ಭಾಗ II

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್

[ಪ್ರಥಮ ಕಾರ್ಮಿಕವರ್ಗದ ಕ್ರಾಂತಿ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102 ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್‌ರವರ ಬಂಗಾಳಿ ಭಾಷಣದ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಇದರ ಎರಡನೇ ಕಂತು ಇಲ್ಲಿದೆ. ಅನುವಾದದಲ್ಲಿ ಕೊರತೆ ಕಂಡು ಬಂದರೆ ಅದರ ಸಂಪೂರ್ಣ ಜವಾಬ್ದಾರಿ ಸಂಪಾದಕ ಮಂಡಳಿಗೆ ಸೇರಿದ್ದು.]

(ಮೊದಲನೇ ಕಂತಿನ ಲೇಖನದ ಲಿಂಕ್- https://sucic-karnataka.org/articles/lenin-architect-socialism-1/ )

ಸೋವಿಯತ್‌ಗಳ ರಚನೆ

ಇದೆಲ್ಲದಕ್ಕಿಂತ ಮುಂಚೆ, 1905 ರಲ್ಲಿ ಪ್ರಜಾತಾಂತ್ರಿಕ ಗಣರಾಜ್ಯ ಸ್ಥಾಪಿಸುವ ಉದ್ದೇಶದೊಂದಿಗೆ ಕಾರ್ಮಿಕವರ್ಗದ ನಾಯಕತ್ವದಲ್ಲಿ ಝಾರಿಸ್ಟ್ ಸರ್ಕಾರದ ವಿರುದ್ಧ ಜನರ ಬಂಡಾಯ ಆರಂಭವಾಯಿತು. ಇದರಲ್ಲಿ ಕ್ರೆೈಸ್ತ ಪಾದ್ರಿಯಾದ ಗಪೊನ್ ದ್ರೋಹದ ಕೆಲಸವನ್ನು ಮಾಡಿದ. ಅವರು ಝಾರ್ ಬಹಳ ಉದಾತ್ತ ವ್ಯಕ್ತಿ, ಕಾರ್ಮಿಕರು ಮನವಿ ಮಾಡಿಕೊಂಡರೆ ಅವರ ಬೇಡಿಕೆಗಳನ್ನೆಲ್ಲಾ ಈಡೇರಿಸುತ್ತಾನೆ ಎಂದು ಕಾರ್ಮಿಕರ ದಿಕ್ಕು ತಪ್ಪಿಸಿದ. ತಾನು ಕಾರ್ಮಿಕರನ್ನು ಝಾರ್ ಬಳಿಗೆ ಕರೆದೊಯ್ಯುತ್ತೇನೆ ಎಂದ ಅವನನ್ನು ನಂಬಿದ ಕಾರ್ಮಿಕರು ಝಾರ್ ಅರಮನೆಗೆ ಮೆರವಣಿಗೆಯಲ್ಲಿ ಹೋದರು. ಆದರೆ ಝಾರ್ ಸೈನಿಕರು ಕಾರ್ಮಿಕರ ಮೇಲೆ ಗುಂಡಿನ ಸುರಿಮಳೆಗೈದರು. ಹಲವು ಸಾವಿರ ಜನ ಝಾರ್ ಗುಂಡುಗಳಿಗೆ ಬಲಿಯಾದರು. ಆ ದಿನ, 1905 ರ ಜನವರಿ 9 ಅನ್ನು ಇತಿಹಾಸದಲ್ಲಿ ‘ರಕ್ತಸಿಕ್ತ ಭಾನುವಾರ’ ಎಂದೇ ಕರೆಯುತ್ತಾರೆ. ಅದು ರಷ್ಯಾದಲ್ಲಿ ಪ್ರತಿಭಟನೆಯ ಪ್ರವಾಹವನ್ನೇ ಹರಿಸಿತು. ಒಂದಾದ ಮೇಲೊಂದು ಮುಷ್ಕರಗಳು ನಡೆದವು.

