“ಉದಾತ್ತ ಆದರ್ಶಗಳು ಅವರಿಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿದ್ದವು. ಇದರಿಂದ, ಅವರ ಸಂಪರ್ಕಕ್ಕೆ ಬಂದವರೆಲ್ಲರೂ ತಾವೇ ಸ್ವತ: ಪ್ರೇರಿತರಾಗುತ್ತಿದ್ದರು. ಬದುಕು ಮತ್ತು ಸಾವು, ಎಚ್ಚರ ಮತ್ತು ಕನಸು, ಎಲ್ಲಾ ಸಮಯದಲ್ಲಿ ಅವರನ್ನು ಆವರಿಸಿದ್ದ ಏಕೈಕ ಚಿಂತನೆ ಮತ್ತು ಉದ್ದೇಶವೆಂದರೆ, ತಾಯ್ನಾಡಿನ ಸೇವೆ; ಮತ್ತು ಈ ದೇಶಸೇವೆಯು ಅವರಿಗೆ ಅವರ ಆಧ್ಯಾತ್ಮಿಕ ಜೀವನದ ಮಾರ್ಗವೇ ಆಗಿತ್ತು.” ಈ ಮಾತುಗಳನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಚಿತ್ತರಂಜನ್ ದಾಸ್ ಅವರ ಜೀವನ ಚರಿತ್ರಕಾರರಾದ ಹೇಮೇಂದ್ರನಾಥ್ ದಾಸ್‌ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.

ಚಿತ್ತರಂಜನ್ ಅವರು ಕಾನೂನು ವೃತ್ತಿಯೊಂದಿಗೆ ಆಳವಾದ ನಂಟು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜಂದಿರಿಂದ ಪ್ರಾರಂಭವಾದ ಈ ಪರಂಪರೆ, ಸತತ ಮೂರು ತಲೆಮಾರುಗಳವರೆಗೆ ಮುಂದುವರೆಯಿತು. ಪರಿಣಾಮವಾಗಿ, ದಾಸ್ ಕುಟುಂಬವು ಸಮಕಾಲೀನ ಸಮಾಜದಲ್ಲಿ ವಕೀಲರು, ಬ್ಯಾರಿಸ್ಟರ್‌ಗಳು ಮತ್ತು ನ್ಯಾಯಾಧೀಶರ ಕುಟುಂಬ ಎಂದು ಪ್ರಸಿದ್ಧಿಯಾಯಿತು. ಅವರ ತಂದೆ ಭುವನ್ ಮೋಹನ್ ದಾಸ್ ಅವರು, ತಮ್ಮ ಹಿರಿಯ ಮಗ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿ, ಇಂಡಿಯನ್ ಸಿವಿಲ್ ಸರ್ವಿಸ್ (ಐಸಿಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಸಾಹತುಶಾಹಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಬೇಕೆಂದು ಆಶಿಸಿದ್ದರು. ಆದರೆ, ಚಿತ್ತರಂಜನ್ ಇಂಗ್ಲೆಂಡ್‌ಗೆ ಹೋದರಾದರೂ, ವಕೀಲರಾಗಿ ಮಾತ್ರ ಅರ್ಹತೆ ಪಡೆದು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಮರಳಿದರು.

