ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸಂದರ್ಭದಲ್ಲಿ, ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿಯವರ ಗ್ರಾನೈಟ್ ಪ್ರತಿಮೆ ಸ್ಥಾಪಿಸುವುದಾಗಿ ಹಾಗೂ ಇದು ದೇಶ ಅವರ ಋಣ ತೀರಿಸುವ ಬಗೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಬಿಜೆಪಿಯ ಗೃಹ ಸಚಿವ ಅಮಿತ್ ಶಾ ಹಾಗೂ ಹಿರಿಯ ನಾಯಕರು ನೇತಾಜಿಯವರ ದೇಶಭಕ್ತಿ, ಧ್ಯೆರ್ಯ ಮತ್ತು ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಆದರೆ, ಈ ಪ್ರಶಂಸೆಯು ಕೇವಲ ಚುನಾವಣಾ ಲಾಭಕ್ಕಾಗಿ ಮಾಡಿದ ನಾಟಕವಾಗಿತ್ತು ಎಂಬುದು, ಅವರ ಸೈದ್ಧಾಂತಿಕ ನಿಲುವು ಮತ್ತು ಕೃತ್ಯಗಳಿಂದ ಸ್ಪಷ್ಟವಾಗುತ್ತದೆ.

ಆದರೀಗ, ಪಶ್ಚಿಮ ಬಂಗಾಳದ ಚುನಾವಣಾ ವಿಜಯದ ಮತ್ತಿನಲ್ಲಿ, ಬಿಜೆಪಿ ನಾಯಕರು ತಮ್ಮ ಮುಖವಾಡ ಕಳಚಿ, ತಮ್ಮ ಮೂಲ ನಿಲುವಿಗೆ ಮರಳಿದ್ದಾರೆ. ಅದೆಂದರೆ, ಆರ್‌ಎಸ್‌ಎಸ್-ಬಿಜೆಪಿ-ಸಂಘ ಪರಿವಾರದಿಂದ ಪ್ರತಿಪಾದಿಸಲ್ಪಟ್ಟ ಹಿಂದೂ ರಾಷ್ಟ್ರದ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಭಾರತದ ಸ್ವಾತಂತ್ರ‍್ಯ ಚಳವಳಿ ಮತ್ತು ಭಾರತೀಯ ರಾಷ್ಟ್ರೀಯತೆಯ ಪರಿಕಲ್ಪನೆಯ ನೇರ ವಿರೋಧ. ಅವರ ಪ್ರಕಾರ, ಭಾರತದ ಸ್ವಾತಂತ್ರ‍್ಯ ಚಳವಳಿ ಮತ್ತು ಅದರ ನಾಯಕತ್ವ, ಎರಡೂ ಪ್ರಗತಿವಿರೋಧಿಗಳಾಗಿದ್ದವು. ಆದ್ದರಿಂದ, ನೇತಾಜಿ ಸುಭಾಷ್ ಕೂಡ ಪ್ರಗತಿವಿರೋಧಿಯಾಗಿದ್ದರು.

