2026ರ ಫೆಬ್ರವರಿ 16ರಂದು ಆರು ಮಂದಿ ಸದಸ್ಯರಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠದ ವಿಶೇಷ ಬೆಂಚ್ ಸಹ ಈ ಯೋಜನೆಗಿದ್ದ ಎಲ್ಲಾ ಆಕ್ಷೇಪಣೆಗಳನ್ನು ತಳ್ಳಿಹಾಕಿ, ಹಸಿರು ನಿಶಾನೆ ತೋರಿದೆ. ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ಸಾಗರಶಕ್ತಿಯ ಪರಿಭಾಷೆಯ ಹಿಂದಿರುವುದು, ಮಳೆಕಾಡುಗಳು, ಅಳಿವಿನಂಚಿನಲ್ಲಿರುವ ವನ್ಯಜೀವಿಗಳು, ಆದಿವಾಸಿ ಸಮುದಾಯಗಳು ಹಾಗೂ ಹಿಂದೂ ಮಹಾಸಾಗರದಲ್ಲಿನ ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲೊಂದಕ್ಕೆ ಭಾರಿ ಅಪಾಯವನ್ನುಂಟುಮಾಡುವ ಪ್ರಸ್ತಾವನೆ. ಈ ಯೋಜನೆಗೆ ಅನುಮೋದನೆ ದೊರೆತಿರುವ ಕಾನೂನು, ಪರಿಸರ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಕುರಿತು ಉದ್ಭವಿಸಿರುವ ಗಂಭೀರ ಪ್ರಶ್ನೆಗಳು ಇದಕ್ಕೆ ಸಮಸಮವಾಗಿ ಆತಂಕಕಾರಿಯಾಗಿವೆ.

ವಿನಾಶದ ಕರಿನೆರಳಲ್ಲಿ ನಿರ್ಮಲ ದ್ವೀಪ

ಅಖಂಡ ಉಷ್ಣವಲಯದ ಮಳೆಕಾಡುಗಳನ್ನು ಹೊಂದಿರುವ ಭಾರತದ ಕಟ್ಟಕಡೆಯ ಪ್ರದೇಶ, ಗ್ರೇಟ್ ನಿಕೋಬಾರ್ ದ್ವೀಪವು ಯುನೆಸ್ಕೋ ಗುರುತಿಸಿರುವಂತಹ ‘ಬಯೋಸ್ಫಿಯರ್ ರಿಸರ್ವ್’ ಆಗಿದೆ. ಇದು ಅಪರೂಪದ ಜೀವವೈವಿಧ್ಯತೆ ಹಾಗೂ ಭೂಮಿಯ ಮೇಲೆ ಬೇರೆಲ್ಲೂ ಕಾಣಸಿಗದ ವಿಶಿಷ್ಟ ಜೀವಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. ಸಹಸ್ರಾರು ವರ್ಷಗಳಿಂದ ಈ ದ್ವೀಪವು ‘ಶೋಂಪೆನ್’ ಮತ್ತು ‘ನಿಕೋಬಾರಿಸ್’ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ನೆಲೆಬೀಡಾಗಿದೆ. ಈ ಯೋಜನೆಯಿಂದಾಗಿ ಮುಂದಿನ 30 ವರ್ಷಗಳಲ್ಲಿ ದ್ವೀಪದ ಜನಸಂಖ್ಯೆಯನ್ನು ಪ್ರಸ್ತುತ ಇರುವ 8,000 ದಿಂದ 3,50,000 ಕ್ಕೆ ಏರಿಸಲು ಉದ್ದೇಶಿಸಲಾಗಿದೆ. 130 ಚ.ಕಿ.ಮೀಗಿಂತಲೂ ಹೆಚ್ಚು ಅರಣ್ಯ ಪ್ರದೇಶದಲ್ಲಿ ಹಸಿರು ಹಾಸಿನ ಟೌನ್‌ಶಿಪ್, ಪರಿಸರ ಪ್ರವಾಸೋದ್ಯಮ ರೆಸಾರ್ಟ್ಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ ಮತ್ತು ಬೃಹತ್ ಸರಕು ಸಾಗಣೆ ಟರ್ಮಿನಲ್‌ಗಳನ್ನು ನಿರ್ಮಿಸುವುದಾಗಿ ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಸುಮಾರು 10 ಲಕ್ಷ ಮರಗಳನ್ನು ಕಡಿಯುವ ನಿರೀಕ್ಷೆಯಿದ್ದು, ಇದು ಮಳೆಕಾಡಿಗೆ, ಕರಾವಳಿ ಪರಿಸರ ವ್ಯವಸ್ಥೆಗೆ ದೊಡ್ಡ ಆಪತ್ತನ್ನು ತಂದು, ನೀರಿನ ಅಭಾವವನ್ನು ಸೃಷ್ಟಿಸಿ ಸ್ಥಳೀಯ ಬುಡಕಟ್ಟುಗಳ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಹಾಕಲಿದೆ. ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಈ ಯೋಜನೆಯನ್ನು ‘ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಸರ ವಿಪತ್ತು ಮತ್ತು ಅಪಾಯಕಾರಿ ಹೆಜ್ಜೆ’ ಎಂದು ಎಚ್ಚರಿಸಿದ್ದಾರೆ.