ಕಾರ್ಮಿಕರು ವಿವಿಧ ಕಾರ್ಖಾನೆಗಳಲ್ಲಿ ಹೋರಾಟ ಸಮಿತಿಗಳನ್ನು ರಚಿಸಿದರು. ಮಿಲಿಟರಿಯಲ್ಲೂ ಇವುಗಳ ರಚನೆಯಾಯಿತು. ಈ ಸಮಿತಿಗಳೇ ‘ಸೋವಿಯತ್’ಗಳು. ಆದರೆ ಈ ಸೋವಿಯತ್‌ಗಳಿಗೆ ನಾಯಕತ್ವ ನೀಡುವಷ್ಟು ಸಂಘಟನಾ ಶಕ್ತಿ ಬೊಲ್ಷೆವಿಕರಿಗೆ ಇರಲಿಲ್ಲ. ಈ ಕ್ರಾಂತಿಯು 1905-06 ರವರೆಗೆ ಮುಂದುವರೆಯುತ್ತಾ ಹಲವಾರು ಪ್ರಾಂತ್ಯಗಳಿಗೆ ಹರಡಿತು. ಝಾರ್ ಮಿಲಿಟರಿ ಸಹಾಯದಿಂದ ಬಂಡಾಯವನ್ನು ನಿರ್ದಯವಾಗಿ ಹತ್ತಿಕ್ಕಿದ. ಈ ಕ್ರಾಂತಿಯ ವಿಫಲತೆಯಿಂದ ಪಾಠ ಕಲಿಯಬೇಕು ಎಂದ ಲೆನಿನ್, ಅದನ್ನು ‘ಮುಂಬರುವ ಕಾರ್ಮಿಕವರ್ಗದ ಕ್ರಾಂತಿಗೆ ತಾಲೀಮು’ ಎಂದು ಕರೆದರು. ಆದರೆ, ಹತಾಶೆಗೊಂಡ ಹಲವು ಆರ್‌ಎಸ್‌ಡಿಎಲ್‌ಪಿ ಸದಸ್ಯರು ಜನಾಂದೋಲನದಿಂದ ಹಿಮ್ಮೆಟ್ಟಿದರು. ಈ ಬಗ್ಗೆ ಲೆನಿನ್‌ರವರ ಪ್ರಸಿದ್ಧ ಹೇಳಿಕೆಯೆಂದರೆ: “ಕ್ರಾಂತಿಯ ಅಲೆ ಉತ್ತುಂಗದಲ್ಲಿದ್ದಾಗ ಹೆಸರು, ಕೀರ್ತಿ ಮತ್ತು ತಮ್ಮ ರಾಜಕೀಯ ವೃತ್ತಿಯನ್ನು ಕಟ್ಟುವ ಉದ್ದೇಶದಿಂದ ಅನೇಕರು ಮುಂದೆ ಬಂದು ಹೋರಾಟವನ್ನು ಸೇರುತ್ತಾರೆ. ಆದರೆ, ಕ್ರಾಂತಿಕಾರಿ ಹೋರಾಟ ಅತೀವ ಬಿಕ್ಕಟ್ಟಿನಲ್ಲಿದಾಗಲೇ, ನಿಜವಾದ ಪರೀಕ್ಷೆ ಇರುವುದು; ಆಗಲೇ, ನೈಜ ಕ್ರಾಂತಿಕಾರಿ ಯಾರು, ಪೊಳ್ಳು ಯಾರು ಎಂಬುದು ಸುಸ್ಪಷ್ಟವಾಗುವುದು.”

ಕೆಲವೊಂದು ಸೈದ್ಧಾಂತಿಕ ಗೊಂದಲಗಳಿಗೆ ಲೆನಿನ್ ಉತ್ತರ

ಮಾರ್ಕ್ಸ್ ವಾದಿಗಳು ಎನಿಸಿಕೊಂಡ ಕೆಲವರು, ಮಾನವ ತನ್ನ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ಅನುಭವ ಮಾತ್ರವೇ ವಾಸ್ತವ ಎಂದು ವಾದಿಸುತ್ತಾ ಮಾನವ ಗ್ರಹಿಕೆಯಿಂದ ಹೊರತಾಗಿ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ವಸ್ತುನಿಷ್ಠ ವಾಸ್ತವತೆಯ ಬಗ್ಗೆಯೇ ಪ್ರಶ್ನೆ ಎತ್ತಿದರು. ಅದನ್ನು ವಿರೋಧಿಸುತ್ತಾ ಲೆನಿನ್‌ರವರು, ವಸ್ತು ಪ್ರಪಂಚ ಮಾನವ ಪ್ರಜ್ಞೆಗೆ ಹೊರತಾಗಿ ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಟ್ಟರು. ಪಂಚೇಂದ್ರಿಯಗಳಿಂದ ಜ್ಞಾನ ಹುಟ್ಟುವುದಿಲ್ಲ, ಬದಲಿಗೆ ಪಂಚೇಂದ್ರಿಯಗಳು ಮಾನವ ಪ್ರಜ್ಞೆ ಮತ್ತು ಹೊರ ಜಗತ್ತಿನ ನಡುವಿನ ಮಾಧ್ಯಮವಷ್ಟೇ; ಚಲನೆಯಲ್ಲಿರುವ ವಸ್ತು ನಮ್ಮ ಪಂಚೇಂದ್ರಿಯಗಳ ಮೇಲೆ ಬೀರುವ ಪ್ರಭಾವದಿಂದ ಜ್ಞಾನ ಹುಟ್ಟುತ್ತದೆ; ಹಾಗಾಗಿ, ಜ್ಞಾನದ ಉಗಮ ವಸ್ತು ಪ್ರಪಂಚವೇ ಎಂದವರು ವಿವರಿಸಿದರು. ಹಾಗೆಯೇ ಅವರು, ಮಾರ್ಕ್ಸ್ ವಾದ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇದ್ದ ಹಲವಾರು ಗೊಂದಲಗಳನ್ನು ಪರಿಹರಿಸಿದರು. ಮತ್ತೆ, ತಾವು ನಾಯಕರೆಂದು ಗೌರವಿಸಿದ್ದ ಪ್ಲೆಖನೊವ್ ಮತ್ತು ಕೌಟ್‌ಸ್ಕಿಯವರು ದಾರಿ ತಪ್ಪಿದಾಗ, ಅವರನ್ನು ದೃಢವಾಗಿ ವಿರೋಧಿಸಿ ಮಾರ್ಕ್ಸ್ವಾದದ ಸರಿಯಾದ ತಿಳುವಳಿಕೆಯನ್ನು ನೀಡುವ ದಾರ್ಷ್ಟ್ಯವನ್ನು ಲೆನಿನ್ ತೋರಿದರು. ಮಾರ್ಕ್ಸ್ ವಾದದ ದಿಕ್ಚುತಿಗಳೇ ‘ಪರಿಷ್ಕರಣವಾದ’ ಎಂಬ ಹೆಸರನ್ನು ಪಡೆದಿದ್ದು.

ಸೃಜನಶೀಲ ಮಾರ್ಕ್ಸ್ ವಾದಿ ಲೆನಿನ್

ಪ್ಲೆಖನೊವ್ ಮತ್ತು ಕೌಟ್‌ಸ್ಕಿ, ಮಾರ್ಕ್ಸ್ ವಾದಿ ವಿದ್ವಾಂಸರೇನೋ ಸರಿ, ಆದರೆ ಲೆನಿನ್ ಸೃಜನಶೀಲ ಮಾರ್ಕ್ಸ್ ವಾದಿಯಾಗಿದ್ದರು. ಮಾರ್ಕ್ಸ್ ವಾದಿ ವಿಜ್ಞಾನವನ್ನು ಆಚರಣೆಗೆ ತರುವ ಮತ್ತು ಮೈಗೂಡಿಸಿಕೊಳ್ಳುವ ಮೂಲಕ ಅದನ್ನು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಅಳವಡಿಸಬೇಕು ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದರು. ಸಾಮ್ರಾಜ್ಯವಾದದ ಪೂರ್ವದಲ್ಲಿನ ಮಾರ್ಕ್ಸ್ ಪರಿವೀಕ್ಷಣೆಗಳು ಸಾಮ್ರಾಜ್ಯವಾದ ಮತ್ತು ಕಾರ್ಮಿಕವರ್ಗದ ಕ್ರಾಂತಿಯ ಯುಗದಲ್ಲಿ ಅನ್ವಯವಾಗುವುದಿಲ್ಲ. ಹಾಗಾಗಿಯೇ ಲೆನಿನ್ ಹೇಳಿದ್ದು: “ನಾವು ಮಾರ್ಕ್ಸ್ ವಾದಿ ಸಿದ್ಧಾಂತವನ್ನು ಪರಿಪೂರ್ಣವಾದುದು ಮತ್ತು ಮೀರಲಾಗದ ತತ್ವವೆಂದು ಪರಿಗಣಿಸುವುದಿಲ್ಲ.” ಅಂದಿನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಮಾರ್ಕ್ಸ್ ಏನನ್ನು ಹೇಳಿದ್ದಾರೋ ಅದೇ ಇಂದಿಗೂ ಅನ್ವಯವಾಗುತ್ತದೆ, ಹಾಗಾಗಿ ಅದನ್ನು ಮೀರಲಾಗದು ಎಂಬುದು ಸರಿಯಲ್ಲ. ಮಾರ್ಕ್ಸ್ ಮತ್ತು ಎಂಗೆಲ್ಸರು “…ಕೇವಲ ವಿಜ್ಞಾನದ ಅಡಿಗಲ್ಲನ್ನಿಟ್ಟಿದ್ದಾರೆ ಮತ್ತು ಸಮಾಜವಾದಿಗಳು ಜೀವನದ ವೇಗದ ಗತಿಯೊಂದಿಗೆ ಮುನ್ನಡೆಯಬೇಕೆಂದರೆ ಅದನ್ನು ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿಪಡಿಸಬೇಕು.” ಎಂದು ವಿವರಿಸಿದ್ದ ಲೆನಿನ್, ಮಾರ್ಕ್ಸ್ ವಾದ ಮತ್ತು ದ್ವಂದ್ವಾತ್ಮಕ ವಸ್ತುವಾದದ ಆಧಾರದ ಮೇಲೆ ನಿರ್ದಿಷ್ಟ ಪರಿಸ್ಥಿತಿಯನ್ನು ನಿರ್ದಿಷ್ಟವಾಗಿ ವಿಶ್ಲೇಷಿಸಿದರು ಮತ್ತು ಕಾರ್ಯವಿಧಾನವನ್ನು ರೂಪಿಸಿದರು. ಆದ್ದರಿಂದ ಅವರು ಹೇಳಿದರು:“…ಮಾರ್ಕ್ಸ್ ರ ಸಿದ್ಧಾಂತವು… ಸಾಮಾನ್ಯ ಮಾರ್ಗದರ್ಶಕ ತತ್ವಗಳನ್ನು ಮಾತ್ರ ಕೊಡುತ್ತದೆ; ಅದನ್ನು ನಿರ್ದಿಷ್ಟವಾಗಿ ಫ್ರಾನ್ಸ್ ಗಿಂತ ವಿಭಿನ್ನವಾಗಿ ಇಂಗ್ಲೆಂಡ್‌ನಲ್ಲಿ, ಇಂಗ್ಲೆಂಡ್‌ಗಿಂತ ವಿಭಿನ್ನವಾಗಿ ಜರ್ಮನಿಯಲ್ಲಿ, ಜರ್ಮನಿಗಿಂತ ಭಿನ್ನವಾಗಿ ರಷ್ಯಾದಲ್ಲಿ ಅಳವಡಿಸಬೇಕಾಗುತ್ತದೆ.” ಪ್ರತಿಯೊಂದು ದೇಶಕ್ಕೂ ಕೆಲವು ವಿಶಿಷ್ಟ ಆರ್ಥಿಕ ಮತ್ತು ಸಾಮಾಜಿಕ ಗುಣಲಕ್ಷಣಗಳಿರುತ್ತವೆ. ಆದ್ದರಿಂದ, ಯಾವುದೇ ದೇಶದ ನಿರ್ದಿಷ್ಟ ಕ್ರಾಂತಿಯ ನೀತಿಯನ್ನು ಆ ದೇಶದ ನಿರ್ದಿಷ್ಟ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳ ಆಧಾರದ ಮೇಲೆ ರೂಪಿಸಬೇಕಾಗುತ್ತದೆ. ಮಾರ್ಕ್ಸ್ ವಾದದ ನಿರ್ದಿಷ್ಟೀಕರಣ ಎಂಬ ಈ ತಿಳುವಳಿಕೆ, ಲೆನಿನ್‌ರವರ ಒಂದು ಐತಿಹಾಸಿಕ ಅಭಿವ್ಯಕ್ತಿಯಾಗಿದೆ.

