ಕಳೆದ ಜುಲೈ 19ರಂದು, ಅಸ್ಸಾಂ ಮೇಲ್ಭಾಗದ 16 ಜಿಲ್ಲೆಗಳ ಜನರು ಊಹಿಸಲಾಗದಂತಹ ಭೀಕರ ಪ್ರವಾಹಕ್ಕೆ ಸಿಲುಕಿದರು. ಶಿವಸಾಗರ, ಚರಾಯಿದೇವ್ ಮತ್ತು ರ್ಹತ್ ಜಿಲ್ಲೆಗಳು ಅತಿ ಹೆಚ್ಚು ಹಾನಿಗೊಳಗಾದವು. ಒಟ್ಟು 45 ಕಂದಾಯ ವೃತ್ತಗಳ ವ್ಯಾಪ್ತಿಯಲ್ಲಿ ಬರುವ 794 ಹಳ್ಳಿಗಳು ಮುಳುಗಡೆಯಾಗಿದ್ದು, ಸುಮಾರು 10 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದರು. ಪ್ರವಾಹವು ಎಷ್ಟು ವೇಗವಾಗಿ ಮತ್ತು ರಭಸವಾಗಿ ಅಪ್ಪಳಿಸಿತೆಂದರೆ, ಜನರಿಗೆ ಸಹಾಯಕ್ಕಾಗಿ ಕೂಗಿಕೊಳ್ಳಲೂ ಸಮಯ ಸಿಗಲಿಲ್ಲ. ಅಸಹಾಯಕ ಸಂತ್ರಸ್ತರು ಹೇಗೋ ತಮ್ಮ ಪ್ರಾಣ ಉಳಿಸಿಕೊಳ್ಳಲು ಮನೆಗಳ ಛಾವಣಿ ಹಾಗೂ ಮರಗಳನ್ನು ಆಶ್ರಯಿಸಿದರು. ಆದರೆ, ಅನೇಕ ಕಡೆ ಪ್ರವಾಹದ ನೀರು ಛಾವಣಿಗಳ ಮೇಲೂ ಹರಿಯಿತು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.
ಸರಕಾರಿ ಅಂಕಿ-ಅಂಶಗಳ ಪ್ರಕಾರ ಸಾವಿನ ಸಂಖ್ಯೆ88. ಆದರೆ ಅನಧಿಕೃತ ಮೂಲಗಳ ಪ್ರಕಾರ ಕನಿಷ್ಠ 1000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎಷ್ಟು ಜನರು ನಾಪತ್ತೆಯಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ವರದಿ ಇಲ್ಲ. ಕೆಲವು ಸ್ಥಳಗಳಲ್ಲಿ ಇಡೀ ಕುಟುಂಬಗಳೇ ಕೊಚ್ಚಿಹೋಗಿವೆ. ಅಸಂಖ್ಯಾತ ಜಾನುವಾರುಗಳು ಮತ್ತು ಸಾಕುಪ್ರಾಣಿಗಳು ಕೊಚ್ಚಿಕೊಂಡು ಹೋಗಿವೆ. ಸಂತ್ರಸ್ತ ಕುಟುಂಬಗಳು ಮನೆ ಮತ್ತು ಆಸ್ತಿ-ಪಾಸ್ತಿ ಎರಡನ್ನೂ ಕಳೆದುಕೊಂಡಿವೆ. ಅವರು ಧರಿಸಿದ್ದ ಬಟ್ಟೆಗಳನ್ನು ಬಿಟ್ಟರೆ ಬೇರೇನೂ ಉಳಿದಿಲ್ಲ. ದುರಂತ ಸಂಭವಿಸಿ 2 ವಾರಗಳ ನಂತರವೂ ಪೀಡಿತ ಗ್ರಾಮಗಳು ಸಂಪೂರ್ಣ ಪಾಳುಬಿದ್ದ ಸ್ಥಿತಿಯಲ್ಲಿಯೇ ಇವೆ. ಸ್ಥಳಕ್ಕೆ ಭೇಟಿ ನೀಡಿದವರು ತಮ್ಮ ಕಣ್ಣೀರನ್ನು ತಡೆಯಲಾಗದೆ ಮಮ್ಮಲ ಮರುಗಿದ್ದಾರೆ.
