ತಾಪಮಾನ ಏರಿಕೆಗೂ ಸಂಪತ್ತಿನ ಅಸಮಾನತೆಯ ಏರಿಕೆಗೂ ಎತ್ತಣವೆತ್ತಣ ಸಂಬಂಧ? ಸುಮಾರು 97 ದೇಶಗಳಲ್ಲಿ 1,000ಕ್ಕೂ ಹೆಚ್ಚು ಪ್ರದೇಶಗಳನ್ನು ಒಳಗೊಂಡು ನಡೆದ ಹೊಸ ಸಂಶೋಧನೆಯ ಪ್ರಕಾರ, ತಾಪಮಾನದಲ್ಲಿ 1°C ಏರಿಕೆಯಾದರೆ ಪ್ರಾದೇಶಿಕ ಸಂಪತ್ತಿನ ಅಸಮಾನತೆಯಲ್ಲಿ, ಗಿನಿ ಗುಣಾಂಕದ (Gini Coefficient) ಪ್ರಕಾರ ಸುಮಾರು 0.54 ಅಂಕಗಳಷ್ಟು ಹೆಚ್ಚಳವಾಗುತ್ತದೆ. ಇದೇನಿದು? ಇದು ಹೇಗೆ ಸಾಧ್ಯ?
ಗಿನಿ ಗುಣಾಂಕವು ಆರ್ಥಿಕ ಅಸಮಾನತೆಯನ್ನು ಅಳೆಯುವ ಸಾಂಖ್ಯಿಕ ಮಾನದಂಡ. ಜನಸಂಖ್ಯೆಯೊಳಗೆ ಆದಾಯ ಅಥವಾ ಸಂಪತ್ತು ಹೇಗೆ ಹಂಚಿಕೆಯಾಗಿದೆ ಎಂಬುದನ್ನು ಇದು 0 ಯಿಂದ 1 ರವರೆಗೆ (ಅಥವಾ ಶೇ.0 ಯಿಂದ ಶೇ.100 ರವರೆಗೆ) ಅಳೆಯುತ್ತದೆ. 0 ಅಂಕ ಎಂದರೆ ಸಂಪೂರ್ಣ ಸಮಾನತೆ - ಎಲ್ಲರೂ ಒಂದೇ ಪ್ರಮಾಣದ ಆದಾಯ ಹೊಂದಿರುವ ಸ್ಥಿತಿ. 1 ಅಂಕ ಎಂದರೆ ಸಂಪೂರ್ಣ ಅಸಮಾನತೆ - ಒಬ್ಬ ವ್ಯಕ್ತಿಯಲ್ಲೇ ಸಂಪೂರ್ಣ ಆದಾಯ ಕೇಂದ್ರೀಕೃತವಾಗಿರುವ ಸ್ಥಿತಿ. 0.54 ಎಂಬುದು ಸಣ್ಣ ಸಂಖ್ಯೆಯಂತೆ ಕಾಣಬಹುದು. ಆದರೆ ಅದು ಅಷ್ಟು ಸಣ್ಣದಲ್ಲ. ಪ್ರತಿವರ್ಷ ಈ ಸಣ್ಣ ಬದಲಾವಣೆ ಕೂಡಿಕೊಂಡು ಹೆಚ್ಚಾಗುತ್ತದೆ; ಬಡವರು ಹಾಗೂ ದುಡಿದು ತಿನ್ನುವವರ ಮೇಲೆ ಅದು ಗಂಭೀರ ಪರಿಣಾಮ ಬೀರುತ್ತದೆ.