ಕ್ರಾಂತಿ ಮೊದಲು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಏಕಕಾಲದಲ್ಲಿ ಸಂಭವಿಸುತ್ತದೆ ಎನ್ನುವುದು ಪ್ಲೆಖನೊವ್, ಕೌಟ್‌ಸ್ಕಿ, ಎರಡನೇ ಅಂತರರಾಷ್ಟ್ರೀಯದ ಇನ್ನಿತರ ನಾಯಕರು ಹಾಗೂ ಮೆನ್ಷೆವಿಕರ ವಾದ. ಇದು ಸಾಮ್ರಾಜ್ಯವಾದ ಬರುವ ಮುಂಚಿನ ಕಾಲದಲ್ಲಿ ಇದ್ದಂತಹ ತಿಳುವಳಿಕೆ; ಸಾಮ್ರಾಜ್ಯವಾದ ಮತ್ತು ಕಾರ್ಮಿಕವರ್ಗ ಕ್ರಾಂತಿಯ ಈ ಯುಗದಲ್ಲಿ ಅದು ಅಸಾಧ್ಯ ಎಂದ ಲೆನಿನ್, ಈಗ ಬಿಕ್ಕಟ್ಟು ಬಹಳ ತೀವ್ರವಾಗಿರುವ ಮತ್ತು ಜನತೆಯ ಪ್ರತಿಭಟನೆ ಅತ್ಯಂತ ಬಲಿಷ್ಠವಾಗಿರುವ ದೇಶದಲ್ಲಿ, ಅದು ಹಿಂದುಳಿದಿದ್ದರೂ ಸಹ, ಕ್ರಾಂತಿಯನ್ನು ನೆರವೇರಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಅಲ್ಲದೆ, ಈಗ ಕ್ರಾಂತಿ ಒಂದೇ ದೇಶದಲ್ಲಿ ಸಹ ಸಂಭವಿಸಬಹುದು ಎಂದೂ ಹೇಳಿದರು. ರಷ್ಯಾ ಆಗ ಬೂರ್ಜ್ವಾ ಪ್ರಜಾತಾಂತ್ರಿಕ ಕ್ರಾಂತಿಯ ಹಂತದಲ್ಲಿ ಇರುವುದರಿಂದ ಕ್ರಾಂತಿಯ ನಾಯಕತ್ವವನ್ನು ಬೂರ್ಜ್ವಾಸಿಗಳು ವಹಿಸಬೇಕು ಎಂದ ಆ ನಾಯಕರ ವಾದವನ್ನು ತಿರಸ್ಕರಿಸಿದ ಲೆನಿನ್, ನಾಯಕತ್ವ ಇರಬೇಕಾಗಿರುವುದು ಕಾರ್ಮಿಕವರ್ಗದ ಕೈಯಲ್ಲಿ ಎಂದು ಪ್ರತಿಪಾದಿಸಿದರು.

ಕ್ರಾಂತಿಯ ಘಟ್ಟದ ನಿರ್ಧಾರ - ರಾಜ್ಯಾಧಿಕಾರವೇ ಮಾನದಂಡ

ಮೊದಲನೇ ಮಹಾ ಯುದ್ಧ ಅಂತಿಮ ಘಟ್ಟದಲ್ಲಿರುವಾಗ, ರಷ್ಯಾದಲ್ಲಿ ಅನ್ನ, ಶಾಂತಿ ಮತ್ತು ವ್ಯಕ್ತಿ ಸ್ವಾತಂತ್ರ್ಯ, ಕೃಷಿಯೋಗ್ಯ ಭೂಮಿಯ ಹಕ್ಕೊತ್ತಾಯಗಳ ಆಧಾರದ ಮೇಲೆ 1917 ರಲ್ಲಿ ಫೆಬ್ರುವರಿ ಕ್ರಾಂತಿ ಸಂಭವಿಸಿತು. ಅದರಲ್ಲಿ ಬಹುತೇಕವಾಗಿ ಕಾರ್ಮಿಕರು ಮತ್ತು ಯೋಧರೇ ಪಾಲ್ಗೊಂಡಿದ್ದು, ರೈತರ ಸಂಖ್ಯೆ ಕಡಿಮೆ ಇತ್ತು. ಆ ಸಂದರ್ಭದಲ್ಲಿ ಸಹ ಮಿಲಿಟರಿ ಮತ್ತು ಕೃಷಿಕ್ಷೇತ್ರವನ್ನೂ ಒಳಗೊಂಡಂತೆ ದೇಶದಲ್ಲಿ ಅನೇಕ ಕಡೆ ಸೋವಿಯತ್‌ಗಳು ರಚನೆಯಾದವು. ಆದರೆ ಬೋಲ್ಷೆವಿಕರು ಜಾ಼ರ್‌ನೊಂದಿಗೆ ಯುದ್ಧದಲ್ಲಿ ನಿರತರಾಗಿದ್ದ ಕಾರಣ, ಅವರಿಗೆ ಸೋವಿಯತ್‌ಗಳ ಒಳಗೆ ಕಾರ್ಯ ನಿರ್ವಹಿಸಲಾಗಲಿಲ್ಲ. ಇದರ ದುರ್ಲಾಭ ಪಡೆದ ಮೆನ್ಷೆವಿಕರು ಮತ್ತು ಮತ್ತೊಂದು ರಾಜಕೀಯ ಪಕ್ಷವಾದ ಸೋಷಲಿಸ್ಟ್ ಕ್ರಾಂತಿಕಾರಿಗಳು ಸೋವಿಯತ್‌ಗಳ ಒಳಗೆ ಪ್ರಾಬಲ್ಯ ಸಾಧಿಸಿದರು. ಹಳೆಯ ಕಾರ್ಮಿಕರೆಲ್ಲಾ ಯುದ್ಧಭೂಮಿಗೆ ಹೋಗಿದ್ದ ಕಾರಣ, ಈಗ ಸೇರ್ಪಡೆಯಾದಂತಹ ಹೊಸ ಕಾರ್ಮಿಕರು ರೈತ ಕುಟುಂಬದಿಂದ ಬಂದವರಾಗಿದ್ದು ಬಹುತೇಕವಾಗಿ ಪೆಟಿ ಬೂರ್ಜ್ವಾ ಮನಸ್ಥಿತಿಯವರಾಗಿದ್ದರು. ಹಾಗಾಗಿ, ಸೋವಿಯತ್‌ಗಳ ಒಳಗೆ ರಾಜಿರಹಿತ ಕ್ರಾಂತಿಕಾರಿಗಳಾಗಿದ್ದ ಬೋಲ್ಷೆವಿಕರ ಸಂಖ್ಯೆ ಕಡಿಮೆಯಿತ್ತು. ಫೆಬ್ರುವರಿ ಕ್ರಾಂತಿಯ ಮೂಲಕ ರಷ್ಯಾದ ಬಂಡವಾಳಿಗರು ಅಧಿಕಾರಕ್ಕೆ ಬಂದರು.

ಈ ಹಂತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ತಯಾರಿ ಮಾಡಿಕೊಳ್ಳಬೇಕು ಎಂಬುದಕ್ಕೆ ಲೆನಿನ್ ಒತ್ತುಕೊಟ್ಟರು. ಅಂದಿನ ಪ್ರಚಲಿತ ಪರಿಸ್ಥಿತಿಯು ಸಮಾಜವಾದಿ ಕ್ರಾಂತಿಗೆ ಪೂರಕವಾಗಿದೆಯೆಂದು ಲೆನಿನ್ ಗ್ರಹಿಸಿದರು. ಆಗ ದೇಶದಲ್ಲಿ ಬಂಡವಾಳವಾದವಿನ್ನೂ ಸ್ಥಿರತೆಯನ್ನು ಸಾಧಿಸದಿರುವಾಗ, ಅದು, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯ ಹಂತವಾಗಲು ಹೇಗೆ ಸಾಧ್ಯವೆಂದು ವಿರೋಧಿಗಳು ಪ್ರಶ್ನಿಸಿದರು. ಮೊದಲು ಬಂಡವಾಳವಾದ ಬಲವಾಗಬೇಕು; ಆನಂತರವಷ್ಟೇ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಸಂಭವಿಸಲು ಸಾಧ್ಯವೆನ್ನುವುದು ಅವರ ಅಭಿಪ್ರಾಯವಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಲೆನಿನ್‌ರ ಹೇಳಿಕೆ, “ರಾಜ್ಯಾಧಿಕಾರದ ಪ್ರಶ್ನೆಯೇ ಪ್ರತಿಯೊಂದು ಕ್ರಾಂತಿಯ ಮೂಲಭೂತ ಪ್ರಶ್ನೆ.” ಎಂಬುದು ಸುಪ್ರಸಿದ್ಧ. ರಾಜ್ಯಾಧಿಕಾರದಲ್ಲಿ ಯಾರಿದ್ದಾರೆ ಎನ್ನುವುದೇ ಮುಖ್ಯ ವಿಷಯಾಂಶ. ಬಂಡವಾಳವಾದ ಎಷ್ಟರಮಟ್ಟಿಗೆ ಬೆಳವಣಿಗೆಯಾಗಿದೆ ಅಥವಾ ಎಷ್ಟು ಹಳೆಯ ಊಳಿಗಮಾನ್ಯ ಪದ್ಧತಿಯ ಅವಶೇಷಗಳಿವೆ - ಇವುಗಳು ಮುಖ್ಯ ನಿರ್ಧಾರಕ ಅಂಶಗಳಾಗುವುದಿಲ್ಲ. ‘ರಷ್ಯಾದಲ್ಲಿ ರಾಜ್ಯಾಧಿಕಾರವು ಹೊಸ ವರ್ಗದ, ಅಂದರೆ, ಬೂಜ್ವಾ಼ð ವರ್ಗದ ಮತ್ತು ಬೂರ್ಜ್ವಾಸಿಗಳಾಗಿರುವ ಭೂಮಾಲೀಕರ ಕೈಗೆ ಹೋಗಿದೆ. ಅಷ್ಟರಮಟ್ಟಿಗೆ ರಷ್ಯಾದಲ್ಲಿ ಬೂಜ್ವಾ಼ð ಪ್ರಜಾತಾಂತ್ರಿಕ ಕ್ರಾಂತಿಯು ಪೂರ್ಣವಾಗಿದೆ.” ಇದು, ಮಾರ್ಕ್ಸ್ ವಾದದ ಆಧಾರದಲ್ಲಿ ರಷ್ಯಾದಲ್ಲಿನ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಲೆನಿನ್ ಮಾಡಿದ್ದ ನಿರ್ದಿಷ್ಟ ವಿಶ್ಲೇಷಣೆ. ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪೂರ್ಣವಾಗಿ ಉಳಿದಿರುವ ಬೂರ್ಜ್ವಾ ಪ್ರಜಾತಾಂತ್ರಿಕ ಕ್ರಾಂತಿಯ ಉದ್ದೇಶಗಳನ್ನು ಸಮಾಜವಾದಿ ರಾಷ್ಟ್ರ ಪೂರೈಸುತ್ತದೆ ಎಂದವರ ಪ್ರತಿಪಾದನೆಯಾಗಿತ್ತು.

