‘ಬೆಂಗಳೂರಿನ ಅಭಿವೃದ್ಧಿ’ ಎಂದರೆ ಮೇಲ್ಸೇತುವೆಗಳು, ಮೆಟ್ರೋ ಮಾರ್ಗಗಳು, ಸುರಂಗ ರಸ್ತೆಗಳು, ಅಂಡರ್ ಪಾಸ್‌ಗಳು ಮತ್ತು ಅಬ್ಬರದ ಘೋಷಣೆಗಳು ಎಂದಾಗಿದೆ. ಬೆಂಗಳೂರನ್ನು ‘ಮಹಾನಗರ’ವೆಂದು ಕರೆದು ಹೆಚ್ಚುಕಡಿಮೆ 4 ದಶಕಗಳು ತುಂಬಿದ್ದರೂ ಸಹ ಅತ್ಯಂತ ಕನಿಷ್ಠ ಮೂಲ ಅವಶ್ಯಕತೆಗಳೂ ಸಹ ಸಾಮಾನ್ಯ ಬೆಂಗಳೂರಿಗರಿಗೆ ಇಂದಿಗೂ ಲಭ್ಯವಿಲ್ಲ. ಆದರೆ, 1989ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ)ಯಲ್ಲಿ 100 ವಾರ್ಡುಗಳು ಇದ್ದದ್ದು, 2007ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಾಗಿ ಬದಲಾಗಿ 198 ವಾರ್ಡುಗಳಿಗೆ ಉಬ್ಬಿತು. ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವಾಗಿ ಹೊಸ ರೂಪ ಪಡೆದಿರುವ ಬೆಂಗಳೂರು 369 ವಾರ್ಡುಗಳಿಗೆ ಹಿಗ್ಗಿದೆ. 1989ರಲ್ಲಿ ಸುಮಾರು 40 ಲಕ್ಷದ್ದಷ್ಟಿದ್ದ ಬೆಂಗಳೂರಿನ ಜನಸಂಖ್ಯೆಯು, 2007ರಲ್ಲಿ 73ಲಕ್ಷಕ್ಕೆ ಏರಿತು ಮತ್ತು 2026ರಲ್ಲಿ 1.4ಕೋಟಿಗೆ ಹಿಗ್ಗಿದೆ. 1989ರಲ್ಲಿ ಸುಮಾರು ರೂ.50 ಕೋಟಿ ಇದ್ದ ಬಿಎಂಪಿ ಬಜೆಟ್ಟಿನ ಗಾತ್ರವು 2007ರ ಹೊತ್ತಿಗೆ ರೂ.2,500 ಕೋಟಿಯನ್ನು ತಲುಪಿತ್ತು ಮತ್ತು 2026ರಲ್ಲಿ ಅದು ರೂ.20,000 ಕೋಟಿಯನ್ನು ತಲುಪಿದೆ. ಜನಸಂಖ್ಯೆ ಬೆಳೆದಂತೆ ಪಾಲಿಕೆಯ ಆದಾಯವು ಹಿಗ್ಗಿದೆ. ಬಜೆಟ್ಟಿನ ಗಾತ್ರ ಉಬ್ಬಿದೆ, ಬೆಂಗಳೂರಿಗರ ತಲೆಯ ಮೇಲೆ ತೆರಿಗೆಯ ಭಾರ ಏರುತ್ತಲೇ ಇದೆ ಮತ್ತು ಅದು ಹೊಸಹೊಸ ರೂಪದಲ್ಲಿ ಹೇರಲ್ಪಡುತ್ತಲೇ ಇದೆ. ಆದರೂ, ಮೂಲ ಅವಶ್ಯಕತೆಗಳಿಗಾಗಿ ಬೆಂಗಳೂರಿಗರ ಪರದಾಟ ಕೊನೆಗಾಣುತ್ತಲೇ ಇಲ್ಲ. ಬೃಹತ್ ಯೋಜನೆಗಳು ಘೋಷಣೆಯಾಗುತ್ತವೆ. ಅವು ಕುಂಟುತ್ತಾ ಸಾಗಿ, ಪೂರ್ಣಗೊಳ್ಳಲು ಇದ್ದ ಗಡುವನ್ನು ಎಂದೋ ಮೀರಿರುತ್ತದೆ. ಆದರೆ ಪ್ರಾಜೆಕ್ಟಿನ ಗಾತ್ರ ಮಾತ್ರ ಹಿಗ್ಗುತ್ತಿರುತ್ತದೆ. ಹೀಗೆಯೇ ನಡೆಯುತ್ತಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು - ಅದು ಮೆಟ್ರೋ ಆಗಲಿ, ಸುರಂಗ ರಸ್ತೆ ಆಗಲಿ, ಅಂಡರ್ ಪಾಸ್‌ಗಳಾಗಲಿ, ಮೇಲ್ಸೇತುವೆಗಳಾಗಲಿ - ಎಲ್ಲವೂ ‘ಬಿಳಿಯಾನೆ’ಗಳೇ! ಅವುಗಳಿಗೆ ಸುರಿಯುವ ಹಣವನ್ನು ಸಾಮಾನ್ಯ ಬೆಂಗಳೂರಿಗರಿಂದ ತೆರಿಗೆ, ಶುಲ್ಕ, ಉಪಕರ, ಸುಂಕ ಎಂಬಿತ್ಯಾದಿ ಹೆಸರುಗಳ ಮೂಲಕ ವಸೂಲಿ ಮಾಡಲಾಗುತ್ತಿದೆ.

ಎಲ್ಲಿದೆ ಸಮನ್ವಯ?

ಬೆಂಗಳೂರಿನ ನಗರ ಯೋಜನೆ, ಆಡಳಿತ, ಸಾರಿಗೆ ಮತ್ತು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಹೊರಲು ಜಿಬಿಎ, ಬಿಡಿಎ, ಬಿಎಂಆರ್ ಡಿಎ, ಬಿಎಂಎಲ್ ಟಿಎ, ಬಿಎಂಟಿಸಿ, ಬಿಎಂಆರ್ ಸಿಎಲ್ ಅಲ್ಲದೆ ನೀರು, ಒಳಚರಂಡಿ, ವಿದ್ಯುತ್, ದೂರಸಂಪರ್ಕ ಇತ್ಯಾದಿಗಳಿಗಾಗಿ ನಿರ್ದಿಷ್ಟ ಸಂಸ್ಥೆಗಳು ಸ್ಥಾಪಿತವಾಗಿದ್ದರೂ ಒಂದು ಇನ್ನೊಂದಕ್ಕೆ ಸಂಬಂಧವಿಲ್ಲದಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಹಲವು ಬಾರಿ ಒಂದಕ್ಕೆ ಇನ್ನೊಂದು ವ್ಯತಿರಿಕ್ತವಾಗಿ ಕೆಲಸ ಮಾಡುತ್ತವೆ. ರಸ್ತೆಯನ್ನು ಹೊಸದಾಗಿ ಹಾಕಿದ ನಂತರ ಇನ್ಯಾವುದೋ ಉದ್ದೇಶಕ್ಕಾಗಿ ರಸ್ತೆ ಅಗೆಯುವ ಕೆಲಸ ನಡೆಯುತ್ತದೆ, ಅವು ಕೊನೆಗಾಣದೆ ವರ್ಷಗಟ್ಟಲೆ ನಡೆಯುತ್ತಲೇ ಇರುತ್ತವೆ. ರಸ್ತೆಗಳನ್ನು ಕಾಂಕ್ರೀಟ್ ಮಾಡುವ ವೈಟ್ ಟಾಪಿಂಗ್ ಅಂತೂ ಬಹುದೊಡ್ಡ ದಂಧೆಯಾಗಿ ಹೋಗಿದೆ. ‘ದೀರ್ಘಕಾಲ ಬಾಳಿಕೆ’ ಎನ್ನುವ ಕಿರೀಟ ಹೊತ್ತಿದೆಯಾದರೆ, ಅದು ನೆಲ-ಜಲ-ಜೀವ-ಜಂತುಗಳ ವಿಧ್ವಂಸಕ ಕಾರ್ಯಕ್ರಮವಾಗಿದೆ. 