ವಕೀಲರಾಗಿ ಸ್ವಾತಂತ್ರ್ಯ ಹೋರಾಟಗಾರರ ಪರ ನಿಲುವು

ಸ್ವಾತಂತ್ರ‍್ಯ ಹೋರಾಟದ ರಂಗಕ್ಕೆ ಪ್ರವೇಶಿಸುವ ಮುನ್ನವೇ ದೇಶಬಂಧು ಅವರು, ವಕೀಲರಾಗಿ ಗಳಿಸಿದ ಗಮನಾರ್ಹ ಯಶಸ್ಸಿನ ಕಾರಣದಿಂದ ಓರ್ವ ಅಸಾಧಾರಣ ಔದಾರ್ಯ ಮತ್ತು ಉದಾತ್ತ ಚಾರಿತ್ರ‍್ಯದ ವ್ಯಕ್ತಿಯಾಗಿ ದೇಶಾದ್ಯಂತ ಪ್ರಸಿದ್ಧರಾಗಿದ್ದರು. ಆದಾಗ್ಯೂ, ಅವರ ಕಾನೂನು ವೃತ್ತಿಜೀವನದ ಆರಂಭಿಕ ವರ್ಷಗಳು ತೀವ್ರ ಸಂಕಷ್ಟಗಳಿಂದ ಕೂಡಿದ್ದವು. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಅವರು ಹೈಕೋರ್ಟ್ ಗೆ ನಡೆದುಕೊಂಡೇ ಹೋಗುತ್ತಿದ್ದರು. ಆದರೆ, 1907 ರ ನಂತರದಲ್ಲಿ, ಪರಿಸ್ಥಿತಿ ಬದಲಾಗಿ, ಅವರು ಪ್ರಮುಖ ರಾಷ್ಟ್ರವಾದಿ ಪ್ರಕರಣಗಳಲ್ಲಿ ಗಮನಾರ್ಹ ವಿಜಯಗಳನ್ನು ಸಾಧಿಸಿದರು. ಅವುಗಳಲ್ಲಿ ಅಲಿಪೋರ್ ಬಾಂಬ್ ಪ್ರಕರಣ, ಢಾಕಾ ಪಿತೂರಿ ಪ್ರಕರಣ, ಡುಮ್ರಾಂ ಪ್ರಕರಣ, ಲಕ್ಷ್ಮೀಪುರ ಪ್ರಕರಣ, ಮಹೇಶ್‌ಪುರ ಪ್ರಕರಣ, ರಾಜಾ ಮೋತಿಚಂದ್ ಎಸ್ಟೇಟ್ ಪ್ರಕರಣ ಮತ್ತು ಅಮೃತ ಬಜಾರ್ ಪತ್ರಿಕಾ ಪ್ರಕರಣಗಳು ಅತ್ಯಂತ ಪ್ರಮುಖವಾದವುಗಳು. ಅವರು ಈ ಪ್ರಕರಣಗಳನ್ನು ಕೇವಲ ವಕೀಲರಾಗಿ ಹೋರಾಡದೆ, ಒಬ್ಬ ನೈಜ ದೇಶಪ್ರೇಮಿಯಾಗಿ, ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿದ್ದವರ ಪರವಾಗಿ ನಿಂತರು. ಅವರ ಸತತ ಯಶಸ್ಸು ಅವರಿಗೆ ಕೀರ್ತಿ, ಸಮೃದ್ಧಿ ಮತ್ತು ವೃತ್ತಿಪರ ಮನ್ನಣೆಯನ್ನು ತಂದುಕೊಟ್ಟಿತು. ಜೊತೆಗೆ, ಅವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ಹೆಚ್ಚೆಚ್ಚು ತೊಡಗಿಸಿಕೊಂಡರು. 1917 ರಲ್ಲಿ, ಭವಾನಿಪುರದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು, ಅವರ ಸಾರ್ವಜನಿಕ ರಾಜಕೀಯ ಜೀವನದಲ್ಲಿನ ಮೈಲಿಗಲ್ಲಾಗಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅವರು ಸ್ವಯಂ ಅಧಿಕಾರವನ್ನು ಪ್ರತಿಪಾದಿಸಿ ಮಾಡಿದ ಪ್ರಭಾವಶಾಲಿ ಭಾಷಣದಲ್ಲಿ, ಬ್ರಿಟಿಷ್ ಆಡಳಿತವನ್ನು ತೀವ್ರವಾಗಿ ಟೀಕಿಸಿದರು ಮತ್ತು ಭಾರತದ ಜನರ ಪರವಾಗಿ ಜವಾಬ್ದಾರಿಯುತ ಸರ್ಕಾರಕ್ಕಾಗಿ ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ…

5 ಮಾರ್ಚ್ 1918 ರಂದು, ಕೊಲ್ಕತ್ತೆಯ ಟೌನ್‌ಹಾಲ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್’ನ ದಮನಕಾರಿ ನಿಬಂಧನೆಗಳನ್ನು ಖಂಡಿಸಿದರು. ಕೇವಲ ಸಂಶಯದ ಆಧಾರದ ಮೇಲೆ ಜೈಲುವಾಸಕ್ಕೆ ಅವಕಾಶ ನೀಡುವ “ಬಂಗಾಳದ ರೆಗ್ಯುಲೇಶನ್ III’ ಅನ್ನು ಅವರು ವಿಶೇಷವಾಗಿ ಖಂಡಿಸುತ್ತಾ, ಇದು ವೈಯಕ್ತಿಕ ಸ್ವಾತಂತ್ರ‍್ಯವನ್ನು ಉಲ್ಲಂಘಿಸುತ್ತದೆ ಮತ್ತು ಗಂಭೀರ ಅನ್ಯಾಯವನ್ನು ಪ್ರತಿನಿಧಿಸುತ್ತದೆ ಎಂದು ವಾದಿಸಿದರು; ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. 1919 ರಲ್ಲಿ ಕುಖ್ಯಾತ ರೌಲತ್ ಕಾಯ್ದೆಯನ್ನು ಜಾರಿಗೆ ತಂದಾಗ, ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಏಪ್ರಿಲ್ 6 ರಂದು ಕೊಲ್ಕತ್ತೆಯ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ದೇಶಬಂಧು, ಬ್ರಿಟಿಷ್ ಸರ್ಕಾರವು ಭಾರತದ ಹೊಸದಾಗಿ ಜಾಗೃತಗೊಂಡ ಸ್ವಾತಂತ್ರ‍್ಯ ಮತ್ತು ಏಕತೆಯ ಮನೋಭಾವವನ್ನು ಕ್ರೂರ ದಮನದ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಘೋಷಿಸಿದರು. ಈ ದಾಳಿಯು ಕೇವಲ ರಾಜಕೀಯ ಸ್ವಾತಂತ್ರ‍್ಯದ ವಿರುದ್ಧ ಮಾತ್ರವಲ್ಲದೆ ಮುಕ್ತ ಚಿಂತನೆಯ ವಿರುದ್ಧವೂ ಆಗಿದೆ ಎಂದವರು ಎಚ್ಚರಿಸಿದರು.

