ವರ್ಷಗಳಿಂದ, ಮನುಷ್ಯನು ತನ್ನ ಶ್ರಮದಿಂದ ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ್ದಾನೆ. ಜನರ ಜೀವನದ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಯುದ್ಧಗಳು ದೇಶಗಳ ಆದಾಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ, ಜನನ-ಮರಣಗಳ ಅನುಪಾತ ಮತ್ತು ಲಿಂಗ ಅನುಪಾತಗಳನ್ನು ಬದಲಾಯಿಸುತ್ತವೆ, ಹಸಿವು, ವಲಸೆ, ಆಸ್ತಿ ನಷ್ಟ ಮತ್ತು ಕಿರುಕುಳದ ಅವಧಿಗಳನ್ನು ಸುದೀರ್ಘಗೊಳಿಸುತ್ತವೆ. ಯುದ್ಧದ ಗಾಯಗಳು ಕೇವಲ ದೈಹಿಕ ಪ್ರಮಾಣವನ್ನು ಮೀರಿ ಬೆಳೆಯುತ್ತವೆ. ಮೊದಲ ಮಹಾಯುದ್ಧದ ಅತ್ಯಂತ ಶಾಶ್ವತ ಚಿತ್ರಗಳೆಂದರೆ, ‘ಶೆಲ್ ಶಾಕ್’ (Shell shock) ಅಥವಾ ವೈದ್ಯಕೀಯ ತಜ್ಞರು ಕರೆಯುವ ‘ಯುದ್ಧದ ಭೀತಿಯಿಂದ’ (War neurosis) ಬಳಲುತ್ತಿದ್ದ ಪುರುಷರ ಚಿತ್ರಗಳು. ಶೆಲ್ ಶಾಕ್ ಎಂಬುದು ಒಂದು ರೀತಿಯ ಮಾನಸಿಕ ದೌರ್ಬಲ್ಯವಾಗಿದ್ದು, ಇದು ವ್ಯಕ್ತಿಯ ಚಲನೆ ಮತ್ತು ಕಾರ್ಯನಿರ್ವಹಣೆಯ ಸಾಮರ್ಥ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದರ ಅತ್ಯಂತ ಕೆಟ್ಟ ಸಂದರ್ಭಗಳಲ್ಲಿ, ಪುರುಷರು ನಡುಗುವ, ಧಕ್ಕೆಗೊಳಗಾಗುವ ಮತ್ತು ಮುದುಡಿಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದರು, ಹಾಗೂ ಸರಳ ರೇಖೆಯಲ್ಲಿ ನಡೆಯುವಂತಹ ಮೂಲಭೂತ ಚಲನೆಗಳನ್ನು ಮಾಡಲು ಸಹ ಅಸಮರ್ಥರಾಗುತ್ತಿದ್ದರು. ಕಣ್ಣಿಗೆ ಕಾಣುವ ವಿನಾಶದ ಆಚೆಗೆ ಮತ್ತೊಂದು ಆಳವಾದ ಮತ್ತು ಹೆಚ್ಚು ಘತಕ ಪರಿಣಾಮ ಅಡಗಿದೆ: ಅದೇ ಮಾನವ ಬಂಡವಾಳದ ಕುಸಿತ. ಯುದ್ಧಗಳು ಶಿಕ್ಷಣವನ್ನು ಅಡ್ಡಿಪಡಿಸುತ್ತವೆ, ಆರೋಗ್ಯ ವ್ಯವಸ್ಥೆಗಳನ್ನು ನಾಶಮಾಡುತ್ತವೆ ಮತ್ತು ದೀರ್ಘಕಾಲೀನ ಮಾನಸಿಕ ಆಘಾತವನ್ನು ಉಂಟುಮಾಡುತ್ತವೆ. ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ, ಇದು ತಲೆಮಾರುಗಳ ಕೌಶಲ್ಯ ಮತ್ತು ಉತ್ಪಾದಕತೆಯ ಕೊರತೆಗೆ ಕಾರಣವಾಗುತ್ತದೆ. ಆರೋಗ್ಯ ವ್ಯವಸ್ಥೆಗಳು ಕುಸಿಯುವುದರಿಂದ, ತಡೆಗಟ್ಟಬಹುದಾದ ಕಾಯಿಲೆಗಳು ಮತ್ತು ಅಪೌಷ್ಟಿಕತೆಯಿಂದ ಸಾವುಗಳು ಸಂಭವಿಸುತ್ತವೆ. ಆತಂಕ, ಖಿನ್ನತೆ ಮತ್ತು ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ನಂತಹ ಮಾನಸಿಕ ಆರೋಗ್ಯ ಬಿಕ್ಕಟ್ಟುಗಳು ನಾಗರಿಕರು ಮತ್ತು ಹೋರಾಟಗಾರರಿಬ್ಬರಲ್ಲೂ ವ್ಯಾಪಕವಾಗಿ ಕಂಡುಬರುತ್ತವೆ. ಯೋಧರಲ್ಲಿ ಹೆಚ್ಚಾಗಿ ಆತ್ಮಹತ್ಯೆಯ ಪ್ರಮಾಣವು ಕಾಣಿಸುತ್ತದೆ, ಇತ್ತ ನಿರ್ವಸಿತರಾದ ಜನರು ಅಪರಿಚಿತ ವಾತಾವರಣದಲ್ಲಿ ತಮ್ಮ ಜೀವನವನ್ನು ಪುನರ್ನಿರ್ಮಿಸಲು ಹೆಣಗಾಡುತ್ತಾರೆ.
ಎಲ್ಲಾ ಯುದ್ಧಗಳೂ ಒಂದೇ ಆಗಿರುವುದಿಲ್ಲ
ಎಲ್ಲಾ ಯುದ್ಧಗಳು ಒಂದೇ ರೀತಿಯ ಸ್ವರೂಪವನ್ನು ಹೊಂದಿರುವುದಿಲ್ಲ ಎಂಬುದನ್ನು ಉಲ್ಲೇಖಿಸುವುದು ಅಗತ್ಯವಾಗಿದೆ. ಐತಿಹಾಸಿಕವಾಗಿ, ಯುದ್ಧಗಳು ಎರಡು ವಿಶಾಲ ರೂಪಗಳನ್ನು ಪಡೆದಿವೆ. ಒಂದೆಡೆ, ಮಾರುಕಟ್ಟೆಗಳನ್ನು ವಿಸ್ತರಿಸಲು, ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ಭೌಗೋಳಿಕ ರಾಜಕೀಯ ಪ್ರಭಾವವನ್ನು ಕ್ರೋಢೀಕರಿಸಲು ಅಧಿಕಾರ ಹೊಂದಿರುವ ವರ್ಗಗಳು ಪ್ರಾರಂಭಿಸುವ ಆಕ್ರಮಣಕಾರಿ ಯುದ್ಧಗಳು. ಇನ್ನೊಂದೆಡೆ, ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ತುಳಿತಕ್ಕೊಳಗಾದ ಜನರು ಒಗ್ಗೂಡಿ ನಡೆಸುವ ಪ್ರತಿರೋಧದ ಯುದ್ಧಗಳು. ಯುದ್ಧದ ಎರಡೂ ರೂಪಗಳು ವಿನಾಶವನ್ನು ಉಂಟುಮಾಡಿದರೂ, ಅವುಗಳ ರಾಜಕೀಯ ಆಶಯಗಳು ಮೂಲಭೂತವಾಗಿ ಭಿನ್ನವಾಗಿರುತ್ತವೆ.
ಸಾಮ್ರಾಜ್ಯಶಾಹಿ ಯುದ್ಧ : ಸರ್ವನಾಶಕ್ಕೆ ದಾರಿ.
ನಾಗರಿಕತೆಯ ಪ್ರಗತಿಯನ್ನು ನೂರು ವರ್ಷಗಳಷ್ಟು ಹಿಂದಕ್ಕೆ ತಳ್ಳಿದ ಎರಡು ಮಹಾಯುದ್ಧಗಳ ನಂತರ, ಈಗ ಸಾಮ್ರಾಜ್ಯಶಾಹಿ ದರೋಡೆಕೋರರು ತಮ್ಮ ಗರಿಷ್ಠ ಲಾಭದ ದುರಾಶೆಯನ್ನು ತೀರಿಸಿಕೊಳ್ಳಲು ಮತ್ತು ತಮ್ಮ ಯಜಮಾನಿಕೆಯನ್ನು ಹೇರಲು ಮತ್ತೊಮ್ಮೆ ಆ ನಾಗರಿಕತೆಯನ್ನು ನಾಶಮಾಡಲು ಹೊರಟಿದ್ದಾರೆ. ಮನುಷ್ಯನಿಂದ ಮನುಷ್ಯನ ಶೋಷಣೆಯ ಹಿಡಿತದಿಂದ ಅಥವಾ ವಿದೇಶಿ ಆಕ್ರಮಣದಿಂದ ತಮ್ಮನ್ನು ಮುಕ್ತಗೊಳಿಸಲು ಜನರು ನಡೆಸುವ ಸಶಸ್ತ್ರ ಸಂಘರ್ಷಗಳು ನ್ಯಾಯಸಮ್ಮತವಾದ ಯುದ್ಧಗಳಾಗಿವೆ. ಇದು ಕೂಡ ಸಾವು ಮತ್ತು ಧ್ವಂಸವನ್ನು ಉಂಟುಮಾಡುತ್ತದೆ. ಆದರೆ ಜೀವ ಮತ್ತು ಆಸ್ತಿಯ ಈ ಬೃಹತ್ ವಿನಾಶಕ್ಕೆ ಸಾಮ್ರಾಜ್ಯಶಾಹಿ-ಬಂಡವಾಳಶಾಹಿಗಳೇ ಸಂಪೂರ್ಣ ಹೊಣೆಗಾರರಾಗಿದ್ದಾರೆ. ಏಕೆಂದರೆ ಅವರು ತಮ್ಮ ಪ್ರಾಬಲ್ಯದ ಆಕಾಂಕ್ಷೆಯನ್ನು ಪೂರೈಸಿಕೊಳ್ಳಲು ಮತ್ತು ತಮ್ಮ ಕೊಳೆಯುತ್ತಿರುವ ಮರಣಾಸನ್ನ ಅಸ್ತಿತ್ವವನ್ನು ಹೇಗೋ ಉಳಿಸಿಕೊಳ್ಳಲು ಇತರರ ಮೇಲೆ ಯುದ್ಧಗಳನ್ನು ಹೇರುತ್ತಾರೆ. ಆಧುನಿಕ ಯುದ್ಧವು ಕೇವಲ ಸಶಸ್ತ್ರ ಹೋರಾಟಗಳಿಗೆ ಸೀಮಿತವಾಗಿಲ್ಲ; ಇದು ಇಂಧನ ಮಾರುಕಟ್ಟೆಗಳಿಂದ ಹಿಡಿದು ಆಹಾರ ಪೂರೈಕೆ ಸರಪಳಿಗಳವರೆಗೆ ಮಾನವ ಜೀವನದ ಸಂಪೂರ್ಣ ವ್ಯವಸ್ಥೆಗಳನ್ನು ಅಡ್ಡಿಪಡಿಸುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ಹಣದುಬ್ಬರವು ತಮ್ಮ ಆದಾಯದ ಗಮನಾರ್ಹ ಭಾಗವನ್ನು ಮೂಲಭೂತ ಅಗತ್ಯಗಳಿಗಾಗಿ ಖರ್ಚು ಮಾಡುವ ಬಡ ಜನರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ. ಪ್ರತಿಯೊಂದು ಯುದ್ಧವೂ ಅಗಾಧವಾದ ವಿನಾಶವನ್ನು ಒಳಗೊಂಡಿರುತ್ತದೆ; ನಿರ್ಧಾರ ಕೈಗೊಳ್ಳುವಲ್ಲಿ ಯಾವುದೇ ಪಾತ್ರವಿಲ್ಲದ ಮುಗ್ಧ ನಾಗರಿಕರ ಜೀವಗಳು ಬಲಿಯಾಗುತ್ತವೆ. ದಶಕಗಳ ಕಾಲ ಶ್ರಮಪಟ್ಟು ನಿರ್ಮಿಸಿದ ಮೂಲಸೌಕರ್ಯಗಳು ಧೂಳೀಪಟವಾಗುತ್ತವೆ. ಇತ್ತೀಚಿನ ಮೌಲ್ಯಮಾಪನಗಳಲ್ಲಿ ದಾಖಲಾಗಿರುವಂತೆ, ಯುದ್ಧದಿಂದ ಮನುಕುಲಕ್ಕಾಗುವ ನಷ್ಟವನ್ನು ಸಾಮಾನ್ಯ ಜನರು ಅಂದರೆ ಮಹಿಳೆಯರು, ಮಕ್ಕಳು, ಕಾರ್ಮಿಕರು ಮತ್ತು ಬಡವರು (ಅಸಮಾನವಾಗಿ?) ಭರಿಸುತ್ತಾರೆ. ಸಾವುನೋವುಗಳ ಸಂಖ್ಯೆಯು ಕೇವಲ ಅಂಕಿ-ಅಂಶಗಳಲ್ಲ, ಅವು ಒಡೆದು ಹೋದ ಕುಟುಂಬಗಳನ್ನು, ಅಳಿಸಿಹೋದ ಸಮುದಾಯಗಳನ್ನು ಮತ್ತು ಕಮರಿಹೋದ ಭವಿಷ್ಯವನ್ನು ಪ್ರತಿನಿಧಿಸುತ್ತವೆ.
ಮೊದಲ ಮಹಾಯುದ್ಧ
1914 ರಿಂದ ನವೆಂಬರ್ 1918 ರವರೆಗೆ ನಡೆದ ಮೊದಲ ಮಹಾಯುದ್ಧವು ಎರಡು ಸಾಮ್ರಾಜ್ಯಶಾಹಿ ಬಣಗಳು ಮತ್ತು ಅವುಗಳ ಮಿತ್ರರಾಷ್ಟ್ರಗಳ ನಡುವೆ ನಡೆದಿತ್ತು. ಒಂದು ಕಡೆ ಎಂಟೆಂಟೆ (ಫ್ರಾನ್ಸ್, ಜಾರಿಸ್ಟ್ ರಷ್ಯಾ, ಬ್ರಿಟನ್, ಇಟಲಿ ಮತ್ತು ನಂತರ 1917 ರಿಂದ ಅಮೆರಿಕ) ಮತ್ತು ಇನ್ನೊಂದು ಕಡೆ ಸೆಂಟ್ರಲ್ ಪವರ್ಸ್ (ಜರ್ಮನ್, ಆಸ್ಟ್ರೋ-ಹಂಗೇರಿಯನ್, ಬಲ್ಗೇರಿಯನ್ ಮತ್ತು ಒಟ್ಟೋಮನ್ ಸಾಮ್ರಾಜ್ಯಗಳು). ಅಂದಾಜು 1.6 ಕೋಟಿ ಸೈನಿಕರು ಮತ್ತು ನಾಗರಿಕರು ಮೃತಪಟ್ಟರು ಮತ್ತು ಅಸಂಖ್ಯಾತ ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಾಯಗೊಂಡರು. ಈ ಸಂಘರ್ಷವು ಭಾರಿ ಸಾಮಾಜಿಕ ಬದಲಾವಣೆಗಳನ್ನು ಉಂಟುಮಾಡಿತು, ಲಕ್ಷಾಂತರ ವಿಧವೆಯರು, ಅನಾಥರು ಮತ್ತು ಆಘಾತಕ್ಕೊಳಗಾದ ಬದುಕುಳಿದವರ ಪೀಳಿಗೆಯನ್ನು ಇದು ಸೃಷ್ಟಿಸಿತು. ಮೊದಲ ಮಹಾಯುದ್ಧದ ಸಮಯದಲ್ಲಿ ಮಸ್ಟರ್ಡ್ ಗ್ಯಾಸ್ (Mustard gas) ಮತ್ತು ಫಾಸ್ಜೀನ್‌ನಂತಹ ರಾಸಾಯನಿಕ ಅಸ್ತ್ರಗಳು ಸೈನಿಕರ ಮತ್ತು ನಾಗರಿಕರ ಮೇಲೆ ಬೀರಿದ ತೀವ್ರ ಪರಿಣಾಮಗಳು, ಅವುಗಳ ನಿರಂತರ ಬಳಕೆಯ ವಿರುದ್ಧ ಸಾರ್ವಜನಿಕ ಮತ್ತು ಮಿಲಿಟರಿ ಧೋರಣೆಗಳನ್ನು ಜಾಗೃತಗೊಳಿಸಿದವು. ಯುದ್ಧದ ಒಟ್ಟು ನೇರ ಹಣಕಾಸಿನ ವೆಚ್ಚವು ಸುಮಾರು 18,600 ಶತಕೋಟಿಯಿಂದ 20,000 ಶತಕೋಟಿ ಡಾಲರ್ ಆಗಿತ್ತು, ಇದು ಇಂದಿನ 5 ಟ್ರಿಲಿಯನ್‌ಗಿಂತಲೂ ಹೆಚ್ಚು. ಪರೋಕ್ಷ ವೆಚ್ಚ ಸುಮಾರು 15,100 ಶತಕೋಟಿ ಡಾಲರ್ ಆಗಿತ್ತು. ಹೆಚ್ಚಿನ ದೇಶಗಳಲ್ಲಿ 1914 ಮತ್ತು 1920 ರ ನಡುವೆ ಹಣದುಬ್ಬರವು ದುಪ್ಪಟ್ಟಾಯಿತು. ಯುದ್ಧವು ಜನರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡಿತು ಮತ್ತು ಸಂಪನ್ಮೂಲಗಳನ್ನು ಯುದ್ಧಸಾಮಗ್ರಿಗಳಿಗೆ ಮರುಹಂಚಿಕೆ ಮಾಡಲಾಯಿತು. ಇದರ ದೊಡ್ಡ ಲಾಭ ಪಡೆದವರು ಅಮೆರಿಕದ ಸಾಮ್ರಾಜ್ಯಶಾಹಿಗಳು.
