ಭಾಗ III

ಕಾರ್ಮಿಕ ವರ್ಗದ ಕ್ರಾಂತಿಕಾರಿ ಪಕ್ಷದ ರಚನೆಗೆ ಮಾರ್ಗದರ್ಶನಗಳು

ಲೆನಿನ್ ಅವರ ಇನ್ನೊಂದು ಕ್ರಾಂತಿಕಾರಿ ಕಾಣಿಕೆ ಎಂದರೆ ನೈಜ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಲು ನೀಡಿದ ಮಾರ್ಗದರ್ಶನ. ಅಂತಹ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದವರಲ್ಲಿ ಅವರೇ ಮೊದಲಿಗರು. ಮಾರ್ಕ್ಸ್ ಮತ್ತು ಎಂಗೆಲ್ಸ್ ಅಂತಹ ಯಾವುದೇ ಮಾರ್ಗದರ್ಶನ ನೀಡಿರಲಿಲ್ಲ ಏಕೆಂದರೆ ಅವರ ಕಾಲದಲ್ಲಿ ಅಂತಹ ಅವಶ್ಯಕತೆಯೂ ಬಂದಿರಲಿಲ್ಲ. ಎರಡನೇ ಅಂತರರಾಷ್ಟ್ರೀಯದ ಪಕ್ಷಗಳು ಒಂದು ಗಟ್ಟಿಯಾದ ಸಂರಚನೆಯನ್ನು ಹೊಂದಿಲ್ಲದೆ ಇರುವಾಗ, ಲೆನಿನ್, ಪಕ್ಷವನ್ನು ಹೇಗೆ ಮಾನವ ಶರೀರದ ರಚನೆಯಂತೆ ಏಕಶಿಲಾ ಸ್ವರೂಪದಲ್ಲಿ, ಸುಸಂಬಂಧಿತವಾಗಿ, ಶಿಸ್ತುಬದ್ಧವಾಗಿ ಕಟ್ಟಬೇಕು ಎಂದು ತಿಳುವಳಿಕೆ ನೀಡಿದರು.

ಕ್ರಾಂತಿಕಾರಿ ಸಿದ್ಧಾಂತವಿಲ್ಲದೆ ಯಾವುದೇ ಕ್ರಾಂತಿ ಸಾಧ್ಯವಾಗದು ಎಂದು ಲೆನಿನ್ ಹೇಳಿದರೆ, ಅದನ್ನು ವಿಸ್ತರಿಸುತ್ತಾ ಕಾಮ್ರೇಡ್ ಶಿವದಾಸ್ ಘೋಷ್ ನಮಗೆ ಕಲಿಸಿದ್ದೇನೆಂದರೆ: “ಲೆನಿನ್ ಪ್ರಕಾರ, ಕ್ರಾಂತಿಕಾರಿ ಸಿದ್ಧಾಂತವೆಂದರೆ ಎಂದಿಗೂ ರಾಜಕೀಯ, ಆರ್ಥಿಕ ಸಿದ್ಧಾಂತ ಅಥವಾ ಕೇವಲ ಕ್ರಾಂತಿಯ ಘಟ್ಟ ಆಗಿರಲಿಲ್ಲ. ಕ್ರಾಂತಿಕಾರಿ ಪಕ್ಷವನ್ನು ಕಟ್ಟಲು ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡ ಸಮಾಜವಾದಿ ಚಳುವಳಿಯನ್ನು ಹರಿಬಿಡಬೇಕು. ಲೆನಿನ್‌ರಿಂದ ಕಲಿತಿದ್ದು ನಾವು ಈ ಪಾಠವನ್ನೇ ಮತ್ತು ಅದಕ್ಕಾಗಿಯೇ ನೈತಿಕತೆ, ನೀತಿ ಮತ್ತು ಚಾರಿತ್ರ್ಯ ಬೆಳೆಸುವುದಕ್ಕೆ ನಾವು ಅಷ್ಟೊಂದು ಒತ್ತು ಕೊಟ್ಟಿದ್ದೇವೆ.” ಇದೇ ಕ್ರಾಂತಿಕಾರಿ ಸಿದ್ಧಾಂತದ ಸರಿಯಾದ ಮತ್ತು ಸಮಗ್ರವಾದ ತಿಳುವಳಿಕೆ.

ಕೇವಲ ಕೆಲವು ಗುಂಪು ಕಟ್ಟಿಕೊಂಡು, ಸಭೆ ನಡೆಸಿ, ಗೊತ್ತುವಳಿ ಮಂಡಿಸಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಲಾಗದು ಎಂದ ಲೆನಿನ್, ಕ್ರಾಂತಿಕಾರಿ ಪಕ್ಷವನ್ನು ಕಟ್ಟಲು ಮುಂಬರುವವರು, ಮೊದಲು ಏಕರೂಪದ ಚಿಂತನೆಯನ್ನು ಬೆಳೆಸಿಕೊಳ್ಳಬೇಕು; ಆ ನಿಟ್ಟಿನಲ್ಲಿ ಎಲ್ಲರೂ ತಂತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಿಕೊಳ್ಳಬೇಕು; ನಂತರ, ತೀವ್ರವಾದ ವೈಚಾರಿಕ ಸಂಘರ್ಷವನ್ನು ನಡೆಸುವ ಪ್ರಕ್ರಿಯೆಯಲ್ಲಿ ಸರಿಯಾದ ಚಿಂತನೆ ಯಾವುದು ಎಂದು ಅರಿಯುತ್ತಾ, ಅದರ ಆಧಾರದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದರು. 

