ಸಮಾನ ಹಕ್ಕುಗಳು ಆಲ್ಬರ್ಟ್ ಪಾರ್ಸನ್ಸ್
“ನಾವು ಸ್ವತಂತ್ರರು ಮತ್ತು ಎಲ್ಲರೂ ಸಮಾನರು ಎಂಬ ಮಾತುಗಳು ನಮ್ಮ ಕಿವಿಗಳನ್ನು ಅಪ್ಪಳಿಸುತ್ತಿರುತ್ತವೆ. ಎಲ್ಲರಿಗೂ, ಪ್ರತಿಯೊಂದು ದಾರಿಯೂ ಒಂದೇ ತೆರನಾಗಿ ತೆರೆದಿದೆ ಮತ್ತು ಎಲ್ಲರೂ ಉತ್ತುಂಗಕ್ಕೇರಬಹುದು ಎಂದು. ಸಂಪತ್ತಿನ ದಾರಿ ಎಲ್ಲರಿಗೂ ಒಂದೇ ತೆರನಾಗಿ ತೆರೆದಿದೆ, ಎಂದು. ಬಡವರಲ್ಲಿ ಭರವಸೆಗಳನ್ನು ಹುಟ್ಟಿಸಲು ಮತ್ತು ತಮ್ಮ ಹೀನಾಯ ಪರಿಸ್ಥಿತಿಯಲ್ಲೇ ಬಡವರು ತೃಪ್ತರಾಗಿರುವಂತೆ ಮಾಡಲು ಶ್ರೀಮಂತರು ನಿರಂತರವಾಗಿ ಈ ಕುತರ್ಕವನ್ನು ಬಡವರ ಮುಂದಿಡುತ್ತಿದ್ದಾರೆ. ಇದು ಅಪ್ಪಟ ಸುಳ್ಳು ಮತ್ತು ಮೂರ್ಖತನದ ಆಲೋಚನೆ. ಪ್ರತಿಯೊಬ್ಬರೂ, ಸಾಧ್ಯವಾದರೆ, ತುತ್ತತುದಿಯನ್ನು ತಲುಪಲು ಪಕ್ಕಾ ಹಕ್ಕುಗಳಿವೆ ಎಂದರೂ ಸಹ, ಎಲ್ಲರೂ ಮೇಲಕ್ಕೇರಬಹುದೆಂದು ಕಲ್ಪಿಸಿಕೊಳ್ಳುವಷ್ಟು ಮೂರ್ಖರು ಯಾರೂ ಇಲ್ಲ. ವಾಸ್ತವವೇನೆಂದರೆ, ಹತ್ತರಲ್ಲಿ ಒಬ್ಬರೂ ಸಹ ಉತ್ತುಂಗವನ್ನು ತಲುಪಲು ಸಾಧ್ಯವಿಲ್ಲ ಮತ್ತು ಅಲ್ಲಿಗೆ ತಲುಪಿದವರಲ್ಲಿ ಹತ್ತನೇ ಒಂದರಷ್ಟು ಜನರೂ ಸಹ ಅಲ್ಲಿ ತಲುಪಿದ ಮೇಲೆ ಅಲ್ಲೇ ಬಹಳ ಕಾಲ ಉಳಿಯುವುದಿಲ್ಲ ಎಂದೂ ಸಹ ಎಲ್ಲರೂ ಬಲ್ಲರು. ಕೆಳಗಿನವರ ಮೇಲೆ ನಿಲ್ಲುತ್ತಾ ಮೇಲಿನವರು ಮತ್ತಷ್ಟು ಸುರಕ್ಷತೆ ಮತ್ತು ನೆಮ್ಮದಿಯನ್ನು ಅನುಭವಿಸಲು ಕೆಳಗಿನವರ ಬಾಯಿ ಮುಚ್ಚಿಸುವುದನ್ನು ಬಿಟ್ಟರೆ, ‘ಪ್ರತಿಯೊಬ್ಬರಿಗೂ ಏಣಿಯ ಮೇಲೆ ನಿಲ್ಲುವ ಪಕ್ಕಾ ಹಕ್ಕಿದೆ’ ಎನ್ನುವ ಮಾತುಗಳಿಗೆ ಬೇರಾವ ಅರ್ಥವಿದೆ? ಆ ಕೆಳಗಿನವರಲ್ಲಿ ಕೆಲವರು ತಮ್ಮ ಭಾರವನ್ನು ಸ್ಫೋಟಿಸಲು ಸ್ವಲ್ಪ ಡೈನಮೈಟ್‌ನ್ನು ಬಳಸಲು ನಿರ್ಧಾರ ಮಾಡಿದರೆಂದು ಭಾವಿಸೋಣ. ಆಗ ಮೇಲಿನ ಮಹತ್ವಾಕಾಂಕ್ಷಿಗಳಲ್ಲಿ ಕೆಲವರು ತಾವು ಮೇಲೇರಲು ಸಹಜೀವಿಯನ್ನು ಏಣಿಯನ್ನಾಗಿ ಬಳಸಿಕೊಳ್ಳುವುದನ್ನು ಬಿಟ್ಟು ತಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಬೇರೆ ಸುರಕ್ಷಿತ ಮಾರ್ಗಗಳನ್ನು ಹುಡುಕಿಕೊಳ್ಳುವುದಿಲ್ಲವೇ? ಪ್ರತಿಯೊಬ್ಬ ಮನುಷ್ಯನೂ ತನ್ನ ಸಹಜೀವಿಯಲ್ಲಿ ಸ್ಫೋಟಕದೇಣಿಯನ್ನು ಕಂಡಾಗ ತಾನು ಮೇಲಕ್ಕೆ ಏರಲು ತನ್ನ ಸಹಜೀವಿಯನ್ನು ಏಣಿಯನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸುತ್ತಾನೆ. ಪ್ರಪಂಚದಲ್ಲಿ ಸಿಡಿಮದ್ದು ಸ್ವಲ್ಪ ಸ್ವಾತಂತ್ರ್ಯವನ್ನು ತಂದಿತು ಮತ್ತು ಸಿಡಿಮದ್ದಿಗಿಂತ ತಾನು ಎಷ್ಟು ಹೆಚ್ಚು ಪ್ರಬಲವಾಗಿದೆಯೋ ಅಷ್ಟು ಹೆಚ್ಚು ಸ್ವಾತಂತ್ರ್ಯವನ್ನು ಡೈನಮೈಟ್ ತರುತ್ತದೆ. ಯಾರಿಗೇ ಆಗಲಿ, ಇನ್ನೊಬ್ಬರ ಪಾದಗಳನ್ನು ಬಳಸಿ ನಡೆಯುವ ಹಕ್ಕಿಲ್ಲ. ಡೈನಮೈಟ್ ಸಮಾನತೆಯನ್ನು ಸೃಷ್ಟಿಸುತ್ತದೆ. ಪ್ರತಿಯೊಬ್ಬರಿಗೂ ಮೇಲೇರಬೇಕೆಂಬ ಸಹಜ ಮಹತ್ವಾಕಾಂಕ್ಷೆ ಇರುತ್ತದೆ ಮತ್ತು ಅದು ನಿಸರ್ಗದತ್ತವಾದ ಹಕ್ಕು. ಆದರೆ, ಇನ್ನೊಬ್ಬನನ್ನು ಬಲಿ ಕೊಟ್ಟು ಮೇಲೇರುವ ಹಕ್ಕು ಯಾರಿಗೂ ಇಲ್ಲ. ಮೇಲೇರಲು ಬೇರೆ ಯಾವುದಾದರೂ ದಾರಿಯನ್ನು ಕಾಣುವಷ್ಟು ಪ್ರಜ್ಞೆ ಇಲ್ಲದವನು ನೆಲದ ಮೇಲಿರಲಿ. ಇಲ್ಲಿ ಸಾಕಷ್ಟು ಜಾಗವಿದೆ. ಬೇರೆಯವರ ಕುತ್ತಿಗೆಯ ಮೇಲೆ ನಿಲ್ಲದೆ ಯಾವ ವ್ಯಕ್ತಿಯೂ ಸಹ ಈ ಪ್ರಪಂಚದ ಎಲ್ಲಾ ಐಷಾರಾಮಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವ ವಿಚಾರ ತುಂಬಾ ಕಾಲ ನಿಲ್ಲದ ಅತ್ಯಂತ ಅಸಮರ್ಥನೀಯ ವಿಚಾರ. ಯಾವ ನೆಪದಲ್ಲಾದರೂ ಸರಿಯೇ, ಒಬ್ಬ ವ್ಯಕ್ತಿಗೆ ಇತರರ ಶ್ರಮದಿಂದ ಬಂದ ಲಾಭದ ಮೇಲೆ ಜೀವಿಸಲು ಸಾಧ್ಯವಿಲ್ಲ. ಬೇರೆಯವರ ಉತ್ಪತ್ತಿಗಳ ಆಧಾರದ ಮೇಲೆ ನಿಲ್ಲುವವನು ಆ ವ್ಯಕ್ತಿಯ ಮೇಲೆಯೇ ನಿಂತಿರುತ್ತಾನೆ. ಅದಕ್ಕಾಗಿ ಅವನು ಯಾವುದೇ ಕುಂಟುನೆಪವನ್ನೇ ನೀಡಿದರೂ ಅವನು ಅಕ್ಷಮ್ಯವಾಗಿ ಅವನ ಮೇಲೆಯೇ ನಿಂತಿರುತ್ತಾನೆ. ಕೆಳಗೆ ಭಾರ ಹೊತ್ತು ನಿಂತಿರುವವನು ತನ್ನ ಭಾರವನ್ನು ಬಿಸಾಕಬೇಕು ಮತ್ತು ಮುಂದೊಂದು ದಿನ ಮೇಲೇರಬಹುದೆಂದು ತಾಳ್ಮೆಯಿಂದಿರಬೇಕು ಎನ್ನುವ ವಿಚಾರದಿಂದ ಮೋಸ ಹೋಗಬಾರದು. ಅಂತಹ ಬುದ್ಧಿಗೇಡಿತನಕ್ಕೆ ಧಿಕ್ಕಾರ! ಒಬ್ಬ ವ್ಯಕ್ತಿಗೆ, ಯಾವುದೇ ಕಾರಣಕ್ಕಾದರೂ ಸರಿಯೇ, ಒಂದು ಕ್ಷಣವೂ ಇನ್ನೊಬ್ಬನ ಮೇಲೆ ಅವಲಂಬಿಸಿ ಬದುಕಲು ಹಕ್ಕಿಲ್ಲ. ನೀವು ‘ಬಹುಶಃ, ಸದ್ಯದಲ್ಲೇ, ಅಂತಿಮವಾಗಿ’ (ಅಂದರೆ ಅಂತಿಮವಾಗಿ, ಬಹುಶಃ, ಸದ್ಯದಲ್ಲೇ ಎಲ್ಲವೂ ಸರಿಹೋಗಬಹುದು ಎಂಬ ಪೊಳ್ಳು ಭರವಸೆ-ಸಂ) ಎಂಬ ಮೂರ್ಖತನದ ವಿಚಾರದಿಂದ ಇನ್ನೆಂದಿಗೂ ಮೋಸ ಹೋಗದಿರಿ.”
