ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಎರಡನೇ ಅಧಿಕಾರಾವಧಿಯು 2023 ರಲ್ಲಿ ಕಾಂಗ್ರೆಸ್ನ ಭರ್ಜರಿ ಗೆಲುವಿನಿಂದ ಆರಂಭವಾದದ್ದು, ರಾಜಕೀಯ ಒತ್ತಡಗಳು, ಭ್ರಷ್ಟಾಚಾರದ ಆರೋಪಗಳು, ಆಂತರಿಕ ಕಲಹಗಳಿಂದಾಗಿ ಆರಂಭದ ಉಮೇದು ಕುಂದಿ ವೈಫಲ್ಯಗಳೊಂದಿಗೆ 2026ರಲ್ಲಿ ಅಂತ್ಯಗೊಂಡಿತು.
ಕಳಚಿ ಬಿದ್ದ ಮುಖವಾಡ
ಪ್ರಗತಿಪರರು ಎನಿಸಿಕೊಂಡಿದ್ದ ಸಿದ್ದರಾಮಯ್ಯನವರನ್ನು ಎರಡನೇ ಅವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು, ಆರ್ಥಿಕ ಅಸಮತೋಲನ, ಮಹಿಳಾ ಪ್ರಾತಿನಿಧ್ಯದ ಕೊರತೆ, ಡಿ.ಕೆ.ಶಿವಕುಮಾರ್ರೊಂದಿಗೆ ಮುಖ್ಯಮಂತ್ರಿ ಕುರ್ಚಿಗಾಗಿ ಕಲಹ, ಇವುಗಳು ಬಹುವಾಗಿ ಕಾಡಿದ್ದವು. ಮುಡಾ ನಿವೇಶನ ಹಂಚಿಕೆ ವಿವಾದ, ದೇವನಹಳ್ಳಿ ರೈತರ ಜಮೀನು ವಶ, ತಮ್ಮ ಕಾಲಾವಧಿಯಲ್ಲಿ 2809 ರೈತರು ಬರಗಾಲದಿಂದ ಸಾವನಪ್ಪಿದರೂ ಪರಿಣಾಮಕಾರಿ ಕ್ರಮ ಕೈಗೊಳ್ಳದ್ದು, ನೀರಾವರಿ, ಬೆಂಬಲಬೆಲೆ, ಪ್ರವಾಹ ಪರಿಹಾರ ಇತ್ಯಾದಿಗಳಲ್ಲಿ ರೈತಪರ ನಿಲುವು ತೆಗೆದುಗೊಳ್ಳುವಲ್ಲಿ ವಿಫಲವಾದದ್ದು ಆ ಕಾಲದ ಮುಖ್ಯ ವಿದ್ಯಮಾನಗಳಾದವು. ಅದಕ್ಕೂ ಹಿಂದೆ ಬಿಜೆಪಿ ಅವಧಿಯಲ್ಲಿ ಜಾರಿಗೆ ಬಂದಿದ್ದ ‘ಮತಾಂತರ ವಿರೋಧಿ ಕಾನೂನು’, ‘ಗೋಹತ್ಯಾ ನಿಷೇಧ ಕಾಯ್ದೆ’ ಗಳನ್ನು ಹಿಂಪಡೆಯುವ ಭರವಸೆಯನ್ನು ಅವರು ಈಡೇರಿಸಲಿಲ್ಲ. ಆಗ, ಬಿಜೆಪಿಯು ‘40 ಪರ್ಸೆಂಟ್ ಸರ್ಕಾರ’ವನ್ನು ನಡೆಸಿತ್ತು ಎಂದು ಆರೋಪಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಕೂಡ ಅದೇ ಪದ್ಧತಿಯನ್ನು ಮುಂದುವರೆಸಿದೆ ಎಂದು ಗುತ್ತಿಗೆದಾರರ ಸಂಘವು ಮತ್ತೊಮ್ಮೆ ಆರೋಪಿಸಿತ್ತು. ರಾಜ್ಯ ಸಂಪುಟದ ಗರಿಷ್ಠ ಮಿತಿಯೇ 34 ಇರುವಾಗ ಆ ಸರ್ಕಾರವು 32 ಮಂದಿ ಶಾಸಕರನ್ನು ಸಚಿವರಾಗಿ, 43 ಮಂದಿಯನ್ನು ನಿಗಮ/ಮಂಡಳಿಗಳ ಅಧ್ಯಕ್ಷರನ್ನಾಗಿ, 9 ಮಂದಿ ಶಾಸಕರನ್ನು ಸಲಹೆಗಾರರಾಗಿ ಮಾಡಿ, ಅವರಿಗೆ ಕ್ಯಾಬಿನೆಟ್ ದರ್ಜೆಯನ್ನು ದಯಪಾಲಿಸಿತ್ತು. ಜೊತೆಗೆ, 54 ಮಂದಿ ಶಾಸಕರಲ್ಲದವರಿಗೆ ರಾಜ್ಯ ಸಚಿವ ದರ್ಜೆಯನ್ನು ನೀಡಲಾಗಿತ್ತು. ಈ ಆಯ್ಕೆಯಲ್ಲಿ ಅರ್ಹತೆ ಮತ್ತು ಗುಣಮಟ್ಟಕ್ಕಿಂತ ರಾಜಕೀಯ ಲೆಕ್ಕಾಚಾರಗಳೇ ಪ್ರಮುಖವಾಗಿ ಇದೊಂದು ರಾಜಕೀಯ ಬಳುವಳಿಯ ರೂಪದಲ್ಲಿ ಕೊಡಮಾಡಲ್ಪಟ್ಟಿತ್ತು. ಇನ್ನು ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಕೂಡಲೇ ಘೋಷಿಸಿದ ಬಹುಚರ್ಚಿತ ಗ್ಯಾರಂಟಿ ಯೋಜನೆಯನ್ನೇ ಅವರ ಅಧಿಕಾರಾವಧಿಯ ಯಶಸ್ಸಿನ ಮಾನದಂಡವಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಯೋಜನೆಗಳಿಗೆ 54 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟದ್ದೇ ಸರ್ಕಾರದ ಹೆಚ್ಚುಗಾರಿಕೆಯಾಗಿತ್ತು. ಆದರೆ ಇದಕ್ಕೆ ಪೂರಕವಾಗಿ ಆದಾಯ ಸಂಗ್ರಹಕ್ಕೆ ವಿನೂತನವಾದ ಹಾಗೂ ಜನಪರವಾದ ಕ್ರಮಗಳೇನೂ ಕಾಣಲೇ ಇಲ್ಲ. ತೈಲದ ಮೇಲಿನ ಸುಂಕ ಏರಿಕೆ, ವಾಹನ ಖರೀದಿಯ ಮೇಲೆ ಹೆಚ್ಚುವರಿ ತೆರಿಗೆ, ವಿದ್ಯುತ್ ಚಾಲಿತ ವಾಹನಗಳ ಮೇಲೆ ಜೀವಿತಾವಧಿ ತೆರಿಗೆ, ಹಾಗೂ ಮುದ್ರಾಂಕ ಶುಲ್ಕಗಳ ಹೆಚ್ಚಳ ಮಾಡುವ ಮೂಲಕ ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆ ಬಿತ್ತು. ಮದ್ಯದ ಮೇಲೆ 4 ಬಾರಿ ತೆರಿಗೆ ಹೆಚ್ಚಳ ಮಾಡಿಯೇ ಪ್ರಾಯಶ: ಗ್ಯಾರಂಟಿ ಯೋಜನೆಗಳಿಗೆ ಸರ್ಕಾರವು ಆದಾಯ ಸಂಗ್ರಹ ಮಾಡಿತ್ತು. ನೀರಾವರಿ ಯೋಜನೆಗಳು, ರಸ್ತೆ, ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮೂಲ ಸೌಕರ್ಯ ಹಾಗೂ ಇನ್ನಿತರ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣ ಇಲ್ಲ. ಸದ್ಯ 8.24 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ರಾಜ್ಯದ ಮೇಲೆ ಇದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟ ಕ್ರಮವಂತೂ ಸರ್ಕಾರಕ್ಕೆ ಒಂದು ದೊಡ್ಡ ಕಳಂಕವೇ ಆಯಿತು. 