ಬೀದಿಗಳು ಬಂಡವಾಳಶಾಹಿ ಕಾರ್ಪೊರೇಟ್‌ಗಳ ಕೈವಶವಾಗಲಿವೆಯೇ!
“ಫುಟ್‌ಪಾತ್ ಪಾದಚಾರಿಗಳ ಮೂಲಭೂತ ಹಕ್ಕು” ಎಂಬ ನೆಪದಲ್ಲಿ ಕೋಟ್ಯಂತರ ಬಡವರ ಬದುಕುವ ಹಕ್ಕನ್ನು ಹರಣ ಮಾಡಲಾಗುತ್ತಿದೆ! ಬಣಗುಟ್ಟುತ್ತಿರುವ ಬೃಹತ್ ಮಾಲ್‌ಗಳಿಗೆ ಗ್ರಾಹಕರನ್ನು ಬಲವಂತವಾಗಿ ತಳ್ಳಲು ಬೀದಿಬದಿ ವ್ಯಾಪಾರಿಗಳ ಅನ್ನದ ತಟ್ಟೆಯನ್ನು ಸರ್ಕಾರಗಳೇ ಕಸಿದುಕೊಳ್ಳುತ್ತಿವೆ.
ಬೀದಿ ವ್ಯಾಪಾರಿಗಳ ಹಕ್ಕುಗಳು ಮತ್ತು ಕಾನೂನು: ವಾಸ್ತವವೇನು?
• ಭಾರತದಲ್ಲಿ 1 ಕೋಟಿಗೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದಾರೆ. • ಸಂವಿಧಾನದ ಅನುಚ್ಛೇದ 19(1)(ರ) ಮತ್ತು 21 ಗೌರವಯುತ ವೃತ್ತಿ ಹಾಗೂ ಬದುಕುವ ಹಕ್ಕನ್ನು ಖಾತ್ರಿಪಡಿಸುತ್ತವೆ. • 2014ರ ಬೀದಿ ವ್ಯಾಪಾರಿಗಳ ಕಾಯ್ದೆ ಹಾಗೂ 50 ವರ್ಷ ಹಳೆಯ “ಪಾರಂಪರಿಕ ಮಾರುಕಟ್ಟೆ” ಸಂರಕ್ಷಣಾ ಕಾನೂನುಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ ಮತ್ತು ಕಾಯ್ದೆಯಂತೆ TVC ಸಮೀಕ್ಷೆ ನಡೆಸದೆ, ಗುರುತಿನ ಚೀಟಿ ಹಾಗೂ ಪರ್ಯಾಯ ವ್ಯವಸ್ಥೆ ಮಾಡದೆ ವ್ಯಾಪಾರಿಗಳನ್ನು ತೆರವುಗೊಳಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ. • ILO (ಅಂತರರಾಷ್ಟ್ರೀಯ ಕಾರ್ಮಿಕ ಸಂಘ) ಮಾರ್ಗಸೂಚಿಗಳು ಮತ್ತು ಸುಪ್ರೀಂಕೋರ್ಟ್ ನ Olga Tellis ತೀರ್ಪು ಜೀವನೋಪಾಯದ ಹಕ್ಕನ್ನು ಎತ್ತಿ ಹಿಡಿದಿವೆ. ಇಂದು ಕೋಲ್ಕತ್ತಾದಿಂದ ಬೆಂಗಳೂರಿನವರೆಗೆ, ದಾವೋಸ್‌ನಿಂದ ಕರಾಚಿಯವರೆಗೆ ಬೀದಿಬದಿ ವ್ಯಾಪಾರಿಗಳ ಬದುಕಿನ ಮೇಲೆ ಜಾಗತಿಕ ಕಾರ್ಪೊರೇಟ್ ಬುಲ್ಡೋಜರ್‌ಗಳು ಹರಿಯುತ್ತಿವೆ. “ಸ್ಮಾರ್ಟ್ ಸಿಟಿ” ಹಾಗೂ “ಸುಂದರ ನಗರ” ಎಂಬ ಆಕರ್ಷಕ ಘೋಷಣೆಗಳ ಮರೆಯಲ್ಲಿ ಬಡವರ ಜೀವನೋಪಾಯವನ್ನು ಹಾಡುಹಗಲೇ ದೋಚಲಾಗುತ್ತಿದೆ.