ಕಾರ್ಮಿಕವರ್ಗದ ಪರಮಾಧಿಕಾರ

ಫೆಬ್ರುವರಿ ಕ್ರಾಂತಿಯ ಬಳಿಕ ರಷ್ಯಾದೊಳಗೆ ಇಬ್ಬಗೆ ಅಧಿಕಾರ ಸ್ಥಾಪಿತವಾಯಿತು; ಬೂರ್ಜ್ವಾ ಹಂಗಾಮಿ ಸರ್ಕಾರ ಮತ್ತು ಬೋಲ್ಷೆವಿಕರು ಕಡಿಮೆ ಸಂಖ್ಯೆಯಲ್ಲಿದ್ದ ಸಶಸ್ತ್ರ ಸೋವಿಯತ್‌ಗಳು. ಮೆನ್ಷೆವಿಕರಿಗೆ ಎಲ್ಲಾ ಅಧಿಕಾರವನ್ನು ಹಂಗಾಮಿ ಸರ್ಕಾರಕ್ಕೆ ಕೊಟ್ಟು ಸೋವಿಯತ್‌ಗಳನ್ನು ವಿಸರ್ಜಿಸುವುದು ಬೇಕಾಗಿತ್ತು. ಆದರೆ ಲೆನಿನ್ ಎಲ್ಲಾ ಅಧಿಕಾರವನ್ನು ಸೋವಿಯತ್‌ಗಳಿಗೆ ಕೊಡಬೇಕೆಂಬ ಹಕ್ಕೊತ್ತಾಯವನ್ನು ಎತ್ತಿದರು. ಅವರು ಮೊದಲು ಈ ಬಗ್ಗೆ ಬೋಲ್ಷೆವಿಕ್ ಪಕ್ಷದೊಳಗೆ ಚರ್ಚಿಸಿ ಒಮ್ಮತಕ್ಕೆ ಬಂದರು. ಅಲ್ಲಿಂದಾಚೆಗೆ ಬೋಲ್ಷೆವಿಕ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು, ಕಾರ್ಮಿಕರು, ಸೈನಿಕರು ಹಾಗೂ ಸೋವಿಯತ್‌ಗಳ ನಡುವೆ ವಿಸ್ತೃತ ಚರ್ಚೆ ನಡೆಸಿದರು; ಕೊನೆಗೆ ಲೆನಿನ್, ಮೆನ್ಷೆವಿಕರು ಮತ್ತು ಸೋಷಲ್ ರೆವಲ್ಯೂಷನರಿಗಳನ್ನು ಸೋಲಿಸಿ, ಸೋವಿಯತ್‌ಗಳ ಒಳಗೆ ಬೋಲ್ಷೆವಿಕರನ್ನು ಬಹುಸಂಖ್ಯಾತÀರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು ಮತ್ತು 1917 ರ ನವೆಂಬರ್ ಸಮಾಜವಾದಿ ಕ್ರಾಂತಿಯನ್ನು ಯಶಸ್ವಿಯಾಗಿ ನೆರವೇರಿಸಿದರು. ಸಶಸ್ತ್ರ ಕ್ರಾಂತಿಯನ್ನು ವಿರೋಧಿಸಿ ಶಾಂತಿಯುತವಾಗಿ ಸಂಸದೀಯ ಚುನಾವಣೆಯ ಮೂಲಕ ಸಮಾಜವಾದವನ್ನು ನೆಲೆಗೊಳಿಸಬಹುದು ಎಂಬ ಎರಡನೇ ಅಂತರರಾಷ್ಟ್ರೀಯದ ನಾಯಕರ ಪ್ರತಿಪಾದನೆಯನ್ನು ಅಲ್ಲಗಳೆದರು; ಕ್ರಾಂತಿಕಾರಿ ಕಾರ್ಮಿಕವರ್ಗದ ಹೋರಾಟ ಇರುವುದೇ ಬೂರ್ಜ್ವಾ ಪ್ರಭುತ್ವದ ವಿರುದ್ಧ; ಈ ಪ್ರಭುತ್ವದ ಮೂರು ಅಂಗಗಳಾದ ಅಧಿಕಾರಶಾಹಿ, ಮಿಲಿಟರಿ ಮತ್ತು ನ್ಯಾಯಾಂಗಗಳನ್ನು ಚುನಾವಣೆಯ ಮೂಲಕ ಬದಲಾಯಿಸಲಾಗದು; ಅಂತೆಯೇ, ಬೂರ್ಜ್ವಾ ರಾಷ್ಟ್ರವನ್ನು ಚುನಾವಣೆಯ ಮೂಲಕ ಸಮಾಜವಾದಿ ರಾಷ್ಟ್ರವನ್ನಾಗಿ ಮಾಡಲಾಗದು ಎಂಬ ಪಾಠವನ್ನು ಪ್ಯಾರಿಸ್ ಕಮ್ಯೂನಿನ ಅನುಭವದಿಂದ ಕಲಿತದ್ದನ್ನು ಮಾರ್ಕ್ಸ್ ಮತ್ತು ಎಂಗೆಲ್ಸ್, ಜೂನ್ 24, 1872 ರಂದು ಕಮ್ಯುನಿಸ್ಟ್ ಪ್ರಣಾಳಿಕೆಯ ಹೊಸ ಜರ್ಮನ್ ಆವೃತ್ತಿಯ ಮುನ್ನುಡಿಯಲ್ಲಿ ಬರೆದಿದ್ದರು. ಇದನ್ನು ಉಲ್ಲೇಖಿಸುತ್ತಾ ಲೆನಿನ್, ಸಶಸ್ತ್ರ ಬೂರ್ಜ್ವಾ ಪ್ರಭುತ್ವವನ್ನು ಸಶಸ್ತ್ರ ಹೋರಾಟದ ಮೂಲಕ ಮಾತ್ರವೇ ಕಿತ್ತೊಗೆದು ಸಮಾಜವಾದವನ್ನು ಸ್ಥಾಪಿಸಬೇಕು ಎಂದು ಪ್ರತಿಪಾದಿಸಿದರು. ಹಾಗೆಯೇ, ವಿಶ್ವದ ಮೊದಲ ಸಮಾಜವಾದಿ ರಾಷ್ಟ್ರ ನಿರ್ಮಿಸಿ ಇತಿಹಾಸ ಸೃಷ್ಟಿಸಿದರು.