ಅವರು ಕ್ರಾಂತಿಕಾರಿ ಪಕ್ಷದಲ್ಲಿ ಒಂದು ಸಮರ್ಪಿತ ಕ್ರಾಂತಿಕಾರಿಗಳ ಪಡೆಯ ಅಗತ್ಯವನ್ನು ಎತ್ತಿ ಹಿಡಿದರು. ಯಾರಿಗೆ ಪಕ್ಷದ ಸಂಘಟನೆಯನ್ನು ಬೆಳೆಸುವುದೇ ಏಕೈಕ ಜವಾಬ್ದಾರಿಯಾಗಿರುತ್ತದೋ ಅವರೇ ಸಮರ್ಪಿತ ಕ್ರಾಂತಿಕಾರಿಗಳು. ಈ ಲೆನಿನ್‌ವಾದಿ ಪರಿಕಲ್ಪನೆಯನ್ನು ವಿಸ್ತರಿಸುತ್ತಾ, ಅಭಿವೃದ್ಧಿಪಡಿಸುತ್ತಾ ಮತ್ತು ಸಂಪತ್ಭರಿತಗೊಳಿಸುತ್ತಾ ಕಾಮ್ರೇಡ್ ಶಿವದಾಸ್ ಘೋಷ್ ತೋರಿಸಿಕೊಟ್ಟಿದ್ದೇನೆಂದರೆ, ಯಾರು ಭೌತಿಕ ಖಾಸಗಿ ಆಸ್ತಿಗಳನ್ನೆಲ್ಲಾ ಬಿಟ್ಟಿರುವುದಷ್ಟೇ ಅಲ್ಲದೆ, ಖಾಸಗಿ ಆಸ್ತಿಯ ಮನೋಸಂಕೀರ್ಣದಿಂದಲೂ ಮುಕ್ತರಾಗಿರುತ್ತಾರೋ ಮತ್ತು ಯಾರ ವೈಯಕ್ತಿಕ ಹಿತಾಸಕ್ತಿಯು ಕಾರ್ಮಿಕ ವರ್ಗದ ಮತ್ತು ಕಾರ್ಮಿಕ ವರ್ಗ ಪಕ್ಷದ ಹಿತಾಸಕ್ತಿಯೊಂದಿಗೆ ಐಕ್ಯಗೊಂಡಿರುತ್ತದೆಯೋ ಅವರೇ ಸಮರ್ಪಿತ ಕ್ರಾಂತಿಕಾರಿಗಳು. ಹೀಗೆ ಲೆನಿನ್‌ವಾದಿ ಪರಿಕಲ್ಪನೆಯನ್ನು ಕಾಮ್ರೇಡ್ ಶಿವದಾಸ್ ಘೋಷ್ ಹೊಸ ಎತ್ತರಕ್ಕೆ ಕೊಂಡೊಯ್ದರು.

ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ವರ್ಗದ ಮುಂಚೂಣಿ ಪಡೆ

ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ವರ್ಗದ ಮುಂಚೂಣಿ ಪಡೆ ಎಂದು ಲೆನಿನ್ ಹೇಳಿದರು. ಕಾರ್ಮಿಕ ಸಂಘ ಮತ್ತು ಪಕ್ಷವು ಒಂದೇ ಅಲ್ಲ. ಕಾರ್ಮಿಕರ ವೇತನಗಳನ್ನು ಏರಿಸಲು, ದುಡಿಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಕಾರ್ಮಿಕ ವರ್ಗದ ಪರವಾಗಿರುವ ಕಾಯಿದೆಗಳನ್ನು ರೂಪಿಸಲು ಬಂಡವಾಳಶಾಹಿ ಮಾಲೀಕರ ವಿರುದ್ಧ ಹೋರಾಡುವುದು ಕಾರ್ಮಿಕ ಸಂಘಗಳ ಕೆಲಸ. ಕ್ರಾಂತಿಕಾರಿ ರಾಜಕೀಯವಿಲ್ಲದ ಕಾರ್ಮಿಕ ಸಂಘವಾದವು ಬೂರ್ಜ್ವಾ ರಾಜಕೀಯ ಎಂದವರು ಹೇಳಿದರು. ಆದ್ದರಿಂದ ಸ್ವತ: ಕಾರ್ಮಿಕ ಸಂಘಗಳೇ ಕಾರ್ಮಿಕರ ಮಧ್ಯೆ ಕ್ರಾಂತಿಕಾರಿ ಪ್ರಜ್ಞೆಯನ್ನು ಬಿತ್ತುವುದಿಲ್ಲ. ಪಕ್ಷವು ಕಾರ್ಮಿಕ ವರ್ಗದ ಮುಂಚೂಣಿ ಪಡೆಯಾಗಿರುತ್ತದೆ ಎಂದವರು ವಿವರಿಸಿದರು. ಕಾರ್ಮಿಕ ವರ್ಗಕ್ಕೆ ಕ್ರಾಂತಿಕಾರಿ ನಾಯಕತ್ವವನ್ನು ಕೊಡುವುದೇ ಪಕ್ಷದ ಜವಾಬ್ದಾರಿ. ಪೆಟಿ ಬೂರ್ಜ್ವಾ ಜೀವನದಿಂದ ಬೇರ್ಪಟ್ಟ, ಕಾರ್ಮಿಕವರ್ಗ ಕ್ರಾಂತಿಯೊಂದಿಗೆ ತಮ್ಮನ್ನು ವಿಲೀನಗೊಳಿಸಿಕೊಂಡ ಬುದ್ಧಿಜೀವಿಗಳು ಕಾರ್ಮಿಕರಿಗೆ ಕ್ರಾಂತಿಕಾರಿ ರಾಜಕೀಯದ ತಿಳುವಳಿಕೆ ನೀಡುತ್ತಾರೆ. ಹೀಗೆ ಪಕ್ಷವು ಕಾರ್ಮಿಕರ ಅನೇಕ ಸಂಘಗಳ ಮುಂಚೂಣಿ ಪಡೆಯಾಗಿರುತ್ತದೆ ಎಂದವರು ವಿವರಿಸಿದರು. 