40,000 ಮಂದಿ ಆಶಾಗಳಿಗೆ ಅವರ ದುಡಿಮೆ ತಕ್ಕಂತೆ ಹಣ ಸಂದಾಯ ಮಾಡುವ ಬಗ್ಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲಿಲ್ಲ, ವಚನಭ್ರಷ್ಟವಾಯಿತು. ಹೀಗೆ, ಸಿದ್ದರಾಮಯ್ಯನವರ 3 ವರ್ಷದ ಅಧಿಕಾರಾವಧಿಯಲ್ಲಿ ಪ್ರಗತಿಪರ ನಿಲುವುಗಳು, ರೈತ ಪರ, ಕಾರ್ಮಿಕ ಪರ, ಬಡವರ ಪರ, ಸಾಮಾಜಿಕ ನ್ಯಾಯದ ವಿಚಾರಗಳಲ್ಲಿ ‘ಮಾತು ಮತ್ತು ಕೃತಿಗಳ’ ನಡುವಿನ ಭಾರಿ ಅಂತರ ಎದ್ದು ಕಾಣುತಿತ್ತು.
ಹೊಸ ಮುಖ್ಯಮಂತ್ರಿ-ಹಳೆಯ ಖಾಯಿಲೆಗಳು - ಸಂಪುಟ ರಚನೆ ಎಂಬ ಗಜಪ್ರಸವ
ಹೊಸ ಸರ್ಕಾರ ರಚನೆಯ ಸಮಯದಲ್ಲಿ ಮುಖ್ಯಮಂತ್ರಿಯೊಂದಿಗೆ ಜೂನ್ 3ರಂದು 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರೆ ಇನ್ನೂ ಬಾಕಿ ಉಳಿದಿದ್ದ 21 ಸ್ಥಾನಗಳ ಪೈಕಿ 20 ಸಚಿವರು ಪ್ರಮಾಣ ವಚನ ಸ್ವೀಕರಿಸಲು ದೊಡ್ಡ ಪೈಪೋಟಿ, ಗೊಂದಲ, ಅನಿಶ್ಚಿತತೆಗಳು ಆಗಿ ಹೋದವು. ಸುಮಾರು 2 ತಿಂಗಳ ಹಗ್ಗಜಗ್ಗಾಟದ ನಂತರ ಆಗಸ್ಟ್ 3 ರಂದು ಕಡೆಗೆ ಎರಡನೇ ಪಟ್ಟಿ ಸಿದ್ಧವಾಯಿತು. ಉಳಿದಿರುವ ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ಇನ್ನೂ ನಡೆಯುತ್ತಲೇ ಇದೆ. ಅದಾದ ನಂತರ ಖಾತೆ ಹಂಚಿಕೆಯೂ ತಡವಾಯಿತು. ಅಸಮಾಧಾನದ ಹೊಗೆ ಎದ್ದಿತು. ಒಟ್ಟಾರೆಯಾಗಿ ಹೈಕಮಾಂಡ್ ಬಣ, ಸಿದ್ದರಾಮಯ್ಯ ಬಣ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಪಾಲು ವಿಭಾಗ ನಡೆಯಿತು. ಅಧಿಕಾರ ಸಿಕ್ಕೊಡನೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಕಾಂಗ್ರೆಸ್ನ ಹಳೆಯ ಚಾಳಿಯ ಮುಂದುವರಿಕೆ ಇದು. ಅಲ್ಲದೆ, ಸಚಿವ ಸಂಪುಟ ಕಣ್ಣು ಬಿಡುವುದರೊಳಗಾಗಿ ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೆಂದ್ರ ಮತ್ತೊಮ್ಮೆ ರಾಜಿನಾಮೆ ನೀಡಬೇಕಾಯಿತು.