13 ಏಪ್ರಿಲ್ 1919 ರಂದು ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡದ ನಂತರ, ಈ ದುರಂತದ ತನಿಖೆಗಾಗಿ ಸ್ಥಾಪಿಸಲಾದ ಕಾಂಗ್ರೆಸ್ ವಿಚಾರಣಾ ಸಮಿತಿಯ ಸದಸ್ಯರಾಗಿ ದೇಶಬಂಧು ನೇಮಕಗೊಂಡರು. ಅದೇ ವರ್ಷದ ಕೊನೆಯಲ್ಲಿ ಅಮೃತಸರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಅವರು ಹೊಂದಿದ್ದ ಭಿನ್ನಾಭಿಪ್ರಾಯ ಬಯಲಾಯಿತು. ದೇಶಬಂಧು ಅವರು ಬ್ರಿಟಿಷ್ ಆಡಳಿತದ ವಿರುದ್ಧ ಹೆಚ್ಚಿನ ರಾಜಿರಹಿತ ವಿರೋಧವನ್ನು ಪ್ರತಿಪಾದಿಸಿದರೆ, ಗಾಂಧೀಜಿಯವರು ಹೆಚ್ಚು ರಾಜಿಪರ ಧೋರಣೆಯನ್ನು ಬೆಂಬಲಿಸಿದರು. ಜವಾಬ್ದಾರಿಯುತ ರಾಷ್ಟ್ರೀಯ ಸರ್ಕಾರವನ್ನು ತಕ್ಷಣವೇ ಸ್ಥಾಪಿಸಬೇಕೆಂದು ವಾದಿಸಿದ ದೇಶಬಂಧು ಅವರ ಪ್ರಸ್ತಾವನೆಗೆ ಇತರ ನಾಯಕರಿಂದಲೂ ಸಾಕಷ್ಟು ಬೆಂಬಲ ಸಿಗಲಿಲ್ಲ.

ನೇತಾಜಿಯವರ ನೇತಾರರಾಗಿ…..

ಸೆಪ್ಟೆಂಬರ್ 1920 ರಲ್ಲಿ, ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದ ನೇತಾಜಿಯವರು ರಾಷ್ಟ್ರವಾದಿ ಚಳುವಳಿಯಿಂದ ಪ್ರೇರಿತರಾಗಿ ಇಂಗ್ಲೆಂಡ್‌ನಿಂದ ಚಿತ್ತರಂಜನ್ ದಾಸ್ ಅವರಿಗೆ ಪತ್ರ ಬರೆದರು: “ನೀವು ಭಾರತದಲ್ಲಿ ಎಬ್ಬಿಸಿರುವ ಚಳವಳಿಯ ಅಲೆಗಳು ಪತ್ರಗಳು ಮತ್ತು ಪತ್ರಿಕೆಗಳ ಮೂಲಕ ಇಲ್ಲಿಯೂ ನಮಗೆ ತಲುಪಿವೆ. ನಾವು ಕೂಡ ಮಾತೃಭೂಮಿಯ ಕರೆಯನ್ನು ಕೇಳಿದ್ದೇವೆ… ಯಾರಾದರೂ ದಾರಿ ತೋರಿಸಿದರೆ, ಅದನ್ನು ಅನುಸರಿಸಲು ಇಲ್ಲಿ ಅನೇಕರು ಸಿದ್ಧರಿದ್ದಾರೆ ಎಂಬುದು ನನ್ನ ನಂಬಿಕೆ.” ಸುಭಾಷರು, 1916 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ಓಟೆನ್ ಘಟನೆ (ಕಾಲೇಜಿನ ಬ್ರಿಟಿಷ್ ಅಧ್ಯಾಪಕರೊಂದಿಗೆ ಸುಭಾಷರ ಸಂಘರ್ಷ ಮತ್ತು ಕಾಲೇಜಿನಿಂದ ಅವರ ಉಚ್ಛಾಟನೆ-ಸಂ)ಯ ನಂತರ, ಬ್ಯಾರಿಸ್ಟರ್ ಚಿತ್ತರಂಜನ್ ದಾಸ್ ಅವರನ್ನು ಕಾನೂನು ಸಲಹೆಗಾಗಿ ಭೇಟಿಯಾಗಿದ್ದ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಅದಕ್ಕೆ ಪ್ರತಿಕ್ರಿಯೆಯಾಗಿ ದೇಶಬಂಧು ಅವರು, ದೇಶವು ನಿಜಕ್ಕೂ ಸಂಕಷ್ಟದಲ್ಲಿದೆ, ಆದರೆ ಪ್ರಾಮಾಣಿಕ ಕಾರ್ಯಕರ್ತರ ಕೊರತೆಯಿದೆ ಎಂದು ತಿಳಿಸಿದ್ದರು. ಈ ಕರೆಗೆ ಓಗೊಟ್ಟ ಸುಭಾಷ್ ಅವರು 22 ಏಪ್ರಿಲ್ 1921 ರಂದು ಇಂಡಿಯನ್ ಸಿವಿಲ್ ಸರ್ವಿಸ್‌ಗೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.