ಸಾಮೂಹಿಕ ನಾಯಕತ್ವದ ಆಧಾರದಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯವಿಧಾನ 

ಕ್ರಾಂತಿಕಾರಿ ಪಕ್ಷವು ಪ್ರಜಾತಾಂತ್ರಿಕ ಕೇಂದ್ರೀಯತೆಯ ಮೇಲೆ ಬೆಳೆಯುತ್ತದೆ ಎಂದು ಲೆನಿನ್ ತೋರಿಸಿಕೊಟ್ಟರು. ಅದನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತಾ ಅವರು ಹೇಳಿದರು: “ಕಮ್ಯುನಿಸ್ಟ್ ಪಕ್ಷದ ಸಂಘಟನೆಯಲ್ಲಿ ಪ್ರಜಾತಾಂತ್ರಿಕ ಕೇಂದ್ರೀಯತೆಯು, ಕೇಂದ್ರೀಯತೆ ಮತ್ತು ಕಾರ್ಮಿಕ ವರ್ಗದ ಪ್ರಜಾಪ್ರಭುತ್ವದ ಬೆಸುಗೆಯಾಗಬೇಕು, ನಿಜವಾದ ಸಮನ್ವಯವಾಗಬೇಕು. ಈ ಬೆಸುಗೆಯನ್ನು ಇಡೀ ಪಕ್ಷದ ಸಂಘಟನೆಯ ನಿರಂತರ ಸಮಾನ ಕಾರ್ಯಶೀಲತೆ, ನಿರಂತರ ಸಮಾನ ಸಂಘರ್ಷಗಳ ಆಧಾರದ ಮೇಲೆ ಮಾತ್ರ ಸಾಧಿಸಲು ಸಾಧ್ಯ….” ಈ ಕೇಂದ್ರೀಯತೆಯ ಅರ್ಥ ಔಪಚಾರಿಕ ಮತ್ತು ಯಾಂತ್ರಿಕ ಕೇಂದ್ರೀಯತೆ ಅಲ್ಲ. ಅದು ಕಾರ್ಯಕರ್ತರ ಮೇಲೆ ಪ್ರಾಬಲ್ಯ ಸಾಧಿಸುವ ಅಧಿಕಾರಶಾಹಿಗೆ ಜನ್ಮ ನೀಡುತ್ತದೆ. ಪಕ್ಷದಲ್ಲಿ ಪ್ರಜಾತಾಂತ್ರಿಕ ಕೇಂದ್ರೀಯತೆ ಬೆಳೆದರೆ, ಅಲ್ಲಿ ಅಧಿಕಾರಕ್ಕಾಗಿಯ ಮೇಲಾಟವಾಗಲೀ, ನಾಯಕತ್ವವನ್ನು ಕಬಳಿಸುವ ಆಕಾಂಕ್ಷೆಯಾಗಲೀ ಇರುವುದಿಲ್ಲ. ಬದಲಿಗೆ, ಅಧಿಕಾರಶಾಹಿ ನಾಯಕತ್ವವಿದ್ದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಅಶಿಸ್ತಿನ ನಡವಳಿಕೆ ಮತ್ತು ಅರಾಜಕತೆಗಳ ಮಾನಸಿಕತೆ ಬೆಳೆಯುತ್ತದೆ  

ಲೆನಿನ್‌ವಾದಿ ಸೂತ್ರಗಳ ಆಧಾರದ ಮೇಲೆ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವನ್ನು ಕಟ್ಟುವ ಪ್ರಯಾಸಕರ ಪ್ರಯತ್ನದಲ್ಲಿ ಕಾಮ್ರೇಡ್ ಶಿವದಾಸ್ ಘೋಷ್, ಈ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಾ, ಸಂಪತ್ಭರಿತಗೊಳಿಸುತ್ತಾ ಹೇಳಿದರು: “…ಪಕ್ಷವನ್ನು ಕಟ್ಟಲು ಮುಂದೆ ಬಂದವರು ಮೊದಲು ದ್ವಂದ್ವಾತ್ಮಕ ವಸ್ತುವಾದದ ಆಧಾರದ ಮೇಲೆ ಸಮಾಜವಾದಿ ಚಳುವಳಿಯನ್ನು ನಡೆಸುವ ಮೂಲಕ ತಮ್ಮ ಮಧ್ಯದಲ್ಲೇ ವೈಚಾರಿಕ ಕೇಂದ್ರೀಯತೆಗೆ ಅಡಿಪಾಯವನ್ನು ಹಾಕಬೇಕು; ಈ ಸಮಾಜವಾದಿ ಚಳುವಳಿಯು ಅವರ ವೈಯಕ್ತಿಕ ಜೀವನದ ಅತಿ ಸೂಕ್ಷ್ಮ ವಿವರಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿರಬೇಕು.” ಎಲ್ಲವನ್ನು ಒಳಗೊಂಡ ಈ ಸಂಘರ್ಷವನ್ನು ನಡೆಸುವ ಗತಿಯಲ್ಲಿ ಸಾಮೂಹಿಕ ನಾಯಕತ್ವದ ಅತ್ಯುತ್ತಮ ಅಭಿವ್ಯಕ್ತಿಯು ವ್ಯಕ್ತಿಯೊಬ್ಬರಲ್ಲಿ ಸಾಕಾರಗೊಂಡಾಗ ಅವರು ಪಕ್ಷದ ಅತ್ಯುನ್ನತ ನಾಯಕರಾಗಿ ಹೊರಹೊಮ್ಮುತ್ತಾರೆ. ಇದೇ ಸಾಮೂಹಿಕ ನಾಯಕತ್ವ. ಮಾರ್ಕ್ಸ್ ಮತ್ತು ಎಂಗೆಲ್ಸ್ ನಂತರದಲ್ಲಿ, ರಷ್ಯಾದ ಬೊಲ್ಷೆವಿಕ್ ಪಕ್ಷದಲ್ಲಿ ಲೆನಿನ್ ಅಥವಾ ಚೀನಾದ ಕಮ್ಯುನಿಸ್ಟ್ ಪಕ್ಷದಲ್ಲಿ ಮಾವೋ, ಇವರು ಹೊರಹೊಮ್ಮಿದ್ದು ಈ ಪಕ್ಷಗಳಲ್ಲಿನ ಸಾಮೂಹಿಕ ನಾಯಕತ್ವದ ನಿರ್ದಿಷ್ಟ ಅಭಿವ್ಯಕ್ತಿಯಾಗಿ. ಕಾ. ಶಿವದಾಸ್ ಘೋಷ್ ವಿವರಿಸಿದಂತೆ, ಔಪಚಾರಿಕ ಪ್ರಜಾತಂತ್ರ ಅಥವಾ ಬೂರ್ಜ್ವಾ ಪ್ರಜಾತಂತ್ರ, ವ್ಯಕ್ತಿಗತ ಒಡೆತನದ ಮೇಲೆ ಆಧಾರಿತವಾಗಿರುವುದರಿಂದ, ಅಲ್ಲಿ ಪ್ರಜಾತಂತ್ರದ ಹೆಸರಿನಲ್ಲಿ ಇರುವುದು ಒಬ್ಬರ ಅಥವಾ ಹಲವರ ನಾಯಕತ್ವ. ಆದರೆ, ಕಾರ್ಮಿಕವರ್ಗದ ಪ್ರಜಾತಂತ್ರದಲ್ಲಿ ಇರುವುದು ಸಾಮೂಹಿಕ ನಾಯಕತ್ವ ಮತ್ತು ಅದು ಓರ್ವ ನಾಯಕರಲ್ಲಿ ಸಾಕಾರಗೊಂಡು ಅಭಿವ್ಯಕ್ತವಾಗುತ್ತದೆ.  