ಎರಡನೇ ಮಹಾಯುದ್ಧ
ಎರಡನೇ ಮಹಾಯುದ್ಧವು ವಾಸ್ತವವಾಗಿ ಜರ್ಮನಿ-ಇಟಲಿ-ಜಪಾನ್‌ನ ಫ್ಯಾಸಿಸ್ಟ್ ಕೂಟದಿಂದ ಜಾಗತಿಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಉಂಟಾದ ಒಂದು ಮಹಾ ಮಾರಣಹೋಮವಾಗಿತ್ತು. ಮೊದಲ ಮಹಾಯುದ್ಧದಲ್ಲಿನ ಸೋಲು, 1919ರ ವರ್ಸೈಲ್ಸ್ ಒಪ್ಪಂದದ ಕಠಿಣ ಷರತ್ತುಗಳು ಮತ್ತು ಜರ್ಮನ್ ಸಾಮ್ರಾಜ್ಯದ ಆಂತರಿಕ ಕುಸಿತದಿಂದಾಗಿ ಜರ್ಮನಿಯ ರಾಷ್ಟ್ರೀಯ ಅಭಿಮಾನಕ್ಕೆ ತೀವ್ರ ಅವಮಾನವಾಗಿತ್ತು. ಹಿಟ್ಲರ್ ಆ ಅವಮಾನವನ್ನು ಬಳಸಿಕೊಂಡು ಜರ್ಮನ್ ಜನಾಂಗವೇ ಸರ್ವಶ್ರೇಷ್ಠ ಮತ್ತು ಪ್ರಪಂಚವನ್ನು ಆಳಲು ಹುಟ್ಟಿದ್ದು ಎಂದು ಕರೆದು ಇಡೀ ಜರ್ಮನ್ ರಾಷ್ಟ್ರವನ್ನು ಮರುಸಂಘಟಿಸಿದನು. ಜರ್ಮನಿಯು ಜಪಾನ್ ಮತ್ತು ಇಟಲಿಯೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿತು. ಹೀಗೆ 1939 ರಲ್ಲಿ ಜರ್ಮನಿಯು ಪೋಲೆಂಡ್ ಮೇಲೆ ಆಕ್ರಮಣ ಮಾಡುವುದರೊಂದಿಗೆ ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಮಾನವ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಈ ಯುದ್ಧವು ಆರು ದೀರ್ಘ ವರ್ಷಗಳ ಕಾಲ ಮುಂದುವರೆಯಿತು. ಅಂತಿಮವಾಗಿ ವೈಚಾರಿಕವಾಗಿ ಸಜ್ಜುಗೊಂಡಿದ್ದ ಸೋವಿಯತ್ ಕೆಂಪು ಸೈನ್ಯವು ಫ್ಯಾಸಿಸ್ಟ್ ಆಕ್ರಮಣಕೋರರನ್ನು ಹಿಮ್ಮೆಟ್ಟುವಂತೆ ಮಾಡಿ 2 ಮೇ 1945 ರಂದು ಬರ್ಲಿನ್ ಅನ್ನು ವಶಪಡಿಸಿಕೊಂಡಿತು. ಸಮಾಜವಾದಿ ಸೋವಿಯತ್ ಒಕ್ಕೂಟ, ಅದರ ಧೀರ ಕೆಂಪು ಸೈನ್ಯ ಮತ್ತು ಮಹಾನ್ ಸ್ಟಾಲಿನ್ ಅವರಂತಹ ಕಮ್ಯುನಿಸ್ಟ್ ನಾಯಕ ಇಲ್ಲದಿದ್ದರೆ, ಫ್ಯಾಸಿಸ್ಟ್ ಶಕ್ತಿಗಳು ಇಡೀ ಜಗತ್ತನ್ನೇ ಆಕ್ರಮಿಸಿಕೊಳ್ಳುತ್ತಿದ್ದವು. ಇದರಲ್ಲಿ ಅಂದಾಜು ಸಾವುಗಳ ಸಂಖ್ಯೆ 7 ರಿಂದ 8.5 ಕೋಟಿ, ಇದರಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದ್ದಾರೆ. ಇದು ಇಡೀ ಪ್ರಪಂಚದ ಜನಸಂಖ್ಯೆಯ ಶೇಕಡಾ 3 ಕ್ಕಿಂತ ಹೆಚ್ಚಾಗಿತ್ತು. ನಾಗರಿಕರ ಸಾವುಗಳಲ್ಲಿ, 98 ರಿಂದ 104 ಲಕ್ಷ ನಾಗರಿಕರನ್ನು ನಾಜಿ ಆಡಳಿತವು ರಾಜಕೀಯ ಅಥವಾ ಜನಾಂಗೀಯ ಕಾರಣಗಳಿಗಾಗಿ ಕೊಂದಿತು. ನಾಜಿ ಜರ್ಮನಿಯಿಂದ ಅರವತ್ತು ಲಕ್ಷದಷ್ಟು ಯಹೂದಿಗಳನ್ನು ವ್ಯವಸ್ಥಿತವಾಗಿ ಕೊಂದ ನರಮೇಧ (Holocaust) ದಂತಹ ವಿನಾಶಕಾರಿ ಕೃತ್ಯಗಳನ್ನು ಈ ಯುದ್ಧವು ಕಂಡಿತು. ಯುದ್ಧದ ಒಟ್ಟು ಆರ್ಥಿಕ ವೆಚ್ಚವು, ಸರ್ಕಾರಗಳಿಗೆ ಡಾಲರ್ 1,೦೦೦,೦೦೦,೦೦೦,೦೦೦ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದರೆ ಈ ಆರ್ಥಿಕ ನಷ್ಟದ ಅಂಕಿ-ಅಂಶವು ಮಾನವನ ಸಂಕಟ, ಮೂಲ ಭೂತ ಸೌಕರ್ಯಗಳ ಕೊರತೆ ಮತ್ತು ದುಃಖಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ. ಎರಡನೇ ಮಹಾಯುದ್ಧವು ಹಲವಾರು ತೀವ್ರ ಹಸಿವಿನ ಬಿಕ್ಕಟ್ಟುಗಳನ್ನು ಉಂಟುಮಾಡಿತು. ಪೂರ್ವ ಯುರೋಪಿನ ಆಕ್ರಮಿತ ಪ್ರದೇಶಗಳ ಸಂಪನ್ಮೂಲಗಳನ್ನು ಅತ್ಯಂತ ಕ್ರೂರವಾಗಿ ಲೂಟಿ ಮಾಡಲಾಯಿತು. ಜರ್ಮನ್ ಕಾರ್ಖಾನೆಗಳು ಮತ್ತು ಫಾರ್ಮ್ಗಳಲ್ಲಿ ಬಲವಂತದ ದುಡಿಮೆ ಮಾಡಲು ಲಕ್ಷಾಂತರ ಜನರನ್ನು ಬಳಸಲಾಯಿತು. ಗ್ರೇಟ್ ಬ್ರಿಟನ್‌ನಲ್ಲಿ ಸುಮಾರು 30 ಪ್ರತಿಶತದಷ್ಟು ಮನೆಗಳು ನಾಶವಾದವು ಅಥವಾ ಹಾನಿಗೊಳಗಾದವು. ಆಕ್ರಮಿತ ದೇಶಗಳಲ್ಲೆಲ್ಲಾ ಕೃಷಿ, ಒಳಪ್ರದೇಶಗಳ ಸಾರಿಗೆ ಸಂಪೂರ್ಣವಾಗಿ ಕುಸಿದುಬಿದ್ದವು. ಯುರೋಪಿನಾದ್ಯಂತ ಲಕ್ಷಾಂತರ ಜನರು ನಿರಾಶ್ರಿತರಾದರು. ಮಾನವನ ನಷ್ಟ ಮತ್ತು ವಿನಾಶದ ವಿಷಯದಲ್ಲಿ, ಫ್ಯಾಸಿಸ್ಟ್ ಆಕ್ರಮಣದ ವಿರುದ್ಧ ನ್ಯಾಯಸಮ್ಮತವಾದ ಪ್ರತಿರೋಧದ ಯುದ್ಧವನ್ನು ನಡೆಸಿದ ಸೋವಿಯತ್ ಒಕ್ಕೂಟ ಅತಿ ದೊಡ್ಡ ಬೆಲೆಯನ್ನು ತೆತ್ತಿತು. ಸೋವಿಯತ್ ಒಕ್ಕೂಟ ಸುಮಾರು 2.6 ರಿಂದ 2.7 ಕೋಟಿ ಜನರನ್ನು ಕಳೆದುಕೊಂಡಿತು. ಆದರೂ ಧೀರ ಸೋವಿಯತ್ ಜನರು ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆಯಿಂದ ಜಗತ್ತನ್ನು ರಕ್ಷಿಸಲು ಐತಿಹಾಸಿಕ ಹೋರಾಟ ನಡೆಸಿದರು.
