ಕಳೆದ ವರ್ಷ ಆಗಸ್ಟ್ ನಲ್ಲಿ ಅಮೆರಿಕಾ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.25 ರಷ್ಟು ಸುಂಕವನ್ನು ಹೇರಿತು. ಜೊತೆಗೆ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದರೆ ಶೇ.25 ರಷ್ಟು ಹೆಚ್ಚುವರಿ ಸುಂಕ ಹೇರುವ ಬೆದರಿಕೆ ಹಾಕಿತು. ಇದು ಅಮೆರಿಕಾದ ಸ್ಥಳೀಯ ಉತ್ಪಾದನೆಗೆ ಇಂಬು ಕೊಡುತ್ತದೆ ಮತ್ತು ರಾಷ್ಟ್ರೀಯ ಸುರಕ್ಷತೆಯನ್ನು ರಕ್ಷಿಸುತ್ತದೆ ಎಂಬುದು ಟ್ರಂಪ್‌ನ ವಾದ. ಇದು ಟ್ರಂಪ್‌ನ ಹುಚ್ಚಾಟದ ಕೆಲಸಗಳಲ್ಲ. ಅದರ ಹಿಂದೆ ಆರ್ಥಿಕ ಕಾರಣಗಳಿವೆ. 2004 ರಲ್ಲಿ ಅಮೆರಿಕಾಗೆ ಭಾರತದೊಂದಿಗೆ ನಡೆಯುವ ಆಮದು-ರಫ್ತುಗಳಲ್ಲಿ 4.56 ಕೋಟಿ ಡಾಲರ್ ವ್ಯಾಪಾರ ಕೊರತೆಯಿದೆ. ಅಂದರೆ ಭಾರತಕ್ಕೆ ರಫ್ತು ಮಾಡುವುದಕ್ಕಿಂತ ಆಮದು ಹೆಚ್ಚಾಗಿದೆ. ಈಗ ಅಮೆರಿಕಾ ಒಂದು ಕಡೆ, ವ್ಯಾಪಾರ ಕೊರತೆಯನ್ನು ನೀಗಿಸಿಕೊಳ್ಳಬೇಕು ಮತ್ತು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು. ಅದಕ್ಕಾಗಿ ಅದು ನೇರವಾಗಿ ಯುದ್ಧವನ್ನು ಮಾಡುತ್ತದೆ, ಹಾಗೆಯೇ ವ್ಯಾಪಾರಿ ಯುದ್ಧಕ್ಕೂ ಇಳಿಯುತ್ತದೆ. ವ್ಯಾಪಾರಿ ಯುದ್ಧದಲ್ಲಿ ವಿನಾಶಕಾರಿ ಆರ್ಥಿಕ ದಿಗ್ಬಂಧನಗಳು, ಬಲವಂತವಾಗಿ ಹೇರುವ ಒಪ್ಪಂದಗಳು, ಬೇರೆ ದೇಶಗಳು ವ್ಯಾಪಾರ, ಸುಂಕ ಮತ್ತು ಆರ್ಥಿಕ ನೀತಿಗಳನ್ನು ಅಮೆರಿಕಾಗೆ ಅನುಕೂಲವಾಗುವಂತೆ ಬದಲಾಯಿಸುವುದು - ಇವೆಲ್ಲವೂ ಸೇರಿವೆ. ಅಮೆರಿಕಾ ಹಾಗೂ ಭಾರತದ ವ್ಯಾಪಾರ ಸಂಬಂಧ ಮೊದಲಿನಿಂದಲೂ ಚೆನ್ನಾಗಿಯೇ ಇದೆ. ಆದರೆ ಮಧ್ಯ ಏಷ್ಯಾದಲ್ಲಿ ಅಮೆರಿಕಾದ ಯುದ್ಧದಿಂದ ಮತ್ತು ಇರಾನ್ ಹಾಗೂ ವೆನೆಜುವೆಲಾ ಮೇಲೆ ಆರ್ಥಿಕ ದಿಗ್ಭಂದನ ಹೇರಿದಾಗಿನಿಂದ, ತೈಲದ ಭಾರಿ ಖರೀದಿಗಾರ ದೇಶವಾದ ಭಾರತ ರಷ್ಯಾದಿಂದ ಬಹಳ ಅಗ್ಗದ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿತು. ಜೊತೆಗೆ ವ್ಯವಹಾರವನ್ನು ರೂಪಾಯಿ ಅಥವಾ ರೂಬಲ್‌ನಲ್ಲಿ ನಡೆಸಿತೇ ಹೊರತು ಡಾಲರ್‌ನಲ್ಲಲ್ಲ. ಇದು ಡಾಲರ್ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಅಮೆರಿಕಾಗೆ ಭಾರತದ ಮೇಲೆ ಕೆಂಗಣ್ಣು ಬಿದ್ದಿತು. ಆದಕಾರಣ ಶೇ.25 ರಷ್ಟು ಹೆಚ್ಚುವರಿ ಸುಂಕ ಹೇರಿತು ಮತ್ತು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವದನ್ನು ನಿಲ್ಲಿಸದಿದ್ದರೆ ಇನ್ನೂ ಶೇ.25 ರಷ್ಟು ಹೆಚ್ಚು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿತು.

ನಂತರದ ಬೆಳವಣಿಗೆಗಳು:

ಇದರಿಂದ ತತ್ತರಿಸಿದ ಕೇಂದ್ರ ಬಿಜೆಪಿ ಸರ್ಕಾರ ಸುಂಕ ಇಳಿಸುವಂತೆ ಅಮೆರಿಕಾವನ್ನು ಗೋಗರೆಯಿತು. ನೇರವಾಗಿ ಪ್ರಧಾನಿ ಮೋದಿ ಮಾತುಕತೆಗೆ ಹೋಗದಿದ್ದರೂ ಇಬ್ಬರು ಪ್ರಮುಖ ಕ್ಯಾಬಿನೆಟ್ ಸಚಿವರನ್ನು ಸಂಧಾನಕ್ಕೆಂದು ಅಮೆರಿಕಾಗೆ ಕಳುಹಿಸಿದರು. ಅಲ್ಲಿ ಹಲವು ಸುತ್ತಿನ ಮಾತುಕತೆಯಾದ ಮೇಲೆ ಅಮೆರಿಕಾ-ಭಾರತ ಜಂಟಿ ಹೇಳಿಕೆ ನೀಡಿದವು: ‘ಪರಸ್ಪರ ಪ್ರಯೋಜನಕಾರಿ ವ್ಯಾಪಾರದ ಬಗ್ಗೆ ಹಂಗಾಮಿ ಒಪ್ಪಂದಕ್ಕೆ ಬರಲಾಗಿದೆ. ಅದರಂತೆ ಫೆಬ್ರವರಿ 13, 2025 ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಹರಿಬಿಟ್ಟ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಎರಡೂ ದೇಶಗಳು ತಮ್ಮ ಬದ್ಧತೆಯನ್ನು ದೃಢಪಡಿಸಿವೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಹೆಚ್ಚುವರಿ ಮಾರುಕಟ್ಟೆ ಅವಕಾಶಕ್ಕೆ ಬದ್ಧತೆ ಮತ್ತು ಹೆಚ್ಚು ಹೊಂದಾಣಿಕೆಯಾಗುವ ಸರಬರಾಜು ಸರಪಳಿಗಳೂ ಸೇರಿವೆ.’ ಎಂಥ ಬೆಣ್ಣೆ ಮಾತು! ಆದರೆ ವಾಸ್ತವವೇನು? ಅಮೆರಿಕಾದ ಕೈಗಾರಿಕಾ ಸರಕುಗಳು ಮತ್ತು ವಿಶಾಲ ವ್ಯಾಪ್ತಿಯ ಕೃಷಿ ಹಾಗೂ ಆಹಾರ ಪದಾರ್ಥಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕುವುದಕ್ಕೆ ಅಥವಾ ಕಡಿಮೆ ಮಾಡುವುದಕ್ಕೆ ಭಾರತ ಒಪ್ಪಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕಾ ಸುಂಕವನ್ನು ಶೇ.18 ಕ್ಕೆ ಇಳಿಸುತ್ತದೆ. ಅಮೆರಿಕಾದಿಂದ ಆಮದಾಗುವ ಸರಕುಗಳಿಗೆ ಭಾರತವು ಸರಾಸರಿ ಶೇ.17 ರಷ್ಟು ಮತ್ತು ಕೃಷಿ ಉತ್ಪನ್ನಗಳಿಗೆ ಶೇ.39 ರವರೆಗೆ ಸುಂಕವನ್ನು ವಿಧಿಸುತ್ತಿತ್ತು. ಈಗ ಸುಂಕ ತೀವ್ರವಾಗಿ ಇಳಿಯುತ್ತದೆ ಅಥವಾ ಕೆಲವಕ್ಕೆ ಶೂನ್ಯವೂ ಆಗಬಹುದು (ಅಮೆರಿಕಾದ ಹತ್ತಿಗೆ ಶೂನ್ಯ ಸುಂಕ). ಇನ್ನು ಮುಂದೆ ಭಾರತದ ಮಾರುಕಟ್ಟೆಗೆ ಅಮೆರಿಕಾದ ಸರಕುಗಳು ಲಗ್ಗೆ ಹಾಕುತ್ತವೆ. ಇಷ್ಟೂ ಸಾಲದೆನ್ನುವಂತೆ, ಮುಂದಿನ 5 ವರ್ಷಗಳಲ್ಲಿ 500 ಕೋಟಿ ಡಾಲರ್‌ನಷ್ಟು ಅಮೆರಿಕಾದ ಸರಕುಗಳನ್ನು ಖರೀದಿಸಲು ಭಾರತ ಒಪ್ಪಿಕೊಂಡಿದೆ. ಆದರೆ ಅಮೆರಿಕಾಗೆ ರಫ್ತಾಗುವ ಭಾರತದ ಸರಕುಗಳಿಗೆ ಇದುವರೆಗೆ (ಎಂದರೆ ಇತ್ತೀಚಿನ ಒಪ್ಪಂದಕ್ಕೆ ಮುಂಚೆ ಇದ್ದ) ಸರಾಸರಿ ಶೇ.2-3 ರಷ್ಟಿದ್ದ ಸುಂಕವನ್ನು ಶೇ.18 ಕ್ಕೆ ಏರಿಸಲಾಗಿದೆ. ಭಾರತದ ವ್ಯಾಪಾರದಲ್ಲಿ ಶೇ.17 ರಷ್ಟು ವ್ಯವಹಾರವಿರುವ ಅಮೆರಿಕಾ ಭಾರತದ ಅತಿ ದೊಡ್ಡ ವ್ಯಾಪಾರಿ ಪಾಲುದಾರ. ಈ ಒಪ್ಪಂದದಿಂದ ಭಾರತದ ರಫ್ತಿಗೆ ದೊಡ್ಡ ಹೊಡೆತ ಬೀಳುತ್ತದೆ. ಅದರ ನೋವು ಅನುಭವಿಸುವವರು ಮಾತ್ರ ದುಡಿಯುವ ಜನರು.

