ಸಾಮ್ರಾಜ್ಯಶಾಹಿ-ಬಂಡವಾಳ ಶಾಹಿ ದೇಶಗಳು ಪ್ರಜಾಪ್ರಭುತ್ವದ ರೂಢಿ ಆಚರಣೆಗಳಿಗೆ ವಿದಾಯ ಹೇಳುತ್ತಿರುವಾಗ ಅಭಿವ್ಯಕ್ತಿ ಸ್ವಾತಂತ್ರ‍್ಯವು ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪುತ್ತಿದೆ. ಇದರೊಂದಿಗೆ ವಾರ್ತಾ ಮಾಧ್ಯಮಗಳ ಮೇಲೂ ಕೊಡಲಿ ಪೆಟ್ಟು ಬೀಳುತ್ತಿದೆ. ಬಂಡವಾಳವಾದದ ಉಗಮದ ದಿನಗಳಲ್ಲಿ ಮಾಧ್ಯಮವನ್ನು ಪ್ರಜಾಪ್ರಭುತ್ವದ ‘ನಾಲ್ಕನೇ ಅಂಗ’ ಎಂದು ಪರಿಗಣಿಸಲಾಗುತ್ತಿತ್ತು. ಪತ್ರಿಕಾರಂಗವನ್ನು ಸರ್ಕಾರದ ಮೂರು ಸಾಂಪ್ರದಾಯಿಕ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲೆ ನಿಗಾ ಇಡುವ ಸ್ವತಂತ್ರ ‘ಕಾವಲು ನಾಯಿ’ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಆ ಮೂಲಕ ಅದು ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುತ್ತಿತ್ತು, ಜನಾಭಿಪ್ರಾಯವನ್ನು ರೂಪಿಸುತ್ತಿತ್ತು ಮತ್ತು ವ್ಯಕ್ತಪಡಿಸುತ್ತಿತ್ತು, ಪಾರದರ್ಶಕತೆಯನ್ನು ಖಾತ್ರಿಪಡಿಸಿ ಜನರ ಹಿತಾಸಕ್ತಿಗೆ ಧಕ್ಕೆ ತರುವಂತಹ ಸರ್ಕಾರದ ನೀತಿಗಳನ್ನು ಟೀಕಿಸುತ್ತಿತ್ತು.
ಅಭಿವ್ಯಕ್ತಿ ಸ್ವಾತಂತ್ರ‍್ಯದ ಕುಸಿತ
ಆದರೆ ಕಾಲಾನಂತರದಲ್ಲಿ, ಬಂಡವಾಳಶಾಹಿ ವ್ಯವಸ್ಥೆಯು ತನ್ನ ಅವನತಿಯತ್ತ ಪಯಣವನ್ನು ಪ್ರಾರಂಭಿಸಿದಂತೆ, ಬೂರ್ಜ್ವಾ ಪ್ರಜಾಪ್ರಭುತ್ವದ ಸವಕಳಿಯೂ ಏಕಕಾಲದಲ್ಲೇ ಪ್ರಾರಂಭವಾಯಿತು. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಅತ್ಯುನ್ನತ ಹಂತವನ್ನು ಅಂದರೆ ಸಾಮ್ರಾಜ್ಯಶಾಹಿ ಹಂತವನ್ನು ತಲುಪುತ್ತಿದ್ದಂತೆ ಪ್ರಗತಿಪರ ಅಂಶಗಳನ್ನೆಲ್ಲಾ ಕಳೆದುಕೊಂಡು ಪ್ರತಿಗಾಮಿಯಾಗಿ ಬದಲಾಯಿತು ಮತ್ತು ಇದುವರೆಗೆ ಹೊಂದಿದ್ದ ಪ್ರಜಾಪ್ರಭುತ್ವದ ಸಾರವನ್ನು ಕಳೆದುಕೊಂಡಿತು. ಅಂದಿನಿಂದ, ಬೂರ್ಜ್ವಾ ಪ್ರಜಾಪ್ರಭುತ್ವದ ಸವಕಳಿ ಮತ್ತು ಅವನತಿಯು ಅತ್ಯಂತ ಕ್ರೌರ್ಯದೊಂದಿಗೆ ಪ್ರಕಟವಾಗಲು ಪ್ರಾರಂಭವಾಯಿತು. ಕ್ರಮೇಣವಾಗಿ ಅದು ಫ್ಯಾಸಿಸ್ಟ್ ನಿರಂಕುಶಾಧಿಕಾರವಾಗಿ ರೂಪಾಂತರಗೊಳ್ಳುತ್ತಿದೆ. ಇದರ ಪರಿಣಾಮವಾಗಿ, ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ದೈತ್ಯ ಏಕಸ್ವಾಮ್ಯ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿರುವ ಪ್ರಮುಖ ಮಾಧ್ಯಮಗಳು ಪೂರ್ವಗ್ರಹ ಪೀಡಿತ, ಪಕ್ಷಪಾತಿಗಳಾಗಿ, ಆಡಳಿತ ವರ್ಗದ ಪರವಾಗಿ ರಾಜಕೀಯವಾಗಿ ತೊಡಗಿಸಿಕೊಂಡಿರುವ ಮತ್ತು ನಿಯಂತ್ರಣಕ್ಕೊಳಪಡುತ್ತಿರುವ ಮಾಧ್ಯಮಗಳಾಗಿ ಮಾರ್ಪಟ್ಟಿವೆ.
