ಭಾಗ 1 ಆತ್ಮೀಯ ಕಾಮ್ರೇಡರೇ ಮತ್ತು ಸ್ನೇಹಿತರೇ,

ನಾವಿಂದು ಮಹಾನ್ ಲೆನಿನ್ ನೀಡಿದ ಅಮೂಲ್ಯ ಕ್ರಾಂತಿಕಾರಿ ಬೋಧನೆಗಳನ್ನು ನೆನಪಿಸಿಕೊಳ್ಳಲು ಮತ್ತು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಸೇರಿದ್ದೇವೆ.

ಮಹಾನ್ ಸ್ಟಾಲಿನ್, ಮಾವೊ ಜೆ಼ ಡಾಂಗ್ ಮತ್ತು ಶಿವದಾಸ್ ಘೋಷ್‌ರಂತಹ ವಿಶ್ವ ಕಮ್ಯುನಿಸ್ಟ್ ಚಳುವಳಿಯ ನಾಯಕರ ವಿದ್ಯಾರ್ಥಿಯಾಗಿ, ನಾನು ಅವರಿಂದ ಏನನ್ನು ಕಲಿಯಲು ಸಾಧ್ಯವಾಯಿತೋ, ಅದರ ಆಧಾರದ ಮೇಲೆ ಮಹಾನ್ ಲೆನಿನ್ ಬಗ್ಗೆ ಕೆಲವೊಂದು ಮಾತುಗಳನ್ನಾಡುತ್ತೇನೆ. ಲೆನಿನ್ ಅವರನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಅವರ ಚಾರಿತ್ರಿಕ ನೋಟದ ಸಾರವನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ನನ್ನ ಮಾತುಗಳಲ್ಲಿ ಹೇಳುತ್ತೇನೆ.

ನಾನಿಂದು ಲೆನಿನ್‌ರ ಜೀವನದ ವಿವರಗಳಿಗೆ ಹೋಗುವುದಿಲ್ಲ. ಆದರೆ ಅವರು ಮಾರ್ಕ್ಸ್ವಾದದ ಭಂಡಾರಕ್ಕೆ ನೀಡಿದ ಕಾಣಿಕೆಗಳಾದ ಕೆಲವು ಸೈದ್ಧಾಂತಿಕ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತೇನೆ. ದ್ವಂದ್ವಾತ್ಮಕ ವಸ್ತುವಾದ ತತ್ವಶಾಸ್ತ್ರದ ತಿಳುವಳಿಕೆಯನ್ನು ಮೊದಲಿಗೆ ಮುನ್ನೆಲೆಗೆ ತಂದವರೆಂದರೆ ಮಾರ್ಕ್ಸ್. ಅವರು ಹೆಗೆಲ್‌ರ ದ್ವಂದ್ವಾತ್ಮಕ ಭಾವನಾವಾದ, ಕಾಂಟ್‌ರ ಆಜ್ಞೇಯತಾವಾದ ಹಾಗೂ ಫ್ಯೂಯರ್‌ಬಕ್‌ರ ಮಾನವತಾವಾದಗಳನ್ನು ವಿರೋಧಿಸುತ್ತಾ ದ್ವಂದ್ವಾತ್ಮಕ ವಸ್ತುವಾದವನ್ನು ಅಭಿವೃದ್ಧಿಪಡಿಸಿದರು. ಅವರು ಸೈಂಟ್ ಸೈಮನ್ ಮತ್ತು ಚಾರ್ಲ್ಸ್ ಫೊರಿಯರ್ ಪ್ರತಿಪಾದಿಸಿದ ‘ಅಸಾಧ್ಯಾದರ್ಶದ ಸಮಾಜವಾದ’ದ ಪರಿಕಲ್ಪನೆ ತಪ್ಪು; ದ್ವಂದ್ವಾತ್ಮಕ ವಸ್ತುವಾದದ ಮೇಲೆ ಆಧಾರಿತವಾದ ವೈಜ್ಞಾನಿಕ ಸಮಾಜವಾದವೇ ಸರಿಯೆಂದು ತೋರಿಸಿಕೊಟ್ಟರು.

ಅವರು ಆಡಮ್ ಸ್ಮಿತ್ ಮತ್ತು ಡೇವಿಡ್ ರಿಕಾರ್ಡೊ ಪ್ರತಿಪಾದಿಸಿದ ಕ್ಲಾಸಿಕಲ್ ರಾಜಕೀಯ ಅರ್ಥಶಾಸ್ತ್ರದ ಇತಿಮಿತಿಗಳನ್ನು ತೋರಿಸುತ್ತಾ, ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಕೊಡಬೇಕಾದುದನ್ನು ಕೊಡದೆ ವಂಚಿಸುತ್ತಲೇ ಬಂಡವಾಳಿಗರು ಲಾಭ ಮಾಡಿಕೊಳ್ಳುತ್ತಾರೆಂದು ಸಾಬೀತುಪಡಿಸಿದರು. ಕಾರ್ಮಿಕವರ್ಗವು ಬಂಡವಾಳವಾದವನ್ನು ಕಿತ್ತೊಗೆಯುತ್ತದೆ ಮತ್ತು ಶೋಷಣೆಯಿಂದ ಮುಕ್ತವಾದ ಸಮಾಜವನ್ನು ಸ್ಥಾಪಿಸುತ್ತದೆ ಎಂದು ಭವಿಷ್ಯ ನುಡಿದರು. ಮಾರ್ಕ್ಸ್ವಾದವು ಮನುಕುಲದ ಬೆಳವಣಿಗೆಯ ಇತಿಹಾಸದಲ್ಲಿ ಶೋಷಣಾಮುಕ್ತವಾದ ವರ್ಗರಹಿತ ಸಮಾಜವನ್ನು ಸ್ಥಾಪಿಸಲು ನಡೆಸುವ ಹೋರಾಟದ ಅಸ್ತ್ರವಾಗಿ ಹೊರಹೊಮ್ಮಿತು.

ಲೆನಿನ್‌ರಿಂದ ಕ್ರಾಂತಿಕಾರಿ ಚಳುವಳಿಯ ಆರಂಭ

ರಷ್ಯಾದಲ್ಲ್ಲಿ ನರೊದ್ನಿಕ್ ಎನ್ನುವ ಗುಂಪಿತ್ತು. ನರೋದ್ನಿಕ್ ಗುಂಪಿನ ಯೋಜನೆಯಂತೆ ಲೆನಿನ್‌ರ ಅಣ್ಣ ಸಾಶಾ, ರಷ್ಯನ್ ರಾಜ ಝಾರ್‌ನನ್ನು ಕೊಲ್ಲುವ ಪ್ರಯತ್ನದಲ್ಲಿ ಬಂಧನಕ್ಕೊಳಗಾಗಿ ಗಲ್ಲಿಗೇರಿಸಲ್ಪಟ್ಟರು. ಆಗಿನ್ನೂ ಹದಿಹರೆಯದಲ್ಲಿದ್ದ ಲೆನಿನ್Àರನ್ನು ಆಳವಾಗಿ ಕಾಡಿದ ಸಂಗತಿ ಅದು; ವೈಯಕ್ತಿಕ ಕೊಲೆಯ ಈ ದಾರಿ ಆಕಾಂಕ್ಷಿತ ವಿಮುಕ್ತಿಯನ್ನು ತರುವುದಿಲ್ಲವೆಂದು ಅರಿತು, ಸರಿದಾರಿಯನ್ನು ಹುಡುಕುತ್ತಾ ಹೊರಟ ಅವರಿಗೆ ಮಾರ್ಕ್ಸ್ ಮತ್ತು ಎಂಗೆಲ್ಸ್ರವರ ಕೆಲವು ಪುಸ್ತಕಗಳು ದೊರಕಿದವು. ಕe಼Áನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ ಝಾರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಒಂದು ಸಣ್ಣ ಹಳ್ಳಿಯಲ್ಲಿ ಬಂಧನದಲ್ಲಿರಿಸಲಾಯಿತು. ಅಲ್ಲಿಂದಲೇ ಅವರ ಮಾರ್ಕ್ಸ್ ಮತ್ತು ಎಂಗೆಲ್ಸ್ ಚಿಂತನೆಗಳ ಕೂಲಂಕಷ ಅಧ್ಯಯನ ಶುರುವಾಗಿದ್ದು. ನಂತರ ಸಮಾರ ನಗರಕ್ಕೆ ಬಂದ ಅವರು ಮೊದಲು ಮಾರ್ಕ್ಸ್ವಾದಿ ಅಧ್ಯಯನ ಗುಂಪನ್ನು ಆರಂಭಿಸಿದರು. ಆಗ ಅಂತಹ ಅನೇಕ ಗುಂಪುಗಳು ರಷ್ಯಾದ ಬಹಳೆಡೆ ಇದ್ದವು.

ಇವೆಲ್ಲಾ ಗುಂಪುಗಳನ್ನು ಒಂದುಗೂಡಿಸಿ, ರಷ್ಯಾದ ಅಂದಿನ ರಾಜಧಾನಿಯಾದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ “ಲೀಗ್ ಆಫ್ ಸ್ಟ್ರಗಲ್ ಫಾರ್ ಇಮ್ಯಾನ್ಸಿಪೇಷನ್ ಆಫ್ ದಿ ವರ್ಕಿಂಗ್ ಕ್ಯಾಂಪ್” (ಕಾರ್ಮಿಕವರ್ಗದ ವಿಮುಕ್ತಿ ಹೋರಾಟದ ಸಂಘಟನೆ) ರಚಿಸಿದಾಗ ಲೆನಿನ್‌ರಿಗೆ ಕೇವಲ 25 ವರ್ಷ. ನಂತರದ ದಿನಗಳಲ್ಲಿ ಈ ಸಂಘಟನೆಯನ್ನು ಕಾರ್ಮಿಕವರ್ಗದ ಕ್ರಾಂತಿಕಾರಿ ಪಕ್ಷದ ಅಂಕುರ ಎಂದ ಲೆನಿನ್, ಕ್ರಾಂತಿಕಾರಿ ಹೋರಾಟಕ್ಕೆ ಪಾದಾರ್ಪಣೆ ಮಾಡಿದ್ದು ಹೀಗೆ. ಆನಂತರ, ಅವರು ಝಾರ್‌ನ ಕಪಿಮುಷ್ಟಿಯಿಂದ ಹೊರಬರುವ ಸಲುವಾಗಿ ದೇಶ ತೊರೆದು ವಿದೇಶಕ್ಕೆ ಹೋಗಬೇಕಾಯಿತು. ಅಲ್ಲಿಂದ ಅವರು ಜನರಲ್ಲಿ ಮಾರ್ಕ್ಸ್ವಾದದ ಚಿಂತನೆಯನ್ನು ಹರಡಲು ‘ಇಸ್ಕ್ರಾ’ ಪತ್ರಿಕೆಯನ್ನು ಹೊರತಂದರು. ನಂತರದ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಜನನಾಯಕರಾಗಿ ಹೊರಹೊಮ್ಮುವಲ್ಲಿ ಇವು ಅವರ ಆರಂಭಿಕ ಹೆಜ್ಜೆಗಳು.