ಇಂತಹ ವಿನಾಶಕಾರಿ ಪ್ರವಾಹಕ್ಕೆ ಕಾರಣವೇನು?
ಬ್ರಹ್ಮಪುತ್ರ ಕಣಿವೆಯ ಕೆಳ ಅಸ್ಸಾಂ ಭಾಗವು ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ತುಲನಾತ್ಮಕವಾಗಿ ಎತ್ತರದ ಪ್ರದೇಶದಲ್ಲಿರುವ ಮೇಲ್ಭಾಗದ ಅಸ್ಸಾಂ ಪ್ರವಾಹ ಪೀಡಿತ ಪ್ರದೇಶವಲ್ಲ. ಹಾಗಿರುವಾಗ ಇಂತಹ ಭೀಕರ ಪ್ರವಾಹ ಹೇಗೆ ಸಂಭವಿಸಿತು? ದುರಂತ ಸಂಭವಿಸಿದ ಆ ಕರಾಳ ರಾತ್ರಿ, ಮೇಲ್ಭಾಗದ ಅಸ್ಸಾಂನ ಜನರು ದಿಢೀರ್ ಪ್ರವಾಹಕ್ಕೆ ಸಿಲುಕಿದರು. ಅಪಾರ ಪ್ರಮಾಣದ ಹೂಳು, ಮರಳು ಕಲ್ಲುಗಳು, ಬಂಡೆಯ ಅವಶೇಷಗಳು ಮತ್ತು ಕೆಸರನ್ನು ಹೊತ್ತು ತಂದ ಪ್ರವಾಹದ ರಭಸವು ಭಾರೀ ವಿನಾಶವನ್ನುಂಟುಮಾಡಿತು.
ಅಸ್ಸಾಂನ ನೆರೆ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ಎತ್ತರದ ಬೆಟ್ಟ ಪ್ರದೇಶದಲ್ಲಿದೆ. ಅಸ್ಸಾಂಗೆ ಹೊಂದಿಕೊಂಡಿರುವ ‘ಮೋನ್’ (ನಾಗಾಲ್ಯಾಂಡ್) ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತದೆ. ಜುಲೈ 19ರಂದು ಸುರಿದ ಭಾರಿ ಮಳೆಯು ಭೀಕರ ಭೂಕುಸಿತವನ್ನು ಉಂಟುಮಾಡಿ 11 ಜನರನ್ನು ಬಲಿ ತೆಗೆದುಕೊಂಡಿತು. ಇದಲ್ಲದೆ, ಧಿಕೋವ್, ಜಂಜಿ, ತಾವೋಕಾಕ್, ನಾದನ್ ಮುಂತಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದವು. ದುರಂತ ಸಂಭವಿಸುವ ಸಾಧ್ಯತೆಯ ಬಗ್ಗೆ ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣಾ ಇಲಾಖೆ ಮುಂತಾದ ಸರಕಾರಿ ಸಂಸ್ಥೆಗಳಿಗೆ ಚೆನ್ನಾಗಿ ತಿಳಿದಿತ್ತು. ಆದರೂ ಅವು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ.
ನಾಗಾಲ್ಯಾಂಡಿನ ಹದಿನೇಳು ಜಿಲ್ಲೆಗಳಲ್ಲಿ ಐದು ಜಿಲ್ಲೆಗಳು ಅಪಾರ ಪ್ರಮಾಣದ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿವೆ. ಅಧಿಕಾರದಾಹಿಗಳ ಕೃಪಾಕಟಾಕ್ಷದಿಂದ ಕೆಲ ಸ್ವಾರ್ಥಿ ವ್ಯಾಪಾರಿ ಮಾಫಿಯಾ, ದೀರ್ಘಕಾಲದಿಂದ ಅವೈಜ್ಞಾನಿಕ ಗಣಿಗಾರಿಕೆಯನ್ನು ಎಗ್ಗಿಲ್ಲದೆ ನಡೆಸುತ್ತಿದೆ. ಈ ಅಕ್ರಮ ದಂಧೆಯಲ್ಲಿ ಆಡಳಿತ ಪಕ್ಷದ ಮುಖಂಡರೂ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ.
