ಹಿಂದೆ ವೆನೆಜುವೆಲಾದಲ್ಲಿ ನಡೆಸಿದ ರಹಸ್ಯ ಕಮಾಂಡೋ ಕಾರ್ಯಾಚರಣೆಯ ಹಿಂದೆ, ಅಧ್ಯಕ್ಷ ಟ್ರಂಪ್‌ಗೆ, ಅಲ್ಲಿನ ಗುಣಮಟ್ಟದ ತೈಲವನ್ನು ಲೂಟಿ ಮಾಡುವ ದುರಾಸೆಯಿತ್ತು. ಅದೇ ರೀತಿ, ಇರಾಕ್ ಮೇಲಿನ ಆಕ್ರಮಣ, ಲಿಬಿಯಾದಲ್ಲಿನ ಆಡಳಿತ ಬದಲಾವಣೆಗಾಗಿ ದೇಶದ ಅಧ್ಯಕ್ಷರ ಹತ್ಯೆ ಮತ್ತು ಸುಡಾನ್‌ನಲ್ಲಿ ಮಧ್ಯಪ್ರವೇಶಿಸಿ ಅಲ್ಲಿ ನಿರಂತರ ಅಂತರ್ಯುದ್ಧಕ್ಕೆ ನೀಡಿರುವ ಕುಮ್ಮಕ್ಕು ಇವುಗಳ ಹಿಂದಿನ ಮುಖ್ಯ ಉದ್ದೇಶ ಆಯಾ ದೇಶಗಳ ಅಪಾರ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವುದೇ ಆಗಿತ್ತು. ವಾಸ್ತವದಲ್ಲಿ ಅಮೆರಿಕ ತೈಲ ಸಂಪನ್ಮೂಲದಲ್ಲಿ ಸ್ವಾವಲಂಬಿಯಾಗಿದ್ದರೂ, ಇರಾನ್ ಮೇಲೆ ದಾಳಿ ನಡೆಸುತ್ತಿರುವುದರ ಹಿಂದೆ, ತೈಲ ಹೊರತೆಗೆಯುವಿಕೆಯಿಂದ ಹಿಡಿದು ಅದರ ವಿತರಣೆಯವರೆಗೆ, ಒಟ್ಟಾರೆ ಜಾಗತಿಕ ತೈಲ ವ್ಯಾಪಾರದ ಮೇಲೆ ತನ್ನ ಬಹುರಾಷ್ಟ್ರೀಯ ಕಂಪನಿಗಳ ಸಂಪೂರ್ಣ ಏಕಸ್ವಾಮ್ಯವನ್ನು ಸ್ಥಾಪಿಸುವ ಆರ್ಥಿಕ ಹಿತಾಸಕ್ತಿಯನ್ನು ಹೊಂದಿದೆ.
ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟು
ಪ್ರಸ್ತುತ ಯುದ್ಧದಲ್ಲಿ ಅಮೆರಿಕ-ಇಸ್ರೇಲ್ ಒಕ್ಕೂಟವು ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ಘಟಕಗಳನ್ನು ಗುರಿಯಾಗಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ತೈಲ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಇಸ್ರೇಲ್ ಇರಾನ್‌ನ ‘ಸೌತ್ ಪಾರ್ಸ್’ (South Pars) ಅನಿಲ ಕ್ಷೇತ್ರದ ಮೇಲೆ ದಾಳಿ ಮಾಡಿದಾಗ, ಇರಾನ್ ಜಾಗತಿಕ ನೈಸರ್ಗಿಕ ಅನಿಲದ ಶೇ.20 ರಷ್ಟನ್ನು ರಫ್ತು ಮಾಡುವ ಕತಾರ್‌ನ ‘ರಾಸ್ ಲಫ್ಫಾನ್’ (Ras Laffan) ಘಟಕದ ಮೇಲೆ ದಾಳಿ ನಡೆಸಿತು. ತದನಂತರ ಅಮೆರಿಕವು ಇರಾನ್‌ನ ಒಟ್ಟು ತೈಲ ರಫ್ತಿನ ಶೇ. 90-95 ರಷ್ಟನ್ನು ನಿರ್ವಹಿಸುವ ‘ಖಾರ್ಗ್ ದ್ವೀಪ’ದ (Kharg Island) ಮೇಲೆ ಬಾಂಬ್ ದಾಳಿ ನಡೆಸಿತು. ಇರಾನ್ ನ ಶೇಕಡ 80-90 ರಷ್ಟು ತೈಲ ನಿಕ್ಷೇಪಗಳು, ಭಾರಿ ಪ್ರಮಾಣದ ಚಿನ್ನ ಮತ್ತು ಇತರ ಖನಿಜ ಸಂಪನ್ಮೂಲಗಳು ಈ ದ್ವೀಪದಲ್ಲಿವೆ. ಈ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಇರಾನ್ ಜಾಗತಿಕವಾಗಿ ಅತ್ಯಂತ ಪ್ರಮುಖವಾದ ‘ಹೊರ್ಮುಜ್ ಜಲಸಂಧಿ’ಯ (Strait of Hormuz) ಮೂಲಕ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದೆ. ವಿಶ್ವದ ಒಟ್ಟು ಕಡಲ ತೈಲ ವ್ಯಾಪಾರದ ಶೇ. 25 ರಷ್ಟು ಮತ್ತು ಜಾಗತಿಕ ದೈನಂದಿನ ತೈಲ ಬಳಕೆಯ ಶೇ. 20 ರಷ್ಟು (ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು) ತೈಲ ಸಾಗಣೆ ಈ ಮಾರ್ಗದ ಮೂಲಕವೇ ನಡೆಯುತ್ತದೆ. ಇರಾನ್ ನ ಈ ನಿರ್ಧಾರದಿಂದಾಗಿ ತೈಲ ಸಾಗಣೆ ಸ್ಥಗಿತಗೊಂಡು ಜಾಗತಿಕವಾಗಿ ತೈಲಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಕೇವಲ ಇಂಧನ ಮಾತ್ರವಲ್ಲದೆ ಜಾಗತಿಕವಾಗಿ ರಸಗೊಬ್ಬರ, ಹೀಲಿಯಂ ನಂತಹ ಅಗತ್ಯ ವಸ್ತುಗಳ ಪೂರೈಕೆಗೂ ಇದು ಹೊಡೆತ ಕೊಡುತ್ತಿದೆ. ಒಟ್ಟಾರೆಯಾಗಿ ಈ ಸಂಘರ್ಷ ಈಗ ತೈಲ ಕ್ಷೇತ್ರದೊಂದಿಗೆ ಇತರ ಕ್ಷೇತ್ರಗಳನ್ನೂ ವ್ಯಾಪಿಸಿಕೊಂಡಿದೆ. ಜಾಗತಿಕ ತೈಲ ಬೆಲೆಗಳನ್ನು ಹೆಚ್ಚಿಸುವ ಮೂಲಕ ಇರಾನ್ ತನ್ನ ವಿರುದ್ಧದ ಈ ಯುದ್ಧವು ಕೇವಲ ತನಗೆ ಮಾತ್ರವಲ್ಲದೆ, ಇಡೀ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಿನ ಯುದ್ಧವಾಗಿದೆ ಎಂಬುದನ್ನು ಸಾಬೀತಪಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಇರಾನ್ ಈ ಜಲಮಾರ್ಗದಲ್ಲಿ ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಶತ್ರು ದೇಶಗಳ ಹಡಗುಗಳಿಗೆ ಸಂಪೂರ್ಣ ನಿಷೇಧ, ತಟಸ್ಥ ದೇಶಗಳಿಗೆ ಸುಂಕದ ಆಧಾರದ ಮೇಲೆ ಪ್ರವೇಶ ಮತ್ತು ಸ್ನೇಹಿ ದೇಶಗಳಿಗೆ ಉಚಿತ ಸಂಚಾರ. ಅಮೆರಿಕ ಇದನ್ನು ಅಂತರರಾಷ್ಟ್ರೀಯ ಜಲಮಾರ್ಗ ಎಂದು ವಾದಿಸಿದರೂ, ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸೂಕ್ತವಾದ ಆಳವಾದ ಮುಖ್ಯ ಮಾರ್ಗವು ಇರಾನ್‌ನ ನಿಯಂತ್ರಣದಲ್ಲೇ ಇದೆ. ಇದನ್ನು ಮುರಿಯಲು ಅಮೆರಿಕ ಇರಾನ್‌ನ ಐದು ಪ್ರಮುಖ ಬಂದರುಗಳನ್ನು ನೌಕಾಪಡೆಯ ಮೂಲಕ ನಿರ್ಬಂಧಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಜಲಸಂಧಿಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ.
ತೈಲ ಕೊರತೆಯ ವಿನಾಶಕಾರಿ ಆರ್ಥಿಕ ಪರಿಣಾಮಗಳು
ಈ ಬಿಕ್ಕಟ್ಟು ಜಾಗತಿಕ ಪೂರೈಕೆ ಸರಪಳಿಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ತೈಲ ಬೆಲೆ ಏರಿಕೆಯು ಆಹಾರ ಧಾನ್ಯಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದೆ. ಕೃಷಿಗೆ ಅತ್ಯಗತ್ಯವಾದ ರಸಗೊಬ್ಬರಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಕೃಷಿ ಉತ್ಪಾದನಾ ವೆಚ್ಚವೂ ದುಪ್ಪಟ್ಟಾಗಿದೆ. ಈ ತೀವ್ರ ಹಣದುಬ್ಬರದಿಂದಾಗಿ ಜನರ ಆದಾಯದ ಮೌಲ್ಯ ಕುಸಿದು, ಮಾರುಕಟ್ಟೆಯಲ್ಲಿ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ. ಇದು ಆರ್ಥಿಕ ಸ್ಥಗಿತಕ್ಕೆ ಕಾರಣವಾಗಿದ್ದು, ಜಗತ್ತು ಇಂದು ಹಣದುಬ್ಬರ ಮತ್ತು ಆರ್ಥಿಕ ಸ್ಥಗಿತತೆ ಒಟ್ಟಿಗೆ ಸಂಭವಿಸುವ ‘ಸ್ಟಾಗ್‌ಫ್ಲೇಷನ್’ (Stagflation) ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಪ್ರಪಂಚದಾದ್ಯಂತ ಅನೇಕ ದೇಶಗಳು ಕಲ್ಲಿದ್ದಲು ಬಳಕೆ ಹೆಚ್ಚಿಸುತ್ತಿವೆ. ಜೊತೆಗೆ ಹೋಟೆಲ್ ಹಾಗೂ ಸಣ್ಣ ಉದ್ಯಮಗಳು ಮುಚ್ಚುತ್ತಿವೆ ಅಥವಾ ಸೀಮಿತ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ. ಒಟ್ಟಾರೆಯಾಗಿ ಈ ಯುದ್ಧವು ಕೇವಲ ಪೆಟ್ರೋಲಿಯಂ ಬೆಲೆಯನ್ನು ಮಾತ್ರ ಹೆಚ್ಚಿಸಿಲ್ಲ, ಬದಲಿಗೆ ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಅತ್ಯಂತ ಭೀಕರ ಪರಿಣಾಮವನ್ನು ಬೀರಿದೆ.
ಪ್ರಸ್ತುತ 2026ರ ಬಿಕ್ಕಟ್ಟು 1973ರ ಬಿಕ್ಕಟ್ಟಿಗಿಂತ ರಚನಾತ್ಮಕವಾಗಿ ಭಿನ್ನವಾಗಿದೆ. ಅಂದು ಅರಬ್ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ(OAPEC)ಗಳ ಒಕ್ಕೂಟವೊಂದು ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದರಿಂದ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಯಿತು. ಆದರೆ ಇಂದಿನ ಬಿಕ್ಕಟ್ಟು ಕೇವಲ ಒಂದು ಪ್ರಮುಖ ಸಾರಿಗೆ ಮಾರ್ಗವನ್ನು ನಿಯಂತ್ರಿಸುತ್ತಿರುವ ಏಕೈಕ ರಾಷ್ಟ್ರದಿಂದ ಉಂಟಾಗಿದೆ. ಅಂದು ಕೇವಲ ಪಾಶ್ಚಿಮಾತ್ಯ ದೇಶಗಳು ತೊಂದರೆಗೆ ಸಿಲುಕಿದ್ದರೆ, ಇಂದು ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ಏಕೆಂದರೆ ಏಷ್ಯಾದ ದೇಶಗಳ ಒಟ್ಟು ತೈಲ ಆಮದಿನ ಶೇ. 80 ರಷ್ಟು ಭಾಗ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಹೀಗಾಗಿ ಈಗಾಗಲೇ ಮಾರ್ಚ್ ಕೊನೆಯ ವಾರದ ವರದಿಯಂತೆ ವಿಯೆಟ್ನಾಂ, ಪಾಕಿಸ್ತಾನ ಮತ್ತು ಇಂಡೋನೇಷ್ಯಾಗಳಲ್ಲಿ ಕೇವಲ 20 ದಿನಗಳಿಗಾಗುವಷ್ಟು ಮಾತ್ರ ತೈಲ ದಾಸ್ತಾನಿದೆ.
