ಅಂತರರಾಷ್ಟ್ರೀಯ ಕ್ರೀಡಾಕೂಟಗಳು

‘ಸಭ್ಯರ’ ಕ್ರೀಡೆಗಳಂತಲ್ಲದೆ, ಕೈಗಾರಿಕಾ ನಗರಗಳಲ್ಲಿ ಮತ್ತು ಶ್ರಮಿಕ ವರ್ಗದ ಸಮುದಾಯಗಳಲ್ಲಿ ಫುಟ್‌ಬಾಲ್ ಹುಟ್ಟಿತು. 19ನೇ ಶತಮಾನದ ಬ್ರಿಟಿಷ್ ಪಬ್ಲಿಕ್ ಬೋರ್ಡಿಂಗ್ ಶಾಲೆಗಳಲ್ಲಿ ವಿನೋದದಿಂದ ಪ್ರಾರಂಭಗೊಂಡ ಈ ಕ್ರೀಡೆಯು ನಂತರ ಸಂಘಟಿತ ಕ್ರೀಡೆಯಾಗಿ ಬದಲಾಯಿತು. ಅತಿಶೀಘ್ರದಲ್ಲೇ ವಲಸಿಗರ ಮೂಲಕ ಇತರೆ ಖಂಡಗಳಿಗೂ ಹಬ್ಬಿತು. ಪ್ರಪಂಚದ ವಿವಿಧ ಭಾಗಗಳ ತಂಡಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಮೂಲಕ ಕ್ರೀಡೆಯ ಗುಣಮಟ್ಟವನ್ನು ಎತ್ತರಿಸುವ ಉದ್ದೇಶದಿಂದ ‘ಫಿಫಾ’ ಎಂಬ ಸಂಸ್ಥೆಯನ್ನು ರಚಿಸಲಾಯಿತು. ಮೊದಲ ಫಿಫಾ ವಿಶ್ವಕಪ್ 1928ರಲ್ಲಿ ನಡೆಯಿತು. ಬಂಡವಾಳಶಾಹಿ ಜಾಗತೀಕರಣವು ವಿಶ್ವವನ್ನು ವ್ಯಾಪಿಸುವ ಮತ್ತು ಸಮಾಜವಾದಿ ಬಣವು ಪತನವಾಗುವ ಮುನ್ನಾದಿನಗಳಲ್ಲಿ, ಫಿಫಾ ವಿಶ್ವಕಪ್ ಆಗಲಿ ಮತ್ತು ಒಲಿಂಪಿಕ್ಸ್ ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟಗಳಾಗಲಿ, ಬಹುಮುಖ್ಯವಾಗಿ ಕ್ರೀಡಾ ಮನೋಭಾವ ಮತ್ತು ಸ್ಪರ್ಧಾತ್ಮಕ ಮನೋಭಾವದ ಸುತ್ತ ಕೇಂದ್ರೀಕೃತವಾಗಿದ್ದವು. ಇದರ ಚುಕ್ಕಾಣಿ ಮುಖ್ಯವಾಗಿ ಕ್ರೀಡಾಪ್ರೇಮಿ ಜನರ ಕೈಯಲ್ಲಿತ್ತು. ಫುಟ್‌ಬಾಲ್ ವಿಶ್ವಕಪ್ ಮತ್ತು ಒಲಿಂಪಿಕ್ಸ್ - ಈ ಎರಡರಲ್ಲೂ ಸೋವಿಯತ್ ಒಕ್ಕೂಟದಿಂದ ಹಿಡಿದು ಪೂರ್ವ ಜರ್ಮನಿ, ಜೆಕೊಸ್ಲೋವಾಕಿಯಾ, ಹಂಗರಿ, ರುಮೇನಿಯಾ ಮತ್ತಿತರ ಸಮಾಜವಾದಿ ದೇಶಗಳ ಸಾಧನೆಗಳು ಅತ್ಯಂತ ಗಮನಾರ್ಹವಾಗಿದ್ದದ್ದನ್ನು ಮರೆಯಲಾಗದು.

ಕ್ರೀಡೆ ಸರಕಾದಾಗ..