ಪ್ಲೆಖನೊವ್, ಕೌಟ್‌ಸ್ಕಿ ಮುಂತಾದ ನಾಯಕರಿಗೆ ಕಾರ್ಮಿಕವರ್ಗದ ಪರಮಾಧಿಕಾರದ ಬಗ್ಗೆ ಸಹಮತ ಇರಲಿಲ್ಲ; ಇದರಿಂದ ಪ್ರಜಾತಂತ್ರ ಕೊನೆಯಾಗುತ್ತದೆ ಎಂಬ ಅವರ ವಾದವನ್ನು ವಿರೋಧಿಸುತ್ತಾ ಲೆನಿನ್, ಮಾರ್ಕ್ಸ್ರವರ ಈ ಪ್ರತಿಪಾದನೆಯನ್ನು ಎತ್ತಿ ಹಿಡಿದರು: ‘ಬಂಡವಾಳಶಾಹಿ ಸಮಾಜ, ಕಮ್ಯುನಿಸ್ಟ್ ಸಮಾಜವಾಗಿ ಬದಲಾಗುವಾಗ, ಇವೆರಡರ ಮಧ್ಯೆ ಕ್ರಾಂತಿಕಾರಿ ಬದಲಾವಣೆಯ ಕಾಲಘಟ್ಟವೊಂದು ಇರುತ್ತದೆ; ಇದಕ್ಕೆ ಅನುಗುಣವಾಗಿ, ರಾಜಕೀಯ ಬದಲಾವಣೆಯ ಕಾಲಘಟ್ಟವೊಂದೂ ಇದ್ದು, ಅದರಲ್ಲಿ ಪ್ರಭುತ್ವವು ಕಾರ್ಮಿಕವರ್ಗದ ಪರಮಾಧಿಕಾರವಲ್ಲದೆ ಬೇರೇನೂ ಅಲ್ಲ.’ ಬೂರ್ಜ್ವಾಪ್ರಜಾತಂತ್ರವೆಂದರೆ ಬೂರ್ಜ್ವಾ ಪರಮಾಧಿಕಾರವಲ್ಲದೆ ಬೇರೇನೂ ಅಲ್ಲ ಎಂದೂ ಲೆನಿನ್ ತೋರಿಸಿಕೊಟ್ಟರು. ಬಂಡವಾಳಶಾಹಿಗಳನ್ನು ಅಧಿಕಾರದಿಂದ ಕಿತ್ತೊಗೆದ ಮೇಲೆ ಅವರ ಪ್ರತಿರೋಧ ಹತ್ತುಪಟ್ಟು ಹೆಚ್ಚುತ್ತದೆ…..ಹಾಗಾಗಿ, ಕಾರ್ಮಿಕವರ್ಗದ ಪರಮಾಧಿಕಾರ ಅತ್ಯವಶ್ಯ. ಈ ಪ್ರಜಾತಂತ್ರ ಇರುವುದು ಕಾರ್ಮಿಕವರ್ಗದ ಹಿತಾಸಕ್ತಿಯಲ್ಲಿ ಎಂದವರು ವಿವರಿಸಿದರು.