ನೇಮಕಾತಿ ಹಗರಣಗಳು - ನಾಚಿಕೆಗೇಡಿನ ಪರಮಾವಧಿ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ವಂತೂ ನೇಮಕಾತಿ ಹಗರಣಗಳ ಸರಮಾಲೆಯನ್ನೇ ಹೊತ್ತು ಕೂತಿದೆ. ಆಯೋಗದಿಂದ ಹೊರದೂಡಲ್ಪಟ್ಟ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ತನ್ನ ಮಗಳಿಗೆ ಉದ್ಯೋಗ ಕೊಡಿಸಲೆಂದು ಸುಳ್ಳು ಆದಾಯ ತೋರಿಸಿದ್ದು ಹಾಗೂ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದಿರುವುದು ಕೇವಲ ‘ಮಂಜುಗಡ್ಡೆಯ ಮೇಲ್ತುದಿ’ಯಂತೆ ಕಾಣುತ್ತದೆ. ಇತ್ತೀಚಿನವರೆಗೂ ತಲೆಮರೆಸಿಕೊಂಡಿದ್ದ ಮತ್ತು ಮಾರ್ಚ್ 2026ರವರೆಗೆ ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಬಸವರಾಜ ಕೆನ್ನಾಳೆ ಎಂಬ ಮಧ್ಯವರ್ತಿ ಜೊತೆಯಲ್ಲಿ ಸೇರಿಕೊಂಡು ಇವರೆಲ್ಲರೂ ನಡೆಸಿರಬಹುದಾಗಿರುವ ಅಕ್ರಮಗಳ ಬಗ್ಗೆ ಟನ್ಗಟ್ಟಲೆ ಸಾಕ್ಷಿ ದೊರೆಯುತ್ತಿದ್ದರೂ ಸಹ ಸರ್ಕಾರವು ಏನೂ ಆಗಿಲ್ಲ ಎನ್ನುವಂತೆ ಮುಗುಮ್ಮಾಗಿ ಇರುವುದಕ್ಕೆ ಕಾರಣವೇನು? ಇದು ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಏಟು-ಎದಿರೇಟು ಎನ್ನುವಂತೆ ‘ಹೇಳಿಕೆ ಹಣಾಹಣಿ’ಯ ಧಾರಾವಾಹಿ ನಡೆಯುತ್ತಿದೆ, ಅಷ್ಟೇ! ಅವರ ಆಣೆ-ಪ್ರಮಾಣಗಳಲ್ಲಿ ರಾಜ್ಯದ ಜನರಿಗೆ ಆಸಕ್ತಿಯೂ ಇಲ್ಲ. ಬೇಕಾಬಿಟ್ಟಿಯಾಗಿ ಒಂದು ಸಿಐಡಿ ತನಿಖೆಯನ್ನು ಆದೇಶಿಸಿ, ತನ್ನ ಜವಾಬ್ದಾರಿ ಮುಗಿಯಿತು ಎನ್ನುವಂತೆ ಸರ್ಕಾರವು ತೆಪ್ಪಗೆ ಇರುವುದನ್ನು ಗಮನಿಸಿದರೆ,ಇನ್ನೂ ಯಾರ್ಯಾರು ಹಗರಣಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡುವ ಉದ್ದೇಶ ಇದರ ಹಿಂದೆ ಇದೆಯೋ ಎಂಬ ಅನುಮಾನ ಮೂಡಿದರೆ ಅದು ಅಕಾರಣವಲ್ಲ. ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳ ಒಳಗುದಿ ಸರ್ಕಾರಕ್ಕೆ ಏಕೆ ಕಾಣುವುದಿಲ್ಲ? ಅಥವಾ ಕಾಣುವ ಪ್ರಾಮಾಣಿಕತೆ, ಅಂತ:ಕರಣ ಸರ್ಕಾರಕ್ಕೆ ಇದೆಯೇ? ಕೆಪಿಎಸ್ಸಿ ಹಗರಣಗಳನ್ನು ನೋಡಿದರೆ, ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ - ಈ ಮೂರೂ ಪಕ್ಷಗಳು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತವೆ. ಕೆಪಿಎಸ್ಸಿಯಲ್ಲಿ ಭದ್ರವಾಗಿ ಕುಳಿತಿರುವ ಮಂದಿಯನ್ನು, ಪರೀಕ್ಷಾ ವ್ಯವಸ್ಥೆಯ ನಿರ್ವಹಿಸುವವರನ್ನು, ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ, ಪರೀಕ್ಷಾ ಕೇಂದ್ರಗಳಿಗೆ ರವಾನಿಸುವ, ಪರೀಕ್ಷೆ ನಡೆಸುವ, ಮೌಖಿಕ ಪರೀಕ್ಷೆ ನಡೆಸುವ ಮಂದಿಯ ನೇಮಕಾತಿಯ ವಿಚಾರದಲ್ಲಿ ಈ ಮೂರು ಪಕ್ಷಗಳೂ ಕಳಂಕಿತವೇ! ವ್ಯಾಪಕ ಸ್ವಜನಪಕ್ಷಪಾತದ ಕೇಂದ್ರ ಕೆಪಿಎಸ್ಸಿ. ಎಲ್ಲ ಸರ್ಕಾರಗಳ ಪಾಲಿಗೆ ಕೆಪಿಎಸ್ಸಿ ಒಂದು ‘ಚಿನ್ನದ ಮೊಟ್ಟೆ ಇಡುವ ಕೋಳಿ’. ಅದನ್ನು ಪೋಷಿಸಿ, ಚೆನ್ನಾಗಿ ಸಲಹಿ ಎಲ್ಲಾ ಪಕ್ಷಗಳೂ ತಮ್ಮ ಯಥಾಶಕ್ತಿ ಬಳಸಿಕೊಂಡಿವೆ ಎಂದು ಉದ್ಯೋಗಾಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸುವುದರಲ್ಲಿ ಯಾವ ತಪ್ಪಿದೆ? ಲಕ್ಷಾಂತರ ಯುವಕ-ಯುವತಿಯರ ಕನಸಿಗೆ ಕೊಳ್ಳಿ ಇಟ್ಟು, ಬೇಕಾದ್ದನ್ನು ಮಾಡಿ, ಅದನ್ನು ತಾನು ನಿಭಾಯಿಸಿಕೊಳ್ಳಬಹುದೆಂದು ಕೆಪಿಎಸ್ಸಿ ಮಂದಿಗೆ ಆ ಧೈರ್ಯ ಬಂದಿರುವುದೇ ಸರ್ಕಾರಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲದಿಂದ ಅಲ್ಲವೇ! ಇಡೀ ವ್ಯವಸ್ಥೆಯನ್ನು ಹಾಗೆಯೇ ಯಥಾವತ್ತಾಗಿ ಉಳಿಸಿಕೊಂಡು ಕೆಪಿಎಸ್ಸಿಯ ಬದಲು ಕೆಇಏಯನ್ನು ಸೃಷ್ಟಿ ಮಾಡಿದಾಕ್ಷಣ ಸಮಸ್ಯೆ ಬಗೆಹರಿಯುವುದೇ?
ಎಸ್ಐಆರ್ ಗೊಂದಲಗಳು
ಎಸ್ಐಅರ್ ಪ್ರಕ್ರಿಯೆಯು ‘ದುರ್ಬಲರ ಮೇಲೆ ಅಕ್ರಮ’ ಎಂಬಂತಾಗಿದೆ. ಸುಮಾರು 65.85ಲಕ್ಷ ಮತದಾರರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದ್ದು, ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಬಿಎಲ್ಓಗಳಿಂದ ಆಗಿರುವ ಅವಾಂತರಗಳು, ಬರಗಾಲದಿಂದ ವಲಸೆ ಹೋದವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು ಇಡೀ ಪ್ರಕ್ರಿಯೆಯನ್ನು ಜನತಂತ್ರದ ‘ಅಣಕ’ ವನ್ನಾಗಿಸಿದೆ. ಇದ್ದ 5.54 ಕೋಟಿ ಮತದಾರರ ಪೈಕಿ 1.07ಮಂದಿಯನ್ನು ಪಟ್ಟಿಯಲ್ಲಿ ಇಲ್ಲದವರನ್ನಾಗಿಸಿ ಈಗ 44 ಲಕ್ಷ ಜನರಿಗೆ ನೋಟಿಸ್ ಕೊಟ್ಟು ಮತ್ತೆ ಅವರನ್ನು ಮತದಾರರ ಪಟ್ಟಿಗೆ ಸೇರಿಸುತ್ತೇವೆ ಎನ್ನುತ್ತಿರುವುದು ವ್ಯವಸ್ಥೆಯು ಜನರೊಂದಿಗೆ ನಡೆಸಿರುವ ಕುಚೋದ್ಯವಲ್ಲವೇ?
