ಈ ಚುನಾವಣೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಪೆಟ್ರೋಲ್- ಡೀಸೆಲ್, ಎಲ್‌ಪಿಜಿ ದರ ಏರಿಕೆ, ನಿರುದ್ಯೋಗ, ರೈತ-ಕಾರ್ಮಿಕರ ಸಮಸ್ಯೆಗಳು, ಮಹಿಳೆಯರ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಯಾವುದೇ ಪಕ್ಷಗಳು ಈ ಸಮಸ್ಯೆಗಳ ಆಧಾರದಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬದಲಿಗೆ ಜಾತಿ, ಕೋಮು, ಜನಾಂಗಗಳ ನಡುವೆ ದ್ವೇಷದ ದಳ್ಳುರಿಯನ್ನು ಹಚ್ಚಲು ಪ್ರಯತ್ನಗಳು ನಡೆದವು. ದ್ವೇಷ ರಾಜಕಾರಣ, ಗೂಂಡಾಗಿರಿ, ವಿವಿಧ ಗ್ಯಾರಂಟಿಗಳು, ಜಾತಿ-ಕೋಮು ರಾಜಕೀಯ, ಸಾಮಾಜಿಕ ಮಾಧ್ಯಮಗಳು ಇಂದು ಚುನಾವಣಾ ರಂಗವನ್ನು ಆವರಿಸಿವೆ.

ಬಿಜೆಪಿಯು ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿಸಿಕೊಂಡಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಪ್ರಶ್ನೆ ಇದ್ದೇ ಇದೆ. ಈಗ ಎಸ್‌ಐಆರ್ ಬಂದಿದೆ. ತನಗೆ ವಿರೋಧಿಗಳೆಂದು ಗೋಚರಿಸುವವರ ಹೆಸರುಗಳನ್ನು ಅಳಿಸಿ ಹಾಕುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂಬ ದೂರಿನಲ್ಲಿ ಸತ್ಯವಿಲ್ಲದಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಗಮನಿಸಬೇಕು.

ಅಸ್ಸಾಂ

ಅತಿಯಾದ ಕೋಮು ಧ್ರುವೀಕರಣದ ವಾತಾವರಣವಿರುವ ಅಸ್ಸಾಮಿನಲ್ಲಿ ಬಿಜೆಪಿ ಗೆಲ್ಲುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿಯೇ ಇದ್ದವು. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಆಗ 104 ಹಿಂದೂ ಪ್ರಧಾನ ಕ್ಷೇತ್ರಗಳು ಮತ್ತು 22 ಮುಸಲ್ಮಾನ ಪ್ರಧಾನ ಕ್ಷೇತ್ರಗಳನ್ನು ಸೃಷ್ಟಿಸಲಾಯಿತು. ಬಿಜೆಪಿ, ಆರ್‌ಎಸ್‌ಎಸ್, ಸಂಘ ಪರಿವಾರದ ಪೈಶಾಚಿಕ ಕೃತ್ಯಗಳಿಂದ ಸತತವಾಗಿ ಹಿಂಸೆ ಅನುಭವಿಸಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದ ಮುಸಲ್ಮಾನ ಬಾಹುಳ್ಯದ ಕ್ಷೇತ್ರಗಳ ಸಂಖ್ಯೆಯನ್ನು 29 ರಿಂದ 22ಕ್ಕೆ ಇಳಿಸಲಾಯಿತು. ಮುಸಲ್ಮಾನರನ್ನು ಹಿಂಸಿಸುವ, ಬೆದರಿಸುವ, ಬಂಗಾಳಿ ಮುಸಲ್ಮಾನರನ್ನು `ಮಿಯಾ’ಗಳೆಂದು ಮೂದಲಿಸುವ, ಅವರನ್ನು ದೇಶದ್ರೋಹಿಗಳು, ನುಸುಳುಕೋರರು ಎಂದು ಜರೆಯುವುದರಲ್ಲಿ ಅಸ್ಸಾಮಿನ ಮುಖ್ಯಮಂತ್ರಿ ಹೇಮಂತ್ ಬಿಶ್ವ ಸರ್ಮಾ ಎಲ್ಲಾ ಸಭ್ಯತೆಯ ಗಡಿಗಳನ್ನೂ ಮೀರಿಸಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಸತತವಾಗಿ ಹರಿಹಾಯುತ್ತಾ, ಭಾರತವು ಹಿಂದೂ ರಾಷ್ಟ್ರವೆಂದೂ, ಅದು ಎಂದಿಗೂ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಲೇ ಇತ್ತು. ಆಳುವ ಬಂಡವಾಳಶಾಹಿ ವರ್ಗದ ಸೇವಕರಾದ ಕೋಮುವಾದಿ- ಜನಾಂಗೀಯವಾದಿ ಶಕ್ತಿಗಳು, ಇತರ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಬಂದಿರುವ ಬಂಗಾಳಿಗಳು ಅದರಲ್ಲೂ ಮುಸಲ್ಮಾನರು, ಅಸ್ಸಾಮಿ ಭಾಷೆ ಮಾತನಾಡುವ ಜನರ ಎಲ್ಲಾ ಸಮಸ್ಯೆಗಳಿಗೂ ಮೂಲಭೂತವಾಗಿ ಕಾರಣ ಎಂದು ಅಬ್ಬರಿಸಿದವು. ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಎಲ್ಲಾ ಜನರನ್ನು ಒಳಗೊಂಡ ಜನತಾಂತ್ರಿಕ ಜನ ಚಳುವಳಿಯು ಬೆಳೆಯದಿರುವ ನ್ಯೂನತೆಯಿಂದಾಗಿ ಅಸ್ಸಾಮಿಗಳು ಪ್ರತ್ಯೇಕತಾವಾದಿ ಘೋಷಣೆಗಳ ಪ್ರಭಾವದಡಿಯಲ್ಲಿ ಸಿಲುಕಿದರು. ಇಡೀ ವಾತಾವರಣವೇ ಕೋಮುವಾದಿ-ಪ್ರಾಂತೀಯವಾದಿ ವಿಚಾರಗಳಿಂದ ಪ್ರಕ್ಷುಬ್ಧವಾಯಿತು. ಇದೇ ಜಾಡನ್ನು ಹಿಡಿದು ಹೇಮಂತ್ ಬಿಶ್ವ ಸರ್ಮಾ ಮುಸಲ್ಮಾನರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದರು. ಇದರ ಜೊತೆಗೆ, ಹಲವಾರು ಗ್ಯಾರಂಟಿಗಳನ್ನು ಘೋಷಿಸಿ ಮತದಾರರ ಕಣ್ಣಿಗೆ ಮಂಕುಬೂದಿ ಎರಚುವಲ್ಲಿ ಯಶಸ್ವಿಯಾದರು. ಮುಸಲ್ಮಾನರು ಅನ್ಯಮಾರ್ಗವಿಲ್ಲದೆ ಪ್ರಧಾನವಾಗಿ ಕಾಂಗ್ರೆಸ್‌ಗೆ ಮತ ನೀಡಿದರು. ಈಗ ಬಿಜೆಪಿ ಘೋಷಿಸಿರುವ ಗ್ಯಾರಂಟಿಗಳಿಗೆ ಹಣವು ಸಾಲದ ಮೂಲದಿಂದಲೇ ಪಡೆಯಲಾಗಿದೆ. ಉಚಿತ ಕೊಡುಗೆಗಳನ್ನು ಉಗ್ರವಾಗಿ ಟೀಕಿಸುತ್ತಿದ್ದ ಬಿಜೆಪಿಯು ಹಲವಾರು ರೀತಿಯ ಗ್ಯಾರಂಟಿಗಳನ್ನು ಘೋಷಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಅಸ್ಸಾಮಿನ ಜನರು ಖಂಡಿತವಾಗಿಯೂ ತಮಗೆ ಎಂತಹ ವಂಚನೆಯಾಗಿದೆ ಎಂಬುದನ್ನು ಅರಿಯುತ್ತಾರೆ.

