ತಲೆಬಾಗದ ಕ್ಯೂಬಾ ಮತ್ತು ಅದರ ಸ್ಥಾಪಕ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಮುಗಿಸಲು ಅಮೆರಿಕಾದ ಸಂಚುಗಳ ಕೆಲವು ಸಂಗತಿಗಳು ಹೀಗಿವೆ: 1959ರಲ್ಲಿ ಸಮಾಜವಾದ ಸ್ವೀಕರಿಸಿದ ಕ್ಯೂಬಾ ಮೇಲೆ ಅಮೆರಿಕಾ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಕಠಿಣ ಆರ್ಥಿಕ ದಿಗ್ಬಂಧನ ಹೇರಿದೆ. ಫಿಡೆಲ್ ಕ್ಯಾಸ್ಟ್ರೋರವರನ್ನು ಹತ್ಯೆ ಮಾಡಲು 634 ಬಾರಿ ಸಂಚು ರೂಪಿಸಲಾಗಿತ್ತು. 1960 ಮತ್ತು 1965ರ ನಡುವೆ ಫಿಡೆಲ್ ಕ್ಯಾಸ್ಟ್ರೋರನ್ನು ಹತ್ಯೆ ಮಾಡಲು ಸಿಐಎ (CIA) ಕನಿಷ್ಠ ೮ ಬಾರಿ ಯತ್ನಿಸಿತ್ತು ಎಂಬುದನ್ನು 1975ರಲ್ಲಿ ಅಮೆರಿಕದ ಸೆನೆಟ್ ವಿಚಾರಣೆಯೊಂದು ದೃಢಪಡಿಸಿತ್ತು. ಅಮೆರಿಕಾ ಹೇರಿರುವ ಇಂಧನ ದಿಗ್ಬಂಧನದಿಂದಾಗಿ ಕ್ಯೂಬಾದಲ್ಲಿ ಭೀಕರ ವಿದ್ಯುತ್ ಕೊರತೆ, ಆಹಾರ ಕೊರತೆ ಹಾಗೂ ಸಾರಿಗೆಯಲ್ಲಿ ವಿಪರೀತ ವ್ಯತ್ಯಯ ಉಂಟಾಗಿದೆ. ವಿಶ್ವಕ್ಕೇ ಮಾದರಿಯಾಗಿರುವ ಅತ್ಯುತ್ತಮ ಉಚಿತ ವೈದ್ಯಕೀಯ ಸೇವೆ ನೀಡಿರುವ ಹಾಗೂ ವಿಶ್ವದ ಏಕೈಕ ಸ್ವದೇಶಿ ಕೋವಿಡ್ ಲಸಿಕೆ ತಯಾರಿಸಿ, ವಿಶ್ವಕ್ಕೆ ಬಳುವಳಿ ನೀಡಿದ ಕ್ಯೂಬಾದ ಆರೋಗ್ಯ ವ್ಯವಸ್ಥೆಯೇ ಈಗ ಭಯಾನಕ ಅಪಾಯದಲ್ಲಿ ಸಿಲುಕಿದೆ. ಜಗತ್ತಿನ 180ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರವು ನೀಡಿದ ಮಾನವೀಯ ರಾಷ್ಟ್ರ ಕ್ಯೂಬಾದ ಧ್ವಂಸಕ್ಕಾಗಿ ಅಮೆರಿಕಾ ಕುಂಟು ನೆಪಗಳನ್ನು ಹುಡುಕುತ್ತಿದೆ. ಅಮೆರಿಕಾದ ಮಿಲಿಟರಿ ಬೆದರಿಕೆಗೆ ಜಗ್ಗದ ಕ್ಯೂಬನ್ನರು ‘ಮಾತೃಭೂಮಿ ಅಥವಾ ಸಾವು, ನಾವು ಗೆಲ್ಲುತ್ತೇವೆ’ ಎಂಬ ಘೋಷಣೆಯೊಂದಿಗೆ ಪ್ರತಿರೋಧಕ್ಕೆ ಸನ್ನದ್ಧರಾಗಿದ್ದಾರೆ. ಕ್ಯಾರಿಬಿಯನ್ ದೇಶಗಳಲ್ಲಿ ಒಂದಾದ ಕ್ಯೂಬಾ, 1959 ರಲ್ಲಿ ಸಮಾಜವಾದವನ್ನು ಅಳವಡಿಸಿಕೊಂಡಿತು. ಅಂದಿನಿಂದ ಸಾಮ್ರಾಜ್ಯಶಾಹಿ ಅಮೆರಿಕಾದ ಕೆಂಗಣ್ಣಿಗೆ ಕ್ಯೂಬಾ ತುತ್ತಾಗಿ ಹಣ್ಣಾಗಿದೆ. 1959 ರಲ್ಲಿ ಕ್ಯೂಬಾ ಕ್ರಾಂತಿಯ ಶಿಲ್ಪಿಯಾದ ಫಿಡೆಲ್ ಕ್ಯಾಸ್ಟ್ರೋರವರ ಕ್ರಾಂತಿಕಾರಿ ಸರ್ಕಾರವು ಕ್ಯೂಬಾ ದ್ವೀಪದ ಸಂಸ್ಕೃತಿ, ರಾಜಕೀಯ ಮತ್ತು ಆರ್ಥಿಕತೆಯ ಮೇಲಿದ್ದ ಅಮೆರಿಕದ ಪ್ರಭಾವದಿಂದಾಗಿ ಅದು ಅಮೆರಿಕಾ ಸಂಸ್ಥಾನದ ಇನ್ನೊಂದು ಪ್ರದೇಶವೆಂಬಂತಾಗಿದ್ದಾಗ ಮತ್ತು ಆ ಮೂಲಕ ಕ್ಯೂಬನ್ನರಲ್ಲಿಯೇ ಬೆಳೆದಿದ್ದ ಆತ್ಮಸಂಶಯದ ಮನೋವೃತ್ತಿಯನ್ನು ತೊಡೆದು ಹಾಕಿ, “ಕ್ಯೂಬಾವನ್ನು ಕ್ಯೂಬಾದಂತೆ ಮಾಡುವುದೇ ಕ್ರಾಂತಿಯ ಗುರಿಯಾಗಿದೆ” ಎಂದು ಸಾರಿತ್ತು.
ಆರು ದಶಕಗಳ ಕಠಿಣ ಆರ್ಥಿಕ ದಿಗ್ಬಂಧನ
ಆರು ದಶಕಗಳ ಕಾಲ ಕ್ಯೂಬಾದೆಡೆಗೆ ಅಮೆರಿಕಾ ವೈರತ್ವವನ್ನು ಸಾಧಿಸಿಕೊಂಡು ಬಂದಿದೆ. ತನ್ನ ಮೂಗಿನಡಿಯಲ್ಲಿಯೇ ಸಮಾಜವಾದಿ ಕ್ರಾಂತಿಯು ವಿಜಯ ಸಾಧಿಸಿದ್ದರಿಂದ ಅಮೆರಿಕಾ ಕ್ಯೂಬಾವನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಫಿಡೆಲ್ ಕ್ಯಾಸ್ಟ್ರೋ ಸರಿಯಾಗಿಯೇ ಗುರುತಿಸಿದ್ದರು. ಅನೇಕಾನೇಕ ವಿಧಾನಗಳ ಮೂಲಕ ಪೆಂಟಗನ್ (ಅಮೆರಿಕಾದ ಮಿಲಿಟರಿ ಕಾರಸ್ಥಾನ) ಆಡಳಿತಗಾರರು ಕ್ಯೂಬಾವನ್ನು ಕಬಳಿಸಲು ಎಡೆಬಿಡದೆ ಸಂಚುಗಳನ್ನು ರೂಪಿಸಿದರು. ಅಮೆರಿಕಾದ ಆರ್ಥಿಕ ದಿಗ್ಬಂಧನ ನೀತಿಯಿಂದಾಗಿ ಹಸಿವು, ಬಳಲಿಕೆಯಿಂದ ಕ್ಯೂಬಾ ಕಂಗೆಟ್ಟಿದ್ದರೂ ಸಹ ಅಲ್ಲಿನ ಸರ್ಕಾರವನ್ನು ಕಿತ್ತೊಗೆಯುವ ಅಮೆರಿಕಾದ ನೀತಿಯು ಸೋತು ಸುಣ್ಣವಾಗಿದೆ. ಫಿಡೆಲ್ ಕ್ಯಾಸ್ಟ್ರೋರವರನ್ನು ಹತ್ಯೆ ಮಾಡುವುದು ಅಮೆರಿಕಾದ ಪ್ರಮುಖ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು! ಇದು ಅಮೆರಿಕಾದ ಜನತಂತ್ರದ ವಿಕೃತವಾಗಿರುವ ನೈಜ ಮುಖ! ಆದರೆ, ಇದ್ಯಾವುದೂ ಫಲ ನೀಡಿಲ್ಲ. ಕ್ಯೂಬಾ ತೋರಿರುವ ಅಚಲತೆ, ವಿರೋಧ ಸಹಿಷ್ಣುತೆ ಹಾಗೂ ಪ್ರತಿರೋಧವು ಈ ಯುಗದ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಕ್ಕೆ ಒಂದು ಮಾದರಿಯಾಗಿದೆ.