ತೀವ್ರ ಉಷ್ಣತೆಯು ಬರದಿಂದ ಉಂಟಾಗುವ ಬೆಳೆ ನಾಶ ಮತ್ತು ಪಶುಗಳ ಸಾವಿನಂತಹ ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ; ಕಾಡುಗಳು ಕಾಡ್ಗಿಚ್ಚಿನಿಂದ ಹೆಚ್ಚು ಅಸುರಕ್ಷಿತವಾಗುತ್ತವೆ; ಕಾರ್ಮಿಕರ ಕೆಲಸ ಮಾಡುವ ಸಾಮರ್ಥ್ಯ ಕುಸಿಯುತ್ತದೆ; ಬೆವರಿನ ಉತ್ಪತ್ತಿ ಮತ್ತು ಹಾರ್ಮೋನ್‌ಗಳಲ್ಲಿ ಉಂಟಾಗುವ ಬದಲಾವಣೆಗಳಿಂದಾಗಿ ಮಹಿಳೆಯರು ದೈಹಿಕವಾಗಿ ಅಪಾಯಗಳನ್ನು ಎದುರಿಸುತ್ತಾರೆ. ಹೆಚ್ಚಿನ ಉಷ್ಣತೆಯಿಂದ ಅವಧಿಗೂ ಮುನ್ನ ಹೆರಿಗೆಗಳು ಮತ್ತು ಕಡಿಮೆ ತೂಕದ ಶಿಶುಗಳ ಜನನ ಹೆಚ್ಚಾಗುತ್ತದೆ. ಆರೋಗ್ಯ ವೆಚ್ಚಗಳು ಹೆಚ್ಚಾಗುತ್ತವೆ; ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತದೆ ಮತ್ತು ಮಕ್ಕಳ ಶಿಕ್ಷಣವೂ ಅಸ್ತವ್ಯಸ್ತಗೊಳ್ಳುತ್ತದೆ. ತೀವ್ರ ಬಿಸಿಲಿಗೆ ಮತ್ತೆ ಮತ್ತೆ ತುತ್ತಾಗುವುದರಿಂದ ಕುಟುಂಬಗಳು ಪದೇಪದೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತವೆ. ಬಿಕ್ಕಟ್ಟಿನಿಂದ ತಕ್ಷಣ ಬದುಕುಳಿಯಲು ತಮ್ಮ ಉಳಿತಾಯ ಮತ್ತು ಆಸ್ತಿಗಳನ್ನು ಮಾರಬೇಕಾಗುತ್ತದೆ. ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಬೇಕಾಗುತ್ತದೆ ಅಥವಾ ಮಕ್ಕಳನ್ನು ಶಾಲೆಯಿಂದ ಬಿಡಿಸಬೇಕಾಗುತ್ತದೆ. ಇಂತಹ ನಿರ್ಧಾರಗಳಿಂದ ತಾತ್ಕಾಲಿಕ ಶಮನ ದೊರೆಯಬಹುದು. ಆದರೆ ದೀರ್ಘಾವಧಿಯಲ್ಲಿ ಆದಾಯಗಳಿಸುವ ಸಾಮರ್ಥ್ಯ ಮತ್ತು ಆರ್ಥಿಕ ಸ್ಥಿರತೆ ಶಾಶ್ವತವಾಗಿ ದುರ್ಬಲಗೊಳ್ಳುತ್ತವೆ.