ಆ ಹೊತ್ತಿಗೆ ಅಸಹಕಾರ ಚಳುವಳಿಯು ಉತ್ತುಂಗದಲ್ಲಿತ್ತು. ಬಂಗಾಳದಲ್ಲಿ ದೇಶಬಂಧು ಮತ್ತು ಮೋತಿಲಾಲ್ ನೆಹರು ಅದರ ಪ್ರಮುಖ ನಾಯಕರಾಗಿದ್ದರು. ದೇಶಬಂಧು ಅವರು ತಮ್ಮ ಲಾಭದಾಯಕ ಕಾನೂನು ವೃತ್ತಿಯನ್ನು ತ್ಯಜಿಸಿ ಸಂಪೂರ್ಣವಾಗಿ ಈ ಆಂದೋಲನಕ್ಕೆ ತಮ್ಮನ್ನು ಮೀಸಲಿಟ್ಟರು; ತಮ್ಮ ಪತ್ನಿ ಬಾಸಂತಿ ದೇವಿ, ಸಹೋದರಿ ಊರ್ಮಿಳಾ ದೇವಿ ಮತ್ತು ಮಗಳು ಸುನೀತಿ ದೇವಿ ಅವರನ್ನೂ ರಾಷ್ಟ್ರವಾದಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಿದರು.

ಗಾಂಧೀಜಿಯವರ ರಾಜಿವಾದಿ ವಿಚಾರಧಾರೆಯಿಂದ ಅತೃಪ್ತರಾದ ಸುಭಾಷರು, ನಂತರ ದೇಶಬಂಧು ಅವರನ್ನು ಭೇಟಿ ಮಾಡಿದ ಬಗ್ಗೆ ಬರೆದ್ದೆಂದರೆ: “ತಮಗೆ ಏನು ಬೇಕು ಎಂದು ನಿಖರವಾಗಿ ತಿಳಿದಿರುವ ವ್ಯಕ್ತಿ ಇಲ್ಲಿದ್ದಾರೆ ಎಂಬುದನ್ನು, ನಮ್ಮ ಸಂಭಾಷಣೆ ಮುಂದುವರಿದಂತೆ ನಾನು ಅರಿತುಕೊಂಡೆ; ತಮ್ಮಲ್ಲಿರುವ ಎಲ್ಲವನ್ನೂ ನೀಡಬಲ್ಲ ಮತ್ತು ಇತರರಿಂದಲೂ ಅದನ್ನೇ ನಿರೀಕ್ಷಿಸಬಲ್ಲ ವ್ಯಕ್ತಿ ಇವರಾಗಿದ್ದರು. ಯುವ ಪೀಳಿಗೆಯು ಇವರಿಗೆ ಹೊರೆಯಾಗಿರದೆ ಒಂದು ಆಸ್ತಿಯಾಗಿತ್ತು. ನಮ್ಮ ಚರ್ಚೆ ಮುಗಿದಾಗ, ನನ್ನ ಮನಸ್ಸು ದೃಢವಾಗಿತ್ತು. ನನ್ನ ನಾಯಕರನ್ನು ನಾನು ಕಂಡುಕೊಂಡಿದ್ದೇನೆ ಮತ್ತು ನಾನು ಅವರನ್ನು ಅನುಸರಿಸುತ್ತೇನೆ ಎಂದು ನನಗೆ ಅನಿಸಿತು.”

ಮುಂದೆ, ಭಾರತದ ಸ್ವಾತಂತ್ರ‍್ಯ ಹೋರಾಟದ ಅತ್ಯಂತ ರಾಜಿರಹಿತ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ ನೇತಾಜಿಯವರ ಬೆಳವಣಿಗೆಯ ಹಿಂದೆ ಮಾರ್ಗದರ್ಶಕ ಗುರುವಾಗಿ ದೇಶಬಂಧು ಅವರ ಪಾತ್ರ ದೊಡ್ಡದು. ಹಲವರಿಂದ ವಿರೋಧವಿದ್ದಾಗ್ಯೂ, ಅವರು ಸುಭಾಷರನ್ನು ಬಂಗಾಳ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿದರು ಮತ್ತು ಅದೇ ಸಮಯದಲ್ಲಿ ಅವರಿಗೆ ಕೊಲ್ಕತ್ತಾ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರ ಜವಾಬ್ದಾರಿಯನ್ನೂ ವಹಿಸಿದರು.