ಕ್ಯೂಬಾ ಮೇಲೆ ಮತ್ತೆ ಮತ್ತೆ ಆಕ್ರಮಣದ ಬೆದರಿಕೆ ಒಡ್ಡಿರುವ ಟ್ರಂಪ್
ಹಿಂದೆ ಅಮೆರಿಕಾದ ಅಧ್ಯಕ್ಷರಾಗಿದ್ದವರು ಕ್ಯೂಬಾ ಕುರಿತು ಮಾತನಾಡುವಾಗ ತುಸು ಎಚ್ಚರಿಕೆಯನ್ನು ವಹಿಸುತ್ತಿದ್ದರು. ಆದರೆ ಈಗ ಟ್ರಂಪ್, “ನಾನು ಕ್ಯೂಬಾಗೆ ಸಂಬಂಧಿಸಿದಂತೆ ಏನು ಬೇಕಾದರೂ ಮಾಡಬಲ್ಲೆ” ಎಂದು ದರ್ಪ ತೋರುವುದು ಸರ್ವೇಸಾಮಾನ್ಯವಾಗಿದೆ. ಅಮೆರಿಕಾದ ರಾಷ್ಟ್ರೀಯ ಸುಭದ್ರತೆ ಹಾಗೂ ಆರ್ಥಿಕತೆಗೆ ಕ್ಯೂಬಾದಿಂದ ಬಹು ದೊಡ್ಡ ಅಪಾಯವಿದೆ, ಅದಕ್ಕಾಗಿ, ಹವಾನಾದೊಂದಿಗೆ ತೈಲ ವ್ಯಾಪಾರ ಮಾಡುತ್ತಿರುವ ದೇಶಗಳ ಮೇಲೆ ವಿಪರೀತ ತೆರಿಗೆಗಳನ್ನು ಹೇರುವುದಾಗಿ ಟ್ರಂಪ್ ಸರ್ಕಾರ ಧಮ್ಕಿ ಹಾಕಿದೆ! ವೆನಜು಼ವೆಲಾ ಹಾಗೂ ಮೆಕ್ಸಿಕೊ ದೇಶಗಳು ಕ್ಯೂಬಾಗೆ ತೈಲ ಸರಬರಾಜು ಮಾಡುವುದನ್ನು ತಡೆ ಹಿಡಿದು ಟ್ರಂಪ್ ಸರ್ಕಾರವು ಸಂಭ್ರಮಿಸುತ್ತಿದೆ.