ಪೆಟ್ರೋಡಾಲರ್ ವ್ಯವಸ್ಥೆ ಮತ್ತು ಡಾಲರ್ ಮುಕ್ತ ವ್ಯಾಪಾರ
ಅಮೆರಿಕ ಪೂರ್ವ ಏಷ್ಯಾದ ತೈಲದ ಮೇಲೆ ಅವಲಂಬಿತವಾಗಿಲ್ಲದಿದ್ದರೂ ಇಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರ ನಿಜವಾದ ಉದ್ದೇಶ ‘ಪೆಟ್ರೋಡಾಲರ್’ ವ್ಯವಸ್ಥೆಯನ್ನು ರಕ್ಷಿಸುವುದಾಗಿದೆ. 1978ರಲ್ಲಿ ಅಮೆರಿಕ ಮತ್ತು ಗಲ್ಫ್ ದೇಶಗಳ ನಡುವೆ ನಡೆದ ಒಪ್ಪಂದದ ಪ್ರಕಾರ, ತೈಲ ಮಾರಾಟದ ವಹಿವಾಟನ್ನು ಕಡ್ಡಾಯವಾಗಿ ಡಾಲರ್‌ನಲ್ಲೇ ನಡೆಸಿ, ಆ ಹಣವನ್ನು ಅಮೆರಿಕದ ಖಜಾನೆಯಲ್ಲಿ ಮರುಹೂಡಿಕೆ ಮಾಡಬೇಕು. ಈ ವ್ಯವಸ್ಥೆಯು ಅಮೆರಿಕಾಗೆ ತನ್ನ ಪ್ರಸ್ತುತ 38 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲ ಮತ್ತು 1.84 ಟ್ರಿಲಿಯನ್ ಡಾಲರ್ ಬೃಹತ್ ಆರ್ಥಿಕ ಕೊರತೆಯನ್ನು ನಿಭಾಯಿಸಲು ಕಡಿಮೆ ವೆಚ್ಚದ ಬಂಡವಾಳವನ್ನು ಒದಗಿಸುತ್ತದೆ.
ಆದರೆ, ಪ್ರಸ್ತುತ ಬ್ರಿಕ್ಸ್ (BRICS) ಒಕ್ಕೂಟದ ದೇಶಗಳು ಅಮೆರಿಕನ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸ್ಥಳೀಯ ಕರೆನ್ಸಿಗಳಾದ ಚೀನಾದ ಯುವಾನ್, ರಷ್ಯಾದ ರೂಬಲ್ ಮತ್ತು ಭಾರತದ ರೂಪಾಯಿಗಳನ್ನು ತೈಲ ವ್ಯಾಪಾರಕ್ಕೆ ಬಳಸುತ್ತಿವೆ. ಈ ಬೆಳವಣಿಗೆಯು ಅಮೆರಿಕ ಸಾಮ್ರಾಜ್ಯವಾದದ ಹಿತಾಸಕ್ತಿಗೆ ಸ್ಪಷ್ಟವಾಗಿ ಹಾನಿಕಾರಕವಾಗಿದೆ. ಈ ಹಿಂದೆ ಡಾಲರ್ ಪ್ರಾಬಲ್ಯಕ್ಕೆ ಧಕ್ಕೆ ತರಲು ಯತ್ನಿಸಿದ ಇರಾಕ್‌ನ ಸದ್ದಾಂ ಹುಸೇನ್, ಲಿಬಿಯಾದ ಗಡಾಫಿ ಮತ್ತು ವೆನೆಜುವೆಲಾದ ಮಡುರೊ ಅವರು ಅಮೆರಿಕದ ಮಿಲಿಟರಿ ದಾಳಿ ಮತ್ತು ಕಠಿಣ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಯಿತು. ಪ್ರಸ್ತುತ ಇರಾನ್ ಒಂದು ಹೆಜ್ಜೆ ಮುಂದೆ ಹೋಗಿ, ಅಮೆರಿಕದ ನಿರ್ಬಂಧಗಳನ್ನು ಮೀರಿ ಚೀನಾದೊಂದಿಗೆ ‘ಯುವಾನ್’ ಕರೆನ್ಸಿಯಲ್ಲೇ ತೈಲ ವ್ಯಾಪಾರ ಮಾಡುತ್ತಿದೆ. 