ವಿಯೆಟ್ನಾಂನಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿಗಳ ಯುದ್ಧಾಪರಾಧಗಳು
ನವೆಂಬರ್ 1955ರಲ್ಲಿ, ಅಮೆರಿಕದ ಸಾಮ್ರಾಜ್ಯಶಾಹಿಗಳು ವಿಯೆಟ್ನಾಂ ಅನ್ನು ಮಣಿಸಲು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ ವಿಯೆಟ್ನಾಂ ಜನರು ಒಟ್ಟಾಗಿ ಎದ್ದು ನಿಂತು, ಆರೆಂಜ್ ಬಿ ಗ್ಯಾಸ್, ನಾಪಾಮ್ ಬಾಂಬ್‌ನಂತಹ ಸಮೂಹ ವಿನಾಶದ ಅತ್ಯಾಧುನಿಕ ಅಸ್ತ್ರಗಳನ್ನು ಹೊಂದಿದ್ದ ಅಮೆರಿಕದ ಸೈನ್ಯದ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದರು. 1925ರ ಜಿನೀವಾ ಒಪ್ಪಂದ ಯುದ್ಧದಲ್ಲಿ ರಾಸಾಯನಿಕ ಮತ್ತು ಜೈವಿಕಗಳ ಬಳಕೆಯನ್ನು ನಿರ್ಬಂಧಿಸಿದ್ದರೂ, ಅಮೆರಿಕದ ಸಾಮ್ರಾಜ್ಯಶಾಹಿಯು ಆ ಒಪ್ಪಂದವನ್ನು ಉಲ್ಲಂಘಿಸಿತು. ಅಂತಿಮವಾಗಿ 21 ವರ್ಷಗಳ ಐತಿಹಾಸಿಕ ಪ್ರತಿರೋಧದ ನಂತರ, ಅಮೆರಿಕ ವಿಯೆಟ್ನಾಂನಲ್ಲಿ ಸೋಲೊಪ್ಪಿಕೊಂಡು ಹೊರನಡೆಯಬೇಕಾಯಿತು. ವಿಯೆಟ್ನಾಂ ಯುದ್ಧವು 36 ಮಿಲಿಯನ್‌ಗಿಂತಲೂ ಹೆಚ್ಚು ವಿಯೆಟ್ನಾಂ ನಾಗರಿಕರ ಜೀವಗಳನ್ನು ಬಲಿ ತೆಗೆದುಕೊಂಡಿತು. ಅಂದಾಜು 1.17 ಕೋಟಿ ದಕ್ಷಿಣ ವಿಯೆಟ್ನಾಂ ಜನರನ್ನು ಅವರ ಮನೆಗಳಿಂದ ಬಲವಂತವಾಗಿ ಓಡಿಸಲಾಯಿತು ಮತ್ತು ಸುಮಾರು 48 ಲಕ್ಷ ಜನರ ಮೇಲೆ ‘ಏಜೆಂಟ್ ಆರೆಂಜ್’ನಂತಹ ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸಲಾಯಿತು. ವಾಯುದಾಳಿ ಮತ್ತು ಫಿರಂಗಿ ದಾಳಿಗಳಿಂದ ಲಕ್ಷಾಂತರ ನಾಗರಿಕರು ಗಾಯಗೊಂಡರು ಮತ್ತು ಅನೇಕ ಗ್ರಾಮಗಳು ನಾಶವಾದವು. ಭಾರೀ ಬಾಂಬ್ ದಾಳಿ ಮತ್ತು ನಾಪಾಮ್ ಬಳಕೆಯಿಂದಾಗಿ ಅರಣ್ಯಗಳು, ರಬ್ಬರ್ ತೋಟಗಳು ಮತ್ತು ಕೃಷಿ ಭೂಮಿಗಳು ಸಂಪೂರ್ಣವಾಗಿ ನಾಶವಾಗಿ ಬೃಹತ್ ಪರಿಸರ ವಿನಾಶ ಉಂಟಾಯಿತು. ಯುದ್ಧದ ಸಮಯದಲ್ಲಿ ಅಮೆರಿಕದ ಸೈನಿಕರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೊಳಗಾದ ನೂರಾರು ಕುಟುಂಬಗಳು ಕೊನೆ ಇಲ್ಲದ ಸಂಕಟವನ್ನು ಎದುರಿಸಿದವು.