ಸೋವಿಯತ್ ಕ್ರಾಂತಿಯ ಯಶಸ್ಸಿನಿಂದ ಕಂಗೆಟ್ಟ 16 ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ದೇಶಗಳು ಏಕಕಾಲಕ್ಕೆ ರಷ್ಯಾ ಮೇಲೆ ದಾಳಿ ನಡೆಸಿದವು. ದೇಶದಲ್ಲಿ ಅಧಿಕಾರ ಕಳೆದುಕೊಂಡ ಬಂಡವಾಳಿಗರು ಸಹ ದೇಶಾದ್ಯಂತ ಬಂಡಾಯವನ್ನು ಪ್ರಚೋದಿಸಿದರು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ರಷ್ಯಾದ ಕಾರ್ಮಿಕವರ್ಗ, ಕ್ರಾಂತಿಕಾರಿ ಕೆಂಪು ಸೈನ್ಯ ಮತ್ತು ರೈತರು ಈ ಪ್ರತಿಕ್ರಾಂತಿಕಾರಿ ಷಡ್ಯಂತ್ರವನ್ನು ಸೋಲಿಸಲು ಧೀರೋದತ್ತ ಹೋರಾಟ ನಡೆಸಿದರು. ಕಾರ್ಮಿಕವರ್ಗದ ಅಂತರರಾಷ್ಟೀಯತೆಯಿಂದ ಪ್ರೇರಿತರಾದ ಸಾಮ್ರಾಜ್ಯಶಾಹಿ ದೇಶಗಳ ಕಾರ್ಮಿಕರು ಸಹ ವಿಶ್ವದ ಈ ಮೊದಲ ಸಮಾಜವಾದಿ ರಾಷ್ಟ್ರದ ಪರವಾಗಿ ನಿಂತರು. ಹೀಗೆ, ಈ ದಾಳಿಯನ್ನು ಹಿಮ್ಮೆಟ್ಟಿಸಲಾಯಿತು. ಸಮಾಜವಾದಿ ಕ್ರಾಂತಿಯ ಯಶಸ್ಸಿಗಾಗಿ ಹಾಗೂ ಸಾಮ್ರಾಜ್ಯಶಾಹಿ ದಾಳಿಯನ್ನು ಎದುರಿಸುವಲ್ಲಿ ಲೆನಿನ್ ನೇತೃತ್ವದಲ್ಲಿ, ಸ್ಟಾಲಿನ್‌ರವರ ಅಮೋಘ ಪಾತ್ರವನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ತದನಂತರ, ಯುದ್ಧೋತ್ತರ ಸೋವಿಯತ್ ರಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು, ಲೆನಿನ್ ಮೊದಲು, ‘ಯುದ್ಧ ಕಮ್ಯುನಿಸಂ’ ಅನ್ನು ನಂತರ, ‘ಹೊಸ ಆರ್ಥಿಕ ನೀತಿ’ ಜಾರಿಗೊಳಿಸಿದರು. ಈ ಹಂತದ ಬಳಿಕ ಸಮಾಜವಾದಿ ಆರ್ಥಿಕತೆಯನ್ನು ಕಟ್ಟಲು ಐತಿಹಾಸಿಕ ಪಂಚವಾರ್ಷಿಕ ಯೋಜನೆಗೆ ಚಾಲನೆ ನೀಡಿದರು.

ಆಧುನಿಕ ರಾಷ್ಟ್ರವೊಂದರ ಬೆಳವಣಿಗೆಯ ಪ್ರಕ್ರಿಯೆಯ ಸ್ವರೂಪವನ್ನು ಮುಂದಿಟ್ಟಿದ್ದು, ಲೆನಿನ್‌ರವರ ಇನ್ನೊಂದು ಮಹತ್ತರ ಕೊಡುಗೆ. ಬಂಡವಾಳವಾದದ ಉಗಮದೊಂದಿಗೆ, ಒಂದು ರಾಷ್ಟ್ರೀಯ ಮಾರುಕಟ್ಟೆ, ಒಂದು ರಾಷ್ಟ್ರಭಾಷೆ ಮತ್ತು ಒಂದು ರಾಷ್ಟ್ರೀಯ ಸಂಸ್ಕೃತಿ ಹೊರಹೊಮ್ಮಿದ್ದು, ಈ ಆಧಾರದಲ್ಲಿ ಆಧುನಿಕ ರಾಷ್ಟ್ರಗಳು ರೂಪುಗೊಂಡವು ಎಂದವರು ತೋರಿಸಿಕೊಟ್ಟರು. ಅವರು, ಅಲ್ಲಿಯವರೆಗೆ ಜಾ಼ರ್‌ನ ದಮನಕ್ಕೊಳಗಾಗಿದ್ದ ಅನೇಕ ರಾಷ್ಟ್ರೀಯತೆಗಳ ಸ್ವಾತಂತ್ರ್ಯ ವನ್ನು ಎತ್ತಿ ಹಿಡಿದರು. ಸಾಮ್ರಾಜ್ಯಶಾಹಿ ದೇಶಗಳ ಕಾರ್ಮಿಕವರ್ಗ ಹಾಗೂ ಕಾರ್ಮಿಕವರ್ಗದ ಪಕ್ಷಗಳು, ವಸಾಹತುಗಳು ಮತ್ತು ಅರೆ ವಸಾಹತು ದೇಶಗಳಲ್ಲಿನ ವಿಮೋಚನಾ ಹೋರಾಟಗಳನ್ನು-ಅವು ಬಂಡವಾಳಶಾಹಿಗಳ ನೇತೃತ್ವದಲ್ಲಿ ಇದ್ದರೂ ಸಹ-ಬೆಂಬಲಿಸಬೇಕು, ಅದೇ ಕಾಲಕ್ಕೆ, ಅಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಬೆಳೆಸುವ ಆರಂಭಶೀಲತೆಯನ್ನು ತೆಗೆದುಕೊಳ್ಳಬೇಕು ಎಂದು ಬೋಧಿಸಿದರು.

                                                      (ಮುಂದುವರೆಯುತ್ತದೆ)