ಪ್ರತಿ ವರ್ಷ ಚಳಿಗಾಲದ ತಿಂಗಳುಗಳಲ್ಲಿ ದೆಹಲಿಯ ಮೇಲೆ ಬೂದು ಬಣ್ಣದ ದಟ್ಟ ಹೊಗೆ-ಮಂಜಿನ (ಹೊಂಜು) ಮುಸುಕು ಆವರಿಸಿಕೊಳ್ಳುತ್ತಿದ್ದಂತೆ, ಸರ್ಕಾರವು ತಕ್ಷಣಕ್ಕೆ ಡೀಸೆಲ್ ವಾಹನಗಳ ನಿಷೇಧವನ್ನೊಳಗೊಂಡಂತೆ ಹಲವಾರು ಮೇಲ್ನೋಟದ ಕ್ರಮಗಳನ್ನು ಜಾರಿಗೆ ತರುತ್ತದೆ. ತಾನು ನಿಜವಾಗಿಯೂ ಏನೋ ಮಾಡಲು ಯತ್ನಿಸುತ್ತಿದೆ ಎಂಬಂತೆ ಬಿಂಬಿಸಿಕೊಳ್ಳುತ್ತದೆ. ಆದರೆ ನಗರದ ಗಡಿಯಾಚೆಗೆ, ಸದ್ದಿಲ್ಲದೆ ಮಾಲಿನ್ಯ ಉಂಟುಮಾಡುವ ಮೂಲವೊಂದು ಯಾವುದೇ ಮೇಲ್ವಿಚಾರಣೆಯಿಲ್ಲದೆ ವರ್ಷಪೂರ್ತಿ ತನ್ನ ಕುಕೃತ್ಯವನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ.
ಸರ್ಕಾರದ ಪ್ರಕಾರ ಆರೋಪಿಗಳು ಯಾರು?
ಚಳಿಗಾಲ ಸಮೀಪಿಸುತ್ತಿದ್ದಂತೆ, `ಮುಖ್ಯವಾಹಿನಿಯ ಮಾಧ್ಯಮಗಳು’ ಹೊಂಜಿನ ಬಗ್ಗೆ ಬೊಬ್ಬೆಯಿಡುತ್ತಾ ಇದರ ಆರೋಪವನ್ನು ಸಂಪೂರ್ಣವಾಗಿ, ಬೆಳೆ ಅವಶೇಷಗಳನ್ನು (ಕೂಳೆ) ಸುಡುವುದು ಮತ್ತು ವಾಹನಗಳಿಂದಾಗುವ ವಾಯು ಮಾಲಿನ್ಯಗಳ ಮೇಲೆ ಹೊರಿಸುತ್ತವೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದಾಗುವ ನಿರಂತರವಾದ ಅಗಾಧ ಮಾಲಿನ್ಯಕ್ಕೆ ಹೋಲಿಸಿದರೆ, ಈ ಸ್ಥಳೀಯ ಮತ್ತು ಅಲ್ಪಕಾಲಿಕ ಮಾಲಿನ್ಯ ಏನೇನೂ ಅಲ್ಲ; ಆದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದೆ
(CREA)ಎನರ್ಜಿ ಮತ್ತು ಕ್ಲೀನ್ ಏರ್ ಸಂಶೋಧನಾ ಕೇಂದ್ರ ಕ್ರೋಢೀಕರಿಸಿದ ದತ್ತಾಂಶದ ಪ್ರಕಾರ, ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಬೃಹತ್ ಸಮೂಹವು ಅತ್ಯಂತ ದೊಡ್ಡ ವಿಷಕಾರಿ ವಾಯು ಮಾಲಿನ್ಯದ ಮೂಲಗಳಲ್ಲಿ ಒಂದಾಗಿದೆ. ಚಿಮಣಿಗಳು ಉಗುಳುವ ಸಲ್ಫರ್ ಡೈಆಕ್ಸೈಡ್ (SO2) ಒಂದು ಅತ್ಯಂತ ವಿಷಕಾರಿ ಅನಿಲ. ಒಮ್ಮೆ ವಾತಾವರಣಕ್ಕೆ ಬಿಡುಗಡೆಯಾದ ನಂತರ, ಅದು ಸಲ್ಫೇಟ್ ಏರೋಸೋಲ್ ಆಗಿ ಪರಿವರ್ತಿತವಾಗುತ್ತದೆ. ವಿಜ್ಞಾನಿಗಳು `ದ್ವಿತೀಯ ಪರ್ಟಿಕ್ಯುಲೆಟ್ ಮ್ಯಾಟರ್ (ಕಣ)ಪಿಎಂ 25’ಎಂದು ಕರೆಯುವ ಇದು, ವಾಹನಗಳು ಸೂಸುವ ‘ಪ್ರಾಥಮಿಕ ಪರ್ಟಿಕ್ಯುಲೆಟ್ ಮ್ಯಾಟರ್ ಪಿಎಂ 25’ ಗಿಂತ ಹೆಚ್ಚು ಅಪಾಯಕಾರಿಯಾದದ್ದು. ದೆಹಲಿ ಪ್ರದೇಶದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಶೇ. 96 ಕ್ಕಿಂತ ಹೆಚ್ಚು ಕಣ ಮಾಲಿನ್ಯಕ್ಕೆ ಇದೇ ಕಾರಣ ಎಂದು ಅಧ್ಯಯನಗಳು ತೋರಿಸುತ್ತವೆ. ಅನಿಲದಿಂದ ಕಣವಾಗಿ ಬದಲಾಗಲು ಗಂಟೆಗಳು ಅಥವಾ ದಿನಗಳೇ ಬೇಕಾಗುವುದರಿಂದ, ಈ ಕಲುಷಿತ ಕಣಗಳು ಗಾಳಿಯಲ್ಲಿ ನೂರಾರು ಕಿಲೋಮೀಟರ್ ದೂರ ತೇಲಿಕೊಂಡು ಹೋಗಬಹುದು. ಆದ್ದರಿಂದ, ಪಂಜಾಬ್ ಅಥವಾ ಹರಿಯಾಣದಲ್ಲಿರುವ ವಿದ್ಯುತ್ ಸ್ಥಾವರವು ತನ್ನ ಮಾಲಿನ್ಯವನ್ನು ನೇರವಾಗಿ ಮಧ್ಯ ದೆಹಲಿಯ ನಿವಾಸಿಯ ಶ್ವಾಸಕೋಶಕ್ಕೆ ಸುರಿಯುತ್ತದೆ. ಈ ಸತ್ಯವನ್ನು ಮುಚ್ಚಿಟ್ಟು, ವಾಯು ಗುಣಮಟ್ಟ ಸೂಚ್ಯಂಕಗಳನ್ನು ಕೇವಲ ನೆಲಮಟ್ಟದ ಧೂಳು ಮತ್ತು ವಾಹನದ ಹೊಗೆಯ ಮೇಲೆಯೇ ಕೇಂದ್ರೀಕರಿಸಲಾಗುತ್ತಿದೆ.
ನಿಯಂತ್ರಣದ ಲೋಪದೋಷಗಳು
ಆಘಾತಕಾರಿ ಸತ್ಯವೆಂದರೆ, ಈ ಸ್ಥಾವರಗಳಿಂದ ಹೊರಸೂಸುವ ಸಲ್ಫರ್ ಡೈಆಕ್ಸೈಡ್ (SO2) ಹೊರಸೂಸುವಿಕೆಯ ಶೇ. 81 ರಷ್ಟಕ್ಕೆ ನಿಯಂತ್ರಣದಿಂದ ಕಾನೂನುಬದ್ಧವಾಗಿ ವಿನಾಯಿತಿ ನೀಡಲಾಗಿದೆ. ಡಿಸೆಂಬರ್ 2015 ರಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC), ಎಲ್ಲಾ ಭಾರತೀಯ ಕಲ್ಲಿದ್ದಲು ಸ್ಥಾವರಗಳು ತಮ್ಮ ಹೊಗೆಯಿಂದ SO2ಅನ್ನು ತೆಗೆದುಹಾಕಲು ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್(FGD) ಯಂತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ನಿರ್ದೇಶಿಸಿತು. ಆದರೂ, ಖಾಸಗಿ ವಿದ್ಯುತ್ ಉತ್ಪಾದಕರ ತೀವ್ರ ಲಾಬಿಯಿಂದಾಗಿ, ಈ ಗಡುವನ್ನು ನಾಲ್ಕು ಬಾರಿ ಮುಂದೂಡಲಾಯಿತು. ಸ್ವಚ್ಛ ಗಾಳಿಗೆ ನಿರ್ಣಾಯಕ ಹೊಡೆತ ಬಿದ್ದದ್ದು ಜುಲೈ 2025 ರ ಪರಿಷ್ಕೃತ MoEFCC ಅಧಿಸೂಚನೆಯಿಂದ. ದೇಶದ ಕಲ್ಲಿದ್ದಲು ಸ್ಥಾವರಗಳನ್ನು ವರ್ಗ ಎ, ಬಿ, ಸಿ ಎಂದು ಮೂರು ಭೌಗೋಳಿಕ ವರ್ಗಗಳಾಗಿ ವಿಂಗಡಿಸಲಾಯಿತು. ದೆಹಲಿ ಅಥವಾ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ FGD ಕಡ್ಡಾಯವಾಗಿದ್ದು, ಅದನ್ನು ಅಳವಡಿಸಲು ಡಿಸೆಂಬರ್ 2027ರ ತನಕ ಗಡುವು ನೀಡಲಾಗಿದೆ. ತೀವ್ರ ಮಾಲಿನ್ಯಕ್ಕೆ ಒಳಗಾಗಿರುವ ಪ್ರದೇಶಗಳಿಂದ 10 ಕಿಮೀ ದೂರ ಇರುವ ಸ್ಥಾವರಗಳು ಬಿ ವರ್ಗದ ಕೆಳಗೆ ಬರುತ್ತಿದ್ದು, ಅವುಗಳ ಮೌಲ್ಯಮಾಪನವನ್ನು ಸಂದಭಕ್ಕೆ ತಕ್ಕಂತೆ ಮಾಡಲಾಗುತ್ತದೆ. ಮಿಕ್ಕುಳಿದವು ಸಿ ವರ್ಗಕ್ಕೆ ಸೇರಿರುವ ದೇಶದ 78% ಸ್ಥಾವರಗಳಾಗಿದ್ದು ಅವುಗಳಿಗೆ FGD ಅಳವಡಿಕೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ, ವಾಯು ಮಾಲಿನ್ಯವು ರಾಜಕೀಯ ಅಥವಾ ಆಡಳಿತಾಂಗಗಳ ಇಂತಹ ನಿಬಂಧನೆಗಳಿಗೆ ಒಳಪಡುವುದಿಲ್ಲವಲ್ಲ! ಹಾಗಾಗಿ, ದೆಹಲಿಯಿಂದ 100 ರಿಂದ 250 ಕಿಮೀ ದೂರದಲ್ಲಿರುವ, ರಾಜಧಾನಿಯಲ್ಲಿ ಚಳಿಗಾಲದಲ್ಲಿ ಬೀಸುವ ಮಾರುತಗಳಿಗೆ ಮಾಲಿನ್ಯವನ್ನು ಉಣಬಡಿಸುವ ಹಲವಾರು ಬೃಹತ್, ಅಗಾಧ ಮಾಲಿನ್ಯಕಾರಕ ಸ್ಥಾವರಗಳು ಸಿ ವರ್ಗಕ್ಕೇ ಸೇರುತ್ತವೆ. ಸಿಆರ್ಇಎನ ಜುಲೈ 2026 ರ ಮೌಲ್ಯಮಾಪನದ ಪ್ರಕಾರ, ಭಾರತದ ಕಲ್ಲಿದ್ದಲು ಸ್ಥಾವರಗಳ 78% ರಷ್ಟನ್ನು ಒಳಗೊಂಡಿರುವ ಮತ್ತು ದೆಹಲಿಯ ಸುತ್ತಮುತ್ತಲು ಒಟ್ಟು SO2 ನ 81% ರಷ್ಟರ ಹೊರಸೂಸುವಿಕೆಗೆ ಕಾರಣವಾಗಿರುವ ಈ ಸ್ಥಾವರಗಳಲ್ಲಿ ಯಾವುದೇ ನಿಯಂತ್ರಣ ತಂತ್ರಜ್ಞಾನವನ್ನು ಎಂದಿಗೂ ಅಳವಡಿಸಬೇಕಾಗಿಲ್ಲ.