ಬಂಡವಾಳಶಾಹಿ ಜಾಗತೀಕರಣವು ಏಕಧ್ರುವ ವಿಶ್ವದಲ್ಲಿ ವಿಜೃಂಭಿಸುತ್ತಿದ್ದಂತೆಯೇ, ಕ್ರೀಡೆಯು ಸರಕಾಗಿ ಮತ್ತು ವ್ಯಾಪಾರವಾಗಿ ಬದಲಾಗುವ ಪ್ರಕ್ರಿಯೆಯು ಆರಂಭವಾಯಿತು. ಮೊದಲಿಗೆ, ಆಸ್ಟ್ರೇಲಿಯಾದ ಮಾಧ್ಯಮ ಉದ್ಯಮಿ ಕರ‍್ರಿ ಪ್ಯಾಕರ್ 50 ಓವರ್ ಅಂದರೆ ನಿಯಮಿತ ಓವರ್‌ಗಳ ‘ಪೈಜಾಮಾ ಕ್ರಿಕೆಟ್’ ಪ್ರಾರಂಭಿಸಿದ್ದು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಿಂದ ಗಳಿಸುತ್ತಿದ್ದ ಹಣಕ್ಕಿಂತ 5-10 ಪಟ್ಟು ಹೆಚ್ಚು ಹಣವನ್ನು ನೀಡಿ, ಅಂದಿನ ಬಹುತೇಕ ಸುಪ್ರಸಿದ್ಧ ಕ್ರಿಕೆಟಿಗರನ್ನು ತನ್ನ ತೆಕ್ಕೆಗೆ ಆತ ತೆಗೆದುಕೊಂಡ. ಅಂದಿನಿಂದ ಕ್ರೀಡೆಯು ಒಂದು ಜಾತ್ರೆಯಾಯಿತು. ಅದರ ಪ್ರತಿಯೊಂದು ಭಾವನಾತ್ಮಕ ಅನುಭವವೂ ಸಹ ಒಂದು ಮಾರಾಟದ ಸರಕಾಯಿತು. ‘ಹವ್ಯಾಸಿ ಕ್ರೀಡೆಗಳ ದಿನಗಳು ಮುಗಿದಿವೆ’ ಎಂಬ ಪ್ರಚಾರದ ಬೆಂಬಲದೊಂದಿಗೆ ಕ್ರೀಡಾ ಜಗತ್ತಿಗೆ ಧಾರಾಳವಾಗಿ ಹಣದ ಹೊಳೆ ಹರಿಯಿತು. ಕ್ರೀಡೆ ಮತ್ತು ವ್ಯವಹಾರಗಳನ್ನು ಸೇರಿಸಿ ಬೆಸುಗೆ ಹಾಕಲಾಯಿತು. ನಿರೀಕ್ಷಿಸಿದಂತೆ, ವ್ಯಾಪಾರೀಕರಣ-ವೃತ್ತಿಪರತೆಯ ಮೈತ್ರಿಯು ಭ್ರಷ್ಟಾಚಾರಕ್ಕೂ ಜನ್ಮ ನೀಡಿತು. ಪ್ರತಿಯೊಂದು ಕ್ರೀಡೆಯಲ್ಲೂ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಲಂಚಗುಳಿತನ, ಡೋಪಿಂಗ್ ಮೂಲಕ ಸಾಮರ್ಥ್ಯವರ್ಧನೆ ಮಾಡಿಕೊಳ್ಳುವುದು ಇತ್ಯಾದಿ ರೋಗಗಳು ಹುಟ್ಟಿಬಂದು ಕ್ರೀಡಾರಂಗವನ್ನು ಅಡರಿಕೊಂಡವು. ಈ ಮಾನಸಿಕತೆಯು ಕ್ರೀಡೆಯನ್ನು ಆವರಿಸಿಕೊಂಡಿದೆ ಎಂಬುದು ಬಹಿರಂಗಗೊಂಡಾಗ, ಕ್ರೀಡಾ ಪ್ರೇಮಿ ಜನರಲ್ಲಿ ಇದರ ಬಗ್ಗೆ ತೀವ್ರ ತಿರಸ್ಕಾರ ಉಂಟಾದಾಗ, ಕನಿಷ್ಠ ಪಕ್ಷ ಹೊರನೋಟಕ್ಕಾದರೂ ವಿವಿಧ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ಬೆಟ್ಟಿಂಗ್, ಫಿಕ್ಸಿಂಗ್ ಇತ್ಯಾದಿ ಅನಿಷ್ಠಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಡಕ್ಕೊಳಗಾದವು. ಈ ಪಿಡುಗುಗಳು ವಿಶೇಷವಾಗಿ ಫುಟ್‌ಬಾಲ್‌ನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡವು.