ಕಾಡೆಂದರೆ ಬರೀ ಮರಗಳೇ!

ಕಾಡು ಎಂದರೆ ಕೇವಲ ಮರಗಳು ಮತ್ತು ವನ್ಯಜೀವಿಗಳ ಸಂಗ್ರಹವಲ್ಲ. ಅದು ಜನರ ಸಂಸ್ಕೃತಿ, ಜೀವನೋಪಾಯ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಆಗರ. ಒಡಿಶಾದ ನಿಯಮಗಿರಿ ವಿವಾದದ ಸಂದರ್ಭದಲ್ಲಿ ‘ಎನ್.ಸಿ. ಸಕ್ಸೇನಾ ಸಮಿತಿ’ಯು, ಅರಣ್ಯವಾಸಿಗಳು ಕಾಡಿನ ಉಳಿವು ಮತ್ತು ಸುಸ್ಥಿರತೆಯ ಅವಿಭಾಜ್ಯ ಅಂಗ ಎಂದು ಒತ್ತಿಹೇಳಿದದ್ದು ಇಲ್ಲಿ ಉಲ್ಲೇಖಾರ್ಹ. ಭಾರತದ ‘ಅರಣ್ಯ ಹಕ್ಕುಗಳ ಕಾಯ್ದೆ’ ಕೂಡ ಈ ಸಂಬಂಧವನ್ನು ಗುರುತಿಸಿ ಬುಡಕಟ್ಟು ಸಮುದಾಯಗಳಿಗೆ ರಕ್ಷಣೆ ನೀಡುತ್ತದೆ. ವಾಣಿಜ್ಯ ಉದ್ದೇಶಗಳಿಗಾಗಿ ಅರಣ್ಯವನ್ನು ಬಳಸಿಕೊಳ್ಳುವ ಮುನ್ನ ಪೀಡಿತ ಸಮುದಾಯಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸುವುದು ಮತ್ತು ಅವರ ಹಕ್ಕುಗಳನ್ನು ಗುರುತಿಸುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ. ಪ್ರಸ್ತುತ ಗ್ರೇಟ್ ನಿಕೋಬಾರ್ ಯೋಜನೆಯು ಈ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಆದ್ದರಿಂದ, ಇಡೀ ಯೋಜನೆಯ ಸಿಂಧುತ್ವವೇ ಪ್ರಶ್ನಾರ್ಹವಾಗುತ್ತದೆ.

ಕಣ್ಣು ಮುಚ್ಚಿ ಸಹಿ ಹಾಕುವ ‘ಪರಿಸರ ಮಂಜೂರಾತಿ’ ಸಂಸ್ಕೃತಿ!

