ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚುನಾಯಿತಗೊಂಡ ಬಿಜೆಪಿ ಸರ್ಕಾರದ ಹಣಕಾಸು ಸಚಿವರು, ಕೊಲ್ಕತಾ ಮುನಿಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕೆಳಗಡೆ ಬರುವ ಅಂದಾಜು 1,800 ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಡುಗೆ ಮತ್ತು ವಿತರಣೆಯನ್ನು ಇಸ್ಕಾನ್ ಸಂಸ್ಥೆಯ ಅನ್ನಮಿತ್ರ ಫೌಂಡೇಶನ್ ತೆಗೆದುಕೊಳ್ಳಲಿದೆಯೆಂದು ಘೋಷಿಸಿದರು; ಈ ಶಾಲೆಗಳಲ್ಲಿ ಸುಮಾರು 1,00,000 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿದ್ದಾರೆ. ಇದಕ್ಕೆ ಸುತ್ತುವರಿದಂತೆ ಚರ್ಚೆಯು ತಾರಕಕ್ಕೇರಿದೆ. ಸ್ವಯಂಚಾಲಿತ ಬೃಹತ್ ಅಡುಗೆಮನೆಗಳು ‘ಉತ್ತಮ’ ಮತ್ತು ‘ಅಪ್ಪಟ ಆಹಾರ’ವನ್ನು ಕೊಡುತ್ತವೆ ಎಂದು ವಾದಿಸುತ್ತಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು ಮೇಲಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ತಕ್ಷಣವೇ ಜನರು ತಿರುಗೇಟು ಕೊಡುತ್ತಿದ್ದಾರೆ; ವಿರೋಧದ ಅಲೆಯೆದ್ದಿದೆ ಮತ್ತು ಅಧಿಕಾರದಲ್ಲಿರುವ ಪಕ್ಷವು ಬಲವಂತವಾಗಿ ಆಹಾರ ಪದ್ಧತಿಯನ್ನು ಹೇರುತ್ತಿರುವುದರ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ಇಸ್ಕಾನ್ ‘ಸಾತ್ವಿಕ’ ಆಹಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ; ಅದರಲ್ಲಿ ಮಾಂಸ, ಮೀನು, ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ನಿಷಿದ್ಧ. ಹಾಗಾಗಿ ಅವುಗಳನ್ನು ಶಾಲೆಯ ಆಹಾರ ಪಟ್ಟಿಯಿಂದ ವ್ಯವಸ್ಥಿತವಾಗಿ ತೆಗೆದುಹಾಕಲಾಗಿದೆ. ಇದನ್ನು ತಕ್ಷಣವೇ ಸಾರ್ವಜನಿಕ ಆಹಾರತಜ್ಞರು ಪೌಷ್ಟಿಕತೆಯ ಸರ್ವನಾಶವೆಂದು ಕರೆದರು. ಶಾಲೆಯ ಆಹಾರಪಟ್ಟಿಯಲ್ಲಿ ಮೊಟ್ಟೆ ಸೇರಿಸುವುದರ ಹಿಂದಿರುವುದು ಕೇವಲ ಭಾವನೆಗಳಲ್ಲ, ಬದಲಿಗೆ ಕೆಲವು ನಿರ್ದಿಷ್ಟ ಕಾರಣಗಳು. ಮೊಟ್ಟೆಗಳನ್ನು ಬೇಳೆ ಅಥವಾ ತರಕಾರಿಗಳಂತೆ ಸುಲಭವಾಗಿ ಕಲಬೆರಕೆ ಮಾಡಲು ಅಥವಾ ಅದರ ಸಾರ ಕುಂದಿಸಲು ಸಾಧ್ಯವಿಲ್ಲ. ಅವುಗಳಿಗೆ ಪ್ರಕೃತಿ ಸಹಜ ರಕ್ಷಣೆಯಿದೆ; ಬೇಯಿಸುವುದು, ವಿತರಿಸುವುದು ಸುಲಭ; ಮೊಟ್ಟೆಯು ಪ್ರಪಂಚದಾದ್ಯಂತ ಪೌಷ್ಟಿಕ ತಜ್ಞರ ಆಯ್ಕೆ; ಏಕೆಂದರೆ ಅದು ಅಗ್ಗವಾಗಿ ಸಿಗುತ್ತದೆ, ಅದರಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಕಬ್ಬಿಣ, ಜಿಂಕ್ ಮತ್ತು ವಿಟಮಿನ್ ಬಿ12 ಮತ್ತು ಪ್ರೊಟೀನ್‌ಗಳು ತುಂಬಿವೆ; ಈಗಾಗಲೇ ಅವುಗಳ ಕೊರತೆಯಿಂದಾಗಿ ಶೇ.33.8ರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. (ಎನ್‌ಎಫ್‌ಹೆಚ್‌ಎಸ್ ವರದಿ). ಜೊತೆಗೆ, ಮೊಟ್ಟೆ ರುಚಿಕರವಾದದ್ದರಿಂದ ಅದನ್ನು ಮಕ್ಕಳು ಇಷ್ಟಪಡುತ್ತಾರೆ. ಅದನ್ನು ಧಾರ್ಮಿಕ ಪೂರ್ವಗ್ರಹಗಳಿಂದಾಗಿ ಆಹಾರಪಟ್ಟಿಯಿಂದ ತೆಗೆಯುವುದರ ಹಿಂದೆ ದುರುದ್ದೇಶವಿದೆ.