ತಮಿಳುನಾಡು

1967ರಿಂದ ದ್ರಾವಿಡ ಪಕ್ಷಗಳು ತಮಿಳುನಾಡಿನ ರಾಜಕೀಯವನ್ನು ನಿಯಂತ್ರಿಸುತ್ತಿವೆ. ತಮಿಳುನಾಡಿನಲ್ಲಿ ಬಹಳ ಕಾಲದಿಂದ ಸಿನಿಮಾ ದಿಗ್ಗಜರು ರಾಜಕೀಯ ಪ್ರವೇಶಿಸಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ಎಂಜಿಆರ್, ಜಯಲಲಿತ ಹಾಗೂ ಕರುಣಾನಿಧಿ. 1972ರಲ್ಲಿ ಎಂಜಿಆರ್ ಡಿಎಂಕೆ ಪಕ್ಷದಿಂದ ಹೊರಬಂದು ಎಐಎಡಿಎಂಕೆ ಕಟ್ಟಿದ ನಂತರ ರಾಜ್ಯದಲ್ಲಿ ಈ ಎರಡು ಪಕ್ಷಗಳು, ಕಾಂಗ್ರೆಸ್ ಅಥವಾ ಬಿಜೆಪಿ ಹಾಗೂ ಸಿಪಿಐ, ಸಿಪಿಐ(ಎಂ)ಗಳ ಜೊತೆಗೂಡಿ ಒಂದಲ್ಲ ಇನ್ನೊಂದು ಅಧಿಕಾರದಲ್ಲಿದ್ದವು. ಆದರೆ ಈ ಬಾರಿ `ಸೂಪರ್ ಸ್ಟಾರ್’ ದಳಪತಿ ವಿಜಯ್, ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮೂಲಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ರಾಜಕೀಯ ವಲಯಕ್ಕೆ ಹೊಸಬರಾಗಿರುವುದರಿಂದ ವಿಜಯ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಹಲವರು ನಂಬಿದ್ದರು. 2009ರಿಂದಲೇ ವಿಜಯ್ ತಮ್ಮ ಅಭಿಮಾನಿ ಸಂಘಗಳ ಮೂಲಕ ಹತ್ತುಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಜೊತೆಗೆ ತ್ರಿಕೋನ ಸ್ಪರ್ಧಿಯಾಗಿ ಚುನಾವಣಾ ಕಣವನ್ನು ಪ್ರವೇಶಿಸಿದ್ದರು. ತಾನು ವೈಚಾರಿಕವಾಗಿ ಬಿಜೆಪಿಗೆ ಎದುರಾಳಿ ಮತ್ತು ರಾಜಕೀಯವಾಗಿ ಆಡಳಿತರೂಢ ಡಿಎಂಕೆಗೆ ಎದುರಾಳಿ ಎಂದು ಪ್ರಚಾರ ಮಾಡುತ್ತ ತಮಿಳುನಾಡಿನ ಶೇ.40ರಷ್ಟಿರುವ ಯುವಜನತೆಯ ಕಲ್ಪನೆಗೆ ಹೊಸ ಆಯಾಮ ನೀಡುತ್ತಾ ಹೊಸಹೊಸ ಭರವಸೆ ನೀಡುತ್ತಾ ತಾನು ಬದಲಾವಣೆ ತರಬಲ್ಲೆ ಎಂಬ ಬಲವಾದ ವಾತಾವರಣವನ್ನು ಟಿವಿಕೆ ಸೃಷ್ಟಿಸಿತು.

ಆದರೆ, ಫಲಿತಾಂಶ ಬಂದಾಗ ಸರ್ಕಾರವನ್ನು ರಚಿಸಲು 10 ಸ್ಥಾನಗಳ ಕೊರತೆ ಎದುರಾದಾಗ ವಿಜಯ್ ಕಾಂಗ್ರೆಸ್ ಬೆಂಬಲ ಪಡೆದರು. ಅಲ್ಲಿಯವರೆಗೂ ಡಿಎಂಕೆ ಜೊತೆಯಿದ್ದ ಕಾಂಗ್ರೆಸ್ ಮೈತ್ರಿಕೂಟವನ್ನು ತೊರೆದು ತನ್ನ ಎಲ್ಲ 5 ಶಾಸಕರ ಸಮರ್ಥನೆಯನ್ನು ನೀಡಿತು. ಸಿಪಿಐ ಹಾಗೂ ಸಿಪಿಐ(ಎಂ) ಸಹ ಇದೇ ಜಾಡನ್ನು ಅನುಸರಿಸಿದವು. ವಿಸಿಕೆ (ವಿರುತಲೈ ಚಿರುತೈ ಕಚ್ಚಿ) ಹಾಗೂ ಐಯುಎಂಎಲ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್)ಗಳು ಸಹ ವಿಜಯ್‌ಗೆ ಬೆಂಬಲ ನೀಡಿದವು. ನಂತರ ಎಐಎಡಿಎಂಕೆಯ 30 ಮಂದಿ ಶಾಸಕರು ತಮ್ಮ ಪಕ್ಷದಿಂದ ಹೊರಬಂದು ಟಿವಿಕೆಯನ್ನು ಬೆಂಬಲಿಸಿದ್ದಾರೆ. ಹೀಗೆ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಲು ಇದ್ದ ಎಲ್ಲಾ ಅಡೆತಡೆಗಳೂ ನಿವಾರಣೆ ಆದವು. ಕಾಂಗ್ರೆಸ್ ಹಾಗೂ ಐಯುಎಂಎಲ್ ವಿಜಯ್ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿವೆ. ಬಿಜೆಪಿಗಂತೂ ರಾಜ್ಯದಲ್ಲಿ ಹಿನ್ನಡೆಯಾಗಿದೆ. ವಿಜಯ್‌ರನ್ನು ತನಿಖೆ ಎಂಬ ಒತ್ತಡದಡಿಯಲ್ಲಿ ಬಲವಂತವಾಗಿ ಎನ್‌ಡಿಎ ಕೂಟಕ್ಕೆ ಸೇರಿಸಿಕೊಳ್ಳಬಹುದು ಎಂಬ ಊಹಾಪೋಹ ಸದ್ಯಕ್ಕೆ ತೆರೆ ಕಂಡಿದೆ. ಈ ಚುನಾವಣಾ ಫಲಿತಾಂಶ ಮತ್ತು ತದನಂತರದ ರಾಜಕೀಯ ಮರು ಒಗ್ಗೂಡಿಕೆಯು ರಾಜ್ಯದ ಜನತೆಗೆ ಎಚ್ಚರಿಕೆಯ ಘಂಟೆಯಾಗಬೇಕಿದೆ.

ಪುದುಚೇರಿಯ ಚುನಾವಣಾ ಫಲಿತಾಂಶವು ಮುಂಚಿತವಾಗಿ ಊಹಿಸಿದ್ದಂತೆಯೇ ಇತ್ತು. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳನ್ನು ವಿಜಯ್‌ರ ಟಿವಿಕೆಯು ಪಕ್ಕಕ್ಕೆ ಸರಿಸಿದ ಮಾದರಿಯ ಬೆಳವಣಿಗೆ ಅಲ್ಲಿ ಕಾಣಲಿಲ್ಲ.

ಕೇರಳಂ

ಕೇರಳಂದಲ್ಲಿ ಯುಡಿಎಫ್ (ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್) ಹಾಗೂ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್) ಕಾಲಕಾಲಕ್ಕೆ ಅಧಿಕಾರ ಗಳಿಸುತ್ತವೆ ಎಂಬ ಮಾತು ಸರ್ವೇಸಾಮಾನ್ಯವಾದದ್ದು. ಆದರೆ, ಸತತವಾಗಿ ಎರಡು ಬಾರಿ ಚುನಾವಣೆ ಗೆದ್ದಿದ್ದ ಸಿಪಿಐ(ಎಂ) ಈ ಬಾರಿಯ ತನ್ನ ಸೋಲಿಗೆ ಭಾಗಶಃ ಆಡಳಿತ ವಿರೋಧಿ ಅಲೆ ಇತ್ತು ಎಂಬ ಕಾರಣ ನೀಡಿದೆ ಹಾಗೂ ತನ್ನ `ಜನಕಲ್ಯಾಣ ಯೋಜನೆ’ಗಳ ಅನುಷ್ಠಾನಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಅಡೆತಡೆಗಳಿದ್ದವು ಎಂದು ಹೇಳುತ್ತಿದೆ. ಆದರೆ ಅದರ ಸೋಲಿಗೆ ಕಾರಣವೇ ಬೇರೆ.

