2030 ರೊಳಗೆ ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗಬೇಕಾಗಿದ್ದ ಭಾರತದ ಆರ್ಥಿಕತೆಯು ಈಗ ಆರನೇ ಸ್ಥಾನಕ್ಕೆ ಇಳಿದಿರುವುದೇಕೆ?

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಭಾರತವು ಜರ್ಮನಿ, ಜಪಾನ್‌ಗಳನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುತ್ತದೆ ಎನ್ನುವ ಕನಸು ಬಿತ್ತುತ್ತಿದೆ. ಪ್ರಧಾನಮಂತ್ರಿ ಮೋದಿ, ಭಾರತವು 2024-25 ರಷ್ಟೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವರು ಏಪ್ರಿಲ್ 2022 ರಂದು ಹೇಳಿಕೆ ನೀಡಿದರು: ಭಾರತವು ``5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯತ್ತ ನಡೆಯುತ್ತಿದೆ.” ಆದರೆ ಯಾವಾಗ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ವಿದೇಶಾಂಗ ಸಚಿವರಾದ ಎಸ್. ಜಯಶಂಕರ್, 2025 ರಷ್ಟೊತ್ತಿಗೆ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವುದಷ್ಟೇ ಅಲ್ಲದೆ, ಬಹಳ ಮಹತ್ವಪೂರ್ಣ ಉತ್ಪಾದಕ ಕೇಂದ್ರವಾಗುತ್ತದೆ ಎಂದು ಹೇಳಿದರು. ಆರ್ಥಿಕತೆ ಮತ್ತು ವ್ಯಾಪಾರ ಸಂಶೋಧನಾ ಕೇಂದ್ರವು, ತನ್ನ ಪ್ರಕಟಿತ ವರದಿಯಲ್ಲಿ, ಭಾರತದ ಒಟ್ಟು ದೇಶೀಯ ಉತ್ಪನ್ನದ (GDP) ಅಭಿವೃದ್ಧಿಯ ಓಘವನ್ನು ನೋಡಿದರೆ, ಭಾರತ 2035 ರೊಳಗೆ 10 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುತ್ತದೆ ಎಂದು ಭವಿಷ್ಯ ನುಡಿಯಿತು. ಈ ವರ್ಷದ ಆರಂಭದಲ್ಲಿ, ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಕೌನ್ಸಿಲ್ ಚೇರ್ಮನ್ ಆದ ವಿವೇಕ್ ದೇವ್ ರಾಯ್ ಭಾರತದ ಜಿಡಿಪಿ 2047 ರಷ್ಟೊತ್ತಿಗೆ 20 ಲಕ್ಷ ಕೋಟಿ ಡಾಲರ್‌ಗೆ ಹತ್ತಿರ ಬರುತ್ತದೆ ಎಂದು ಹೇಳಿದರು.