1985ರ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾಯ್ದೆ(BMRDA Act)ಯ ಮೂಲ ಉದ್ದೇಶವೇ ಮಹಾನಗರ ಪ್ರದೇಶದ ಸಮಗ್ರ ಹಾಗೂ ಸಮನ್ವಯಿತ ಅಭಿವೃದ್ಧಿಯಾಗಿತ್ತು. ಅಂದರೆ ರಸ್ತೆ, ಸಾರಿಗೆ, ಒಳಚರಂಡಿ ಮತ್ತು ಮೂಲಸೌಕರ್ಯಗಳು ಪರಸ್ಪರ ಸಂಬಂಧಿತವಾಗಿ ಯೋಜನೆಯಾಗಬೇಕೆಂಬುದು ಅದರ ಆಶಯವಾಗಿತ್ತು. ಆದರೆ, ನಾಲ್ಕು ದಶಕಗಳ ನಂತರವೂ ಈ ಸಮನ್ವಯ ಎಷ್ಟು ಸಾಧಿಸಲಾಗಿದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ವಾಹನ ದಟ್ಟಣೆಗೆಲ್ಲಿದೆ ಪರಿಹಾರ?

ರಸ್ತೆಗಳ ಸ್ಥಿತಿಯಂತೂ ಬಹುದೊಡ್ಡ ಬೇನೆ. ಸುಮಾರು 20,000 ಕಿಮೀ ಉದ್ದದ ರಸ್ತೆಗಳುಳ್ಳ ಮಹಾನಗರದಲ್ಲಿ ಗುಂಡಿಗಳು, ಪದೇಪದೇ ರಸ್ತೆ ಅಗೆತ, ಅಪೂರ್ಣ ಕಾಮಗಾರಿಗಳು ಮತ್ತು ಸಂಚಾರ ದಟ್ಟಣೆ ದಿನನಿತ್ಯದ ಸಂಗತಿಗಳಾಗಿವೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ಕೈಗೊಳ್ಳುವ ರಸ್ತೆ ಅಗಲೀಕರಣ, ಸುರಂಗ ರಸ್ತೆ ಇತ್ಯಾದಿ ಯೋಜನೆಗಳು ರಸ್ತೆಯ ಮೇಲೆ ಇಳಿಯುವ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವಂತಹವಾಗಿವೆ. ಮೆಟ್ರೋ, ನಗರ ಸಾರಿಗೆ ಬಸ್ ವ್ಯವಸ್ಥೆ, ಸಬರ್ಬನ್ ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಮಾತು ಹಾಗಿರಲಿ, ಅವನ್ನು ಅಗ್ಗ ಮಾಡದೆ, ಅವುಗಳ ಕಾರ್ಯಕ್ಷಮತೆಯನ್ನು ಎತ್ತರಿಸದೆ, ಕೊನೇಮೈಲು ಸಮಸ್ಯೆಯನ್ನು ಬಗೆಹರಿಸದೆ ಮತ್ತು ಸುಲಭ ದರದ ಹಾಗೂ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ ಅನುಕೂಲಗಳನ್ನು ಸೃಷ್ಟಿಸದೆ, ಬೆಂಗಳೂರಿಗರು ಖಾಸಗಿ ವಾಹನಗಳ ಮೇಲೆ ಹೆಚ್ಚೆಚ್ಚು ಅವಲಂಬಿತರಾಗುವಂತೆ ಮಾಡಿ, ನಂತರ ವಾಹನ ದಟ್ಟಣೆ ಆಸಾಧ್ಯವಾಗಿದೆ ಎಂದರೆ ಎಂತಹ ವಿಪರ್ಯಾಸವಲ್ಲವೇ! ಹಾಗಾಗಿಯೇ, 1.4 ಕೋಟಿ ಜನಸಂಖ್ಯೆಯುಳ್ಳ ನಗರದಲ್ಲಿ 1.28 ಕೋಟಿ ವಾಹನಗಳಿವೆ ಮತ್ತು ಅವುಗಳಲ್ಲಿ 25.2 ಲಕ್ಷ(ಜೂನ್ 2026) ಕಾರುಗಳಿವೆ. ಹೆಚ್ಚಿರುವ ವಾಹನಗಳ ಸಂಖ್ಯೆಯನ್ನೇ ಬಳಸಿಕೊಂಡು ಈ ಸರ್ಕಾರವು ಪಾರ್ಕಿಂಗ್ ಶುಲ್ಕವನ್ನು ಸುಲಿಗೆ ಮಾಡಲು ತಯಾರಾಗುತ್ತಿದೆ. ಅದರಲ್ಲೂ ಮನೆ ಮುಂದಿನ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಲೂ ಸಹ ಹಣ ತೆರಬೇಕಾಗುತ್ತದೆ. ಬಿಎಂಎಲ್ ಟಿಎ ತನ್ನ ಸಿಎಂಪಿ2025 (ಸಮಗ್ರ ಚಲನಶೀಲತೆಯ ಯೋಜನೆ) ಅನ್ನು ಹೊರತಂದಾಗ ಶೇ.70ರಷ್ಟು ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಾಗಬೇಕು ಎಂದಿದೆ. ಆದರೆ, ಪ್ರಯಾಣ ದರ ಕುರಿತ ಮೆಟ್ರೋ ನಿಲುವಾಗಲಿ ಅಥವಾ ಸುರಂಗ ರಸ್ತೆ ಮಾಡಬೇಕೆನ್ನುವ ನಿರ್ಧಾರವಾಗಲಿ ಅಥವಾ ರಸ್ತೆ ಅಗಲೀಕರಣ ಯೋಜನೆಯಾಗಲಿ ಆ ಘೋಷಿತ ಉದ್ದೇಶಕ್ಕೆ ಪೂರಕವಾಗಿ ಇಲ್ಲವೇ ಇಲ್ಲ.

ಮಳೆ ಬಂದರೆ ಬೆಂಗಳೂರಿನ ಮೂಲಸೌಕರ್ಯದ ಅವ್ಯವಸ್ಥೆಯು ಬಯಲಾಗುತ್ತದೆ. ರಸ್ತೆಬದಿ ಕಸ, ಮಣ್ಣು ಮತ್ತು ಧೂಳು ಚರಂಡಿಗಳನ್ನು ಮುಚ್ಚಿ ನೀರು ಹರಿಯದ ಸ್ಥಿತಿ ಉಂಟಾಗಿರುತ್ತದೆ. 2026ರ ಸೆಪ್ಟೆಂಬರ್ ಮಳೆಯಲ್ಲಿಯೂ ಹಲವು ಪ್ರಮುಖ ರಸ್ತೆಗಳು ಜಲಾವೃತವಾಗಿ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಮನೆಗಳಿಗೆ ಕೊಳಚೆ ನೀರು ತುಂಬಿಕೊಂಡ, ಅಪಾರ್ಟ್ಮೆಂಟ್‌ಗಳ ತಳಮಹಡಿಗೆ ಮಳೆ ನೀರು ನುಗ್ಗಿ ವಾಹನಗಳು ಹಾಳಾದ ಮತ್ತು ಮನೆ ತಲುಪಲು ಜನರು ದೋಣಿಯನ್ನು ಬಳಸಿ ಹೈರಾಣಾದ ಕುಖ್ಯಾತಿ ಬೆಂಗಳೂರಿಗೆ ಸಲ್ಲುತ್ತದೆ.

ಸುರಂಗರಸ್ತೆ ಎಂಬ ಮಾಯಜಾಲ!