“… ಮಾರ್ಕ್ಸ್‌ವಾದ - ಲೆನಿನ್‌ವಾದ ಮತ್ತು ದ್ವಂದ್ವಾತ್ಮಕ ವಸ್ತುವಾದಗಳ ಆಧಾರದಲ್ಲಿ ಕೇವಲ ಆರ್ಥಿಕ ಮತ್ತು ರಾಜಕೀಯ ವಿಷಯಗಳಲ್ಲಷ್ಟೇ ಅಲ್ಲದೆ ಜೀವನದ ಎಲ್ಲಾ ಅಂಶಗಳನ್ನೂ ಒಳಗೊಂಡ ವಿಷಯಗಳಲ್ಲಿ ಏಕ ಚಿಂತನಾ ಪ್ರಕ್ರಿಯೆ, ಚಿಂತನೆಯಲ್ಲಿ ಏಕರೂಪತೆ, ಧೋರಣೆಯಲ್ಲಿ ಏಕತೆ ಮತ್ತು ಒಂದೇ ಉದ್ದೇಶ -ಇವುಗಳನ್ನು ಬೆಳೆಸುವ ಸಂಘರ್ಷದಲ್ಲಿ ವೈಚಾರಿಕ ಕೇಂದ್ರೀಯತೆಯು ಬೆಳೆಯುತ್ತದೆ” ಎಂದು ಕಾ. ಶಿವದಾಸ್ ಘೋಷ್ ತೋರಿಸಿಕೊಟ್ಟರು. ಈ ವೈಚಾರಿಕ ಕೇಂದ್ರೀಯತೆಯ ಆಧಾರದಲ್ಲಿ ಕೆಳಹಂತದಿಂದ ಮೇಲಿನವರೆಗೂ ಸಂಘಟನಾತ್ಮಕ ಕೇಂದ್ರೀಯತೆಯನ್ನು ಬೆಳೆಸಿದಾಗ, ಅದನ್ನೇ ಪ್ರಜಾತಾಂತ್ರಿಕ ಕೇಂದ್ರೀಯತೆ ಎಂದು ಕರೆಯುವುದು. ವೈಚಾರಿಕ ಕೇಂದ್ರೀಯತೆ ಮತ್ತು ಸಂಘಟನಾತ್ಮಕ ಕೇಂದ್ರೀಯತೆಗಳ ಬೆಸುಗೆಯೇ ಪ್ರಜಾತಾಂತ್ರಿಕ ಕೇಂದ್ರೀಯತೆ. ಈ ಆಧಾರದಲ್ಲಿಯೇ ಕಾ. ಶಿವದಾಸ್ ಘೋಷ್‌ರವರು ಎಸ್‌ಯುಸಿಐ(ಸಿ) ಪಕ್ಷವನ್ನು ಸ್ಥಾಪಿಸಿದ್ದು. 