2025 ರ ಮೇ ನಲ್ಲಿ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ತನ್ನ ವರದಿಯಲ್ಲಿ, ಭಾರತವು 2025-26 ರಲ್ಲಿ ಜಪಾನನ್ನು ಹಿಂದಿಕ್ಕಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಲು ಸನ್ನದ್ಧವಾಗಿದೆ ಎಂದು ಸೂಚಿಸಿದೆ. ಇದಾದ ಕೆಲವು ದಿನಗಳ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಾಂಧಿನಗರದ ಸಭೆಯಲ್ಲಿ ಹೇಳಿದರು: ``ಇಂದು ಭಾರತ ಪ್ರಪಂಚದ 4ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ನಾವು ಜಪಾನ್ ದೇಶವನ್ನು ಮೀರಿಸಿ ಮುಂದೆ ಹೋಗಿದ್ದೇವೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈಗ 3ನೇಯದ್ದು (ಅತಿ ದೊಡ್ಡ ಆರ್ಥಿಕತೆ) ಆಗಬೇಕೆನ್ನುವ ಒತ್ತಡವು 4ನೇಯದ್ದು (ಅತಿ ದೊಡ್ಡ ಆರ್ಥಿಕತೆ) ಆಗಿರುವುದಕ್ಕಿಂತ ಹೆಚ್ಚಿನ ಸಂತೋಷದ ಸಂಗತಿ. ದೇಶ ಕಾದು ಕುಳಿತಿರಲು ಸಾಧ್ಯವಿಲ್ಲ. ಯಾರಾದರೂ ಸ್ವಲ್ಪ ಕಾಯಿರಿ ಎಂದರೆ, `ಮೋದಿ ಇದ್ದರೆ, ಅದು ಸಾಧ್ಯವಾಗುತ್ತದೆ’ ಎನ್ನುವ ಘೋಷಣೆ ಹಿಂದಿನಿಂದ ಬರುತ್ತದೆ.” ಮೋದಿಯ ಆತ್ಮನಿರ್ಭರ ಭಾರತದ ನೋಟಕ್ಕೆ ಮತ್ತು ಉತ್ಪಾದನಾ ಸಂಬಂಧಿತ ಉತ್ತೇಜನ (PLI) ಯೋಜನೆಗಳಂತಹ ಕಾರ್ಯತಂತ್ರದ ಆರಂಭಶೀಲತೆಗಳಿಗೆ ಕೀರ್ತಿಯನ್ನು ಸಲ್ಲಿಸುತ್ತಾ, ಸರ್ಕಾರವು ತನ್ನ ಹೇಳಿಕೆಯಲ್ಲಿ, ``ಪ್ರಧಾನಮಂತ್ರಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು ಕೇವಲ ವೇಗವನ್ನು ಪಡೆದುಕೊಳ್ಳುವುದಷ್ಟೇ ಅಲ್ಲ, ಅದು ರಾಷ್ಟ್ರೀಯ ಆರ್ಥಿಕ ಗಮ್ಯಸ್ಥಾನವನ್ನು ಮರುರೂಪಿಸುವಂಥದ್ದು” ಎಂದು ಹೇಳಿದೆ. ಇಲ್ಲೊಂದು ಬಹಳ ಮುಖ್ಯವಾದ ಸಣ್ಣ ಎಚ್ಚರಿಕೆ ಬೇಕು. ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಮತ್ತು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿದೆ ಎಂದು ತುತ್ತೂರಿಯೂದುವ ಆತುರದಲ್ಲಿ, ಐಎಂಎಫ್ ನೀಡಿರುವ ದತ್ತಾಂಶಗಳು ಮುನ್ಸೂಚನೆಯೇ ಹೊರತು ಅಂತಿಮಗೊಂಡ ದತ್ತಾಂಶ ಅಲ್ಲ ಎನ್ನುವುದನ್ನು ಬೇಕೆಂದೇ ಮರೆ ಮಾಚಲಾಗುತ್ತಿದೆ.

