ಭಾರತದ ರಾಷ್ಟ್ರೀಯ ಸಾಲದ ಮೊತ್ತದಲ್ಲಿ ಭಾರಿ ಏರಿಕೆ

ಕಳೆದೊಂದು ದಶಕದಲ್ಲಿ(2014-2025) ಭಾರತ ಸರ್ಕಾರದ ಒಟ್ಟು ಆಂತರಿಕ ಮತ್ತು ಬಾಹ್ಯ ಸಾಲದ ಮೊತ್ತವು(ಕೇಂದ್ರ ಮತ್ತು ರಾಜ್ಯಗಳ ಪಾಲನ್ನು ಸೇರಿಸಿ) ಸುಮಾರು ಶೇ.260 ರಿಂದ ಶೇ.270ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. 2014ರಲ್ಲಿ ರೂ.55-58 ಲಕ್ಷ ಕೋಟಿಯಷ್ಟಿದ್ದ ಸಾಲದ ಮೊತ್ತವು ಈಗ ರೂ.214.82 ಲಕ್ಷ ಕೋಟಿಯನ್ನು ತಲುಪಿದೆ. ದೇಶದ ಸಾಲ ಮತ್ತು GDP ಅನುಪಾತವು ಶೇ.80.6ನ್ನು ತಲುಪಿ ಆತಂಕಕಾರಿ ಮಟ್ಟದಲ್ಲಿದೆ. ಈ ಸಾಲದ ಏರಿಕೆಗೆ ಕೋವಿಡ್ ನಂತರದ ಚೇತರಿಕೆಯ ನೆಪ ಮಾತ್ರವಲ್ಲದೆ, ಬೃಹತ್ ಕಾರ್ಪೊರೇಟ್ ಮನೆತನಗಳಿಗೆ ನೀಡಿದ ಅತಿಯಾದ ತೆರಿಗೆ ವಿನಾಯಿತಿಗಳು, ಸೌಲಭ್ಯಗಳು ಮತ್ತು ಕೋಟ್ಯಂತರ ರೂಪಾಯಿ ಸಾಲ ಮನ್ನಾ(ಬಡವರನ್ನು ಹೊರತುಪಡಿಸಿ)ಗಳು ಮುಖ್ಯ ಕಾರಣವಾಗಿವೆ. ಈಗ ಹೊಸದಾಗಿ ಮಾಡಲು ಹೊರಟಿರುವ ಸಾಲವು ಹಿಮಗಡ್ಡೆಯ ತುತ್ತತುದಿ ಮಾತ್ರ. 

ಪ್ರಧಾನಿ ನರೇಂದ್ರ ಮೋದಿಯವರ ಮೊದಲ 10 ವರ್ಷಗಳ ಆಡಳಿತಾವಧಿಯಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ರೂ.16.11 ಲಕ್ಷ ಕೋಟಿ ಸಾಲವನ್ನು ಮನ್ನಾ (Write-off) ಮಾಡಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ವಂಚಕ ಉದ್ಯಮಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಕನಿಷ್ಠ ರೂ. 12 ಲಕ್ಷ ಕೋಟಿ ಸಾಲ ಮರುಪಾವತಿ ಮಾಡದೆ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವಾಗ, ಬ್ಯಾಂಕ್‌ಗಳು ಕೇವಲ ರೂ.2.5 ಲಕ್ಷ ಕೋಟಿ ಮಾತ್ರ ವಸೂಲಿ ಮಾಡಲು ಸಾಧ್ಯವಾಗಿದ್ದು, ಬ್ಯಾಂಕ್‌ಗಳಿಗೆ ಉಂಟಾದ ನಿವ್ವಳ ನಷ್ಟ ರೂ. 13.62 ಲಕ್ಷ ಕೋಟಿಯಷ್ಟಾಗಿದೆ. ಜನಸಾಮಾನ್ಯರ ತೆರಿಗೆ ಹಣವೇ ಈ ರೀತಿಯಲ್ಲಿ ಕಾರ್ಪೊರೇಟ್‌ಗಳ ಪಾಲಾಗಿದೆ.