ಲೆನಿನ್‌ರವರು ಕೊಟ್ಟಂತಹ ಇನ್ನೂ ಹೆಚ್ಚಿನ ತಿಳುವಳಿಕೆಯೆಂದರೆ: ಕ್ರಾಂತಿಕಾರಿಯಾದವರು ಯಾವುದೇ ಅನ್ಯಾಯ, ದಮನದ ವಿರುದ್ಧ ಪ್ರತಿಭಟಿಸಬೇಕು; ದೇಶದಲ್ಲಿ ನಡೆಯುವ ಯಾವುದೇ ಘಟನೆಯನ್ನು ಮಾರ್ಕ್ಸ್ ವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಬೇಕು, ಅದರಲ್ಲಿ ಬೂರ್ಜ್ವಾಸಿಗಳ ಸಾಮಾಜಿಕ-ರಾಜಕೀಯ ಪಾತ್ರವನ್ನು ಗುರುತಿಸಬೇಕು, ಅವರ ಬಲಾಬಲಗಳನ್ನು ಅವಲೋಕಿಸಬೇಕು, ಜನರನ್ನು ಅವರು ಮೋಸಗೊಳಿಸುವ ಬಗೆ, ಅವರ ಕಾನೂನುಗಳು ಯಾವ ವರ್ಗದ ಪರವಾಗಿವೆ, ಮುಂತಾದವುಗಳನ್ನು ತಿಳಿದುಕೊಂಡಿರಬೇಕು. ಜೊತೆಗೆ ಕ್ರಾಂತಿಕಾರಿಗಳು ಜನರು ಏನು ಯೋಚಿಸುತ್ತಿದ್ದಾರೆ ಎಂದು ತಿಳಿಯುವ ಕಲೆಯನ್ನೂ ಕಲಿಯಬೇಕು. ಎಲ್ಲೆಲ್ಲಿ ಜನ ಇರುತ್ತಾರೋ, ಅಂತಹ ಸಂಸ್ಥೆಗಳಲ್ಲಿ, ಕಾರ್ಮಿಕ ಸಂಘಗಳಲ್ಲಿ, ಕ್ಲಬ್‌ಗಳಲ್ಲಿ ಕ್ರಾಂತಿಕಾರಿಗಳು ಕಾರ್ಯಶೀಲರಾಗಬೇಕು. ಪ್ರತಿಗಾಮಿ ಕಾರ್ಮಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿ, ಕಾರ್ಮಿಕರನ್ನು ಗೆದ್ದುಕೊಂಡು, ಪ್ರತಿಗಾಮಿ ನಾಯಕತ್ವವನ್ನು ಪ್ರತ್ಯೇಕಿಸಬೇಕು. 

ಪಾರ್ಲಿಮೆಂಟರಿ ಚುನಾವಣೆಯ ಕುರಿತು 

ಉಗ್ರ ಎಡವಾದಿಗಳು ಸಂಸತ್ತನ್ನು ಬಹಿಷ್ಕರಿಸಲು ಕರೆ ನೀಡುತ್ತಿವೆ. ಅವರ ಪ್ರಕಾರ ಪಾರ್ಲಿಮೆಂಟ್ ನಿರುಪಯೋಗಿಯಾಗಿದೆ, ಚಾರಿತ್ರಿಕವಾಗಿ ಅದರದ್ದು ಮುಗಿದ ಕಥೆ. ಲೆನಿನ್ ತೋರಿಸಿಕೊಟ್ಟಿದ್ದೇನೆಂದರೆ: “ವಿಶ್ವ ಚರಿತ್ರೆಯ ದೃಷ್ಟಿಯಿಂದ ನೋಡಿದರೆ ಪಾರ್ಲಿಮೆಂಟರಿವಾದವು ಚಾರಿತ್ರಿಕವಾಗಿ ಮುಗಿದ ಕಥೆ, ಅಂದರೆ, ಬೂರ್ಜ್ವಾ ಪಾರ್ಲಿಮೆಂಟರಿವಾದದ ಯುಗ ಅಂತ್ಯವಾಗಿದೆ ಮತ್ತು ಕಾರ್ಮಿಕ ವರ್ಗದ ಪರಮಾಧಿಕಾರದ ಯುಗವು ಆರಂಭವಾಗಿದೆ. ಇದು ನಿರ್ವಿವಾದ… ಆದರೆ ಸ್ಪಷ್ಟವಾಗಿ ಇದೇ ಕಾರಣದಿಂದ ವಿಶ್ವ ಇತಿಹಾಸದ ಮಾನದಂಡವನ್ನು ದಿನನಿತ್ಯದ ರಾಜಕೀಯಕ್ಕೆ ಅಳವಡಿಸುವುದು ಘನಘೋರ ಸೈದ್ಧಾಂತಿಕ ತಪ್ಪು… ಕಾರ್ಮಿಕ ವರ್ಗದ ‘ಲಕ್ಷಾಂತರ ಜನ’ ಮತ್ತು ‘ಜನ ಸಮೂಹಗಳೇ’ ಸಾಮಾನ್ಯವಾಗಿ ಇನ್ನೂ ಪಾರ್ಲಿಮೆಂಟರಿವಾದ ಪರವಾಗಿದ್ದಾಗ “ಪಾರ್ಲಿಮೆಂಟರಿವಾದವು ರಾಜಕೀಯವಾಗಿ ಮುಗಿದ ಕಥೆ” ಎಂದು ಹೇಗೆ ಹೇಳುವುದು… ನಾವು ನಮಗೆ ಮುಗಿದ ಕಥೆಯಾದುದನ್ನು ವರ್ಗಕ್ಕೆ ಮುಗಿದ ಕಥೆ ಎಂದು, ಜನರಿಗೆ ಮುಗಿದ ಕಥೆ ಎಂದು ಪರಿಗಣಿಸಬಾರದು.” ಸಂಸತ್ ಮೂಲಕ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಜನರಿಗೆ ಕ್ರಾಂತಿಕಾರಿಗಳು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುವ ತನಕ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಬೊಲ್ಷೆವಿಕರು, ರಷ್ಯಾದ ಬೂರ್ಜ್ವಾ ಸಂಸತ್ ಚುನಾವಣೆಯಲ್ಲಿ ಮತ್ತು ಸೆಪ್ಟೆಂಬರ್ ಸಂವಿಧಾನ ರಚನಾ ಸಭೆಯ ಚುನಾವಣೆಯಲ್ಲಿ 1917 ರಲ್ಲಿ ಹಾಗೂ 1918ರವರೆಗೂ ಭಾಗವಹಿಸಿದ್ದರ ಬಗ್ಗೆ ಲೆನಿನ್ ಹೇಳಿದ್ದರು.