ಬರದಿಂದ ಕಂಗೆಟ್ಟಿದ್ದಾರೆ ಜನರು
ರಾಜ್ಯದ 236 ತಾಲ್ಲೂಕುಗಳಲ್ಲಿ 228 ತಾಲ್ಲೂಕುಗಳು ವಿವಿಧ ಪ್ರಮಾಣದಲ್ಲಿ ಬರ ಹಾಗೂ ಒಣಹವೆಯ ಬೇಗೆಯಿಂದ ನರಳುತ್ತಿದ್ದರೆ, ರಾಜ್ಯ ಸರ್ಕಾರವು ತಡವಾಗಿ 102 ತಾಲ್ಲೂಕುಗಳನ್ನು ಬರಪೀಡಿತವೆಂದು ಕಾಟಾಚಾರಕ್ಕೆ ಘೋಷಿಸಿ ತನ್ನ ಕೆಲಸ ಮುಗಿಯಿತು ಎನ್ನುವಂತೆ ಕೂತಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಬರದಿಂದ ಕಂಗೆಟ್ಟು ರೈತರು ಬೀದಿಗಿಳಿದಿದ್ದರೂ ಸರ್ಕಾರ ನಿರ್ಲಕ್ಷ್ಯದಿಂದಿದೆ. ‘ಕುರ್ಚಿ ಕಾಳಗ’ದಲ್ಲಿ ಮುಳುಗಿದೆ. ಮಂತ್ರಿ ಸ್ಥಾನ ಸಿಗದವರಿಗೆ ನಿಗಮ-ಮಂಡಳಿಗಳ ಹುದ್ದೆಗಳ ಮೂಲಕ ಸಮಾಧಾನ ಮಾಡುವ ಪ್ರಯತ್ನ ನಡೆಯುತ್ತಿದೆ. ಆಂತರಿಕ ಕಲಹ, ಭ್ರಷ್ಟಾಚಾರ ಆರೋಪಗಳು, ಬರಗಾಲದಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುವಲ್ಲಿನ ವೈಫಲ್ಯವು ಸರ್ಕಾರದ ನೈತಿಕ ಮತ್ತು ಆಡಳಿತಾತ್ಮಕ ಕುಸಿತವನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ. ತಮ್ಮದೇ ಪಕ್ಷದ ಹಿಂದಿನ ಆಡಳಿತಾವಧಿಯ ಸವಾಲುಗಳಾದ ‘ಕುಸಿದ ಆರ್ಥಿಕ ಸ್ಥಿತಿ’, ‘ಮೂಲಸೌಕರ್ಯದ ಕೊರತೆ’, ‘ಖಾಲಿಹುದ್ದೆಗಳ ನೇಮಕ’, ‘ಗ್ಯಾರಂಟಿ ಯೋಜನೆಯ ನಿರ್ವಹಣೆ ಇವುಗಳಿಗೆ ಹೊಸ ಸರ್ಕಾರದಿಂದ ಇನ್ನೂ ಯಾವುದೇ ಪರಿಣಾಮಕಾರಿ ಉತ್ತರ ದೊರೆತಿಲ್ಲ. ಯುವಜನರು ಉದ್ಯೋಗ ಕೇಳಿಕೊಂಡು ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ. ಅಭಿವೃದ್ದಿ-ಬದಲಾವಣೆ ಇವೆಲ್ಲವೂ ಇಂದು ಕ್ಲೀಷೆಯ ಮಾತಾಗಿವೆ.