ಯಾರು ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ? ಕೇವಲ ಉಷ್ಣತೆಯ ಮಟ್ಟವೇ ಇದನ್ನು ನಿರ್ಧರಿಸುವುದಿಲ್ಲ; ಅದರಿಂದ ಚೇತರಿಸಿಕೊಳ್ಳುವ ಸಾಮರ್ಥ್ಯವೇ ಮುಖ್ಯವಾದ ಅಂಶವಾಗಿದೆ. ಉತ್ತಮ ಸಂಪನ್ಮೂಲಗಳು ಹಾಗೂ ಮೂಲಸೌಕರ್ಯ, ವಿಮಾ ರಕ್ಷಣೆ ಮತ್ತು ಸುಲಭ ಸಾಲ ಸೌಲಭ್ಯ ಹೊಂದಿರುವ ಪ್ರದೇಶಗಳು, ಆಘಾತದ ನಂತರ ಪುನರ್ನಿರ್ಮಾಣ ಮಾಡಿಕೊಳ್ಳಬಲ್ಲವು. ಆದರೆ ಸಾಮಾನ್ಯ ಕಾರ್ಮಿಕರ ಮೇಲೆ ಅವಲಂಬಿತವಾಗಿರುವ ಮತ್ತು ದುರ್ಬಲ ಸಾರ್ವಜನಿಕ ವ್ಯವಸ್ಥೆಗಳನ್ನು ಹೊಂದಿರುವ ಬಡ ಪ್ರದೇಶಗಳು ತಮ್ಮಲ್ಲಿರುವ ಅಲ್ಪಸ್ವಲ್ಪ ಸಂಪನ್ಮೂಲಗಳನ್ನೂ ಮತ್ತೆ ಮತ್ತೆ ಕಳೆದುಕೊಳ್ಳುತ್ತವೆ. ಕಾಲಕ್ರಮೇಣ, ಈ ಪರಿಸ್ಥಿತಿಯಿಂದ ಪರಿಸ್ಥಿತಿಗೆ ಹೊಂದಿಕೊಂಡು ಬದುಕುಳಿಯಬಲ್ಲ ಪ್ರದೇಶಗಳ ಮತ್ತು ನಿರಂತರ ನಷ್ಟದ ಚಕ್ರದಲ್ಲಿ ಸಿಲುಕಿರುವ ಪ್ರದೇಶಗಳ ನಡುವಿನ ಅಂತರ ಹೆಚ್ಚಾಗುತ್ತದೆ.
ಈ ಹಾನಿಯ ಪರಿಣಾಮ ಎಲ್ಲರ ಮೇಲೂ ಸಮಾನವಾಗಿ ಬೀಳುವುದಿಲ್ಲ. ಕಡಿಮೆ ಆದಾಯ ಮತ್ತು ಹೆಚ್ಚಿನ ತಾಪಮಾನ ಹೊಂದಿರುವ ಪ್ರದೇಶಗಳಲ್ಲಿ ತಾಪಮಾನದಲ್ಲಿ ಕೇವಲ 1°C ಏರಿಕೆಯಾದರೂ, ಅಸಮಾನತೆಯಲ್ಲಿ 0.3 ಅಂಕಗಳಷ್ಟು ಹೆಚ್ಚಳವಾಗುತ್ತದೆ. ಏಕೆಂದರೆ ಶ್ರೀಮಂತ ಪ್ರದೇಶಗಳು ತಂಪುಗೊಳಿಸುವ (ಶೀತಲೀಕರಣ) ವ್ಯವಸ್ಥೆಗಳನ್ನು, ಸದೃಢ ಆರೋಗ್ಯ ಸೇವೆಗಳನ್ನು ಮತ್ತು ಸಾಮಾಜಿಕ ರಕ್ಷಣೆಯನ್ನು ಪಡೆಯಬಲ್ಲವು. ಬಡ ಪ್ರದೇಶಗಳು ಮಾತ್ರ ಹೆಚ್ಚುತ್ತಿರುವ ಉಷ್ಣತೆಯನ್ನು ಬಹಳ ದುರ್ಬಲ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲೇ ಎದುರಿಸಬೇಕಾಗುತ್ತದೆ. ಇಂದಿನ ಬಂಡವಾಳಶಾಹಿ ಜಾಗತೀಕರಣದ ವ್ಯವಸ್ಥೆಯಲ್ಲಿ, ಕೃಷಿ ಅಥವಾ ಉತ್ಪಾದನಾ ಕೇಂದ್ರಗಳಲ್ಲೂ ಹೆಚ್ಚಿದ ಉಷ್ಣತೆಯೂ ತೀವ್ರ ಪರಿಣಾಮ ಬೀರುತ್ತದೆ. ಇದು ಆಹಾರದ ಬೆಲೆಗಳನ್ನು