ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಕಾಯ್ದೆ(FCRA)ಯು ದೇಶದ ಯಾವುದೇ ವ್ಯಕ್ತಿ, ಸಂಘ ಮತ್ತು ಸರ್ಕಾರೇತರ ಸಂಸ್ಥೆ(NGO)ಗಳು ವಿದೇಶಿ ಕೊಡುಗೆಗಳನ್ನು ಪಡೆಯುವುದನ್ನು ಮತ್ತು ಬಳಸುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ತಂದಿರುವ ಅತ್ಯಂತ ವಿವಾದಾತ್ಮಕ ಕಾನೂನಾಗಿದೆ. ವಿದೇಶಿ ಮೂಲದ ಕಾಣಿಕೆಗಳ ಬಗ್ಗೆ ಪಾರದರ್ಶಕತೆಗಾಗಿ ಮತ್ತು ಅವು ಭಾರತದ ಸಾರ್ವಭೌಮತ್ವ ಹಾಗೂ ಅಖಂಡತೆಗೆ ಧಕ್ಕೆ ಮಾಡಲು ಬಳಕೆಯಾಗದಂತೆ ಖಾತ್ರಿಪಡಿಸಿಕೊಳ್ಳುವುದು FCRA ಯ ಪ್ರಮುಖ ಉದ್ದೇಶವೆಂದು ಹೇಳಲಾಗುತ್ತಿದೆ. ಆದರೆ, ಈ ಕಾಯ್ದೆಯ ಅನುಷ್ಠಾನದಲ್ಲಿ ನ್ಯಾಯಸಮ್ಮತೆ ಮತ್ತು ತಾರತಮ್ಯರಹಿತ ಕ್ರಮಗಳನ್ನು ಅನುಸರಿಸಲಾಗುತ್ತದೆಯೇ ಎಂಬುದೇ ಬಹುದೊಡ್ಡ ಪ್ರಶ್ನೆ.

ನೈಜ ಉದ್ದೇಶ

ಕೇಂದ್ರ ಬಿಜೆಪಿ ಸರ್ಕಾರವು NGOಗಳನ್ನು ನಿಯಂತ್ರಿಸುವ ನೆಪದಲ್ಲಿ ತನ್ನ ವಿರೋಧಿಗಳನ್ನು ಹಣಿಯಲು ಈ ಕಾಯ್ದೆಯನ್ನು ಬಳಸುತ್ತಿದೆ. ಈ ಪರಿಸ್ಥಿತಿಯಲ್ಲಿ, 2026ರ ಮಾರ್ಚ್ 25ರಂದು ಲೋಕಸಭೆಯಲ್ಲಿ FCRA ಕಾಯ್ದೆಗೆ ತಿದ್ದುಪಡಿಯನ್ನು ಮಂಡಿಸಲಾಯಿತಾದರೂ ಸಹ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಡೆಯಲಿದ್ದ ಚುನಾವಣೆಗಳ ಮೇಲೆ ಇದು ಪ್ರಭಾವ ಬೀರಬಹುದೆಂಬ ಭೀತಿಯಿಂದ ಮಸೂದೆಯ ಮೇಲಿನ ಚರ್ಚೆಯನ್ನು ಆಗ ಮುಂದೂಡಲಾಯಿತು. ಎನ್‌ಜಿಓಗಳ ಕಾರ್ಯಚಟುವಟಿಕೆಗಳಲ್ಲಿ ಕಾಣುವ ಕ್ರಮಬದ್ಧತೆಯಲ್ಲಿನ ದೋಷ, ನಿಧಿಯ ಅಪವ್ಯಯ ಅಥವಾ ಲೆಕ್ಕಪತ್ರಗಳ ನಿರ್ವಹಣೆಯಲ್ಲಿನ ಸಮಸ್ಯೆ ಅಥವಾ ನಿಧಿಯನ್ನು ಸ್ವೀಕರಿಸಿದ ಉದ್ದೇಶಕ್ಕಿಂತ ಬೇರೆಯದಕ್ಕೆ, ಅದರಲ್ಲೂ ವಿಶೇಷವಾಗಿ ರಾಜಕೀಯ ಕಾರಣಗಳಿಗಾಗಿ ಬಳಕೆ ಮಾಡಿರುವುದು, ಇತ್ಯಾದಿಗಳನ್ನು ಕಾರಣವಾಗಿಸಿಕೊಂಡು “ಯಾವುದೇ ಸಮಯದಲ್ಲಿ ಎನ್‌ಜಿಓಗಳ ನೋಂದಣಿಯನ್ನು ರದ್ದುಪಡಿಸಲು ಅಥವಾ ನವೀಕರಿಸದಿರಲು” ಅತಿಯಾದ ಪರಮಾಧಿಕಾರವನ್ನು