. ಆಗ, ತಮಗೆ ಸಾಂಪ್ರದಾಯಿಕವೆನಿಸಿದ್ದ ಉತ್ಪಾದಕ ಕ್ಷೇತ್ರದ ಉದ್ದಿಮೆಗಳಲ್ಲದೆ, ಇತರೆಡೆ ಬಂಡವಾಳಶಾಹಿವರ್ಗದ ಕಾಕದೃಷ್ಟಿ ಬಿತ್ತು. ಹಾಗಾಗಿಯೇ ಇಡೀ ವಿಶ್ವವನ್ನೇ ಮಾರುಕಟ್ಟೆಯಾಗಿ ತೆರೆದಿಟ್ಟುಕೊಳ್ಳಲು, ದೇಶದಲ್ಲಿದ್ದ ಮುಕ್ತ ವ್ಯಾಪಾರಕ್ಕಿದ್ದ ನಿರ್ಬಂಧಗಳನ್ನೆಲ್ಲಾ ತೆಗೆದುಹಾಕಬೇಕು, ಶಿಕ್ಷಣ-ಆರೋಗ್ಯಗಳಂತಹ ಸೇವಾವಲಯಕ್ಕೂ ಲಗ್ಗೆ ಹಾಕಲು ಅನುಕೂಲವಾಗಬೇಕು ಎಂದು ಸರ್ಕಾರಗಳು ಪಾಲಿಸಿಕೊಂಡು ಬಂದಿರುವ ಜಾಗತೀಕರಣ-ಉದಾರೀಕರಣ-ಖಾಸಗೀಕರಣ ನೀತಿಗಳು ಜಾರಿಯಾದವು. ಕಳೆದ ಶತಮಾನದ 90ರ ದಶಕದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಜಾಗತೀಕರಣ ನೀತಿಯನ್ನು ಜಾರಿಗೆ ತಂದ ಬಳಿಕ, ಬಿಜೆಪಿಯನ್ನೂ ಒಳಗೊಂಡಂತೆ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳೂ ಸಹ ಅವನ್ನು ಚೆನ್ನಾಗಿಯೇ ಮುಂದುವರೆಸಿಕೊಂಡು ಹೋದವು; ಸಂಪೂರ್ಣ ಖಾಸಗೀಕರಣದೊಂದಿಗೆ, ಸಾರ್ವಜನಿಕ ಸಂಸ್ಥೆಗಳನ್ನು, ಉದ್ದಿಮೆಗಳನ್ನು ದೇಶವಿದೇಶಗಳ ಏಕಸ್ವಾಮ್ಯಾಧಿಪತಿಗಳಿಗೆ ಪುಡಿಗಾಸಿಗೆ ಮಾರಾಟ ಮಾಡುವುದು ಸುಲಭ ಸಾಧ್ಯವಾಯಿತು. ಕಲ್ಯಾಣ ಯೋಜನೆಗಳು ಮಾಯವಾಗುತ್ತಾ ಸಾಗಿದವು. ಹೀಗೆ ಇಂದು, ಒಂದೆಡೆ, ಗಗನಕ್ಕೇರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳಿಂದ ಜನರು ತತ್ತರಿಸುತ್ತ್ತಿದ್ದರೆ, ಇನ್ನೊಂದೆಡೆ, ಯುವಜನತೆ ಶಿಕ್ಷಣ-ಉದ್ಯೋಗಗಳಿಂದ ವಂಚಿತರಾಗಿ, ಅವರ ಭವಿಷ್ಯವನ್ನು ಕರಾಳ ಕತ್ತಲೆಯು ಆವರಿಸಿದೆ. ಇಂಥಾ ಪರಿಸ್ಥಿತಿಯಲ್ಲಿ ಅವರು ಸಿಡಿದೇಳದಂತೆ ಮಾಡಲು, ಅವರ ನೈತಿಕ ಬೆನ್ನೆಲುಬನ್ನು ಮುರಿಯಲು ಆಳ್ವಿಕರು ಹೂಡಿರುವ ಹುನ್ನಾರವೆಂದರೆ-ಸಮೂಹ ಮಾಧ್ಯಮಗಳಲ್ಲಿ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆ-ಹಿಂಸೆಗಳ ಪ್ರಸಾರ ಹಾಗೂ ಮದ್ಯ ಮತ್ತು ಮಾದಕ ವಸ್ತುಗಳ ಸುಲಭ ಲಭ್ಯತೆ. ಅಶ್ಲೀಲತೆಯ ಸತತ ವೀಕ್ಷಣೆ ಯುವಜನರಲ್ಲಿ ಮೂಲಪ್ರವೃತ್ತಿಗಳನ್ನು ಬಡಿದೆಬ್ಬಿಸಿದರೆ, ಹಿಂಸೆಯ ವೀಕ್ಷಣೆ ಅವರಲ್ಲಿರುವ ಸೂಕ್ಷ್ಮಸಂವೇದನೆಯನ್ನು ನಾಶ ಮಾಡುತ್ತದೆ; ಮತ್ತೆ, ಮದ್ಯ ಹಾಗೂ ಮಾದಕವಸ್ತುಗಳು ಅವರಲ್ಲಿನ ವಿವೇಚನಾ ಶಕ್ತಿಯನ್ನೇ ನಿರ್ನಾಮ ಮಾಡುತ್ತವೆ. ಹೀಗೆ ನಿಸ್ಸತ್ವರಾಗುವ ಯುವಜನರನ್ನು ತಮಗೆ ಬೇಕಾದಂತೆ ತಮ್ಮ ಪಕ್ಷಗಳ ಕಾಲಾಳುಗಳಂತೆ ವಿವಿಧ ಸಮಾಜವಿರೋಧಿ ಕಾರ್ಯಗಳಲ್ಲಿ ಬಳಸಿಕೊಳ್ಳುವ ಜೊತೆಗೆ, ಅವರನ್ನು ಸಾಮಾಜಿಕ ಬದ್ಧತೆಯಿಂದ ವಿಮುಖರಾಗಿಸುವುದೇ ಇಂದು ಆಳ್ವಿಕರ ಷಡ್ಯಂತ್ರವಾಗಿದೆ. ಇದು, ಸಾಮಾಜಿಕ-ಸಾಂಸ್ಕೃತಿಕ ಅವನತಿಗೆ ಎಡೆ ಮಾಡಿಕೊಡುತ್ತಾ, ಹಸುಳೆಗಳಿಂದ ಹಿಡಿದು, ವೃದ್ಧೆಯರ ಮೇಲೆ ಜರುಗುವ ದೌರ್ಜನ್ಯ, ಅತ್ಯಾಚಾರ, ಕೊಲೆಗಳಲ್ಲಿ ಪರ್ಯಾವಸಾನಗೊಳ್ಳುತ್ತಿದೆ; ಕುಟುಂಬಗಳು ಛಿದ್ರಛಿದ್ರವಾಗುತ್ತಿವೆ, ಮಾನವ ಮೌಲ್ಯಗಳು ನಶಿಸಿ ಹೋಗುತ್ತಿವೆ. ಅಷ್ಟಲ್ಲದೆ, ಕೋಮುವಾದ- ಜಾತಿವಾದಗಳನ್ನು ಸಹ ಹುಟ್ಟುಹಾಕಿ ಜನೈಕ್ಯತೆಯನ್ನು ಮುರಿಯಲು ಆಳ್ವಿಕರು ‘ಕಟಿಬದ್ಧರಾಗಿದ್ದಾರೆ’. ಇದರಿಂದಾಗಿ ರೈತರು-ಕಾರ್ಮಿಕರು, ಇತರ ಜನ ಸಾಮಾನ್ಯರ ಮೇಲಿನ ಶೋಷಣೆ-ದಮನ ಹೆಚ್ಚುತ್ತಾ ಹೋಗುತ್ತಿದೆ. ಜನಮಾನಸದಿಂದ ನಮ್ಮ ಕ್ರಾಂತಿಕಾರಿಗಳ, ನವೋದಯದ ಹರಿಕಾರರ ಸ್ಮರಣೆಯನ್ನು ಕಿತ್ತೊಗೆಯಲಾಗಿದೆ. ‘ನಿನ್ನನ್ನು ನೀನು ನೋಡಿಕೋ ಸಾಕು, ಸಮಾಜದ ಉಸಾಬರಿ ಬೇಡ’ ಎಂಬ ಸ್ವಾರ್ಥ-ಸ್ವಕೇಂದ್ರೀಯತೆಗೆ ಯುವಜನರನ್ನು ಬಲಿಯಾಗಿಸಲಾಗಿದೆ.
ಇವೆಲ್ಲವೂ ಸಾಲದೆಂಬಂತೆ, ಆಳುವ ಬಂಡವಾಳಶಾಹಿ ವರ್ಗ ತನ್ನ ಉತ್ತುಂಗ ಕಾಲದಲ್ಲಿ ತಾನು ಎತ್ತಿ ಹಿಡಿದಿದ್ದ ಜನತಾಂತ್ರಿಕ ಮೌಲ್ಯಗಳನ್ನು, ಈಗ ತನ್ನ ಅವಸಾನದ ಅವಸ್ಥೆಯಲ್ಲಿ ಹೊಸಕಿಹಾಕುತ್ತಿದೆ. ಅದರ ವಿಶ್ವಾಸಾರ್ಹ ಭಂಟನಾದ ಕೇಂದ್ರ ಬಿಜೆಪಿ ಸರ್ಕಾರ, ಒಂದಾದರೊಂದರಂತೆ, ದಮನಕಾರಿ ನೀತಿಗಳನ್ನು ಜಾರಿಗೊಳಿಸಿ ಜನರ ಪ್ರತಿಭಟನೆಯ ಹಕ್ಕನ್ನೇ ಹೊಸಕಿ ಹಾಕುತ್ತಿದೆ. ಯುಎಪಿಎ, ಎನ್‌ಎಸ್‌ಎ ಕಾಯ್ದೆಗಳ ಮೂಲಕ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು, ಟೀಕೆ ಮಾಡಿದವರನ್ನು ಯಾವುದೇ ವಿಚಾರಣೆ ಇಲ್ಲದೆ ವರ್ಷಗಟ್ಟಳೆ ಜೈಲಿನಲ್ಲಿ ಕೊಳೆ ಹಾಕುತ್ತಿದೆ; ತನ್ನ ವಿರುದ್ಧ ಸೆಟೆದು ನಿಂತವರ ಮೇಲೆ ಐಟಿ, ಇಡಿ ದಾಳಿಯ ಪೆಡಂಭೂತವನ್ನು ಛೂ ಬಿಡುತ್ತಿದೆ. ಈ ಹಿಂದೆ ಎನ್‌ಆರ್‌ಸಿ-ಸಿಎಎ ಮುಂತಾದ ಕಾನೂನುಗಳ ಮೂಲಕ ಅಲ್ಪಸಂಖ್ಯಾತ ಮುಸ್ಲಿಮರನ್ನು ದೇಶದ ನಾಗರಿಕರೇ ಅಲ್ಲ ಎಂದು ಹಣೆಪಟ್ಟಿ ನೀಡಿ, ಕಿರುಕುಳ ನೀಡಿ ರಾಜಕೀಯ ಲಾಭ ಮಾಡಿಕೊಳ್ಳಬೇಕೆನ್ನುವ ತನ್ನ ಪ್ರಯತ್ನವು ವಿಫಲವಾದ ಬಳಿಕ ಇದೀಗ ತನ್ನ ಕೈಗೊಂಬೆ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು, ಎಸ್‌ಐಆರ್ ಮೂಲಕ, ಅವರ ಪೌರತ್ವವನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ.