ಹೀಗಾಗಿ, ಬಿಜೆಪಿ ಮತ್ತು ಅದರ ಸಹವರ್ತಿಗಳು ನೇತಾಜಿ ಸುಭಾಷ್ ಅವರನ್ನು ತೆಗಳಲು ಯೋಜಿತ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷರು ಸಾರ್ವಜನಿಕ ಸಭೆಯೊಂದರಲ್ಲಿ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಅವರ ಮೇಲೆ ನೇತಾಜಿಯವರ ಫಾರ್ವರ್ಡ್ ಬ್ಲಾಕಿನ ಗೂಂಡಾಗಳು ಕಲ್ಲು ತೂರಿದ್ದರು ಎಂದು ಹೇಳಿದರು. ನೇತಾಜಿಯನ್ನು ಹೀಗೆ ದುರುದ್ದೇಶಪೂರ್ವಕವಾಗಿ ಗುರಿಯಾಗಿಸುವ ಅವರ ನಿಜವಾದ ಉದ್ದೇಶವನ್ನು ಜನರು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಬೀರ್ಭೂಮ್ ಜಿಲ್ಲೆಯಲ್ಲಿ, ನೇತಾಜಿ ಸುಭಾಷ್ ಹೆಸರಿನ ರಸ್ತೆಗೆ ಶ್ಯಾಮ ಪ್ರಸಾದ್ ಮುಖರ್ಜಿ ರಸ್ತೆ ಎಂದು ಮರುನಾಮಕರಣ ಮಾಡಲಾಯಿತು. ಅದನ್ನು ನಮ್ಮ ಪಕ್ಷವು ಸ್ಥಳೀಯ ಜನರೊಂದಿಗೆ ಪ್ರತಿಭಟಿಸಿದಾಗ, ಮರುನಾಮಕರಣವನ್ನು ಕೈಬಿಡಲಾಯಿತು. ರಾಜ್ಯಸಭೆಯ ಬಿಜೆಪಿ ಸಂಸದ ಅನಂತ ಮಹಾರಾಜ್, ನೇತಾಜಿಯವರಿಗೆ ‘ಯುದ್ಧಾಪರಾಧಿ’ ಎಂದು ಕಳಂಕ ಹಚ್ಚುವ ಉದ್ಧಟತನ ತೋರಿದರು. ಇದು ಆಜಾದ್ ಹಿಂದ್ ಫೌಜ್ ಮತ್ತು ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅವರ ಭವ್ಯ ಪಾತ್ರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನವಾಗಿದೆ. ಒಂದು ಸ್ಥಳದಲ್ಲಿ ನೇತಾಜಿಯವರ ಪ್ರತಿಮೆಯನ್ನು ಕೇಸರಿ ಬಟ್ಟೆಯಿಂದ ಸುತ್ತಲಾಗಿದೆ, ಮತ್ತೊಂದೆಡೆ ನೇತಾಜಿಯವರ ಪ್ರತಿಮೆಯನ್ನು ಮಧ್ಯರಾತ್ರಿಯಲ್ಲಿ ಧ್ವಂಸಗೊಳಿಸಲಾಗಿದೆ. ಇತ್ತ, ಬಿಜೆಪಿಯ ಐಟಿ ಸೆಲ್ ಆಕ್ಷೇಪಾರ್ಹ ವ್ಯಂಗ್ಯ ಚಿತ್ರಗಳು ಮತ್ತು ಪೋಸ್ಟ್ ಗಳನ್ನು ಹರಡುತ್ತಿದೆ. ಹಲವು ಕಡೆಗಳಲ್ಲಿ ನೇತಾಜಿಯವರ ಪ್ರತಿಮೆಗಳನ್ನು ಹಾಡುಹಗಲೇ ಒಡೆಯಲಾಗಿದೆ. ಅವರ ದಾಳಿಗಳು ನೇತಾಜಿಯವರ ವಿರುದ್ಧ ಮಾತ್ರ ಸೀಮಿತವಾಗಿಲ್ಲ: ರಾಮಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ, ರವೀಂದ್ರನಾಥ ಟ್ಯಾಗೋರರಂತಹ ನವೋದಯದ ದಿಗ್ಗಜರೂ ಅವರ ವಿಕೃತ ದಾಳಿಗಳಿಂದ ತಪ್ಪಿಸಿಕೊಂಡಿಲ್ಲ.