ಫಿಫಾ ವಿಶ್ವಕಪ್: ಹಣ ಮೆರೆಯುವ ದಂಧೆ

ಅದರ ಮುಂದುವರಿದ ಭಾಗವಾಗಿಯೇ ಅಮೇರಿಕ, ಕೆನಡ ಮತ್ತು ಮೆಕ್ಸಿಕೊಗಳು ಜಂಟಿಯಾಗಿ ಆಯೋಜಿಸಿದ್ದ 2026ರ ಫಿಫಾ ವಿಶ್ವಕಪ್‌ನಲ್ಲಿ ಅತ್ಯಂತ ದುಬಾರಿ ಟಿಕೆಟ್‌ಗಳು, ದುಬಾರಿ ವಸತಿ, ವಿಪರೀತ ತುಟ್ಟಿಯಾಗಿದ್ದ ಸಾರಿಗೆ ವೆಚ್ಚಗಳನ್ನು ಜನರು ಭರಿಸಬೇಕಾಯಿತು. ಕೆಲವು ಜಾಗತಿಕ ಮಾಧ್ಯಮ ಮಾಲೀಕರು ಅಗಾಧ ಬೆಲೆಗೆ ಮಾಧ್ಯಮ ಹಕ್ಕುಗಳನ್ನು ಕೈವಶ ಮಾಡಿಕೊಂಡು ಅಪಾರ ಲಾಭಕ್ಕೆ ಅವನ್ನು ಮಾರಾಟ ಮಾಡಿದ್ದರು. ಹೀಗೆ ದೊಡ್ಡ ಕಾರ್ಪೊರೇಟ್ ಮಾಲೀಕರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಲಾಭಗಳಿಕೆಯ ದುರಾಸೆಯಿಂದಾಗಿ, ಜನಸಾಮಾನ್ಯರ ಬದುಕಿನ ಕಣಕಣದಲ್ಲಿ ಒಂದಾಗಿರುವ ಫುಟ್‌ಬಾಲ್ ಆಟದ ಕುತ್ತಿಗೆಯನ್ನು ಹಿಸುಕುಲಾಗಿದೆ. ಈ ಬಾರಿ 48 ತಂಡಗಳನ್ನು ಒಳಗೊಂಡ ವಿಶ್ವಕಪ್ ಟೂರ್ನಮೆಂಟ್ ಫಿಫಾ 2026, ಅತ್ಯಂತ ಸಂಕುಚಿತ ಭೌಗೋಳಿಕ-ರಾಜಕೀಯ ಪ್ರಾದೇಶಿಕತಾವಾದ, ವರ್ಣೀಯತೆ ಹಾಗೂ ಅಂತಹ ಇನ್ನಿತರ ವಿಭಜಕ ಅಂಶಗಳಿಂದ ಮಲಿನಗೊಂಡಿದೆ. ಇವು ಜಾಗತಿಕ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಕ್ರೀಡೆಯ ಮೂಲ ಆಶಯ, ಸಾರ್ವತ್ರಿಕ ಮನೋಭಾವ, ಬಹುಸಂಸ್ಕೃತಿ ಹಾಗೂ ಅಂತರರಾಷ್ಟ್ರೀಯ ಐಕ್ಯತೆಯ ಆಶಯಗಳಿಗೆ ನಿಸ್ಸಂದೇಹವಾಗಿ ವಿರುದ್ಧವಾಗಿದ್ದವು.

