ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆಯು ನ್ಯಾಯಸಮ್ಮತವಾಗಿ ನಡೆಯಲು ದೋಷ ರಹಿತ ಮತದಾರರ ಪಟ್ಟಿ ಒಂದು ಪ್ರಮುಖ ಅವಶ್ಯಕತೆಯಾಗಿರುತ್ತದೆ. ಭಾರತದ ಸಂವಿಧಾನವು ಜನಪ್ರತಿನಿಧಿಗಳ ಕಾಯ್ದೆಯ ಮೂಲಕ ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ)ಕ್ಕೆ ನೀಡಿದೆ. ಚುನಾವಣಾ ಆಯೋಗವು ಪ್ರತಿ ವರ್ಷ, ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. ಹಾಗಿದ್ದೂ ಸಹ, ಪ್ರತಿ ಚುನಾವಣೆಯಲ್ಲಿಯೂ ಮತದಾರರ ಪಟ್ಟಿಯ ದೋಷಗಳು ವರದಿಯಾಗುತ್ತಲೇ ಇರುತ್ತವೆ ಕೂಡ. ದೊಡ್ಡ ಪಕ್ಷಗಳು ತಮಗೆ ಅನುಕೂಲವಾಗುವಂತೆ ಹೆಸರುಗಳನ್ನು ಸುಳ್ಳು ಸೇರ್ಪಡೆ ಮಾಡಿಸುವ, ತಮ್ಮ ವಿರೋಧಿಗಳ ಹೆಸರನ್ನು ಅರ್ಹರಿದ್ದೂ ಸಹ ಕೈ ಬಿಡುವಂತೆ ಮಾಡುವ ವಿದ್ಯಮಾನಗಳು ಈ ಹಿಂದೆಯೂ ಹಲವು ಬಾರಿ ಬಯಲಿಗೆ ಬಂದಿವೆ. ಸಾಮಾನ್ಯವಾಗಿ, ಪ್ರತಿ ವರ್ಷವೂ ನಡೆಯುವ ಮತದಾರ ಪಟ್ಟಿ ಪರಿಷ್ಕರಣೆಯು-ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್-Special Summary Revision-SSR). ಅಂದರೆ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ಸಾವು ಇತ್ಯಾದಿಗಳ ಕುರಿತ ಬದಲಾವಣೆಗಳು ಸ್ವಯಂಪ್ರೇರಣೆಯಿಂದ ಮತದಾರರೇ ಮನವಿ ಮಾಡಿದಾಗ ಮಾಡುವಂತಹವುಗಳು. ಆದರೆ, ಹಲವು ವರ್ಷಗಳಿಗೊಮ್ಮೆ, ಮತದಾರರ ಪಟ್ಟಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ. ಈ ಹಿಂದೆ, 2002ರಲ್ಲಿ ಇಂತಹ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲಾಗಿತ್ತು. ಆಗ ಕಾಣದಿದ್ದ, ಕೇಳದಿದ್ದ ವಿವಾದಗಳು ಈಗ ಭುಗಿಲೆದ್ದಿವೆ. ಇದು ಏಕೆ? ಎಸ್‌ಐಆರ್ - ಹಲವು ಪ್ರಶ್ನೆಗಳು! ಹಿಂದೆ ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಅರ್ಹ ಮತದಾರರ ಹೆಸರುಗಳನ್ನು ಕೇಳಿ ಅವನ್ನು ಸೇರಿಸುತ್ತಿದ್ದರು. ಯಾವುದೇ ದಾಖಲೆ ಪತ್ರಗಳನ್ನು ಅವರು ಕೇಳುತ್ತಿರಲಿಲ್ಲ. ಆದರೆ, ಈಗ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಹಲವಾರು ದಾಖಲೆಗಳನ್ನು ಸಲ್ಲಿಸಲು ಒತ್ತಾಯಿಸುತ್ತಿದೆ. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಅಥವಾ ನಿಮ್ಮ ಕುಟುಂಬಸ್ಥರ ಹೆಸರುಗಳು ಇದ್ದರೆ ಸರಿ,  ಇಲ್ಲವಾದರೆ, ನೀವು ‘ಭಾರತೀಯ ಪ್ರಜೆ’ ಎಂದು ಸಾಬೀತು ಮಾಡಲು ಬೇಕಾದ 11 ದಾಖಲೆಗಳಲ್ಲಿ ಕನಿಷ್ಠ ಒಂದನ್ನು ಸಲ್ಲಿಸಬೇಕಾಗುತ್ತದೆ ಎನ್ನುತ್ತದೆ ಇಸಿಐ. ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಪೋಷಕರ ಜನನ ಪ್ರಮಾಣ ಪತ್ರ, ಭೂ ದಾಖಲೆ, 1987ಕ್ಕೂ ಹಿಂದಿನ ಯಾವುದಾದರೂ ಸರ್ಕಾರಿ ಗುರುತಿನ ಚೀಟಿ ಇಂತಹ ಯಾವುದಾದರೂ ದಾಖಲೆಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ಮುಸ್ಲಿಮರು ದೇಶದೊಳಗೆ ಅಕ್ರಮವಾಗಿ ನುಸುಳಿದ್ದಾರೆ, ಅವರು ನಕಲಿ ಆಧಾರ್, ಮತದಾರರ ಚೀಟಿ, ಪಡಿತರ ಚೀಟಿ ಇತ್ಯಾದಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಬಿಜೆಪಿ ಎಬ್ಬಿಸಿದ ಗಲಾಟೆಗೆ ಪೂರಕವಾಗಿ ಚುನಾವಣಾ ಆಯೋಗವು ನಡೆದುಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಗಳು ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ, ಪ್ರತಿಯೊಬ್ಬ ಭಾರತೀಯನಿಗೂ, ‘ನೀನು ಈ ದೇಶದ ಪ್ರಜೆ’ ಎಂದು ದಾಖಲೆ ತೋರಿಸು ಎಂದು ಚುನಾವಣಾ ಆಯೋಗವು ಒತ್ತಾಯ ಮಾಡುತ್ತಿದೆ. ನಮ್ಮ ದೇಶದಲ್ಲಿ ಎಷ್ಟು ಜನರ ಬಳಿಯಲ್ಲಿ ಇಂತಹ ಸರಿಯಾದ ದಾಖಲೆಗಳು ಲಭ್ಯವಿವೆ? ಜೊತೆಗೆ, ಈಗ ಸರ್ಕಾರವೇ ನೀಡಿರುವ ಪಡಿತರ ಚೀಟಿ, ಆಧಾರ್, ಮತದಾರರ ಗುರುತಿನ ಚೀಟಿಗಳನ್ನೇ ಚುನಾವಣಾ ಆಯೋಗ ಮತದಾರ ಪಟ್ಟಿ ಸೇರ್ಪಡೆಗೆ ಪರಿಗಣಿಸುತ್ತಿಲ್ಲ! ಪೌರತ್ವಕ್ಕೂ ಚುನಾವಣಾ ಆಯೋಗಕ್ಕೂ ಎತ್ತಣದೆತ್ತಣ ಸಂಬಂಧ? ಒಬ್ಬ ವ್ಯಕ್ತಿಯ ಪೌರತ್ವವನ್ನು ಪತ್ತೆ ಹಚ್ಚುವ ಅಥವಾ ಪ್ರಶ್ನಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ ಎಂಬುದು ಮೂಲಭೂತ ಪ್ರಶ್ನೆ. ಏಕೆಂದರೆ, ಈ ಕೆಲಸವನ್ನು ಚುನಾವಣಾ ಆಯೋಗದ ಪರವಾಗಿ, ಸ್ಥಳೀಯ ಮಟ್ಟದಲ್ಲಿ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಇನ್ನಿತರರು ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬರ ಪೌರತ್ವವನ್ನು ಪ್ರಶ್ನಿಸುವ ಅಧಿಕಾರ ಕಾನೂನಾತ್ಮಕವಾಗಿ ಇವರಿಗೆ ಇದೆಯೇ? ‘ಇಲ್ಲ’ ಎನ್ನುವುದೇ ಬಹುತೇಕ ಕಾನೂನುತಜ್ಞರ ಅಭಿಪ್ರಾಯವಾಗಿದೆ. ಈ ವಿಷಯವು ಈಗ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ. ಮತದಾರನಾಗಿ ಅರ್ಹತೆ ಪಡೆಯಲು 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಯಾಗಿರಬೇಕು, ಇದನ್ನು  ಖಚಿತಪಡಿಸಿಕೊಳ್ಳುವ ಅಧಿಕಾರ ತನಗಿದೆ ಎಂದು ಸಬೂಬು ಹೇಳಿ ಚುನಾವಣಾ ಆಯೋಗವು ಪ್ರಶ್ನೆಗೆ ನೇರವಾಗಿ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದೆ. ಇಷ್ಟಾದರೂ ಸಹ ಸರ್ವೋಚ್ಛ ನ್ಯಾಯಾಲಯವು ಈ ಎಸ್‌ಐಆರ್ ಪ್ರಕ್ರಿಯೆಗೆ ತಡೆ ನೀಡಿಲ್ಲ. ಇತ್ತೀಚೆಗೆ ತಾನೆ ಎಸ್‌ಐಆರ್ ನಡೆದ ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಲಕ್ಷಾಂತರ ಮಂದಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ತಾರ್ಕಿಕವಾಗಿ ತಾಳೆಯಾಗದಿರುವುದು (Logical Discrepancy) ಎಂಬ ಬಿಹಾರದಲ್ಲಿ ಬಳಸದಿದ್ದ ಹೊಸದೊಂದು ನೆಪ ನೀಡಿ ಪ.ಬಂಗಾಳದಲ್ಲಿ 27 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅವರೆಲ್ಲರೂ ಈ ಬಾರಿ ಚುನಾವಣೆಯಲ್ಲಿ ತಮ್ಮ ಒಂದು ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆ. ಲಭ್ಯ ದಾಖಲೆಗಳಲ್ಲಿ ಇರುವ ಸಣ್ಣಪುಟ್ಟ ಏರುಪೇರುಗಳೇ ಇದಕ್ಕೆ ಕಾರಣ ಎಂದೂ ಕಂಡುಬಂದಿದೆ. ಹೆಸರುಗಳಲ್ಲಿನ ಅಕ್ಷರಗಳ ನಡುವೆ, ವಯಸ್ಸು ಇತ್ಯಾದಿಗಳಲ್ಲಿ ಇರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿರುವುದರಿಂದ ಲಕ್ಷಾಂತರ ಜನ ಈಗ ನ್ಯಾಯಾಲಯಗಳಿಗೆ ಅಲೆದಲೆದು ತಮ್ಮ ಪೌರತ್ವ ಮತ್ತು ಮತದಾನದ ಹಕ್ಕನ್ನು ಪಡೆಯಬೇಕಾಗಿದೆ. ಸರ್ಕಾರ ನೀಡುವ ದಾಖಲೆಗಳಲ್ಲಿ ಕಣ್ತಪ್ಪಿನ ದೋಷಗಳು ಸರ್ವೇ ಸಾಮಾನ್ಯವಾಗಿರುವ ಸಮಸ್ಯೆ. ಇದಕ್ಕಾಗಿ ಒಬ್ಬ ಪ್ರಜೆಯ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ಕೊಟ್ಟವರು ಯಾರು? ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇರುವುದು ಗೃಹ ಸಚಿವಾಲಯಕ್ಕೆ. ಹಾಗಾಗಿ ಈಗಾಗಲೇ ದೇಶದಲ್ಲಿ ವಾಸವಿರುವ ವ್ಯಕ್ತಿಯೊಬ್ಬನ ಪೌರತ್ವ ತೀರ್ಮಾನಿಸಲು ಯಾವ ದಾಖಲೆಯು ಮಾನ್ಯವಾಗಿದೆ ಎಂಬ ಪಟ್ಟಿಯನ್ನು ಗೃಹ ಸಚಿವಾಲಯ ಮುಂಚಿತವಾಗಿ ಪ್ರಕಟಿಸಬೇಕು. ಅವುಗಳನ್ನು ಆಧರಿಸಿ ಮಾತ್ರವೇ ಪೌರತ್ವ ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಕೆಲವು ಕಾನೂನುತಜ್ಞರು ವಾದಿಸುತ್ತಾರೆ. ಇಸಿಐ ಇಂದು ಸ್ವಾಯತ್ತವಲ್ಲ, ಅದು ಸರ್ಕಾರದ ಕೈಗೊಂಬೆ ಇಂದು ಇತರೆಲ್ಲಾ ಸಾಂವಿಧಾನಿಕ ಸಂಸ್ಥೆಗಳಂತೆ ಚುನಾವಣಾ ಆಯೋಗವು ಸಹಾ ಕೇಂದ್ರ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ. ಈ ಹಿಂದೆ, ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿಧಾನ ವಿರೋಧ ಪಕ್ಷದ ನಾಯಕ ಮತ್ತು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೇರಿರುವ ಸಮಿತಿಯೊಂದು ಆಯ್ಕೆ ಮಾಡುತ್ತಿತ್ತು. ಈಗ ಸ್ವಲ್ಪ ಕಾಲದ ಹಿಂದೆ ಈ ವಿಧಾನಕ್ಕೆ ಬಿಜೆಪಿ ಸರ್ಕಾರವು ತಿದ್ದುಪಡಿ ಮಾಡಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು ಆ ಸ್ಥಾನದಲ್ಲಿ ಓರ್ವ ಕೇಂದ್ರ ಸಂಪುಟ ಸಚಿವರನ್ನು ಸೇರಿಸಿಕೊಂಡಿದೆ. ಇದರಿಂದಾಗಿ, ಕೇಂದ್ರ ಸರ್ಕಾರ ತನಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲು ಸಾಧ್ಯವಾಗಿದೆ. ಚುನಾವಣಾ ಆಯೋಗವು ರಾಜಕೀಯ ತಟಸ್ಥತೆಯ ನಿಲುವು ಹೊಂದಿರಬೇಕು ಎಂಬ ಸಾಂವಿಧಾನಿಕ ಆಶಯವನ್ನು ಮಣ್ಣುಪಾಲು ಮಾಡಲಾಗಿದೆ. ಈ ಕಾರಣದಿಂದಲೇ, ಈ ಎಸ್‌ಐಆರ್ ಕುರಿತು ಗುಮಾನಿ ಇದೆ. ನಮ್ಮ ರಾಜ್ಯದಲ್ಲೂ, ಎಸ್‌ಐಆರ್ ಪ್ರಕ್ರಿಯೆಯು ಗುಪ್ತಗಾಮಿನಿಯ ರೀತಿಯಲ್ಲಿ ಗೌಪ್ಯವಾಗಿ ನಡೆಯುತ್ತಿದೆ. 2002ರ ಮತದಾರರ ಪಟ್ಟಿಯೊಂದಿಗೆ 2025ರ ಮತದಾರರನ್ನು ಹೊಂದಾಣಿಕೆ ಮಾಡುವ ಕೆಲಸವನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಓ)ಗಳು ಮಾಡುತ್ತಿದ್ದಾರೆ. ಅದನ್ನು ಹೇಗೆ ಮಾಡುತ್ತಾರೆ, ವಲಸೆ ಹೋದವರು ಏನು ಮಾಡುವುದು, ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರು ಮನೆ ಬದಲಾಯಿಸಿದ್ದರೆ ಏನು ಮಾಡಬೇಕು, ಅವರ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂದು ತಿಳಿಯುವ ಬಗೆ ಹೇಗೆ - ಈ ಎಲ್ಲ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಯಾವುದೇ ಪಾರದರ್ಶಕತೆ ಇಲ್ಲ. ಎಸ್‌ಐಆರ್ ವಿರೋಧಿಸುವ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹಾಗಿದ್ದರೂ ಸಹ, ಇಲ್ಲಿ, ಅರ್ಹ ಮತದಾರರ ಹೆಸರು ಅಳಿಸದಂತೆ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ರಾಜ್ಯದಲ್ಲಿಯೂ ಸಹ ಲಕ್ಷಾಂತರ ಮಂದಿ ತಮ್ಮ ಮತದಾನದ ಹಕ್ಕನ್ನು, ಆ ಮೂಲಕ ಪೌರತ್ವವನ್ನು ಕೂಡ ಕಳೆದುಕೊಳ್ಳುವ ಅಪಾಯ ಎದುರಾಗಿದೆ. ಬಡವರು, ಆಸ್ತಿಹೀನರು, ಅಶಿಕ್ಷಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ವಿವಾಹೋತ್ತರ ವಾಸಸ್ಥಳ ಬದಲಾದ ಮಹಿಳೆಯರು ದಾಖಲೆಗಳ ಕೊರತೆಯನ್ನು ಎದುರಿಸುತ್ತಾರೆ. ಬಿಹಾರ, ಪ.ಬಂಗಾಳಗಳಲ್ಲಿ ತಮ್ಮ ಹಕ್ಕುಗಳನ್ನು ಕಳೆದುಕೊಂಡವರು ಬಹುತೇಕ ಇಂಥವರೇ ಆಗಿದ್ದಾರೆ. ವಿಚಿತ್ರವೇನೆಂದರೆ, ಇಷ್ಟೆಲ್ಲಾ ಆದರೂ ಸಹ ಈ ಎಸ್‌ಐಆರ್ ಪ್ರಕ್ರಿಯೆಯಿಂದ ಎಷ್ಟು ಮಂದಿ ನುಸುಳುಕೋರರನ್ನು ಗುರುತಿಸಲಾಯಿತು ಮತ್ತು ಎಷ್ಟು ಜನರನ್ನು ದೇಶದಿಂದ ಹೊರದಬ್ಬಲಾಯಿತು ಎನ್ನುವ ಅಂಕಿಸಂಖ್ಯೆಗಳು ಸದ್ಯಕ್ಕಂತೂ ಅಲಭ್ಯವಾಗಿವೆ. ಹಾಗಾಗಿ, ವಿಶೇಷ ಸಮಗ್ರ ಪರಿಷ್ಕರಣೆಯ ಹೆಸರಿನಲ್ಲಿ ಪೌರತ್ವ ದಾಖಲೆ ಕೇಳುವ ಕ್ರಮವನ್ನು ನಾವು ವಿರೋಧಿಸಬೇಕು. ಇಷ್ಟು ಕಾಲ ನಡೆದುಕೊಂಡು ಬಂದಂತೆ ಮನೆಮನೆ ಗಣತಿಯ ಮೂಲಕ ಹೆಸರುಗಳನ್ನು ಸೇರಿಸುವ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಬೇಕು. ದೋಷರಹಿತವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಪಾರದರ್ಶಕ ಪ್ರಕ್ರಿಯೆಯ ಮೇಲೆಯೇ ಬಂಡವಾಳಶಾಹಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯು ನಿಂತಿರುವಾಗ, ಇವೆರಡೂ ಇಲ್ಲದಿರುವ ನಮ್ಮ ದೇಶದ ಇವತ್ತಿನ ಸಂದರ್ಭದಲ್ಲಿ ಆಡಳಿತಾರೂಢರು ಕೇವಲ ಭ್ರಮೆಯನ್ನು ಸೃಷ್ಟಿಸಿ ತಮ್ಮ ವಿರುದ್ಧ ಇರುವವರನ್ನು ಎಸ್‌ಐಆರ್ ಬಳಸಿಕೊಂಡು ಪಕ್ಕಕ್ಕೆ ತಳ್ಳಿ ತಮ್ಮ ಜನವಿರೋಧಿ ಆಡಳಿತವನ್ನು ಮುಂದುವರೆಸಿಕೊಂಡು ಹೋಗುವ ಹುನ್ನಾರ ನಡೆಸುತ್ತಿದ್ದಾರಲ್ಲದೇ ಇನ್ನೇನು ಎನ್ನುವ ಮಾತು ಸುಳ್ಳೇ?