ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ಸ್ವಾಯತ್ತ ಜಿಲ್ಲಾ ಮಂಡಳಿಯ ಚುನಾವಣೆಯನ್ನು 2026ರ ಏಪ್ರಿಲ್ 10 ರಂದು ನಡೆಸಲು ನಿರ್ಧರಿಸಲಾಗಿತ್ತು. ಈ ಮಂಡಳಿಯು ಒಟ್ಟು 30 ಸ್ಥಾನಗಳನ್ನು ಹೊಂದಿದ್ದು, ಅವುಗಳಲ್ಲಿ 27 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಿಡಲಾಗಿದೆ, ಒಂದು ಸ್ಥಾನವನ್ನು ನಾಮನಿರ್ದೇಶನದ ಮೂಲಕ ಭರ್ತಿ ಮಾಡಬೇಕಾಗಿದೆ ಮತ್ತು ಉಳಿದ ಎರಡು ಕ್ಷೇತ್ರಗಳು ಎಲ್ಲರಿಗೂ ಮುಕ್ತವಾಗಿವೆ (ಜನರಲ್). ಅಂದರೆ, ಈ ಎರಡು ಕ್ಷೇತ್ರಗಳಲ್ಲಿ (ಶ್ಯಾಮನಗರ ಮತ್ತು ರಾಜಾಬಾಲಾ) ಶೇಕಡಾ 80 ರಿಂದ 90 ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

2026ರ ಮಾರ್ಚ್ 9 ರಂದು, ಮಾಜಿ ಶಾಸಕರೊಬ್ಬರು ತಮ್ಮ ಬೆಂಬಲಿಗರೊಂದಿಗೆ ಸದರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜಿಲ್ಲಾ ಕೇಂದ್ರ ತುರಾಗೆ ತೆರಳಿದ್ದರು. ಆದರೆ ಕೆಲವು ಗಾರೋ ಭಾಷಿಗ ದುಷ್ಕರ್ಮಿಗಳು ಅಭ್ಯರ್ಥಿ ಮತ್ತು ಅವರ ಬೆಂಬಲಿಗರನ್ನು ನಿರ್ದಯವಾಗಿ ಥಳಿಸಿದರು. ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಿಲ್ಲ. ಈ ಘಟನೆಯ ನಂತರ, ಈ ಪ್ರಕರಣವನ್ನು ಖಂಡಿಸಿ ಚಿಬಿನಾಂಗ್ ಮಾರುಕಟ್ಟೆಯಲ್ಲಿ ಸಾರ್ವಜನಿಕ ಸಭೆಯೊಂದನ್ನು ನಡೆಸಲಾಯಿತು. ಆ ಸಮಯದಲ್ಲಿ, ಕೆಲವು ಮುಸ್ಲಿಂ ವ್ಯಕ್ತಿಗಳು ಸ್ಥಳೀಯ ಚರ್ಚ್ ಅನ್ನು ಧ್ವಂಸಗೊಳಿಸಿದ್ದಾರೆ ಎಂಬ ಸುಳ್ಳು ವದಂತಿಯೊಂದು ಹರಡಿದೆ. ಇದನ್ನು ನಂಬಿದ ಕೆಲವು ಗಾರೋ ಸಶಸ್ತ್ರ ಗೂಂಡಾಗಳು ಮತ್ತು ಇತರ ಗಾರೋ ಯುವಕರು ಚಿಬಿನಾಂಗ್ ಮಾರುಕಟ್ಟೆಯ ಮೇಲೆ ದಾಳಿ ನಡೆಸಿ, ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಈ ಹಿಂಸಾಚಾರವು ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿತು ಮತ್ತು ಅವರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ರಸ್ತೆಗಿಳಿದರು. ಆದರೆ, ಪೊಲೀಸರು ನಿಶಸ್ತ್ರ ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು, ಇದರಿಂದಾಗಿ ಇಬ್ಬರು ಸಾವನ್ನಪ್ಪಿದರು ಮತ್ತು ಅನೇಕರು ತೀವ್ರವಾಗಿ ಗಾಯಗೊಂಡರು. ಗಾರೋ ದುಷ್ಕರ್ಮಿಗಳು ಲೂಟಿ ಮತ್ತು ದಮನ ಕಾರ್ಯದಲ್ಲಿ ತೊಡಗಿದ್ದಾಗ ಮಧ್ಯಪ್ರದೇಶಿಸದ ಪೊಲೀಸರು, ಪ್ರತಿಭಟನಾ ನಿರತ ಜನಸಾಮಾನ್ಯರನ್ನು ಹತ್ತಿಕ್ಕುವಲ್ಲಿ ಅತಿಯಾದ ಉತ್ಸಾಹ ತೋರಿದರು, ಅಷ್ಟೇ ಅಲ್ಲದೆ, ಅವರ ಮೇಲೆ ಗುಂಡು ಹಾರಿಸಲೂ ಹಿಂಜರಿಯಲಿಲ್ಲ. ಇದು ಜನರನ್ನು ದಿಗ್ಭ್ರಮೆಗೊಳಿಸಿತು.

ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಧಿಕಾರಿಗಳು ಚುನಾವಣೆಯನ್ನು ತಡೆಹಿಡಿಯುವ ಅಧಿಸೂಚನೆಯನ್ನು ಹೊರಡಿಸಿದರು. ಗಾರೋ ಹಿಲ್ಸ್ ಜಿಲ್ಲೆಯ ಎರಡು ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗಳಿಗೆ ಮುಕ್ತವಾಗಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ, ಈ ಬಾರಿ ಕೇವಲ ಗಾರೋ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸುವ ನೋಟಿಸ್ ಜಾರಿ ಮಾಡಲಾಯಿತು. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ವಾಸಿಸುವ ಶೇಕಡಾ 70 ರಿಂದ 80 ರಷ್ಟು ಜನರು ಮುಸ್ಲಿಂ ಸಮುದಾಯಗಳಿಗೆ ಸೇರಿದವರು.

ಈ ಭೀಕರ ಘಟನೆಯು ಕೇವಲ ಒಂದು ಆಕಸ್ಮಿಕ ಅಥವಾ ಪ್ರತ್ಯೇಕ ಘಟನೆಯಲ್ಲ. ಮೇಘಾಲಯ ರಾಜ್ಯದ ಉತ್ತರ ಭಾಗವು ಸುಮಾರು 150 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಇಲ್ಲಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಬ್ರಿಟಿಷರ ಆಡಳಿತದ ಕಾಲದಿಂದಲೂ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 1972 ರಲ್ಲಿ ಮೇಘಾಲಯವನ್ನು ಅಸ್ಸಾಂನಿಂದ ಬೇರ್ಪಡಿಸಿದಾಗ, ಈ ಪ್ರದೇಶವನ್ನು ಅಸ್ಸಾಂನೊಂದಿಗೆ ಉಳಿಸಿಕೊಳ್ಳಬೇಕೆಂಬ ಬೇಡಿಕೆಯಿತ್ತು. ಆದರೆ ಆ ಸಮಯದಲ್ಲಿ, ಮೇಘಾಲಯದ ಮೊದಲ ಮುಖ್ಯಮಂತ್ರಿ ಕ್ಯಾಪ್ಟನ್ ವಿಲಿಯಂಸನ್ ಸಂಗ್ಮಾ ಅವರು, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, ಭೂಮಿಯ ಮೇಲಿನ ಹಕ್ಕು ಮತ್ತು 60 ಸ್ಥಾನಗಳ ಮೇಘಾಲಯ ವಿಧಾನಸಭೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಹಕ್ಕಿನಂತಹ ಹಲವಾರು ಪ್ರಯೋಜನಗಳ ಭರವಸೆಯನ್ನು ನೀಡಿ ಅವರನ್ನು ಮೇಘಾಲಯಕ್ಕೆ ಸೇರಲು ಪ್ರಲೋಭನೆಗೊಳಿಸಿದ್ದರು. ಆದರೆ ತರುವಾಯ, ಗಾರೋ ಹಿಲ್ಸ್ ನ ಅಂಧಾಭಿಮಾನಿ ಶಕ್ತಿಗಳ ಪ್ರಚೋದನೆಯಿಂದಾಗಿ, ಸ್ಥಾನಗಳ ಸಂಖ್ಯೆಯನ್ನು 10 ರಿಂದ 5 ಕ್ಕೆ ಇಳಿಸಲಾಯಿತು. ಇದರ ನಂತರವೂ, ಅಲ್ಲಿ ಒಂದು ಸೌಹಾರ್ದಯುತ ವಾತಾವರಣವಿತ್ತು. ಮುಸ್ಲಿಂ ಹಾಗೂ ಗಾರೋ ಜನರು ಶಾಂತಿಯಿಂದ ಬದುಕುತ್ತಿದ್ದರು. ವ್ಯಾಪಾರ ಹಾಗೂ ವಾಣಿಜ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಆದರೆ ಕುಖ್ಯಾತ ಅಸ್ಸಾಂ ಚಳವಳಿಯ ಹುಟ್ಟಿನೊಂದಿಗೆ ಪರಿಸ್ಥಿತಿಯು ವಿಭಿನ್ನ ರೂಪವನ್ನು ಪಡೆಯಿತು. ಲಕ್ಷಾಂತರ ಬಾಂಗ್ಲಾದೇಶಿ ಜನರು ಅಸ್ಸಾಂ ಪ್ರವೇಶಿಸುತ್ತಿದ್ದಾರೆ, ಇದು ಅಸ್ಸಾಮಿ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಮತ್ತು ಅಸ್ಸಾಮಿ ಭಾಷೆ ಹಾಗೂ ಸಂಸ್ಕೃತಿಯ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದೆ ಎಂಬ ಆಧಾರರಹಿತ ಅಪಪ್ರಚಾರವನ್ನು ಮಾಡಲಾಯಿತು. ಅಂದಿನಿಂದ, ಇತರ ಈಶಾನ್ಯ ರಾಜ್ಯಗಳು ತಮ್ಮ ಜನರ ಅಸ್ಮಿತೆಯು ಅಪಾಯದಲ್ಲಿದೆ ಎಂಬ ಆಧಾರರಹಿತ, ದುರುದ್ದೇಶಪೂರಿತ ಅಪಪ್ರಚಾರದಿಂದ ಪೀಡಿತವಾಗಿವೆ. ಅಸ್ಸಾಂನಂತೆಯೇ, ಈ ಪ್ರದೇಶದ ಎಲ್ಲಾ ಮುಸ್ಲಿಂ ಜನರು ನುಸುಳುಕೋರರು ಮತ್ತು ಅವರು ಬಾಂಗ್ಲಾದೇಶದಿಂದ ಬಂದಿದ್ದಾರೆ ಎಂಬ ಸುಳ್ಳು ಪ್ರಚಾರವನ್ನು ಇಲ್ಲಿಯೂ ಮಾಡಲಾಯಿತು. ದ್ವೇಷದ ಅಭಿಯಾನವು ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡಿತು. ಅವರು ಬಹಿರಂಗವಾಗಿ “ಈ ಭೂಮಿ ನಮ್ಮದು. ಈ ಜನರು ನುಸುಳುಕೋರರು. ಅವರನ್ನು ಓಡಿಸಬೇಕು” ಎಂದು ಕೂಗತೊಡಗಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಅಂಧಾಭಿಮಾನಿ ಶಕ್ತಿಗಳು ಹೆಚ್ಚು ಭೀಕರ ರೂಪ ತಳೆದವು ಮತ್ತು ಮುಸ್ಲಿಂ ಉದ್ಯಮಿಗಳನ್ನು ಸರ್ಕಾರದ ಪರೋಕ್ಷ ಬೆಂಬಲದೊಂದಿಗೆ ನಿಯಮಿತವಾಗಿ ಕಿರುಕುಳಕ್ಕೊಳಪಡಿಸುವುದು, ಅಪಹರಿಸುವುದು ಮತ್ತು ಕೊಲೆ ಮಾಡುವುದು ಮುಂದುವರೆಯಿತು. ಬಿಜೆಪಿಯು ಈ ಪರಿಸ್ಥಿತಿಯ ಲಾಭವನ್ನು ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ ಮತ್ತು ಗಾರೋ ಹಿಲ್ಸ್ ಜಿಲ್ಲೆಯಲ್ಲಿ ವಾಸಿಸುವ ಎಲ್ಲಾ ಮುಸ್ಲಿಂ ಜನರು ಬಾಂಗ್ಲಾದೇಶಿಯರು ಎಂದು ಘೋಷಿಸಿತು. ಈ ಬಾರಿ ಹಿಂಸಾಚಾರವನ್ನು ಯೋಜಿತ ರೀತಿಯಲ್ಲಿ ಸಂಘಟಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರ ಹಿಂದಿನ ಸೂತ್ರಧಾರಿಗಳು ಆರ್‌ಎಸ್‌ಎಸ್-ಬಿಜೆಪಿ ಎಂದು ಸ್ಥಳೀಯ ಜನರು ದೃಢವಾಗಿ ನಂಬಿದ್ದಾರೆ. ಏಕೆಂದರೆ, ಅಂಗಡಿಗಳು ಮತ್ತು ವಸತಿ ಕಟ್ಟಡಗಳನ್ನು ಸುಡುವ ಮತ್ತು ಲೂಟಿ ಮಾಡುವ ಮುನ್ನ, ಹಿಂದೂಗಳಿಗೆ ಸೇರಿದ ಆಸ್ತಿಗಳ ಮೇಲೆ ಕೇಸರಿ ಧ್ವಜಗಳನ್ನು ನೆಡಲಾಗಿತ್ತು, ಗಾರೋ ಜನರ ಆಸ್ತಿಗಳನ್ನು ಗುರುತಿಸಲಾಗಿತ್ತು, ಇದರಿಂದಾಗಿ ಅವುಗಳಿಗೆ ಯಾವುದೇ ಹಾನಿಯಾಗಲಿಲ್ಲ. ಅಷ್ಟೇ ಅಲ್ಲದೆ, ಮೇಘಾಲಯ ರಾಜ್ಯದ ಬಿಜೆಪಿ ಅಧ್ಯಕ್ಷರು ರಾಜ್ಯದ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿ, ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲೆಯ ಸಭೆಯನ್ನು ಆದಷ್ಟು ಬೇಗ ಕರೆಯುವಂತೆ ಮತ್ತು ಗಾರೋ ಅಲ್ಲದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸುವ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು. ಗಾರೋ ಸಮುದಾಯಕ್ಕೆ ಸೇರಿದ ಅಸ್ಸಾಂನ ಬಿಜೆಪಿ ನೇತೃತ್ವದ ಸರ್ಕಾರದ ಉಪಸಭಾಪತಿಯವರೂ ಸಹ, ಗಾರೋ ಹಿಲ್ಸ್ ಜಿಲ್ಲೆಯ ಮೈದಾನ ಪ್ರದೇಶದಲ್ಲಿ ವಾಸಿಸುವ ಮುಸ್ಲಿಂ ಜನರು ಬಾಂಗ್ಲಾದೇಶದಿಂದ ಬಂದ ಅಕ್ರಮ ನುಸುಳುಕೋರರು, ಆದ್ದರಿಂದ ಅವರ ಭೂಮಿಯ ಹಕ್ಕನ್ನು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಸಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಗಾರೋ ಹಿಲ್ಸ್ ನ ಮೈದಾನ ಪ್ರದೇಶದ ಉತ್ತರದ ಭಾಗ ಮತ್ತು ದಕ್ಷಿಣದ ಭಾಗದಲ್ಲಿ ಬುಡಕಟ್ಟಿಗೆ ಸೇರದ ಜನರು, ಪ್ರಮುಖವಾಗಿ ಮುಸ್ಲಿಮರು ವಾಸಿಸುತ್ತಿದ್ದರು. ಈಗ ಬುಡಕಟ್ಟಿಗೆ ಸೇರದ ಫುಲ್ಬಾರಿ ಮತ್ತು ರಾಜಾಬಾಲಾ ವಿಧಾನಸಭಾ ಸ್ಥಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಾನಗಳಲ್ಲಿ ಸ್ಪರ್ಧಿಸಲು ಮತ್ತು ಗೆಲ್ಲಲು ಯಾವುದೇ ಅವಕಾಶವಿಲ್ಲ. ಕಟು ಕೋಮುವಾದಿ ಬಿಜೆಪಿಯು ಗಾರೋ ಯುವಕರ ಒಂದು ವರ್ಗದ ನಡುವೆ ಅಂಧಾಭಿಮಾನ ಮತ್ತು ಕೋಮು ಉನ್ಮಾದವನ್ನು ಪ್ರಚೋದಿಸುವ ಮೂಲಕ, ದಶಕಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂ ಜನರ ಪ್ರಜಾಸತ್ತಾತ್ಮಕ ಮತ್ತು ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲು ಹಪಹಪಿಸುತ್ತಿದೆ. ಇದರ ಪರಿಣಾಮವಾಗಿ ಚಿಬಿನಾಂಗ್, ರಾಜಾಬಾಲಾ ಮತ್ತು ಭೈತ್ಬಾರಿ ಪ್ರದೇಶಗಳು ಈಗ ಅತ್ಯಂತ ಉದ್ವಿಗ್ನಗೊಂಡಿವೆ.