ಆಟದಲ್ಲಿ ಭೇದಭಾವ

ಆಫ್ರಿಕಾದ ಅತ್ಯಂತ ಗೌರವಾನ್ವಿತ ರೆಫರಿಗಳಲ್ಲಿ ಒಬ್ಬರಾದ ಸೊಮಾಲಿಯ ದೇಶದ ರೆಫರಿ ಒಮರ್ ಅಬ್ದುಲ್ ಅರ್ತಾನ್‌ಗೆ ಪ್ರವೇಶವನ್ನು ನಿರಾಕರಿಸಿ, ವಿಮಾನ ನಿಲ್ದಾಣದಿಂದಲೇ ಮರಳುವಂತೆ ಹೇಳಿದ್ದು ಜನಾಂಗೀಯವಾದಕ್ಕೆ ಕರಾಳ ಸಾಕ್ಷಿಯಾಯಿತು. ಏಕೆಂದರೆ, ಸೊಮಾಲಿಯದಲ್ಲಿ ಅಮೇರಿಕ ಪರವಾಗಿರುವ ಫೆಡರಲ್ ಸರ್ಕಾರವನ್ನು ಸಕ್ರಿಯವಾಗಿ ವಿರೋಧಿಸುತ್ತಿರುವ ಅಲ್-ಶಬಾಬ್ ಸಂಘಟನೆಯೊಂದಿಗೆ ಅರ್ತಾನ್ ಸಂಪರ್ಕ ಹೊಂದಿದ್ದಾರೆ ಎಂಬ ಆಧಾರರಹಿತ ಮಾಹಿತಿಯ ಜಾಡನ್ನು ಹಿಡಿದುಕೊಂಡು ಅವರಿಗೆ 11 ಘಂಟೆಗಳ ಕಾಲ ಕಿರುಕುಳ ನೀಡಲಾಯಿತು. ಇರಾನ್ ತಂಡವೂ ಸೇರಿದಂತೆ ಹಲವಾರು ದೇಶಗಳ ಜನರಿಗೆ ಅವರು ಅಮೇರಿಕದ ವಿರುದ್ಧದ ನಿಲುವನ್ನು ಹೊಂದಿದ್ದಾರೆ ಎಂದು ವೀಸಾ ವಿಷಯವಾಗಿ ವಿವಿಧ ರೀತಿಯಲ್ಲಿ ತೊಂದರೆ ನೀಡಲಾಯಿತು. ಸ್ಟೇಡಿಯಂನಲ್ಲಿ ತರಬೇತಿಗಾಗಿ ಮತ್ತು ಪಂದ್ಯಪೂರ್ವ ಪತ್ರಿಕಾಗೋಷ್ಠಿಗಾಗಿ, ಸ್ಪರ್ಧಿಸುವ ಎಲ್ಲಾ ತಂಡಗಳು ಪಂದ್ಯದ ಹಿಂದಿನ ದಿನವೇ ಪಂದ್ಯದ ಸ್ಥಳಕ್ಕೆ ತಲುಪಬೇಕು ಎನ್ನುವ ಫಿಫಾ ನಿಯಮವನ್ನೇ ಗಾಳಿಗೆ ತೂರಿ, ಇರಾನ್ ತಂಡ ಮತ್ತು ಅದರ ತಕ್ಷಣದ ಬೆಂಬಲ ಸಿಬ್ಬಂದಿಗೆ ಅಮೇರಿಕದಲ್ಲಿ ಒಂದು ರಾತ್ರಿಯೂ ಸಹ ತಂಗಲು ಅವಕಾಶವನ್ನು ನೀಡಲಿಲ್ಲ. ಅಮೇರಿಕನ್ ವಲಸೆ ಅಧಿಕಾರಿಗಳು ಇರಾನ್ ತಂಡಕ್ಕೆ ಪಂದ್ಯಗಳಿಗೆ ಒಂದು ದಿನ ಮೊದಲು ದೇಶವನ್ನು ಪ್ರವೇಶಿಸಲು ಮತ್ತು ಪಂದ್ಯ ಮುಗಿದ ತಕ್ಷಣ ನಿರ್ಗಮಿಸುವುದನ್ನು ಕಡ್ಡಾಯಗೊಳಿಸಿದರು. ಈ ನಿರ್ಬಂಧಗಳು ತಂಡದ ಸಿದ್ಧತೆಯ ವೇಳಾಪಟ್ಟಿಗೆ ಅಡಚಣೆ ಉಂಟು ಮಾಡಿದವು. ಅಮೇರಿಕನ್ ಸಾಮ್ರಾಜ್ಯಶಾಹಿಗಳು ಇರಾನ್‌ನೊಂದಿಗೆ ಯುದ್ಧದಲ್ಲಿರುವುದರಿಂದ ಹೀಗೆ ತಾರತಮ್ಯ ಮಾಡಲಾಯಿತು. ಅಂದರೆ, ಕ್ರೀಡೆಯೊಳಗೆ ಕ್ಷುಲ್ಲಕ ರಾಜಕಾರಣ ನಡೆಯಿತು.