2026ರ ಆರಂಭದ ವೇಳೆಗೆ ಚೀನಾ, ಇರಾನ್‌ನ ಒಟ್ಟು ಸಮುದ್ರ ಮಾರ್ಗದ ತೈಲ ರಫ್ತಿನ ಶೇ. 80ಕ್ಕಿಂತ ಹೆಚ್ಚಿನ ಪಾಲು ಪೆಟ್ರೋಯುವಾನ್ ಮೂಲಕ ನಡೆಯುತ್ತಿದೆ. ಹಾಗಾಗಿಯೇ ಇರಾನ್ ಅನ್ನು ಅಧೀನಕ್ಕೆ ತೆಗೆದುಕೊಳ್ಳಲು ಅಮೆರಿಕದ ಸಾಮ್ರಾಜ್ಯಶಾಹಿಗಳು ಪ್ರಯತ್ನಿಸುತ್ತಿದ್ದಾರೆ. ಇರಾನ್ ಈಗ ಹೊರ್ಮುಜ್ ಜಲಸಂಧಿ ಮಾರ್ಗದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದರಿಂದ ಗಲ್ಫ್ ಪ್ರದೇಶದಲ್ಲಿ ಅಮೆರಿಕಾಗೆ ದೊಡ್ಡ ಆಯಕಟ್ಟಿನ ಹಿನ್ನಡೆಯಾಗಿದೆ. ಇದು ಅಮೆರಿಕಾದ್ದೇ ಪೆಟ್ರೋಡಾಲರ್ ಸಾಮ್ರಾಜ್ಯದ ಪತನಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಭಾರತದ ಮೇಲಿನ ಭೀಕರ ಪ್ರಭಾವ
ಭಾರತವು ಭೌಗೋಳಿಕವಾಗಿ ದೂರವಿದ್ದರೂ ಈ ಬಿಕ್ಕಟ್ಟಿನಿಂದ ಮುಕ್ತವಾಗಿಲ್ಲ. ಭಾರತ ತನ್ನ ಕಚ್ಚಾ ತೈಲ ಅಗತ್ಯತೆಯ ಶೇ. 90 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಇದರಲ್ಲಿ ಅರ್ಧದಷ್ಟು ಭಾಗ ಹೊರ್ಮುಜ್ ಜಲಸಂಧಿಯ ಮಾರ್ಗವಾಗಿಯೇ ಭಾರತವನ್ನು ತಲುಪುತ್ತದೆ. ಭಾರತದ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಆಮದಿನ ಅರ್ಧದಷ್ಟು ಭಾಗ ಕತಾರ್‌ನಿಂದ ಬರುತ್ತದೆ. ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದ್ದು, ಸುಮಾರು ಶೇ. 60 ರಷ್ಟು ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಗ್ರಾಮೀಣ ಭಾಗದಲ್ಲಿ ಜನರು ಮತ್ತೆ ಸೌದೆ, ಕಲ್ಲಿದ್ದಲು ಬಳಸುತ್ತಿರುವುದು ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ.