ನಂತರದ ವರ್ಷಗಳು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದವು: ಪ್ರಿನ್ಸ್ ಆಫ್ ವೇಲ್ಸ್ ಭೇಟಿಯ ವಿರುದ್ಧದ ಆಂದೋಲನ, ಬಾಸಂತಿ ದೇವಿಯವರ ಬಂಧನ, ಬಂಗಾಳದಾದ್ಯಂತ ಭುಗಿಲೆದ್ದ ಜನ ಜಾಗೃತಿ, ಬಹುತೇಕ ಎಲ್ಲಾ ಪ್ರಮುಖ ರಾಷ್ಟ್ರವಾದಿ ನಾಯಕರ ಬಂಧನ ಮತ್ತು ಜೈಲಿನಲ್ಲಿ ಅವರ ನಡುವೆ ಬೆಳೆದ ಅಸಾಧಾರಣ ಸಾಂಗತ್ಯ, ಹೀಗೆ. ಜೈಲುವಾಸದ ಸಮಯದಲ್ಲಿ, ಸುಭಾಷ್ ಅವರು ದೇಶಬಂಧುಗಾಗಿ ಸ್ವತಃ ಅಡುಗೆ ಮಾಡುತ್ತಿದ್ದರು, ಮತ್ತು ಹೇಮಂತ ಸರ್ಕಾರ್ ಅವರ ದಿನನಿತ್ಯದ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಇಂತಹ ಶ್ರದ್ಧೆ, ಅವರಿಗೆ ತಮ್ಮ ನಾಯಕರ ಮೇಲಿದ್ದ ಆಳವಾದ ಪ್ರೀತಿ ಮತ್ತು ಗೌರವಗಳ ಪ್ರತಿಬಿಂಬವಾಗಿತ್ತು. ಜೈಲಿನಲ್ಲಿ ಹಿಂದೂ ಮತ್ತು ಮುಸ್ಲಿಂ ನಾಯಕರು ಒಂದೇ ಕುಟುಂಬದ ಸದಸ್ಯರಂತೆ ಒಟ್ಟಿಗೆ ಬಾಳಿದರು. ದೇಶಬಂಧು ಅವರ ಮಾರ್ಗದರ್ಶನದಲ್ಲಿ, ಅವರು ಹಬ್ಬಗಳನ್ನು ಒಟ್ಟಿಗೆ ಆಚರಿಸಿದರು ಮತ್ತು ಒಂದೇ ಅಡುಗೆಮನೆಯಿಂದ ಊಟವನ್ನು ಹಂಚಿಕೊಂಡರು; ಇದು ಅವರ ಕೋಮು ಸೌಹಾರ್ದತೆಯ ದೃಷ್ಟಿಕೋನಕ್ಕೆ ಉದಾಹರಣೆಯಾಗಿತ್ತು.

1922 ರಲ್ಲಿ ಚೌರಿ ಚೌರಾದಲ್ಲಿನ ಹಿಂಸಾತ್ಮಕ ಘಟನೆಯ ಬಳಿಕ, ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಸ್ಥಗಿತಗೊಳಿಸಿದಾಗ, ದೇಶಬಂಧು ಅವರು, ಮೋತಿಲಾಲ್ ನೆಹರು ಮತ್ತು ಲಾಲಾ ಲಜಪತ್‌ರಾಯ್‌ರವರೊಂದಿಗೆ ಈ ನಿರ್ಧಾರವನ್ನು ವಿರೋಧಿಸಿದರು. ಇದು ರಾಷ್ಟ್ರವಾದಿ ಚಳುವಳಿಗೊಂದು ಹಿನ್ನಡೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅದೇ ವರ್ಷದ ಕೊನೆಯಲ್ಲಿ, ಉತ್ತರ ಬಂಗಾಳದ ಭೀಕರ ಪ್ರವಾಹದಿಂದ ಸಂತ್ರಸ್ತರಾದವರ ನೆರವಿಗೆ ಸ್ಥಾಪಿಸಲಾದ ಬಂಗಾಳ ಪರಿಹಾರ ಸಮಿತಿಯಲ್ಲಿ ಅವರು ರವೀಂದ್ರನಾಥ ಠಾಕೂರ್, ಅಶುತೋಷ್ ಮುಖರ್ಜಿ ಮತ್ತು ನಿಲ್‌ರತನ್ ಸರ್ಕಾರ್‌ರಂತಹ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕೈಜೋಡಿಸಿದರು. 1922ರ ಗಯಾ ಕಾಂಗ್ರೆಸ್‌ನಲ್ಲಿ, ದೇಶಬಂಧು ಅವರು ಬಹಿಷ್ಕಾರದ ನೀತಿಯನ್ನು ಮುಂದುವರಿಸುವ ಬದಲು ಶಾಸನ ಸಭೆಗಳನ್ನು ಪ್ರವೇಶಿಸುವುದನ್ನು ಪ್ರತಿಪಾದಿಸಿದರು. ಗಾಂಧೀಜಿ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರಿಂದ ದೇಶಬಂಧು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1923ರಲ್ಲಿ, ಮೋತಿಲಾಲ್ ನೆಹರು ಅವರೊಂದಿಗೆ ಸೇರಿ ಅವರು ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು, ಇದು ಶಾಸನ ಸಭೆಗಳ ಒಳಗಿನಿಂದಲೇ ವಸಾಹತುಶಾಹಿ ಆಡಳಿತಕ್ಕೆ ಸವಾಲು ಹಾಕಲು ಪ್ರಯತ್ನಿಸಿತು.