ರಕ್ತಸಿಕ್ತ ತೆರವು ಕಾರ್ಯಾಚರಣೆ: ಕೋಲ್ಕತ್ತಾದಿಂದ ಬೆಂಗಳೂರಿನವರೆಗೆ
ಪಶ್ಚಿಮ ಬಂಗಾಳದ ಸಿಯಲ್ದಾ ಮತ್ತು ಹೌರಾಗಳಲ್ಲಿ ರೈಲ್ವೆ ನಿಲ್ದಾಣದ ಅಂಚಿನಲ್ಲಿ ಹೊಟ್ಟೆ ಹೊರೆಯುತ್ತಿದ್ದ ಬಡ ವ್ಯಾಪಾರಿಗಳನ್ನು ಬುಲ್ಡೋಜರ್, ಸ್ಟೆನ್‌ಗನ್ ಬಳಸಿ, ಬೆದರಿಸಿ, ಪೊಲೀಸ್ ಬಳಸಿ ನಿರ್ದಯವಾಗಿ ಎತ್ತಂಗಡಿ ಮಾಡಲಾಗಿದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಜನನಿಬಿಡ ಪ್ರದೇಶಗಳಲ್ಲಿ ಜಾಗ ಮಾಡಿಕೊಡಲು ಕಾನೂನನ್ನೇ ತಿರುಚಲಾಗುತ್ತಿದೆ; ಬಡವರ ತಟ್ಟೆ-ಬುಟ್ಟಿಗಳನ್ನು ಪುಡಿಪುಡಿ ಮಾಡಲಾಗಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ’ದ ಹೆಸರಿನಲ್ಲಿ ಸುಮಾರು 1.5ಲಕ್ಷ ಬೀದಿಬದಿ ವ್ಯಾಪಾರಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಒಕ್ಕಲೆಬ್ಬಿಸಲಾಗಿದೆ.

ಇಲ್ಲಿ ಪ್ರಮುಖ ಪ್ರಶ್ನೆಗಳು:
- ಜನನಿಬಿಡ ಪ್ರದೇಶಗಳಲ್ಲಿರುವ ಶೇ.80ರಷ್ಟು ವಾಣಿಜ್ಯ ಕಟ್ಟಡಗಳು ನೆಲಮಹಡಿಗಳನ್ನು ವಾಹನ ನಿಲುಗಡೆ (Parking)ಗೆ ಮೀಸಲಿಡಬೇಕೆಂಬ ನಿಯಮಗಳನ್ನು ಉಲ್ಲಂಘಿಸಿವೆ; ಅವರ ಮೇಲೇಕೆ ಕ್ರಮವಿಲ್ಲ?
- ನಮ್ಮ ನಗರದ ಪ್ರಮುಖ ರಸ್ತೆಗಳ ಶೇ.70ರಷ್ಟು ರಸ್ತೆಯನ್ನು ಖಾಸಗಿ ಕಾರುಗಳ ಪಾರ್ಕಿಂಗ್ ಆಕ್ರಮಿಸಿಕೊಂಡಿದೆೆ. ಟ್ರಾಫಿಕ್ ಜಾಮ್ ಇಡೀ ಜನಜೀವನವನ್ನು ಪಾರ್ಶ್ವವಾಯು ಪೀಡಿತವಾಗಿಸುತ್ತಿದ್ದರೂ ಸರ್ಕಾರವು ಏಕೆ ಮೌನವಾಗಿದೆ?