ಆರ್ಥಿಕ ದಿಗ್ಬಂಧನದ ಭೀಕರ ಪರಿಣಾಮಗಳು
2025ರಲ್ಲಿ ಕ್ಯೂಬಾ, ವಿಶ್ವಸಂಸ್ಥೆಗೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಅಮೆರಿಕಾ ವಿಧಿಸಿರುವ ಅನ್ಯಾಯಯುತ ದಿಗ್ಬಂಧನದಿಂದ 170 ಬಿಲಿಯನ್ ಡಾಲರ್ಗಿಂತ (ರೂ.16.32 ಲಕ್ಷ ಕೋಟಿ) ಹೆಚ್ಚು ನಷ್ಟ ಉಂಟಾಗಿದೆ ಎಂದು ತಿಳಿಸಿದೆ. ಪ್ರತಿ ವರ್ಷವೂ ಈ ನಷ್ಟವು ಹೆಚ್ಚಾಗುತ್ತಲೇ ಇದೆ. ಆರ್ಥಿಕ ದಿಗ್ಬಂಧನದ ಜೊತೆಗೆ ದಾಳಿಯ ಯತ್ನಗಳು, ರಹಸ್ಯ ಒಳಸಂಚುಗಳು ನಡೆಯುತ್ತಿವೆ. ಈ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾರ್ವತ್ರಿಕ ಶಿಕ್ಷಣ, ವ್ಯಾಪಾರ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಜೈವಿಕ ತಂತ್ರಜ್ಞಾನದ ಸಂಶೋಧನೆಗಳು ಹಾಗೂ ಮುಂತಾದ ಕ್ಷೇತ್ರಗಳಲ್ಲಿ, ಹಲವು ಮುಂದುವರೆದ ದೇಶಗಳಿಗೆ ಸರಿಸಮನಾದ ಸಾಧನೆಯನ್ನು ಕ್ಯೂಬಾ ಮಾಡಿತು. ಆದರೆ, ಇದೀಗ ಇಂಧನದ ಕೊರತೆಯಿಂದಾಗಿ ಇಡೀ ದೇಶವೇ ಆಹಾರದ ಬಿಕ್ಕಟ್ಟಿನಲ್ಲಿ ಸಿಲುಕಿದೆ. ತೈಲದ ಕೊರತೆಯಿಂದ ಟ್ರ್ಯಾಕ್ಟರ್ಗಳ ಬಳಕೆ, ಕೃಷಿ ಚಟುವಟಿಕೆಗಳು, ವಸ್ತುಗಳ ಸಾಗಾಣಿಕೆಗೆ ತೀವ್ರ ಅಡಚಣೆ ಉಂಟಾಗಿದೆ. ಯಂತ್ರಗಳನ್ನು ಬಳಸಲು ಆಗದೆ, ರೈತರು ದೈಹಿಕ ಶ್ರಮವನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಇಳುವರಿ ಕುಸಿದಿದೆ. 15 ನಿಮಿಷಗಳಲ್ಲಿ ಮಾಡಬಹುದಾದ ಕೆಲಸಕ್ಕೆ ಈಗ ಮೂರು ದಿನ ಬೇಕಾಗುತ್ತಿದೆ. ಆಹಾರದ ಉತ್ಪನ್ನಗಳ ಬೆಳೆ ಕಡಿಮೆಯಾಗಿದೆ, ಮಕ್ಕಳಿಗೆ ಹಾಲು ಸರಬರಾಜು ಮಾಡಲಾಗುತ್ತಿಲ್ಲ. ಆಮದು ಮಾಡಿಕೊಂಡ ತೈಲದ ಮೇಲೆ ವಿದ್ಯುತ್ ಸರಬರಾಜು ಅವಲಂಬಿತವಾಗಿರುವ ಈ ದೇಶದಲ್ಲಿ ಇಡೀ ದೇಶವೇ ಕತ್ತಲಲ್ಲಿ ಮುಳುಗಿದೆ. ಅಡುಗೆ ಅನಿಲವು ದುರ್ಲಭವಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸಹ ಸಂಕಷ್ಟದಲ್ಲಿದೆ. ಒಳಚರಂಡಿ ಮೂಲಸೌಕರ್ಯಗಳು, ನೀರು ಸರಬರಾಜು ಇತ್ಯಾದಿ ಸಹ ಅನಿಶ್ಚಿತತೆ ಎದುರಿಸುತ್ತಿವೆ.