ನೀರ ಮೇಲಿನ ಗುಳ್ಳೆ ನಿಜವಲ್ಲ

ಆದರೆ ನೀರ ಮೇಲಿನ ಗುಳ್ಳೆಯು ಒಡೆಯುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಅದೇ ಐಎಂಎಫ್ ನೀಡಿರುವ ಇತ್ತೀಚಿನ ದತ್ತಾಂಶಗಳು, ಏರಿಕೆಯ ಪಟ್ಟಿಯಲ್ಲಿ ಮೇಲಕ್ಕೇರುವ ಬದಲು ಭಾರತ ತನ್ನ ಐದನೇ ಸ್ಥಾನದಿಂದ ಕುಸಿಯುತ್ತಿದೆ; ಅದು 2021 ರಲ್ಲಿ ಹಿಂದಕ್ಕೆ ಹಾಕಿದ ಇಂಗ್ಲೆಂಡ್‌ಗಿಂತಲೂ ಕೆಳಗಿದೆ ಎಂದು ತೋರಿಸುತ್ತಿದೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಆಯಾ ದೇಶಗಳ ಜಿಡಿಪಿ ಅಭಿವೃದ್ಧಿಯ ಮೇಲೆ ನಿರ್ಧರಿಸಲಾಗುತ್ತದೆ; ಒಂದು ನಿರ್ದಿಷ್ಟ ಸಮಯದಲ್ಲಿ ಆಯಾ ದೇಶಗಳ ಗಡಿಯೊಳಗೆ ಉತ್ಪಾದಿಸುವ ಅಂತಿಮ ಸರಕುಗಳು ಮತ್ತು ಸೇವೆಗಳ ಒಟ್ಟು ಹಣಕಾಸು ಮೌಲ್ಯವನ್ನು ಜಿಡಿಪಿ ಎಂದು ವ್ಯಾಖ್ಯಾನಿಸಲಾಗುತ್ತದೆ. ನಿಜವಾದ ಜಿಡಿಪಿ ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ; ಆದರೆ ನಾಮಮಾತ್ರದ ಜಿಡಿಪಿ (Nominal GDP) ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಐಎಂಎಫ್‌ನ ಏಪ್ರಿಲ್ ಜಾಗತಿಕ ಆರ್ಥಿಕ ದೃಷ್ಟಿಕೋನದ ಪ್ರಕಾರ, ಭಾರತವು 4.15 ಲಕ್ಷ ಕೋಟಿ ಡಾಲರ್ ಪ್ರಮಾಣದ ಜಿಡಿಪಿಯೊಂದಿಗೆ 2026-27 ಹಣಕಾಸಿನ ವರ್ಷವನ್ನು ಮುಗಿಸುತ್ತದೆ; ಅದು ಇಂಗ್ಲೆಂಡಿನ 4.26 ಲಕ್ಷ ಕೋಟಿ ಡಾಲರ್‌ಗಿಂತಲೂ ಕಡಿಮೆ.

ಭಾರತದ ಆರ್ಥಿಕತೆ ಜಾರಿ ಬಿದ್ದಿದ್ದೇಕೆ?

ಕಾರಣ ಒಂದು: ಡಾಲರ್ ಎದುರು ರೂಪಾಯಿ ಮೌಲ್ಯವು, 2024 ರಲ್ಲಿ 84.57 ರಿಂದ 2025 ರಲ್ಲಿ 88.48 ಕ್ಕೆ ಮತ್ತು 2026 ರ ಮೇ ಒಂದರಲ್ಲಿ 95.26 ಕ್ಕೆ ಕುಸಿಯಿತು. ರೂಪಾಯಿ ಅಪಮೌಲ್ಯೀಕರಣ ಮತ್ತು ನಾಮಮಾತ್ರದ ಜಿಡಿಪಿ ಪರಿಷ್ಕರಣೆಯು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಭಾರತದ ಕನಸನ್ನು ಭಗ್ನಗೊಳಿಸಿತು. ರೂಪಾಯಿ ಅಪಮೌಲೀಕರಣವು ಆಮದು ಬೆಲೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಚ್ಚಾತೈಲದ ಬೆಲೆಗಳಲ್ಲಿ ಏರಿಕೆಯಾಗಲು ಕಾರಣವಾಯಿತು.

ಕಾರಣ ಎರಡು: 2021 ಮತ್ತು 2026ರ ಮಧ್ಯೆ ಭಾರತದ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ದೊಡ್ಡ ಪ್ರಮಾಣದಲ್ಲಿ ಹೊರಬಿದ್ದರು. 2025ರ ಡಿಸೆಂಬರ್ ಅಂತ್ಯ ಭಾಗದಲ್ಲಿ ರೂ. 1.58 ಲಕ್ಷ ಕೋಟಿ ಮತ್ತು 2026 ರ ಮೊದಲ ನಾಲ್ಕು ತಿಂಗಳಲ್ಲಿ ರೂ. 1.92 ಲಕ್ಷ ಕೋಟಿ, ಅದರಲ್ಲೂ ಮುಖ್ಯವಾಗಿ ಮಾರ್ಚ್ ನಲ್ಲಿ ರೂ. 1.1 ಲಕ್ಷ ಕೋಟಿ ಹೂಡಿಕೆಯನ್ನು ಎಫ್‌ಐಐ ಹಿಂಪಡೆಯುವುದರ ಮೂಲಕ ದಾಖಲೆ ಹೊರ ಹರಿವು ಸಂಭವಿಸಿದೆ; ತೈವಾನ್/ದಕ್ಷಿಣ ಕೊರಿಯಾ ಮತ್ತು ಸಿಂಗಪೂರ್‌ಗಳಂತಹ ಷೇರು ಮಾರುಕಟ್ಟೆಯಲ್ಲಿ, ಹಾಗೆಯೇ ಅಮೆರಿಕದಲ್ಲಿ ಎಐನಲ್ಲಿ ಹೂಡಿಕೆಯು ಹೆಚ್ಚು ಲಾಭದಾಯಕವಾಗಿ ಕಂಡುಬಂದಿದ್ದು ಇದಕ್ಕೆ ಕಾರಣ.

ಕಾರಣ ಮೂರು: ಭಾರತದ ವ್ಯಾಪಾರ ಕೊರತೆಯು (ರಫ್ತಿಗಿಂತ ಹೆಚ್ಚಾಗುವ ಆಮದು) ಯಾವಾಗಲೂ ಸುಮಾರು 10,000 ಕೋಟಿ ಡಾಲರ್‌ನಷ್ಟು ಇರುತ್ತದೆ. 2025-26 ಹಣಕಾಸು ವರ್ಷದಲ್ಲಿ 10,000 ಕೋಟಿ ಡಾಲರ್, 2024-25 ರಲ್ಲಿ 9,466 ಕೋಟಿ ಮತ್ತು 2022-23 ರಲ್ಲಿ 11,953 ಕೋಟಿ ಡಾಲರ್ ವ್ಯಾಪಾರ ಕೊರತೆಗಳಿದ್ದವು. ಭಾರತ ವ್ಯಾಪಾರ ಕೊರತೆಯನ್ನು ಅನಿವಾಸಿ ಭಾರತೀಯರ ವೈಯಕ್ತಿಕ ಹಣ ರವಾನೆಗಳಿಂದ ಸಂಭಾಳಿಸಿಕೊಂಡು ಬಂದಿದೆ; ಅದು 2023 ರಲ್ಲಿ 12,500 ಕೋಟಿ ಯುಎಸ್ ಡಾಲರ್ ಅಥವಾ ಹೆಚ್ಚುಕಡಿಮೆ 2024-26 ರ ಜಿಡಿಪಿಯ ಶೇ. 3.5 ರಷ್ಟಿತ್ತು. 2022 ರಲ್ಲಿ 11,100 ಕೋಟಿ ಯುಎಸ್ ಡಾಲರ್ ಮತ್ತು ಅದಕ್ಕೂ ಹೆಚ್ಚಿನ ಹಣ ರವಾನೆಯನ್ನು ಸ್ವೀಕರಿಸಿದೆ. ಇದಕ್ಕೆ ಭಾರತದ ಆರ್ಥಿಕತೆಯ ದೈತ್ಯ ಅಭಿವೃದ್ಧಿ ಕಾರಣವಲ್ಲ. ಬದಲಿಗೆ ಇದು ಭಾರತೀಯರು ಆದಾಯಕ್ಕಾಗಿ ವಿವಿಧ ದೇಶಗಳಿಗೆ ತೆರಳಿರುವುದನ್ನು ತೋರಿಸುತ್ತದೆ.

