ರೆಸಾರ್ಟ್ ರಾಜಕಾರಣ

ಶಾಸಕರು ಪಕ್ಷಾಂತರಗೊಳ್ಳದಂತೆ ಅಥವಾ ಕದ್ದೊಯ್ಯುವವರಿಂದ ಅವರನ್ನು ಕಾಯಲು, ಅವರನ್ನು ದೂರದ ಎಸ್ಟೇಟ್‌ಗಳಲ್ಲಿ, ರೆಸಾರ್ಟ್ಗಳಲ್ಲಿ ‘ಕೂಡಿಡುವುದು’ ಮತ್ತು ಅಧಿಕೃತ ಕಚೇರಿಗಳ ಬದಲಿಗೆ ಖಾಸಗಿ ಸ್ಥಳಗಳಿಂದ ಆಡಳಿತ ನಡೆಸುವುದಕ್ಕೆ ‘ರೆಸಾರ್ಟ್ ರಾಜಕೀಯ’ ಎನ್ನುವುದು. ಇತ್ತೀಚಿನ ದಿನಗಳಲ್ಲಿ ಲಂಚಕ್ಕಾಗಿ, ಲಾಭದಾಯಕ ಸಂಪುಟ ದರ್ಜೆಯ ಹುದ್ದೆಗಳನ್ನು ಪಡೆಯಲು, ದುರಾಡಳಿತ ಅಥವಾ ಅಕ್ರಮ ಇವುಗಳ ಕುರಿತಾದ ಕಾನೂನು ತನಿಖೆಯಿಂದ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲೂ ಸಹ ಆಳುವ ಪಕ್ಷಗಳಿಗೆ ಪಕ್ಷಾಂತರ ಮಾಡುವುದು ಸರ್ವೇಸಮಾನ್ಯವಾಗಿದೆ.

ಪಕ್ಷಾಂತರ: ಪರವಾಗಿರುವ ವಾದಗಳೇನು?

ಶಾಸಕರನ್ನು ಕುರುಡು ವಿಧೇಯತೆ ತೋರಲು ಬಲವಂತ ಮಾಡಬಾರದು. ಪಕ್ಷದ ನಿಲುವು ಬದಲಾದರೆ ಅಥವಾ ಅದರ ನಾಯಕತ್ವ ಭ್ರಷ್ಟಗೊಂಡರೆ, ಜನಪ್ರತಿನಿಧಿಗಳಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುವ ಸ್ವಾತಂತ್ರö್ಯವಿರಬೇಕು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲದಿದ್ದಾಗ, ಶಾಸಕನಿಗೆ ತನ್ನ ನೈಜ ಅಸಮಾಧಾನವನ್ನು ವ್ಯಕ್ತಪಡಿಸಲು ಪಕ್ಷಾಂತರವೇ ಏಕೈಕ ಮಾರ್ಗವಾಗಬಹುದು. ಕೆಲವು ಸಂದರ್ಭಗಳಲ್ಲಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪಿಸಲು ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಉತ್ತಮವಾಗಿ ಸೇವೆ ಸಲ್ಲಿಸುವ ಮೈತ್ರಿಕೂಟದೊಂದಿಗೆ ಸೇರುವ ಪಕ್ಷಾಂತರವನ್ನು ನೈತಿಕ ಪ್ರತಿಭಟನೆ ಎಂದೂ ಪರಿಗಣಿಸಲಾಗುತ್ತದೆ. - ಇವೆಲ್ಲಾ ಪಕ್ಷಾಂತರದ ಪರವಾಗಿರುವ ವಾದಗಳು. ಕಿವಿಗೆ ಇವೆಲ್ಲಾ ಆಪ್ಯಾಯಮಾನವಾಗಿ ಇವೆ! ಆದರೆ, ಶಾಸಕ ಸ್ಥಾನಗಳನ್ನು ಉಳಿಸಿಕೊಂಡೇ ಮಾಡಲಾಗುವ ಇಂತಹ ಪಕ್ಷಾಂತರಗಳಿಗೆ ಅಧಿಕಾರದ ಹಾಗೂ ಹಣದ ಆಸೆಯೇ ಮೂಲ ಕಾರಣ ಎಂಬ ಕಟು ವಾಸ್ತವವಲ್ಲವೇ?

2014ರ ನಂತರ…..