ಸೆನ್ಸಾರ್‌ಶಿಪ್‌ನ ಹೊಸ ರೂಪ
ಸೆನ್ಸಾರ್‌ಶಿಪ್ ಈಗ ಕಾನೂನು ಅಧಿಸೂಚನೆಗಳು, ಅನುಪಾಲನಾ ಚೌಕಟ್ಟುಗಳು (Compliance Framework) ಮತ್ತು ಅಧಿಕಾರಶಾಹಿ ಫರ್ಮಾನುಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತದಲ್ಲಿ, ‹ಸ್ವತಂತ್ರ ಪತ್ರಿಕೋದ್ಯಮ ಇನ್ನಿಲ್ಲ. ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ಮಾತನಾಡುವುದು, ಸರ್ಕಾರದ ನಡೆಯನ್ನು ಸೌಮ್ಯವಾಗೇ ಟೀಕಿಸಿದರೂ ಸಹ, ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ಅಟ್ಟಲಾಗುತ್ತಿದೆ. ರಿಪೋರ್ಟರ‍್ಸ್ ವಿತೌಟ್ ಬಾರ್ಡರ‍್ಸ್(RSF) ಬಿಡುಗಡೆ ಮಾಡಿದ 2025 ರ ಜಾಗತಿಕ ಪತ್ರಿಕಾ ಸ್ವಾತಂತ್ರ‍್ಯ ಸೂಚ್ಯಂಕದ ಪ್ರಕಾರ, 180 ದೇಶಗಳಲ್ಲಿ ಭಾರತವು 151 ನೇ ಸ್ಥಾನದಲ್ಲಿದೆ. ಈ ವರದಿಯು ಭಾರತದ ಪರಿಸ್ಥಿತಿಯನ್ನು “ಬಹಳ ಗಂಭೀರ” ಎಂದು ವರ್ಗೀಕರಿಸಿದೆ, ರಾಜಕೀಯ ಒತ್ತಡ, ಮಾಧ್ಯಮದ ಖಾಸಗಿ ಮಾಲೀಕತ್ವದ ಕೇಂದ್ರೀಕರಣ ಮತ್ತು ಪತ್ರಕರ್ತರು ಎದುರಿಸುತ್ತಿರುವ ಅಪಾಯಕಾರಿ ಪರಿಸ್ಥಿತಿಯನ್ನು ಎತ್ತಿ ತೋರಿಸಿದೆ. ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಾವಳಿಗಳಿಗೆ ತರಲಾದ ಇತ್ತೀಚಿನ ತಿದ್ದುಪಡಿಗಳು ಟೀಕೆಯ ಧ್ವನಿಯಷ್ಟೇ ಅಲ್ಲ, ಭಿನ್ನಾಭಿಪ್ರಾಯದ ಧ್ವನಿಯನ್ನೂ ಸಹ ಅಡಗಿಸುವ ಚಾಣಾಕ್ಷ ನಡೆಯಾಗಿದೆ. ಡೀಪ್‌ಫೇಕ್‌ಗಳು, ತಪ್ಪು ಮಾಹಿತಿ, ಎಐ-ಚಾಲಿತ ವಂಚನೆ ಮತ್ತು ಆನ್‌ಲೈನ್ ಹಾನಿಗಳನ್ನು ತಡೆಗಟ್ಟಲು ಹೊಸ ಐಟಿ ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಸರ್ಕಾರ ಪ್ರತಿಪಾದಿಸುತ್ತದೆ. ಇಂತಹ ಅಪಾಯಗಳು ನಿಜ ಎಂಬುದರಲ್ಲಿ ಸಂದೇಹವೇನಿಲ್ಲ. ಕೃತಕವಾಗಿ ರಚಿಸಲಾದ ಫೋಟೋ, ವಿಡಿಯೋಗಳ ಮೂಲಕ ಜನರನ್ನು ದಾರಿತಪ್ಪಿಸಬಹುದು, ಮತದಾರರ ಮೇಲೆ ಪ್ರಭಾವ ಬೀರಬಹುದು, ವದಂತಿಗಳನ್ನು ಹರಡಬಹುದು, ಹಾಗೆಯೇ ಜಾತಿ-ಕೋಮು-ಪ್ರಾದೇಶಿಕ ಉದ್ವಿಗ್ನತೆಗಳನ್ನು ಮತ್ತು ರಕ್ತಪಾತವನ್ನು ಪ್ರಚೋದಿಸಬಹುದು. ಆದರೆ ಕಟ್ಟುನಿಟ್ಟಾದ ಆಡಳಿತಾತ್ಮಕ ನಿಯಂತ್ರಣಗಳು, ಕಟ್ಟುನಿಟ್ಟಿನ ಕಾನೂನಾತ್ಮಕ ಕ್ರಮಗಳನ್ನು ಜಾರಿ ಮಾಡುವುದರ ಮೂಲಕ ಸರ್ಕಾರವು ಅಂತಹ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ಪ್ರಚಾರದ ಪ್ರವಾಹಕ್ಕೆ ಕಡಿವಾಣ ಹಾಕಬಹುದು. ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟ್ ಕುರಿತಾಗಿ ದೂರು ಬಂದಾಗ ಅದನ್ನು ತೆಗೆದು ಹಾಕಲು ಇರುವ ಕಾಲಾವಧಿಯನ್ನು ಕುಗ್ಗಿಸಲಾಗಿದೆ. ಅಧಿಕೃತ ನೋಟಿಸ್ ಬಂದ ಕೆಲವು ಗಂಟೆಗಳ ಒಳಗೆ ಪ್ಲಾಟ್‌ಫಾರ್ಮ್ಗಳು (ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮೊದಲಾದ ಜಾಲತಾಣ ವೇದಿಕೆಗಳು) ನಿರ್ದಿಷ್ಟ ವಿಷಯವನ್ನು ತೆಗೆದುಹಾಕುವ ಅಗತ್ಯವನ್ನು ಉಂಟುಮಾಡಿವೆ. ಕಾರ್ಯಾಂಗ ಸಂಸ್ಥೆಗಳೇ ಏಕಕಾಲದಲ್ಲಿ ದೂರುದಾರ, ತನಿಖಾಧಿಕಾರಿ, ಪ್ರಾಸಿಕ್ಯೂಟರ್ ಮತ್ತು ಸೆನ್ಸಾರ್ ಆಗಿ ಬದಲಾದಾಗ, ಸಾಂವಿಧಾನಿಕ ಸ್ವಾತಂತ್ರ‍್ಯವು ಕೇವಲ ಒಂದು ಆಡಳಿತಾತ್ಮಕ ತೊಡಕಾಗಿ ಪರಿಣಮಿಸುತ್ತದೆ.