ಇಸ್ಕಾನ್‌ಗೆ ಸಂಯೋಜನೆಯಾಗಿರುವ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಅನ್ನಮಿತ್ರ ಫೌಂಡೇಶನ್‌ಗಳು ಸರಬರಾಜು ಮಾಡುವ ಆಹಾರದಲ್ಲಿ ಪೌಷ್ಟಿಕತೆಯ ಗುಣಮಟ್ಟ ಹಾಗೂ ಆಹಾರ ಕ್ರಮಗಳ (ರುಚಿ, ಗುಣಮಟ್ಟ) ಮೇಲೆ ಸಂಸ್ಥೆಗಳ, ಅಧಿಕಾರಿವರ್ಗದ ದೂರುಗಳು ಬಂದಿರುವುದರ ದಾಖಲಿತ ಇತಿಹಾಸವಿದೆ. ಈ ಫೌಂಡೇಶನ್‌ಗಳು ತಮ್ಮ ಸ್ವಯಂಚಾಲಿತ ಶುಚಿ, ಗುಣಮಟ್ಟ ಹಾಗೂ ಐಎಸ್‌ಓ ಆಹಾರ ರಕ್ಷಣೆ, ಪ್ರಮಾಣಪತ್ರಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತವೆ; ಆದರೆ ಬಹುಸಾಂಸ್ಥಿಕ ಆಡಿಟ್ ಮತ್ತು ನಾಗರಿಕ ಸಮಾಜಗಳು ಅವುಗಳ ನಿಜವಾದ ಪೌಷ್ಟಿಕ ಮೌಲ್ಯ, ಸತತ ಗುಣಮಟ್ಟ ಮತ್ತು ಆಹಾರದ ರುಚಿಯನ್ನು ಪದೇ ಪದೇ ಪ್ರಶ್ನೆ ಮಾಡಿವೆ. ಅನ್ನಮಿತ್ರ ಫೌಂಡೇಶನ್ (ಮೊದಲು ಇಸ್ಕಾನ್ ಫುಡ್ ರಿಲೀಫ್ ಫಂಡ್ ಎಂದಿತ್ತು) ಮೂಲಕ ಇಸ್ಕಾನ್ ಭಾರತದ 7 ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಸರಬರಾಜು ಮಾಡುತ್ತದೆ. ಪಶ್ಚಿಮ ಬಂಗಾಳ ಎಂಟನೆಯದು. ಆದರೆ ಗುಣಮಟ್ಟ, ಜೊತೆಗೆ ಪ್ರಮಾಣದ ಬಗ್ಗೆ ಬಂದಿರುವ ಅಭಿಪ್ರಾಯಗಳೇನು?