ಫಿಫಾ ಮತ್ತು ಅಮೆರಿಕಾದ ದ್ವಿಮುಖ ನೀತಿ

ಅತಿಥೇಯ ಅಮೇರಿಕವು ಇಡೀ ಟೂರ್ನ್ಮೆಂಟ್ ಉದ್ದಕ್ಕೂ ವಿರೋಧಾಭಾಸದ ನಡೆಯನ್ನು ಪದೇಪದೇ ತೋರಿತು. ಒಂದು ಕಡೆ, ತಟಸ್ಥತೆ, ಮುಕ್ತತೆ ಮತ್ತು ಪ್ರಜಾಪ್ರಭುತ್ವದ ಹರಿಕಾರ ಎಂದು ತನ್ನನ್ನು ಬಿಂಬಿಸಿಕೊಳ್ಳುತ್ತಲೇ. ಇನ್ನೊಂದು ಕಡೆ, ನಿರ್ಬಂಧಗಳು, ಅಡೆತಡೆಗಳನ್ನು ಒಡ್ಡಿ ಹಲವಾರು ಜನರನ್ನು ಅನೇಕ ಮಾದರಿಯ ಪೀಡನೆಗೆ ಗುರಿಮಾಡಿದೆ ಅಮೇರಿಕ. ಆದರೆ, ಸ್ವಾತಂತ್ರ್ಯವನ್ನು ನಿರ್ಬಂಧಿಸಿದ್ದಕ್ಕಾಗಿ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ರಾಜಕೀಯಕರಣಗೊಳಿಸಿದ್ದಕ್ಕಾಗಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್, ಚೀನಾದಲ್ಲಿ ನಡೆದಿದ್ದ ಒಲಿಂಪಿಕ್ಸ್ ಮತ್ತು ಕತಾರ್‌ನಲ್ಲಿ ನಡೆದಿದ್ದ ವಿಶ್ವಕಪ್‌ಗಳ ನಿರ್ವಹಣೆಯನ್ನು ಅಮೇರಿಕ ಈ ಹಿಂದೆ ಉಗ್ರವಾಗಿ ಟೀಕಿಸಿತ್ತು. ಈಗ 2026ರ ಫಿಫಾ ವಿಶ್ವಕಪ್, ಅಮೇರಿಕದ ದ್ವಿಮುಖ ನೀತಿಯನ್ನು ಸ್ಪಷ್ಟವಾಗಿ ಬಯಲು ಮಾಡಿದೆ.

ಫುಟ್‌ಬಾಲ್ ಯಾರ ಯಜಮಾನಿಕೆಯಲ್ಲಿದೆ?