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಯ ಸಮಯವು, ವಿಶೇಷವಾಗಿ ದೆಹಲಿ ಪ್ರದೇಶದಲ್ಲಿ, ವರ್ಷವಿಡೀ ಇರುತ್ತದೆ, ಆದರೆ ಬೆಳೆಕೂಳು ಸುಡುವುದು ಶರತ್ಕಾಲದಲ್ಲಿ 20-30 ದಿನಗಳು ಮಾತ್ರ. ಅದೇ ಸಮಯದಲ್ಲಿ, ಈ ಸ್ಥಾವರಗಳ ಹೊರಸೂಸುವಿಕೆಯ ಪ್ರಮಾಣವು ಬೆಳೆಕೂಳು ಸುಡುವುದರಿಂದಾಗುವ ಮಾಲಿನ್ಯಕ್ಕಿಂತ 240 ಪಟ್ಟು ಹೆಚ್ಚು ಮತ್ತು ಕಣ ಮಾಲಿನ್ಯ ಪ್ರಮಾಣವು 19 ಪಟ್ಟು ಹೆಚ್ಚು. ಈ ಮಾಲಿನ್ಯದ 90% ರಷ್ಟು FGD ಇಲ್ಲದ ಸ್ಥಾವರಗಳಿಂದ ಬರುತ್ತದೆ. ಹಾಗಾಗಿ, ದೆಹಲಿಯ ಮಾಲಿನ್ಯಕ್ಕೆ ಬೆಳೆಕೂಳು ಸುಡುವುದೇ ಏಕೈಕ ಕಾರಣ ಎಂದು ಅದರ ಮೇಲೆ ಆರೋಪ ಹೊರಿಸುವುದು, ವಿಷಕಾರಿ ಅನಿಲಗಳನ್ನು ವಾಯುಮಂಡಲಕ್ಕೆ ಸುರಿಯುತ್ತಿರುವುದು ಕೈಗಾರಿಕೆಗಳು ಎಂಬ ವಾಸ್ತವವನ್ನು ಜನರಿಂದ ಮುಚ್ಚಿಹಾಕುವ ಪ್ರಯತ್ನವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಯಾವುದೇ ನಿಯಂತ್ರಣವಿಲ್ಲದ ಪಂಜಾಬಿನ ರಾಜ್ಪುರಾ ಶಾಖೋತ್ಪನ್ನ ವಿದ್ಯುತ್ ಸ್ಥಾವರವು ವಾರ್ಷಿಕವಾಗಿ 20,000 ಟನ್ ಗಳಿಗಿತ ಹೆಚ್ಚು SO2 ಅನ್ನು ಹೊರಸೂಸುತ್ತದೆ. ಇದು ನಿಯಮ ಪಾಲಿಸುವ ಲಕ್ಷಾಂತರ ವಾಹನಗಳು ಹೊರಸೂಸುವ ಒಟ್ಟು ಮಾಲಿನ್ಯಕ್ಕೆ ಸಮಾನವಾಗಿದೆ.
ಜುಲೈ 2025 ರ ಪರಿಷ್ಕೃತ MoEFCC ಅಧಿಸೂಚನೆಯ ಮೊದಲು, FGD ಅಳವಡಿಸಿ ಸ್ಥಾವರಗಳನ್ನು ಸಜ್ಜುಗೊಳಿಸಲು ಸುಮಾರು 87,000 ಕೋಟಿಯಿಂದ 1,16,,000 ಕೋಟಿ ರೂಪಾಯಿಗಳ ಸಂಚಿತ ಬಂಡವಾಳ ವೆಚ್ಚದ ಅಗತ್ಯವಿತ್ತು. ದೇಶದ 78% ರಷ್ಟು ಸ್ಥಾವರಗಳನ್ನು ಹೊಂದಿರುವ ಸಿ ವರ್ಗಕ್ಕೆ ವಿನಾಯಿತಿ ನೀಡುವ ಮೂಲಕ, ಜನಾರೋಗ್ಯವನ್ನು ಬಲಿಕೊಟ್ಟು ಈ ಹೆಚ್ಚುವರಿ ಹಣದ ಹೂಡಿಕೆಯಿಂದ ಉದ್ಯಮಪತಿಗಳನ್ನು ಕಾಪಾಡಲಾಯಿತು!