ರಾಷ್ಟ್ರವಾದಿಗಳು ಶಾಸನ ಸಭೆಗಳು, ಮುನ್ಸಿಪಾಲಿಟಿಗಳು ಮತ್ತು ಜಿಲ್ಲಾ ಮಂಡಳಿಗಳ ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಎಂದು ದೇಶಬಂಧು ವಾದಿಸಿದರು. ಇದರ ಉದ್ದೇಶ ಸ್ಪಷ್ಟವಾಗಿತ್ತು: ವಸಾಹತುಶಾಹಿ ಸರ್ಕಾರ ಯಾವುದೇ ವಿರೋಧವಿಲ್ಲದೆ ದೇಶದ ಮೇಲೆ ನಿಯಂತ್ರಣ ಸಾಧಿಸದಂತೆ ಮಾಡುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಲಭ್ಯವಿರುವ ಪ್ರತಿಯೊಂದು ಸಂಸ್ಥೆಯನ್ನು ಬಳಸಿಕೊಳ್ಳುವುದು. ಚುನಾವಣೆಯಲ್ಲಿ ಭಾಗವಹಿಸುವುದರಿಂದ ಕಾಂಗ್ರೆಸ್ ತನ್ನ ಸಂದೇಶವನ್ನು ದೇಶಾದ್ಯಂತ ಪಸರಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಆಶಯವಾಗಿತ್ತು. ಮಹಾನ್ ಸಾಹಿತಿ, ಮಾನವತಾವಾದಿ ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರು ಹೇಳಿದಂತೆ, ಪಕ್ಷಕ್ಕೆ ಆರಂಭದಲ್ಲಿ ಹಣ, ಜನಬಲ ಮತ್ತು ಸಂಘಟನಾಕಾರರ ಕೊರತೆಯಿತ್ತು. ಆದಾಗ್ಯೂ, ದಣಿವರಿಯದ ಹೋರಾಟದ ಮೂಲಕ ದೇಶಬಂಧು ಅವರು ಅದನ್ನು ಒಂದು ಬಲಿಷ್ಠ ಶಕ್ತಿಯಾಗಿ ಪರಿವರ್ತಿಸಿದರು. ಸ್ವರಾಜ್ ಪಕ್ಷವು ವಿಶೇಷವಾಗಿ ಬಂಗಾಳದಲ್ಲಿ, ಗಮನಾರ್ಹ ಚುನಾವಣಾ ಯಶಸ್ಸನ್ನು ಸಾಧಿಸಿತು; 1924ರ ಕಲ್ಕತ್ತಾ ಕಾರ್ಪೊರೇಷನ್ ಚುನಾವಣೆಯಲ್ಲಿ, ಸ್ವರಾಜ್ಯವಾದಿಗಳು ಎಪ್ಪತ್ತೆೈದು ಸ್ಥಾನಗಳಲ್ಲಿ ಐವತ್ತೆೈದು ಸ್ಥಾನಗಳನ್ನು ಗೆದ್ದರು. ದೇಶಬಂಧು ಕಲ್ಕತ್ತಾದ ಮೇಯರ್ ಆದರು ಮತ್ತು ಶಾಹಿದ್ ಸುಹ್ರಾವರ್ದಿ ಉಪಮೇಯರ್ ಆಗಿ ಆಯ್ಕೆಯಾದರು.