ವಿಶ್ವವಿಖ್ಯಾತ ಜನಾರೋಗ್ಯ ವ್ಯವಸ್ಥೆ ತೀವ್ರ ಅಪಾಯದಲ್ಲಿ…
ಎಲ್ಲಾ ಅಡೆತಡೆಗಳ ನಡುವೆಯೂ ಕ್ಯೂಬಾ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು. ಇದು ವಿಶ್ವದಲ್ಲಿ ಬಹಳ ದೊಡ್ಡಮಟ್ಟದ ಅಂತರರಾಷ್ಟ್ರೀಯ ವೈದ್ಯಕೀಯ ಐಕಮತ್ಯವನ್ನು ಸಾಧಿಸಿತು. ಕ್ಯೂಬಾದಲ್ಲಿ ವೈದ್ಯಕೀಯ ಸೇವೆಯು ಸಂಪೂರ್ಣ ಉಚಿತ. ಸ್ವದೇಶಿ ಕೋವಿಡ್-19 ವ್ಯಾಕ್ಸಿನ್ನನ್ನು ತಯಾರಿಸಿದ ಏಕೈಕ ದೇಶ ಕ್ಯೂಬಾ! ಕ್ಯಾನ್ಸರ್ ಗುಣಪಡಿಸಲು ಮತ್ತು ಮೆದುಳು ಜ್ವರ ನಿಯಂತ್ರಿಸಲು ವೈದ್ಯಕೀಯ ಸಂಶೋಧನೆಗಳನ್ನು ನಡೆಸಿ, ಸಾಧನೆಗಳನ್ನು ಮಾಡಿದೆ. ಅಲ್ಲಿ ಪ್ರತಿ 1000 ನಾಗರಿಕರಿಗೆ 8 ಮಂದಿ ವೈದ್ಯರು ಲಭ್ಯವಿದ್ದಾರೆ. ಅಮೆರಿಕಾ ಸೇರಿದಂತೆ ಇನ್ನಿತರ ಯಾವ ದೇಶವೂ ಈ ಅನುಪಾತದಲ್ಲಿ ವೈದ್ಯರನ್ನು ಹೊಂದಿಲ್ಲ. ಈಗ ಇಂತಹ ಆರೋಗ್ಯ ವ್ಯವಸ್ಥೆಯು ಅಪಾಯದಲ್ಲಿದೆ. ಆಂಬುಲೆನ್ಸ್ ಗಳ ಸಂಚಾರ ನಿಂತಿದೆ, ವಿದ್ಯುತ್ ಸರಬರಾಜಿನ ಕೊರತೆಯಿಂದಾಗಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿಲ್ಲ, ರೆಫ್ರಿಜರೇಟರಿನಲ್ಲಿರುವ ಔಷಧಗಳು ಹಾಳಾಗುತ್ತಿವೆ. ಶಾಲಾ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿಲ್ಲ, ಹವಾನಾದ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಪೂರ್ವ ಕ್ಯೂಬಾದಲ್ಲಿ 20 ತಾಸುಗಳಿಗಿಂತಲೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತವಾಗುತ್ತಿದೆ. ಹೀಗೆ ಟ್ರಂಪ್ ಆದೇಶ ನೀಡಿದ ಎರಡು ವಾರಗಳೊಳಗೆ ಕ್ಯೂಬಾದಲ್ಲಿನ ಅತ್ಯಾವಶ್ಯಕ ಸೇವೆಗಳು ಆಘಾತಕಾರಿ ಮಟ್ಟದಲ್ಲಿ ಸಂಕಷ್ಟದಲ್ಲಿ ಸಿಲುಕಿದವು.
ಕ್ಯೂಬಾದ ಮಾನವೀಯ ಮುಖ
ಯಾರನ್ನು ಹೊಸಕಿ ಹಾಕಲು ಹೊರಟಿದೆ ಅಮೆರಿಕಾ? ಅದು ‘ರಕ್ಕಸ’ನೆಂದು ಪ್ರಚಾರ ಮಾಡುತ್ತಿದ್ದರೂ ವಿಶ್ವದ ನೊಂದ ಜನರಿಂದ ‘ಆಪತ್ಬಾಂಧವÀ’ನೆಂಬ ಹೆಗ್ಗಳಿಕೆ ಪಾತ್ರವಾಗಿರುವ ಕ್ಯೂಬಾವನ್ನು! 1990 ರಿಂದ 2015 ರ ನಡುವೆ ಸಾಗರೋತ್ತರ ಬೆಳವಣಿಗೆಗಾಗಿ ಕ್ಯೂಬಾ ನೀಡಿದ್ದ ನೆರವಿನ ನಿಧಿಯು ಅದರ ಜಿಡಿಪಿಯ ಶೇ.6.6ರಷ್ಟು ಎಂದು ಗ್ವಾಟೆಮಾಲಾದ ಸಂಶೋಧಕ ಹೆನ್ರಿ ಮೊರಾಲ್ಸ್ ಹೇಳುತ್ತಾರೆ. ಅದೇ ಕಾಲಕ್ಕೆ ಇದೇ ಸೂಚ್ಯಂಕವು ಯುರೋಪಿನ ವಿಷಯದಲ್ಲಿ ಶೇ.0.39 ಮತ್ತು ಅಮೆರಿಕಾದ್ದು ಶೇ.0.17 ರಷ್ಟಿತ್ತು. 1960 ರಿಂದೀಚೆಗೆ ಕ್ಯೂಬಾದ 6 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ 180 ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡ ರಾಷ್ಟ್ರಗಳ ಲಕ್ಷ ಲಕ್ಷ ಮಂದಿಯ ಪ್ರಾಣ ಉಳಿಸಿದ್ದಾರೆ. ಕೋವಿಡ್ ಮಹಾಮಾರಿಯ ಕಾಲದಲ್ಲಿ ಕ್ಯೂಬಾವು 59 ದೇಶಗಳಿಗೆ ವೈದ್ಯಕೀಯ ತಂಡಗಳನ್ನು ಕಳುಹಿಸಿತ್ತು, ಇಟಲಿಯ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿದ್ದ ಲೊಂಬಾರ್ಡಿ ಪ್ರದೇಶಕ್ಕೆ ಕ್ಯೂಬಾದ 53 ಸಾಂಕ್ರಾಮಿಕ ರೋಗಶಾಸ್ತ್ರತಜ್ಞರನ್ನು ರೋಗವು ಉತ್ತುಂಗದಲ್ಲಿದ್ದ ಕಾಲದಲ್ಲಿ ನೆರವಿಗಾಗಿ ಕಳುಹಿಸಿತ್ತು. ಫ್ರಾನ್ಸ್ ಮತ್ತು ಸ್ಪೇನ್ ನಡುವೆ ಇರುವ ಅಂಡೋರಾದಲ್ಲಿ ಕೋವಿಡ್-19 ರ ಸೋಂಕಿಗೆ ಒಳಗಾಗಿ ವೈದ್ಯರೇ ಅನಾರೋಗ್ಯ ಪೀಡಿತರಾಗಿದ್ದಾಗ ಅಲ್ಲಿ ಸೇವೆ ಮಾಡಲು 39 ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿತ್ತು. ಈ ಪುಟ್ಟ ದ್ವೀಪ ರಾಷ್ಟ್ರವು ಇಟಲಿ, ವೆನೆಜು಼ವೆಲಾ, ನಿಕರಾಗುವಾ, ಜಮೈಕಾ, ಸುರಿನಾಮ್ ಮತ್ತು ಗ್ರೆನೆಡಾ ದೇಶಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವೈದ್ಯರ ತಂಡ ಮತ್ತು ಔಷಧಿಗಳನ್ನು ರವಾನಿಸಿದೆ. ವಿಶ್ವದ 61 ದೇಶಗಳಲ್ಲಿ ಕ್ಯೂಬಾದ ವೈದ್ಯಕೀಯ ಕ್ಷೇತ್ರದ 28,268 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಣ್ಣ ದೇಶವು ವರ್ಣಭೇದ ನೀತಿ ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾದ ಅತಿಕ್ರಮಣಕಾರಿ ಪಡೆಗಳಿಂದ ಅಂಗೋಲಾದ ಸ್ವಯಂ ರಕ್ಷಣೆಗಾಗಿ 4 ಲಕ್ಷ ಸೈನಿಕರ ಸಹಾಯವನ್ನು ನೀಡಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಕ್ಯೂಬಾ ಅಮೆರಿಕಾದಿಂದ ಅಸಹನೆ, ವಿರೋಧವನ್ನೇ ಪಡೆದಿದೆ.