ಎಡಿಟರ್ಸ್ ಗಿಲ್ಡ್ ನ ವಿರೋಧ
ದೇಶದ ಪ್ರಮುಖ ಪತ್ರಕರ್ತರ ಸಂಘಟನೆಯಾದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಈ ಕಾನೂನನ್ನು ತೀವ್ರವಾಗಿ ವಿರೋಧಿಸಿದೆ ಮತ್ತು ಪ್ರಸ್ತಾಪಿತ ಬದಲಾವಣೆಗಳು ನ್ಯಾಯಾಂಗ ರಕ್ಷಣೆಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿನ ಕಂಟೆಟ್ ಅನ್ನು ನಿಯಂತ್ರಿಸಲು, ನಿರ್ಬಂಧಿಸಲು ಅಥವಾ ದಮನ ಮಾಡಲು ಸಚಿವಾಲಯಗಳಿಗೆ ವ್ಯಾಪಕ ಅಧಿಕಾರವನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದೆ. ಇದರ ಹಿಂದಿನ ತರ್ಕ ಸರಳ. ಪ್ಲಾಟ್‌ಫಾರ್ಮ್ ಗಳು ನಿಯಮ ಪಾಲಿಸದಿದ್ದಕ್ಕಾಗಿ ಹೊಣೆಗಾರಿಕೆಯನ್ನು ಹೊರಬೇಕಾಗಿ ಬಂದರೆ ಅಥವಾ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಬೇಕಾಗಿ ಬಂದರೆ, ಅವೇನೂ ಮುಕ್ತ ಅಭಿವ್ಯಕ್ತಿಯನ್ನು ಬೆಂಬಲಿಸುವುದಿಲ್ಲ ಬದಲಿಗೆ ಅವು ಕಂಟೆಂಟ್ ಗಳನ್ನು ಜಾಲತಾಣಗಳಿಂದ ತೆಗೆದುಹಾಕುತ್ತವೆ. ವ್ಯಂಗ್ಯಚಿತ್ರ/ಹಾಸ್ಯ, ತನಿಖಾ ವರದಿಗಳು, ರಾಜಕೀಯ ವಿಡಂಬನೆ ಮತ್ತು ಅನಾನುಕೂಲಕರ ಸತ್ಯಗಳು ಈ ಪ್ರಕ್ರಿಯೆಯಲ್ಲಿ ಬಲಿಯಾಗುತ್ತವೆ. ಇದು ಪತ್ರಿಕಾ ಸ್ವಾತಂತ್ರ‍್ಯಕ್ಕೆ ಧಕ್ಕೆ ತರುತ್ತದೆೆ, ಕಾರ್ಯಾಂಗದ ಅಧಿಕಾರವನ್ನು ವಿಸ್ತರಿಸುತ್ತದೆ ಮತ್ತು ವಿಭಿನ್ನ ಅಭಿಪ್ರಾಯಗಳ ಮೇಲೆ ವ್ಯಾಪಕವಾದ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಎಡಿಟರ್ಸ್ ಗಿಲ್ಡ್ ಎಚ್ಚರಿಕೆ ನೀಡುತ್ತಿದೆ. ಗಿಲ್ಡ್ ಎತ್ತಿರುವ ಅಂಶಗಳು ಬರೀ ತಾಂತ್ರಿಕ ಆಕ್ಷೇಪವಲ್ಲ, ಇದು ಡಿಜಿಟಲ್ ಯುಗದಲ್ಲಿ ಸತ್ಯವನ್ನು ಯಾರು ನಿಯಂತ್ರಿಸುತ್ತಾರೆ ಎಂಬುದರ ಕುರಿತಾದ ಸಂಘರ್ಷ. ಇಂದು ಸತ್ಯ ಯಾರ ಸ್ವತ್ತಾಗಿದೆ: ನಾಗರಿಕರು ಮತ್ತು ಮುಕ್ತ ಪತ್ರಿಕೋದ್ಯಮದ್ದೇ, ಅಥವಾ ಪ್ರಭುತ್ವ ಮತ್ತು ಅದರ ಆಡಳಿತ ವ್ಯವಸ್ಥೆಯದ್ದೇ?