ಆದ್ದರಿಂದ, ಫುಟ್‌ಬಾಲ್ ಯಾರ ಅಂಕೆಯಲ್ಲಿದೆ ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ತಮ್ಮ ಶ್ರಮ ಮತ್ತು ಉತ್ಸಾಹದಿಂದ ಅದನ್ನು ಜಾಗತಿಕ ವಿದ್ಯಮಾನವಾಗಿ ಪರಿವರ್ತಿಸಿದ ಆಟಗಾರರು, ಕ್ರೀಡಾಪ್ರೇಮಿಗಳು, ಬೆಂಬಲಿಗರು ಮತ್ತು ಸಮುದಾಯಗಳಿಗೆ ಅದು ಸೇರಿದೆಯೇ? ಅಥವಾ ಆಡಳಿತ ಮಂಡಳಿಗಳು, ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಮತ್ತು ಪ್ರಭುತ್ವದ ಅಧಿಕಾರಸ್ಥರಿಗೆ ಅದು ಸೇರಿದೆಯೇ? ಇಂದು ಅಧಿಕಾರದ ನಿಯಂತ್ರಣದೊಂದಿಗೆ ಫಟ್‌ಬಾಲ್ ಆಟ ಹೆಣೆದುಕೊಂಡಿದೆ ಎಂಬುದನ್ನು ಹಲವಾರು ವಿದ್ಯಮಾನಗಳು ಬಯಲು ಮಾಡುತ್ತವೆ. ಜಾಗತಿಕ ಐಕ್ಯತೆಗೆ ಇಂಬು ನೀಡಬೇಕಾದ ಪಂದ್ಯಾವಳಿಗಳಲ್ಲಿ ಈಗ ಅಸಮಾನತೆ ಮೆರೆಯುತ್ತಿದೆ. ವೈವಿಧ್ಯತೆ ಮಸುಕಾಗಿದೆ. ಶ್ರಮಿಕ ವರ್ಗದ ಸಮುದಾಯಗಳಿಂದ ಬೆಳೆದ ಕ್ರೀಡೆಯು ಈಗ ಕಾರ್ಪೊರೇಟ್ ಕಂಪನಿಗಳಿಗೆ ಲಾಭದ ರಾಶಿಯನ್ನು ತಂದೊಡ್ಡುವ ವಾಹಕವಾಗಿದೆ ಮತ್ತು ರಾಜಕೀಯೇತರ ಎಂದು ಹೇಳಿಕೊಳ್ಳುವ ಕ್ರೀಡಾಕೂಟವು ಆಳ್ವಿಕರೊಂದಿಗೆ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದೆ.

ವರ್ಗ ದೃಷ್ಟಿಯಲ್ಲಿ ಕ್ರೀಡೆ

ವರ್ಗ ವಿಭಜಿತ ಸಮಾಜದಲ್ಲಿನ ಪ್ರತಿಯೊಂದು ಸಂಸ್ಥೆಯೂ ಅಂದರೆ, ಶಿಕ್ಷಣ, ಸಂಸ್ಕೃತಿ, ಕಾನೂನು, ಮಾಧ್ಯಮ, ಧರ್ಮ ಮತ್ತು ಕ್ರೀಡೆ - ಈ ಎಲ್ಲವೂ ಆಳುವ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳ ಅಧಿಕಾರವನ್ನು ನ್ಯಾಯಸಮ್ಮತವಾಗಿಸಲು, ಅವರ ಆಳ್ವಿಕೆಯನ್ನು ಮತ್ತಷ್ಟು ಸದೃಢಪಡಿಸಲು ಸಹಾಯ ಮಾಡುತ್ತವೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಥಾಸ್ಥಿತಿಯು ಮುಂದುವರೆಯುವಂತೆ ಅದಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ ಕಾಪಾಡಲು ಕೋಟ್ಯಂತರ ಡಾಲರ್ ಸಂಪತ್ತು ಹೊಂದಿರುವ ಫಿಫಾ ಸೇರಿದಂತೆ, ಮೇಲಿನ ಎಲ್ಲ ಸಂಸ್ಥೆಗಳು ನಡೆದುಕೊಳ್ಳುತ್ತವೆ. ಈ ಸಂಸ್ಥೆಗಳು ವಲಸೆ ಅಧಿಕಾರಿಗಳು, ಕಾನೂನು ವ್ಯವಸ್ಥೆ, ಪೊಲೀಸ್ ಮತ್ತು ಮಿಲಿಟರಿಯನ್ನು ಬಹಳ ನಿಷ್ಠೆಯಿಂದ ಸಮರ್ಥಿಸಿಕೊಂಡು ಆಡಳಿತಾರೂಢ ಬಂಡವಾಳಶಾಹಿ ವರ್ಗದ ಹಿತವನ್ನು ಕಾಯುತ್ತವೆ ಮತ್ತು ಜನರ ಪ್ರತಿರೋಧದ ದನಿಯನ್ನು ಹತ್ತಿಕ್ಕುತ್ತವೆ.