ಏಕಸ್ವಾಮ್ಯ ಸಂಸ್ಥೆಗಳಿಗೆ ವಿಶೇಷ ವಿನಾಯಿತಿ

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಬೃಹತ್ ಕಂಪನಿಗಳಿಗೆ ಅತಿಯಾದ ರಿಯಾಯಿತಿ ನೀಡಿವೆ ಎಂಬ ಸತ್ಯವನ್ನು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (AIBEA) ಬಯಲಿಗೆಳೆದಿದೆ. ಅದಾನಿ ಸಮೂಹವು ಆರ್ಥಿಕ ಸಂಕಷ್ಟದಲ್ಲಿದ್ದ 10 ಕಂಪನಿಗಳನ್ನು ವಶಪಡಿಸಿಕೊಂಡಾಗ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ತಮ್ಮ ರೂ.62,000 ಕೋಟಿ ಬಾಕಿ ದಾವೆಯ ಎದುರು ಕೇವಲ ರೂ. 16,000 ಕೋಟಿಯನ್ನು ಸ್ವೀಕರಿಸಿ, ಉಳಿದ ಶೇ.74ರಷ್ಟು ಹಣವನ್ನು ಬಿಟ್ಟುಕೊಟ್ಟವು. ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯಿಂದ 53 ಬ್ಯಾಂಕ್‌ಗಳಿಗೆ ರೂ. 49,000 ಕೋಟಿ ಬಾಕಿ ಇತ್ತು. ಆದರೆ ರಾಷ್ಟ್ರೀಯ ಕಂಪನಿ ಲಾ ಟ್ರಿಬ್ಯೂನಲ್ (NCLT) ಕೇವಲ ರೂ. 455 ಕೋಟಿಗೆ ಈ ಸಾಲವನ್ನು ಇತ್ಯರ್ಥಗೊಳಿಸಿತು. ಅಂದರೆ, ಒಟ್ಟು ಸಾಲದ ಪೈಕಿ ಕೇವಲ ಶೇ.0.92 ಮಾತ್ರ ವಸೂಲಿಯಾಗಿ, ಉಳಿದ ಶೇ.99ಕ್ಕಿಂತ ಹೆಚ್ಚು ಭಾಗ ಮನ್ನಾ ಆಯಿತು.

ಉದ್ಯಮಿಗಳು ನಡೆಸಿದ ಲೂಟಿ ಮತ್ತು ಆರ್ಥಿಕ ವಂಚನೆಗಳು

ಸರ್ಕಾರವು ‘ಬ್ಯಾಂಕಿಂಗ್ ನಿಯಮಾವಳಿಗಳ’ ಹೆಸರಿನಲ್ಲಿ ದೊಡ್ಡಮಟ್ಟದ ವಂಚನೆಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಉದ್ಯಮಿಗಳೆಂದು ಮೆರೆಯುವ ನಿರವ್ ಮೋದಿ, ಮೆಹುಲ್ ಚೋಕ್ಸಿ, ನಿಶಾಂತ್ ಮೋದಿ, ಅಮಿ ಮೋದಿ, ಲಲಿತ್ ಮೋದಿ, ಜತಿನ್ ಮೆಹ್ತಾ, ಚೇತನ್ ಮತ್ತು ನಿತಿನ್ ಸಾಂದೇಸರಾ, ಎಬಿಜಿ ಶಿಪ್‌ಯಾರ್ಡ್, ವಿಜಯ್ ಮಲ್ಯ, DHFL, ಯೆಸ್ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್‌ಗಳಿಂದ ನಡೆದ ಸಾರ್ವಜನಿಕ ಹಣದ ಒಟ್ಟು ಲೂಟಿ ಪ್ರಮಾಣವು ಸರ್ಕಾರವು ಬಹಿರಂಗವಾಗಿ ಹೇಳಿಕೊಳ್ಳುವ ಸಂಖ್ಯೆಗಿಂತ ವಿಪರೀತ ದೊಡ್ಡದಾಗಿದೆ. 

ಅನಿರೀಕ್ಷಿತ ಲಾಭದ ಮೇಲೆ ತೆರಿಗೆ (Windfall Tax) ವಿನಾಯಿತಿ ಮತ್ತು ಜನರ ಮೇಲಿನ ಹೊರೆ:

ಅಂತರರಾಷ್ಟ್ರೀಯ ಸಂಘರ್ಷಗಳ ಕಾರಣದಿಂದ ಕಚ್ಚಾ ತೈಲ ಬೆಲೆ ಏರಿಕೆಯಾದಾಗ, ತೈಲ ಸಂಸ್ಕರಣಾ ಕಂಪನಿಗಳು ಯಾವುದೇ ಪ್ರಯತ್ನವಿಲ್ಲದೆ ಹಠಾತ್ತಾಗಿ ಭಾರಿ ಲಾಭ ಗಳಿಸುತ್ತವೆ. ಇಂತಹ ಅತ್ಯಧಿಕ ಲಾಭದ ಮೇಲೆ ಸರ್ಕಾರವು ‘ವಿಂಡ್‌ಫಾಲ್ ತೆರಿಗೆ’ (ಅನಿರೀಕ್ಷಿತ ಲಾಭಪ್ರಾಪ್ತಿ ತೆರಿಗೆ) ವಿಧಿಸಿ ದೇಶದ ಖಜಾನೆಯನ್ನು ತುಂಬಿಸಿಕೊಳ್ಳಲು ಅವಕಾಶವಿತ್ತು. ಆದರೆ ಸರ್ಕಾರವು ಕಾರ್ಪೊರೇಟ್‌ಗಳಿಗೆ ತೆರಿಗೆ ವಿಧಿಸುವ ಬದಲು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಿಸಿ ಸಾಮಾನ್ಯ ಜನರ ಮೇಲೆ ಹೊರೆಯನ್ನು ಹೇರುತ್ತಿದೆ. ಮುಖ್ಯವಾಗಿ, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (RIL) ವಿಶೇಷ ಆರ್ಥಿಕ ವಲಯದಿಂದ ರಫ್ತು ಮಾಡುವ ಡೀಸೆಲ್ ಮತ್ತು ವಿಮಾನ ಇಂಧನದ (ATF) ಮೇಲಿನ ವಿಂಡ್‌ಫಾಲ್ (ಅನಿರೀಕ್ಷಿತ ಲಾಭಪ್ರಾಪ್ತಿ) ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ರಿಲಯನ್ಸ್ ನ ಶೇ.55ರಷ್ಟು ಸಂಸ್ಕರಣಾ ಉತ್ಪಾದನೆಗೆ ಈ ವಿನಾಯಿತಿ ಸಿಕ್ಕಿದ್ದರಿಂದ, ಸಂಸ್ಥೆಗೆ ಅಪಾರ ತೆರಿಗೆ ವಿನಾಯಿತಿ ದೊರೆತಂತಾಯಿತು. ಇದರಿಂದ, ಭಾರತ ಸರ್ಕಾರಕ್ಕೆ ವಾರ್ಷಿಕ ರೂ. 1.5 ಲಕ್ಷ ಕೋಟಿ ನೇರ ಆದಾಯ ನಷ್ಟವಾಗುತ್ತಿದೆ.

ಆದಾಯ ಖೋತಾ

ಕಳೆದ 10 ಹಣಕಾಸು ವರ್ಷಗಳಲ್ಲಿ (FY 2014-15 ರಿಂದ FY 2024-25) ಭಾರತ ಸರ್ಕಾರವು ಬೃಹತ್ ಕಾರ್ಪೊರೇಟ್‌ಗಳಿಗೆ ನೀಡಿದ ಸವಲತ್ತುಗಳಿಂದಾಗಿ ಸುಮಾರು ರೂ. 9.3 ಲಕ್ಷ ಕೋಟಿ (111 ಬಿಲಿಯನ್ ಡಾಲರ್) ಕಾರ್ಪೊರೇಟ್ ತೆರಿಗೆ ಆದಾಯವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್(CHRI) ಅಧ್ಯಯನದ ಪ್ರಕಾರ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ದಾನಿಗಳು ಪಡೆದುಕೊಂಡ ತೆರಿಗೆ ವಿನಾಯಿತಿಗಳಿಂದಾಗಿ ಸರ್ಕಾರಿ ಖಜಾನೆಗೆ ರೂ. 11,812.98 ಕೋಟಿ ಆದಾಯ ಖೋತಾ ಆಗಿದೆ.

ಇದು ಸಶಕ್ತ ಆರ್ಥಿಕತೆಯ ಸಂಕೇತವೇ?

2025-26 ಹಣಕಾಸು ವರ್ಷಕ್ಕೆ ಭಾರತ ಸರ್ಕಾರದ ವಿತ್ತೀಯ ಕೊರತೆಯ(Fiscal Deficit) ಗುರಿ GDPಯ ಶೇ. 4.4 ರಷ್ಟಿದ್ದು, ಇದು ಅಂದಾಜು ರೂ. 15.58 ಲಕ್ಷ ಕೋಟಿ ಭಾರಿ ಸಾಲಕ್ಕೆ ಸಮಾನವಾಗಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿದ ಅಪಾರ ತೆರಿಗೆ ವಿನಾಯಿತಿ, ಸಾಲ ಮನ್ನಾ, ಭ್ರಷ್ಟಾಚಾರ ಮತ್ತು ಉದ್ಯಮಿಗಳ ಲೂಟಿಯಿಂದ ಉಂಟಾದ ಈ ಬೃಹತ್ ಆರ್ಥಿಕ ಕೊರತೆಯನ್ನು ಮುಚ್ಚಿಕೊಳ್ಳಲು ಸರ್ಕಾರವೀಗ ವಿಶ್ವಬ್ಯಾಂಕ್ ಮತ್ತು ADB ಯಿಂದ ಮತ್ತೆ ಸಾಲ ಪಡೆಯಲು ಸರತಿಯಲ್ಲಿ ನಿಂತಿದೆ. ಇದು ಸರ್ಕಾರವು ಪ್ರಚಾರ ಮಾಡುತ್ತಿರುವ ‘ಸಶಕ್ತ ಮತ್ತು ಚೇತೋಹಾರಿ ಆರ್ಥಿಕತೆ’ಯ ಹಿಂದಿರುವ ನೈಜ ಹಾಗೂ ಕರಾಳ ಸತ್ಯವಾಗಿದೆ.