ಇಂತಹ ಶಾಸನವು ಜಾರಿಗೆ ಬಂದಾಗ, ಪತ್ರಕರ್ತರನ್ನು ಹೆದರಿಸಲು ಸಾಧ್ಯವಾದರೆ ಅವರನ್ನು ಜೈಲಿಗೆ ಹಾಕುವ ಅಗತ್ಯವಿರುವುದಿಲ್ಲ. ಪ್ರಕಾಶಕರನ್ನು ಮಣಿಸಲು ಸಾಧ್ಯವಾದರೆ ಅವರ ಮೇಲೆ ನಿಷೇಧ ಹೇರುವ ಅಗತ್ಯವಿರುವುದಿಲ್ಲ. ಪ್ಲಾಟ್‌ಫಾರ್ಮ್ ಗಳನ್ನು ಕಾನೂನು, ನಿಯಮಾವಳಿಗಳಿಂದ ಬಂಧಿಸಿದರೆ ಅವುಗಳನ್ನು ವಶಪಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ರಾಜಕೀಯ ನಂಟು ಹೊಂದಿರುವ ವ್ಯಕ್ತಿಗಳು ಭಾಗಿಯಾಗಿರುವ ಕಾರ್ಪೊರೇಟ್ ವಂಚನೆಯನ್ನು ತನಿಖೆ ಮಾಡುವ ವರದಿಗಾರನು ಸೋರಿಕೆಯಾದ ದಾಖಲೆಗಳನ್ನು ಪ್ರಕಟಿಸಲು ಹಿಂಜರಿಯಬಹುದು. ಸರ್ಕಾರಗಳ ಪ್ರಚಾರವನ್ನು ವಿಡಂಬನೆ ಮಾಡುವ ಹಾಸ್ಯಗಾರನ ಕಂಟೆಂಟ್ ಕಣ್ಮರೆಯಾಗಬಹುದು. ಸೀಮಿತ ಕಾನೂನು ಸಂಪನ್ಮೂಲಗಳನ್ನು ಹೊಂದಿರುವ ಸ್ಥಳೀಯ ಸುದ್ದಿ ಸಂಸ್ಥೆಯು ಭ್ರಷ್ಟ ಸಂಸ್ಥೆಗಳ ಪ್ರತೀಕಾರಕ್ಕೆ ಹೆದರಿ ವರದಿಗಳನ್ನೇ ಸಂಪೂರ್ಣವಾಗಿ ಕೈಬಿಡಬಹುದು.
ಅದಕ್ಕಾಗಿಯೇ ಎಡಿಟರ್ಸ್ ಗಿಲ್ಡ್ ಪದೇ ಪದೇ “ಚಿಲ್ಲಿಂಗ್ ಎಫೆಕ್ಟ್”(ನಡುಕ ಹುಟ್ಟಿಸುವ ಪರಿಣಾಮ)ಎಂಬ ಪದಗುಚ್ಛವನ್ನು ಬಳಸುತ್ತಿದೆ. ಇದು ಲೇಖಕರು ಪ್ರಕಟಣೆಗೆ ಮುಂಚಿತವಾಗಿ ಸ್ವಯಂ-ಸೆನ್ಸಾರ್ ಮಾಡಿಕೊಳ್ಳುವ, ಸಂಪಾದಕರು ಮುದ್ರಣಕ್ಕೆ ಮುಂಚಿತವಾಗಿ ವರದಿಗಳನ್ನು ದುರ್ಬಲಗೊಳಿಸುವ ಮತ್ತು ಯಾವುದೇ ನ್ಯಾಯಾಲಯವು ಅದನ್ನು ಪರಿಶೀಲಿಸುವ ಮುನ್ನವೇ ಡಿಜಿಟಲ್ ಪ್ಲಾಟ್‌ಫಾರ್ಮ್ ಗಳು ಪೋಸ್ಟ್ ಗಳನ್ನು ತೆಗೆದುಹಾಕುವ ವ್ಯವಸ್ಥೆಯನ್ನು ವಿವರಿಸುತ್ತದೆ. ಇಂದು ನಿಷೇಧಗಳ ಮೂಲಕ ಅಲ್ಲ, ಬದಲಿಗೆ ಭಯದ ಮೂಲಕ ಸ್ವಾತಂತ್ರ‍್ಯದ ಹರಣಗಯ್ಯಲಾಗುತ್ತಿದೆ.
ಮಾಧ್ಯಮಕ್ಕೆ ರಕ್ಷಣೆಯಿಲ್ಲ.!