ಎಡವಾದದತ್ತ ವಾಲಿದ ಕೇರಳಂ ರಾಜ್ಯದಲ್ಲಿ ಅವಿಭಜಿತ ಸಿಪಿಐ ಆಗಲಿ ಅಥವಾ ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಸಿಪಿಐ(ಎಂ) ಆಗಲಿ ಜನರನ್ನು ಸಂಸದೀಯ ರಾಜಕಾರಣದಿಂದ ದೂರವಿರಿಸಿ ಉನ್ನತ ನೀತಿ ನೈತಿಕತೆಯ ಆಧಾರದ ಮೇಲೆ ಜ್ವಲಂತ ಸಮಸ್ಯೆಗಳ ವಿರುದ್ಧ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗೆ ಪೂರಕವಾಗಿರುವ ಜನ ಚಳುವಳಿಗಳನ್ನು ಎಂದೂ ರೂಪಿಸಲಿಲ್ಲ. 1957ರಲ್ಲಿ ಮೊದಲ ಬಾರಿಗೆ ಅವಿಭಜಿತ ಸಿಪಿಐ ಕೇರಳಂದಲ್ಲಿ ಸರ್ಕಾರವನ್ನು ರಚಿಸಿತು, ಕೇವಲ ಕೆಲವು ಸುಧಾರಣೆಗಳಿಗೆ ಒತ್ತು ನೀಡಿತು. ತದನಂತರ ಅಧಿಕಾರಕ್ಕೆ ಬಂದ ಸಿಪಿಐ(ಎಂ) ಪಕ್ಷವೂ ಸಹ ಜಾತಿವಾದ, ಕೋಮುವಾದದ ವಿರುದ್ಧ ಹೋರಾಡದೆ ಅವುಗಳನ್ನು ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಂಡಿತು. 1967ರಲ್ಲಿ ಐಯುಎಂಎಲ್ ಸಿಪಿಐ(ಎಂ) ಸರ್ಕಾರದ ಭಾಗವಾಗಿತ್ತು. ಆ ಸಂದರ್ಭದಲ್ಲಿ, ಪಾಲಕ್ಕಾಡ್ ಹಾಗೂ ಕೋಯಿಕೋಡ್ ಜಿಲ್ಲೆಗಳಿಂದ ಕೆಲ ಭಾಗಗಳನ್ನು ಹರಿದು ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಮಲ್ಲಪುರಂ ಜಿಲ್ಲೆಯನ್ನು ರಚಿಸಲಾಯಿತು! ಇದು ಎಂತಹ ವಿಪರ್ಯಾಸ!