ಹೊಸ ಘೋಷಣೆಗಳು - ವಿವಾದಗಳು
ಬೆಂಗಳೂರಿನ ವಾಹನ ದಟ್ಟಣೆ, ಹಳ್ಳ ಬಿದ್ದ ರಸ್ತೆಗಳು, ಮಳೆಗಾಲದ ಪ್ರವಾಹ ಮತ್ತು ಕಸದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ, ‘ಬ್ರಾಂಡ್ ಬೆಂಗಳೂರು’ ಘೋಷಣೆಯನ್ನು ವಾಸ್ತವವಾಗಿಸಲು ಗ್ರೇಟರ್ ಬೆಂಗಳೂರು ಸ್ಥಾಪನೆ ಎಂದು ಸರ್ಕಾರವು ಭಾವಿಸಿದೆ. ಜೊತೆಗೆ ಸುರಂಗ ರಸ್ತೆ (Tunnel Road), ಸ್ಕೆೈಡೆಕ್ (Sky Deck) ಮತ್ತು ಬಿಡದಿ ಟೌನ್ಶಿಪ್ನ ನಿರ್ಮಾಣ ಸೇರಿದಂತೆ 1.5 ಲಕ್ಷ ಕೋಟಿ ರೂಪಾಯಿಗಳ ಯೋಜನೆಗೆ ಹಣ ಹೊಂದಿಸಬೇಕಿದೆ. ಜೊತೆಗೆ ಲಾಲ್ಬಾಗ್ ಸೇರಿದಂತೆ ಸಾರ್ವಜನಿಕ ಉದ್ಯಾನವನಗಳ ಶೇ.5 ರಷ್ಟು ಜಾಗವನ್ನು ಪರಭಾರೆ ಮಾಡುವ ಮಸೂದೆಯನ್ನು ತರಾತುರಿಯಲ್ಲಿ ತಂದು ಜನರು ಪ್ರತಿರೋಧ ತೋರಿದಾಗ ಬಾಲಸುಟ್ಟ ಬೆಕ್ಕಿನಂತೆ ವಾಪಸ್ಸು ಪಡೆಯಲಾಗಿದ್ದರೂ ಸಹ ಅದು ಮತ್ತೆ ಬಂದೆರಗುವ ಪೆಡಂಭೂತವೇ ಆಗಿದೆ. ಇವೆಲ್ಲ ಯೋಜನೆಗಳಿಗೆ ರೈತರಿಂದ, ಸಾರ್ವಜನಿಕರಿಂದ, ಪರಿಸರವಾದಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಸರಿಯಾದ ಪರ್ಯಾಯ ವ್ಯವಸ್ಥೆ ಮಾಡದೆ, ಯೋಜನೆ ರೂಪಿಸದೆ ರಾಜ್ಯದಾದ್ಯಂತ ನಡೆದಿರುವ ತೆರವು ಕಾರ್ಯಾಚರಣೆಯಿಂದ ಹಲವಾರು ಜನರ ಜೀವನಾಧಾರವನ್ನು ಕಸಿದುಕೊಂಡಂತಾಗಿದೆ. ಇದರ ಸುತ್ತ ಇರುವ ಹಲವು ಗೊಂದಲಗಳಿಗೆ ಇನ್ನೂ ಉತ್ತರ ಬೇಕಿದೆ.

