ಕಾಮ್ರೇಡರೇ, ಕೆಂಪು ಸೈನ್ಯದ ಯೋಧರೇ ಮತ್ತು ಕೆಂಪು ನೌಕಾದಳದವರೇ, ಸಾರ್ಜೆಂಟರೇ, ಅಧಿಕಾರಿಗಳೇ ಮತ್ತು ಸೈನ್ಯಾಧಿಪತಿಗಳೇ, ಪುರುಷ ಮತ್ತು ಮಹಿಳಾ ಗೆರಿಲ್ಲಾ ಯೋಧರೇ! ಸೋವಿಯತ್ ಒಕ್ಕೂಟದ ದುಡಿಯುವ ಜನರೇ! ಜರ್ಮನ್ ದಮನಕಾರರ ಸಂಕೋಲೆಯಲ್ಲಿ ತಾತ್ಕಾಲಿಕವಾಗಿ ಸಿಲುಕಿರುವ ಮತ್ತು ಜರ್ಮನಿಯಲ್ಲಿ ಫ್ಯಾಸಿವಾದಿ ಗುಲಾಮಗಿರಿಯ ದುಡಿಮೆಗೆ ಬಲಾತ್ಕಾರದಿಂದ ದೂಡಲ್ಪಟ್ಟ ಸೋದರ, ಸೋದರಿಯರೇ! ಸೋವಿಯತ್ ಸರ್ಕಾರ ಮತ್ತು ನಮ್ಮ ಬೊಲ್ಷೆವಿಕ್ ಪಕ್ಷದ ಪರವಾಗಿ ಮೇ ದಿನದಂದು ನಿಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಕೆಂಪು ಸೈನ್ಯದ ಅಸಾಧಾರಣ ಗೆಲುವುಗಳ ನಡುವೆ ಮೇ 1ರ ದಿನವನ್ನು ನಮ್ಮ ದೇಶದ ಜನ ಎದುರುಗೊಳ್ಳುತ್ತಿದ್ದಾರೆ. ಜರ್ಮನ್ ಪಡೆಗಳನ್ನು ಸ್ಟಾಲಿನ್‌ಗ್ರಾಡ್‌ನಲ್ಲಿ ಪರಾಭವಗೊಳಿಸಿದ ನಂತರ ಕೆಂಪು ಸೈನ್ಯವು ಅಕ್ಷರಶ: ಎಡೆಬಿಡದೆ ದಾಳಿಗಳನ್ನು ನಡೆಸುತ್ತಿದೆ. ಇದೇ ಸಮಯದಲ್ಲಿ ಕೆಂಪು ಸೈನ್ಯವು ವೊಲ್ಗಾದಿಂದ ಸಿರೆತ್‌ವರೆಗೆ, ಕಾಕಸಸ್‌ನ ತಪ್ಪಲಿನಿಂದ ಕಾರ್ಪತಿಯನ್ಸ್  ವರೆಗೆ ಶತ್ರು ಕ್ರಿಮಿಗಳನ್ನು ನಾಶ ಮಾಡುತ್ತಾ ಮುನ್ನುಗ್ಗುತ್ತಿದೆ ಮತ್ತು ಸೋವಿಯತ್ ನೆಲದಿಂದ ಅವರನ್ನು ಗುಡಿಸಿ ಹಾಕುತ್ತಿದ್ದಾರೆ. 1943-44ರ ಚಳಿಯಲ್ಲಿ ಕೆಂಪು ಸೈನ್ಯವು ನಡೆಸಿದ ಕಾರ್ಯಾಚರಣೆಯು ನೀಪರ್ ಮತ್ತು ನೀಪರ್‌ನ ಪಶ್ಚಿಮಕ್ಕಿರುವ ಉಕ್ರೇನಿನ ಪ್ರದೇಶಗಳಲ್ಲಿ ಗೆಲುವನ್ನು ತಂದುಕೊಟ್ಟಿತು; ಲೆನಿನ್‌ಗ್ರಾಡ್ ಮತ್ತು ಕ್ರಿಮಿಯಾಗಳಲ್ಲಿ ಬಲಿಷ್ಠ ಜರ್ಮನರ ಪ್ರಬಲ ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿತು; ದಕ್ಷಿಣ ಬಗ್, ನೀಸ್ಟರ್, ಪ್ರುತ್, ಸೆರೆತ್‌ಗಳ ನೌಕಾ ತಡೆಗೋಡೆಗಳ ಮೇಲೆ ನೈಪುಣ್ಯದಿಂದ ಬಲವಾದ ಪ್ರಹಾರ ನಡೆಸಿ ಕೆಂಪು ಸೈನ್ಯವು ಮೇಲುಗೈ ಸಾಧಿಸಿತು. ಹೆಚ್ಚುಕಡಿಮೆ ಇಡೀ ಉಕ್ರೇನ್, ಮೊಲ್ದಾವಿಯಾ, ಕ್ರಿಮಿಯಾ, ಲೆನಿನ್‌ಗ್ರಾಡ್ ಮತ್ತು ಕಾಲಿನಿನ್ ಪ್ರದೇಶಗಳಿಂದ ಮತ್ತು ಬೈಲೋರಷ್ಯಾದ ಬಹುಭಾಗದಿಂದ ಜರ್ಮನ್ ದಾಳಿಕೋರರನ್ನು ತೊಡೆದು ಹಾಕಿತು. ದಕ್ಷಿಣ ಭಾಗದ ಲೋಹ ಕೈಗಾರಿಕೆ, ಕ್ರಿವೊಯ್ ರೊಗ್, ಕ್ರೆಚ್, ನಿಕೊಪೋಲ್ ಪ್ರದೇಶಗಳ ಅದಿರು ಮತ್ತು ನೀಪರ್ ಹಾಗೂ ಪ್ರುತ್ ಪ್ರದೇಶಗಳ ಫಲವತ್ತಾದ ಭೂಮಿಯನ್ನು ಮಾತೃಭೂಮಿಗೆ ವಾಪಸ್ಸು ತರಲಾಗಿದೆ. ಕೋಟ್ಯಂತರ ಸೋವಿಯತ್ ಜನತೆಯನ್ನು ಫ್ಯಾಸಿವಾದಿ ಗುಲಾಮಗಿರಿಯಿಂದ ಬಿಡುಗಡೆ ಮಾಡಲಾಗಿದೆ. ನಮ್ಮ ಸ್ವಂತ ನೆಲವನ್ನು ಫ್ಯಾಸಿಸ್ಟ್ ಆಕ್ರಮಣಕಾರರಿಂದ ಮುಕ್ತಗೊಳಿಸುವ ಮಹಾಕಾರ್ಯವನ್ನು ಮಾಡುತ್ತಾ ರುಮೇನಿಯಾ ಮತ್ತು ಚೆಕೊಸ್ಲೋವಾಕಿಯಾಗಳು ನಮ್ಮೊಂದಿಗೆ ಹಂಚಿಕೊಳ್ಳುವ ಗಡಿಗಳನ್ನು ಕೆಂಪು ಸೈನ್ಯವು ತಲುಪಿದೆ ಮತ್ತು ಈಗ ರುಮೇನಿಯಾದ ಪ್ರದೇಶಗಳಲ್ಲಿ ಶತ್ರು ಪಡೆಗಳನ್ನು ಸದೆಬಡಿಯುವುದರಲ್ಲಿ ಮುಂದುವರೆಯುತ್ತಿದೆ. ಸೋವಿಯತ್ ಕಮ್ಯಾಂಡ್‌ನ ಸರಿಯಾದ ರಣನೀತಿ ಮತ್ತು ರಣತಂತ್ರಗಳಿಂದಾಗಿ, ನಮ್ಮ ಜನರ ಮತ್ತು ಕಮ್ಯಾಂಡರ್‌ಗಳ ಉನ್ನತ ಮನೋಸ್ಥೆೈರ್ಯ ಮತ್ತು ಹುರುಪಿನ ಪ್ರತಿದಾಳಿಯಿಂದಾಗಿ, ಉತ್ತಮ ದರ್ಜೆಯ ಸೋವಿಯತ್ ಯುದ್ಧ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾದ ನಮ್ಮ ಪಡೆಗಳಿಂದಾಗಿ, ನಮ್ಮ ಫಿರಂಗಿದಳ, ಸಣ್ಣ ಫಿರಂಗಿ ಸೈನಿಕರ, ಟ್ಯಾಂಕ್‌ಮನ್‌ಗಳ, ಏರ್‌ಮನ್‌ಗಳ, ಸಿಗ್ನೆಲ್‌ಮನ್‌ಗಳ, ನಿರ್ಮಾಣ ಕಾರ್ಯವನ್ನು ನಿರ್ವಹಿಸಿದ ಸೈನಿಕರ, ಪದಾತಿದಳದವರ, ಅಶ್ವದಳದವರ ಮತ್ತು ಸ್ಕೌಟ್‌ಗಳ ಉತ್ತಮ ಪ್ರಾವೀಣ್ಯತೆ ಹಾಗೂ ತರಬೇತಿಯಿಂದಾಗಿ ಕೆಂಪು ಸೈನ್ಯದ ಗೆಲುವು ಸಾಧ್ಯವಾಯಿತು. ಈ ಗೆಲುವಿನಲ್ಲಿ ನಮ್ಮ ಮಹಾಮೈತ್ರಿಕೂಟವಾಗಿರುವ ಅಮೇರಿಕ ಮತ್ತು ಬ್ರಿಟನ್‌ಗಳ ಗಮನಾರ್ಹ ಕಾಣಿಕೆಯೂ ಇದೆ; ಅವು ಇಟಲಿಯಲ್ಲಿ ಜರ್ಮನಿಯ ವಿರುದ್ಧ ಯುದ್ಧ ನಡೆಸಿದ್ದರಿಂದಾಗಿ, ಜರ್ಮನ್ ಪಡೆಗಳ ಗಮನವನ್ನು ನಮ್ಮಿಂದ ಬೇರೆಡೆಗೆ ತಿರುಗಿಸಲು ಸಹಾಯಕವಾಯಿತು; ಬಹಳ ಅಮೂಲ್ಯವಾದ ಆಯಕಟ್ಟಿನ ಕಚ್ಚಾ ಪದಾರ್ಥಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಅವರು ಸರಬರಾಜು ಮಾಡಿದರು; ಜರ್ಮನಿಯ ಮಿಲಿಟರಿ ನೆಲೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿ, ಅದರ ಮಿಲಿಟರಿ ಬಲವನ್ನು ಕುಗ್ಗಿಸಿದರು. ನಮ್ಮ ಇಡೀ ಸೋವಿಯತ್ ಜನರು ಮತ್ತು ಇಡೀ ದೇಶ ಹಿಂದಳವಾಗಿ ನಿಂತು ಬೆಂಬಲ ಒದಗಿಸದೆ ಇದ್ದಿದ್ದರೆ, ಕೆಂಪು ಸೈನ್ಯವು ಗಳಿಸಿದ ಯಶಸ್ಸು ಅಸ್ಥಿರವಾಗಿರುತ್ತಿತ್ತು ಮತ್ತು ವೈರಿಯು ಮೊದಲಿಗೆ ನಡೆಸಿದ ಘೋರ ದಾಳಿಗೆ ಅದು ಧೂಳಿಪಟವಾಗಿ ಬಿಡುತ್ತಿತ್ತು ಎಂಬುದಂತೂ ದಿಟ. ಮಾತೃಭೂಮಿಗಾಗಿ ನಡೆಸಿರುವ ಈ ಯುದ್ಧಗಳಲ್ಲಿ ಕೆಂಪು ಸೈನ್ಯವು ಅಪ್ರತಿಮ ಧೀರತ್ವವನ್ನು ತೋರಿದೆ. ಆದರೆ, ಸೋವಿಯತ್ ಜನರು ಕೆಂಪು ಸೈನ್ಯಕ್ಕೆ ಯಾವ ರೀತಿಯಲ್ಲೂ ಕಮ್ಮಿಯಾಗಿ ಉಳಿದಿಲ್ಲ. ಯುದ್ಧಕಾಲದ ಕಷ್ಟಕರ ಪರಿಸ್ಥಿತಿಯಲ್ಲಿ ಸೋವಿಯತ್ ಜನತೆ ಶಸ್ತ್ರಾಸ್ತ್ರ, ಬಟ್ಟೆ ಮತ್ತು ದಿನಸಿ ಉತ್ಪಾದನೆಯಲ್ಲಿ ಮತ್ತು ಕೆಂಪು ಸೇನೆಯ ಯುದ್ಧರಂಗಕ್ಕೆ ಅವುಗಳನ್ನು ಸಕಾಲದಲ್ಲಿ ಸರಬರಾಜು ಮಾಡುವುದರಲ್ಲಿ ನಿರ್ಧಾರಕ ಯಶಸ್ಸನ್ನು ಸಾಧಿಸಿದ್ದಾರೆ. ಕಳೆದ ವರ್ಷಗಳಲ್ಲಿ ಸೋವಿಯತ್ ಕೈಗಾರಿಕೆಯ ಶಕ್ತಿಯು ಗಮನಾರ್ಹವಾಗಿ ಏರಿದೆ. ನೂರಾರು ಹೊಸ ಕಾರ್ಖಾನೆಗಳು, ಗಣಿಗಳು, ಹತ್ತಾರು ವಿದ್ಯುಚ್ಛಕ್ತಿ ಕೇಂದ್ರಗಳು, ರೈಲ್ವೆ ಮಾರ್ಗಗಳು ಮತ್ತು ಸೇತುವೆಗಳು ನಿರ್ಮಾಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಲಕ್ಷಾಂತರ ಹೊಸ ಸೋವಿಯತ್ ಜನರು ಯಂತ್ರ ಸಾಧನಗಳ ನಡುವೆ ತಮ್ಮ ಸ್ಥಾನವನ್ನು ಗುರುತಿಸಿಕೊಂಡಿದ್ದಾರೆ, ಅತ್ಯಂತ ಸಂಕೀರ್ಣ ಕಸುಬುಗಳನ್ನು ಕರಗತ ಮಾಡಿಕೊಂಡಿದ್ದಾರೆ, ತಮ್ಮ ಕೆಲಸಗಳಲ್ಲಿ ಪರಿಣಿತಿ ಗಳಿಸಿದ್ದಾರೆ. ನಮ್ಮ ಸಾಮೂಹಿಕ ಕೃಷಿ ಮತ್ತು ರಾಜ್ಯಕೃಷಿ ಕ್ಷೇತ್ರಗಳು ಯುದ್ಧದ ಸವಾಲುಗಳನ್ನು ಸಮರ್ಥವಾಗಿಯೇ ಎದುರಿಸಿದವು. ಯುದ್ಧದ ಕಷ್ಟಕಾಲದಲ್ಲಿ ಸೋವಿಯತ್ ರೈತರು ಕೈಕಟ್ಟಿ ಕುಳಿತುಕೊಳ್ಳದೆ ಜಮೀನುಗಳಲ್ಲಿ ಕೆಲಸ ಮಾಡುತ್ತಾ ನಮ್ಮ ಸೈನ್ಯ ಮತ್ತು ಜನರಿಗೆ ಆಹಾರವನ್ನು ಮತ್ತು ಕೈಗಾರಿಕೆಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಮತ್ತೆ, ನಮ್ಮ ಬುದ್ಧಿಜೀವಿಗಳು ಹೊಸ ಅಸಾಧಾರಣ ಸಾಧನೆಗಳು ಮತ್ತು ಆವಿಷ್ಕಾರಗಳಿಂದ ಸೋವಿಯತ್ ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಮತ್ತು ಕಲೆಯನ್ನು ಸಂಪದ್ಭರಿತಗೊಳಿಸಿದ್ದಾರೆ. ಮಾತೃಭೂಮಿಯ ರಕ್ಷಣೆಯ ಕಾರ್ಯದಲ್ಲಿ, ನಿಸ್ವಾರ್ಥವಾಗಿ ಯುದ್ಧಕ್ಕಾಗಿ ದುಡಿಯುತ್ತಾ, ಯುದ್ಧಕಾಲದ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತಾ ಮತ್ತು ನಮ್ಮ ಮಾತೃಭೂಮಿಯ ವಿಮೋಚಕರಾದ ಕೆಂಪುಸೇನೆಯ ಯೋಧರ ಹೋರಾಟಗಳಿಗೆ ಹುರುಪು ತುಂಬುತ್ತಾ ಸೋವಿಯತ್ ಮಹಿಳೆಯರು ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ದೇಶಪ್ರೇಮಿ ಯುದ್ಧವು ಸೋವಿಯತ್ ಜನರ ಬಳಿ ಪವಾಡಗಳನ್ನು ಮಾಡುವ ಮತ್ತು ಅತ್ಯಂತ ಕಷ್ಟಕರವಾದ ಪರೀಕ್ಷೆಯಲ್ಲೂ ಗೆದ್ದುಬರುವ ಸಾಮರ್ಥ್ಯವಿದೆ ಎನ್ನುವುದನ್ನು ಸಾಬೀತುಪಡಿಸಿತು. ಕಾರ್ಮಿಕರು, ಸಾಮೂಹಿಕ ಕೃಷಿಯ ರೈತರು, ಸೋವಿಯತ್ ಬುದ್ಧಿಜೀವಿಗಳು, ಇಡೀ ಸೋವಿಯತ್ ಜನತೆ ಹೀಗೆ ಎಲ್ಲರಲ್ಲೂ ವೈರಿಯನ್ನು ತ್ವರಿತವಾಗಿ ಸೋಲಿಸುವ, ಫ್ಯಾಸಿಸ್ಟರು ಧ್ವಂಸ ಮಾಡಿರುವ ಆರ್ಥಿಕತೆಯನ್ನು ಪೂರ್ಣವಾಗಿ ಮರುಸ್ಥಾಪನೆ ಮಾಡುವ, ನಮ್ಮ ದೇಶವನ್ನು ಮತ್ತಷ್ಟು ಪ್ರಬಲಗೊಳಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ದೃಢನಿಶ್ಚಯ ತುಂಬಿದೆ. ಕೆಂಪು ಸೈನ್ಯದ ಹೊಡೆತಕ್ಕೆ ಫ್ಯಾಸಿಸ್ಟ್ ಪ್ರಭುತ್ವಗಳ ಬಣದಲ್ಲಿ ಬಿರುಕು ಮೂಡುತ್ತಿದೆ ಮತ್ತು ಅದು ಛಿದ್ರವಾಗುತ್ತಿದೆ. ಈಗ ರುಮೆನಿಯಾ, ಹಂಗರಿ, ಫಿನ್‌ಲೆಂಡ್ ಮತ್ತು ಬಲ್ಗೇರಿಯಾದ “ಹಿಟ್ಲರ್‌ನ ಮೈತ್ರಿಕೂಟ”ದಲ್ಲಿ ಭಯ ಮತ್ತು ಗೊಂದಲ ರಾರಾಜಿಸುತ್ತಿವೆ. ಹಿಟ್ಲರ್‌ನ ಅಧೀನದಲ್ಲಿರುವ ಈ ಗುಲಾಮರು, ಯಾರ ದೇಶವನ್ನು ಜರ್ಮನರು ಈಗಾಗಲೇ ಕಬಳಿಸಿದ್ದಾರೆಯೋ ಅಥವಾ ಕಬಳಿಸುತ್ತಿದ್ದಾರೋ ಅವರು, ಜರ್ಮನಿಯು ಯುದ್ಧದಲ್ಲಿ ಸೋಲು ಅನುಭವಿಸುತ್ತಿರುವುದನ್ನು ನೋಡದೆ ಇರಲು ಸಾಧ್ಯವಿಲ್ಲ. ರುಮೇನಿಯಾ, ಹಂಗರಿ, ಫಿನ್‌ಲ್ಯಾಂಡ್‌ಗಳಿಗೆ ವಿನಾಶದಿಂದ ತಪ್ಪಿಸಿಕೊಳ್ಳಲು ಉಳಿದಿರುವ ಏಕೈಕ ಮಾರ್ಗವೆಂದರೆ, ಅವು ಜರ್ಮನರನ್ನು ತೊರೆದು ಬರಬೇಕು ಮತ್ತು ಯುದ್ಧದಿಂದ ಹಿಂದೆ ಸರಿಯಬೇಕು. ಆದರೂ ಸಹ, ಈ ದೇಶಗಳಲ್ಲಿರುವ ಸರ್ಕಾರಗಳಿಗೆ ಜರ್ಮನರನ್ನು ತೊರೆದು ಬರುವಷ್ಟು ಸಾಮರ್ಥ್ಯವಿದೆ ಎಂದು ನಿರೀಕ್ಷಿಸುವುದು ಕಷ್ಟ. ಜರ್ಮನರ ದೌರ್ಜನ್ಯದಿಂದ ಮುಕ್ತರಾಗುವ ಹೋರಾಟವನ್ನು ಈ ದೇಶಗಳ ಜನರು ತಮ್ಮ ಕೈಗೆ ತೆಗೆದುಕೊಳ್ಳಬೇಕೆಂದು ತೋರುತ್ತದೆ. ಈ ದೇಶದ ಜನರು ಹಿಟ್ಲರ್‌ನ ಅನುಯಾಯಿಗಳು ತಮ್ಮನ್ನು ಎಂತಹ ವಿನಾಶಕ್ಕೆ ತಂದು ನಿಲ್ಲಿಸಿದ್ದಾರೆಂಬುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟ್ಟು ಬೇಗ ಅವರು ತಮ್ಮತಮ್ಮ ದೇಶಗಳಲ್ಲಿ ತಮ್ಮನ್ನು ಗುಲಾಮಗಿರಿಗೆ ತಳ್ಳಿದ ಜರ್ಮನ್ ಪ್ರಭುತ್ವಕ್ಕೆ ಹಾಗೂ ಅದರ ದಾಸ್ಯದಲ್ಲಿರುವ ತಮ್ಮ ದೇಶದ್ರೋಹಿ ದಲ್ಲಾಳಿಗಳಿಗೆ ತಮ್ಮ ಎಲ್ಲಾ ಬೆಂಬಲವನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಮತ್ತು ಆ ದೇಶಗಳಲ್ಲಿ ಯುದ್ಧದಿಂದಾಗುವ ಬಲಿದಾನ ಮತ್ತು ವಿನಾಶಗಳು ಕಡಿಮೆಯಾಗುತ್ತವೆ ಮತ್ತು ಅವರು ಜನತಾಂತ್ರಿಕ ರಾಷ್ಟ್ರಗಳಿಂದ ಹೆಚ್ಚಿನ ಸಹಾನುಭೂತಿಯನ್ನು ನಿರೀಕ್ಷಿಸಬಹುದು. ಯಶಸ್ವಿ ಸಮರದ ಪರಿಣಾಮವಾಗಿ, ಕೆಂಪುಸೇನೆಯು ಸುಮಾರು 400 ಕಿ.ಮೀಗಿಂತಲೂ ಉದ್ದವಿರುವ ನಮ್ಮ ದೇಶದ ಗಡಿಗಳ ಮೇಲೆ ವಿಜೃಂಭಿಸಿದೆ ಮತ್ತು  ಫ್ಯಾಸಿಸ್ಟ್ ಜರ್ಮನರ ದಬ್ಬಾಳಿಕೆಯಿಂದ ಪರಾಧೀನತೆಗೆ ಒಳಗಾಗಿದ್ದ ಸೋವಿಯತ್ ನೆಲದ ಮುಕ್ಕಾಲು ಭಾಗವನ್ನು ವಿಮೋಚನೆಗೊಳಿಸಿದೆ. ಈಗಿರುವ ಗುರಿಯೆಂದರೆ, ಫ್ಯಾಸಿಸ್ಟ್ ಆಕ್ರಮಣಕಾರರಿಂದ ನಮ್ಮ ಇಡೀ ನೆಲವನ್ನು ತೆರವುಗೊಳಿಸುವುದು ಮತ್ತು ಕಪ್ಪು ಸಮುದ್ರದಿಂದ ಬ್ಯಾರೆಂಟ್ಸ್ ಸಮುದ್ರದುದ್ದಕ್ಕೂ ಸೋವಿಯತ್ ರಾಜ್ಯದ ಗಡಿಗಳನ್ನು ಮರುಸ್ಥಾಪಿಸುವುದಾಗಿದೆ. ಆದರೆ ನಮ್ಮ ಕೆಲಸವು ನಮ್ಮ ಮಾತೃಭೂಮಿಯಿಂದ ವೈರಿ ಪಡೆಗಳನ್ನು ಹೊರಹಾಕುವುದಕ್ಕಷ್ಟೇ ಸೀಮಿತವಲ್ಲ. ಈಗ ಜರ್ಮನ್ ಪಡೆಗಳು ಗಾಯಗೊಂಡ ಪಶುಗಳಂತೆ, ತಮ್ಮ ಗಾಯಗಳನ್ನು ನೆಕ್ಕಿ ಮಾಗಿಸಿಕೊಳ್ಳಲು ತಮ್ಮ ಗುಹೆಯಾದ ಜರ್ಮನಿಗೆ ತೆವಳಿಕೊಂಡು ಹೋಗುತ್ತವೆ. ನಮ್ಮ ದೇಶವನ್ನು ಮತ್ತು ನಮ್ಮೊಂದಿಗೆ ಮೈತ್ರಿ ಹೊಂದಿರುವ ದೇಶಗಳನ್ನು ಪರಾಧೀನತೆಯ ಅಪಾಯದಿಂದ ಮುಕ್ತಗೊಳಿಸಬೇಕೆಂದರೆ, ಗಾಯಗೊಂಡಿರುವ ಆ ಜರ್ಮನ್ ಪಶುವಿನ ಹೆಜ್ಜೆಗುರುತನ್ನು ಅನುಸರಿಸಿ, ಅದರ ಗುಹೆಯಲ್ಲೇ ಅದನ್ನು ಮುಗಿಸಬೇಕು. ವೈರಿಯನ್ನು ಹಿಂದಕ್ಕಟ್ಟುವಾಗ, ಹಿಟ್ಲರ್‌ವಾದಿ ಜರ್ಮನಿಯ ಕಾಲಡಿಯಲ್ಲಿರುವ ನಮ್ಮ ಸೋದರರಾದ ಪೋಲಿಶ್‌ರು, ಚೆಕೊಸ್ಲೋವಾಕಿಯಾದವರು ಮತ್ತು ಪಾಶ್ಚಿಮಾತ್ಯ ಯುರೋಪಿನ ಇನ್ನಿತರ ಜನರನ್ನು ಬಿಡುಗಡೆ ಗೊಳಿಸಬೇಕು. ಇದು ಜರ್ಮನ್ ಪಡೆಗಳನ್ನು ಸೋವಿಯತ್ ಒಕ್ಕೂಟದಿಂದ ಹೊರಹಾಕುವುದಕ್ಕಿಂತಲೂ ಹೆಚ್ಚು ತ್ರಾಸದಾಯಕ ಕೆಲಸ. ಇದನ್ನು ಸೋವಿಯತ್ ಒಕ್ಕೂಟ, ಬ್ರಿಟನ್ ಮತ್ತು ಅಮೇರಿಕದ ಜಂಟಿ ಪ್ರಯತ್ನಗಳಿಂದ, ಪೂರ್ವ ದಿಕ್ಕಿನಿಂದ ನಮ್ಮ ಪಡೆಗಳಿಂದ ಹೊಡೆತ ನೀಡುವುದರಿಂದ ಮತ್ತು ಪಶ್ಚಿಮದ ಕಡೆಯಿಂದ ಮೈತ್ರಿಕೂಟದ ಪಡೆಗಳು ಹೊಡೆತ ನೀಡುವುದರಿಂದ ಮಾತ್ರ ಪೂರ್ಣಗೊಳಿಸಲು ಸಾಧ್ಯ. ಈ ಸಂಯುಕ್ತ ಹೊಡೆತದಿಂದ ಮಾತ್ರವೇ ಹಿಟ್ಲರ್‌ವಾದಿ ಜರ್ಮನಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯ. ಕಾಮ್ರೇಡರೇ, ಕೆಂಪು ಸೈನಿಕರೇ ಮತ್ತು ಕೆಂಪು ನೌಕಾದಳದವರೇ, ಸಾರ್ಜೆಂಟರೇ, ಅಧಿಕಾರಿಗಳೇ ಮತ್ತು ಸೈನ್ಯಾಧಿಪತಿಗಳೇ, ಪುರುಷ ಮತ್ತು ಮಹಿಳಾ ಗೆರಿಲ್ಲಾ ಯೋಧರೇ! ಸೋವಿಯತ್ ಒಕ್ಕೂಟದ ದುಡಿಯುವ ಜನರೇ! ಜರ್ಮನ್ ದಮನಕಾರರ ಸಂಕೋಲೆಯಲ್ಲಿ ತಾತ್ಕಾಲಿಕವಾಗಿ ಸಿಲುಕಿರುವ ಮತ್ತು ಜರ್ಮನಿಯಲ್ಲಿ ಫ್ಯಾಸಿಸ್ಟರ ಗುಲಾಮಗಿರಿಗೆ ಬಲಾತ್ಕಾರದಿಂದ ತಳ್ಳಲ್ಪಟ್ಟ ಸೋದರ, ಸೋದರಿಯರೇ! ಮೇ 1ರ ಈ ಹಬ್ಬದ ದಿನದಂದು ನಿಮಗೆಲ್ಲರಿಗೂ ನಾನು ಶುಭಾಶಯಗಳನ್ನು ಕೋರುತ್ತೇನೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ! ಇದು ನನ್ನ ಆದೇಶ: “ಯುದ್ಧದಲ್ಲಿ ಕೆಂಪು ಸೇನೆಯ ಐತಿಹಾಸಿಕ ಗೆಲುವಿಗೆ ಗೌರವ ಸೂಚಕವಾಗಿ ಮತ್ತು ಯುದ್ಧದ ಹಿಂದಳದಲ್ಲಿ ಸೋವಿಯತ್ ಒಕ್ಕೂಟದ ಕಾರ್ಮಿಕರ, ಸಾಮೂಹಿಕ ಕೃಷಿಯ ರೈತರ ಮತ್ತು ಬುದ್ಧಿಜೀವಿಗಳ ಮಹಾಸಾಧನೆಯ ನೆನಪಿನಲ್ಲಿ, ಇಂದು, ದುಡಿಯುವ ಜನತೆಯ ವಿಶ್ವ ಹಬ್ಬದ ದಿನದಂದು, ರಾತ್ರಿ 8 ಗಂಟೆಗೆ (ಮಾಸ್ಕೊ ಸಮಯ) ಸರಿಯಾಗಿ ಏಕಕಾಲಕ್ಕೆ ಮಾಸ್ಕೊ, ಲೆನಿನ್‌ಗ್ರಾಡ್, ಗೊಮೆಲ್, ಖೀವ್, ರೊಸ್ತೋವ್, ತಿಬ್ಲಿಸಿ, ಸಿಮ್‌ಫೆರೊಪೊಲ್, ಒಡೆಸ್ಸಾಗಳಲ್ಲಿ  ಪದಾತಿಗಳು 20 ತುಪಾಕಿಯಿಂದ ಗುಂಡು ಹಾರಿಸಬೇಕು.” ಸೋವಿಯತ್ ಮಾತೃಭೂಮಿ ಚಿರಾಯುವಾಗಲಿ! ಕೆಂಪುಸೈನ್ಯ ಮತ್ತು ಕೆಂಪು ನೌಕಾದಳ ಚಿರಾಯುವಾಗಲಿ! ಸೋವಿಯತ್ ಮಹಾಜನತೆ ಚಿರಾಯುವಾಗಲಿ! ಸೋವಿಯತ್ ಒಕ್ಕೂಟದ ಜನತೆಯ ಸ್ನೇಹ ಚಿರಾಯುವಾಗಲಿ! ಸೋವಿಯತ್ ಪುರುಷ ಮತ್ತು ಮಹಿಳಾ ಗೆರಿಲ್ಲಾ ಯೋಧರು ಚಿರಾಯುವಾಗಲಿ! ನಮ್ಮ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧದಲ್ಲಿ ಮಡಿದ ಧೀರರಿಗೆ ನಿತ್ಯಗೌರವ ದೊರೆಯಲಿ! ಜರ್ಮನ್ ಆಕ್ರಮಣಕಾರರು ನಾಶವಾಗಲಿ! ಜೆ.ವಿ.ಸ್ಟಾಲಿನ್ ಸುಪ್ರೀಂ ಕಮ್ಯಾಂಡರ್-ಇನ್-ಚೀಫ್ ಸೋವಿಯತ್ ಒಕ್ಕೂಟದ ಮಾರ್ಷಲ್, ಮಾಸ್ಕೊ