ಹೆಚ್ಚಿಸಬಹುದು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಬದಲಾಯಿಸಬಹುದು. ಈ ಪರಿಸ್ಥಿತಿ ಕೇವಲ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗುವುದಿಲ್ಲ. ಪೂರೈಕೆ ಸರಪಳಿ ಹಾಗೂ ವ್ಯಾಪಾರ ಜಾಲಗಳ ಮೂಲಕ ದೂರದ ಪ್ರದೇಶಗಳಿಗೂ ಹರಡುತ್ತದೆ. ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಉಷ್ಣತೆಯು ಕೇವಲ ಬೆಳೆಗಳಿಗೆ ಹಾನಿ ಮಾಡುವುದು ಅಥವಾ ಒಟ್ಟು ದೇಶೀಯ ಉತ್ಪನ್ನವನ್ನು ಕಡಿಮೆ ಮಾಡುವುದಷ್ಟೇ ಅಲ್ಲ. ಅದು ಮಾನವ ಸಾಮರ್ಥ್ಯವನ್ನೇ ಕುಗ್ಗಿಸುತ್ತದೆ. ವಿಶೇಷವಾಗಿ ಹೆಚ್ಚು ಉಷ್ಣತೆಗೆ ಒಳಪಡುವ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ದೈಹಿಕ ಸಹನಶಕ್ತಿ, ಚಿಂತನಾ ಸಾಮರ್ಥ್ಯ, ಆರೋಗ್ಯ ಮತ್ತು ಶೈಕ್ಷಣಿಕ ಫಲಿತಾಂಶಗಳು ಕುಂಠಿತಗೊಳ್ಳುತ್ತವೆ.
ಭಾರತದ ವಿವಿಧ ಪ್ರದೇಶಗಳಲ್ಲಿ ಮೂಲಸೌಕರ್ಯ, ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಆರ್ಥಿಕ ಅಸಮಾನತೆಗಳು ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಪರಿಸರ ಸಂರಕ್ಷಣೆ ಮತ್ತು ತಾಪಮಾನ ನಿಯಂತ್ರಣಕ್ಕೆ ಬೇಕಾದ ಆರ್ಥಿಕ ಪ್ರೋತ್ಸಾಹವನ್ನು ನೀಡಬೇಕು. ಹವಾಮಾನ ಕುರಿತ ವಿಚಾರವನ್ನು ಕೇವಲ ತಾಂತ್ರಿಕ ಅಥವಾ ಪರಿಸರ ಸಂಬಂಧಿತ ವಿಷಯವೆಂದು ಪರಿಗಣಿಸಬಾರದು. ಅದನ್ನು ಸಂಪನ್ಮೂಲಗಳ ಹಂಚಿಕೆ ಕುರಿತ ನೀತಿಯಾಗಿ ಅರ್ಥಮಾಡಿಕೊಳ್ಳಬೇಕು. ಸಂಶೋಧಕರ ಮಾತಿನಲ್ಲಿ ಹೇಳುವುದಾದರೆ, ಇನ್ನು ಮುಂದೆ ಕೇವಲ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸುವ ಮತ್ತು ಕಡಿಮೆ ಪ್ರಮಾಣದಲ್ಲಿ ಹೊರಸೂಸುವ ಸಮಾಜ ಎಂಬುವ ಮಾನದಂಡದಿಂದ ನೋಡಲಾಗುವುದಿಲ್ಲ; ಬದಲಾಗಿ ಶಾಶ್ವತ ಅಸಮಾನತೆಯನ್ನು ತಡೆಯುವ ಮತ್ತು ಅದನ್ನು ಮುಂದುವರಿಯಲು ಬಿಡುವ ಸಮಾಜ, ಎಂಬ ಮಾನದಂಡದಿಂದ ನೋಡಬೇಕಾಗುತ್ತದೆ.