ಕಾರಣ ನಾಲ್ಕು: ವಿದೇಶಿ ನೇರ ಹೂಡಿಕೆಯಲ್ಲಿ (FDI) ಇಳಿಕೆ. 2026 ರ ಆರಂಭದವರೆಗೆ ಸಿಗುವ ದತ್ತಾಂಶಗಳನ್ನು ಆಧರಿಸಿ ನೋಡಿದರೆ 2024-25 ಹಣಕಾಸು ವರ್ಷದಲ್ಲಿ ನಿವ್ವಳ ಎಫ್‌ಡಿಐ ಹೂಡಿಕೆಯು ಶೇ. 96 ರಷ್ಟು ಗಮನಾರ್ಹ ಕುಸಿತ ಕಂಡಿದೆ; ಅದು 2023-24 ರಲ್ಲಿ 1,010 ಕೋಟಿ ಯುಎಸ್ ಡಾಲರ್‌ನಿಂದ 35.3 ಕೋಟಿ ಯುಎಸ್ ಡಾಲರ್‌ಗೆ ದಾಖಲೆ ಕುಸಿತ. 2024 ರ ಹಣಕಾಸು ವರ್ಷದಲ್ಲಿ ವಿದೇಶಿ ನೇರ ಹೂಡಿಕೆಯು ಐದು ವರ್ಷಗಳಲ್ಲೇ ಅತಿ ಕಡಿಮೆ ಹೂಡಿಕೆಯಾಗಿತ್ತು.

ಇದರ ಜೊತೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಕಳೆದ ಏಪ್ರಿಲ್ 24 ರ ವಾರದ ಕೊನೆಗೆ, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು 482 ಕೋಟಿ ಡಾಲರ್ ಕುಸಿತ ಕಂಡು 69,849 ಕೋಟಿ ಡಾಲರ್‌ಗೆ ತಲುಪಿದೆ. ಒಂದು ವಾರದಲ್ಲಿ ವಿದೇಶಿ ಕರೆನ್ಸಿ ಆಸ್ತಿಯು (FCA) 284 ಕೋಟಿ ಕುಸಿತ ಕಂಡು 55,462 ಕೋಟಿ ಡಾಲರ್‌ಗೆ ತಲುಪಿದೆ. ಚಿನ್ನದ ಮೀಸಲು 190 ಕೋಟಿ ಡಾಲರ್ ಕುಸಿತ ಕಂಡು 12,024 ಕೋಟಿ ಡಾಲರ್‌ಗೆ ಬಂದು ನಿಂತಿದೆ.

ಇದೆಲ್ಲದರ ಒಟ್ಟು ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯು 6ನೇ ಸ್ಥಾನಕ್ಕೆ ಜಾರಿದೆ. ಇಲ್ಲಿ ಸ್ಥಳದ ಅಭಾವದಿಂದಾಗಿ ಕೆಲವು ತಾಂತ್ರಿಕ ಅಂಶಗಳ ಚರ್ಚೆಗೆ ಹೋಗಿಲ್ಲ.

ಜಿಡಿಪಿ - ತಪ್ಪು ಲೆಕ್ಕಾಚಾರ

ತನ್ನ ಜಿಡಿಪಿಯನ್ನು ಲೆಕ್ಕ ಹಾಕಲು ಭಾರತ ಉಪಯೋಗಿಸಿದ ವಿಧಾನ ಕ್ರಮದ ಬಗ್ಗೆ ಐಎಂಎಫ್ ಗಂಭೀರ ಆತಂಕ ವ್ಯಕ್ತಪಡಿಸಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಐಎಂಎಫ್ ಕೆಳಗಿನ ಅಂಶಗಳನ್ನು ಗುರುತಿಸಿದೆ:

ಹಳತಾದ ಮೂಲ ವರ್ಷ: 2011-12 ಅನ್ನು ಮೂಲ ವರ್ಷವಾಗಿ ತೆಗೆದುಕೊಳ್ಳುವುದರಿಂದ, ಅದು ಆಧುನಿಕ ಆರ್ಥಿಕ ರಚನೆಯನ್ನು ತಪ್ಪಾಗಿ ನಿರೂಪಿಸುತ್ತದೆ.

ಹಣದುಬ್ಬರವಿಳಿತದ (Deflation) ತಪ್ಪು ವಿಧಾನ: ಉತ್ಪಾದಕರ ಬೆಲೆ ಸೂಚ್ಯಂಕ (PPI) ಮತ್ತು ದ್ವಿಮುಖ ಹಣದುಬ್ಬರವಿಳಿತ (double deflation) ವಿಧಾನಗಳ ಬದಲಾಗಿ, ಸಗಟು ಬೆಲೆ ಸೂಚ್ಯಂಕ (WPI) ಮತ್ತು ಏಕಮುಖ ಹಣದುಬ್ಬರವಿಳಿತ (single deflation) ವಿಧಾನಗಳ ಮೇಲೆ ಅವಲಂಬಿತವಾಗುವುದರಿಂದ, ಅದು ದತ್ತಾಂಶದಲ್ಲಿ ವ್ಯತ್ಯಾಸಗಳನ್ನು ತರುತ್ತದೆ. (ಅಂದರೆ ನೈಜ ಜಿಡಿಪಿ ಹೆಚ್ಚಳವನ್ನು ಲೆಕ್ಕ ಹಾಕಬೇಕಾದರೆ ಆ ವರ್ಷದ ಹಣದುಬ್ಬರವಿಳಿತವನ್ನು ಪರಿಗಣಿಸಬೇಕು. ಒಟ್ಟಾರೆ ವಾರ್ಷಿಕ ಉತ್ಪಾದನೆಯ ಮೌಲ್ಯದಿಂದ ಹಣದುಬ್ಬರವನ್ನು ಕಳೆಯಬೇಕು. ಅದಕ್ಕೆ ಉತ್ಪಾದನೆ ಮತ್ತು ಸೇವಾ ವಲಯ ಎರಡನ್ನೂ ಪರಿಗಣಿಸಬೇಕು. ಇದನ್ನು WPI ಗಿಂತ PPI ಹೆಚ್ಚು ನಿಖರವಾಗಿ ಅಂದಾಜಿಸುತ್ತದೆ. ಹಾಗೆಯೇ, ಇದಕ್ಕೆ ಒಳಸುರಿ(input) ಹಾಗೂ ಉತ್ಪನ್ನ ಎರಡರ ಹಣದುಬ್ಬರವಿಳಿತವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಇದನ್ನು double deflation ವಿಧಾನ ನಿಖರವಾಗಿ ಮಾಡುತ್ತದೆ.)

ದತ್ತಾಂಶ ವ್ಯತ್ಯಾಸಗಳು: ಜಿಡಿಪಿ ಲೆಕ್ಕಾಚಾರದಲ್ಲಿ, ಉತ್ಪಾದನಾ ಮತ್ತು ಖರ್ಚುಗಳ ಮಧ್ಯೆ ವಿವರಣೆ ನೀಡದ ವ್ಯತ್ಯಾಸಗಳು ಕಂಡುಬಂದಿವೆ.

ಸೂಕ್ಷ್ಮ ವಿವರಗಳ ಕೊರತೆ: ಸಮಯಕ್ಕೆ ಸರಿಯಾದ, ಕ್ಷೇತ್ರವಾರು ಹೂಡಿಕೆಗಳ ದತ್ತಾಂಶ ಮತ್ತು ಕಾಲಕಾಲಕ್ಕೆ ಸರಿ ಹೊಂದಿಸಿದ ಅಂಕಿ ಅಂಶಗಳ ಕೊರತೆ ಇದೆ. ಆದ್ದರಿಂದ, ವಿಧಾನ ಕ್ರಮದ ತಪ್ಪುಗಳಿಂದಾಗಿ ಜಿಡಿಪಿಯನ್ನು ಅತಿ ಅಂದಾಜು ಮಾಡಲಾಗಿದೆ.