ಈ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ನೋಂದಣಿಯು ರದ್ದಾದರೆ ಅಥವಾ ನವೀಕರಣವಾಗದಿದ್ದರೆ, ವಿದೇಶಿ ನಿಧಿಯಿಂದ ಸಂಗ್ರಹವಾಗಿರುವ ಎಲ್ಲಾ ಹಣ, ಸಂಸ್ಥೆಯ ಬ್ಯಾಂಕ್ ಖಾತೆಗಳು ಮತ್ತು ಎಲ್ಲಾ ಆಸ್ತಿಪಾಸ್ತಿಗಳನ್ನು ಕೇಂದ್ರ ಸರ್ಕಾರವು ಇದಕ್ಕೆಂದೇ ವಿಶೇಷವಾಗಿ ರಚಿಸುವ ಒಂದು ನಾಮನಿರ್ದೇಶಿತ ಪ್ರಾಧಿಕಾರವು ತನ್ನ ಸುಪರ್ದಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ, ಅವನ್ನು ತಾನೇ ನಿರ್ವಹಿಸಬಹುದಾಗಿದೆ ಹಾಗೂ ಅಂತಹ ಸಂಪತ್ತನ್ನು ವಿವಿಧ ಇಲಾಖೆಗಳಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಬಹುದಾಗಿದೆ ಅಥವಾ ಅಂತಹ ಆಸ್ತಿಗಳನ್ನು ಮಾರಾಟ ಅಥವಾ ಇತರ ರೀತಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವೂ ಇರುತ್ತದೆ. ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು, ಸಮಾಜದಂಚಿನ ಸಮುದಾಯಗಳಿಗೆ ಮಹತ್ವದ ಸೇವೆಯನ್ನು ಸಲ್ಲಿಸುವ ಕಾಯಕದಲ್ಲಿ ತೊಡಗಿರುವ ಕೆಲವು ಎನ್‌ಜಿಓಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಗಂಭೀರವಾಗಿ ಅಡ್ಡಿಯುಂಟು ಮಾಡಬಹುದಾಗಿದೆ.

ನಿರಂಕುಶ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೇಂದ್ರದ ಧೋರಣೆಯನ್ನು ಗಮನಿಸಿದರೆ, ತನ್ನ ಇಚ್ಛೆ ಅಥವಾ ಅಣತಿಯ ಪ್ರಕಾರ ಕೆಲಸ ಮಾಡಲು ಒಪ್ಪದ ಎನ್‌ಜಿಓಗಳು ಮತ್ತು ಅವುಗಳನ್ನು ನಿರ್ವಹಿಸುವ ವ್ಯಕ್ತಿಗಳಿಗೆ ಕಿರುಕುಳ ನೀಡಲೆಂದೇ ಈ ತಿದ್ದುಪಡಿ ತರಲಾಗಿದೆ ಎಂಬ ಆತಂಕದಲ್ಲಿ ಸತ್ಯವಿಲ್ಲದಿಲ್ಲ. ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪಗಳನ್ನು ಸುಳ್ಳುಸುಳ್ಳಾಗಿಯಾದರೂ ಹೊರಿಸುವ ಸಾಧ್ಯತೆಯೂ ಇದೆ. ನೋಂದಣಿ ರದ್ದತಿಯ ಜೊತೆಗೆ 5 ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ಸಹ ವಿಧಿಸುವ ಅವಕಾಶವೂ ಈ ತಿದ್ದುಪಡಿಯಲ್ಲಿದೆ.

ವಾಸ್ತವವಾಗಿ, ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರವು ವಿದೇಶಿ ಮೂಲಗಳಿಂದ ನಿಧಿಯನ್ನು ಸಂಗ್ರಹಿಸುತ್ತಿದ್ದ ಸಾವಿರಾರು ಎನ್‌ಜಿಓಗಳು ಮತ್ತು ಸಂಘಟನೆಗಳ ನೋಂದಣಿಯನ್ನು ರದ್ದುಪಡಿಸಿದೆ. ನೋಂದಣಿ ಕಳೆದುಕೊಂಡ ಪ್ರಮುಖ ಎನ್‌ಜಿಓಗಳು ಮತ್ತು ಸಂಸ್ಥೆಗಳ ಪಟ್ಟಿಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್(ಸಿಪಿಆರ್), ರಾಜೀವ್ ಗಾಂಧಿ ಫೌಂಡೇಶನ್ & ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್, ಆಕ್ಸ್ಫಾಮ್ ಇಂಡಿಯಾ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ, ಗ್ರೀನ್‌ಪೀಸ್, ವರ್ಲ್ಡ್ ವಿಷನ್ ಇಂಡಿಯಾ, ವಾಲಂಟರಿ ಹೆಲ್ತ್ ಅಸೋಸಿಯೇಷನ್ ಅಫ್ ಇಂಡಿಯಾ, ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೆಬಿಲಿಟಿ ಮತ್ತು ಇವ್ಯಾಂಜೆಲಿಕಲ್ ಫೆಲೋಶಿಪ್ ಅಫ್ ಇಂಡಿಯಾ ಸೇರಿವೆ. 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಒಟ್ಟು 10,046 ಎನ್‌ಜಿಓಗಳ ಪೈಕಿ ಶೇ.72ರಷ್ಟರ ನೋಂದಣಿಯನ್ನು ರದ್ದುಪಡಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಇನ್ನೊಂದು ವಿಶ್ಲೇಷಣೆಯ ಪ್ರಕಾರ, ನೋಂದಣಿ ರದ್ದಾದ ಎನ್‌ಜಿಗಳಲ್ಲಿ ಸುಮಾರು ಶೇ.12ರಷ್ಟು ಎನ್‌ಜಿಓಗಳು ಕ್ರೈಸ್ತ ಮತ್ತು ಶೇ.2ರಷ್ಟು ಮುಸಲ್ಮಾನ ಮೂಲದ ಹಿನ್ನೆಲೆಯನ್ನು ಹೊಂದಿದ್ದವು. ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆಯ ವಿರುದ್ಧ ಅಕ್ರಮ ವಿದೇಶಿ ನಿಧಿ ಮತ್ತು ಚೀನಾ ಪರ ಪ್ರಚಾರದ ಆರೋಪಗಳನ್ನು ಮಾಡಿದ ಕೇಂದ್ರ ಸರ್ಕಾರವು, ಇದೇ ರೀತಿಯ ನೆಪಗಳನ್ನು ಮುಂದು ಮಾಡಿ ಬಹುಸಂಸ್ಥೆಗಳ ಮೇಲೆ ದಾಳಿಗಳನ್ನು ನಡೆಸಿದ್ದು, ಹಲವು ವರ್ಷಗಳ ಹಣಕಾಸು ವಹಿವಾಟಿನ ತನಿಖೆಯನ್ನು ನಡೆಸಿತು. ನ್ಯೂಸ್‌ಕ್ಲಿಕ್ ಸುದ್ದಿ ಮಾಧ್ಯಮದ ಸಂಸ್ಥಾಪಕ ಪ್ರಭೀರ್ ಪೂರ್ಕಾಯಸ್ಥ ಮತ್ತು ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯವರನ್ನು 2023ರ ಅಕ್ಟೋಬರ್ 3 ರಂದು ಯುಎಪಿಎಯ ಅಡಿಯಲ್ಲಿ ಬಂಧಿಸಲಾಗಿತ್ತು. ನಂತರ 2024ರ ಮೇನಲ್ಲಿ ಸುಪ್ರೀಂ ಕೋರ್ಟ್ ಆ ಬಂಧನವನ್ನು ಅಮಾನ್ಯವೆಂದು ಸಾರಿತು ಮತ್ತು ದೆಹಲಿ ಹೈಕೋರ್ಟ್ 2026ರ ಜೂನ್‌ನಲ್ಲಿ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಮಾಡಿತು.

ಇದಲ್ಲದೆ, ಆದಿವಾಸಿ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಕ್ಕಾಗಿ, ಅರಣ್ಯವಾಸಿಗಳ ರಕ್ಷಣೆಗಾಗಿ ಮತ್ತು ಬೃಹತ್ ಗಣಿಗಾರಿಕೆ, ಸಿಮೆಂಟ್ ಹಾಗೂ ಕಲ್ಲಿದ್ದಲು ಕಂಪನಿಗಳಿಗೆ ಬಲಾತ್ಕಾರದಿಂದ ಹಂಚಿಕೆಯಾಗುತ್ತಿದ್ದ ಭೂಮಿಯನ್ನು ರಕ್ಷಿಸಲು ಬದ್ಧವಾಗಿ ಕೆಲಸ ಮಾಡುತ್ತಿದ್ದ ಅನೇಕ ಎನ್‌ಜಿಓಗಳು ಮತ್ತು ಸಂಸ್ಥೆಗಳ ನೋಂದಣಿಯನ್ನು ಕೇವಲ ರಾಜಕೀಯ ಕಾರಣಕ್ಕಾಗಿಯೇ ಬಿಜೆಪಿ ಸರ್ಕಾರವು ರದ್ದುಪಡಿಸಿದ ಹಲವು ನಿದರ್ಶನಗಳಿವೆ. ಅದಾನಿ, ವೇದಾಂತ, ಜೆಎಸ್‌ಡಬ್ಲ್ಯು ಮುಂತಾದ ಉದ್ಯಮ ಗುಂಪುಗಳಿಗೆ ಅರಣ್ಯ ಪ್ರದೇಶಗಳನ್ನು ಪರಭಾರೆ ಮಾಡುವುದನ್ನು ವಿರೋಧಿಸಿದ್ದಕ್ಕಾಗಿ ಇಂತಹ ಸಂಸ್ಥೆಗಳು ಮತ್ತು ಎನ್‌ಜಿಓಗಳಿಗೆ ಸರ್ಕಾರವು “ಅರ್ಬನ್ ನಕ್ಸಲ್ಸ್ ” ಮತ್ತು “ಟುಕ್ಡೆ-ಟುಕ್ಡೆ ಗ್ಯಾಂಗ್ಸ್” ಎಂದು ಹಣೆಪಟ್ಟಿ ಹಚ್ಚಿದೆ.

ದುಷ್ಪರಿಣಾಮಗಳು

ಬಿಜೆಪಿ ಸರ್ಕಾರದ ಹಿಂದೂ ಕೋಮುವಾದಿ ಅಜೆಂಡಾದ ಹಿನ್ನೆಲೆಯಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ, ಈ ಮಸೂದೆಯು ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗಾಗಿ ದುಡಿಯುತ್ತಿರುವ ಶಾಲೆಗಳು, ಆಸ್ಪತ್ರೆಗಳು ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಕ್ರೈಸ್ತ ಸಂಸ್ಥೆಗಳಿಗೆ ಗಂಭೀರ ತೊಂದರೆ ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಹಲವು ವಿದೇಶಿ ನಿಧಿ ಮೂಲಗಳಿಂದ ಹಲವಾರು ಕ್ರೈಸ್ತ ಮತ್ತು ಮುಸಲ್ಮಾನ ಸಂಸ್ಥೆಗಳಿಗೆ ದೇಣಿಗೆ ಬರುತ್ತಿದ್ದು, ಅವುಗಳ ಅಸ್ತಿತ್ವಕ್ಕೆ, ಧ್ಯೇಯೋದ್ದೇಶಗಳಿಗೆ ಅತ್ಯಗತ್ಯ ಬೆಂಬಲವನ್ನು ಒದಗಿಸುತ್ತಿವೆ. ಅನೇಕ ಕ್ರೈಸ್ತ ಶೈಕ್ಷಣಿಕ ಆಸ್ಪತ್ರೆಗಳು ಮತ್ತು ದತ್ತಿ ಸಂಸ್ಥೆಗಳು ಜಾಗತಿಕ ಚರ್ಚುಗಳ ಸಮೂಹಜಾಲಗಳೊಂದಿಗೆ ಸಾಂಪ್ರದಾಯಿಕವಾಗಿ ಸಂಪರ್ಕ ಹೊಂದಿವೆ. ಕೆಲವು ಮುಸಲ್ಮಾನ ದತ್ತಿ ಸಂಸ್ಥೆಗಳು ಕೊಲ್ಲಿ ರಾಷ್ಟ್ರಗಳಿಂದ ಒದಗಿ ಬರುವ ದೇಣಿಗೆಗಳ ಮೇಲೆ ತಮ್ಮ ಉಳಿವಿಗಾಗಿ ಅವಲಂಬಿತವಾಗಿವೆ. ಆ ಹಣವನ್ನು ಸಾಮುದಾಯಿಕ ಕಲ್ಯಾಣ ಮತ್ತು ಶೈಕ್ಷಣಿಕ ಮತ್ತು ಆರೋಗ್ಯ ಕುರಿತ ಯೋಜನೆಗಳಿಗೆ ಅವು ಬಳಸುತ್ತವೆ. ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಜಾಗತಿಕ ಮುಖಂಡತ್ವವು ತಮ್ಮ ಕೆಳಗಿರುವ ಧಾರ್ಮಿಕ ಸಂಸ್ಥೆಗಳು ವಿದೇಶಿ ಕಾಣಿಕೆಗಳ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದುವಂತೆ ಮಾಡಿದೆ. ಅಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್‌ನ ಮುಖ್ಯಸ್ಥರು ಮತ್ತು ಗುಡ್ ಶೆಫರ್ಡ್ ಚರ್ಚ್ ಆಫ್ ಇಂಡಿಯಾದ ಪ್ರಾಥಮಿಕ ಆರ್ಚ್ ಬಿಷಪ್ ಆದ ಜೋಸೆಫ್ ಡಿಸೋಜಾ, “FCRAಗೆ ಸರ್ಕಾರವು ಪ್ರಸ್ತಾಪಿಸಿರುವ ತಿದ್ದುಪಡಿಗಳು, ಕ್ರೈಸ್ತ ಸಂಸ್ಥೆಗಳು ಮತ್ತು ಅವುಗಳ ಆಸ್ತಿಗಳ ಲೂಟಿ ಮತ್ತು ಕಳ್ಳತನಕ್ಕೆ ಅವಕಾಶ ಮಾಡಿಕೊಡುತ್ತವೆ” ಎಂದು ಖಂಡಿಸಿದ್ದಾರೆ. ತನಗೆ ಒಗ್ಗದ ಮತ್ತು ಪ್ರಶ್ನೆಗಳನ್ನು ಎತ್ತುವಂತಹ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಸರ್ಕಾರದ ನಿಜವಾದ ಉದ್ದೇಶವೆಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ತಾರತಮ್ಯದ ಧೋರಣೆ

ಅದೇ ಸಮಯದಲ್ಲಿ, ಪ್ರಸ್ತಾಪಿತ ತಿದ್ದುಪಡಿಯು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಅಥವಾ ಸೂಕ್ತವೆಂದು ಕಂಡುಬಂದಲ್ಲಿ ಕೆಲವು ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ನಿಯಮಗಳಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಪ್ರಸ್ತಾಪವು ತಾರ್ಕಿಕವೆಂದು ಕಂಡುಬಂದರೂ, ಆಡಳಿತಾರೂಢ ಪಕ್ಷಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಅದರ ಅಂಗಸಂಸ್ಥೆಗಳು ಈ ವಿನಾಯಿತಿಯ ಮುಖ್ಯ ಫಲಾನುಭವಿಗಳಾಗುತ್ತವಲ್ಲವೇ! ಉದಾಹರಣೆಗೆ, ಪಿಎಂ ಕೇರ್ಸ್ ಫಂಡ್ ಇದರ ಅತ್ಯಂತ ಪ್ರಮುಖ ಫಲಾನುಭವಿಯಾಗಬಹುದು. ಅದು ಶೇ.100ರಷ್ಟು ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತದೆ. ಅದು, ವಿದೇಶಿ ನಿಧಿಯನ್ನೂ ಒಳಗೊಂಡಂತೆ ಎಲ್ಲಾ ರೀತಿಯ ದೇಣಿಗೆಗಳನ್ನೂ ಪಡೆಯುತ್ತದೆ ಮತ್ತು FCRA ನಿಯಮಗಳಿಂದ ವಿನಾಯಿತಿಯನ್ನೂ ಪಡೆದಿದೆ. ಆದರೆ, ಸಣ್ಣಪುಟ್ಟ NGOಗಳು ದೇಶೀಯವಾಗಲಿ ಅಥವಾ ವಿದೇಶಿಯಾಗಲಿ, ತಮ್ಮ ನಿಧಿ ಮೂಲಗಳ ಕುರಿತು ನಿರಂತರ ಕಿರುಕುಳ ಮತ್ತು ಪರಿಶೀಲನೆಯನ್ನು ಅನುಭವಿಸುತ್ತವೆ. ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳು ವಿದೇಶಿ ನಿಧಿಯನ್ನು ನೇರವಾಗಿ ವಿದೇಶದಿಂದ ಅಥವಾ ದೇಶೀಯ ನಿಧಿಯ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಪಡೆಯುತ್ತಿದ್ದರೂ ಸಹ, ಅವುಗಳ ಕಾರ್ಯನಿರ್ವಹಣೆಯ ಮೇಲೆ ಬಹುತೇಕ ಯಾವುದೇ ನಿಗಾ ಇಲ್ಲ. ಅವುಗಳನ್ನು ‘ಸಂದೇಹಾತೀತ’ ಎಂಬ ವರ್ಗಕ್ಕೆ ಸೇರಿಸಲಾಗಿದೆ. ಇದೇನು ವಿಚಿತ್ರ!!