ವಿರೋಧ ಪಕ್ಷಗಳ ಪಾದಯಾತ್ರೆ ಹೋರಾಟಗಳೆಂಬ ಪ್ರಹಸನ
ಇಷ್ಟೆಲ್ಲಾ ಜನವಿರೋಧಿ ನೀತಿಗಳು ಢಾಳಾಗಿ ಕಾಣುತ್ತಿದ್ದರೂ ಸಹ ನಾಗೇಂದ್ರ ರಾಜೀನಾಮೆ ವಿಚಾರವೊಂದನ್ನು ಮಾತ್ರ ಹಿಡಿದುಕೊಂಡು ವಿರೋಧ ಪಕ್ಷವಾದ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ಮಾಡುತ್ತಿದೆ. ಹಾಗೇ ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರವಾಗಲಿ, ಈ ಪಾದಯಾತ್ರೆಯ ನಾಯಕತ್ವದಲ್ಲಿರುವ ಪ್ರಮುಖರಾಗಲಿ ಭ್ರಷ್ಟಾಚಾರದಿಂದ ಮುಕ್ತರೇ? ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್-ಬಿಜೆಪಿಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಹಲವಾರು ಸಮಸ್ಯೆಗಳಿಂದ ಜನತೆ ಬಳಲಿ ಬೆಂಡಾಗುತ್ತಿರುವಾಗ ಅವುಗಳ ಕುರಿತು ಜನಾಂದೋಲನವನ್ನು ಕಟ್ಟುವ ಬದಲು, ರಾಜಕೀಯದ ಉದ್ದೇಶಕ್ಕಾಗಿ ಪಾದಯಾತ್ರೆ ನಡೆಸುವುದು ಪ್ರಹಸನವೇ ಸರಿ. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಅವರನ್ನು ಬೀದಿಗೆ ತಳ್ಳಿ ತಾವೇ ಒಪ್ಪಿದ್ದ ಬಿಡದಿ ಟೌನ್ಶಿಪ್ ಯೋಜನೆಯ ವಿರುದ್ಧ ಜನತಾದಳದ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಅನ್ನಿಸಿದಾಗಲೆಲ್ಲಾ ಉಗ್ರ (?) ಹೋರಾಟಕ್ಕೆ ಇಳಿದಿರುವವರು. ಬಿಡದಿ ಟೌನ್ಶಿಪ್ ಹೋರಾಟದಲ್ಲಿ ಮಿತ್ರ ಪಕ್ಷ ಬಿಜೆಪಿಯು ನಿರಾಸಕ್ತಿ ತೋರಿದ್ದರಿಂದ, ಬಿಜೆಪಿಯ ಪಾದಯಾತ್ರೆಯಲ್ಲಿ ಜನತಾದಳವು ನಿರಾಸಕ್ತಿ ತೋರುತ್ತಿದೆ. ಒಟ್ಟಾರೆ ಜನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮುನ್ನೆಲೆಗೆ ತರಬೇಕಿದ್ದ ಎರಡೂ ಪ್ರಮುಖ ವಿರೋಧ ಪಕ್ಷಗಳು ಸಂಪೂರ್ಣವಾಗಿ ಸ್ವಹಿತದ ರಾಜಕಾರಣದಲ್ಲಿ ಮುಳುಗಿವೆ. ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ‘ವೈಫಲ್ಯಗಳು’ ಆಕಸ್ಮಿಕವಲ್ಲ. ಅವು ಬಂಡವಾಳಶಾಹಿ ವ್ಯವಸ್ಥೆಯ ಹುಳುಕುಗಳು. ಸರ್ಕಾರಗಳು ಹಂತಹಂತವಾಗಿ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳ ಜವಾಬ್ದಾರಿಗಳಿಂದ ನುಣಿಚಿಕೊಂಡು, ಖಾಸಗೀಕರಣವನ್ನು ಉತ್ತೇಜಿಸುವುದು ನಮ್ಮನ್ನಾಳುವ ಸರ್ಕಾರಗಳ ಜಾಗತೀಕರಣ ನೀತಿಯ ಭಾಗವಾಗಿದೆ. ಇದಕ್ಕೆ ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿವೆ. ಹಾಗಾಗಿ ನೈಜ ಬದಲಾವಣೆಯು ‘ಆಡಳಿತಗಾರರ ಬದಲಾವಣೆ’ಯ ಮೂಲಕ ಬರುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಹುಳುಕುಗಳನ್ನು ಬಯಲು ಮಾಡುವ, ಅವರ ಹುನ್ನಾರಗಳ ವಿರುದ್ಧ ಸವಾಲೆಸೆದು ಹೋರಾಟ ಕಟ್ಟುವ ಶೋಷಿತವರ್ಗಗಳ ಕ್ರಾಂತಿಕಾರಿ ಹೋರಾಟದಿಂದ ಮಾತ್ರ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ.