ಅನ್ನಮಿತ್ರ ಫೌಂಡೇಶನ್, ಶಾಲೆಗಳಿಗೆ ಸರಬರಾಜು ಮಾಡಿದ ಅಡುಗೆಯ ಗುಣಮಟ್ಟ ಕಳಪೆಯಾಗಿತ್ತು ಮತ್ತು ಅದರ ಪ್ರಮಾಣವು ತೃಪ್ತಿಕರವಾಗಿರಲಿಲ್ಲವೆಂದು ಬಂದ ದೂರು ಕೆಂದ್ರೀಯ ಅಡುಗೆ ಸರಬರಾಜು ಮಾದರಿಯಲ್ಲಿ ಯೋಚನೆಗೆ ಮುಖ್ಯ ಕಾರಣವಾಗಿತ್ತು.ಅನ್ನಮಿತ್ರ ಅದೆಷ್ಟೇ ಅತ್ಯಾಧುನಿಕ, ಶುಚಿ, ಸ್ವಯಂಚಾಲಿತ ಅಡುಗೆಯೆಂದು ಹೇಳಿಕೊಂಡರೂ ಸಹ, ಕೆಳಹಂತದಲ್ಲಿ ನಡೆದ ಸಮೀಕ್ಷೆಗಳು ಮತ್ತು ಶಿಕ್ಷಕರ ವರದಿಗಳು ಕೇಂದ್ರೀಯ ಗುಣಮಟ್ಟಕ್ಕೂ ಮತ್ತು ವಾಸ್ತವದಲ್ಲಿ ವಿದ್ಯಾರ್ಥಿಗಳಿಗಾದ ತೃಪ್ತಿಗೂ ತುಂಬಾ ವ್ಯತ್ಯಾಸವಿದೆಯೆಂದು ಹೇಳುತ್ತಾರೆ.

ಆಹಾರ ಒಪ್ಪಿಗೆಯಾಗುತ್ತಿಲ್ಲ: ಹಲವಾರು ಗ್ರಾಮೀಣ ತಾಲೂಕುಗಳಲ್ಲಿ ಶೇ.92 ರಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೇಂದ್ರೀಕೃತ ಅಡುಗೆ ಸರಬರಾಜಿಗಿಂತ ಸ್ಥಳೀಯವಾಗಿ ಶಾಲೆಯಲ್ಲಿ ಮಾಡಿದ ಆಹಾರವನ್ನೇ ಇಷ್ಟಪಡುತ್ತಾರೆಂದು ಸಮೀಕ್ಷೆಗಳು ಹೇಳುತ್ತವೆ.

ತಿನ್ನುವುದು ಕಡಿಮೆ ಮತ್ತು ಬಿಸಾಕುವುದು ಹೆಚ್ಚು: ಕೇಂದ್ರೀಕೃತವಾದ ರುಚಿ ಮತ್ತು ಕಟ್ಟುನಿಟ್ಟಾದ ಸಪ್ಪೆ ಆಹಾರ ಪಟ್ಟಿಯಿಂದಾಗಿ ಊಟ ಇಷ್ಟವಾಗದೆ ವಿದ್ಯಾರ್ಥಿಗಳು ತಿನ್ನುವುದು ಗಣನೀಯವಾಗಿ ಇಳಿದಿದೆ ಮತ್ತು ಬಿಸಾಕುವುದು ಹೆಚ್ಚಾಗುತ್ತಿದೆಯೆಂದು ಶಿಕ್ಷಕರು ವರದಿ ಮಾಡಿದ್ದಾರೆ.

ಆಹಾರ ಪಟ್ಟಿ ಮತ್ತು ಆಹಾರಕ್ರಮಗಳ ಮಧ್ಯೆ ಸಂಘರ್ಷ: ಇತ್ತೀಚಿಗೆ ಪಶ್ಚಿಮ ಬಂಗಾಳದಂತಹ ರಾಜ್ಯಗಳ ಆಹಾರಪಟ್ಟಿಯಲ್ಲಿ ಮೊಟ್ಟೆ ತೆಗೆದು ಅಪ್ಪಟ ಸಸ್ಯಾಹಾರಕ್ಕೆ ಬದಲಾಯಿಸಲಾಗಿದೆ. ಎಲ್ಲರೂ ಇದರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊಟ್ಟೆ ಕೊಡುವ ದಿನಗಳು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ ಮತ್ತು ತಿನ್ನುವ ಪ್ರಮಾಣವೂ ಹೆಚ್ಚು ಎಂದು ಅದರ ಇತಿಹಾಸ ತೋರಿಸಿರುವುದನ್ನು ಮೊಟ್ಟೆಯ ಪರವಾಗಿರುವವರು ಎತ್ತಿ ತೋರಿಸಿದ್ದಾರೆ.