ಜೆನ್ ಝೀಗಳ ಆಕ್ರೋಶ!

ಆದರೆ, ‘ಕಾರ್ಮೋಡಗಳ ಮಧ್ಯೆ ಬೆಳ್ಳಿಕಿರಣ’ ಎಂಬಂತೆ, ವಿವಿಧ ಸ್ತರಗಳ ಜನತೆ ಪ್ರತಿಭಟನೆಯ ಕಣಕ್ಕೆ ಧುಮುಕುತ್ತಿದ್ದಾರೆ. ಕೃಷಿಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ದೆಹಲಿಯಲ್ಲಿ ನಡೆದ 378 ದಿನಗಳ ಅಭೂತಪೂರ್ವ ರೈತರ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಬಲಿಯಾದರು. ಆದರೂ, ಅದು ಅಂತಿಮವಾಗಿ ಯಶಸ್ಸು ಕಂಡಿತು. ನೋಯ್ಡಾದಲ್ಲಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆದ ಕಾರ್ಮಿಕರ ಹೋರಾಟ, ನಿರುದ್ಯೋಗಿ ಯುವಜನತೆಯ ದಿಢೀರ್ ಪ್ರತಿಭಟನೆಗಳು, ಇಡೀ ದೇಶವನ್ನೇ ಆವರಿಸಿರುವ ಅತ್ಯಾಚಾರ-ಹತ್ಯೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ದೇಶದಾದ್ಯಂತ ಅಕ್ರಮ ಭೂ ಸ್ವಾಧಿನಗಳ ವಿರುದ್ಧದ ಹೋರಾಟಗಳು, ನಮ್ಮ ರಾಜ್ಯದಲ್ಲಿ ಸತತವಾಗಿ ನಡೆಯುತ್ತಿರುವ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಜನಾಂದೋಲನ - ಹೀಗೆ, ಸರ್ಕಾರದ ನಡೆಗಳ ವಿರುದ್ಧ ಜನರಲ್ಲಿ ಮಡುಗಟ್ಟಿರುವ ಆಕ್ರೋಶವು ನಿರಂತರವಾಗಿ ಜನ ಪ್ರತಿಭಟನೆಗಳ ಮೂಲಕ ಆಸ್ಫೋಟಗೊಳ್ಳುತ್ತಲೇ ಇವೆ. ಆಳ್ವಿಕರ ದಮನಕಾರಿ ಕ್ರಮಗಳು ಹೆಚ್ಚಾಗುತ್ತಿದ್ದಂತೆ, ಪ್ರತಿಭಟನೆಯ ಕಾವೂ ಏರುತ್ತಿದೆ. ಈ ಹಿನ್ನೆಲೆಯಲ್ಲಿಯೇ, ಜೆನ್ ಝೀ ಹೋರಾಟವನ್ನು ನೋಡಬೇಕು. ಸಾಮಾನ್ಯವಾಗಿ ತಮ್ಮ ಪಾಡಿಗೆ ತಾವಿರುವ, ರಾಜಕೀಯವಾಗಿ ಅಜ್ಞಾನದಲ್ಲಿರುವ ಇಂದಿನ ಯುವ ಜನತೆ, ಇದೀಗ ಆಳ್ವಿಕರ ಕುತಂತ್ರಗಳನ್ನೆಲ್ಲವನ್ನೂ ಮೀರಿ ಸಿಡಿದೆದ್ದಿದ್ದಾರೆ, ತಮ್ಮನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ, ತಮ್ಮನ್ನು