ಕ್ರಾಂತಿಯ ರಣನೀತಿ ಮತ್ತು ರಣತಂತ್ರ ಸರಿಯಾಗಿದ್ದರೆ ಸಾಲದು, ಜನರು ಸಹ ತಮ್ಮ ಸ್ವಂತ ಅನುಭವದಿಂದಲೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಲೆನಿನ್ ಹೇಳಿದ್ದರು. ಕಾರ್ಮಿಕವರ್ಗ, ಅರೆ ಕಾರ್ಮಿಕವರ್ಗ, ಮತ್ತು ದಮನಕ್ಕೊಳಗಾಗಿರುವ ಇತರ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ ಅವರನ್ನು ಸಂಘಟಿಸಬೇಕು ಎಂದಿದ್ದರು. ಜೊತೆಗೆ, ನೈಜ ಕಮ್ಯುನಿಸ್ಟ್ ಪಕ್ಷವೊಂದು ತಾನು ಮಾಡಿರುವ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡು ಅದರ ನಿವಾರಣೆಗೆ ಕೈಗೊಂಡಿರುವ ಕ್ರಮದ ಬಗ್ಗೆಯೂ ಹೇಳುತ್ತದೆ ಎಂದು ಲೆನಿನ್ ವಿವರಿಸಿದ್ದರು.

ಮಾನವ ಕುಲವು ಐತಿಹಾಸಿಕ ಸಂಘರ್ಷಗಳ ಮೂಲಕ ಯುಗಗಳಿಂದ ಒಗ್ಗೂಡಿಸಿದ ಜ್ಞಾನ ಭಂಡಾರದಿಂದ ಹೊರಹೊಮ್ಮಿರುವ ಮಾರ್ಕ್ಸ್ ವಾದವು ಸಾಮಾಜಿಕ ಬೆಳವಣಿಗೆಯ ಇತಿಹಾಸದಲ್ಲಿನ ಅತ್ಯಂತ ಉನ್ನತ ವೈಚಾರಿಕತೆಯಾಗಿದೆ; ಇದನ್ನು ಕ್ರಾಂತಿಕಾರಿಗಳು ಅಧ್ಯಯನ ಮಾಡಬೇಕು ಎಂದು ಲೆನಿನ್ ಕರೆ ನೀಡಿದ್ದರು.

ಸಮಾಜವಾದಿ ಶಿಬಿರದ ಅನುಪಸ್ಥಿತಿ ಸಾಮ್ರಾಜ್ಯವಾದಕ್ಕೆ ಇಲ್ಲ ಲಂಗು ಲಗಾಮು!

ಇಂದು ಸೋವಿಯತ್ ಒಕ್ಕೂಟವಾಗಲಿ ಅಥವಾ ಸಮಾಜವಾದಿ ಶಿಬಿರವಾಗಲಿ ಇಲ್ಲ. ಅವುಗಳ ಅನುಪಸ್ಥಿತಿಯಲ್ಲಿ ಲಂಗು ಲಗಾಮಿಲ್ಲದ ಸಾಮ್ರಾಜ್ಯಶಾಹಿ ಶಕ್ತಿಗಳು ವಿಶ್ವಸಂಸ್ಥೆಯ ಆದೇಶಗಳನ್ನೆಲ್ಲಾ ಉಲ್ಲಂಘಿಸುತ್ತಿವೆ. ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಸಂಹಿತೆಗಳನ್ನು ಹೊಸಕಿ ಹಾಕುತ್ತಿವೆ. ಮನಸೋಇಚ್ಛೆ ಮಿಲಿಟರಿ ದಾಳಿ ನಡೆಸುತ್ತಾ ಬೇರೆ ದೇಶಗಳ ಸ್ವಾತಂತ್ರ‍್ಯ ಮತ್ತು ಸಾರ್ವಭೌಮತ್ವಕ್ಕೆ ಅಪಾರ ಬೆದರಿಕೆಗಳನ್ನು ಒಡ್ಡುತ್ತಿವೆ. ಆದ್ದರಿಂದ ಇಡೀ ಪ್ರಪಂಚವೇ ಮಹಾ ಅಪಾಯಕ್ಕೆ ಎದುರಾಗಿದೆ. ಇನ್ನೊಂದೆಡೆ, ಪ್ರತಿಕ್ರಾಂತಿಯ ಬಳಿಕ ಸಮಾಜವಾದಿ ಚೀನಾ ಪ್ರಬಲ ಸಾಮ್ರಾಜ್ಯಶಾಹಿ ಶಕ್ತಿಯಾಗಿ ಹೊರಹೊಮ್ಮಿದ್ದು ಅಮೆರಿಕಾಗೆ ಸಡ್ಡು ಹೊಡೆಯುತ್ತಿದೆ. ಭಾರತವೂ ಸಾಮ್ರಾಜ್ಯಶಾಹಿ ಗುಣಲಕ್ಷಣಗಳನ್ನು ಪಡೆದಿದ್ದು ಅಮೆರಿಕಾ, ಚೀನಾ, ಯುರೋಪು ಮತ್ತು ರಷ್ಯಾದ ಸಾಮ್ರಾಜ್ಯಶಾಹಿಗಳೊಂದಿಗೆ ಕೈ ಜೋಡಿಸುತ್ತಿದೆ.