ಮೇ ತಿಂಗಳ 40 ಡಿಗ್ರಿ ಸೆಲ್ಸಿಯಸ್ ಉರಿಯುವ ಮಧ್ಯಾಹ್ನದಲ್ಲಿ, ಬಳ್ಳಾರಿಯಲ್ಲೋ, ಕಲಬುರ್ಗಿಯಲ್ಲೋ ದುಡಿಯುವ ಕಾರ್ಮಿಕ, ಪದೇ ಪದೇ ನೀರು ಕುಡಿಯಲು, ದಣಿವಾರಿಸಿಕೊಳ್ಳಲು ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ಕೆಲಸದ ಅವಧಿಯನ್ನೇ ಕೆಲವೊಮ್ಮೆ ಬದಲಾಯಿಸಲಾಗುತ್ತದೆ. ಅಂತಹ ಕಾರ್ಮಿಕ ಮನೆಗೆ ಮರಳಿದ ಮೇಲೆಯೂ ಸ್ನಾಯು ಸೆಳೆತ, ದಣಿವಿನಿಂದ ಪರಿತಪಿಸಬೇಕಾಗುತ್ತದೆ. ಒಟ್ಟಾರೆಯಾಗಿ, ಕಾರ್ಮಿಕರ ಉತ್ಪಾದನಾ ಸಾಮರ್ಥ್ಯ ಕುಂಠಿತವಾಗುತ್ತದೆ.
ಭಾರತದಲ್ಲಿ ಸುಮಾರು 22 ನಗರಗಳು 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಬಿಸಿಗಾಳಿಯ ಅಪಾಯದಲ್ಲಿವೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ತಾಪಮಾನದ ಮಟ್ಟ ಹೆಚ್ಚುತ್ತಲೇ ಹೋಗುತ್ತದೆ. ಮೊಬೈಲ್‌ನಲ್ಲಿ ಕಾಣಿಸುವ 45 ಡಿಗ್ರಿ ತಾಪಮಾನವು ವಾಸ್ತವವಾಗಿ ಆ ಪ್ರದೇಶದ ಸರಾಸರಿ ತಾಪಮಾನವನ್ನು ಸೂಚಿಸುತ್ತದೆ. ಆದರೆ ಕಟ್ಟಡ ನಿರ್ಮಾಣ ಸ್ಥಳಗಳು, ಯಂತ್ರಗಳು ಮತ್ತು ಕಾಂಕ್ರೀಟ್‌ಗಳ ಸಮೀಪ ತಾಪಮಾನವು 50-55 ಡಿಗ್ರಿಗಳವರೆಗೆ ಏರಬಹುದು. ಇದು ಅಂಥ ಪ್ರದೇಶಗಳಲ್ಲಿ ಕೆಲಸ ಮಾಡುವ ಜನರ ಆರೋಗ್ಯದ ಮೇಲೆ ಖಂಡಿತವಾಗಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೇಲೆ ತಿಳಿಸಿದಂತೆ, ಭಾರತದಲ್ಲಿನ ಮಹಿಳೆಯರು ದೈಹಿಕ, ಉದ್ಯೋಗ ಸಂಬಂಧಿತ ಮತ್ತು ಸಾಮಾಜಿಕ-ಆರ್ಥಿಕ ಅಂಶಗಳ ಕಾರಣದಿಂದ ಉಷ್ಣತೆಯನ್ನು ವಿಭಿನ್ನವಾಗಿ ಅನುಭವಿಸುತ್ತಾರೆ. ದೈಹಿಕವಾಗಿ ಮಹಿಳೆಯರ ದೇಹವು ಉಷ್ಣತೆಯ ಒತ್ತಡಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಹಾರ್ಮೋನ್‌ಗಳ ಏರಿಳಿತ, ದೇಹದ ರಚನೆ ಮತ್ತು ಮೆಟಬಾಲಿಕ್ ಕ್ರಿಯೆಯ ವೇಗ, ಇವೆಲ್ಲವೂ ದೇಹದ ತಾಪಮಾನ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಹಿಳೆಯರು ದೇಹದಲ್ಲಿ ನೀರಿನ ಕೊರತೆ, ದಣಿವು ಮತ್ತು ಉಷ್ಣತೆಯಿಂದ ಅನಾರೋಗ್ಯಕ್ಕೆ ಹೆಚ್ಚು ಒಳಗಾಗಬಹುದು. ಆದ್ದರಿಂದ, ಹವಾಮಾನದ ವೈಪರೀತ್ಯದ ದೃಷ್ಟಿಯಿಂದ ಭಾರತದ ಆಡಳಿತವು ಮಹಿಳೆಯರನ್ನು “ಅಗೋಚರ ವರ್ಗ”ವೆಂದು ಪರಿಗಣಿಸಬಾರದು.