ಜಿಡಿಪಿಯು ಆರ್ಥಿಕ ಅಭಿವೃದ್ಧಿಯ ಸರಿಯಾದ ಸೂಚಕವಲ್ಲ. ಏಕೆಂದರೆ ಅದು ಉತ್ಪತ್ತಿಯಾದ ಸಂಪತ್ತಿನ ಹಂಚಿಕೆಯ ವಿಧಾನವನ್ನು ತೋರಿಸುವುದಿಲ್ಲ. ಜಿಡಿಪಿಯು ಜನಸಾಮಾನ್ಯರ ಕಲ್ಯಾಣ ಮತ್ತು ಅಸಮಾನತೆ, ಉತ್ಪಾದನೆಯಿಂದ ಆಗುವ ಪರಿಸರ ಹಾನಿಯ ಖರ್ಚು - ಮುಂತಾದವುಗಳನ್ನು ನಿರ್ಲಕ್ಷಿಸುವುದರಿಂದ ಅದು ಆರ್ಥಿಕ ಪ್ರಗತಿಯ ನಿಜವಾದ ಸೂಚಕವಲ್ಲ ಎಂದು ಇತ್ತೀಚೆಗೆ ಐಎಂಎಫ್ ಕೂಡ ಒಪ್ಪಿಕೊಂಡಿದೆ. ಮೇಲಿನ ಎರಡು ಮಾನದಂಡಗಳಿಂದ ನೋಡಿದರೆ ಭಾರತದ ಆರ್ಥಿಕ ಪ್ರಗತಿಯನ್ನು ನಿರಾಕರಿಸಬೇಕಾಗುತ್ತದೆ. ಅಮೆರಿಕ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದವರಿಗಿಂತ ಭಾರತದಲ್ಲಿ ಅತಿ ಶ್ರೀಮಂತರ ಸಂಪತ್ತಿನ ಕೇಂದ್ರೀಕರಣ ಹೆಚ್ಚಾಗಿದೆ. ಸಂಪತ್ತಿನ ಅಸಮಾನತೆಯು ಆದಾಯದ ಅಸಮಾನತೆಗಿಂತ ಘೋರ. ಭಾರತದ ಶೇ. 50 ರಷ್ಟು ಕೆಳಸ್ತರದ ದುಡಿಮೆಗಾರರು ದೇಶದ ಒಟ್ಟು ಆದಾಯದ ಕೇವಲ ಶೇ. 15 ರಷ್ಟು ಮಾತ್ರ ಪಡೆಯುತ್ತಾರೆ; ವಿಶ್ವ ಅಸಮಾನತೆ ವರದಿಯ ಪ್ರಕಾರ ಭಾರತೀಯರಲ್ಲಿ ಶೇ. 10 ರಷ್ಟು ಶ್ರೀಮಂತರು ಹೆಚ್ಚು ಕಡಿಮೆ ದೇಶದ ಸಂಪತ್ತಿನ ಮೂರನೇ ಎರಡು ಭಾಗದಷ್ಟು ಹೊಂದಿದ್ದಾರೆ. ಅದರಲ್ಲಿ ಶೇ.1 ರಷ್ಟು ಆಗರ್ಭ ಶ್ರೀಮಂತರು ಶೇ. 40 ರಷ್ಟನ್ನು ಹೊಂದಿದ್ದಾರೆ. 2014 ಮತ್ತು 2024 ರ ಮಧ್ಯೆ ಮೇಲ್‌ಸ್ತರದ ಶೇ. 10 ಮತ್ತು ಕೆಳಸ್ತರದ ಶೇ. 50 ಜನರ ನಡುವೆ ಆದಾಯದ ವ್ಯತ್ಯಾಸ ಬದಲಾಗದೆ ಉಳಿದಿದೆ.