ಭಾರತದಲ್ಲಿ ಪರಿಸರ ಸುರಕ್ಷತಾ ನಿಯಮಗಳನ್ನು ಅಭಿವೃದ್ಧಿಗೆ ಅಡ್ಡಿಯೆಂದು ಪರಿಗಣಿಸಿ, ಪರಿಸರ ನಿಯಮಾವಳಿಗಳನ್ನು ಬೇಕಾಬಿಟ್ಟಿ ಸಡಿಲಗೊಳಿಸಲಾಗುತ್ತದೆ. ವಿವಿಧ ಸರ್ಕಾರಗಳು ತಂದಿರುವ ಅರಣ್ಯ ಸಂರಕ್ಷಣಾ ಕಾಯ್ದೆಯ ಹಲವಾರು ತಿದ್ದುಪಡಿಗಳು ವಾಣಿಜ್ಯ ಯೋಜನೆಗಳಿಗೆ ಅರಣ್ಯ ಭೂಮಿ ಬಳಕೆಯನ್ನು ಸುಲಭಗೊಳಿಸಿವೆ. ಜೈವಿಕ ವೈವಿಧ್ಯ ಸಂಸ್ಥೆಗಳ ಮೇಲಿನ ಅಧಿಕಾರಶಾಹಿ ನಿಯಂತ್ರಣ ಹೆಚ್ಚಾಗಿದ್ದು, ಅರಣ್ಯ ಸಮುದಾಯಗಳ ಹಕ್ಕುಗಳು ದುರ್ಬಲಗೊಂಡಿವೆ. ಇದೇ ವೇಳೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚಿನ ವಿನಾಯಿತಿಗಳು ದೊರೆಯುತ್ತಿವೆ. ಇದು ಪರಿಸರ ಕಾಳಜಿಗಳನ್ನು ವಾಣಿಜ್ಯ ಹಿತಾಸಕ್ತಿಗಳಿಗೆ ಅಧೀನಗೊಳಿಸುವ ಪ್ರವೃತ್ತಿಯೇ ಸರಿ.

ಪರಿಸರ ಮತ್ತು ಅರಣ್ಯ ಪರವಾನಗಿಗಳು

ಈ ಯೋಜನೆಗೆ ಅನುಮೋದನೆ ನೀಡಲಾದ ಪ್ರಕ್ರಿಯೆಯು ಅನೂಹ್ಯ ತರಾತುರಿಯಿಂದ ಕೂಡಿದೆ. 2020ರ ಸೆಪ್ಟೆಂಬರ್‌ನಲ್ಲಿ ನೀತಿ ಆಯೋಗದ ಪ್ರಸ್ತಾಪದೊಂದಿಗೆ ಆರಂಭವಾದ ಈ ಯೋಜನೆಗೆ, ಕೇವಲ ಎರಡೇ ವರ್ಷಗಳಲ್ಲಿ ಪರಿಸರ ಅನುಮತಿ ದೊರಕಿತು. ಜೀವವೈವಿಧ್ಯ, ಮೂಲನಿವಾಸಿಗಳ ಹಕ್ಕುಗಳು ಮತ್ತು ವಿಪತ್ತು ಸೂಕ್ಷ್ಮತೆಯ ಕುರಿತು ಸ್ವತಂತ್ರ ತಜ್ಞರು ಹಾಗೂ ನಾಗರಿಕ ಸಮಾಜವು ಎತ್ತಿದ ನೂರಾರು ಕಳವಳಕಾರಿ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಯಿತು. ಪಾರದರ್ಶಕತೆಯ ಕೊರತೆಯ ಆರೋಪಗಳಿದ್ದರೂ, ಯೋಜನೆಗೆ ಅನುಮತಿಯನ್ನು ನೀಡಲಾಗಿದೆ. ಸಮಸ್ಯೆಗಳ ಪರಿಶೀಲನೆಗಾಗಿ ರಚಿಸಲಾದ ಸಮಿತಿಯಲ್ಲಿ ಈಗಾಗಲೇ ಯೋಜನೆಗೆ ಒಪ್ಪಿಗೆ ನೀಡಿದ್ದ ಸಂಸ್ಥೆಗಳ ಪ್ರತಿನಿಧಿಗಳೇ ಸೇರಿಕೊಂಡಿದ್ದು, ಇದು ಸಮಿತಿಯ ಸ್ವಾತಂತ್ರö್ಯ ಮತ್ತು ನಿಷ್ಪಕ್ಷಪಾತತೆ ಬಗ್ಗೆ ಅನುಮಾನ ಮೂಡಿಸಿದೆ. ಗ್ರೇಟ್ ನಿಕೋಬಾರ್ ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲೊಂದಾಗಿದ್ದು, 2004 ರ ಸುನಾಮಿ ಮತ್ತು ಭೂಕಂಪದಿಂದಾಗಿ ಇಲ್ಲಿನ ಕರಾವಳಿ ತೀರಗಳು ಶಾಶ್ವತವಾಗಿ ಬದಲಾಗಿವೆ. ಇಂತಹ ತೀವ್ರ ಭೂಕುಸಿತ ಮತ್ತು ವಿಪತ್ತು ಪೀಡಿತ ಪ್ರದೇಶದಲ್ಲಿ ಬೃಹತ್ ಹೂಡಿಕೆ ಹಾಗೂ ಜನಸಂಖ್ಯೆಯನ್ನು ಕೇಂದ್ರೀಕರಿಸುವುದು ಜಾಣತನವೇ? ಏತನ್ಮಧ್ಯೆ, ಅದಾನಿ ಪೋರ್ಟ್ಸ್ ಮತ್ತು ಜೆ.ಎಸ್.ಡಬ್ಲ್ಯೂ ಇನ್‌ಫ್ರಾಸ್ಟ್ರಕ್ಚರ್‌ನಂತಹ ಕಾರ್ಪೊರೇಟ್ ಸಂಸ್ಥೆಗಳು ಈ ಬಂದರು ಅಭಿವೃದ್ಧಿ ಯೋಜನೆಯಲ್ಲಿ ಭಾಗವಹಿಸಲು ತೀವ್ರ ಆಸಕ್ತಿ ವಹಿಸಿವೆ.