ದಾಳವಾಗಿ ಬಳಸುವ ಆಳುವವರ ಕುತಂತ್ರಗಳನ್ನು ಅರಿಯಲು ಆರಂಭಿಸಿದ್ದಾರೆ, ತಮಗೆ ನ್ಯಾಯಬದ್ಧವಾಗಿ ದಕ್ಕಬೇಕಾಗಿರುವ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ನಿರುದ್ಯೋಗಿಗಳನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ‘ಜಿರಳೆ’ಗಳು ಎಂದು ಕರೆದದ್ದು, ‘ನೀಟ್’ ಪ್ರವೇಶ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರ, ಅವರಲ್ಲಿ ಹುದುಗಿದ್ದ ಸಂಕಟ-ಆಕ್ರೋಶಗಳನ್ನು ಹೊರಹಾಕಲು ವೇದಿಕೆಯನ್ನು ಸೃಷ್ಟಿಸಿಕೊಟ್ಟವಷ್ಟೇ. ಹತ್ತು ಹಲವು ವರ್ಷಗಳಿಂದ ಅನ್ಯಾಯ-ದಮನ-ವಂಚನೆ, ಇವೆಲ್ಲವನ್ನೂ ಸಹಿಸಿಕೊಂಡು ಕೊನೆಗೊಮ್ಮೆ ಅವರ ಸಂಕಟ ಆಸ್ಫೋಟದ ರೂಪ ಪಡೆದುಕೊಂಡಿದೆ; ‘ಮಾಡು ಇಲ್ಲವೇ ಮಡಿ’ ಎಂದವರು ಹೋರಾಟದ ಕಣಕ್ಕೆ ಧುಮುಕಿದ್ದಾರೆ.

ಕಣ್ಮಣಿಯಂತೆ ಕಾಪಾಡಿಕೊಂಡ ಒಗ್ಗಟ್ಟು

ದೆಹಲಿಯ ಜಂತರ್ ಮಂತರ್‌ನಲ್ಲಾಗಲಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಾಗಲಿ ಅಥವಾ ದೇಶಾದ್ಯಂತ ಬೀದಿಗಿಳಿದ ಹೋರಾಟಗಾರರಲ್ಲಿ ಜಾತಿ-ಧರ್ಮ-ಲಿಂಗಭೇದಗಳನ್ನು ಮೀರಿದ ಒಗ್ಗಟ್ಟು ಕಣ್ಣಿಗೆ ರಾಚುವಂತಿತ್ತು. ಎಲ್ಲಿಂದಲೋ ಬಂದವರು, ಹೋರಾಟದ ಕಣದಲ್ಲಿ ಸ್ನೇಹಿತರು, ಆತ್ಮೀಯರು ಆದ ಬಗೆ ಅನನ್ಯ. ಹೋರಾಟಗಾರರಿಗೆ ಎಲ್ಲಾ ರೀತಿಯ ನೆರವು ನೀಡಿದವರು ಸಹ ಯಾರೋ, ಎಲ್ಲಿಯವರೋ, ಯಾವ ಜಾತಿ-ಧರ್ಮದವರೋ? ಅದು ತಲುಪಿದ್ದು ಸಹ ಯಾರಿಗೋ? ದೆಹಲಿಯಲ್ಲಿ, ಯಾರೋ ಬಂದು ಬಯಲಿನ ಧಗೆಯಲ್ಲಿ ಮಲಗಿದವರಿಗೆ ಗಾಳಿ ಹಾಕಿದ್ದು, ಇನ್ಯಾರೋ ಬಂದು ಆರೈಕೆ ಮಾಡಿದ್ದು, ವೈದ್ಯರು ಬಿಜೆಪಿ ಸರ್ಕಾರದ ಬೆದರಿಕೆ ಎದುರಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದು, ಪೊಲೀಸು ಕ್ರೌರ್ಯದ ಬಗ್ಗೆ ಸಂಕಟ ಪಟ್ಟಿದ್ದು - ಇಂತಹ ಬಹಳ ಹೃದಯಸ್ಪರ್ಶಿ ಸಂಗತಿಗಳ ಲೆಕ್ಕವಿಲ್ಲ. ದೆಹಲಿಯ ಹೋರಾಟದ ಕೆಲ ಘಟನೆಗಳನ್ನು ಇಲ್ಲಿ ಉಲ್ಲೇಖಿಸಲೇ ಬೇಕು; ಪೊಲೀಸರು ಲಾಟಿ ಎತ್ತಿದಾಗ, “ಎಷ್ಟು ಹೊಡೆಯುತ್ತೀರೋ, ಹೊಡೆಯಿರಿ ನೋಡೋಣ” ಎಂದು ಎದೆ ಸೆಟೆದು ನಿಂತ ಯುವಕ, ನೀರಿನ ಕ್ಯಾನನ್ ಸಿಡಿಸಿದಾಗ, “ಅಬ್ಬಾ ಸೆಖೆಯಲ್ಲಿ ತಂಪಾದ ನೀರು! ಇನ್ನಷ್ಟು ಹಾಕಿ” ಎಂದು ತಮಾಷೆ ಮಾಡಿದ ಯುವಜನರು, ಹಾಗೆಯೇ, ಪೊಲೀಸರು ಯುವಕರ ಮೇಲೆ ಲಾಟಿ ಬೀಸುವಾಗ, ಯುವತಿಯರು ಅವರನ್ನು ಅಡ್ಡಗಟ್ಟಿ ಕಾಪಾಡಲು ನಿಂತ ಬಗೆ, ಯುವತಿಯರ ರಕ್ಷಣೆಗೆ ಯುವಕರು ಧಾವಿಸಿದ್ದು, ಆಳ್ವಿಕರ ಸತತ ಪ್ರಯತ್ನಗಳ ನಡುವೆಯೂ ನಮ್ಮ ಯುವ ಜನತೆಯಲ್ಲಿನ ನೈತಿಕತೆ ಇನ್ನೂ ಗಟ್ಟಿಯಾಗಿ ಇದೆ ಎಂಬುದಕ್ಕೆ ಜೀವಂತ ಉದಾಹರಣೆಗಳಾಗಿ ದಾಖಲಾಗಿವೆ. ಎಷ್ಟೋ ಮಂದಿ ತಾಯಿ-ತಂದೆಯರು ಈ ಹೋರಾಟಕ್ಕೆ ಕೈಜೋಡಿಸಿದ್ದು ಎಲ್ಲರ ಮನಮುಟ್ಟಿದವು. ನಮ್ಮ ವಿದ್ಯಾರ್ಥಿ ಸಂಘಟನೆ ಎಐಡಿಎಸ್‌ಓ, ಇತರ ಎಡ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎಫ್ ಮತ್ತು ಎಐಎಸ್‌ಎಗಳ ಜೊತೆಯಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಘಟಿಸಿದ್ದ ಪ್ರತಿಭಟನೆಯು ಸ್ಫೂರ್ತಿದಾಯಕ ಪ್ರಘಟನೆಗೆ ಸಾಕ್ಷಿಯಾಯಿತು. ಅಲ್ಲಿ ಹೋರಾಟಗಾರರೆಲ್ಲಾ ಸೇರಿ ದೇಶಭಕ್ತಿ ಗೀತೆ-ಕ್ರಾಂತಿಗೀತೆ ಹಾಡಿದರು, ಕವನ ವಾಚನ ಮಾಡಿದರು, ‘ನಮಗೆ ನ್ಯಾಯ ಬೇಕು, ನ್ಯಾಯ ಕೊಡಿ’, ‘ಭಗತ್ ಸಿಂಗ್, ನೇತಾಜಿ ನಾಡಿನಲ್ಲಿ ಅನ್ಯಾಯ ಸಹಿಸಲ್ಲ’, ‘ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಿ’, ‘ನೀಟ್ ರದ್ದು ಮಾಡಿ, ಎನ್‌ಟಿಎ ರದ್ದು ಮಾಡಿ, ಪ್ರವೇಶ ಪರೀಕ್ಷೆಗಳನ್ನು ರಾಜ್ಯಗಳೇ ನಡೆಸಲಿ’ ಮುಂತಾದ ಘೋಷಣೆಗಳು ಅಲ್ಲಿ ಮೊಳಗಿದವು. ಜೊತೆಗೆ, ದೆಹಲಿಯಲ್ಲಿ ಜುಲೈ 20ರಂದು ಪ್ರತಿಭಟನಾಕಾರರ ಮೇಲೆ ಕೇಂದ್ರ ಸರ್ಕಾರವು ನಡೆಸಿದ ಪೊಲೀಸ್ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಿ, ಅದಕ್ಕೆ ಕಾರಣಕರ್ತರಾದವರಿಗೆ ಉಗ್ರಶಿಕ್ಷೆ ನೀಡಲು ಒತ್ತಾಯಿಸಿದರು. ಎಳೆಯ ಮಕ್ಕಳೊಂದಿಗೆ ಬಂದ ತಾಯಂದಿರು, ‘ನಮಗೆ ಜನತಾಂತ್ರಿಕ, ಧರ್ಮ ನಿರಪೇಕ್ಷ, ವೈಜ್ಞಾನಿಕ ಶಿಕ್ಷಣ ಬೇಕು’ ಎಂಬ ಫಲಕ ಹಿಡಿದರು, ಶಾಲಾ ಮಕ್ಕಳು, ಉದ್ಯಾನವನದ ಮೈದಾನದಲ್ಲಿ ಹಾಸಿದ್ದ ಬಿಳಿಯ ಬಟ್ಟೆಯ ಮೇಲೆ ತಮ್ಮ ಬಲಹಸ್ತದ ಕೆಂಪು ಗುರುತು ಮೂಡಿಸಿ ಬೆಂಬಲ ಸೂಚಿಸಿದರು, ಅಲ್ಲಿಟ್ಟಿದ್ದ ಕಾಗದದ ಹಾಳೆಯ ಮೇಲೆ ಹಸ್ತಾಕ್ಷರ ನೀಡಲು ಬಗ್ಗಿ ಕುಳಿತ ಹಿರಿಯರು ಎಷ್ಟೋ ಮಂದಿ! ಇವೆಲ್ಲವೂ ಪ್ರೇರಣಾದಾಯಕ ಅಂಶಗಳು. ಯುವಜನರ ಈ ಪ್ರತಿಭಟನೆಯಿಂದಾಗಿ ಪ್ರಧಾನಿ ಮಧ್ಯರಾತ್ರಿಯಲ್ಲಿ ಬಂದು ‘ಟೆಲಿಪ್ರಾಮ್ಟರ್ ಬಳಸಿ’ ತಮ್ಮ ಸಂದೇಶವನ್ನು ಓದಬೇಕಾಯಿತು; ಕೊನೆಗೂ ಪ್ರತಿಭಟನೆಗೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕಾಯಿತು. ಸಾಧಿಸುವುದಿನ್ನೂ ಬಹಳಷ್ಟಿದೆ. ಆದರೆ, ಹಠಮಾರಿ ಫ್ಯಾಸೀವಾದಿ ಸರ್ಕಾರವನ್ನು ಮಣಿಸಿದ್ದು ಒಂದು ಮಹಾನ್ ವಿಜಯವೇ ಸರಿ. ಅಲ್ಲದೆ, ಯಾವುದೇ ಎಗ್ಗುಸಿಗ್ಗಿಲ್ಲದೆ ಫ್ಯಾಸೀವಾದಿ ದಾಳಿಗಳನ್ನು ನಡೆಸುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಈ ಪ್ರತಿಭಟನೆಯು ಸ್ಪಷ್ಟವಾಗಿ ಒಂದು ಎಚ್ಚರಿಕೆ ನೀಡಿದೆ.