ನಾಗಾಲ್ಯಾಂಡ್ ಸಂವಿಧಾನದ 371ಎ ವಿಧಿಯ ಅಡಿಯಲ್ಲಿ ಬರುವುದರಿಂದ, ಒಂದು ಸಮುದಾಯ ಅಥವಾ ಜನರ ಗುಂಪು ಬೆಟ್ಟದ ಮಾಲೀಕತ್ವವನ್ನು ಹೊಂದಬಹುದಾಗಿದೆ. ದೇಶದ ಸಾಮಾನ್ಯ ಕಾನೂನು ಇಲ್ಲಿ ಅನ್ವಯಿಸುವುದಿಲ್ಲ. ಇದು ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಒಡೆಯುವ ದಂಧೆ ವ್ಯಾಪಕವಾಗಿ ಬೆಳೆಯಲು ಕಾರಣವಾಗಿದೆ. ಕಲ್ಲಿದ್ದಲನ್ನು ಅವೈಜ್ಞಾನಿಕವಾಗಿ ಹೊರತೆಗೆಯುವುದರಿಂದ ವಿವಿಧ ಎತ್ತರಗಳಲ್ಲಿ ಬೃಹತ್ ಜಲಮೂಲಗಳು ಸೃಷ್ಟಿಯಾಗಿವೆ. ಅಕ್ರಮ, ಯೋಜನಾರಹಿತ ಕಲ್ಲಿದ್ದಲು ಗಣಿಗಾರಿಕೆ ಮತ್ತು ವ್ಯಾಪಕ ಅರಣ್ಯನಾಶದಿಂದಾಗಿ (“2013 ರಿಂದ 2023 ರ ನಡುವೆ ಸುಮಾರು 800 ಚದರ ಕಿ.ಮೀ ಅರಣ್ಯ ನಾಶವಾಗಿದೆ, ಈಗ ಅದು ಇನ್ನೂ ಹೆಚ್ಚಾಗಿದೆ” - ಅಸ್ಸಾಂ ಟ್ರಿಬ್ಯೂನ್ 31.07.26) ಪ್ರಕೃತಿಯು ಮುನಿಸಿಕೊಂಡಿದೆ. ಪ್ರಸ್ತುತ ಪ್ರಕರಣದಲ್ಲಿ, ಸರ್ಕಾರವು ಸತ್ಯವನ್ನು ಮುಚ್ಚಿಹಾಕುವ ಸಲುವಾಗಿ, ಬೃಹತ್ ಮೇಘಸ್ಫೋಟವು ಭಾರಿ ಮಳೆಗೆ ಕಾರಣವೆಂದು ಹೇಳಿ ಇದು ನೈಸರ್ಗಿಕ ವಿಕೋಪ ಎಂದು ಬಿಂಬಿಸಲು ಯತ್ನಿಸಿತು. ಆದರೆ ವಾಸ್ತವವೆಂದರೆ ಅಕ್ರಮ ಗಣಿಗಾರಿಕೆಯಿಂದ ಸೃಷ್ಟಿಯಾದ ಬೃಹತ್ ಜಲಮೂಲಗಳು ಒಡೆದು ಅತ್ಯಂತ ವೇಗವಾಗಿ ನೀರನ್ನು ಕೆಳಕ್ಕೆ ಹರಿಸಿದವು. ಅವುಗಳ ನೀರು ಕೆಳಗಿನ ಕೆರೆಕಟ್ಟೆಗಳಿಗೆ ನುಗ್ಗಿ ಅವುಗಳನ್ನೂ ಒಡೆದ ಈ ಸರಣಿ ಪ್ರಕ್ರಿಯೆಯು ಮಹಾ ವಿನಾಶಕ್ಕೆ ಕಾರಣವಾಯಿತು. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಹೆದ್ದಾರಿ ನಿರ್ಮಾಣಕ್ಕೆ ಬೆಟ್ಟಗಳನ್ನು ಅಗೆದು ಕಲ್ಲು ಮಣ್ಣುಗಳನ್ನು ಸಾಗಿಸಿರುವುದು ವಿಕೋಪ ಹೆಚ್ಚಾಗಲು ಕಾರಣವಾಗಿದೆ.