- ಮಲ್ಲೇಶ್ವರ ಅಥವಾ ಕೋಲ್ಕತ್ತಾ ನ್ಯೂ ಮಾರ್ಕೆಟ್‌ನಂತಹ 50-75 ವರ್ಷ ಹಳೆಯ ಪಾರಂಪರಿಕ ಮಾರುಕಟ್ಟೆಗಳ ಸಮೀಪದಲ್ಲಿ ಬೃಹತ್ ಮಳಿಗೆಗಳಿಗೆ ಅನುಮತಿ ಕೊಟ್ಟಿದ್ದು ಎಷ್ಟು ಸರಿ? ಈಗ ತಮ್ಮ ಅಂಗಡಿಗೆ ಗಿರಾಕಿಗಳಿಲ್ಲ ಎಂದು ಬಡ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದು ಅನೈತಿಕ, ಪ್ರಜಾತಂತ್ರ ವಿರೋಧಿಯಲ್ಲವೇ? ಇಂದು ಶೇ.90ರಷ್ಟು ಮಧ್ಯಮ ವರ್ಗ ಹಾಗೂ ದಿನಗೂಲಿ ಕಾರ್ಮಿಕರು ಕೈಗೆಟುಕುವ ದರದಲ್ಲಿ ಲಭ್ಯವಾಗುವ ವಸ್ತುಗಳು ಅಥವಾ ಆಹಾರಕ್ಕಾಗಿ ಈ ಬೀದಿಬದಿ ವ್ಯಾಪಾರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರದ ಈ ಕ್ರಮ ಮಧ್ಯಮ ವರ್ಗದ ಜೇಬಿಗೂ ಕತ್ತರಿ ಹಾಕಿದೆ. ಇದು ಭಾರತದ ಪರಿಸ್ಥಿತಿ ಅಷ್ಟೇ ಅಲ್ಲ - ಬಾಂಗ್ಲಾದೇಶದ ಢಾಕಾ, ಪಾಕಿಸ್ತಾನದ ಕರಾಚಿ, ಬ್ರೆಜಿಲ್‌ನ ರಿಯೋ ಡಿ ಜನೈರೊ, ಆಫ್ರಿಕಾದ ನೈರೋಬಿಗಳಲ್ಲೂ ಇದೇ ‘ಬುಲ್ಡೋಜರ್ ನೀತಿ’ ರುದ್ರತಾಂಡವ ನಡೆಸುತ್ತಿದೆ.
ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಐಕ್ಯ ಹೋರಾಟ ಬೇಕು
ಕಾನೂನನ್ನು ಕಾಯಬೇಕಾದ ಸರ್ಕಾರಗಳೇ ಏಕಸ್ವಾಮ್ಯ ಬಂಡವಾಳಶಾಹಿಗಳ ಪರವಾಗಿ ಬಡವರ ಮೇಲೆ ಪ್ರಹಾರ ನಡೆಸುತ್ತಿವೆ. ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ನಮ್ಮ ಕಾರ್ಮಿಕ ಸಂಘಟನೆ, AIUTUC ನೇತೃತ್ವದಲ್ಲಿ ಈ ದೌರ್ಜನ್ಯದ ವಿರುದ್ಧ ಹೋರಾಟಗಳು ಬಲವನ್ನು ಪಡೆಯುತ್ತಿವೆ. ದಾವಣಗೆರೆಯಲ್ಲಿ ‘ಕರ್ನಾಟಕ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘ’ ನಡೆಸಿದ ಸುದೀರ್ಘ ಹೋರಾಟದಿಂದ ಅನ್ಯಾಯಯುತ ಜಕಾತಿ ರದ್ದುಗೊಂಡು ಬಡವರ ಬದುಕು ಉಳಿಯಿತು. ಸಂಘಟನೆ ಇದ್ದರೆ ಮಾತ್ರ ಹಕ್ಕುಗಳ ಉಳಿವು ಸಾಧ್ಯ! ಬೀದಿ ವ್ಯಾಪಾರಿಗಳು ನಗರದ ಆರ್ಥಿಕತೆಯ ಜೀವನಾಡಿ. ಕಾರ್ಪೊರೇಟ್ ಪರ ನಗರಾಭಿವೃದ್ಧಿ ನೀತಿಗಳನ್ನು ಧ್ವಂಸಗೊಳಿಸಿ, ಜನಪರ ಜನಾಂದೋಲನ ಕಟ್ಟುವುದೇ ಇಂದಿನ ಐತಿಹಾಸಿಕ ಅಗತ್ಯವಾಗಿದೆ.