ಭಾರತದ ರೈತರ ಸ್ಥಿತಿ ಚಿಂತಾಜನಕ

ಅಮೆರಿಕದ ಕೃಷಿ ಕ್ಷೇತ್ರವು ಅತ್ಯಂತ ಹೆಚ್ಚು ಸಬ್ಸಿಡಿ ಹೊಂದಿರುವ ಕ್ಷೇತ್ರ ಮತ್ತು ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಟಿಯಲ್ಲಿದೆ. ಅಮೆರಿಕ ಲಾಗಾಯ್ತಿನಿಂದಲೂ ತನ್ನ ಕೃಷಿ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ತಳ್ಳಲು ಪ್ರಯತ್ನ ನಡೆಸುತ್ತಲೇ ಇತ್ತು. ಇದನ್ನು ಭಾರತ ವಿಶ್ವ ವ್ಯಾಪಾರ ಒಪ್ಪಂದದಂತಹ ಜಾಗತಿಕ ವ್ಯಾಪಾರ ವೇದಿಕೆಗಳಲ್ಲಿ ಪ್ರತಿರೋಧಿಸುತ್ತಲೇ ಇತ್ತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕೃಷಿಯನ್ನು ವ್ಯಾಪಾರದ ವಸ್ತುವನ್ನಾಗಿ ಪರಿಗಣಿಸಬಾರದು ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದು ವಾದ ಮಾಡುತ್ತಲೇ ಇದೆ. ಈಗ ಈ ವಾದಕ್ಕೆ ಎಳ್ಳು ನೀರು ಬಿಟ್ಟಿದೆ. ಭಾರತವು ಅಮೆರಿಕದಿಂದ ಪ್ರಮುಖವಾಗಿ ಬಾದಾಮಿ, ವಾಲ್‌ನಟ್, ಹತ್ತಿ ಹಾಗೂ ಸೋಯಾ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಒಪ್ಪಂದದ ಬಳಿಕ ಅಮೆರಿಕದಿಂದ ಭಾರಿ ಪ್ರಮಾಣದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ದಾಂಗುಡಿ ಇಡಲಿವೆ.

ಒಪ್ಪಂದದ ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತದ ಕೃಷಿ ವಲಯ ಸಂಪೂರ್ಣ ಸುರಕ್ಷಿತವಾಗಿದೆ. ನೂತನ ಅಮೆರಿಕ-ಭಾರತ ಒಪ್ಪಂದದಿಂದ ಭಾರತದ ರೈತರು, ಡೇರಿ ಉತ್ಪನ್ನ ಹಾಗೂ ಗ್ರಾಮೀಣ ಉದ್ಯೋಗಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದರು. ಆದರೆ, ಇದೆಲ್ಲವೂ ಗಾಳಿಯಲ್ಲಿ ಹಾರಿಹೋಗುವ ಮಾತುಗಳು ಎಂಬುದು ಒಪ್ಪಂದವನ್ನು ನೋಡಿದಾಗ ಗೊತ್ತಾಗುತ್ತದೆ.

ಭಾರತಕ್ಕೆ ರವಾನೆಯಾಗುವ ಪಶು ಆಹಾರ, ಡ್ರೆೈಫ್ರೂಟ್‌ಗಳು, ತಾಜಾ ಹಾಗೂ ಸಂಸ್ಕರಿಸಲಾದ ಹಣ್ಣುಗಳು, ಸೋಯಾ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಮತ್ತು ಹೆಚ್ಚುವರಿ ಪದಾರ್ಥಗಳ ಮೇಲಿನ ಸುಂಕವನ್ನು ತೆಗೆದು ಹಾಕಲಾಗಿದೆ ಅಥವಾ ಕಡಿತಗೊಳಿಸಲಾಗಿದೆ. ಆದ್ದರಿಂದಲೇ ‘ಭಾರತವು ತನ್ನ ಕೃಷಿ ವಲಯವನ್ನು ನಮಗೆ ಮುಕ್ತಗೊಳಿಸಿದ್ದರಿಂದಾಗಿ ಅಮೆರಿಕಾದ 13 ಕೋಟಿ ಡಾಲರ್ ಕೃಷಿ ಕ್ಷೇತ್ರದ ಕೊರತೆಯು ನೀಗಲಿದೆ’ ಎಂದು ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರಾಲಿನ್ಸ್ ಅವರು ಬಹಳ ವಿಶ್ವಾಸದಿಂದ ಹೇಳಿಕೆ ನೀಡಿದ್ದು. ‘ಭಾರಿ ಪ್ರಮಾಣದ ಹಣ ಅಮೆರಿಕದ ಕೃಷಿ ವಲಯಕ್ಕೆ ಸಿಗಲಿದೆ’ ಎಂದಿದ್ದಾರೆ. ಅದು ಅಮೆರಿಕಾದ ರೈತರಿಗೆ ಹೋಗುವುದಿಲ್ಲ, ಕಾರ್ಪೊರೆಟ್ ಕಂಪೆನಿಗಳ ಖಜಾನೆ ತುಂಬುತ್ತದೆ. ಭಾರತದಲ್ಲಿ ತಯಾರಾಗುವ ಕೃಷಿ ಉತ್ಪನ್ನಗಳ ಬೆಲೆಗಿಂತ ಅಮೆರಿಕದಿಂದ ಬರುವ ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗುವುದರಿಂದ ಭಾರತದ ರೈತರು ಏಕಸ್ವಾಮ್ಯಾಧಿಪತಿಗಳು ಕೇಳಿದಷ್ಟು ಬೆಲೆಗೆ ತಮ್ಮ ಬೆಳೆಯನ್ನು ಮಾರಬೇಕಾಗುತ್ತದೆ. ಇದರಿಂದ ಭಾರತದ ಅದಾನಿ ನೇತೃತ್ವದ ಎಡಬ್ಯ್ಲುಎಲ್ (AWL) ಅಗ್ರಿ ಹಾಗೂ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೊ ಮಾರ್ಟ್ ಗೆ ಅನುಕೂಲವಾಗುತ್ತದೆ.

ಇದುವರೆಗೂ ಅಮೆರಿಕಾ ಭಾರತದ ಜವಳಿ ರಫ್ತಿನಲ್ಲಿ ಪ್ರತಿವರ್ಷ ಶೇ.30 ರಷ್ಟು, ಅಂದರೆ, 10 ರಿಂದ 11 ಕೋಟಿ ಡಾಲರ್‌ನಷ್ಟು ಖರೀದಿಸುತ್ತಿತ್ತು. ಈಗ, ಅದು ಬಾಂಗ್ಲಾದೇಶದೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ಅಮೆರಿಕಾದಿಂದ ಆಮದು ಮಾಡಿಕೊಂಡ ಹತ್ತಿಯಿಂದ ತಯಾರಿಸಿದ ಜವಳಿಗೆ ಶೂನ್ಯ ಸುಂಕವೆಂದು ಹೇಳಿದೆ. ಇದರಿಂದ ಈಗಲೂ 18% ಸುಂಕ ನೀಡಬೇಕಾದ ಭಾರತ ರಫ್ತುದಾರರಿಗೆ ಹೊಡೆತ ಬೀಳುತ್ತದೆ. ಭಾರತವು ಬಾಂಗ್ಲಾದೇಶಕ್ಕೆ 4 ರಿಂದ 4.5 ಕೋಟಿ ಡಾಲರ್‌ನಷ್ಟು ಹತ್ತಿ ಮತ್ತು ನೂಲನ್ನು ರಫ್ತು ಮಾಡುತ್ತಿತ್ತು. ಈಗ ಬಾಂಗ್ಲಾದೇಶ ತನ್ನ ಅನುಕೂಲಕ್ಕಾಗಿ ಅಮೆರಿಕಾದ ಹತ್ತಿಯನ್ನು ಆಮದು ಮಾಡಿಕೊಂಡರೆ, ಭಾರತದ ಹತ್ತಿ ರಫ್ತು ನೆಲಕಚ್ಚುತ್ತದೆ. ಇದರ ನೇರ ಹೊಡೆತ ಬೀಳುವುದು ಭಾರತದ ಹತ್ತಿ ಬೆಳೆಗಾರರ ಮೇಲೆ.