ಸಿಪಿಐ ಹಾಗೂ ತದನಂತರ ಸಿಪಿಐ(ಎಂ) ಮತ್ತು ಅದರ ಮಿತ್ರ ಪಕ್ಷಗಳು 1980 ರಿಂದ 2026ರವರೆಗೆ 7 ಬಾರಿ ಅಧಿಕಾರದಲ್ಲಿದ್ದವು. ಹೀಗಾಗಿ, ಕೇರಳಂ ಜನತೆ ಕಾಂಗ್ರೆಸ್ ಹಾಗೂ ಎಡಪಕ್ಷಗಳ ನಡುವೆ ಯಾವುದೇ ವ್ಯತ್ಯಾಸಗಳನ್ನು ಕಾಣದೆ ಅವೆರಡೂ ಕೂಟಗಳನ್ನು ಒಂದಕ್ಕೊಂದು ಪರ್ಯಾಯವೆಂಬಂತೆ ಅಧಿಕಾರಕ್ಕೆ ತಂದಿದ್ದಾರೆ. ಈ ಬಾರಿ ಸಿಪಿಎಂನ ಸೋಲಿಗೆ ಪ್ರಮುಖ ಕಾರಣವೆಂದರೆ ಅದರ ಕಾರ್ಮಿಕವಿರೋಧಿ, ಜನವಿರೋಧಿ ನಿಲುವುಗಳು ಹಾಗೂ ನೀತಿಗಳು. 266 ದಿನ ಆಶಾ ಕಾರ್ಯಕರ್ತೆಯರು ತಮ್ಮ ಕನಿಷ್ಠ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸಿದ ಹೋರಾಟವನ್ನು ಹತ್ತಿಕ್ಕಲು ಎಲ್‌ಡಿಎಫ್ ಯತ್ನಿಸಿತ್ತು, ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ, ಪರಿಸರಕ್ಕೆ ಹಾನಿಕಾರಕವಾಗಿದ್ದ ಕೆ-ರೈಲ್ ಯೋಜನೆ ರೂಪಿಸಿತ್ತು, ತಾನೇ ವಿರೋಧಿಸುವ ಶಿಕ್ಷಣ ವಿರೋಧಿ ಎನ್‌ಇಪಿ 2020ಯ ಭಾಗವಾದ ಪಿಎಂಶ್ರೀ ಯೋಜನೆಗೆ ಸಹಿ ಹಾಕಿತ್ತು, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ದುಬಾರಿ ಟೋಲ್ ಸಂಗ್ರಹವನ್ನು ಸಮರ್ಥಿಸಿಕೊಂಡಿತ್ತು, ಗೌತಮ್ ಅದಾನಿ ಕೇರಳಂದಲ್ಲಿ ವಿಲಿನ್ಜಂ ಬಂದರನ್ನು ಉದ್ಘಾಟಿಸುವಾಗ ಸರ್ಕಾರ ಸಹಭಾಗಿತ್ವದ ಸ್ಥಾನಮಾನವನ್ನು ಆ ಯೋಜನೆಗೆ ನೀಡಿತ್ತು - ಇವೆಲ್ಲದರಿಂದಾಗಿ ಜನರು ಸಿಪಿಎಂ ವಿರುದ್ಧ ಮತ ಚಲಾಯಿಸಿದರು. ಇಲ್ಲಿಯೂ ಭ್ರಷ್ಟಾಚಾರ, ಸ್ವಜನಪಕ್ಷಪಾತಗಳು ರಾರಾಜಿಸುತ್ತ್ತಿದ್ದವು. ಸಿದ್ಧಾಂತರಹಿತವಾಗಿರುವ ಎಡಬಿಡಂಗಿಯಾಗಿರುವ ಇಂತಹ ನಿಲುವು ಅನೇಕರಲ್ಲಿ ಬೇಸರ ಮೂಡಿಸಿ ಅವರು ಯುಡಿಎಫ್‌ಗೆ ಬೆಂಬಲ ನೀಡಿದರು.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಬಹುಪಾಲು ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಆದರೆ, ಹೀಗೆ ಆಗುವಂತಹ ಬಹಳಷ್ಟು ಸಾಧ್ಯತೆಗಳನ್ನು ಮುಂಚಿತವಾಗಿಯೇ ಕಾಣಬಹುದಾಗಿತ್ತು. ಟಿಎಂಸಿ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಪೊಲೀಸ್ ಹಾಗೂ ಅಧಿಕಾರಿಗಳು ಟಿಎಂಸಿಯ ಸಚಿವರಷ್ಟೇ ಏಕೆ, ಅವರ ಸಣ್ಣಪುಟ್ಟ ಪುಡಿನಾಯಕರು, ಕಾರ್ಯಕರ್ತರಿಗೂ ಅಧೀನರಾಗಿ ವರ್ತಿಸುತ್ತಿದ್ದರು. ಶಾಲೆಗಳ ಬೋಧಕ ಹಾಗೂ ಬೋಧಕೇತರ 25000 ಸಿಬ್ಬಂದಿಯ ನೇಮಕಾತಿಯಲ್ಲಿನ ವಿಪರೀತ ಅವ್ಯವಹಾರ, 11,000 ಸರ್ಕಾರಿ ಶಾಲೆಗಳ ಮುಚ್ಚುವಿಕೆ, ಶಿಕ್ಷಣ-ಆರೋಗ್ಯ ಕ್ಷೇತ್ರಗಳ ಖಾಸಗೀಕರಣ, ಆರ್‌ಜಿಕರ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿಯ ಗುಂಪು ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರ್ಕಾರವು ಅಪರಾಧಿಗಳ ರಕ್ಷಣೆಗೆ ನಿಂತ ವೈಖರಿ, ಇವು ಜನರಲ್ಲಿ ತೀವ್ರವಾದ ಆಕ್ರೋಶವನ್ನು ಉಂಟು ಮಾಡಿದವು. ಈ ಹಿನ್ನೆಲೆಯಲ್ಲಿ ಹೇಗಾದರೂ ಸರಿಯೇ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಉದ್ದೇಶದಿಂದ ಜನರು ಬಿಜೆಪಿಗೆ ಮತ ಹಾಕಿದರು. ಬಿಜೆಪಿಯನ್ನು ಮುನ್ನೆಲೆಗೆ ತರುವುದು ಆಳುವ ಬಂಡವಾಳಶಾಹಿ ವರ್ಗದ ಹಿತಾಸಕ್ತಿಯಾಗಿತ್ತು. ಬಿಜೆಪಿಯ ಈ ಗೆಲುವು ಜನರು ಅದಕ್ಕೆ ನೀಡಿದ ಸೈದ್ಧಾಂತಿಕ ಬೆಂಬಲವಲ್ಲ, ಬದಲಿಗೆ ಇದು ಟಿಎಂಸಿ ವಿರುದ್ಧ ಜನರು ಚಲಾಯಿಸಿರುವ ನಕಾರಾತ್ಮಕ ಮತದಾನದ ಪ್ರತಿಫಲ.