ಜನಪರ ಸರ್ಕಾರದ ಜವಾಬ್ದಾರಿ
ಸರ್ಕಾರಕ್ಕೆ, ದೆಹಲಿಯನ್ನು ಇಂತಹ ಮಾನವ ನಿರ್ಮಿತ ಸಂಕಷ್ಟದಿಂದ ಮುಕ್ತಗೊಳಿಸಲು ನಿಜಕ್ಕೂ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವ ಜನಪರ ಮನಸ್ಸಿದ್ದರೆ, ಆಗ ಈ ಕೈಗಾರಿಕಾ ಮಾಲಿನ್ಯಕ್ಕೆ ತಡೆ ಹಾಕಬೇಕಾಗುತ್ತದೆ. ಈ ಸ್ಥಾವರಗಳಿಂದಾಗುವ ವಾಯು ಮಾಲಿನ್ಯದ ನೈಜ ದತ್ತಾಂಶವನ್ನು ಸಾರ್ವಜನಿಕರಿಗೆ ಮತ್ತು ಸ್ವತಂತ್ರ ಸಂಶೋಧಕರಿಗೆ ಪಾರದರ್ಶಕವಾಗಿ ಲಭ್ಯವಾಗುವಂತೆ ಮಾಡಬೇಕು. ಇದರಿಂದ ಕಡಿಮೆ-ವರದಿ ಮಾಡುವುದು ಮತ್ತು ಅಳವಡಿಸಲಾದ FGDಗಳನ್ನು ಕಾನೂನುಬಾಹಿರವಾಗಿ ಹೊರತು ಪಡಿಸುವುದನ್ನು ತಡೆಯಬಹುದು. ವಾಯು ಗುಣಮಟ್ಟ ಯೋಜನೆಯು, ಪೌರಸಭೆ-ಮಟ್ಟದ ವಾಹನ ನಿರ್ಬಂಧಗಳನ್ನು ನೆಚ್ಚಿಕೊಳ್ಳುವ ಬದಲಿಗೆ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಒಂದೇ ಏಕೀಕೃತ ಜಾರಿ ವಲಯದ ಅಡಿಯಲ್ಲಿ ತರುವ ವಿಧಾನಕ್ಕೆ ಬದಲಾಗಬೇಕು. ರಾಜಧಾನಿಯ ಸುತ್ತಲಿನ ಕೈಗಾರಿಕಾ ದೈತ್ಯರನ್ನು, ನಗರದೊಳಗೆ ವಾಸಿಸುವ ನಾಗರಿಕರನ್ನು ಒಳಪಡಿಸಿರುವ ಅದೇ ಒಂದೇ ಮಾನದಂಡಗಳಿಗೆ ಒಳಪಡಿಸಬೇಕು.
ಬಡಜನರ ಮೇಲಿನ ತೀವ್ರ ಹೊರೆ
ಆದರೆ, ಉದ್ಯಮಪತಿಗಳ ಮೇಲೆ FGD ಅಳವಡಿಸುವ ನಿರ್ಬಂಧ ಹೇರುವ ಬದಲಿಗೆ, ಈ ಆರ್ಥಿಕ ಹೊರೆಯನ್ನು ನೇರವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ, ಬಡಜನರ ಶ್ವಾಸಕೋಶದ ಮೇಲೆ ವರ್ಗಾಯಿಸಲಾಗುತ್ತಿದೆ; ಜನ ಹಣ, ಆರೋಗ್ಯ, ಜೀವ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ, ವಿದ್ಯುತ್ ಕಂಪನಿಗಳು ವಿದ್ಯುತ್ ದರ ಕಡಿಮೆಯಿಟ್ಟು ಜನರಿಗೆ ಅನುಕೂಲ ಮಾಡುತ್ತಿದ್ದೇವೆ ಎಂದು ವಿನಾಯಿತಿಗಳನ್ನು ಸಮರ್ಥಿಸಿಕೊಳ್ಳುತ್ತವೆ. ಎಂಥಾ ವಿತಂಡವಾದ!
ಹೊಣೆಗಾರಿಕೆಯ ಅಗತ್ಯ
ಸ್ವಚ್ಛ ಗಾಳಿಯನ್ನು ಐಚ್ಛಿಕ ಐಷಾರಾಮಿ ಎಂದು ಪರಿಗಣಿಸಲಾಗದು. ಕಟ್ಟುನಿಟ್ಟಾದ ಪರಿಸರ ನಿಯಮಗಳು, ವಾಯು ಮಾಲಿನ್ಯಕ್ಕೆ ಕೈಗಾರಿಕಾ ಉತ್ಪಾದಕರನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡುವವರೆಗೆ, ಈ ಮಾಲಿನ್ಯದ ಹೊರೆಯನ್ನು ಜನಸಾಮಾನ್ಯರೇ ಹೊರಬೇಕಾಗುತ್ತದೆ. ಇದು ಶ್ವಾಸಕೋಶದ ಕಾಯಿಲೆಗಳು, ಹೃದ್ರೋಗ ಮತ್ತು ಪಾರ್ಶ್ವವಾಯುವಿನಿಂದಾಗಿ ವರ್ಷಕ್ಕೆ ನೂರಾರು ಸಾವಿರ ಅಕಾಲಿಕ ಸಾವುಗಳಿಗೆ ಕಾರಣವಾಗುತ್ತದೆ. ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸಮಾಜದ ಎಲ್ಲಾ ವರ್ಗಗಳ ಸನ್ಮನಸ್ಸಿನ ಜನರು ಕೈಜೋಡಿಸಿ ಜನರ ಜೀವನದೊಂದಿಗಿನ ಇಂತಹ ಚೆಲ್ಲಾಟದ ವಿರುದ್ಧ ಧ್ವನಿ ಎತ್ತುವುದು ಅತ್ಯಗತ್ಯ.