ಆಹಾರ ಪಟ್ಟಿ ಪಾಲನೆಯಲ್ಲಿ ಕೊರತೆ: ಉತ್ತರ ಭಾಗದ ಜಿಲ್ಲೆಗಳ ಶಾಲೆಗಳಲ್ಲಿ ತಿಂಗಳ ಆಹಾರ ಪಟ್ಟಿಯನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆದ್ದರಿಂದ ಊಟದ ವೈವಿಧ್ಯತೆಯನ್ನು ಪರಿಶೀಲಿಸಲು ಹಿಂದಿದ್ದ ಆಹಾರ ಪಟ್ಟಿ ವರದಿಯ ಪಾರದರ್ಶಕತೆ ಬೇಕೆಂದು ಅಧಿಕಾರಿಗಳು ಕೇಳುತ್ತಿದ್ದಾರೆ.

ಸ್ಥಳೀಯರ ಪರಿಶೀಲನೆಗೆ ಹೊಡೆತ: ಶಾಲೆಗಳಲ್ಲಿ ಸ್ಥಳೀಯ ಸ್ವಸಹಾಯ ಸಂಘಗಳ ಮೂಲಕ ಸಮುದಾಯಗಳು ಮಾಡುತ್ತಿದ್ದ ಅಡುಗೆಯನ್ನು ಅವರ ಕೈಯಿಂದ ಕಸಿದುಕೊಂಡ ಮೇಲೆ, ಶಾಲೆಯಲ್ಲಿ ಸ್ಥಳೀಯರು, ಪೋಷಕರು, ಶಿಕ್ಷಕರು ಅಡುಗೆಯ ಗುಣಮಟ್ಟ, ರುಚಿಯನ್ನು ಸಕ್ರಿಯವಾಗಿ ಪರಿಶೀಲಿಸುವುದು ತಪ್ಪಿ ಹೋಯಿತು.

2019 ರಲ್ಲಿ, ಕರ್ನಾಟಕದಲ್ಲಿ ಫೌಂಡೇಶನ್ ನೀಡಿದ ಆಹಾರವನ್ನು ಮಕ್ಕಳು ಬಿಸಾಕುತ್ತಿದ್ದಾರೆ, ಇಲ್ಲಾ ಪೂರ್ತಿ ತಿನ್ನಲು ನಿರಾಕರಿಸುತ್ತಿದ್ದಾರೆ ಎಂದು ಹಲವಾರು ಸರ್ಕಾರಿ ಶಾಲೆಯ ಆಡಳಿತ ಮಂಡಳಿಗಳು ವರದಿ ಮಾಡಿವೆ; ಏಕೆಂದರೆ ಅವರು ಕೊಡುವುದು ಸಪ್ಪೆ ಊಟ. ಫೌಂಡೇಶನ್‌ನ ಆಹಾರ ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾರು ಮಾಡುವಾಗ ಈರುಳ್ಳಿ ಅಥವಾ ಬೆಳ್ಳುಳ್ಳಿ ಮತ್ತು ತರಕಾರಿ ಉಪಯೋಗಿಸುವುದಿಲ್ಲ. ಹಾಗಾದರೆ ಇದನ್ನು ಕೇವಲ ‘ಶುಚಿತ್ವ’ಕ್ಕಾಗಿ ಬಡಮಕ್ಕಳಿಗೆ ನೀಡಲಾಗುತ್ತಿದೆಯೇ? ಅಥವಾ ಮಕ್ಕಳ ಪೌಷ್ಟಿಕ ಅಗತ್ಯಗಳನ್ನು ಪೂರೈಸುವುದರ ಬದಲು ಒಂದಕ್ಕೊಂದು ಸಂಬಂಧಿತವಾದ ರಾಜಕೀಯ, ಸೈದ್ಧಾಂತಿಕ ಮತ್ತು ತಂತ್ರಗಾರಿಕೆಯ ಉದ್ದೇಶಗಳನ್ನಿಟ್ಟುಕೊಂಡು ಸಾರ್ವಜನಿಕ ಕಲ್ಯಾಣ ವ್ಯವಸ್ಥೆಯ ಮೂಲಕ ಇಸ್ಕಾನ್‌ನಂತಹ ಧಾರ್ಮಿಕ ಸಂಘಟನೆಗಳು ಹಿಂಬಾಗಿಲಿನಿಂದ ಪ್ರವೇಶಿಸಲು ಅವಕಾಶ ಕೊಡುವುದೋ? ಸರ್ಕಾರ ಟೆಂಡರ್ ಕರೆಯದೇ ಒಂದು ನಿರ್ದಿಷ್ಟ ಸಂಘಟನೆಗೆ ಹಾಗೆಯೇ ನೇರವಾಗಿ ಕಾಂಟ್ರಾಕ್ಟ್ ಕೊಡುವುದು ಹೇಗೆ ಸಾಧ್ಯ? ಧಾರ್ಮಿಕ ಉಡುಪು ಆಯ್ಕೆಗೆ ಮಾನದಂಡವೇ?