ಬಿಜೆಪಿ ಬಹಳ ಕಾಲದಿಂದ ಟಿಎಂಸಿಯನ್ನು ಸೋಲಿಸಲು ಹವಣಿಸುತ್ತಿತ್ತು. ಆರ್‌ಎಸ್‌ಎಸ್ ತಳಮಟ್ಟದಲ್ಲಿ ಕೆಲಸ ಮಾಡಿತು. ಪ್ರಧಾನಿ ಮೋದಿ, ರಕ್ಷಣಾ ಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಶ್ಚಿಮ ಬಂಗಾಳಕ್ಕೆ ದೌಡಾಯಿಸಿ ಅಬ್ಬರದ ಪ್ರಚಾರ ನಡೆಸಿದರು. ಪೊಲೀಸ್ ಹಾಗೂ ಆಡಳಿತಾಂಗದಲ್ಲಿ ಅಧಿಕಾರಿಗಳನ್ನು ಬದಲಿಸಿ ಹಲವಾರು ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ಪರವಾದ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಕೇಂದ್ರದಿಂದ 2 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇವರು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸಿದರು. ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ಭವಾನಿಪುರದ ಎಣಿಕೆ ಕೇಂದ್ರದಲ್ಲಿ ಎಣಿಕೆಯನ್ನು ಬಲವಂತವಾಗಿ ನಿಲ್ಲಿಸಲಾಗಿತ್ತು. ಬಿಜೆಪಿ ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ಮಾಡುತ್ತಾ ಪ್ರಚಾರ ನಡೆಸಿದರೆ ಟಿಎಂಸಿ ಮೃದು ಹಿಂದುತ್ವದ ಹಾದಿ ಹಿಡಿದು ರೂ. 250 ಕೋಟಿ ವೆಚ್ಚದಲ್ಲಿ ಜಗನ್ನಾಥ ದೇವಾಲಯವನ್ನು ಕಟ್ಟಿಸಿತು.

ನಂತರ ಎಸ್‌ಐಆರ್ ಪ್ರಕ್ರಿಯೆ ಮೂಲಕ 91ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಯಿತು. ಬಿಜೆಪಿ ಗೆದ್ದ 82 ಕ್ಷೇತ್ರಗಳಲ್ಲಿ ತೆಗೆದು ಹಾಕಲ್ಪಟ್ಟ ಮತಗಳ ಸಂಖ್ಯೆಯು ಗೆಲುವಿನ ಅಂತರದ ಮತಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಇವುಗಳಲ್ಲಿ 70 ಸ್ಥಾನಗಳು ಟಿಎಂಸಿಯ ಕೈ ಜಾರಿ ಬಿಜೆಪಿ ತೆಕ್ಕೆಗೆ ಬಿದ್ದಿವೆ.