ಕ್ಯೂಬಾದ ಮೇಲೆ ದಾಳಿ ನಡೆಸಲು ಕುಂಟು ನೆಪಗಳು
ಇರಾಕ್, ವೆನೆಜು಼ವೆಲಾ, ಇರಾನ್ ದೇಶಗಳ ಮೇಲೆ ಆಕ್ರಮಣ ನಡೆಸಲು, ಅಮೆರಿಕಾ ಬರೀ ಕುಂಟು ನೆಪಗಳನ್ನು ಕೊಡುತ್ತಿತ್ತು. ಅದೇ ರೀತಿಯಲ್ಲಿ, ‘ತೋಳ-ಕುರಿಮರಿ’ಯ ಕಥೆಯಂತೆ, ಪೆಂಟಗನ್ ನಡೆಸುವವರು, 1996 ರ ಫೆಬ್ರವರಿಯಲ್ಲಿ ಅಂದಿನ ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ, (ಈಗ 94ವರ್ಷ), ಅಮೆರಿಕಾದ ಎರಡು ಸಣ್ಣ ವಿಮಾನಗಳನ್ನು ಜೆಟ್ ಬಳಸಿ ಹೊಡೆದುರುಳಿಸಿದರು, ಆ ಎರಡು ವಿಮಾನಗಳು ‘ಬ್ರದರ್ಸ್ ಟು ದಿ ರೆಸ್ಕ್ಯೂ’ಎಂಬ ಮಿಯಾಮಿ ರಾಜ್ಯಕ್ಕೆ ಸೇರಿದ ಸಂಘಟನೆಯೊಂದಕ್ಕೆ ಸೇರಿದ್ದವು. ಅವು ಅಮೆರಿಕಾ ತಲುಪಲು ಹರಸಾಹಸ ಮಾಡುತ್ತಿದ್ದವು, ಆ ಘಟನೆಯಲ್ಲಿ ನಾಲ್ಕು ಜನರು ತೀರಿಕೊಂಡರು ಎಂದು ಆರೋಪಿಸುತ್ತಿದ್ದಾರೆ. ವಾಸ್ತವಾಂಶವೆಂದರೆ ಈ ಎರಡು ಸಣ್ಣ ವಿಮಾನಗಳು ಹವಾನಾ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಾ ದೇಶದೊಳಗೆ ಗೊಂದಲವನ್ನು ಸೃಷ್ಟಿಸಲು ಕರಪತ್ರಗಳನ್ನು ಕೆಳಗೆ ಎಸೆಯುತ್ತಿದ್ದವು. ಆ 39 ವರ್ಷಗಳ ಹಳೆಯ ಘಟನೆಯನ್ನು ಅಗೆದು ತೆಗೆದು ಕ್ಯೂಬಾದಲ್ಲಿ ಆಡಳಿತ ಬದಲಾವಣೆಗಾಗಿ ಜನರನ್ನು ಉದ್ರೇಕಿಸಲು ಅಮೆರಿಕಾ ಈಗ ಯತ್ನಿಸುತ್ತಿದೆ, ಟ್ರಂಪ್ ಆಡಳಿತವು ಇದಕ್ಕಾಗಿ ನೌಕಾಪಡೆ ಹಾಗೂ ಭೂಪಡೆಗಳನ್ನು ರವಾನಿಸಿದೆ.