ಗಾಜಾದ ಧ್ವಂಸ ಮತ್ತು ಇರಾನ್ ಮೇಲಿನ ಇತ್ತೀಚಿನ ಯುದ್ಧ
ಅಮೆರಿಕದ ಸಾಮ್ರಾಜ್ಯಶಾಹಿಗಳ ಬೆಂಬಲದೊಂದಿಗೆ, ಇಸ್ರೇಲ್ ಆಡಳಿತವು ಪ್ಯಾಲೆಸ್ಟೀನ್‌ನ ಗಾಜಾ ಪಟ್ಟಿಯಲ್ಲಿ ಜನಾಂಗೀಯ ಹತ್ಯೆಯನ್ನು ಮುಂದುವರಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಮುಗ್ಧ ನಾಗರಿಕರನ್ನು ಕೊಲ್ಲುವುದರ ಜೊತೆಗೆ, ಇಸ್ರೇಲ್ ಆಡಳಿತವು ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ ನಾಗರಿಕರನ್ನು ಬಲವಂತವಾಗಿ ಸ್ಥಳಾಂತರಿಸುವಂತೆ ಮಾಡಿದೆ. ನಾಗರಿಕರು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸುವುದು, ಇಂಧನ, ನೀರು ಮತ್ತು ಮಾನವೀಯ ನೆರವನ್ನು ಉದ್ದೇಶಪೂರ್ವಕವಾಗಿ ತಡೆಯುವುದು, ವೈದ್ಯಕೀಯ ಸೌಲಭ್ಯಗಳ ಮೇಲಿನ ದಾಳಿಗಳು, ಅಮಾನವೀಯ ಕಿರುಕುಳ ಮತ್ತು ಲೈಂಗಿಕ ಹಿಂಸೆ ಮುಂತಾದ ಪ್ರತಿಯೊಂದು ಯುದ್ಧಾಪರಾಧವನ್ನೂ ಇಸ್ರೇಲ್ ಎಸಗಿದೆ. ಪರಿಹಾರ ಶಿಬಿರಗಳಲ್ಲಿ ಒಂದು ತುಂಡು ರೊಟ್ಟಿಗಾಗಿ ಕಾಯುತ್ತಿದ್ದ ಮಕ್ಕಳ ಮೇಲೆಯೂ ಗುಂಡು ಹಾರಿಸಲಾಗಿದೆ. ಸಾವು ಮತ್ತು ಬಲವಂತದ ವಲಸೆಯಿಂದಾಗಿ ಗಾಜಾದ ಒಟ್ಟು ಜನಸಂಖ್ಯೆಯು ಅಂದಾಜು 21 ಲಕ್ಷಕ್ಕೆ ಕುಸಿದಿದೆ. ಇನ್ನೊಂದೆಡೆ, ಫೆಬ್ರವರಿ 2026 ರ ಅಂತ್ಯದಿಂದ ಇರಾನ್‌ನಲ್ಲಿ ನಡೆದ ದಾಳಿಯಲ್ಲಿ 2076ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 26,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇರಾನ್ ಮೇಲಿನ ದಾಳಿಯ ಮೊದಲ ದಿನದಂದೇ ಅಮೆರಿಕ-ಇಸ್ರೇಲ್ ಪಡೆಗಳು ಮಿನಾಬ್‌ನಲ್ಲಿನ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿ 150 ಕ್ಕೂ ಹೆಚ್ಚು ನಾಗರಿಕರನ್ನು ಕೊಂದವು, ಅದರಲ್ಲಿ ಹೆಚ್ಚಿನವರು ಶಾಲಾ ಮಕ್ಕಳಾಗಿದ್ದರು. ಈ ಯುದ್ಧದ ಆರ್ಥಿಕ ನಷ್ಟ ಈಗಾಗಲೇ ಡಾಲರ್ 12,700 ಕೋಟಿಯನ್ನು ಮೀರಿದೆ. ಈ ಸಂಘರ್ಷವು ಜಾಗತಿಕ ತೈಲ ಮತ್ತು ಅನಿಲ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಲೆಬನಾನ್‌ನಲ್ಲಿಯೂ 1345 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಅಮೆರಿಕದ ಸಾಮ್ರಾಜ್ಯಶಾಹಿಗಳು ಇರಾನಿನ ಜನಸಂಖ್ಯೆ, ಕೈಗಾರಿಕೆಗಳು ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲೆ ನಡೆಸಿದ ಭೀಕರ ಬಾಂಬ್ ದಾಳಿಯ ಪರಿಣಾಮವಾಗಿ, ಲಕ್ಷಾಂತರ ಇರಾನಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದುವರಿದ ಆಧುನಿಕ ಯುದ್ಧಸಾಮಗ್ರಿಗಳ ಬಳಕೆಯು ವಿಷಕಾರಿ ಹೊರಸೂಸುವಿಕೆಯನ್ನು ಉಂಟುಮಾಡುತ್ತಿದ್ದು ಜಾಗತಿಕ ಹವಾಮಾನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯು ಅಸ್ತಿತ್ವದಲ್ಲಿರುವವರೆಗೂ ಇಂತಹ ವಿನಾಶಕಾರಿ ಯುದ್ಧಗಳು ಮುಂದುವರೆಯುತ್ತಲೇ ಇರುತ್ತವೆ. ಕಾರ್ಮಿಕ ವರ್ಗದ ಕ್ರಾಂತಿಯ ಮೂಲಕ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸುವುದು, ಅಲ್ಲಿಯವರೆಗೆ ಜಗತ್ತಿನಾದ್ಯಂತ ಶಾಂತಿಪರ ಹೋರಾಟ ಕಟ್ಟುವುದು ಮಾತ್ರವೇ ಜನರ ಮುಂದೆ ಉಳಿದಿರುವ ದಾರಿ.