ಚಳುವಳಿಯ ಬೆಳೆಯುತ್ತಿರುವ ಪ್ರಭಾವದಿಂದ ಗಾಬರಿಗೊಂಡ ಬ್ರಿಟಿಷ್ ಸರ್ಕಾರವು 25 ಅಕ್ಟೋಬರ್ 1924 ರಂದು ಬಂಗಾಳ ಸುಗ್ರೀವಾಜ್ಞೆಯಡಿ ಸುಭಾಷ್‌ಚಂದ್ರ ಬೋಸ್ ಮತ್ತು ಇತರ ರಾಷ್ಟ್ರವಾದಿಗಳನ್ನು ಬಂಧಿಸಿತು; ಇದನ್ನು ವಿರೋಧಿಸಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ ದೇಶಬಂಧು ಅವರು ತೀವ್ರ ಅನಾರೋಗ್ಯವನ್ನು ಕಡೆಗಣಿಸಿ ಅತ್ಯಂತ ಸ್ಫೂರ್ತಿದಾಯಕವಾಗಿ ಘೋಷಿಸಿದರು: “ನನ್ನ ದೇಶವನ್ನು ಪ್ರೀತಿಸುವುದು ಅಪರಾಧವಾಗಿದ್ದರೆ, ನಾನು ಅಪರಾಧಿ. ಸುಭಾಷ್‌ಚಂದ್ರ ಅಪರಾಧಿಯಾಗಿದ್ದರೆ, ನಾನು ಕೂಡ ಅಪರಾಧಿ.” ಅವರು ಬಂಗಾಳದ ಯುವಕರಿಗೆ ಮಾಡಿಕೊಂಡ ಮನವಿಯೆಂದರೆ: “ನಿಮ್ಮ ಹೃದಯದಲ್ಲಿ ಸ್ವಾತಂತ್ರ‍್ಯದ ಕಿಚ್ಚು ಉರಿಯಲಿ. ಸ್ವಾತಂತ್ರ‍್ಯಕ್ಕಾಗಿ ಸಾವನ್ನು ಅಪ್ಪಿಕೊಳ್ಳಲು ಮುಂದೆ ಬನ್ನಿ. ನನ್ನ ಈ ಸವೆದುಹೋದ ದೇಹವು ಮುಂಚೂಣಿಯಲ್ಲಿ ನಿಲ್ಲುತ್ತದೆ; ನೀವು ನನ್ನನ್ನು ಅನುಸರಿಸಬೇಕು.”

ದೇಶಬಂಧು ಅವರು, ಅಲಿಪೋರ್ ಸೆಂಟ್ರಲ್ ಜೈಲಿನಲ್ಲಿ ಸುಭಾಷರನ್ನು ಎರಡು ಬಾರಿ ಭೇಟಿಯಾಗಿ, ಬಂಧಿತರಾಗಿರುವ ಎಲ್ಲಾ ಸ್ವಾತಂತ್ರ‍್ಯ ಹೋರಾಟಗಾರರ ಬಿಡುಗಡೆಯನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದರು. ಆದರೆ ಹಾಗಾಗಲಿಲ್ಲ. ನಿರಂತರ ಶ್ರಮದಿಂದಾದ ಬಳಲಿಕೆ ಮತ್ತು ಕ್ಷೀಣಿಸುತ್ತಿದ್ದ ಆರೋಗ್ಯದಿಂದ ಚೇತರಿಸಿಕೊಳ್ಳಲೆಂದು ಡಾರ್ಜಿಲಿಂಗ್‌ಗೆ ತೆರಳಿದ ಅವರು ಮತ್ತೆಂದಿಗೂ ಹಿಂತಿರುಗಲೇ ಇಲ್ಲ. 16 ಜೂನ್ 1925 ರಂದು ದೇಶಬಂಧು ಚಿತ್ತರಂಜನ್ ದಾಸ್ ಡಾರ್ಜಿಲಿಂಗ್‌ನಲ್ಲಿ ನಿಧನರಾದರು. ದೇಶವೇ ಶೋಕಸಾಗರದಲ್ಲಿ ಮುಳುಗಿತು. ಈ ಸುದ್ದಿಯಿಂದ ಆಘಾತಗೊಂಡ ಸುಭಾಷರಿಗೆ ಎರಡು ದಿನ ಆಹಾರ ಸೇವಿಸಲಾಗಲಿಲ್ಲ.

ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ರವೀಂದ್ರನಾಥ ಠಾಕೂರ್ ಬರೆದರು: “ನೀವು ನಿಮ್ಮೊಂದಿಗೆ ಅಮರ ಚೇತನವನ್ನು ತಂದಿರಿ; ಮರಣದಲ್ಲಿ ನೀವು ಹಿಂದೆ ಬಿಟ್ಟುಹೋದ ಕೊಡುಗೆ ಅದೇ ಆಗಿದೆ.”

ಕಾಜಿ ನಜ್ರುಲ್ ಇಸ್ಲಾಂ ಅವರು ಹೀಗೆ ಕಂಬನಿ ಮಿಡಿದರು: “ಓ ರಾಜರ್ಷಿಯೇ, ಕೆಡುಕನ್ನು ಸೋಲಿಸಲು ಭಾರತ ಜಾಗೃತಗೊಳ್ಳುತ್ತದೆಯೇ ಎಂದು ಕಾಯುತ್ತಾ ನೀವಿಂದು ನೀವು ನಿಮ್ಮ ಜೀವನವನ್ನೇ ಸಮರ್ಪಿಸಿದ್ದೀರಿ.”