ಇದಕ್ಕೆ ಪರಿಹಾರವಾಗಿ ಸುರಂಗ ರಸ್ತೆ ಎಂಬ ಬೃಹತ್ ಯೋಜನೆ ಬರುತ್ತಿದೆ. ಆದರೆ IISc ಅಧ್ಯಯನವು ಪ್ರಸ್ತಾವಿತ ಹೆಬ್ಬಾಳ ಸುರಂಗವು ಸಂಚಾರ ದಟ್ಟಣೆಯನ್ನು ಪರಿಹರಿಸುವ ಬದಲು ಅದನ್ನು ಮತ್ತಷ್ಟು ಜಂಕ್ಷನ್‌ಗಳಿಗೆ ವರ್ಗಾಯಿಸುತ್ತದೆ, ಜೊತೆಯಲ್ಲಿ, ಪ್ರವಾಹದ ಅಪಾಯವೂ ಉಂಟಾಗಬಹುದು ಎಂದು ಎಚ್ಚರಿಸಿದೆ. ಹಾಗಾದರೆ ಮೊದಲು ಇರುವ ರಸ್ತೆಗಳು, ಚರಂಡಿಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಏಕೆ ಸಾಧ್ಯವಾಗಬಾರದು? ಸುರಂಗ ರಸ್ತೆ ಯೋಜನೆಗೆ ಸುರಿಯಬಹುದಾದ ಸುಮಾರು ರೂ. 18 ಸಾವಿರ ಕೋಟಿಯನ್ನೇ ಸದ್ಬಳಕೆ ಮಾಡಿದರೆ ಅಷ್ಟೇ ಹಣದಲ್ಲಿ ಮೆಟ್ರೋದ 3ನೇ ಹಂತವನ್ನು ಪೂರ್ಣಗೊಳಿಸಬಹುದು, ಬೆಂಗಳೂರಿನ ಸಬರ್ಬನ್ ರೈಲು ಯೋಜನೆಯನ್ನು ಪೂರ್ಣಗೊಳಿಸಬಹುದು ಅಥವಾ ಬಿಎಂಟಿಸಿಗೆ ಹೊಸದಾಗಿ 12-14 ಸಾವಿರ ಇವಿ ಬಸ್ಸುಗಳನ್ನು ಖರೀದಿಸಬಹುದು ಮತ್ತು ಸಾರಿಗೆ ನಿಗಮಗಳ ಈವರೆಗಿನ ನಷ್ಟವನ್ನು ತುಂಬಿಕೊಳ್ಳಬಹುದು. ಏಕೆಂದರೆ, ಸಾಮಾನ್ಯ ನಾಗರಿಕರಿಗೆ ಬೇಕಿರುವುದು ಅವಲಂಬನಾರ್ಹ, ಸಮಯಪಾಲನೆ ಮಾಡುವ ಅಗ್ಗದ ಸಾರಿಗೆ ಸೇವೆಯೇ ಹೊರತು ತಳುಕಿನ ಸುರಂಗವಲ್ಲ. ನಮ್ಮ ಮೆಟ್ರೋ ವಿಸ್ತರಿಸುತ್ತಿದ್ದರೂ ಪ್ರಯಾಣಿಕರ ಜೇಬಿಗೆ ಅದರ ದರ ದೊಡ್ಡ ಹೊರೆಯಾಗಿದೆ. ವರದಿಯ ಪ್ರಕಾರ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮೂಲ ಅಂದಾಜಿಗಿಂತ ಬಹಳ ಕಡಿಮೆಯಾಗಿದೆ ಮತ್ತು ಯೋಜನಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ.