ಈ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಸ್ಸಾಂ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಚಂದ್ರಲೇಖಾ ದಾಸ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅದರಲ್ಲಿ ಅವರು: “ಗಾರೋ, ರಾವಾ, ಬೋಡೋ ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರಲಿ, ಎಲ್ಲಾ ಶೋಷಿತ ಜನರ ಹಿತಾಸಕ್ತಿಗಳು ಒಂದೇ ಆಗಿವೆ ಎಂದು ಪಕ್ಷವು ದೃಢವಾಗಿ ನಂಬುತ್ತದೆ. ಎಲ್ಲಾ ಸಮುದಾಯಗಳ ಶೋಷಿತ ಜನಸಾಮಾನ್ಯರು ಎಲ್ಲಾ ಬಡ ಜನರ ಹಕ್ಕುಗಳನ್ನು ರಕ್ಷಿಸಲು ಒಂದಾಗಬೇಕು, ಇದರಿಂದಾಗಿ ಆಳುವ ಶೋಷಕ ಬಂಡವಾಳಶಾಹಿ ವರ್ಗ ಮತ್ತು ಅದರ ಗುಲಾಮಿ ಪಕ್ಷಗಳು ‘ಒಡೆದಾಳುವ’ ನೀತಿಯನ್ನು ಅನುಸರಿಸುವ ಮೂಲಕ ಅವರ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ. ಕೋಮುವಾದಕ್ಕೆ ಪ್ರತಿರೋಧವೆಂದರೆ ಪ್ರತಿ-ಕೋಮುವಾದವನ್ನು ಉತ್ತೇಜಿಸುವುದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಪ್ರಜಾತಾಂತ್ರಿಕ ಚಿಂತನೆಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ಪ್ರಜಾತಾಂತ್ರಿಕ ವಾತಾವರಣವನ್ನು ನಿರ್ಮಿಸುವುದು ಮಾತ್ರ ಕೋಮುವಾದದ ವಿಷವನ್ನು ದೂರ ಇಡಬಲ್ಲದು.

ಶಾಂತಿಯನ್ನು ಕಾಪಾಡಲು ಮತ್ತು ಜನರ ಆಸ್ತಿಗಳನ್ನು ರಕ್ಷಿಸಲು ಹಲವು ಮಾರ್ಗಗಳಿವೆ. ಅದನ್ನು ಬಿಟ್ಟು, ಸಾಮಾನ್ಯ ಜನರ ಮೇಲೆ ಮನಬಂದಂತೆ ಗುಂಡು ಹಾರಿಸುವುದು ಅತ್ಯಂತ ಖಂಡನೀಯ. ಅದು ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತದೆ. ಜನರ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತದೆ. ಚಿಬಿನಾಂಗ್ ಮಾರುಕಟ್ಟೆಯಲ್ಲಿ ಪ್ರತಿಭಟನಾ ನಿರತ ಜನರ ಮೇಲೆ ಗುಂಡು ಹಾರಿಸಿರುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ಮೃತರ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಉಚಿತ ಮತ್ತು ಸೂಕ್ತ ಚಿಕಿತ್ಸೆ, ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಸೂಕ್ತ ಪುನರ್ವಸತಿ ಒದಗಿಸಲು ಮತ್ತು ಶಾಂತಿಯನ್ನು ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಭೀಕರ ಅಪರಾಧ ಎಸಗಿದ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು. ಅದೇ ಸಮಯದಲ್ಲಿ, ಎಲ್ಲಾ ವರ್ಗದ ಜನರು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ನಾವು ಕರೆ ನೀಡುತ್ತೇವೆ” ಎಂದಿದ್ದಾರೆ.