ವಂಚಕ ಕಂಪನಿಗಳ ಭೂ ಅವ್ಯವಹಾರಗಳು, ಒಪ್ಪಂದಗಳು ಅಥವಾ ಅಧಿಕಾರದ ದುರ್ಬಳಕೆ, ದೊಡ್ಡ ಪ್ರಮಾಣದ ಭ್ರಷ್ಟಾಚಾರಗಳಂತಹ ಅಪರಾಧಗಳನ್ನು ಬಯಲಿಗೆಳೆಯುವಾಗ ಸ್ವತಂತ್ರ ತನಿಖೆ ಮಾಡುವ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯಲ್ಲಿ ವೈಯಕ್ತಿಕ ಡೇಟಾವನ್ನು ಸಂಸ್ಕರಿಸುತ್ತಾರೆ. ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯಡಿ ಅಧಿಸೂಚಿತವಾಗಿರುವ ನಿಯಮಗಳು ಇವುಗಳ ಮೇಲೆ ನಿರ್ಬಂಧ ಹೇರುತ್ತವೆ. ಪತ್ರಿಕೋದ್ಯಮವನ್ನು ಅನಧಿಕೃತ “ಡೇಟಾ ಸಂಸ್ಕರಣೆ” ಎಂದು ಈಗ ಮರುವ್ಯಾಖ್ಯಾನಿಸಲಾಗುತ್ತದೆ. ಅಪರಾಧಗಳನ್ನು ಹೊರಗೆಳೆಯುವ ಕೆಲಸ ಮಾಡುವ ಪತ್ರಕರ್ತರನ್ನು ಹೊಸ ನಿಯಮಾವಳಿಗಳ ಹೆಸರಿನಲ್ಲಿ ದಂಡಿಸಲಾಗುತ್ತದೆ. ಸುದ್ದಿ ಸಂಗ್ರಹಣೆಯೇ ಕಾನೂನುಬದ್ಧವಾಗಿ ನಿಷಿದ್ಧವಾಗುತ್ತದೆ. ಪ್ರಜಾಪ್ರಭುತ್ವದ ತಿರುಳಿಗೆ ಇದು ಕಂಟಕ. ಡೇಟಾ ಗೌಪ್ಯತೆ ಅತ್ಯಗತ್ಯ, ಆದರೆ ಗೌಪ್ಯತೆಯ ಕಾನೂನು ನಾಗರಿಕರನ್ನು ಶೋಷಣೆಯಿಂದ ರಕ್ಷಿಸಬೇಕೇ ಹೊರತು ಅಧಿಕಾರದಲ್ಲಿರುವವರನ್ನು ಪರಿಶೀಲನೆಯಿಂದ ರಕ್ಷಿಸಬಾರದು.
ಅಭಿವ್ಯಕ್ತಿ ಸ್ವಾತಂತ್ರ‍್ಯ ರಕ್ಷಿಸಿ
ಬಲಶಾಲಿ ವ್ಯಕ್ತಿಗಳನ್ನು ತನಿಖೆ ಮಾಡಲು ಪತ್ರಕರ್ತರಿಗೆ ಅನುಮತಿಯ ಅಗತ್ಯವಿರುವ ಸಮಾಜವು ಮುಕ್ತ ಸಮಾಜವಲ್ಲ, ಬದಲಿಗೆ ಕತ್ತು ಹಿಸುಕುವ ಸಮಾಜವಾಗಿರುತ್ತದೆ. ನಿಯಂತ್ರಣ ಇರಬೇಕೇ ಅಥವಾ ಬೇಡವೇ ಎಂಬುದು ಇಲ್ಲಿ ವಿಷಯವಲ್ಲ. ನಿಯಂತ್ರಣವು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಖಾತರಿಪಡಿಸುತ್ತದೆಯೇ ಅಥವಾ ಅದನ್ನು ಸರ್ವಾಧಿಕಾರಿ ನಿಯಂತ್ರಣಕ್ಕೆ ಒಳಪಡಿಸುತ್ತದೆಯೇ ಎಂಬುದಾಗಿದೆ. ಪ್ರಜಾಪ್ರಭುತ್ವ ಸರ್ಕಾರವು ಪಾರದರ್ಶಕ ಕಾರ್ಯವಿಧಾನಗಳು, ಸ್ವತಂತ್ರ ಪರಿಶೀಲನೆ, ಕನಿಷ್ಠ ನಿರ್ಬಂಧಗಳು ಮತ್ತು ನ್ಯಾಯಾಂಗ ಮೇಲ್ವಿಚಾರಣೆಯ ಮೂಲಕ ಹಾನಿಗಳನ್ನು ನಿಯಂತ್ರಿಸುತ್ತದೆಯೇ ಹೊರತು ಅಸ್ಪಷ್ಟ ಶಾಸನಗಳು, ಅಪಾರದರ್ಶಕ ನಿರ್ದೇಶನಗಳು, ಅವಸರದಿಂದ ಕಂಟೆಂಟ್ ತೆಗೆದುಹಾಕುವುದರ ಮೂಲಕ ಮತ್ತು ನಾಗರಿಕರು ಏನನ್ನು ನೋಡಬೇಕು ಎಂದು ನಿರ್ಧರಿಸಲು ಸಚಿವಾಲಯಗಳಿಗೆ ಅಧಿಕಾರ ನೀಡುವುದರ ಮೂಲಕ ಅಲ್ಲ. ಎಡಿಟರ್ಸ್ ಗಿಲ್ಡ್ ನ ಬೇಡಿಕೆಗಳು ಸಮಂಜಸವಾಗಿವೆ ಹಾಗೂ ಪ್ರಜತಾಂತ್ರಿಕವಾಗಿವೆ.