ಕೆಲವೇ ಕೆಲವು ಕೈಗಾರಿಕಾ ದೈತ್ಯರ ಕೈಯಲ್ಲಿ ಸಂಪತ್ತು ಶೇಖರಣೆಯಾಗಿ, ಕೋಟ್ಯಂತರ ದುಡಿಯುವ ಜನರು ಬರಗೆಟ್ಟಿರುವುದನ್ನು ಅಭಿವೃದ್ಧಿ ಎಂದು ಕರೆಯಬಹುದೇ? ಭಾರತೀಯರ ಜೀವನಮಟ್ಟ ಏರುವುದರ ಮೇಲೆ ಭಾರತದ ಆರ್ಥಿಕ ಅಭಿವೃದ್ಧಿ ನಿಂತಿಲ್ಲವೇ? ಹಾಗಾದರೆ ಜಿಡಿಪಿ ಅಭಿವೃದ್ಧಿಯ ಬಗ್ಗೆ ಅಷ್ಟೊಂದು ಅತ್ಯುತ್ಸಾಹವೇಕೆ? ಆಳರಸರು ತುತ್ತೂರಿ ಊದುವ ಹಾಗೆ ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯಾದರೂ ಸಹ, ಭಾರತದ ನೊಂದ ನಾಗರಿಕರಿಗೆ ಸಂತೋಷ ಪಡುವುದೇನಿದೆ? ಏಕೆಂದರೆ, ಬಂಡವಾಳಶಾಹಿ ರಾಷ್ಟ್ರದಲ್ಲಿ ಬಂಡವಾಳಿಗರ ಆದಾಯವನ್ನು ಮತ್ತು ಗರಿಷ್ಠ ಲಾಭವನ್ನು ಖಚಿತಪಡಿಸುವುದೇ ಸರ್ಕಾರದ ಧ್ಯೇಯವಾಗಿದೆ. ದುಡಿಯುವ ಜನರ ಶ್ರಮವನ್ನು ಶೋಷಣೆ ಮಾಡಿಯೇ ಲಾಭ ಗಳಿಸಬೇಕು. ಇದರಿಂದ ಸಂಪತ್ತು ಕೆಲವೇ ಕೆಲವು ಬಂಡವಾಳಿಗರ ಕೈ ಸೇರುತ್ತದೆ. ತಮ್ಮ ದುಡಿತಕ್ಕೆ ತಕ್ಕ ಫಲ ಸಿಗದ ವಿಶಾಲ ಜನಸ್ತೋಮ ಹಸಿವು, ಬಡತನಗಳಿಂದ ನರಳ ಬೇಕಾಗುತ್ತದೆ. ಇಲ್ಲಿ ಆರ್ಥಿಕ ಅಭಿವೃದ್ಧಿಯೆಂದರೆ ಬಂಡವಾಳಿಗರ ಸಂಪತ್ತಿನ ಅಭಿವೃದ್ಧಿ. ಆದ್ದರಿಂದ, ಆರ್ಥಿಕ ಅಭಿವೃದ್ಧಿಯ ಬಗ್ಗೆ ಅತ್ಯುತ್ಸಾಹ ತೋರಿಸಿದಷ್ಟು ದಮನಿತ ಜನರ ದುಃಖ ದುಮ್ಮಾನಗಳು ಹೆಚ್ಚಾಗುತ್ತವೆ. ಇದು ಸಾವಿನಂಚಿನಲ್ಲಿರುವ ಬಿಕ್ಕಟ್ಟು ಪೀಡಿತ ಬಂಡವಾಳವಾದದಲ್ಲಿ ಅನಿವಾರ್ಯ. ಆದ್ದರಿಂದ ಆಳುವ ಏಕಸ್ವಾಮ್ಯಾಧಿಪತಿಗಳು ಮತ್ತು ಅವರ ಸೇವಕರಿಂದ ಆರ್ಥಿಕ ಅಭಿವೃದ್ಧಿಯ ಬಗ್ಗೆ ನಡೆಯುತ್ತಿರುವ ಸುಳ್ಳು ಪ್ರಚಾರದಲ್ಲಿ ವಿಶಾಲ ಜನಸ್ತೋಮವು ತೂರಿ ಹೋಗಬಾರದು