ಆದರೆ ಮುಖ್ಯ ಪ್ರಶ್ನೆ ಎಂದರೆ ಎಡ ಪ್ರಜಾತಾಂತ್ರಿಕ ಹೋರಾಟಗಳ ನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಹೇಗೆ ಎಂದು. ನೈಜ ಅರ್ಥದಲ್ಲಿ ಧರ್ಮಾನಿರಪೇಕ್ಷತೆಯನ್ನು ಪರಿಪಾಲಿಸದ ಸಿಪಿಐ(ಎಂ) ಪಕ್ಷವು ತನ್ನ ಅವಕಾಶವಾದಿತನದಿಂದ ಕೋಮು ಶಕ್ತಿಗಳ ಬೆಳವಣಿಗೆಗೆ ನೆರವಾಗಿದೆ. ಜೆಪಿ ಚಳುವಳಿಯಲ್ಲಿ ಕೋಮುವಾದಿ ಜನಸಂಘ ಇದೆ ಎಂದು ನೆಪವೊಡ್ಡಿ ಅದರಲ್ಲಿ ಸೇರಲಿಲ್ಲ. ಆದರೆ, ಸಿಪಿಐ ಮತ್ತು ಸಿಪಿಐ(ಎಂ) 1977ರಲ್ಲಿ ಅದೇ ಜನತಾ ಪರಿವಾರವು ಸರ್ಕಾರ ರಚಿಸುವ ಸಂದರ್ಭದಲ್ಲಿ ಸಿಪಿಐ(ಎಂ) ಅದನ್ನು `ಜನಸ್ನೇಹಿ ಸರ್ಕಾರ’ವೆಂದು ಕೊಂಡಾಡುತ್ತಾ ಅದರ ಭಾಗವಾಯಿತು. ಜನತಾ ಪಕ್ಷದ ಪರೋಕ್ಷ ಬೆಂಬಲದೊಂದಿಗೆ 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಚುನಾವಣೆಯಲ್ಲಿ ಗೆದ್ದಿತು. 1989ರಲ್ಲಿ ಬಿಜೆಪಿಯ ಜೊತೆಗೂಡಿ ಕೇಂದ್ರದಲ್ಲಿ ವಿ ಪಿ ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವನ್ನು ಬೆಂಬಲಿಸಿತು. ಆ ಸರ್ಕಾರವು ಬಿಜೆಪಿ ಮತ್ತು ಎಡಪಕ್ಷಗಳ ಆಧಾರದ ಮೇಲೆ ನಿಂತಿತ್ತು. ಸಿಪಿಐ(ಎಂ)ನ ಮುಖ್ಯಮಂತ್ರಿ ಜ್ಯೋತಿ ಬಸು, ಅಟಲ್ ಬಿಹಾರಿ ವಾಜಪೇಯಿ ಜೊತೆಗೂಡಿ ಕಲ್ಕತ್ತಾದ ಮೈದಾನದಲ್ಲಿ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ಸಹ ಬಂಗಾಳದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನೆಲೆಯೂರಲು ನೆರವಾಗಿತ್ತು. ಟಿಎಂಸಿಯನ್ನು ಸೋಲಿಸಲು ಅವರು ಬಳಸಿದ ತಂತ್ರವೆಂದರೆ `ಮೊದಲು ರಾಮ ನಂತರ ವಾಮ(ಎಡವಾದ)’ ಎಂದು.

34 ವರ್ಷಗಳ ಆಳ್ವಿಕೆಯಲ್ಲಿ ಸಿಪಿಐ(ಎಂ) ಎಲ್ಲಾ ನೈಜ ಜನಪರ ಚಳುವಳಿಗಳನ್ನು ಬರ್ಬರವಾಗಿ ಹತ್ತಿಕ್ಕಿದೆ. ಜೊತೆಗೆ ಜನರನ್ನು ಸಂಸದೀಯ ಚುನಾವಣಾ ರಾಜಕಾರಣದಲ್ಲಿ ಮುಳುಗಿಸಿ ಕ್ರಾಂತಿಕಾರಿ ಹೋರಾಟವನ್ನು ದಿಕ್ಕಾಪಾಲಾಗಿಸಿದೆ. ಆದ್ದರಿಂದಲೇ, ಈ ಹುಸಿ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಸೋಲನ್ನು ಅನುಭವಿಸಿದವು ಹಾಗೂ ಬಿಜೆಪಿ ತಲೆ ಎತ್ತಲು ಅವಕಾಶವಾಯಿತು.

ಈ ಚುನಾವಣೆಗಳು ಎಂತಹ ಮೋಸ, ವಂಚನೆಗಳಿಂದ ಕೂಡಿವೆ ಎಂಬುದನ್ನು ಈ ಚುನಾವಣಾ ಫಲಿತಾಂಶಗಳಿಂದ ನಾವು ಅರಿಯಬಹುದು. ಈ ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಬಲಿಷ್ಠ ಜನ ಆಂದೋಲನಗಳನ್ನು ಬೆಳೆಸುತ್ತಾ ಈ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ಕಿತ್ತೊಗೆಯುವುದೊಂದೇ ಜನತೆಗೆ ಇರುವ ಶಾಶ್ವತ ಪರಿಹಾರ.