ರಾಷ್ಟ್ರೀಯ ಭದ್ರತೆಯೋ, ಕಾರ್ಪೋರೇಟ್ ಲಾಭವೋ

ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ಸಂಗಮದಲ್ಲಿರುವ ಗ್ರೇಟ್ ನಿಕೋಬಾರ್‌ನ ಆಯಕಟ್ಟಿನ ಸ್ಥಾನವು ಕಡಲ ಕಣ್ಗಾವಲಿಗೆ ನೆರವಾಗುತ್ತದೆ. ಇದರ ಮೂಲಕ ಚೀನಾದ ಪ್ರಮುಖ ವ್ಯಾಪಾರ ಮಾರ್ಗವಾದ ‘ಮಲಕ್ಕಾ ಜಲಸಂಧಿ’ಯನ್ನು ನಿಯಂತ್ರಿಸಿ, ಚೀನಾವನ್ನು ಕಟ್ಟಿಹಾಕಬಹುದು ಎಂಬುದು ಯೋಜನೆಯ ಬೆಂಬಲಿಗರ ವಾದ. ಆದರೆ, ಭೌಗೋಳಿಕವಾಗಿ ಗ್ರೇಟ್ ನಿಕೋಬಾರ್ ಮಲಕ್ಕಾ ಜಲಸಂಧಿಯಿಂದ ತೀರಾ ದೂರದಲ್ಲಿದೆ. ಅಲ್ಲದೆ, ಚೀನಾ ಈಗಾಗಲೇ ಪರ್ಯಾಯ ವ್ಯಾಪಾರ ಮಾರ್ಗಗಳನ್ನು ಕಂಡುಕೊಂಡಿರುವುದರಿಂದ ಅದರ ಮೇಲೆ ನಿಯಂತ್ರಣ ಸಾಧಿಸುವುದು ಅಸಾಧ್ಯ. ಆದ್ದರಿಂದ, ರಾಷ್ಟ್ರೀಯ ಭದ್ರತೆಯ ಈ ವಾದವು ದಿಕ್ಕು ತಪ್ಪಿಸುವಂತದ್ದು. ಈ ಯೋಜನೆಯಿಂದ ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಲಾಭ ಕಬಳಿಸಿದರೆ, ಅದರ ಪರಿಸರ ಮತ್ತು ಸಾಮಾಜಿಕ ಹೊರೆಯನ್ನು ಸ್ಥಳೀಯ ಸಮುದಾಯಗಳು ಹಾಗೂ ಮುಂದಿನ ಪೀಳಿಗೆ ಹೊರಬೇಕಾಗುತ್ತದೆ. ತೀವ್ರ ಭೂಕಂಪನ ವಲಯದಲ್ಲಿ ‘ದುಬೈ ಅಥವಾ ಸಿಂಗಾಪುರ’ದಂತಹ ನಗರ ನಿರ್ಮಿಸಲು ಹೊರಡುವುದು ಮೂರ್ಖತನದ ಪರಮಾವಧಿ ಎಂದು ಪರಿಸರವಾದಿಗಳು ವಾದಿಸುತ್ತಿದ್ದರೂ, ನಾಗರಿಕರ ನ್ಯಾಯಸಮ್ಮತ ಪ್ರಶ್ನೆಗಳಿಗೆ ಉತ್ತರಿಸಲಾಗದ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ಯ ನೆಪವೊಡ್ಡಿ ಮಾಹಿತಿ ಹಕ್ಕು ಕಾಯ್ದೆ (RTI)ಯನ್ನು ನಿಷ್ಕ್ರಿಯಗೊಳಿಸಿದೆ. ಯೋಜನೆಯ ನಿರ್ವಹಣೆಯನ್ನು ವಾಣಿಜ್ಯ ಸಚಿವಾಲಯದಿಂದ ಗೃಹ ಸಚಿವಾಲಯಕ್ಕೆ ವರ್ಗಾಯಿಸಿರುವುದು ಟೀಕೆಗಳನ್ನು ಹತ್ತಿಕ್ಕುವ ತಂತ್ರವಾಗಿದೆ. ಪತ್ರಕರ್ತರೂ ಸಹ ಈ ದ್ವೀಪಕ್ಕೆ ಭೇಟಿ ನೀಡುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ.