ಬೇಕು ಹೋರಾಟಕ್ಕೆ ಕ್ರಾಂತಿಕಾರಿ ನಾಯಕತ್ವ

ಈ ಸ್ವಯಂಪ್ರೇರಿತ, ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ತುಂಬು ಹೃದಯದಿಂದ ಮೆಚ್ಚುತ್ತಲೇ, ಎಲ್ಲಾ ಹೋರಾಟಗಾರರನ್ನು ಅಭಿನಂದಿಸುತ್ತಲೇ, ಸ್ಪಷ್ಟವಾದ ಗುರಿ ಹೊಂದಿರುವ, ಸರಿಯಾದ ನೀತಿಯುಳ್ಳ ಕ್ರಾಂತಿಕಾರಿ ನಾಯಕತ್ವವಿಲ್ಲದಿದ್ದರೆ ಈ ಜನ ಹೋರಾಟವೂ ಸಹ, 1970ರ ದಶಕದ ಜೆಪಿ ಚಳುವಳಿಯಂತೆ, 2021ರ ಅಣ್ಣಾ ಹಜಾರೆ ಹೋರಾಟದಂತೆ ಅಥವಾ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ನಡೆದ ಯುವಜನರ ಹೋರಾಟಗಳಂತೆ ಕೆಲವೇ ದಿನಗಳಲ್ಲಿ ತನ್ನ ಉಸಿರನ್ನು ಕಳೆದುಕೊಳ್ಳುತ್ತದೆ; ಬಹಳ ಹುರುಪಿನಿಂದ ಈ ಹೋರಾಟದಲ್ಲಿ ಭಾಗಿಯಾದವರಲ್ಲಿ ಹತಾಶೆ ತುಂಬಿಕೊಳ್ಳುತ್ತದೆ. ಹಾಗಾಗಿ, ಈ ಹೋರಾಟದ ಉದ್ದೇಶವು, ಕೇವಲ ಯಾವುದೋ ಪರೀಕ್ಷೆಯನ್ನು ಕ್ರಮಬದ್ಧವಾಗಿ ನಡೆಸುವುದಲ್ಲ, ಯಾರೋ ತಪ್ಪಿತಸ್ಥರ ರಾಜೀನಾಮೆಯಲ್ಲ ಅಥವಾ ಕೆಲವು ಪಾತಕಿಗಳನ್ನು ಮಾತ್ರ ಶಿಕ್ಷೆಗೆ ಗುರಿಮಾಡುವುದಲ್ಲ. ಇವೆಲ್ಲವೂ ಖಂಡಿತ ಬೇಕು, ಜೊತೆಗೆ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಗಳಿಗೆ ತಡೆ, ಎಲ್ಲರಿಗೂ ಉನ್ನತ ಹಂತದವರೆಗೆ ಉಚಿತ ಶಿಕ್ಷಣ, ಅದಕ್ಕೆ ತಕ್ಕಂಥ ಉದ್ಯೋಗ - ಇವೆಲ್ಲವನ್ನೂ ಖಾತ್ರಿ ಪಡಿಸಲು ಹೋರಾಟಗಾರರು ಆಗ್ರಹಿಸಬೇಕಾಗುತ್ತದೆ. ಮತ್ತೆ, ಇವೆಲ್ಲಾ ಪ್ರಜಾತಾಂತ್ರಿಕ ಹೋರಾಟಗಳ ಅಂತಿಮ ಗುರಿ, ಒಂದು ಶೋಷಣಾಮುಕ್ತ, ಸಮಾನತೆಯ ಸಮಾಜದತ್ತ ಸಾಗುವ ದಾರಿಯಲ್ಲಿ ಸ್ತ್ರೀ-ಪುರುಷರು ಒಗ್ಗೂಡಿ ಮುನ್ನಡೆಯುವುದೇ ಆಗಿರುತ್ತದೆ. ಅದರಲ್ಲಿ ಯುವಜನರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಈ ಜೆನ್ ಝೀ ಪ್ರತಿಭಟನೆ ಇದರ ಮುನ್ನುಡಿಯಾಗಲಿ.