ಈ ಹೊಸ ತಿದ್ದುಪಡಿ ಅಂಗೀಕಾರವಾದರೆ, ವಿದೇಶಿ ನಿಧಿಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು, ದತ್ತಿ NGO ಗಳು ಮತ್ತು ಕ್ರೈಸ್ತ ಹಾಗೂ ಮುಸಲ್ಮಾನ ಸಂಘಟನೆಗಳ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಪ್ರಸಕ್ತ ಕಾನೂನಿನ ದುರುಪಯೋಗ ಈಗಾಗಲೇ ಸ್ಪಷ್ಟವಾಗಿ ಸಾಬೀತಾಗಿದೆ. ಆದ್ದರಿಂದ, ಆಡಳಿತಾರೂಢ ಪಕ್ಷಕ್ಕೆ ಇರುಸುಮುರುಸು ಉಂಟುಮಾಡುವ ಸಂಸ್ಥೆಗಳನ್ನು ವಿಚಕ್ಷಣೆಗೆ ಒಳಪಡಿಸಿ, ವಿದೇಶಿ ನಿಧಿಗಳ ಮೇಲೆ ಅವು ಅವಲಂಬಿತವಾಗಿರುವುದನ್ನೇ ನೆಪವಾಗಿಸಿಕೊಂಡು ಆ ಸಂಸ್ಥೆಗಳನ್ನು ಹಣಿಯುವುದೇ ಈ ತಿದ್ದುಪಡಿಯ ಉದ್ದೇಶವಾಗಿದೆ. FCRA ಕಾಯ್ದೆಯ ತಿದ್ದುಪಡಿಯ ಪೂರ್ಣ ಉದ್ದೇಶ NGO ಗಳನ್ನು ಸರಿಯಾಗಿ ನಿಯಂತ್ರಿಸುವುದಲ್ಲ; ಬದಲಾಗಿ ವಿದೇಶಿ ನಿಧಿಗಳ ಮೇಲೆ ಅವಲಂಬಿತವಾಗಿರುವ ಭಿನ್ನಮತವುಳ್ಳ ಮತ್ತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಸಂಸ್ಥೆಗಳನ್ನು ಮೌನಗೊಳಿಸುವ ರಾಜಕೀಯ ಅಸ್ತ್ರ ಅದು ಎನ್ನುವುದೇ ಆಗಿದೆ. ಈ ಹಣಕಾಸು ನಿಯಂತ್ರಣಕ್ಕೂ ಬಿಜೆಪಿಯ ದಬ್ಬಾಳಿಕೆಯ ಅಜೆಂಡಾಗೂ ಸಂಬಂಧವಿದೆ ಎಂಬುದನ್ನು ನಿರಾಕರಿಸಲಾಗುವುದಿಲ್ಲ. ಆದ್ದರಿಂದ, ಈ ತಿದ್ದುಪಡಿ ಪಾರದರ್ಶಕತೆ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಎಂಬ ವಾದವೂ ಸಹ ಸಮರ್ಥನೀಯವಲ್ಲ. ಸಾಮಾಜಿಕ ಸಮಾನತೆಯ ಕಾಳಜಿ ಹೊಂದಿರುವ ಎಲ್ಲರೂ ಇದರ ವಿರುದ್ಧ ಪ್ರತಿರೋಧದ ಧ್ವನಿ ಎತ್ತಬೇಕು. ಶಕ್ತಿಶಾಲಿಯಾದ ಸಂಘಟಿತ ಸಾರ್ವಜನಿಕ ಪ್ರತಿಭಟನೆ ಮಾತ್ರ ಈ ಪ್ರಸ್ತಾವಿತ ತಿದ್ದುಪಡಿಯನ್ನು ಹಿಂಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬಲ್ಲದು.