ಸರ್ಕಾರಿ ಸಂಸ್ಥೆಗಳ ಬೇಜವಾಬ್ದಾರಿತನ
ಇದರಲ್ಲಿ ಸರಕಾರ, ವಿಪತ್ತು ನಿರ್ವಹಣೆ ಹಾಗೂ ಹವಾಮಾನ ಮುನ್ಸೂಚನೆ ಇಲಾಖೆಗಳಂತಹ ಸಂಸ್ಥೆಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. 2016ಲ್ಲಿ ಹೆಚ್ಚು ಕಡಿಮೆ ಅಲ್ಲಿನ ಪರಿಸರ ವ್ಯವಸ್ಥೆಯು ಸಮತೋಲನದಲ್ಲಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಮಾಜಿ ಶಾಸಕರೊಬ್ಬರು ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವೈಜ್ಞಾನಿಕ ಕಲ್ಲಿದ್ದಲು ಗಣಿಗಾರಿಕೆ ಮತ್ತು ಅರಣ್ಯನಾಶವನ್ನು ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಆ ನಿರ್ದೇಶನವನ್ನು ಉಲ್ಲಂಘಿಸಲಾಯಿತು. ‘ಗ್ಲೋಬಲ್ ಫಾರೆಸ್ಟ್ ವಾಚ್’ ವರದಿಯ ಪ್ರಕಾರ, 2001 ರಿಂದ 2025 ರ ಅವಧಿಯಲ್ಲಿ 3.6 ಲಕ್ಷ ಎಕರೆ ಅರಣ್ಯ ನಾಶವಾಗಿದೆ.
ಕಾಡುಗಳು ಹಸಿರಿನಿಂದ ಕಂದು ಬಣ್ಣಕ್ಕೆ ತಿರುಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿತ್ತು. ಉಪಗ್ರಹ ಚಿತ್ರಗಳು ಭೀಕರ ಪ್ರವಾಹದ ಸಾಧ್ಯತೆಯನ್ನು ಸ್ಪಷ್ಟವಾಗಿ ಸೂಚಿಸಿದ್ದವು. ಆದರೆ ಹವಾಮಾನ ಇಲಾಖೆ ಅದನ್ನು ಕಡೆಗಣಿಸಿತು.
ಒಡ್ಡುಗಳ ನಿರ್ಮಾಣದ ಜಾಲ
1950ರ ವಿನಾಶಕಾರಿ ಭೂಕಂಪದ ನಂತರ, ಬ್ರಹ್ಮಪುತ್ರ ನದಿಯ ಪ್ರವಾಹ ಮತ್ತು ಭೂಸವೆತ ಸಮಸ್ಯೆಯನ್ನು ರಾಷ್ಟ್ಟ್ರೀಯ ಸಮಸ್ಯೆಯೆಂದು ಘೋಷಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ದುರದೃಷ್ಟವಶಾತ್ ಇದುವರೆಗೂ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಗುತ್ತಿಗೆದಾರರು ಮತ್ತು ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ ಬೆಳೆದಿದೆ. ಪ್ರವಾಹ ತಡೆಯಲು ಅಸ್ಸಾಂ ಸರ್ಕಾರ ಮುಖ್ಯವಾಗಿ ನದಿ ದಂಡೆಗಳಲ್ಲಿ ಒಡ್ಡುಗಳನ್ನು ನಿರ್ಮಿಸುವ ಕೆಲಸ ಮಾಡಿದ್ದು, ಇವುಗಳ ಒಟ್ಟು ಉದ್ದ ಸುಮಾರು 4,800 ಕಿ.ಮೀ. ಆಗಿದೆ. ಪ್ರತಿ ವರ್ಷ ಪ್ರವಾಹ ಬರುವ ಮುನ್ನ ಅಥವಾ ನಂತರ ಈ ಒಡ್ಡುಗಳ ನಿರ್ಮಾಣ ಅಥವಾ ದುರಸ್ತಿ ಕಾರ್ಯ ನಡೆಯುತ್ತಲೇ ಇರುತ್ತದೆ.