ನಿಜವಾದ ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಬಹುಮತ ಪಡೆದ ಪಕ್ಷ ಅಥವಾ ಮೈತ್ರಿಕೂಟವು ಸರ್ಕಾರವನ್ನು ರಚಿಸುತ್ತದೆ. ಆದರೆ, ಸ್ವತಂತ್ರ ಭಾರತದಲ್ಲಿ ಪಕ್ಷಾಂತರಗಳು ಮತ್ತು ವಿಭಜನೆಗಳು ಈ ಸಮೀಕರಣವನ್ನು ಆಗಾಗ್ಗೆ ಬದಲಾಯಿಸಿವೆ. 1991ರ ಮುನ್ನ ಸಣ್ಣಪುಟ್ಟ ಪುಡಾರಿಗಳಿಗೆ ಸಾರ್ವಜನಿಕ ಹಣವನ್ನು ಲೂಟಿ ಹೊಡೆಯುವ ಅವಕಾಶ ಹೆಚ್ಚಿರಲಿಲ್ಲ. ಆದರೆ, ಜಾಗತೀಕರಣದ ನಂತರ ಗಣಿಗಾರಿಕೆ, ಕಟ್ಟಡ, ರಸ್ತೆ, ಸುರಂಗ ಮುಂತಾದವುಗಳ ನಿರ್ಮಾಣ ಕೆಲಸಗಳು, ಶಿಕ್ಷಣ-ಆರೋಗ್ಯಗಳ ಸೇವಾಕ್ಷೇತ್ರಗಳು - ಹೀಗೆ ಲೂಟಿ ಹೊಡೆಯಲು ರಾಜಕಾರಣಿಗಳಿಗೆ, ಹೆಚ್ಚಾಗಿ ಆಳುವ ಪಕ್ಷದವರಿಗೆ ಬೃಹತ್ ಅವಕಾಶಗಳು ಸೃಷ್ಟಿಯಾದವು; ಹಾಗಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ, ಯಾವುದೇ ವೈಚಾರಿಕತೆಗೆ ಬದ್ಧತೆ ಇಲ್ಲದ ಇವರ ಪಕ್ಷದಿಂದ ಪಕ್ಷಕ್ಕೆ ನೆಗೆದಾಟ ಶುರುವಾಯಿತು. 2014ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ ಈ ವಿನ್ಯಾಸವು ವಿಶಿಷ್ಟ ತಿರುವೊಂದನ್ನು ಪಡೆದುಕೊಂಡಿದೆ. ‘ಮೋದಿ ಅಲೆ’ಯನ್ನು ಏರಿ ಲಾಭ ಪಡೆಯಲು ಕಾಂಗ್ರೆಸ್‌ನ ಅನೇಕ ನಾಯಕರು ಬಿಜೆಪಿಗೆ ಜಿಗಿದದ್ದು, ಬಿಜೆಪಿಯ ಬೆಳವಣಿಗೆಗೆ ಪ್ರಚೋದನೆ ನೀಡಿತು. 2014ರಲ್ಲಿ ಕಾಂಗ್ರೆಸ್ ಲೋಕಸಭೆಯಲ್ಲಿ ಕೇವಲ 44 ಸ್ಥಾನಗಳಿಗೆ ಕುಸಿದಾಗ, ಅನೇಕ ಕಾಂಗ್ರೆಸ್ಸಿಗರು ಪಕ್ಷದಲ್ಲಿ ತಮಗೆ ಭವಿಷ್ಯವಿಲ್ಲ ಎಂದು ಭಾವಿಸಿ ಬೃಹತ್ ಸಂಖ್ಯೆಯಲ್ಲಿ ಬಿಜೆಪಿಗೆ ನೆಗೆದರು. ಇದು, ಹರಿಯಾಣ, ಅಸ್ಸಾಂ, ಉತ್ತರಾಖಂಡ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ನಿರ್ಣಾಯಕ ಬೆಳೆವಣಿಗೆಯಾಯಿತು. 2008ರಲ್ಲಿ ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ವನ್ನು ಯಶಸ್ವಿಯಾಗಿ ನಡೆಸಿದ್ದ ಬಿಜೆಪಿ, ಮತ್ತೆ, 2019ರಲ್ಲಿ 13 ಕಾಂಗ್ರೆಸ್ ಶಾಸಕರನ್ನು ಸೆಳೆದು ಅದನ್ನು ಪುನರಾವರ್ತಿಸಿತು. ಜೆಡಿಎಸ್‌ನ ಮೂವರು ಮತ್ತು ಕೆಜೆಪಿಯ ಒಬ್ಬ ಶಾಸಕರೊಂದಿಗೆ ಸೇರಿ, ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ಉರುಳಿಸಿತು. ಇದರಿಂದಾಗಿ, ಬಿಜೆಪಿಯು 2018ರಲ್ಲಿ ತಾನು ರಾಜ್ಯದಲ್ಲಿ ಕಳೆದುಕೊಂಡಿದ್ದ ಅಧಿಕಾರವನ್ನು ಮತ್ತೆ ಗಳಿಸಿತು. ವಿರೋಧ ಪಕ್ಷವೊಂದು ಸರ್ಕಾರ ರಚಿಸಬಹುದಾದ ಸನ್ನಿವೇಶಗಳಲ್ಲೂ ಸಹ, ಬಿಜೆಪಿಯ ವರಿಷ್ಠರು ಸಿಬಿಐ ಮತ್ತು ಇಡಿಗಳಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷದ ನಾಯಕರನ್ನು ಬೆದರಿಸಿ, ಅವರು ಪಕ್ಷ ಬದಲಾಯಿಸುವಂತೆ ಒತ್ತಡ ಹೇರಿದ್ದಾರೆ. 2014 ರಿಂದೀಚೆಗೆ, ಇಡಿ ಸಂಸ್ಥೆಯು ಬಿಜೆಪಿಯೇತರ ಪಕ್ಷಗಳ 115 ನಾಯಕರ ವಿರುದ್ಧ ತನಿಖೆ ನಡೆಸಿದೆ ಎಂದು ವರದಿಯಾಗಿದೆ. ಆದರೆ, ಅವರು ಬಿಜೆಪಿಗೆ ಸೇರಿದ ತಕ್ಷಣ, ಅವರ ಮೇಲಿದ್ದ ಎಲ್ಲಾ ಆರೋಪಗಳು ಶೈತ್ಯಾಗಾರವನ್ನು ಸೇರಿವೆ. ಹೀಗೆ ಬಿಜೆಪಿ ಒಂದು ‘ವಾಷಿಂಗ್ ಮೆಷಿನ್’ ಎಂಬ ನಾಣ್ಣುಡಿ ಜನಜನಿತವಾಗಿದೆ!