ಭಾರತದ ಹವಾಮಾನ ಪರಿಸ್ಥಿತಿಯು ಕೇವಲ ತಾತ್ಕಾಲಿಕ ಬಿಸಿಗಾಳಿಗೆ ಅಥವಾ ಆರೋಗ್ಯ ಸಲಹೆಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಹವಾಮಾನ ಕಾರ್ಯತಂತ್ರಗಳಲ್ಲಿ, ನೀತಿ ನಿರೂಪಣೆಯಲ್ಲಿ, ಆರ್ಥಿಕತೆಯು ಸಹ ಒಳಗೊಳ್ಳಬೇಕು. ಉಷ್ಣತೆಯನ್ನು ತಡೆದುಕೊಳ್ಳಬಲ್ಲ ಮೂಲಸೌಕರ್ಯ, ಕೆಲಸದ ಸ್ಥಳವನ್ನು ತಂಪಾಗಿಸುವ ವ್ಯವಸ್ಥೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ಬದಲಾವಣೆಗಳನ್ನು ಕೈಗೊಳ್ಳದಿದ್ದರೆ, ವಾರ್ಷಿಕ ಬೆಳವಣಿಗೆ ದರ 0.5-1 ಶೇಕಡಾ ಅಂಕಗಳಷ್ಟು ಕಡಿಮೆಯಾಗಬಹುದು.
ಭಾರತಕ್ಕೆ ಹವಾಮಾನ ಜಾಗೃತಿಯುಳ್ಳ ನಗರ ಯೋಜನೆ, ಬಲಿಷ್ಠವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಪರಿಣಾಮಕಾರಿ ಸಾಮಾಜಿಕ ಭದ್ರತೆಯ ಯೋಜನೆಗಳ ಅಗತ್ಯವಿದೆ ಮತ್ತು ಸಮುದಾಯ ಮಟ್ಟದಲ್ಲಿ ಪ್ರತಿಕೂಲ ಹವಾಮಾನಗಳ ದುಷ್ಪರಿಣಾಮಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸಲು, ದೀರ್ಘಕಾಲೀನ ಹೂಡಿಕೆ ಮಾಡಬೇಕಾಗಿದೆ.
ಆದರೆ ಜನರ ಆರೋಗ್ಯ ಮತ್ತು ಜೀವದ ಬಗ್ಗೆ ಕನಿಷ್ಠ ಕಾಳಜಿ ಹೊಂದಿರುವ ಆಡಳಿತ ವ್ಯವಸ್ಥೆಯು, ಪ್ರತಿಕೂಲ ಹವಾಮಾನ, ಅನಿಯಮಿತ ಮಳೆ, ಉರಿಯುವ ಬಿಸಿಲು ಮತ್ತು ಪ್ರಕೃತಿಯ ಬದಲಾವಣೆಗಳಿಗೆ ಕಾರಣವಾಗುವ ನೀತಿಗಳನ್ನು ಮುಂದುವರಿಸುತ್ತಲೇ ಇದೆ. ಇವು ದುಡಿಯುವ ಭಾರತೀಯರ ಜೀವನವನ್ನು ಮತ್ತಷ್ಟು ದುಃಖಕರವಾಗಿಸುತ್ತವೆ. ಬೆರಳೆಣಿಕೆಯ ಶ್ರೀಮಂತರು ಅಪಾರ ಸಂಪತ್ತನ್ನು ಶೇಖರಣೆ ಮಾಡುತ್ತಿದ್ದರೆ, ಬಡತನದಲ್ಲಿ ನರಳುತ್ತಿರುವ ಕೋಟ್ಯಂತರ ಜನರನ್ನು ಸಂಪೂರ್ಣ ವಿನಾಶದ ಅಂಚಿನತ್ತ ತಳ್ಳಲಾಗುತ್ತಿದೆ.