ಕೃಷಿಯಲ್ಲಿ ಬಂಡವಾಳವಾದದ ಗುಣಲಕ್ಷಣ

ರಷ್ಯಾದಂತಹ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಕಾರ್ಮಿಕರ ಸಂಖ್ಯೆ ಬಹಳವೇ ಕಡಿಮೆ ಇರುವುದರಿಂದ ಝಾರ್ ವಿರುದ್ಧ ಕ್ರಾಂತಿಯನ್ನು ಸಂಘಟಿಸುವುದು ರೈತರು ಎನ್ನುವುದು ನರೊದ್ನಿಕ್‌ರ ಅಭಿಪ್ರಾಯವಾಗಿತ್ತು. ‘ದಿ ಎಕಾನಮಿಸ್ಟ್ಸ್’’ ಎನ್ನುವ ಇನ್ನೊಂದು ಗುಂಪಿನವರ ವಾದದ ಪ್ರಕಾರ, ಕಾರ್ಮಿಕರು ರಾಜಕೀಯ ಸೇರಬಾರದು; ಬದಲಿಗೆ, ಮುಷ್ಕರ ಮತ್ತು ಕಾರ್ಮಿಕ ಸಂಘದ ಚಟುವಟಿಕೆಗಳ ಮೂಲಕ ಹೆಚ್ಚಿನ ವೇತನ, ಕಡಿಮೆ ದುಡಿಮೆ ಅವಧಿ ಮತ್ತು ಉದ್ಯೋಗ ಪರಿಸ್ಥಿತಿಯನ್ನು ಉತ್ತಮಗೊಳಿಸುವಂತಹ ಬೇಡಿಕೆಗಳನ್ನು ಈಡೇರಿಸಿಕೊಂಡು, ತಕ್ಷಣದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸಬೇಕು; ರಾಜಕೀಯದಲ್ಲಿರಬೇಕಾದದ್ದು ಮಧ್ಯಮ ವರ್ಗ. ಇವೆರಡೂ ದಿಕ್ಚುತಿಗಳನ್ನು ಲೆನಿನ್ ಸೈದ್ಧಾಂತಿಕವಾಗಿ ಹೋರಾಡಿದರು. ಅವರು ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಕಾರ್ಮಿಕರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು, ಅವರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಕಾರ್ಮಿಕರ ಮುಷ್ಕರಗಳಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದಾಗ, ಅವರನ್ನು ಮತ್ತೆ ಬಂಧಿಸಿ, ದೀರ್ಘಕಾಲ ಜೈಲಿನಲ್ಲಿರಿಸಿ, ಸೈಬಿರಿಯಾಕ್ಕೆ ಗಡಿಪಾರು ಮಾಡಲಾಯಿತು. ಆ ಸಮಯದಲ್ಲಿ ೩ ವರ್ಷಗಳ ಕಾಲ ಹಳ್ಳಿಗಳಲ್ಲಿದ್ದಾಗ ಅವರು ರೈತರ ಹೀನಾಯ ಪರಿಸ್ಥಿತಿಯನ್ನು ಕಂಡರು. ಅವರೊಂದಿಗೆ ಬೆರೆತು ರಾಜಕೀಯ ಚರ್ಚೆಗಳನ್ನು ನಡೆಸಿದರು. ಆಗ ಅವರು ಬರೆದ ‘ರಷ್ಯಾದಲ್ಲಿ ಬಂಡವಾಳವಾದದ ಬೆಳವಣಿಗೆ’ ಕೃತಿಯು ಮಾರ್ಕ್ಸ್ವಾದದ ಸಿರಿ ಭಂಡಾರಕ್ಕೊಂದು ಮೂಲಭೂತ ಕಾಣಿಕೆ. ಅದರಲ್ಲಿ ಅವರು, ಹೇಗೆ ಬಂಡವಾಳವಾದವು ಕೇವಲ ಕೈಗಾರಿಕಾ ವಲಯವನ್ನಷ್ಟೇ ಅಲ್ಲದೆ, ರಷ್ಯಾದ ಕೃಷಿ ವಲಯದಲ್ಲೂ ಪ್ರವೇಶಿಸುತ್ತಿದೆ ಎಂದು ತೋರಿಸಿಕೊಟ್ಟರು. ಆ ಪ್ರಕಾರ ಕೃಷಿಯಲ್ಲಿ ಬಂಡವಾಳವಾದದ ಗುಣಲಕ್ಷಣಗಳೆಂದರೆ: ಭೂಮಿಯ ಮೇಲೆ ವ್ಯಕ್ತಿಗತ ಒಡೆತನ ಮತ್ತು ಕೆಲವೇ ಅತಿ ಶ್ರೀಮಂತರ ಕೈಯಲ್ಲಿ ಭೂಮಿಯ ಹೆಚ್ಚೆಚ್ಚು ಕೇಂದ್ರೀಕರಣ. ಬಡರೈತರು ಇದುವರೆಗೂ ಹೊಂದಿದ್ದ ತಮ್ಮ ಕೃಷಿಯೋಗ್ಯ ಭೂಮಿಯನ್ನು ಕಳೆದುಕೊಂಡ ಕಾರಣ ಭೂಹೀನ ಕಾರ್ಮಿಕರಾಗಿ ಅವರ ಪರಿವರ್ತನೆ. ಕೃಷಿ ಉತ್ಪನ್ನಗಳು, ಜೊತೆಗೆ ಭೂಮಿಯೂ ಬಂಡವಾಳಶಾಹಿ ರಾಷ್ಟ್ರೀಯ ಮಾರುಕಟ್ಟೆಯ ಸರಕುಗಳಾಗುತ್ತಿರುವುದು. ಅಲ್ಲಿಯವರೆಗೂ ಇನ್ಯಾರೂ ಇದನ್ನು ಕಂಡು ಹಿಡಿದಿರಲಿಲ್ಲ. ತಮ್ಮ 29ನೇ ವಯಸ್ಸಿನಲ್ಲೇ ಲೆನಿನ್, ಮಾರ್ಕ್ಸ್ವಾದಿ ತತ್ವಜ್ಞಾನವನ್ನು ಗಾಢವಾಗಿ ಅರ್ಥೈಸಿಕೊಂಡಿದ್ದರು ಎಂಬುದಕ್ಕೆ ಅವರ ಇಷ್ಟೆಲ್ಲಾ ಅಗಾಧ ಸಾಧನಗಳೇ ಪುರಾವೆ.