ಮತ್ತೊಂದು ಕಡೆ, ಅಮೆರಿಕಾ ಕೂಡ ಸೇರಿದಂತೆ ಇಡೀ ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ಪ್ರಪಂಚವು ಏರುತ್ತಿರುವ, ತೀವ್ರವಾದ ಮತ್ತು ಬಗೆಹರಿಯದ ಬಿಕ್ಕಟ್ಟಿನಿಂದ ಕೂಡಿದೆ. ಅವುಗಳಿಗೆ ಯಾವುದೇ ಪರಿಹಾರ ಕಂಡು ಬರುತ್ತಿಲ್ಲ. ದುಡಿಯುವ ಜನತೆಯ ಪ್ರತಿಭಟನಾ ಪ್ರದರ್ಶನಗಳು ಉಕ್ಕಿ ಹರಿಯುತ್ತಿವೆ. ಅಮೆರಿಕದಲ್ಲಿ ಕೆಲವು ವರ್ಷಗಳ ಹಿಂದೆ ‘ವಾಲ್ ಸ್ಟ್ರೀಟ್ ಆಕ್ರಮಿಸಿ’ ಚಳುವಳಿಯು ಉದ್ಭವವಾಗಿತ್ತು. ಕೆಲವು ದಿನಗಳ ಹಿಂದೆ ‘ರಾಜ ಬೇಡ’ ಚಳುವಳಿಯು ಇಡೀ ಅಮೆರಿಕಾದಲ್ಲಿ ಕೋಲಾಹಲ ಎಬ್ಬಿಸಿತು. ಅದರ ಅರ್ಥ ಟ್ರಂಪ್ ಎನ್ನುವ ‘ರಾಜ’ ಬೇಕಾಗಿಲ್ಲ ಎಂದು. ಟ್ರಂಪ್ ಸಾಮ್ರಾಜ್ಯವಾದದ ಏಜೆಂಟ್ ಆಗಿದ್ದರಿಂದ ಅವನ ವಿರುದ್ಧ ಘೋಷಣೆಯೆದ್ದಿತು. ವಿವಿಧ ದೇಶಗಳಲ್ಲಿ ತಮ್ಮ ಆಳ್ವಿಕರ ವಿರುದ್ಧ ಅದೇ ರೀತಿಯ ಪ್ರತಿಭಟನೆಗಳು ಭುಗಿಲೇಳುತ್ತಿವೆ. ಅಭಿವೃದ್ಧಿ ಹೊಂದಿದ ಸಾಮ್ರಾಜ್ಯಶಾಹಿ ರಾಷ್ಟ್ರಗಳಲ್ಲಿ ಕ್ರಾಂತಿಗೆ ವಸ್ತು ಪರಿಸ್ಥಿತಿ ಪಕ್ವವಾಗಿದೆ. ಆದರೆ ಜನರ ಮನಸ್ಸು ಇನ್ನೂ ಪಕ್ವವಾಗಿಲ್ಲ, ಅಂದರೆ ಕ್ರಾಂತಿಕಾರಿ ಸಿದ್ಧಾಂತ ಅಥವಾ ಕ್ರಾಂತಿಕಾರಿ ಪಕ್ಷ ಒಂದೋ ಅಸ್ತಿತ್ವದಲ್ಲಿಲ್ಲ ಅಥವಾ ದುರ್ಬಲವಾಗಿದೆ.

 ಸಮಾಜವಾದವೊಂದೇ ಮಾನವ ನಾಗರಿಕತೆಯ ರಕ್ಷಕ

ವಿಶ್ವದ ಪ್ರಥಮ ಸಮಾಜವಾದಿ ರಾಷ್ಟ್ರವನ್ನು ಲೆನಿನ್ ಸ್ಥಾಪಿಸಿದ ನಂತರ, ಅವರ ಯೋಗ್ಯ ಶಿಷ್ಯರಾದ ಸ್ಟಾಲಿನ್ ಅದನ್ನು ಬಲಿಷ್ಠಗೊಳಿಸಿದರು. ಎರಡನೇ ವಿಶ್ವಯುದ್ಧ ಕಾಲದಲ್ಲಿ ಇಡೀ ಜಗತ್ತನ್ನು ಫ್ಯಾಸೀವಾದಿ ದಾಳಿಯಿಂದ ರಕ್ಷಿಸಿದ್ದು ಸೋವಿಯತ್ ಒಕ್ಕೂಟವೇ. ಜೊತೆಗೆ ಅನೇಕ ಪೂರ್ವ ಯುರೋಪಿನ ದೇಶಗಳಲ್ಲಿ ಸಹ ಸಮಾಜವಾದ ಸ್ಥಾಪನೆಯಾಯಿತು. ಹಾಗೆಯೇ, ಮಾವೊ ಜೆ಼ ಡಾಂಗ್‌ರವರ ನೇತೃತ್ವದಲ್ಲಿ ಚೀನಾ ಸಮಾಜವಾದಿಯಾಯಿತು. ಈ ಸಮಾಜವಾದಿ ಬಣದ ಉಪಸ್ಥಿತಿ ಸಾಮ್ರಾಜ್ಯಶಾಹಿಗಳಿಗೆ ಸಿಂಹಸ್ವಪ್ನವಾಗಿತ್ತು. ಆದರೆ ಈಗ, ಇವೆಲ್ಲಾ ದೇಶಗಳಲ್ಲಿ ಪ್ರತಿಕ್ರಾಂತಿ ನಡೆದು ಸಮಾಜವಾದ ಪತನಗೊಂಡ ಬಳಿಕ ಸಾಮ್ರಾಜ್ಯಶಾಹಿಗಳ ದಾಳಿಗಳಿಗೆ ಎದುರಾಳಿಯೇ ಇಲ್ಲದಂತಾಗಿದೆ.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಕ್ರಾಂತಿಕಾರಿ ಎಡವಾದವನ್ನು ಪ್ರತಿನಿಧಿಸುತ್ತದೆ 