ಪ.ಬಂಗಾಳದ ಭೀಕರ ಪಕ್ಷಾಂತರ ರೋಗ!

‘SIR ಅಡಿಯಲ್ಲಿ ಸುಮಾರು 27ಲಕ್ಷ ಹೆಸರುಗಳನ್ನು ತೆಗೆದುಹಾಕುವುದರಿಂದ ಹಿಡಿದು ರಾಜ್ಯದ ಮುಖ್ಯ ಹುದ್ದೆಗಳನ್ನು ಬಿಜೆಪಿ ಪರ ಅಧಿಕಾರಿಗಳಿಂದ ಭರ್ತಿ ಮಾಡಿ, ಬಿಜೆಪಿ ಹೈಕಮಾಂಡ್ ಆದೇಶಗಳನ್ನು ಪಾಲಿಸುವ 2 ಲಕ್ಷ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಿ, ಏಕಸ್ವಾಮ್ಯ ಬಂಡವಾಳಶಾಹಿ ಸಂಸ್ಥೆಗಳಿಂದ ಬಂದ ಭಾರಿ ಪ್ರಮಾಣದ ಹಣವನ್ನು ಸುರಿದು ಮತ್ತು ಟಿಎಂಸಿ ಸರ್ಕಾರದ ದುರಾಡಳಿತದ ವಿರುದ್ಧದ ಜನತೆಯ ಅಸಮಾಧಾನವನ್ನು ಬಂಡವಾಳ ಮಾಡಿಕೊಂಡು, ಮಾಧ್ಯಮಗಳನ್ನು ಅದಕ್ಕಾಗಿ ಬಳಸಿಕೊಂಡು ಬಿಜೆಪಿಯು 2026 ರ ಏಪ್ರಿಲ್‌ನಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿತು. ತಕ್ಷಣವೇ ಅಲ್ಲಿ ಪಕ್ಷಾಂತರದ ಪರ್ವವೇ ಶುರುವಾಯಿತು! ಕೇವಲ 80 ಶಾಸಕರನ್ನು ಹೊಂದಿದ್ದ ಟಿಎಂಸಿಯ ದೌರ್ಬಲ್ಯದ ಪರಿಣಾಮವಾಗಿ, 60ಕ್ಕೂ ಹೆಚ್ಚು ಶಾಸಕರು ಅಸೆಂಬ್ಲಿಯಲ್ಲಿ ಪ್ರತ್ಯೇಕ ಗುಂಪು ರಚಿಸಿಕೊಳ್ಳಲು ಪಕ್ಷದಿಂದ ಹೊರಬಂದರು. ಈ ಕಾವು ಸಂಸತ್ತಿಗೂ ಹರಡಿತು. ಟಿಎಂಸಿ ಪಕ್ಷದ 28 ಸಂಸದರಲ್ಲಿ 20 ಮಂದಿ ಬಂಡಾಯವೆದ್ದು, ಲೋಕಸಭಾ ಸ್ಪೀಕರನ್ನು ಭೇಟಿಯಾಗಿ, ತಾವು ‘ರಾಷ್ಟ್ರವಾದಿ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ ಎಂಬ ಪ್ರಾದೇಶಿಕ ಸಂಘಟನೆಯೊಂದಿಗೆ ವಿಲೀನಗೊಂಡಿರುವುದಾಗಿ ತಿಳಿಸಿ, ತಮ್ಮನ್ನು ಪ್ರತ್ಯೇಕ ಬ್ಲಾಕ್ ಆಗಿ ಗುರುತಿಸುವಂತೆ ಕೋರಿದರು; ತಾವು ಆಳುವ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗುತ್ತೇವೆ ಎಂದೂ ಹೇಳಿದರು. ಟಿಎಂಸಿ ಸಂಸದರು ಶರಣಾಗಿ, ತೆವಳಿಕೊಂಡು ಬಿಜೆಪಿಗೆ ಸೇರ್ಪಡೆಯಾದ ರೀತಿ ನಮ್ಮ ಕಾಲದ ವಿಪರ್ಯಾಸದ ಸಂಕೇತವಾಗಿದೆ.