ಮೊದಲನೆಯದಾಗಿ, ಅಪರೂಪದ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ, ಬಲವಂತದ ಕಂಟೆಂಟ್ ತೆಗೆದುಹಾಕುವ ಅಧಿಕಾರಗಳಿಗೆ ಸ್ವತಂತ್ರ ನ್ಯಾಯಾಂಗದ ಅನುಮತಿ ಅಗತ್ಯವಿರಬೇಕು.
ಎರಡನೆಯದಾಗಿ, ಯಾವುದೇ ವಿಷಯದ ಮೇಲಿನ ನಿರ್ಬಂಧವು ಪಾರದರ್ಶಕವಾಗಿರಬೇಕು, ಮೇಲ್ಮನವಿ ಸಲ್ಲಿಸಲು ಅವಕಾಶವಿರಬೇಕು ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ರಹಸ್ಯ ಸೆನ್ಸಾರ್‌ಶಿಪ್‌ಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ.
ಮೂರನೆಯದಾಗಿ, ಸಾರ್ವಜನಿಕ ಹಿತಾಸಕ್ತಿಯಲ್ಲಿ ವರದಿ ಮಾಡುವುದಕ್ಕಾಗಿ ಡೇಟಾ ಸಂರಕ್ಷಣಾ ಕಾನೂನಿನಡಿಯಲ್ಲಿ ಪತ್ರಿಕೋದ್ಯಮಕ್ಕೆ ಸ್ಪಷ್ಟ ವಿನಾಯಿತಿಗಳು ಸಿಗಬೇಕು.
ನಾಲ್ಕನೆಯದಾಗಿ, ಪ್ಲಾಟ್ಫಾರ್ಮ್ ಹೊಣೆಗಾರಿಕೆಯ ನಿಯಮಗಳು ಶಿಕ್ಷೆಯ ಭಯದ ಮೂಲಕ ಸಾರಾಸಗಟು ಸೆನ್ಸಾರ್‌ಶಿಪ್ ಮಾಡಲು ಪ್ರೇರೇಪಿಸಬಾರದು.
ಅಂತಿಮವಾಗಿ, ಎಲ್ಲಾ ಡಿಜಿಟಲ್ ನಿಯಂತ್ರಣಗಳು ಕಾರ್ಯಾಂಗದ ಫರ್ಮಾನುಗಳ ಮೂಲಕ ಬಾರದೆ, ಪತ್ರಕರ್ತರು, ನಾಗರಿಕ ಸಮಾಜ, ತಂತ್ರಜ್ಞರು ಮತ್ತು ಸಾಂವಿಧಾನಿಕ ತಜ್ಞರೊಂದಿಗೆ ನಡೆಸುವ ನೈಜ ಸಮಾಲೋಚನೆಯಿಂದ ರೂಪುಗೊಳ್ಳಬೇಕು.
ನಾವು ಸಹ ಈ ಕಾನೂನುಬದ್ಧ ಆಗ್ರಹಗಳನ್ನು ಬೆಂಬಲಿಸುತ್ತೇವೆ ಮತ್ತು ಪತ್ರಕರ್ತರ ಸಮುದಾಯವು ಎಲ್ಲಾ ಭಯಗಳನ್ನು ಮೆಟ್ಟಿ ನಿಂತು, ಧ್ವನಿಯನ್ನು ಅಡಗಿಸುವ ಇಂತಹ ಪ್ರಯತ್ನಗಳನ್ನು ಸೋಲಿಸಲು ಒಂದು ಒಗ್ಗಟ್ಟಿನ, ಪ್ರಬಲವಾದ, ನಿರಂತರವಾದ ಚಳುವಳಿಯನ್ನು ರೂಪಿಸಬೇಕೆಂದು ಕರೆ ನೀಡುತ್ತೇವೆ.