ವಿವಿಧ ದೇಶಗಳ ಜನರು ಕ್ರಾಂತಿಕಾರಿ ಸಮರಕ್ಕೆ ಸಿದ್ಧರಾಗಿದ್ದಾರೆ. ಅವರು ಸಂಘರ್ಷದಲ್ಲಿ ನಿರತರಾಗಿದ್ದಾರೆ. 3 ವರ್ಷಗಳ ಹಿಂದೆ ದೆಹಲಿಯಲ್ಲಿನ ಐತಿಹಾಸಿಕ ರೈತ ಹೋರಾಟದಲ್ಲಿ 700 ರೈತರು ಹುತಾತ್ಮರಾಗಿದ್ದರು; ನಾವೂ ಸಹ ನಮ್ಮೆಲ್ಲ ಶಕ್ತಿಯೊಡನೆ ಆ ಹೋರಾಟದ ಭಾಗವಾಗಿದ್ದೆವು. ಆದರೆ, ದೇಶದಲ್ಲಿ ಸಿಪಿಐ (ಎಂ) ಮತ್ತು ಸಿಪಿಐ ಪಕ್ಷಗಳು ಬಹಳ ಕಾಲದಿಂದ ಹೋರಾಟದ ಕಣದಲ್ಲೇ ಇಲ್ಲ. ಅವರ ಏಕೈಕ ಗುರಿಯೆಂದರೆ, ಚುನಾವಣೆಯಲ್ಲಿ ಹೇಗಾದರೂ ಮಾಡಿ ಕೆಲವು ಸೀಟುಗಳನ್ನು ಗಿಟ್ಟಿಸಿಕೊಳ್ಳುವುದಷ್ಟೇ. ಹಾಗಾಗಿ ಎಡಪಂಥೀಯರು ಎನಿಸಿಕೊಂಡ ಈ ಪಕ್ಷಗಳು ರಾಜೀವಾದಿಗಳು; ನಮ್ಮ ಪಕ್ಷ ಎಸ್‌ಯುಸಿಐ(ಸಿ) ಮಾತ್ರವೇ ಕ್ರಾಂತಿಕಾರಿ ಎಡಪಂಥೀಯತೆಯನ್ನು ಪ್ರತಿನಿಧಿಸುತ್ತದೆ. ನಾವು ದೇಶಾದ್ಯಂತ ಹೋರಾಟಗಳನ್ನು ಕಟ್ಟುತ್ತಿದ್ದೇವೆ; ಈ ನಿಟ್ಟಿನಲ್ಲಿ ನಮ್ಮ ಸಂಘಟನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕ. ಆದರೆ, ಕೇವಲ ಸಂಖ್ಯಾಬಲವೊಂದೇ ಸಾಲದು. ಉನ್ನತ ಕಾರ್ಮಿಕವರ್ಗದ ಚಾರಿತ್ರ್ಯ ಹಾಗೂ ವೈಜ್ಞಾನಿಕ ವಿವೇಚನೆ ಮತ್ತು ತರ್ಕದ ಸಾಕಾರ ರೂಪಗಳಾದ ಕಾರ್ಯಕರ್ತರು, ಕ್ರಾಂತಿಗಾಗಿ ಎಲ್ಲವನ್ನೂ ತೊರೆದವರು, ಎಲ್ಲೆಡೆ ಎಲ್ಲಾ ಸ್ತರದ ಜನರನ್ನು ಕ್ರಾಂತಿಕಾರಿ ವೈಚಾರಿಕತೆಯಿಂದ ಪ್ರೇರೇಪಿಸುತ್ತಾ, ಜನ ಜೀವನದ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ, ಸಂಘರ್ಷದ ಅಸ್ತ್ರಗಳಾಗಿ ಜನ ಸಮಿತಿಗಳಿಗೆ ಮತ್ತು ಸ್ವಯಂಸೇವಕ ಪಡೆಗಳಿಗೆ ರೂಪ ಕೊಡುವಂತಹವರು ಬೇಕು. ಹಾಗೆಯೇ, ಅವರು ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗೆ ಭೂಮಿಕೆ ಸಿದ್ಧ ಪಡಿಸಬೇಕು. ನಮ್ಮ ಪಕ್ಷವನ್ನು ಗಟ್ಟಿಗೊಳಿಸುವುದು ಭಾರತದ ಕ್ರಾಂತಿಗೆ ಮಾತ್ರವಲ್ಲ, ವಿಶ್ವ ಕ್ರಾಂತಿಕಾರಿ ಆಂದೋಲನಕ್ಕೆ ಚೈತನ್ಯ ತುಂಬಲೂ ಅದು ಅತ್ಯಗತ್ಯ. ಇದು ನಮ್ಮ ಅಂತರರಾಷ್ಟ್ರೀಯ ಜವಾಬ್ದಾರಿ. ಇತಿಹಾಸ ನಮಗೆ ನೀಡಿರುವ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರಲ್ಲೇ ಮಹಾನ್ ಲೆನಿನ್ ಅವರಿಗೆ ನೈಜ ಗೌರವವನ್ನು ತೋರಿಸುವುದಿದೆ. ಲೆನಿನ್ ಬೋಧನೆಗಳನ್ನು ಗ್ರಹಿಸುತ್ತಾ ಮತ್ತು ಕಾಮ್ರೇಡ್ ಶಿವದಾಸ್ ಘೋಷರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುತ್ತಾ ಪಕ್ಷವನ್ನು ಬಲಪಡಿಸಬೇಕು. ಕ್ರಾಂತಿಕಾರಿ ಚಳುವಳಿಯನ್ನು ಕಟ್ಟಬೇಕು. 

ಕ್ರಾಂತಿ ಚಿರಾಯುವಾಗಲಿ!

ಮಾರ್ಕ್ಸ್ ವಾದ-ಲೆನಿನ್‌ವಾದ-ಶಿವದಾಸ್ ಘೋಷ್ ಚಿಂತನೆಗಳು ಚಿರಾಯುವಾಗಲಿ!

ಮಹಾನ್ ಲೆನಿನ್ ಲಾಲ್ ಸಲಾಂ!

ಭಾಗ 2 ಇಲ್ಲಿದೆ https://sucic-karnataka.org/articles/lenin-architect-socialism-2/