ಕೇಂದ್ರ ಸರ್ಕಾರವು ತೈಲ ಸರಬರಾಜಿನಲ್ಲಿ ಸುರಕ್ಷಿತ ಸ್ಥಾನದಲ್ಲಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಮಾರುಕಟ್ಟೆಯಲ್ಲಿ ಸಿಲಿಂಡರ್‌ಗಳು ದುಪ್ಪಟ್ಟು ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಯುದ್ಧ ಆರಂಭವಾದ ಕೇವಲ ಒಂದು ವಾರದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಈ ಹಿಂದೆ ರಷ್ಯಾ ಕೇವಲ 35 ಡಾಲರ್ ತೈಲ ಪೂರೈಸುತ್ತಿದ್ದಾಗಲೂ ಸರ್ಕಾರ ತೆರಿಗೆ ಇಳಿಸಿ ಜನರಿಗೆ ಲಾಭ ತಲುಪಿಸಲಿಲ್ಲ. ಬದಲಿಗೆ ತೈಲ ಕಂಪನಿಗಳಾದ IOC, BPCL ಮತ್ತು HPCL 2024-25ರಲ್ಲಿ ಭಾರಿ ನಿವ್ವಳ ಲಾಭ ಗಳಿಸಿದವು. ಸರ್ಕಾರ ಅವುಗಳ ‘ಕಲ್ಪಿತ ನಷ್ಟ’ದ ವಾದವನ್ನು ಮುಂದಿಟ್ಟುಕೊಂಡು ಜನಸಾಮಾನ್ಯರನ್ನು ಶೋಷಿಸುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಆಮದು ಕಡಿತಗೊಳಿಸಿರುವ ಭಾರತ ಸರ್ಕಾರ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಹಾಗೂ ಅಮೆರಿಕಾದ ನಿಯಮಗಳಿಗೆ ಶರಣಾಗಿದೆ.
ಕಮ್ಯುನಿಸ್ಟ್ ಚಳುವಳಿಯ ಅಗತ್ಯತೆ
ಎರಡನೇ ಮಹಾಯುದ್ಧ ನಡೆದು ಎಂಟು ದಶಕಗಳು ಕಳೆದರೂ ಜಗತ್ತು ಮತ್ತೊಂದು ಯುದ್ಧದ ಅಂಚಿನಲ್ಲಿ ನಿಲ್ಲಲು ಕಾರಣ, ಪ್ರಸ್ತುತ ಜಾಗತಿಕ ‘ಸಾಮ್ರಾಜ್ಯಶಾಹಿ-ಬಂಡವಾಳಶಾಹಿ’ ವ್ಯವಸ್ಥೆಯು ತನ್ನದೇ ಸ್ವಯಂಕೃತ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನಡೆಸುತ್ತಿರುವ ಹತಾಶ ಪ್ರಯತ್ನವಾಗಿದೆ. ಡಾಲರ್‌ನ ಸರ್ವಾಧಿಕಾರವನ್ನು ಉಳಿಸಿಕೊಳ್ಳಲು ಮಿಲಿಟರಿ-ಕೈಗಾರಿಕಾ ಸಂಕೀರ್ಣಗಳಿಗೆ ಯುದ್ಧಗಳು ಅತ್ಯಗತ್ಯವಾಗಿವೆ.
ಇದು ಇಡೀ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಸಂಪೂರ್ಣ ದಿವಾಳಿತನವನ್ನು ತೋರಿಸುತ್ತದೆ. ಮಾರ್ಕ್ಸ್ ವಾದಿ ನಾಯಕಿ ರೋಸಾ ಲುಕ್ಸೆಂಬರ್ಗ್ ಹೇಳಿದಂತೆ, ಬಾಹ್ಯ ಸಂಪನ್ಮೂಲಗಳಿಗಾಗಿ ಹಪಹಪಿಸುವ ಬಂಡವಾಳಶಾಹಿ ಯಂತ್ರವು ಸ್ವಾಭಾವಿಕವಾಗಿಯೇ ಹಿಂಸಾತ್ಮಕವಾಗಿರುತ್ತದೆ. ಒಂದು ವೇಳೆ ಇಂದು ಜಾಗತಿಕ ಕಮ್ಯುನಿಸ್ಟ್ ಚಳುವಳಿಯು ಸರಿಯಾದ ಕ್ರಾಂತಿಕಾರಿ ನಾಯಕತ್ವದಡಿಯಲ್ಲಿ ಮರುಜೀವ ಪಡೆದಿದ್ದರೆ, ಈ ಬಿಕ್ಕಟ್ಟನ್ನು ಜಾಗತಿಕ ಕ್ರಾಂತಿಯನ್ನಾಗಿ ಪರಿವರ್ತಿಸಬಹುದಿತ್ತು. ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಮಿಲಿಟರಿ ದಾಳಿಯು ಬಂಡವಾಳಶಾಹಿ ವ್ಯವಸ್ಥೆಯ ಈ ಹಿಂಸಾತ್ಮಕ ಆಧಿಪತ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