ಇಸ್ಕಾನ್‌ನ ಕಟ್ಟುನಿಟ್ಟಾದ ಧಾರ್ಮಿಕ ಆಹಾರ ಪಥ್ಯ ಜಾರಿಗೆ ತರುವ ಮೂಲಕ, ಬಿಜೆಪಿ ಸರ್ಕಾರಕ್ಕೆ ನೇರವಾಗಿ ಮಾಂಸಾಹಾರವನ್ನು ನಿಷೇಧಿಸುವ ಬದಲು, ವೈವಿಧ್ಯತೆಯಿರುವ ಶಾಲಾ ಮಕ್ಕಳ ಮೇಲೆ ಸಾತ್ವಿಕ ಆಹಾರದ ತತ್ವವನ್ನು ಹೇರುವ ಯೋಜನೆಯಿದೆ. ಹೀಗೆ, ಸಾರ್ವಜನಿಕ ಕಲ್ಯಾಣ ಯೋಜನೆಯೊಳಗೆ ಸಂಪ್ರದಾಯದ ಪಾವಿತ್ರ್ಯತೆಯ ಪರಿಕಲ್ಪನೆಯನ್ನು ತೂರಿಸುವುದು ಮತ್ತು ಅದರ ಮೂಲಕ ಶಾಲೆಯ ಊಟದಂಗಳದಲ್ಲಿದ್ದ ಧರ್ಮನಿರಪೇಕ್ಷ ಪ್ರಜಾತಂತ್ರದ ಜಾಗವನ್ನು ನಯವಾಗಿ ದೇವಸ್ಥಾನದ ವಾತಾವರಣವನ್ನಾಗಿ ಬದಲಾಯಿಸುವುದು. “ನೀವೇ ರುಚಿ ನೋಡಿ… ಮತ್ತೆ, ‘ಹರೇ ಕೃಷ್ಣ’ ಎಂದು ಹೇಳಲು ಇಷ್ಟವಿಲ್ಲದಿದ್ದರೆ, ಯಾರೂ ನಿಮ್ಮನ್ನು ಹೇಳಿ ಎನ್ನುವುದಿಲ್ಲ” ಎಂದು ಸ್ವತಃ ಪಶ್ವಿಮ ಬಂಗಾಳದ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಒಂದು ನಿರ್ದಿಷ್ಟ ಧಾರ್ಮಿಕ ಅಸ್ಮಿತೆ ಒಳಬರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಆದ್ದರಿಂದ ಇದು ದ್ವಿಮುಖ ದಾಳಿ - ಪೌಷ್ಟಿಕತೆ ಮತ್ತು ಶಿಕ್ಷಣದ ಅವಕಾಶಗಳೆರಡನ್ನೂ ಕಡಿತಗೊಳಿಸುವುದು. ಆಹಾರದ ಆಯ್ಕೆಯಿಂದಾಚೆಗೆ, ಇಸ್ಕಾನ್ ಮಾದರಿಯಲ್ಲಿರುವ ಮುಖ್ಯ ಸಮಸ್ಯೆಯೆಂದರೆ, ಅದು ಸ್ಥಳೀಯ ಬಡ ಹೆಣ್ಣುಮಕ್ಕಳಿಗೆ ಆರ್ಥಿಕ ಹೊಡೆತ ನೀಡುತ್ತದೆ. ಭಾರತದ ಬಿಸಿಯೂಟ ಯೋಜನೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಆಹಾರ ಮತ್ತು ಬಡತನದಲ್ಲಿರುವ ಸ್ಥಳೀಯ ದುಡಿಯುವ ಮಹಿಳೆಯರಿಗೆ ಉದ್ಯೋಗ ಕೊಡುವ ಎರಡು ಉದ್ದೇಶವಿದೆಯೆಂದು 1990 ರಲ್ಲಿ ಯೋಜನೆಯನ್ನು ಜಾರಿಗೆ ತಂದಾಗ ಹೇಳಲಾಗಿತ್ತು. ಅದನ್ನು ಸಮುದಾಯ ಮಾದರಿಯಲ್ಲಿ ರೂಪಿಸಲಾಗಿತ್ತು; ಶಾಲೆಗಳಿಗೆ ಮೀಸಲಾದ ಹಣವನ್ನು, ಸ್ಥಳೀಯ ಆರ್ಥಿಕ ಚಲಾವಣೆಗೆ ಸಹಾಯವಾಗುವಂತೆ ಸ್ಥಳೀಯ ವಸ್ತುಗಳನ್ನು ಖರೀದಿಸಲು ವಿನಿಯೋಗಿಸಲಾಗುತ್ತಿತ್ತು. ಈಗ ಬಿಸಿಯೂಟವನ್ನು ಹೊರಗುತ್ತಿಗೆ ಕೊಡುವುದರಿಂದ ಹಲವು ಸಾವಿರ ಬಿಸಿಯೂಟ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಿಂದ ಬಡತನದಲ್ಲಿ ಬೇಯುತ್ತಿರುವ ಹೆಣ್ಣುಮಕ್ಕಳು ತಮ್ಮ ಆದಾಯವನ್ನು ಕಳೆದುಕೊಂಡರೆ, ಇಸ್ಕಾನ್‌ನಂತಹ ಶ್ರೀಮಂತ ಧಾರ್ಮಿಕ ದತ್ತಿ ಸಂಸ್ಥೆಯು ಅನ್ನಮಿತ್ರ ಫೌಂಡೇಶನ್ ಮೂಲಕ ಸಾಕಷ್ಟು ಹಣಗಳಿಸುತ್ತದೆ. ಇಲ್ಲೊಂದು ವಿಷಯವನ್ನು ತಿಳಿಸಲೇಬೇಕು; ಕೊಲ್ಕತಾದಲ್ಲಿ ಇಸ್ಕಾನ್ ಬೇರೆ ಯಾವುದೇ ದುಬಾರಿ ರೆಸ್ಟೋರೆಂಟ್‌ನಲ್ಲಿರುವ ಬೆಲೆಗೇ ಊಟವನ್ನು ಮಾರುತ್ತದೆ. ಆದ್ದರಿಂದ ದೇವರ ಹೆಸರಿನಲ್ಲಿ ಆಹಾರ ಮಾರಿ ಹಣಗಳಿಸುವುದು ಇಸ್ಕಾನ್‌ಗೆ ಹೊಸದೇನಲ್ಲ.

ಬಿಜೆಪಿ ಸರ್ಕಾರವು, ಸ್ಥಳೀಯ ಶಾಲಾ ಅಡುಗೆಮನೆಯನ್ನು ಕೇಂದ್ರೀಕರಣಗೊಳಿಸಿ ಕಾರ್ಪೊರೆಟ್ ಎನ್‌ಜಿಓಗಳಿಗೆ ನೀಡುವುದರಿಂದ ‘ಆಡಳಿತದ ತಲೆನೋವು ಹೋಗುತ್ತದೆ’ ಮತ್ತು ‘ಸ್ಮಾರ್ಟ್ ಆಡಳಿತ’ದ ಚಿತ್ರಣ ಕೊಡಬಹುದೆಂದು ವಾದಿಸುತ್ತಿದೆ. ಅದ್ಭುತ! ಸ್ಥಳೀಯ ಹೆಣ್ಣುಮಕ್ಕಳ ಜೀವನೋಪಾಯವನ್ನು ಕಸಿದುಕೊಂಡು, ಪ್ರೊಟೀನ್‌ಯುಕ್ತ ಮೊಟ್ಟೆಯನ್ನು ತೆಗೆದು ಹಾಕಿ, ಒಂದು ಸಂಸ್ಥೆಗೆ ಆದ್ಯತೆಯಾಗಿರುವ ಸಪ್ಪೆ ಆಹಾರವನ್ನು ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಉಣಬಡಿಸುವುದು ಸ್ಮಾರ್ಟ್ ಆಡಳಿತವೇ? ಅಥವಾ ಸ್ವಘೋಷಿತ ಆಧ್ಯಾತ್ಮಿಕ ಸಂಘಟನೆಯನ್ನು ಹಲವು ಕೋಟಿ ರೂಗಳ ಆಹಾರ ಸರಬರಾಜು ಸಂಸ್ಥೆಯಾಗಿ ಪರಿವರ್ತಿಸಲು ಸಹಾಯ ಮಾಡುವುದೋ? ಇದು ಜೈವಿಕ ಶೋಷಣೆಯಲ್ಲ, ಬದಲಿಗೆ ಆಳವಾದ ಆರ್ಥಿಕ ಶೋಷಣೆ.