ಭಾರತದ ಕೃಷಿ ಅಮೆರಿಕಾಗಿಂತ ಭಿನ್ನ. ಅಮೆರಿಕಾದಲ್ಲಿ ಕೃಷಿ ದೊಡ್ಡ ಕಂಪೆನಿಗಳಿಗೆ ಮತ್ತು ವ್ಯಾಪಾರಿ ಮನೆತನಗಳಿಗೆ ಲಾಭದ ಸಂಪನ್ಮೂಲ. ಆದರೆ ಭಾರತದಲ್ಲಿ ಕೃಷಿಯಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಾಗಿದ್ದಾರೆ. ಇಡೀ ಕುಟಂಬ ವೇತನವಿಲ್ಲದೆ ದುಡಿಯುತ್ತದೆ. ವ್ಯವಸಾಯಗಾರರಿಗೆ ಕೃಷಿ ಜಮೀನು ಮಕ್ಕಳಿದ್ದಂತೆ. ಆದ್ದರಿಂದಲೇ ಜಾನಪದ ಹಾಡಿನಲ್ಲಿ ಬರ ಬಂದಾಗ ಜಮೀನು ಮಾರಿದ್ದನ್ನು ‘ಮಕ್ಕಳ ಮಾರ‍್ಯಾರೋ’ ಎಂದು ಹಾಡಿದ್ದಾರೆ. ರೈತರಿಗೆ ಜಮೀನು, ಎತ್ತು, ಎಮ್ಮೆ, ದನ, ಕೃಷಿ ಸಲಕರಣೆಗಳ ಜೊತೆ ಭಾವನಾತ್ಮಕ ಸಂಬಂಧವಿದೆ. ಕೃಷಿಯ ಆದಾಯದ ಮೇಲೆ ಕುಟಂಬ ನಿಂತಿದೆ. ಬೆಲೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರ ಜೀವನವೇ ತಲ್ಲಣಿಸುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಸಾಲ ತೀರಿಸುವುದಕ್ಕೆ ಕುತ್ತು ಬರುತ್ತದೆ. ಈಗಾಗಲೇ ರೈತರು ಬೆಲೆ ಕುಸಿತದಿಂದ ತತ್ತರಿಸಿ ಹೋಗಿದ್ದಾರೆ. ಅಮೆರಿಕಾ-ಭಾರತದ ಒಪ್ಪಂದ ಸಂಪೂರ್ಣವಾಗಿ ಜಾರಿಯಾದರೆ ರೈತರ ಆತ್ಮಹತ್ಯೆಯ ಸಂಖ್ಯೆ ಗಗನಕ್ಕೇರುತ್ತದೆ.

ಭಾರತ ತಲೆ ಬಾಗಿದ್ದೇಕೆ?

ಭಾರತ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ತನ್ನ ಸಾರ್ವಭೌಮತ್ವನ್ನು ಬಿಟ್ಟುಕೊಟ್ಟಿದೆ ಎಂದು ಕೆಲವರ ವಾದ. ಅದು ಸರಿಯಲ್ಲ. ಈಗಾಗಿರುವುದು ಎರಡು ಸಾಮ್ರಾಜ್ಯಶಾಹಿ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದ. ಪ್ರತಿಯೊಂದು ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ದೇಶವು ತನ್ನ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಬೇರೆಯವರ ಮಾರುಕಟ್ಟೆಗೆ ಲಗ್ಗೆ ಹಾಕುತ್ತದೆ. ಬಲಪ್ರಯೋಗ ಮಾಡುತ್ತದೆ. ಅಲ್ಲಿ ಅತಿ ಪ್ರಬಲ ರಾಷ್ಟ್ರಕ್ಕೆ ಅಷ್ಟೊಂದು ಪ್ರಬಲವಲ್ಲದ ರಾಷ್ಟ್ರ ಮಣಿಯುತ್ತದೆ. ಏಕೆಂದರೆ ಎರಡೂ ದೇಶಗಳೂ ತಮ್ಮ ಬಂಡವಾಳಿಗರ ಹಿತವನ್ನು ಕಾಪಾಡಿಕೊಳ್ಳಲು ಅಂತಹ ಒಪ್ಪಂದಗಳಿಗೆ ಬರುತ್ತವೆ. ಈಗಾಗಿರುವ ಒಪ್ಪಂದದಿಂದ ಭಾರತದ ಬಂಡವಾಳಿಗರಿಗೆ ತೀರಾ ನಷ್ಟವೇನೂ ಆಗುವುದಿಲ್ಲ. ಅಂತಿಮವಾಗಿ ಅದಕ್ಕೆ ಬಲಿಪಶುಗಳೆಂದರೆ ರೈತರು, ಸಾಮಾನ್ಯ ಜನತೆ, ದುಡಿಯುವ ಜನ.