ಸಂಭವಿಸಬಹುದಾದ ಭೀಕರ ಆಪತ್ತು

ಗ್ರೇಟ್ ನಿಕೋಬಾರ್‌ನ ಮಳೆಕಾಡುಗಳು ಮತ್ತು ಮೂಲನಿವಾಸಿಗಳು ಅತ್ಯಮೂಲ್ಯ ಜಾಗತಿಕ ಸಂಪತ್ತಾಗಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ ಪರಿಸರ ಮಿತಿಗಳ ಒಳಗೇ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಆದರೆ, ಪ್ರಸ್ತುತ ಯೋಜನೆ ಭದ್ರತೆಯ ಅಗತ್ಯ ದಾಟಿ, ಅಲ್ಪಾವಧಿಯ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಲಕ್ಷಾಂತರ ವರ್ಷಗಳ ಇತಿಹಾಸವಿರುವ ಕಾಡನ್ನು ನಾಶಪಡಿಸಲು ಹೊರಟಿದೆ. ಇದರಲ್ಲಿ ವಿಜ್ಞಾನ, ಪರಿಸರ ವಿವೇಕ ಮತ್ತು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ನಿರ್ಲಕ್ಷಿಸಿದರೆ, ಗ್ರೇಟ್ ನಿಕೋಬಾರ್ ಯೋಜನೆಯು ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪರಿಸರ ಮತ್ತು ಸಾಮಾಜಿಕ ಪ್ರಮಾದವೆಂದು ದಾಖಲಾಗಬಹುದು. ಈ ಯೋಜನೆಯನ್ನು ಇಂದಿನ ಜಾಗತಿಕ ದೃಷ್ಟಿಕೋನದಲ್ಲಿ ನೋಡಿದರೆ, ಇಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳು, ಸಂಘರ್ಷಗಳು ಮತ್ತು ಸಾಮಾಜಿಕ ತಲ್ಲಣಗಳನ್ನು ಲಾಭದ ಅವಕಾಶಗಳನ್ನಾಗಿ ಪರಿವರ್ತಿಸುವ ಹವಣಿಕೆ ಇರುವುದು ಎದ್ದು ಕಾಣುತ್ತದೆ. ಇಂದು ಪ್ರಪಂಚದಾದ್ಯಂತ ಯುದ್ಧಗಳು ಮುಂದುವರಿಯುತ್ತಲೇ ಇವೆ; ನಗರಗಳು ಧೂಳೀಪಟವಾಗುತ್ತಿವೆ, ಸಾವಿರಾರು ಮಂದಿ ಕೊಲ್ಲಲ್ಪಡುತ್ತಿದ್ದಾರೆ, ಲಕ್ಷೋಪಲಕ್ಷ ಜನರು ನಿರಾಶ್ರಿತರಾಗುತ್ತಿದ್ದಾರೆ. ಆದರೆ ಶಸ್ತ್ರಾಸ್ತ್ರ ತಯಾರಕರು, ನಿರ್ಮಾಣ ದೈತ್ಯರು, ಮೂಲಸೌಕರ್ಯ ನಿಗಮಗಳು ಮತ್ತು ಹಣಕಾಸು ಸಂಸ್ಥೆಗಳು ಈ ವಿನಾಶ ಮತ್ತು ಅದರ ನಂತರದ ಪುನರ್‌ನಿರ್ಮಾಣದಿಂದ ಲಾಭಗಳಿಸುತ್ತಲೇ ಇರುತ್ತಾರೆ. ಇಂತಹ ದೈತ್ಯ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಕಾಡುಗಳು, ಹವಳದ ಬಂಡೆಗಳು, ಮೂಲ ನಿವಾಸಿ ಸಮುದಾಯಗಳು, ಅಳಿವಿನಂಚಿನಲ್ಲಿರುವ ಜೀವಿಗಳು ಮತ್ತು ಮಾನವ ಜೀವಗಳು ಸಹ ಹೂಡಿಕೆಯ ಅವಕಾಶಗಳು ಹಾಗೂ ಲಾಭಗಳಿಕೆಗೆ ಅಡ್ಡಿಯಾಗುವ ತ್ಯಜಿಸಬಹುದಾದ ವಸ್ತುಗಳಂತೆ ಕಾಣುತ್ತವೆ. ಈ ಜಾಗತಿಕ ದೃಷ್ಟಿಕೋನದಲ್ಲಿ ಶತಕೋಟಿ ಲಾಭದ ನಿರೀಕ್ಷೆಗಳ ಮುಂದೆ ಪ್ರಾಕೃತಿಕ ವಿನಾಶ, ದುರ್ಬಲ ಬುಡಕಟ್ಟುಗಳ ಸ್ಥಳಾಂತರ ಅಥವಾ ವಿಶಿಷ್ಟ ಪ್ರಭೇದಗಳ ಅಳಿವು ನಗಣ್ಯವಾಗಿದ್ದು, ಇದರಿಂದಾಗುವ ಹಾನಿ ಎಷ್ಟೇ ಸರಿಪಡಿಸಲಾಗದ್ದಾಗಿದ್ದರೂ ಸರಿಯೇ, ಅದನ್ನು “ಅಭಿವೃದ್ಧಿ”ಗಾಗಿ ನೀಡಲೇಬೇಕಾದ ಅನಿವಾರ್ಯ ಬೆಲೆ ಎಂದು ಸಮರ್ಥಿಸಲಾಗುತ್ತದೆ.