ಪಕ್ಷದ ಸದಸ್ಯರಾಗಲು ಅರ್ಹತೆ

ರಷ್ಯಾದಲ್ಲಿ ಮೊದಲು ಮಾರ್ಕ್ಸ್ ಮತ್ತು ಎಂಗೆಲ್ಸ್ರ ಕೃತಿಗಳನ್ನು ಅನುವಾದ ಮಾಡಿ, ಮಾರ್ಕ್ಸ್ವಾದವನ್ನು ಪ್ರಚಾರ ಮಾಡಿದ್ದು ಪ್ಲೆಖನೊವ್. ಪ್ಲೆಖನೊವ್‌ರ ಆರಂಭಶೀಲತೆಯಿಂದಾಗಿ ರಷ್ಯನ್ ಸೋಷಲ್ ಡೆಮಾಕ್ರೆಟಿಕ್ ಲೇಬರ್ ಪಾರ್ಟಿ (ಆರ್‌ಎಸ್‌ಡಿಎಲ್‌ಪಿ) ರಚನೆಯಾಯಿತು. ಲೆನಿನ್ ಸೈಬಿರಿಯಾದಲ್ಲಿ ಗಡಿಪಾರಿನಲ್ಲಿದ್ದರಿಂದ ಅವರಿಗೆ ಅದರ ಪ್ರಥಮ ಮಹಾಧಿವೇಶನದಲ್ಲಿ ಭಾಗವಹಿಸಲಾಗಲಿಲ್ಲ. 1903 ರಲ್ಲಿ ಲಂಡನ್‌ನಲ್ಲಿ ಎರಡನೇ ಮಹಾಧಿವೇಶನವನ್ನು ಸಂಘಟಿಸಲಾಯಿತು. ಈ ಮಹಾಧಿವೇಶನದಲ್ಲಿ ಯಾರು ಪಕ್ಷದ ಸದಸ್ಯರಾಗಬಹುದು ಎನ್ನುವ ವಿಷಯದ ಬಗ್ಗೆ ಲೆನಿನ್ ಮತ್ತು ಇನ್ನಿತರರಲ್ಲಿ ಭಿನ್ನಾಭಿಪ್ರಾಯ ಬಂದಿತು. ಪಕ್ಷದ ತತ್ವಗಳಿಗೆ ಬದ್ಧರಾಗಿರುವವರು, ಸದಸ್ಯತ್ವ ಶುಲ್ಕ ನೀಡುವವರು ಮತ್ತು ಪಕ್ಷದ ಶಿಸ್ತಿಗೆ ಬದ್ಧರಾಗಿರುವವರು ಮತ್ತು ಪಕ್ಷದ ಯಾವುದೇ ಸಂಘಟನೆಯಲ್ಲಿ ಸೇರಿಕೊಂಡು ಪ್ರತಿನಿತ್ಯ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವವರು ಪಕ್ಷದ ಸದಸ್ಯರಾಗಬಹುದು ಎನ್ನುವುದನ್ನು ಲೆನಿನ್ ಎತ್ತಿ ಹಿಡಿದರು. ಅದನ್ನು ಒಪ್ಪಿಕೊಂಡವರು ಬೊಲ್ಷೆವಿಕ (ಬಹುಸಂಖ್ಯಾತರು) ರಾದರೆ, ಮೊದಲ ಎರಡು ವಿಷಯಗಳನ್ನು ಬಿಟ್ಟರೆ ಉಳಿದವುಗಳನ್ನು ಒಪ್ಪಿಕೊಳ್ಳದಿದ್ದವರು ಮೆನ್ಷೆವಿಕ(ಅಲ್ಪಸಂಖ್ಯಾತರು) ರಾದರು. ಹೀಗೆ, ಆರ್‌ಎಸ್‌ಡಿಎಲ್‌ಪಿ, ಬೊಲ್ಷೆವಿಕರು ಮತ್ತು ಮೆನ್ಷೆವಿಕರು, ಇಬ್ಬರೂ ಇರುವ ವೇದಿಕೆಯಾಯಿತು. ಲೆನಿನ್‌ರ ಮಾರ್ಗದರ್ಶನದಲ್ಲಿ ಬೊಲ್ಷೆವಿಕರು ಮಾರ್ಕ್ಸ್ವಾದಿ ಕ್ರಾಂತಿಕಾರಿಗಳಾಗಿ ರೂಪುಗೊಂಡರೆ, ಮೆನ್ಷೆವಿಕರು ರಾಜೀವಾದಿ ಪೆಟಿ ಬೂರ್ಜ್ವಾ ಶಕ್ತಿಗಳಾಗಿ ಹೊರಹೊಮ್ಮಿದರು.