ಹಾಗಾದರೆ ಭಾರತವೇಕೆ ಅಂತಹ ಒಪ್ಪಂದಕ್ಕೆ ಸಹಿ ಹಾಕಿತು? ಒಂದು, ಭಾರತಕ್ಕೆ ಅಮೆರಿಕಾದೊಂದಿಗೆ ಅನಿರ್ಬಂಧಿತ ವ್ಯಾಪಾರ ಬೇಕು. ಇನ್ನೊಂದು, ರಾಜಕೀಯ ಅನಿವಾರ್ಯತೆ. ಭಾರತದ ಏಕಸ್ವಾಮ್ಯಾಧಿಪತಿಗಳಿಗೆ ಭಾರತ ಕೇವಲ ಏಷ್ಯಾದಲ್ಲಷ್ಟೇ ಅಲ್ಲ, ಪ್ರಪಂಚದಲ್ಲೇ ಸೂಪರ್‌ಪವರ್ ಆಗಬೇಕಿದೆ. ಅದಕ್ಕೆ ಮುಖ್ಯ ಸ್ಪರ್ಧಿಯೆಂದರೆ ಪ್ರತಿಕ್ರಾಂತಿಯಿಂದ ಸಮಾಜವಾದವನ್ನು ಕೆಳಗುರುಳಿಸಿ ಬಂಡವಾಳಶಾಹಿ ರಾಷ್ಟ್ರವಾಗಿರುವ ಚೀನಾ. ಹಾಗಾಗಿ ಭಾರತಕ್ಕೆ ಅಮೆರಿಕಾದ ಬೆಂಬಲ ಬೇಕು. ಆದ್ದರಿಂದಲೇ ಭಾರತದ ಬಂಡವಾಳಿಗರ ವಕ್ತಾರ ಪ್ರಧಾನಿ ಮೋದಿ ಅಮೆರಿಕಾದ ಆದೇಶಗಳಿಗೆಲ್ಲಾ ತಲೆಬಾಗುತ್ತಿರುವುದು. ಭಾರತ ಗ್ಲೋಬಲ್ ಪವರ್ ಆಗುವ ವಿಷಯದಲ್ಲಿ ರಷ್ಯಾ ಮತ್ತು ಯುರೋಪಿಯನ್ ಶಕ್ತಿಗಳು ನಂಬಲರ್ಹವಾದ ಮೈತ್ರಿಗಳಲ್ಲ. ಹಾಗಾಗಿ ಅಮೆರಿಕಾವನ್ನು ಒಲಿಸಿಕೊಳ್ಳಲು ಭಾರತ ಇಂತಹ ಒಪ್ಪಂದಕ್ಕೆ ಸಹಿ ಹಾಕಬೇಕು. ಅದಕ್ಕಾಗಿ ಭಾರತದ ದುಡಿಯುವ ಜನತೆಯ ಹಿತವನ್ನು ಬಲಿಕೊಟ್ಟಿದೆ.

ವ್ಯಂಗ್ಯಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್