ಸಮಾಜವಾದವನ್ನು ಸಂರಕ್ಷಿಸಲು ಕ್ಯೂಬನ್ನರ ಸಂಕಲ್ಪ
ಆದರೆ, ಸಮಾಜವಾದದಲ್ಲಿ ಸಂಪೂರ್ಣ ನಂಬಿಕೆ ಹೊಂದಿರುವ ಕ್ಯೂಬಾ ಜನತೆ ಅಮೆರಿಕಾದ ಅತಿಕ್ರಮಣವನ್ನು ಪ್ರತಿರೋಧಿಸಲು ಸನ್ನದ್ಧರಾಗಿದ್ದಾರೆ. ಕ್ಯೂಬಾದ ಮೇಲೆ ದಾಳಿಗಳಾಗುವ ಸಂಭವವಿದೆ, ಮಿಲಿಟರಿ ಮಧ್ಯಪ್ರವೇಶವಾಗಬಹುದು, ಕ್ಯೂಬಾದ ಸಾರ್ವಭೌಮತೆಗೆ ಧಕ್ಕೆಯಾದರೆ, ಜೀವ ತ್ಯಾಗಕ್ಕೂ ಜನತೆ ಸಿದ್ಧರಿದ್ದಾರೆ ಎಂದು ಕ್ಯೂಬಾ ಸ್ಪಷ್ಟ ಪಡಿಸಿದೆ. ‘ನಮ್ಮಲ್ಲಿ ಅರ್ಧದಷ್ಟು ಜನ ಸಾಯಬೇಕಾದಲ್ಲಿ, ಸಾಯಲು ಸಿದ್ಧರಿದ್ದೇವೆ’ ಎಂದು ಕ್ಯೂಬನ್ನರು ಘೋಷಿಸಿದ್ದಾರೆ. ದೇಶದ ಎಲ್ಲಾ ಜನರನ್ನು ತೊಡಗಿಸಿಕೊಂಡು “ಇದು ಸರ್ವರ ಯುದ್ಧ”ವೆಂಬ ರಣನೀತಿಯನ್ನು ಅವರು ರೂಪಿಸಿಕೊಂಡಿದ್ದಾರೆ. ನಾಗರಿಕರನ್ನು, ಸಶಸ್ತ್ರ ಸ್ವಯಂಪ್ರೇರಿತರನ್ನು, ‘ನೆರೆಹೊರೆಯ ನಾಗರಿಕ ಸೇನೆ’ಯನ್ನು ಸಂಘಟಿಸುತ್ತಾ ಪ್ರತಿಯೊಂದು ನಗರವನ್ನು ರಣರಂಗವಾಗಿ ಪರಿವರ್ತಿಸುತ್ತಿದ್ದಾರೆ. ಅಮೆರಿಕನ್ ಸಾಮ್ರಾಜ್ಯಶಾಹಿಗಳಿಗೆ ಸರಿಯಾಗಿ ಸಡ್ಡು ಹೊಡೆಯಲು ಕ್ಯೂಬಾ ಸಜ್ಜಾಗಿದೆ. ದೇಶದ ಅಧಿಕೃತ ಘೋಷ ವಾಕ್ಯವೇ “ಮಾತೃಭೂಮಿ ಅಥವಾ ಸಾವು, ನಾವು ಗೆಲ್ಲುತ್ತೇವೆ” ಎಂಬುದಾಗಿದೆ. ಈ ಮಹತ್ತರ ವಿದ್ಯಮಾನವು ಕೇವಲ ಕ್ಯೂಬಾಗೆ ಸಂಬಂಧಿಸಿದ್ದಲ್ಲ, ಇದು ಇಡೀ ಲ್ಯಾಟಿನ್ ಅಮೆರಿಕಾ ದೇಶಗಳ ಶಾಂತಿಪ್ರಿಯ ಜನತೆಗೆ ಸಂಬಂಧಿಸಿದೆ ಎಂಬುದನ್ನು ನಾವು ಅರಿಯಬೇಕು. ಕ್ಯೂಬಾ ದೇಶ 67 ವರ್ಷಗಳ ಕಾಲ ವಿಶ್ವದ ಕಾರ್ಮಿಕ ವರ್ಗದ ಜೊತೆ ಐಕಮತ್ಯವನ್ನು ಪ್ರದರ್ಶಿಸಿದ ಪರಿಣಾಮವಾಗಿ ಅದು ಅದೇ ಐಕಮತ್ಯವನ್ನು ಪ್ರತಿಯಾಗಿ ಪಡೆಯುತ್ತಿದೆ. ವಿಶ್ವದ ಎಲ್ಲಾ ಶಾಂತಿಪ್ರಿಯ, ಯುದ್ಧವಿರೋಧಿ ಜನತೆ, ತಮ್ಮ ದೇಶದ ಸರ್ಕಾರಗಳು ಅಮೆರಿಕಾವು ಕ್ಯೂಬಾದ ಮೇಲೆ ಮಿಲಿಟರಿ ದಾಳಿ ನಡೆಸದಂತೆ ಒತ್ತಾಯ ಹೇರಲು ಹೋರಾಟಗಳನ್ನು ಸಂಘಟಿಸಬೇಕಾಗಿದೆ. ಇದೇ ಇಂದು ನಿಜವಾದ ಅಂತರರಾಷ್ಟ್ರೀಯವಾದ.