ಲೆನಿನ್ ಮತ್ತು ಸಾಮ್ರಾಜ್ಯವಾದ

ಮಾರ್ಕ್ಸ್ವಾದಿ ವಿಶ್ಲೇಷಣಾ ವಿಧಾನಕ್ರಮವನ್ನು ಅನುಸರಿಸಿ, ಸಾಮ್ರಾಜ್ಯವಾದವೆಂದರೇನು ಮತ್ತು ಬಂಡವಾಳವಾದದ ಯಾವ ಹಂತದಲ್ಲಿ ಅದು ಹೊರಹೊಮ್ಮುತ್ತದೆ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿದವರಲ್ಲಿ ಲೆನಿನ್ ಮೊದಲಿಗರು. ಅವರು ತೋರಿಸಿದ್ದೇನೆಂದರೆ, ಬಂಡವಾಳವಾದಕ್ಕೆ ಎರಡು ಹಂತಗಳಿವೆ: ಮೊದಲನೆ ಹಂತ, ಊಳಿಗಮಾನ್ಯ ಪದ್ಧತಿ ಮತ್ತು ರಾಜ್ಯಾಧಿಕಾರಗಳನ್ನು ಕಿತ್ತೊಗೆಯುವ ಮೂಲಕ ಬಂಡವಾಳವಾದ ಉದಯವಾಗುವ ದಿನಗಳು. ಈ ಹಂತದಲ್ಲಿ ಬಂಡವಾಳವಾದ ಪ್ರಗತಿಪರವಾಗಿದ್ದು, ಸಾಮಾಜಿಕ ಪ್ರಗತಿಗೆ ಪೂರಕವಾಗಿತ್ತು. ಆಗ ಸಣ್ಣ ಬಂಡವಾಳ ವ್ಯಾಪಕವಾಗಿ ಇದ್ದು, ವಿವಿಧ ಬಂಡವಾಳಿಗರ ನಡುವೆ ಮುಕ್ತ ಪೈಪೋಟಿ ಇತ್ತು. ಅದರ ಆಧಾರದ ಮೇಲೆಯೇ ಬಹು-ಪಕ್ಷಗಳ ಪ್ರಜಾಪ್ರಭುತ್ವ ಸ್ಥಾಪಿತವಾಗಿದ್ದು. ಆದರೆ ಬಂಡವಾಳವಾದದ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಕೆಲವು ಬಂಡವಾಳಿಗರು ಇತರರನ್ನು ಪೈಪೋಟಿಯಲ್ಲಿ ಬಗ್ಗು ಬಡಿದು ಏಕಸ್ವಾಮ್ಯ ಬಂಡವಾಳಿಗರಾದರು. ಏಕಸ್ವಾಮ್ಯ ಬಂಡವಾಳವಾದವು ಬಂಡವಾಳವಾದದ ಎರಡನೇ ಹಂತ. ಏಕಸ್ವಾಮ್ಯ ಹಂತದ ಇನ್ನೊಂದು ಲಕ್ಷಣವೆಂದರೆ, ಬ್ಯಾಂಕಿಂಗ್ ಬಂಡವಾಳ ಮತ್ತು ಕೈಗಾರಿಕಾ ಬಂಡವಾಳ, ಎರಡರ ವಿಲೀನ. ಹಿಂದೆ ಬ್ಯಾಂಕುಗಳು ಜನರಿಂದ ಹಣ ಸಂಗ್ರಹಿಸುತ್ತಿದ್ದವು ಮತ್ತು ಬಂಡವಾಳಿಗರಿಗೆ ಸಾಲ ಕೊಡುತ್ತಿದ್ದವು. ಬ್ಯಾಂಕಿನ ಬಂಡವಾಳ ಮತ್ತು ಕೈಗಾರಿಕಾ ಬಂಡವಾಳ ಪ್ರತ್ಯೇಕವಾಗಿದ್ದವು. ಆದರೆ ಏಕಸ್ವಾಮ್ಯ ಹಂತದಲ್ಲಿ, ಇವೆರಡೂ ಒಂದಾಗಿ, ಅದು ಹಣಕಾಸು ಆಲಿಗಾರ್ಕಿಗೆ ಜನ್ಮ ನೀಡಿತು. ಹಣಕಾಸು ಬಂಡವಾಳ ಸೃಷ್ಟಿಯಾಯಿತು.

ಮೂರನೇ ಹಂತದಲ್ಲಿ, ವಿದೇಶಗಳಿಗೆ ಸರಕುಗಳ ರಫ್ತಿನ ಜಾಗದಲ್ಲಿ ಬಂಡವಾಳದ ರಫ್ತು; ಅಲ್ಲಿನ ಕಚ್ಚಾ ಪದಾರ್ಥಗಳು ಹಾಗೂ ಅಗ್ಗದ ಶ್ರಮಶಕ್ತಿಯನ್ನು ಶೋಷಿಸುವುದೇ ಅದರ ಉದ್ದೇಶ.

ನಾಲ್ಕನೇ ಹಂತದಲ್ಲಿ, ಅಂತರರಾಷ್ಟ್ರೀಯ ಟ್ರಸ್ಟ್ ಮತ್ತು ಕಾರ್ಟೆಲ್‌ಗಳನ್ನು ಹುಟ್ಟುಹಾಕುವುದರ ಮೂಲಕ ವಿವಿಧ ದೇಶಗಳ ಏಕಸ್ವಾಮ್ಯಾಧಿಪತಿಗಳು ವಿಶ್ವ ಮಾರುಕಟ್ಟೆಯನ್ನು ನಿಯಂತ್ರಿಸುವುದು.

ಐದನೇ ಹಂತವೆಂದರೆ, ಸಾಮ್ರಾಜ್ಯಶಾಹಿ ರಾಷ್ಟ್ರಗಳು ವಿಶ್ವ ಮಾರುಕಟ್ಟೆಯನ್ನು ತಮ್ಮ ಮಧ್ಯೆ ಹಂಚಿಕೊಳ್ಳುವುದು,

ಸಾಮ್ರಾಜ್ಯಶಾಹಿ ಯುದ್ಧದಲ್ಲಿ ಕಾರ್ಮಿಕವರ್ಗದ ಪಾತ್ರ

ಸ್ವಿಜûರ್‌ಲ್ಯಾಂಡ್‌ನ ಬೆಸೆಲ್ ನಗರದಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯದ ಮಹಾಧಿವೇಶನದಲ್ಲಿ, ಸಾಮ್ರಾಜ್ಯಶಾಹಿ ದೇಶಗಳೇನಾದರೂ ಯುದ್ಧ ನಿರತವಾದರೆ, ಆ ದೇಶಗಳ ಕಾರ್ಮಿಕವರ್ಗವು ತಂತಮ್ಮ ದೇಶಗಳ ಆಳ್ವಿಕರ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಲಾಯಿತು. ಆಗ, ಒಂದು ದೇಶದ ಕಾರ್ಮಿಕವರ್ಗವು ಮತ್ತೊಂದು ದೇಶದ ತಮ್ಮ ಸೋದರ ಕಾರ್ಮಿಕರರ ವಿರುದ್ಧ ಶಸ್ತ್ರವೆತ್ತುವುದಿಲ್ಲ. ಏಕೆಂದರೆ, ಎರಡೂ ದೇಶಗಳ ಕಾರ್ಮಿಕರು ತಮ್ಮ ಸಾಮ್ರಾಜ್ಯಶಾಹಿ ಆಳ್ವಿಕರ ವೇತನ ಗುಲಾಮರು. ಸಾಮ್ರಾಜ್ಯಶಾಹಿಗಳು ಒಬ್ಬರ ವಿರುದ್ಧ ಇನ್ನೊಬ್ಬರು ಯುದ್ಧ ಮಾಡುವುದರಲ್ಲಿ ನಿರತರಾಗಿದ್ದಾಗ ಪ್ರತಿಯೊಂದು ದೇಶದ ಕಾರ್ಮಿಕವರ್ಗವು, ಈ ಅವಕಾಶವನ್ನು ಬಳಸಿಕೊಂಡು ತಂತಮ್ಮ ದೇಶದ ಸಾಮ್ರಾಜ್ಯಶಾಹಿ-ಬಂಡವಾಳಶಾಹಿಗಳ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ ಕ್ರಾಂತಿಯನ್ನು ನೆರವೇರಿಸಬೇಕೆಂದು ನಿರ್ಧರಿಸಲಾಯಿತು. ಇದೇ ಬೆಸೆಲ್ ಪ್ರಣಾಳಿಕೆ.