ನೇತಾಜಿಯವರನ್ನು ಗುರಿಯಾಗಿಸುವ ಕಾರಣವೆಂದರೆ, ಅವರು ಭಾರತೀಯರಿಗೆ ಹೀಗೆಂದು ಎಚ್ಚರಿಕೆ ನೀಡಿದ್ದರು: “ಧಾರ್ಮಿಕ ಅಂಧತೆಯು ಸಾಂಸ್ಕೃತಿಕವಾಗಿ ಹತ್ತಿರವಾಗುವ ದಾರಿಯಲ್ಲಿರುವ ಅತ್ಯಂತ ದೊಡ್ಡ ಮುಳ್ಳಾಗಿದೆ… ಧರ್ಮಾಂಧತೆಗೆ ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಶಿಕ್ಷಣಕ್ಕಿಂತ ಉತ್ತಮವಾದ ಪರಿಹಾರ ಬೇರೊಂದಿಲ್ಲ… ಹುಟ್ಟು, ಜಾತಿ ಅಥವಾ ಪಂಥದ ಆಧಾರದ ಮೇಲೆ ಸಿಗುವ ವಿಶೇಷ ಹಕ್ಕುಗಳು ತೊಲಗಬೇಕು, ಮತ್ತು ಜಾತಿ, ಪಂಥ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಮುಕ್ತವಾಗಿ ನೀಡಬೇಕು.” (ದಿ ಇಂಡಿಯನ್ ಸ್ಟ್ಟ್ರಗಲ್). ನೇತಾಜಿ ಮತ್ತೊಂದು ಸಂದರ್ಭದಲ್ಲಿ ಹೀಗೂ ಹೇಳಿದ್ದರು: “ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ‘ಹಿಂದೂ ರಾಜ್’ ಧ್ವನಿಗಳನ್ನು ನಾವು ಕೇಳುತ್ತೇವೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ, ಹಿಂದೂ ರಾಜ್ಯ ಎಂಬ ಗುಮ್ಮ ಇದೆ. ಇವೆಲ್ಲವೂ ನಿರುಪಯುಕ್ತ ಆಲೋಚನೆಗಳು.” (ಕೊಮಿಲ್ಲಾದಲ್ಲಿ ನೀಡಿದ ಭಾಷಣ, 14 ಜೂನ್ 1938).

ಅವರು ದೇಶವಾಸಿಗಳಿಗೆ ಎಚ್ಚರಿಕೆ ನೀಡುತ್ತಾ: “ಹಿಂದೂ ಮಹಾಸಭಾವು ಮತಗಳನ್ನು ಕೇಳಲು ಕೈಯಲ್ಲಿ ತ್ರಿಶೂಲ ಹಿಡಿದ ಸನ್ಯಾಸಿ ಮತ್ತು ಸನ್ಯಾಸಿನಿಯರನ್ನು ಕಳುಹಿಸುತ್ತದೆ. ತ್ರಿಶೂಲ ಮತ್ತು ಕೇಸರಿಯನ್ನು ಕಂಡ ತಕ್ಷಣ ಹಿಂದೂಗಳು ಹಿಂಜರಿಕೆಯಿಲ್ಲದೆ ತಲೆಬಾಗುತ್ತಾರೆ. ಹಿಂದೂ ಮಹಾಸಭಾವು ಹೀಗೆ ಧರ್ಮವನ್ನು ಬಳಸಿಕೊಂಡು ರಾಜಕೀಯ ರಂಗಕ್ಕೆ ಬಂದಿದೆ ಮತ್ತು ಆ ಪ್ರಕ್ರಿಯೆಯಲ್ಲಿ ರಾಜಕೀಯವನ್ನು ಕಲುಷಿತಗೊಳಿಸುತ್ತಿದೆ. ಪ್ರತಿಯೊಬ್ಬ ಹಿಂದೂ ಇದನ್ನು ಖಂಡಿಸಬೇಕು. ದೇಶದ ಎಲ್ಲಾ ಸ್ವಾತಂತ್ರ‍್ಯಪ್ರೇಮಿ ಪುರುಷರು ಮತ್ತು ಮಹಿಳೆಯರು ಒಗ್ಗಟ್ಟಿನಿಂದ ದೇಶಸೇವೆ ಮಾಡಬೇಕೆಂಬುದೇ ನಮ್ಮ ಬಯಕೆ” ಎಂದಿದ್ದರು. (ಆನಂದ ಬಜಾರ್ ಪತ್ರಿಕಾ, 14 ಮೇ 1940)