ಜನರ ಮೇಲಿನ ದೇಶಬಂಧು ಅವರ ನಂಬಿಕೆಗೆ ಎಂದೂ ಧಕ್ಕೆ ಬರಲಿಲ್ಲ. ಅವರೊಮ್ಮೆ ಶರತ್ ಚಂದ್ರರಿಗೆ ಹೇಳಿದ್ದರು: “ಬಂಗಾಳಿಗರು ಜಿಪುಣರಲ್ಲ. ಒಂದು ದಿನ, ಅವರು ಇದನ್ನು ನಿಜವಾಗಿಯೂ ಅರ್ಥಮಾಡಿಕೊಂಡಾಗ, ಅವರು ತಮ್ಮಲ್ಲಿರುವ ಎಲ್ಲವನ್ನೂ ತಂದು ನಮ್ಮ ಕೈಯಲ್ಲಿ ಇಡುತ್ತಾರೆ.” ಗಾಢವಾದ ಭಾವನೆಗಳೊಂದಿಗೆ ದೇಶಬಂಧು ಅವರು ತಮ್ಮ ದೇಶವಾಸಿಗಳಿಗೆ ಮನವಿ ಮಾಡಿದರು: “ನಾನು ನಿಮಗೆ ಕರೆ ನೀಡುತ್ತಿದ್ದೇನೆ - ಮಾತೃಭೂಮಿಯ ತೆಕ್ಕೆಗೆ ಬನ್ನಿ. ಭಾರತ ಎಂಬ ಈ ಸ್ಮಶಾನ ಭೂಮಿಯಲ್ಲಿ ಸ್ವರಾಜ್ಯಕ್ಕಾಗಿ ಶ್ರಮಿಸುವವರು ಯಾರೂ ಇಲ್ಲವೇ? ಸ್ವಾತಂತ್ರ‍್ಯ ಯಾರಿಗೆಲ್ಲಾ ಬೇಕಾಗಿದೆ? ಹಾಗಾದರೆ ಮುಂಬನ್ನಿ. ತಾಯ ನೋವಿಗೆ ಯಾರದಾದರೂ ಹೃದಯ ಮಿಡಿಯುತ್ತಿದೆಯೇ? ಮನುಷ್ಯತ್ವ ಇರುವವರು ಯಾರಾದರೂ ಇದ್ದೀರಾ? ಮುಂಬನ್ನಿ.”

ದೇಶಬಂಧು ಅವರು ನಿರ್ಗಮಿಸಿ ಒಂದು ಶತಮಾನದ ನಂತರವೂ, ಅವರು ಮತ್ತು ಅವರ ಯೋಗ್ಯ ಶಿಷ್ಯರಾದ ಸುಭಾಷ್‌ಚಂದ್ರ ಬೋಸ್ ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ, ಅಚಲ ನಿರ್ಧಾರದಿಂದ ಹೋರಾಡಿದಂತಹ ಸ್ವತಂತ್ರ ರಾಷ್ಟ್ರವನ್ನು ನಿರ್ಮಿಸುವಲ್ಲಿ ನಾವು ನಿಜವಾಗಿಯೂ ಯಶಸ್ವಿಯಾಗಿದ್ದೇವೆಯೇ? ಒಂದೆಡೆ, ಏಕಸ್ವಾಮ್ಯಾಧಿಪತಿಗಳ ಸಂಪತ್ತಿನ ರಾಶಿ ಗಗನವನ್ನೇ ತಲುಪಿದರೆ, ಇನ್ನೊಂದೆಡೆ, ಜನ ಸಾಮಾನ್ಯರು, ನಿರ್ಗತಿಕರಾಗುತ್ತಿದ್ದಾರೆ; ನಿರಂತರ ಬೆಲೆ ಏರಿಕೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಲಭ್ಯತೆ, ನಿರುದ್ಯೋಗದ ಹೆಚ್ಚಳ, ಕುಸಿಯುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ನೈತಿಕತೆ, ಸ್ತ್ರೀ ಸಂಕುಲದ ಮೇಲಾಗುತ್ತಿರುವ ಕಲ್ಪಾನಾತೀತ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಾರ್ಮಿಕರು ಮತ್ತು ರೈತರ ಅವ್ಯಾಹತ ಶೋಷಣೆ, ಮುಂತಾದವುಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶಬಂಧು ಅವರ ಸ್ಮರಣೆಯೆಂದರೆ, ಅವರ ಕನಸಿನ ಭಾರತವನ್ನು ಸಾಕಾರಗೊಳಿಸುವುದು. ಅವರ ಕರೆ ನಮ್ಮನ್ನು ಪ್ರೇರೇಪಿಸುತ್ತಿದೆ:

“ನಿಮ್ಮಲ್ಲಿ ನಿಜವಾದ ಮನುಷ್ಯರು ಯಾರಿದ್ದೀರ? ಮುಂಬನ್ನಿ.”