ವಿಶೇಷವಾಗಿ, ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾ ಅವರು ಇದನ್ನೊಂದು ಜನಪ್ರಿಯ (!) ಪದವನ್ನಾಗಿ ಮಾಡಿದ್ದಾರೆ. ಇತ್ತೀಚೆಗೆ, ಚುನಾವಣೆ ನಡೆದ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವಾಗ, ‘ನುಸುಳುಕೋರರು’ ಗಳನ್ನು “ಪತ್ತೆಹಚ್ಚಲು, ಅವರ ಹೆಸರುಗಳನ್ನು ತೆಗೆದುಹಾಕಲು, ಮತ್ತವರನ್ನು ತಮ್ಮ ದೇಶಗಳಿಗೆ ರವಾನಿಸಲು” (detect,delete and deport ) ತಾವು ಆದೇಶಿಸಿರುವುದಾಗಿ ಅವರು ಪ್ರತಿಪಾದಿಸಿದ್ದಾರೆ. ವಿಶೇಷವಾಗಿ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹೊಂದಿರುವ ಮತ್ತು ಚುನಾವಣೆ ಮುಗಿಯುವವರೆಗೆ ಅವರು ಬೀಡುಬಿಟ್ಟಿದ್ದ ಪಶ್ಚಿಮ ಬಂಗಾಳದಲ್ಲಿ, ಈ ‘ನುಸುಳುಕೋರರು’ ಎಂಬ ಆಕರ್ಷಕ ಪದಪ್ರಯೋಗವು ಉತ್ತುಂಗದಲ್ಲಿತ್ತು. ಈ ಗುರುತಿಸಲಾಗದ ನುಸುಳುಕೋರರೇ ಎಲ್ಲಾ ಅನಿಷ್ಟಗಳಿಗೂ ಮೂಲ ಕಾರಣ ಮತ್ತು ಒಮ್ಮೆ ಅವರನ್ನು ಓಡಿಸಿ ಬಿಟ್ಟರೆ ರಾಜ್ಯದ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ ಎಂಬಂತೆ ಬಿಂಬಿಸಲಾಯಿತು. ಅವರು ಹಾಗೂ ಅವರ ಬೆಂಬಲಿಗರು ನುಸುಳುಕೋರರೆಂದು ಗುರುತಿಸುವುದಾದರೂ ಯಾರನ್ನು? ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲೇ ಇರುವ ‘ಗಡಿ ಭದ್ರತಾ ಪಡೆ’ಯ (BSF) 30-40 ಬೆಟಾಲಿಯನ್‌ಗಳ “ಜಾಗರೂಕ” ಕಣ್ಣುಗಳಿಗೆ ಮಣ್ಣೆರಚಿ, ಗಡಿ ದಾಟಿ ಈ ರಾಜ್ಯದೊಳಗೆ ನುಸುಳಿದ್ದಾರೆ ಎಂದು ಅವರು ಆರೋಪಿಸಿದ್ದು ಮುಸ್ಲಿಮರನ್ನು. 2019 ರಲ್ಲಿ, ಶ್ರೀ. ಅಮಿತ್ ಶಾ ಅವರು ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ನುಸುಳುಕೋರರಿದ್ದಾರೆ ಮತ್ತು ಅವರೆಲ್ಲರೂ ಬಾಂಗ್ಲಾದೇಶಿ ಮುಸ್ಲಿಮರು ಎಂದು ಸ್ಪಷ್ಟವಾಗಿ ಘೋಷಿಸಿದ್ದರು. ಬಿಎಸ್‌ಎಫ್‌ನ ಕಾವಲನ್ನು ದಾಟಿ ರಾಜ್ಯದೊಳಗೆ ಕಾನೂನುಬಾಹಿರವಾಗಿ ಪ್ರವೇಶಿಸಬೇಕಾದರೆ, ಅವರು ನಿಜವಾಗಿಯೂ ಅದ್ಭುತ ಕುತಂತ್ರಿಗಳೇ ಇರಬೇಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು! ಹಾಗಾಗಿಯೇ, ಕೇಂದ್ರ ಗೃಹ ಸಚಿವರು ಈ ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿರುವುದು. SIR ಕಾರ್ಯವಿಧಾನವನ್ನು ಬಳಸಿಕೊಂಡು, ಈಗ ಆಡಳಿತಾರೂಢ ಬಿಜೆಪಿ ಸರ್ಕಾರದ ಒಂದು ಅಂಗವಾಗಿವೇ ಬದಲಾಗಿರುವ ಭಾರತದ ಚುನಾವಣಾ ಆಯೋಗವು (ECI), ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ಮತ್ತು ಈ ರೀತಿ ತೆಗೆದುಹಾಕಲಾದ ಬಹುಪಾಲು ಹೆಸರುಗಳು ಧಾರ್ಮಿಕ ಅಲ್ಪಸಂಖ್ಯಾತರದ್ದಾಗಿರುವುದು ಗಮನಾರ್ಹ. ಅಂದರೆ, ಅವರೆಲ್ಲರೂ ನುಸುಳುಕೋರರೇ? ಇದನ್ನು ಖಚಿತವಾಗಿ ಹೇಳಲು ಚುನಾವಣಾ ಆಯೋಗಕ್ಕಾಗಲೀ ಅಥವಾ ಗೃಹ ಸಚಿವರಿಗಾಗಲೀ ಸಾಧ್ಯವಾಗುತ್ತಿಲ್ಲ. 15 ಡಿಸೆಂಬರ್, 2025ರಂದು ಇಬ್ಬರು ಸಂಸದರು, ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ನುಸುಳಿದವರ ಸಂಖ್ಯೆ ಎಷ್ಟು ಮತ್ತು ಅವರಲ್ಲಿ ಎಷ್ಟು ಜನರನ್ನು ಇದುವರೆಗೆ ಬಂಧಿಸಲಾಗಿದೆ ಎಂದು ತಿಳಿಯಲು ಲೋಕಸಭೆಯಲ್ಲಿ ಪ್ರಶ್ನೆಯೊಂದನ್ನು ಮಂಡಿಸಿದ್ದರು. ಅದಕ್ಕೆ ಉತ್ತರವಾಗಿ, ಅಮಿತ್ ಶಾ ಅವರ ಗೃಹ ಇಲಾಖೆ ನೀಡಿರುವ, ನವೆಂಬರ್ 2021 ರಿಂದ 2025 ರವರೆಗೆ ಬಾಂಗ್ಲಾದೇಶ ಗಡಿಯ ಮೂಲಕ ನಡೆದ ನುಸುಳುವಿಕೆ ಪ್ರಯತ್ನ ಮತ್ತು ಬಂಧನಗಳ ಬಗ್ಗೆ ಲಭ್ಯವಿರುವ ಅಂಕಿ-ಅಂಶಗಳು ಹೀಗಿವೆ. ಈ ಅಂಕಿ-ಅಂಶಗಳು ಗೃಹ ಸಚಿವರು ಮತ್ತು ಅವರ ಪಕ್ಷದ ಸಹೋದ್ಯೋಗಿಗಳ ಅತಿಶಯೋಕ್ತಿಯ ಘೋಷಣೆಗಳಿಗೆ ಯಾವುದೇ ರೀತಿಯಲ್ಲೂ ತಾಳೆಯಾಗದೆ ಇರುವುದು ಸೋಜಿಗವೇ ಸರಿ! ಅವರ ಈ ಆಧಾರರಹಿತ ಘೋಷಣೆಯ ಮೂಲ ಯಾವುದು ಎಂದು ಶ್ರೀ. ಶಾ ಅವರೇ ಹೇಳಬೇಕು. ಅಧಿಕಾರಸ್ಥರು, ಯಾರೇ ಇರಲಿ, ಅವರು ಪ್ರಮುಖ ಮಂತ್ರಿಗಳೇ ಆಗಿದ್ದರೂ ಸಹ, ಬೇಕಾಬಿಟ್ಟಿಯಾಗಿ ಮಾತನಾಡುವ ಪರವಾನಗಿ ಪಡೆದಂತೆ ಇದೆ; ತಮ್ಮ ಮಾತಿನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವ ಪ್ರಶ್ನೆಯೇ ಇಲ್ಲ, ಈ ಬಗ್ಗೆ ಜನರೆಡೆಗೆ ಯಾವ ಬಾಧ್ಯತೆಯೂ ಅವರಿಗಿಲ್ಲ! ಇದು ಫ್ಯಾಸೀವಾದಿ ಸರ್ವಾಧಿಕಾರದ ಹೆಗ್ಗುರುತಾಗಿದೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಇರುವಾಗ ಅಲ್ಲಿ ‘SIR’ ನಡೆಸುತ್ತಿದ್ದಾಗಲೂ, ಶ್ರೀ. ಅಮಿತ್ ಶಾ ಅವರು, ‘ನುಸುಳುಕೋರ’ರ ಬಗ್ಗೆ ದೊಡ್ಡ ಗಲಾಟೆಯನ್ನೇ ಸೃಷ್ಟಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಆದರೆ, ಅಲ್ಲಿ ತೆಗೆದುಹಾಕಲಾದ 65 ಲಕ್ಷ ಹೆಸರುಗಳಲ್ಲಿ, ಯಾರೊಬ್ಬರನ್ನೂ ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ (ಮ್ಯಾನ್ಮಾರ್‌ನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದ ಮುಸ್ಲಿಂ ಸಮುದಾಯ) ಎಂದು ಗುರುತಿಸಲಾಗಿಲ್ಲ. ಅದೇ ರೀತಿ, ಪಶ್ಚಿಮ ಬಂಗಾಳದಲ್ಲೂ ಯಾರನ್ನೂ ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ ನುಸುಳುಕೋರರೆಂದು ಗುರುತಿಸಲು ಸಾಧ್ಯವಾಗಿಲ್ಲ.

2019 ರಲ್ಲಿ ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಅಧಿಕಾರದಲ್ಲಿತ್ತು. ಆ ಸರ್ಕಾರವು ಭಾರತದ ಬಿಜೆಪಿ ಸರ್ಕಾರದೊಂದಿಗೆ ಅತ್ಯಂತ ನಿಕಟವಾಗಿತ್ತು. ಭಾರತ ಸರ್ಕಾರವು 2 ಕೋಟಿ ಕಾನೂನುಬಾಹಿರ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಮಾತನಾಡಿದಾಗ ಅದರದ್ದು ಅಯೋಮಯ ಪರಿಸ್ಥಿತಿ! 15 ಡಿಸೆಂಬರ್, 2019 ರಂದು, ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮಿನ್ ಅವರು, ಭಾರತದಲ್ಲಿ ವಾಸಿಸುತ್ತಿರುವ ಕಾನೂನುಬಾಹಿರ ಬಾಂಗ್ಲಾದೇಶಿ ನಾಗರಿಕರ ಪಟ್ಟಿಯನ್ನು ನೀಡುವಂತೆ ಕೇಳಿದ್ದರು; ಇದರಿಂದ ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಬಹುದು ಎಂದೂ ಹೇಳಿದ್ದರು. ಆದರೆ ಭಾರತ ಸರ್ಕಾರವು ತನ್ನ ಬಳಿ ಅಂತಹ ಯಾವುದೇ ಪಟ್ಟಿ ಇಲ್ಲ ಎಂದು ತಿಳಿಸಿತ್ತು. ಅಚ್ಚರಿಯ ವಿಷಯವೆಂದರೆ, ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ, ಈ ಹಿಂದೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಶಾಸಕ ಮತ್ತು ಟಿಎಂಸಿ ಇಂದ ಪಕ್ಷಾಂತರಗೊಂಡ ಸುವೇಂದು ಅಧಿಕಾರಿ ಅವರು, ಪಶ್ಚಿಮ ಬಂಗಾಳ ಗಡಿಯ ಮೂಲಕ 70 ಲಕ್ಷ ರೋಹಿಂಗ್ಯಾಗಳು ಭಾರತದೊಳಗೆ ನುಸುಳಿದ್ದಾರೆ ಎಂದು ಇತ್ತೀಚೆಗೆ ಹೇಳಿದ್ದರು. ಆದರೆ, ರೋಹಿಂಗ್ಯಾಗಳ ಒಟ್ಟು ಸಂಖ್ಯೆಯೇ 21 ಲಕ್ಷ. ಅವರಲ್ಲಿ 7 ಲಕ್ಷ ಜನರು ಇನ್ನೂ ಮ್ಯಾನ್ಮಾರ್‌ನಲ್ಲಿದ್ದಾರೆ, 11 ಲಕ್ಷ ಜನರು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಿರಾಶ್ರಿತರ ಶಿಬಿರದಲ್ಲಿ ಹೇಗೋ ಒಂದು ಬದುಕು ಸಾಗಿಸುತ್ತಿದ್ದಾರೆ. ಉಳಿದವರು ವಿವಿಧ ದೇಶಗಳಲ್ಲಿ ಚದುರಿಹೋಗಿದ್ದಾರೆ. ಮತ್ತೆ 70 ಲಕ್ಷದ್ದು ಯಾವ ಲೆಕ್ಕ? ಯಾವುದೇ ಪ್ರಾಂತ್ಯವು ಕಾನೂನುಬಾಹಿರ ನುಸುಳುಕೋರರ ವಾಸಸ್ಥಾನವಾಗುವುದನ್ನು ಯಾರೂ ಬಯಸುವುದಿಲ್ಲ. ಅಂತಹ ನುಸುಳುಕೋರರಿದ್ದರೆ, ಒಪ್ಪಿತ ಅಂತರರಾಷ್ಟ್ರೀಯ ವಾಪಸಾತಿ ಕಾನೂನಿನ ಪ್ರಕಾರ ಅವರನ್ನು ಅವರವರ ದೇಶಗಳಿಗೆ ಗಡೀಪಾರು ಮಾಡಬೇಕಾಗುತ್ತದೆ. ಬದಲಾಗಿ, ಆರ್‌ಎಸ್‌ಎಸ್-ಬಿಜೆಪಿಯ ಕಾರ್ಯಕರ್ತರು ಬಿಜೆಪಿ ಸರ್ಕಾರ ಮತ್ತು ಪೊಲೀಸರ ಸಹಾಯದಿಂದ ದೆಹಲಿ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ದೇಶದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದರು. ಅಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರು ವಲಸೆ ಕಾರ್ಮಿಕರಾಗಿ, ಖಾಯಂ ಉದ್ಯೋಗದಲ್ಲಿ, ಬೀದಿ ಬದಿ ವ್ಯಾಪಾರಿಗಳಾಗಿ ಅಥವಾ ಸಣ್ಣ ವ್ಯಾಪಾರ ನಡೆಸುತ್ತಾ ಜೀವಿಸುತ್ತಿದ್ದಾರೆ. ಅವರನ್ನು ಹೊರಗೆ ಎಳೆದುಹಾಕಿ, ಕ್ರೂರವಾಗಿ ಥಳಿಸಿ, ನಂತರ ಬಲವಂತವಾಗಿ ಓಡಿಸಲಾಯಿತು. ಅವರ ಮನೆಗಳನ್ನು ಲೂಟಿ ಮಾಡಲಾಯಿತು ಮತ್ತು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಯಿತು. ಗರ್ಭಿಣಿ ಮಹಿಳೆಯೊಬ್ಬಳೂ ಸೇರಿದಂತೆ ಅವರಲ್ಲಿ ಕೆಲವರನ್ನು ನೆರೆಯ ಬಾಂಗ್ಲಾದೇಶಕ್ಕೆ ತಳ್ಳಲಾಯಿತು. ಕೆಲವು ಸಂದರ್ಭಗಳಲ್ಲಿ, ಅತೀವ ಕ್ರೌರ್ಯ ಮತ್ತು ದ್ವೇಷದಿಂದ ಅವರನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಗಡಿ ಪ್ರದೇಶದ ಕಾಡುಗಳಲ್ಲಿ ಹಸಿವಿನಿಂದ ಅಥವಾ ಕ್ರೂರ ಪ್ರಾಣಿಗಳ ದಾಳಿಯಿಂದ ಸಾಯಲು ಬಿಡಲಾಯಿತು! ವಾಸ್ತವತೆಯೆಂದರೆ, ಅಲ್ಪಸಂಖ್ಯಾತ ಮುಸ್ಲಿಮರನ್ನು, ವಿಶೇಷವಾಗಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಗುರಿಯಾಗಿಸಲು, ಅವರನ್ನು ಬಾಂಗ್ಲಾದೇಶಿ ನುಸುಳುಕೋರರೆಂದು ಬಿಂಬಿಸಲು, ಬಹುಶಃ ಬಂಧನ ಕೇಂದ್ರಗಳಿಗೆ (ಅಸ್ಸಾಂನಲ್ಲಿರುವಂತೆ) ಕಳುಹಿಸಲು, ಹಿಂದೂಗಳ ಮನಸ್ಸಿನಲ್ಲಿ ಅವರ ಮುಸ್ಲಿಂ ಸಹೋದರರ ವಿರುದ್ಧ ವಿಷವನ್ನು ತುಂಬಿ, ಈ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ಸಲುವಾಗಿ ಕೋಮು ಉದ್ವಿಗ್ನತೆ ಹಾಗೂ ಧ್ರುವೀಕರಣವನ್ನು ಉಲ್ಬಣಗೊಳಿಸಲು ಈ ನುಸುಳುಕೋರರ ವಿಷಯವನ್ನು ಎತ್ತಲಾಗಿದೆ. ಅದಕ್ಕಾಗಿಯೇ, ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ಕಿರುಕುಳ ನೀಡಲು, ಅವರ ಮೇಲೆ ಹಲ್ಲೆ ಮಾಡಲು ಮತ್ತು ಅವರ ವಾಸಸ್ಥಳದಿಂದ ಅವರನ್ನು ಒಕ್ಕಲೆಬ್ಬಿಸಲು ಆರ್‌ಎಸ್‌ಎಸ್-ಬಿಜೆಪಿ-ಸಂಘ ಪರಿವಾರ ನಡೆಸಿರುವ ಪಿತೂರಿ ಇದು. ತಮಗೆ ಚುನಾವಣಾ ಲಾಭವನ್ನು ತಂದುಕೊಡಬಲ್ಲ ಬೇರೆ ಯಾವುದೇ ವಿಷಯವನ್ನು ಎತ್ತಲು ಸಾಧ್ಯವಾಗದೆ, ಆರ್‌ಎಸ್‌ಎಸ್-ಬಿಜೆಪಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುನ್ನ ಈ ವಿಷಯದ ಬಗ್ಗೆ ಭಾರಿ ಗುಲ್ಲೆಬ್ಬಿಸಿದೆ. ಗೊಬೆಲ್ಸ್ ಶೈಲಿಯಲ್ಲಿ, ಸುಳ್ಳನ್ನು ನಿರಂತರವಾಗಿ ಮತ್ತೆಮತ್ತೆ ಹೇಳಿದರೆ, ಜನರು ಅದನ್ನು ಸತ್ಯ ಎಂದು ನಂಬಲು ಪ್ರಾರಂಭಿಸಬಹುದು ಎಂಬ ಆಶಯ ಅವರದ್ದು. ಮತ್ತೆ, ಈ ಕಾಲ್ಪನಿಕ ನುಸುಳುಕೋರರ ಸಿದ್ಧಾಂತದ ಆಧಾರದಲ್ಲಿಯೇ, ಬಿಜೆಪಿಯು ತನಗೆ ನಿಷ್ಠವಾಗಿರುವ ಚುನಾವಣಾ ಆಯೋಗವನ್ನು (ECI) ವನ್ನು ಬಳಸಿಕೊಂಡು, ಅದು, SIR ಹೆಸರಿನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕುವಂತೆ ಮಾಡಿದೆ. ಪ್ರಜ್ಞಾವಂತರು ಈ ದುರುದ್ದೇಶಪೂರಿತ ಪ್ರಚಾರಕ್ಕೆ ಬಲಿಯಾಗದೆ, ಕೋಮು ಸೌಹಾರ್ದತೆ ಹಾಗೂ ದ್ವೇಷವನ್ನು ಉಂಟುಮಾಡುವ ಯಾವುದೇ ಷಡ್ಯಂತ್ರವನ್ನು ತಡೆಯುತ್ತಾರೆ ಎಂದು ನಾವು ಖಚಿತವಾಗಿ ನಂಬುತ್ತೇವೆ.