ಬೆಂಗಳೂರಿನ ಅಂದಚೆಂದವನ್ನು ಹೆಚ್ಚಿಸಲು, ಸರ್ವೋಚ್ಛ ನ್ಯಾಯಾಲಯವು ಮೊಕದ್ದಮೆಯೊಂದರ ವಿಚಾರಣೆಯ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಹೇಳಿದ ಮಾತನ್ನೇ ಹಿಡಿದುಕೊಂಡು ಬೆಂಗಳೂರಿನ ಪಾದಚಾರಿಗಳಿಗೆ ಫುಟ್‌ಪಾತ್ ಇಲ್ಲದಾಗಿದೆ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ, ಇದರಿಂದ ಜನರ ಸುರಕ್ಷತೆಗೆ ಆತಂಕ ಎದುರಾಗಿದೆ ಎಂದು ಬೊಬ್ಬೆ ಹಾಕಿದ ಬೆಂಗಳೂರು ಅಭಿವೃದ್ಧಿ ಸಚಿವರು ಜಿಬಿಎ ಅಧಿಕಾರಿಗಳನ್ನು ಕಳುಹಿಸಿ ಸುಮಾರು 1.5ಲಕ್ಷ ಬೀದಿಬದಿ ವ್ಯಾಪಾರಿ ಕುಟುಂಬಗಳ ಬದುಕನ್ನು ಅಯೋಮಯಗೊಳಿಸಿದರು. ಮಹಾನಗರದ ಪ್ರಾಧಿಕಾರವು ತಾನು ನಿರ್ವಹಿಸಬೇಕಾಗಿದ್ದ ಜವಾಬ್ದಾರಿಯನ್ನೆಲ್ಲಾ ಮರೆತು, ಅವನ್ನು ಮಾಡದೆ ಬೀದಿಬದಿ ವ್ಯಾಪಾರಿಗಳ ಬದುಕಿನಾಧಾರವನ್ನು ಕಸಿದುಕೊಂಡದ್ದಂತೂ ಅಕ್ಷಮ್ಯ. ಆದರೆ, ಆ ತೆರವು ಕಾರ್ಯಾಚರಣೆಯಿಂದ ಯಾರ ಹಿತಾಸಕ್ತಿಯು ಕಾಪಾಡಲ್ಪಟ್ಟಿತು ಮತ್ತು ಯಾರಿಗೆ ಹಾನಿಯಾಯಿತು ಎಂಬ ಸತ್ಯವನ್ನು ಮಾತ್ರ ಸರ್ಕಾರವು ಬಹಿರಂಗಗೊಳಿಸಲು ತಯಾರಿಲ್ಲ.

ಸಾಮಾನ್ಯ ಬೆಂಗಳೂರಿಗರಿಗೆ ಅಭಿವೃದ್ಧಿಯ ಅಳತೆಗೋಲು ಮಾತ್ರ ಬಹಳ ಸರಳ - ಮನೆಯಿಂದ ಕೆಲಸಕ್ಕೆ ಸಮಯಕ್ಕೆ ತಲುಪಬಹುದೇ, ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಬಹುದೇ, ಮಳೆಯಲ್ಲಿ ಮನೆ-ರಸ್ತೆ ಮುಳುಗುವುದಿಲ್ಲವೇ, ಬಸ್ ಸಿಗುತ್ತದೆಯೇ, ಕಸ ಮತ್ತು ಮಾಲಿನ್ಯ ಕಡಿಮೆಯಾಗಿದೆಯೇ ಎಂಬುದು. ಅಭಿವೃದ್ಧಿಯ ಘೋಷಣೆಗಳು ಎಷ್ಟೇ ಎತ್ತರವಾಗಿರಲಿ, ಅದರ ಅಂತಿಮ ಪರೀಕ್ಷೆ ಜನರ ದೈನಂದಿನ ಬದುಕು, ರಸ್ತೆ, ಮಳೆನೀರು, ಬಸ್, ಕಸ, ಗಾಳಿ ಮತ್ತು ಕೈಗೆಟುಕುವ ಸಾರಿಗೆ-ಇವು ಸರಿಯಾಗದಿದ್ದರೆ “ಅಭಿವೃದ್ಧಿ” ಎಂಬ ಪದ ಬದುಕಿನ ಅನುಭವದಲ್ಲಿ ಕೇವಲ ಸರ್ಕಾರಿ ಜಾಹೀರಾತಿನ ಘೋಷಣೆಯಾಗಿಯೇ ಉಳಿಯುತ್ತದೆ.