ಹಿಂದೂ ರಾಜ್ ಮತ್ತು ತ್ರಿಶೂಲ ಸಂಸ್ಕೃತಿಯ ಪ್ರತಿಪಾದಕರಾಗಿದ್ದು, ಸ್ವಾತಂತ್ರ‍್ಯ ಚಳವಳಿಯ ಪ್ರಕ್ರಿಯೆಯಿಂದ ಪ್ರಜ್ಞಾಪೂರ್ವಕವಾಗಿ ದೂರವುಳಿದವರು, ನೇತಾಜಿಯವರ ಬಗ್ಗೆ ಭಾರತೀಯರು ಹೊಂದಿರುವ ಗೌರವವನ್ನು ಹೇಗೆ ತಾನೆ ಸಹಿಸಲು ಸಾಧ್ಯ? ಹಾಗಾಗಿ 2022 ರಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸಹಚರರು ನೇತಾಜಿಯವರ ಬಗ್ಗೆ ಮಾಡಿದ ಪ್ರಶಂಸೆಯು ಕೇವಲ ಒಂದು ಗಿಮಿಕ್, ಅಂದರೆ, ಅದು ಚುನಾವಣಾ ಪ್ರಯೋಜನಗಳನ್ನು ಪಡೆಯಲು ಮಾಡಿದ ಹುನ್ನಾರವಷ್ಟೇ.

ಪಶ್ಚಿಮ ಬಂಗಾಳ ಮಾತ್ರವಲ್ಲ, ದೇಶಾದ್ಯಂತ ಇರುವ ಪ್ರತಿಯೊಬ್ಬ ನಿಜವಾದ ದೇಶಭಕ್ತ ಮತ್ತು ರಾಷ್ಟ್ರವಾದಿ ವ್ಯಕ್ತಿಯೂ ನೇತಾಜಿಯವರನ್ನು ತೆಗಳಲು ನಡೆಯುತ್ತಿರುವ ಈ ನಿರಂತರ ಪ್ರಯತ್ನವನ್ನು ಒಪ್ಪಿಕೊಂಡಿಲ್ಲ ಮತ್ತು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಸಾಮಾನ್ಯ ಜನರು ದೇಶದ ಹಲವು ಮೂಲೆಗಳಲ್ಲಿ ಉಗ್ರ ಪ್ರತಿಭಟನೆಗಳನ್ನು ಸಂಘಟಿಸಿದ್ದಾರೆ. ಇದು ಪ್ರಗತಿಪರ ಶಕ್ತಿಗಳು ಮತ್ತು ಎಡಪಂಥೀಯ ಪ್ರಜ್ಞೆ ಜೀವಂತವಾಗಿದೆ ಮತ್ತು ಕುದಿಯುತ್ತಿದೆ ಎಂಬುದನ್ನು ತೋರಿಸುತ್ತದೆ.

ಸಂಘ ಪರಿವಾರವು ಮಂಡಿಸಿದ ವಿಕೃತ ಇತಿಹಾಸಕ್ಕೆ ವಿರುದ್ಧವಾಗಿ ನೈಜ ಇತಿಹಾಸದ ಅಧ್ಯಯನದ ಅಲೆಯನ್ನು ನಾವು ಹುಟ್ಟುಹಾಕೋಣ. ನವೋದಯದ ಮಹಾನ್ ವ್ಯಕ್ತಿಗಳು ಮತ್ತು ಕ್ರಾಂತಿಕಾರಿಗಳ ಆದರ್ಶಗಳನ್ನು ಹೋರಾಟದ ಅಸ್ತ್ರಗಳಾಗಿ ರೂಪಿಸೋಣ.