ಅಮಿತ್ ಶಾ ಅವರ ಚುನಾವಣಾ ‘ಜುಮ್ಲಾ’
2021ರ ವಿಧಾನಸಭಾ ಚುನಾವಣೆಗೆ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಜನತೆಗೆ ಭರವಸೆ ನೀಡುತ್ತಾ, “ಬಿಜೆಪಿಯು ಅಸ್ಸಾಂ ಅನ್ನು ಪ್ರವಾಹ ಮುಕ್ತ ರಾಜ್ಯವನ್ನಾಗಿ ಮಾಡಲು ಬಯಸುತ್ತದೆ…. ಆದ್ದರಿಂದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ…” ಎಂದು ಹೇಳಿದ್ದರು. ಈಗ 5 ವರ್ಷಗಳ ನಂತರ, ಪ್ರವಾಹದ ಸಮಸ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಉಲ್ಬಣಿಸಿ ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಹೀಗಾಗಿ ಅಮಿತ್ ಶಾ ಅವರ ಆಶ್ವಾಸನೆ ಕೇವಲ ಚುನಾವಣಾ ‘ಜುಮ್ಲಾ’ ಅಷ್ಟೇ ಆಗಿ ಉಳಿದಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ದಯನೀಯ ಸ್ಥಿತಿ
ರಕ್ಷಣಾ ಮತ್ತು ಪುನರ್ವಸತಿ ಕಾರ್ಯಗಳ ಸ್ಥಿತಿಯೂ ಅಷ್ಟೇ ಶೋಚನೀಯವಾಗಿದೆ. ಸಿಲುಕಿಕೊಂಡ ಜನರನ್ನು ರಕ್ಷಿಸಲು ಮತ್ತು ಒಣ ಆಹಾರದ ಪೊಟ್ಟಣಗಳನ್ನು ಹಾಕಲು ಕೇವಲ ತೋರಿಕೆಗೆ ಕೆಲವು ಹೆಲಿಕಾಪ್ಟರ್ಗಳನ್ನು ಬಳಸಿರುವುದನ್ನು ಬಿಟ್ಟರೆ, ಯಾವುದೇ ಸೂಕ್ತ ರಕ್ಷಣಾ ಕಾರ್ಯಾಚರಣೆಗಳು ಕಾಣಿಸುತ್ತಿಲ್ಲ. ಜನರು ತಾವೇ ಸ್ವತಃ ಬದುಕಿ ಉಳಿಯಲು ಪರದಾಡುತ್ತಿದ್ದಾರೆ. ಮೊದಲ ದಿನದಿಂದಲೇ ಸೇನೆಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಯುದ್ಧೋಪಾದಿಯಲ್ಲಿ ನಿಯೋಜಿಸುವ ಅಗತ್ಯವಿತ್ತು. ಬದಲಿಗೆ, ಸರಕಾರಿ ಅಧಿಕಾರಿಗಳು ತಮ್ಮ ಸುರಕ್ಷಿತ ಸ್ಥಳಗಳಲ್ಲಿ ಕುಳಿತು ಜನರಿಗೆ ಉಪದೇಶ ನೀಡುತ್ತಿದ್ದಾರೆ ಹಾಗೂ ಮಾಧ್ಯಮಗಳಿಗೆ ಬೈಟ್ ನೀಡುತ್ತಿದ್ದಾರೆ. ಅಸ್ಸಾಂ ಮಾತ್ರವಲ್ಲದೆ, ಆಡಳಿತ ಪಕ್ಷವು ಸ್ವಾತಂತ್ರ್ಯದ 75 ವರ್ಷಗಳನ್ನು ‘ಅಮೃತ ಕಾಲ’ ಎಂದು ಕರೆಯುತ್ತಿರುವ ಈ ಸಂದರ್ಭದಲ್ಲಿ ಒಡಿಶಾ ಮತ್ತು ಕೇರಳ ರಾಜ್ಯಗಳು ಸಹ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.
ಭರವಸೆಯ ಆಶಾಕಿರಣ
ದೇಶಾದಾದ್ಯಂತ ಸಾರ್ವಜನಿಕರು, ಎನ್ಜಿಒಗಳು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು, ಸಂತ್ರಸ್ತರಿಗೆ ಪರಿಹಾರ ತಲುಪಿಸುವಲ್ಲಿ ಅದ್ಭುತ ಕೆಲಸ ಮಾಡುತ್ತಿರುವುದು ಸಮಾಧಾನಕರ ಸಂಗತಿ. ಉದಾಹರಣೆಗೆ, ಪ್ರವಾಹದ ನೀರು ಇಳಿದ ನಂತರ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ‘ಮೆಡಿಕಲ್ ಸರ್ವಿಸ್ ಸೆಂಟರ್’ ಸಂಸ್ಥೆಯು ಮೋನ್ (ನಾಗಾಲ್ಯಾಂಡ್), ಶಿವಸಾಗರ, ರ್ಹತ್ ಮತ್ತು ಚರಾಯಿದೇವ್ ಭಾಗಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಪ್ರಾರಂಭಿಸಿದೆ.
ನಮ್ಮ ಬೇಡಿಕೆಗಳು
ನಮ್ಮ ಪಕ್ಷವು ಪ್ರವಾಹ ಸಂತ್ರಸ್ತರ ಪರವಾಗಿ ದೃಢವಾಗಿ ನಿಂತಿದ್ದು, ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಆದರೆ ಇಂತಹ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವ ಮುಖ್ಯ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ. ಆದ್ದರಿಂದ ನಮ್ಮ ಆಗ್ರಹಗಳು ಹೀಗಿವೆ.
1. ಸರಕಾರವು ಸಂತ್ರಸ್ತರ ಪುನರ್ವಸತಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.
2. ಸಮುದಾಯ ಅಡುಗೆ ಮನೆಗಳನ್ನು ತೆರೆದು, ಜನಜೀವನ ಸಹಜ ಸ್ಥಿತಿಗೆ ಮರಳುವವರೆಗೆ ಸಂತ್ರಸ್ತ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು.
3. ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಮತ್ತು ಉಪಕರಣಗಳನ್ನು ಹೊಂದಿರುವ ಅಗತ್ಯ ಸಂಖ್ಯೆಯ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಬೇಕು.
4. ಭ್ರಷ್ಟ ಮತ್ತು ಅಪವಿತ್ರ ಮೈತ್ರಿಕೂಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
5. ಪ್ರವಾಹ ನಿಯಂತ್ರಣ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಅನುಭವ ಹೊಂದಿರುವ ನದಿ ತಜ್ಞರು, ಪರಿಸರವಾದಿಗಳು ಮತ್ತು ಖ್ಯಾತ ಇಂಜಿನಿಯರ್ಗಳನ್ನು ಒಳಗೊಂಡ ಪರಿಣಿತ ಸಮಿತಿಯನ್ನು ರಚಿಸಬೇಕು.
6. ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಅರಣ್ಯನಾಶವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