ಕಾನೂನಿನ ಪ್ರಕಾರ ಇಸ್ಕಾನ್‌ನಂತಹ ಸಾರ್ವಜನಿಕ, ತೆರಿಗೆ-ವಿನಾಯಿತಿ ಪಡೆದ ಚಾರಿಟಬಲ್ ಟ್ರಸ್ಟ್ ಮತ್ತು ಫೌಂಡೇಶನ್‌ಗಳು, ವಾಸ್ತವದಲ್ಲಿ ವಾಣಿಜ್ಯ ಸಂಸ್ಥೆಗಳಂತೆ ಕೆಲಸ ಮಾಡುತ್ತಿವೆ, ಅವುಗಳು ಖಾಸಗಿ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಸರ್ಕಾರದ ಕಾಂಟ್ರಾಕ್ಟ್ ಗಳನ್ನು ಪಡೆದುಕೊಳ್ಳುತ್ತವೆ. ಅವುಗಳು ಸರ್ಕಾರದ ನಿಧಿಯ ಜೊತೆಗೆ ಖಾಸಗಿ ನಿಧಿಯನ್ನು ಸೇರಿಸಿಕೊಂಡು ಅಪಾರ ಲಾಭಗಳಿಸುತ್ತವೆ. ಅಂತಹ ವಾಣಿಜ್ಯ ಕೆಲಸಗಳಿಗೆ ಮತ್ತು ತೆರಿಗೆ ವಿನಾಯಿತಿ ಅನುಭವಿಸುವುದಕ್ಕೆ ತಮ್ಮ ಧಾರ್ಮಿಕತೆಯನ್ನು ಮುಖವಾಡವನ್ನಾಗಿ ಬಳಸಿಕೊಳ್ಳುತ್ತವೆ.

ಹೀಗೆ, ಚುನಾವಣೆಯ ಪ್ರಚಾರದ ಸಮಯದಲ್ಲಿ ‘ಬಡವರ ಏಳಿಗೆ’ಯೆನ್ನುವ ಹಳಸು ಮಾತುಗಳನ್ನೇ ಮತ್ತೆ ಮತ್ತೆ ಉಪಯೋಗಿಸುವ ಅಧಿಕಾರದಾಹಿ ರಾಜಕೀಯ ಪಕ್ಷಗಳು, ಒಮ್ಮೆ ಗದ್ದುಗೆಯೇರಿದ ಮೇಲೆ ಅದೇ ಬಡಜನರನ್ನು ಖಾಸಗೀಕರಣ ಮತ್ತು ಸಾಂಸ್ಕೃತಿಕ ಮರುರೂಪದ ಬಲಿಪಶುಗಳನ್ನಾಗಿ ಮಾಡುತ್ತವೆ. ಪ್ರತಿಯೊಂದು ಸಾಂಸ್ಕೃತಿಕ ಪಲ್ಲಟ, ಬಜೆಟ್ ಕಡಿತ ಮತ್ತು ನೀತಿಗಳ ಪ್ರಯೋಗದ ಭಾರ ಕೆಳಮುಖವಾಗಿ ಹರಿಯುತ್ತಾ, ಅಂತಿಮವಾಗಿ ಸಾಮಾನ್ಯ ಜನರ ಹೆಗಲ ಮೇಲೆ ಬೀಳುತ್ತದೆ. ಈ ರಾಜಕೀಯದ ಬಣ್ಣದ ಮಾತುಗಳ ಹಿಂದಿರುವ ಸತ್ಯವನ್ನು ಜನರು ಅರಿತುಕೊಳ್ಳಬೇಕು. ಇದರ ಹಿಂದೆ ಧೂರ್ತ ಶೋಷಕ ವ್ಯವಸ್ಥೆಯಿದೆ ಮತ್ತು ಜನರೆಲ್ಲರೂ ಒಂದುಗೂಡಿ ನಿಜವಾಗಿಯೂ ಜನಪರವಾದ ವ್ಯವಸ್ಥೆಯನ್ನು ಸ್ಥಾಪಿಸುವುದೊಂದೇ ಪರಿಹಾರವೆಂದು ತಿಳಿಯಬೇಕು.