ಆದರೆ ಪ್ರಥಮ ವಿಶ್ವಯುದ್ಧ ಆರಂಭವಾದಾಗ, ಎರಡನೇ ಅಂತರರಾಷ್ಟ್ರೀಯದ ಹೆಚ್ಚಿನ ನಾಯಕರು, ಕಾರ್ಮಿಕರು, ತಂತಮ್ಮ ದೇಶದ ಬೂರ್ಜ್ವಾ ಆಳ್ವಿಕರ ಪರವಾಗಿ ನಿಲ್ಲಬೇಕು ಮತ್ತು ತಮ್ಮ ದೇಶಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ವಸಾಹತುಗಳನ್ನು ಮತ್ತು ಅರೆ ವಸಾಹತುಗಳನ್ನು ತೀವ್ರವಾಗಿ ಲೂಟಿ ಹೊಡೆಯುತ್ತಿದ್ದ ಸಾಮ್ರಾಜ್ಯಶಾಹಿಗಳು, ಲೂಟಿಯ ಒಂದು ಭಾಗವನ್ನು ವೇತನದ ಹೆಚ್ಚಳವಾಗಿ ತಮ್ಮ ದೇಶಗಳ ಕಾರ್ಮಿಕರಿಗೆ ನೀಡುತ್ತಾ, ಅವರನ್ನೂ, ಅವರ ನಾಯಕರನ್ನೂ ಖರೀದಿಸಿ, ಅವರ ಹೋರಾಟದ ಕೆಚ್ಚನ್ನು ಶಮನ ಮಾಡಿದ್ದರು; ಅವರ ಪ್ರತಿನಿಧಿಗಳಾದ ಎರಡನೇ ಅಂತರರಾಷ್ಟ್ರೀಯದ ಹೆಚ್ಚಿನ ನಾಯಕರು, ತಮ್ಮ ದೇಶದ ಆಳ್ವಿಕರ ಪರ ನಿಲ್ಲಲು ಕಾರಣ ಇದೇ. ಇದನ್ನು ಲೆನಿನ್ ಕಟುವಾಗಿ ವಿರೋಧಿಸಿ, ಅವರೆಲ್ಲರೂ ಹಿಂದಿನ ಸಮ್ಮೇಳನಗಳ ನಿರ್ಧಾರವನ್ನು ಉಲ್ಲಂಘಿಸುತ್ತಿದ್ದಾರೆ; ಅವರೆಲ್ಲಾ ಮಾರ್ಕ್ಸ್ವಾದದ ದಾರಿಯಿಂದ ದಿಕ್ಕುತಪ್ಪಿದ್ದು, ಕಾರ್ಮಿಕವರ್ಗಕ್ಕೆ ಹಾಗೂ ಕಾರ್ಮಿಕವರ್ಗದ ಅಂತರರಾಷ್ಟ್ರೀಯವಾದಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಹೇಳಿದರು. ಅಲ್ಲಿಂದ ಅವರು, ಹೊಸದಾದ, ಮೂರನೇ ಅಂತರರಾಷ್ಟ್ರೀಯದ ರಚನೆಯಲ್ಲಿ ತೊಡಗಿಕೊಂಡರು. ಅದರ ಮೊದಲ ಮಹಾಧಿವೇಶನ 1915ರಲ್ಲಿ ಸ್ವಿಜರ್‌ಲ್ಯಾಂಡ್‌ನ ಜಿಮರ್‌ವಾಲ್ಡ್ ನಲ್ಲಿ ನಡೆಯಿತು, ಇದು ಯುದ್ಧವಿರೋಧಿ ಅಂತರರಾಷ್ಟ್ರೀಯ ಆಂದೋಳನದ ಬೆಳವಣಿಗೆಯಲ್ಲಿನ ಮೊದಲ ಹೆಜ್ಜೆಯಾಯಿತು.

(ಮುಂದುವರೆಯುತ್ತದೆ……)