ಪ್ರತಿರೋಧಕ್ಕೆ ಕರೆ!

ಇತಿಹಾಸ ಮತ್ತು ಜಾಗತಿಕ ಅನುಭವಗಳ ಪ್ರಕಾರ, ಆಳುವ ವರ್ಗಗಳು ಎಂದಿಗೂ ನಿಸರ್ಗದ ಅಥವಾ ಸಾಮಾನ್ಯ ಜನರ ಹಿತಾಸಕ್ತಿಗಾಗಿ ತಾವೇ ಸ್ವತ: ಕೆಲಸ ಮಾಡುವುದಿಲ್ಲ. ಕೇವಲ ಜನಸಾಮಾನ್ಯರ ಸಂಘಟಿತ ಚಳುವಳಿಗಳು ಮಾತ್ರವೇ ಸರ್ಕಾರಗಳು ತಲೆಬಾಗುವಂತೆ ಮತ್ತು ಜನರ ದನಿಗೆ ಬೆಲೆ ಕೊಡುವಂತೆ ಮಾಡಲು ಸಾಧ್ಯ. ದೇಶದಾದ್ಯಂತ ಪ್ರಕೃತಿ ಮತ್ತು ಮನುಷ್ಯರ ಮೇಲಿನ ಇಂತಹ ವಿನಾಶಕಾರಿ ದಾಳಿಗಳು ಇಂದು ಕೇವಲ ಒಂದು ಅಪರೂಪದ ಘಟನೆಯಾಗಿ ಉಳಿದಿಲ್ಲ; ಬದಲಿಗೆ ಇದೊಂದು ಅಪಾಯಕಾರಿ ಹೊಸ ಸಂಕಥನವಾಗಿದೆ. ಹಾಗಾಗಿ ದೂರದಿಂದಲೇ ದುರಂತ ಸಂಭವಿಸುವುದನ್ನು ನೋಡುವ ಪ್ರೇಕ್ಷಕರಾಗಿ ಉಳಿಯದೆ ಜನರು ಧ್ವನಿ ಎತ್ತಬೇಕು.