ಆಮ್ ಆದ್ಮಿ ಪಾರ್ಟಿಯಲ್ಲಿನ ಬಿರುಕು!

ಏಪ್ರಿಲ್‌ನಲ್ಲಿ, ರಾಜ್ಯಸಭೆಯ ಆಮ್ ಆದ್ಮಿ ಪಾರ್ಟಿಯ 7 ಮಂದಿ ಸಂಸದರು ಬಿಜೆಪಿ ಸೇರಿದರು. ಇದರಿಂದ ಎಎಪಿಯ ರಾಜ್ಯಸಭಾ ಬಲ 10 ರಿಂದ 3ಕ್ಕೆ ಕುಸಿಯಿತು. ಗಮನಾರ್ಹ ಸಂಗತಿಯೆಂದರೆ, ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಈ ಹಿಂದೆ ಆಡಳಿತಾರೂಢ ಬಿಜೆಪಿಯ ಕಟು ಟೀಕಾಕಾರರಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಮೋದಿಯವರನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಈ ವ್ಯಕ್ತಿ, ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಬಿಜೆಪಿ ಸೇರಿ ಮೋದಿಯ ದೃಢ ಆಡಳಿತ ಮತ್ತು ನಾಯಕತ್ವವನ್ನು ಹೊಗಳಲು ಹೇಗೆ ಸಾಧ್ಯವಾಯಿತು? ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶಗಳಲ್ಲೂ ಪಕ್ಷಾಂತರ ರೋಗವು ದಟ್ಟವಾಗಿದೆ.

ಕಾನೂನು ಮತ್ತು ನ್ಯಾಯಾಂಗ ಏನು ಹೇಳುತ್ತವೆ?

ಮೊದಲ ಪಕ್ಷಾಂತರ ನಿರೋಧಕ ಕಾಯ್ದೆಯನ್ನು 1985ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅಧಿಕಾರದ ಆಸೆಯಿಂದ ನಡೆಯುವ ಪಕ್ಷಾಂತರಗಳನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಆದರೆ, ಇದು ಜನಪ್ರತಿನಿಧಿಗಳು ಪಕ್ಷ ಬದಲಾಯಿಸುವುದನ್ನು ಕಾನೂನುಬಾಹಿರಗೊಳಿಸಲಿಲ್ಲ. 2003ರಲ್ಲಿ, ಈ ಕಾನೂನನ್ನು ತಿದ್ದುಪಡಿ ಮಾಡಲಾಯಿತು. ಶಾಸಕರು ಅನರ್ಹಗೊಳ್ಳದೆ ಪಕ್ಷ ಬದಲಾಯಿಸಲು ಬೇಕಾದ ಸಂಖ್ಯಾಬಲವನ್ನು 1/3 ರಿಂದ 2/3 ಭಾಗಕ್ಕೆ ಹೆಚ್ಚಿಸಲಾಯಿತು. ಜೊತೆಗೆ, ಅನರ್ಹತೆಯ ಅರ್ಜಿಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸ್ಪೀಕರ್‌ಗೆ ನೀಡಲಾಯಿತು; ಹೀಗೆ, ಕ್ರಮೇಣವಾಗಿ ಈ ಕಾನೂನು ಅವನತಿಯತ್ತ ಸಾಗುತ್ತಿದೆ. ನ್ಯಾಯಾಂಗವು ಈ ಅವನತಿಯನ್ನು ತಡೆಯಬಹುದಾಗಿತ್ತು, ಆದರೆ ಅದು ಅದಕ್ಕೆ ಕುಮ್ಮಕ್ಕು ನೀಡುತ್ತಿರುವಂತೆ ತೋರುತ್ತಿದೆ. 2019/ರ ಕರ್ನಾಟಕ ಮತ್ತು 2022ರ ಮಹಾರಾಷ್ಟ್ರ ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಈ ಕಾನೂನಿಗೆ ಪರಿಣಾಮಕಾರಿಯಾಗಿ ತಡೆ ಒಡ್ಡಿತು. ಇದರಿಂದಾಗಿ, ಬಿಜೆಪಿಯೇತರ ಸರ್ಕಾರಗಳು ಉರುಳಿ ಬಿಜೆಪಿ ಅಧಿಕಾರಕ್ಕೇರಲು ಸಾಧ್ಯವಾಯಿತು.

ಸಂಸತ್ತು - ವಿಧಾನಸಭೆ ಮಾರುಕಟ್ಟೆಯಾಗಿವೆ!

ಸಂಸದರು ಅಥವಾ ಶಾಸಕರನ್ನು ಹಣ ಕೊಟ್ಟು ಖರೀದಿಸಬಹುದಾದರೆ ಈ ಚುನಾವಣೆಗಳಿಗೆ ಅರ್ಥವಿದೆಯೇ? ಇಂದಿನ ಬಂಡವಾಳಶಾಹಿ ಆರ್ಥಿಕತೆಯ ನಿಯಮಗಳಿಗೆ ಅನುಗುಣವಾಗಿ, ಬಂಡವಾಳಶಾಹಿ ಸಂಸದರು, ಶಾಸಕರು ತಮ್ಮನ್ನು ತಾವೇ ಮಾರಾಟದ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ! ಚುನಾವಣೆಗೆ ಮೊದಲು ಎದುರಾಳಿ ಪಕ್ಷದ ವಿರುದ್ಧ ಕೆಸರೆರೆಚಾಟ ನಡೆಸುವ ಇವರು, ಪಕ್ಷ ಬದಲಾಯಿಸಿದ ತಕ್ಷಣ ರಾತ್ರೋರಾತ್ರಿ ಆ ಪಕ್ಷವನ್ನು ಹೊಗಳಲು ಶುರು ಮಾಡುತ್ತಾರೆ. ಇವರನ್ನು ನೋಡಿ ಓತಿಕ್ಯಾತವೂ ಸಹ ಅಸೂಯೆ ಪಡುವಂತಿದೆ! ಗೆದ್ದ ನಂತರ ಪಕ್ಷ ಬದಲಾಯಿಸುವುದು ಮತದಾರರ ನಂಬಿಕೆಗೆ ಬಗೆಯುವ ಅಪಚಾರವಾಗಿದೆ. ಪರಿಸ್ಥಿತಿ ಹೀಗಿರುವಾಗ, ನಾವು ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ ಎಂದು ಬೀಗುವುದರಲ್ಲಿ ಅರ್ಥವಿದೆಯೇ? ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲಾ ಜನರು ಈ ಫ್ಯಾಸೀವಾದಿ ಆಪತ್ತನ್ನು ಪ್ರತಿರೋಧಿಸಲು ಒಂದಾಗಬೇಕು. ಹಾಗೂ ಜನಪ್ರತಿನಿಧಿಗಳು ತಪ್ಪೆಸಗಿದಾಗ ಅವರನ್ನು ಅವಧಿಗೆ ಮುನ್ನವೇ ಹಿಂಪಡೆಯುವ ‘ರೈಟ್ ಟು ರಿಕಾಲ್’ (ಮತದಾರರಿಗೆ ಚುನಾಯಿತರನ್ನು ಕೆಳಗಿಳಿಸುವ ಹಕ್ಕು) ಪ್ರಜಾತಾಂತ್ರಿಕ ಪ್ರಕ್ರಿಯೆಗಾಗಿ ಆಗ್ರಹಿಸಬೇಕು. ಜೊತೆಗೆ, ಇಂತಹ ಹೇಯ ನಡೆಯನ್ನು ತಡೆಯುವ ಪ್ರಯತ್ನಗಳು, ಅಂತಿಮವಾಗಿ ಈ ಎಲ್ಲಾ ಕೆಡುಕುಗಳ ಮೂಲವಾಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ಕಿತ್ತೊಗೆಯುವತ್ತ ಮುಂದೆ ಸಾಗಬೇಕು.